ಅನಿರೀಕ್ಷಿತ ತಿರುವುಗಳು

7

ಅನಿರೀಕ್ಷಿತ ತಿರುವುಗಳು

ಗುರುರಾಜ ಕರ್ಜಗಿ
Published:
Updated:

ನನಗೆ ಆತ್ಮೀಯರೂ, ಪ್ರಸಿದ್ಧ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರೂ ಆಗಿರುವ ಡಾ.ಎಸ್.ವೈ.ಕುಲಕರ್ಣಿಯವರು ಇತ್ತೀಚಿಗೆ ನನಗೆ ಹೇಳಿದ ಘಟನೆಯಿದು. ಜೀವನದ ಕೆಲ ಘಟನೆಗಳು ಕಥೆಗಳಿಗಿಂತ ಹೆಚ್ಚು ರೋಚಕವಾಗಿರುತ್ತವೆ ಎಂಬುದಕ್ಕೆ ಇದು ಉದಾಹರಣೆ. ಇದರಲ್ಲಿ ಕೆಲವು ವಿವರಗಳು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದಿರಬಹುದು, ಆದರೆ ಸ್ಥೂಲದಲ್ಲಿ ಘಟನೆ ನಡೆದದ್ದು ಹೀಗೆ.

ಡಾ. ಕುಲಕರ್ಣಿಯವರು ಬಸ್‌ನಲ್ಲಿ ತಮ್ಮ ಊರಿಗೆ ಪ್ರವಾಸ ಹೊರಟಿದ್ದರು. ಅದು ಸುಮಾರು ನಾಲ್ಕೈದು ತಾಸಿನ ಪ್ರವಾಸ. ಒಂದೆರಡು ತಾಸುಗಳ ಪ್ರಯಾಣವಾದ ಮೇಲೆ ಬಸ್ಸು ಒಂದು ಕ್ರಾಸಿನಲ್ಲಿ ನಿಂತಿತು. ಅದು ಡ್ರೈವರ್ ಮತ್ತು ಕಂಡಕ್ಟರ್‌ರು ಇಳಿದು ಚಹಾ ಕುಡಿಯುವ ಸ್ಥಳ, ಬಸ್ಸು ಸುಮಾರು ಹತ್ತು ನಿಮಿಷ ನಿಲ್ಲುವುದು ವಾಡಿಕೆ. ಬಹುತೇಕ ಪ್ರಯಾಣಿಕರೂ ಕೆಳಗೆ ಇಳಿದು ಹೋದರು. ಸಾಮಾನ್ಯವಾಗಿ ಡಾ. ಕುಲಕರ್ಣಿಯವರಿಗೆ ಹಾಗೆ ನಡುನಡುವೆ ಬಸ್ಸಿನಿಂದ ಕೆಳಗೆ ಇಳಿಯುವ ಅಭ್ಯಾಸವಿಲ್ಲ. ಅವರು ಯಾವುದಾದರೂ ಪುಸ್ತಕವನ್ನು ಹಿಡಿದು ಓದುತ್ತ ಕುಳಿತರೆ ತಮ್ಮ ನಿರ್ದಿಷ್ಟ ಸ್ಥಳ ಬಂದ ಮೇಲೆಯೇ ಇಳಿಯುವವರು.

ಅವತ್ತು ಅವರಿಗೆ ಏನೆನಿಸಿತೋ ತಿಳಿಯದು. ತಾವೂ ಇತರರಂತೆ ಕೆಳಗೆ ಇಳಿದರು. ಉಳಿದವರಂತೆ ಚಹಾ ಕುಡಿಯಲಿಲ್ಲ. ಸುಮ್ಮನೇ ಒಂದು ಹತ್ತು ಹೆಜ್ಜೆ ಆ ಕಡೆಗೆ ಈ ಕಡೆಗೆ ನಡೆದಾಡುತ್ತಿದ್ದರು. ಆಗ ಅವರ ಗಮನ ಸ್ವಲ್ಪ ದೂರದಲ್ಲಿ ಸೇರಿಕೊಂಡಿದ್ದ ಜನರ ಗುಂಪಿನ ಕಡೆಗೆ ಹೋಯಿತು. ಜನ ಸ್ವಲ್ಪ ಆತಂಕದಿಂದ ಓಡಾಡುತ್ತಿದ್ದುದು ಕಂಡಿತು. ಅವರು ಎಂದೂ ಹೀಗೆ ಜನರ ಗುಂಪಿನ ಮಧ್ಯೆ ನುಗ್ಗಿ ನೋಡುವ ಕುತೂಹಲ ತೋರಿಸುವವರಲ್ಲ. ಅದೇಕೋ ಅವರ ಮನಸ್ಸು ಆ ಕಡೆಗೆ ಸೆಳೆಯಿತು. ಅಲ್ಲಿ ಹೋಗಿ ನೋಡಿದರೆ ತಿಳಿದು ಬಂದ ವಿಷಯ ಇದು. ಯಾರೋ ಒಬ್ಬರು ಹಿರಿಯರು ಕಲ್ಲಿನ ಕಟ್ಟೆಯ ಮೇಲೆ ಕುಳಿತಿದ್ದರಂತೆ. ಏನಾಯಿತೋ ಗೊತ್ತಿಲ್ಲ. ಕುಳಿತಿದ್ದಂತೆ ಉರುಳಿ ಕೆಳಗೆ ಬಿದ್ದರಂತೆ ಸುತ್ತಮುತ್ತಲಿನವರು ನೋಡಿ ಓಡಿ ಬಂದು ಸಹಾಯ ನೀಡಬೇಕೆನ್ನುವಷ್ಟರಲ್ಲಿ ಅವರ ಪ್ರಾಣ ಹೋಗಿಬಿಟ್ಟಿತ್ತಂತೆ. ಅವರು ಯಾರೋ, ಎಲ್ಲಿಯವರೋ ಎಂದು ಜನ ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದರು.

ಡಾ. ಕುಲಕರ್ಣಿಯವರು ತಮ್ಮ ಸ್ವಭಾವಕ್ಕೆ ವಿರುದ್ಧವಾದ ಕುತೂಹಲದಿಂದ ಜನರನ್ನು ಸರಿಸಿ ಮುಂದೆ ಹೋಗಿ ನೋಡಿದರೆ ಆ ದೇಹ ಇವರ ಸೋದರ ಮಾವನವರದೇ. ಇವರಿಗೆ ಆಶ್ಚರ್ಯ, ಆತಂಕ, ದುಃಖ ಒಮ್ಮೆಲೇ ಆದವು. ತಮ್ಮ ಊರಿಗೆ ಹೊರಟ ಸೋದರಮಾವ, ನಡುವೆ ಇಲ್ಲಿ ಇಳಿದು ಕುಳಿತಿದ್ದಾಗ ಹೃದಯಾಘಾತವಾಗಿ ಮರಣ ಹೊಂದಿದ್ದರು. ಆ ಸಮಯಕ್ಕೆ ಸರಿಯಾಗಿ ಡಾ. ಕುಲಕರ್ಣಿಯವರು ಅಲ್ಲಿಗೆ ಹೋಗಿದ್ದಾರೆ.

ನಂತರ ಇವರು ತಮ್ಮ ಬಸ್ಸಿನಿಂದ ಸಾಮಾನುಗಳನ್ನು ಇಳಿಸಿಕೊಂಡು, ಒಂದು ಟ್ಯಾಕ್ಸಿ ಮಾಡಿಕೊಂಡು ದೇಹವನ್ನು ಸೋದರಮಾವನ ಊರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ನೆರವಾದರಂತೆ. ದೂರದಲ್ಲಿದ್ದ ಸೋದರಮಾವನ ಮಗನಿಗೂ ದೊರಕದ ಸೇವೆಯ ಭಾಗ್ಯ ಅನಪೇಕ್ಷಿತವಾಗಿ, ಆಕಸ್ಮಿಕವಾಗಿ ಡಾ. ಕುಲಕರ್ಣಿಯವರಿಗೆ ಲಭಿಸಿತ್ತು.

ಜೀವನದಲ್ಲಿ ನಮ್ಮ ಕಲ್ಪನೆಗೂ ಮೀರಿದ, ನಂಬಲಸಾಧ್ಯವಾದ ತಿರುವುಗಳು ಬರುತ್ತವೆ. ನಾವು ಎಂದೆಂದಿಗೂ ಊಹಿಸದಂಥ ಪರಿಸ್ಥಿತಿಗಳ ಮುಂದೆ ನಮ್ಮನ್ನು ಜೀವನ ನಿಲ್ಲಿಸಿಬಿಡುತ್ತದೆ, ಕೆಲವೊಮ್ಮೆ ನಮ್ಮನ್ನು ಅಧೀರರನ್ನಾಗಿ ಮಾಡಿಬಿಡುತ್ತದೆ. ಆಗ ನಮಗಿರುವ ದಾರಿ ಒಂದೇ ಮನಸ್ಸನ್ನು ಉಕ್ಕಿನಂತೆ ಗಟ್ಟಿಯಾಗಿಸಿಕೊಂಡು, ಬುದ್ಧಿ ಎಂಬ ಆಯುಧವನ್ನು ಹಿಡಿದು ಸಮಸ್ಯೆಯನ್ನು ಎದುರಿಸುವುದು. ಆಗ ವಿಧಿ ಕೂಡ ನಮ್ಮ ಪ್ರಯತ್ನವನ್ನು ಮೆಚ್ಚಿಯಾನು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry