ಭಾನುವಾರ, ಡಿಸೆಂಬರ್ 8, 2019
25 °C

ಅನುವಾದದಲ್ಲಿ ಸಿದ್ದಲಿಂಗಯ್ಯ

ಎಸ್.ಆರ್. ರಾಮಕೃಷ್ಣ
Published:
Updated:
ಅನುವಾದದಲ್ಲಿ ಸಿದ್ದಲಿಂಗಯ್ಯ

ಸಾಹಿತ್ಯದ ವಿದ್ಯಾರ್ಥಿಗಳಿಗೆ ಗೊತ್ತಿರುವಂತೆ, ಕವಿ ಸಿದ್ದಲಿಂಗಯ್ಯನವರು ತಮ್ಮ ಆತ್ಮಕಥೆಯನ್ನು ಎರಡು ಭಾಗದಲ್ಲಿ ಬರೆದಿದ್ದಾರೆ. ‘ಊರು ಕೇರಿ’ ಪುಸ್ತಕದ ಮೊದಲ ಸಂಪುಟವನ್ನು ಸುಮಾರು ೧೩ ವರ್ಷಗಳ ಹಿಂದೆ, ಅಂದರೆ ೧೯೯೫ರಲ್ಲಿ ನಾನು ಅನುವಾದ ಮಾಡಿದ್ದೆ. ನಾಲ್ಕು ವರ್ಷದ ನಂತರ ಅದು ಮುದ್ರಣವಾಯಿತು.

ಆ ಇಂಗ್ಲಿಷ್ ಅನುವಾದ ಪ್ರಕಟವಾಗುವುದಕ್ಕೆ ಖ್ಯಾತ ವಿಮರ್ಶಕ ಡಾ. ಡಿ. ಆರ್. ನಾಗರಾಜ್ ಮತ್ತು ಬರಹಗಾರರೂ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥರೂ ಆಗಿದ್ದ ಅಗ್ರಹಾರ ಕೃಷ್ಣಮೂರ್ತಿ ಕಾರಣ. ಪುಸ್ತಕಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು, ಹಲವು ವಿಶ್ವವಿದ್ಯಾಲಯಗಳು ತಮ್ಮ ಅನುವಾದ ಅಧ್ಯಯನ ಪಠ್ಯಕ್ರಮದಲ್ಲಿ ಪುಸ್ತಕವನ್ನು ಸೇರಿಸಿಕೊಂಡವು.   ಎರಡನೇ ಸಂಪುಟ ಮೊದಲು ಕನ್ನಡ ವಾರಪತ್ರಿಕೆ ‘ಅಗ್ನಿ’ಯಲ್ಲಿ ಸರಣಿಯಾಗಿ ಪ್ರಕಟವಾಯಿತು. ಅದನ್ನೂ ನಾನೇ ಅನುವಾದ ಮಾಡಬೇಕೆಂದು ಸಿದ್ದಲಿಂಗಯ್ಯನವರು ಹೇಳಿದರು. ಎರಡೂ ಸಂಪುಟ ಸೇರಿಸಿ ಸಮಗ್ರ ಆತ್ಮಚರಿತ್ರೆಯನ್ನು ದೆಹಲಿಯ ನವಯಾನ ಪ್ರಕಾಶಕರು ಮುತುವರ್ಜಿ ವಹಿಸಿ ಈಗ ಹೊರತಂದಿದ್ದಾರೆ. ಅದಕ್ಕೆ ‘ಎ ವರ್ಡ್ ವಿಥ್ ಯು, ವರ್ಲ್ಡ್’ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.ಸುಮತೀಂದ್ರ ನಾಡಿಗರು ಮಾಡಿದ ಸಿದ್ದಲಿಂಗಯ್ಯನವರ ಪದ್ಯವೊಂದರ ಅನುವಾದದಿಂದ ಈ ಟೈಟಲನ್ನು ಆನಂದ್ ಆಯ್ಕೆ ಮಾಡಿಕೊಂಡರು. ಈ ಕೃತಿಯ ಬಿಡುಗಡೆ ಸಂದರ್ಭದಲ್ಲಿ ಕತೆಗಾರ ವಿವೇಕ ಶಾನಭಾಗ ಅವರ ಜೊತೆ ಸಿದ್ದಲಿಂಗಯ್ಯನವರ ಒಂದು ಸಂವಾದವೂ ಇತ್ತೀಚೆಗೆ ನಡೆಯಿತು. ನಾನೂ ಆ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ.ಸಿದ್ದಲಿಂಗಯ್ಯನವರ ಶೈಲಿ ಪತ್ರಕರ್ತನ ಕನಸಿನ ಶೈಲಿ. ಡೆಸ್ಕ್ ಕೆಲಸ ಹೆಚ್ಚು ಮಾಡಿರುವ, ವರದಿಗಳನ್ನು ಸರಳಗೊಳಿಸುವ ಸಂಕಟವನ್ನು ಯಾವಾಗಲೂ ಅನುಭವಿಸುವ ನನಗೆ ಸಿದ್ದಲಿಂಗಯ್ಯನವರ ಆತ್ಮಚರಿತ್ರೆಯ ಸುಲಲಿತ ಶೈಲಿ ಹೇಳಲಾರದಷ್ಟು ಖುಷಿ ಕೊಟ್ಟಿತು. ಅವರ ಗದ್ಯದ ಚೆಲುವು ಅದರ ಸರಳತೆಯಲ್ಲೇ ಅಡಗಿರುತ್ತದೆ. ಪದಗಳ ಆಯ್ಕೆ, ವಾಕ್ಯರಚನೆ, ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಲೀಸಾಗಿ ದಾಟಿ ಹೋಗದ ಸಾಂಸ್ಕೃತಿಕ ವಿವರಗಳು ಅನುವಾದಕನ ನಿದ್ದೆ ಕೆಡಿಸುತ್ತವೆ. ಆದರೆ ಸಿದ್ದಲಿಂಗಯ್ಯನವರ ಬರವಣಿಗೆಯ ಅನುವಾದ ನನಗೆ ಸಂತೋಷದ ಕೆಲಸವಾಗಿಬಿಟ್ಟಿತ್ತು. 

 

ನ್ಯಾಷನಲ್ ಲಾ ಸ್ಕೂಲ್ ಯೂನಿವರ್ಸಿಟಿಯ ಡಾ. ಜಾಫೆಟ್ ಅವರ ಬೆಂಬಲ, ಪ್ರಕಾಶಕ ಎಸ್. ಆನಂದರ ಉತ್ಸಾಹ ಈ ಸಮಗ್ರ ಆತ್ಮಚರಿತ್ರೆಯ ಅನುವಾದ ಹೊರಬರಲು ಕಾರಣ. ಸಿದ್ದಲಿಂಗಯ್ಯನವರ ಆತ್ಮಕಥೆಯನ್ನು ನೆಪ ಮಾಡಿಕೊಂಡು ಚಾಪ್ಲಿನ್ ಮಾದರಿಯ ಹಾಸ್ಯ ಪ್ರಜ್ಞೆಯ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಇದು.ಸಿದ್ದಲಿಂಗಯ್ಯನವರು ದಲಿತ ಚಳವಳಿಯ ನಾಯಕರಾಗಿ, ವಿಧಾನ ಪರಿಷತ್ತಿನ ಭಾಷಣಕಾರರಾಗಿ, ಸಾಹಿತ್ಯದ ಉಪನ್ಯಾಸಕರಾಗಿ ಹೆಸರು ಮಾಡಿದವರು. ಎಲ್ಲರ ಜೊತೆಗೂ ಹೊಂದಿಕೊಂಡು ಸ್ನೇಹದಿಂದಿರುವ ಅವರ ಸ್ವಭಾವವನ್ನು ಅವರ ಸಂಪರ್ಕಕ್ಕೆ ಬಂದವರೆಲ್ಲ ಮೆಚ್ಚಿಕೊಳ್ಳುತ್ತಾರೆ. ಇದೆಲ್ಲದರ ಜೊತೆ ಅವರಿಗೆ ಕನಿಷ್ಠ ನಿಷ್ಠುರತೆ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಅವರ ಸ್ನೇಹಿತರು ಹೇಳುವುದೂ ಉಂಟು. ಅದೇನೇ ಇರಲಿ, ಎಲ್ಲರಿಗೂ ಇಷ್ಟವಾಗುವುದು ಸಿದ್ದಲಿಂಗಯ್ಯನವರ ತಮಾಷೆಯ ಪ್ರವೃತ್ತಿ.ಜೋಕ್ ಹೇಳುವುದು ಹಾಸ್ಯ ಎಂದು ಸಾಮಾನ್ಯವಾಗಿ ಕೆಲವರು ತಿಳಿದಿರುತ್ತಾರೆ. ಅದು ಒಂದು ರೀತಿಯ ಹಾಸ್ಯ, ನಿಜ. ಆದರೆ ಹಾಸ್ಯ ಮೊನಚಾಗುವುದು ಅದು ಸಂದರ್ಭೋಚಿತವಾದಾಗ, ಅದಕ್ಕೆ ರಾಜಕೀಯ, ತಾತ್ವಿಕ ಅರ್ಥ ಬಂದಾಗ. ಹೀಗೆ ಹಾಸ್ಯವನ್ನು ಪ್ರಯೋಗಿಸಿದವರ ಪೈಕಿ ಚಾಪ್ಲಿನ್ ಒಬ್ಬ. ‘ಮಾಡ್ರನ್ ಟೈಮ್ಸ್’ ಚಿತ್ರ ನೋಡಿ. ಯಂತ್ರದ ವೇಗಕ್ಕೆ ಬೋಲ್ಟ್ ತಿರುಗಿಸುವ ಕೆಲಸಗಾರ ಕಾರ್ಖಾನೆಯನ್ನು ಬಿಟ್ಟು ಹೊರಗೆ ಬಂದ ಮೇಲೂ ಹಾಗೆಯೇ ಕೈ ತಿರುಗಿಸುವುದು, ಹೆಂಗಸೊಬ್ಬಳ ಉಡುಪಿನ ಬಟನ್ ಕಂಡು, ಅದನ್ನು ಬೋಲ್ಟ್ ಎಂದೇ ತಿಳಿದು ತಿರುಗಿಸಲು ಮುಂದಾಗುವುದು... ಇಂಥ ದೃಶ್ಯಗಳನ್ನು  ಚಾಪ್ಲಿನ್ ತೋರಿಸುತ್ತಲೇ, ಹೇಗೆ ಕೈಗಾರಿಕೋದ್ಯಮ ಜನರನ್ನು ಯಂತ್ರಗಳಂತೆ ಮಾಡುತ್ತಿದೆ ಎಂದು ಸೂಚಿಸುತ್ತಾನೆ.

ನಗಿಸುತ್ತಲೇ ದುರಂತ ಸತ್ಯಗಳನ್ನು ಹೇಳಿ ಕಣ್ಣಲ್ಲಿ ನೀರು ತರಿಸುತ್ತಾನೆ. ಮಾನವ ಗುಣಗಳನ್ನು ಕಳೆದುಕೊಂಡ ಕಾರ್ಮಿಕನಿಗೆ ತಾನೆಲ್ಲಿದ್ದೇನೆ ಎಂಬ ಪರಿವೆಯೇ ಇರುವುದಿಲ್ಲ, ಅವನ ಕಣ್ಣಿಗೆ ಹೆಣ್ಣಿನ ಆಕಾರವೂ ಸರಿಯಾಗಿ ಬೀಳುವುದಿಲ್ಲ. ‘ಗ್ರೇಟ್ ಡಿಕ್ಟೇಟರ್’ ಚಿತ್ರದಲ್ಲಿ ಹಿಟ್ಲರ್ ಪಾತ್ರ ಬಲೂನಿನ ಜೊತೆ ಆಡುತ್ತಿರುವಾಗ ಕುಂಡಿ ತಾಗಿ ಟುಸ್ ಆಗುತ್ತದೆ. ಭೂಮಂಡಲವನ್ನೇ ಆಳುವ ಹಿಟ್ಲರ್ನ ಕನಸು ಹೇಗೆ ಕೊನೆಗೊಳ್ಳುತ್ತದೆ ಎಂದು ಭವಿಷ್ಯ ಹೇಳುತ್ತಾ ಆ ಕ್ರೂರಿಯನ್ನು ಚಾಪ್ಲಿನ್ ಗೇಲಿ ಮಾಡುತ್ತಾನೆ.ಸಿದ್ದಲಿಂಗಯ್ಯನವರ ಬರಹವನ್ನು ಚಾಪ್ಲಿನ್ಗೆ ಹೋಲಿಸಬಹುದೇನೋ. ಅವರು ಬರೆಯುವ ಪುಟ್ಟ ಪುಟ್ಟ ಪ್ರಕರಣಗಳು ಜೋಕ್ಗಳಂತೆ ಕಂಡರೂ, ಗೇಲಿ ಮಾಡುವ, ಸೌಮ್ಯ ಚಿಕಿತ್ಸಕ ಗುಣ ಹೊಂದಿವೆ. ಚಿಕ್ಕವರ ದೊಡ್ಡತನ, ದೊಡ್ಡವರ ಸಣ್ಣತನ ಎಲ್ಲವನ್ನೂ ತಮ್ಮ ವಿಡಂಬನಾತ್ಮಕ ಕಣ್ಣಿನಲ್ಲಿ ಹಿಡಿದು ಏನೋ ಹೇಳುತ್ತಿರುತ್ತಾರೆ. ಬೇರೆಯವರಿಗೆ ಅಮುಖ್ಯ ಎನಿಸುವ ವಿವರಗಳನ್ನು ಹಿಡಿದು ಕಥನ ಬೆಳೆಸುತ್ತಿರುತ್ತಾರೆ. ತಮ್ಮನ್ನು ತಾವೇ ಕಾಮಿಕ್ ಪಾತ್ರವಾಗಿ ಮಾಡಿಕೊಳ್ಳುತ್ತಿರುತ್ತಾರೆ.ನಾನು ಅವರ ಒಡನಾಟದಲ್ಲಿ ಕಂಡ ಒಂದು ಪುಟ್ಟ ತಮಾಷೆ ಇಲ್ಲಿ ಹೇಳುತ್ತೇನೆ. ಬೆಂಗಳೂರಿಂದ ಹಲವರು ಹೆಗ್ಗೋಡಿಗೆ ಹೋಗಿದ್ದೆವು. ಅವರ ಜೊತೆ ಹೆಗ್ಗೋಡಿನಿಂದ ಜೋಗ ನೋಡಲು ಹೋಗಿದ್ದೆ. ಕಾರ್ ಪ್ರವಾಸ ಮುಗಿಸಿಕೊಂಡು ಹಿಂತಿರುಗಿ ಬಂದ ಕೂಡಲೇ ರೂಂ ಸೇರಿದೆವು. ಅವರು ರೂಂ ಹೊಕ್ಕ ಒಂದೇ ನಿಮಿಷಕ್ಕೆ ನಾನೂ ಒಳಗೆ ಕಾಲಿಟ್ಟೆ. ಆಗಲೇ ಮುಸುಕು ಹಾಕಿಕೊಂಡು ಹಾಸಿಗೆಯಲ್ಲಿದ್ದರು. ಆಶ್ಚರ್ಯವಾಗಿ ನಾನು ಕೇಳಿದೆ, ‘ಏನ್ ಸರ್, ಆಗಲೇ ಮಲಗಿಬಿಟ್ಟಿರ?’.

  ಅವರ ಉತ್ತರ: ‘ಹೌದು. ನಾನು ನೋಡಿ, ಟೈಮ್ ವೇಸ್ಟ್ ಮಾಡೋದಿಲ್ಲ. ಐದು ನಿಮಿಷ ಸಿಕ್ಕರೂ ಮಲಗಿ ನಿದ್ದೆ ಮಾಡಿಬಿಡ್ತೇನೆ!’ ‘ಆರಾಮ್ ಹರಾಮ್ ಹೈ’ ಎಂಬಂಥ ಮಾತುಗಳನ್ನು ಚಿಕ್ಕಂದಿನಿಂದ ಕೇಳಿ ಗೊತ್ತಿದ್ದ ನನಗೆ ಇದು ಬ್ರಿಲಿಯಂಟ್ ಜೋಕ್ ಎಂದೆನಿಸಿ ತುಂಬ ನಗು ಬಂತು. ಅದು ಅಷ್ಟು ಇನ್ನೋಸೆಂಟ್ ಜೋಕ್ ಅಲ್ಲ ಎಂದು ನನಗೆ ಈಚೆಗೆ ಹೊಳೆಯಿತು.

ಬಿಡುವಿಲ್ಲದೆ ಕೆಲಸ ಮಾಡುವವನಿಗೆ ಒಂದು ಕ್ಷಣ ಬಿಡುವು ಸಿಕ್ಕರೂ ಮತ್ತಷ್ಟು ಕೆಲಸ ಹೊರಿಸಲು ಸಜ್ಜಾಗಿರುವವರು ಇದ್ದೇ ಇರುತ್ತಾರೆ. ಅಂಥವನು ಸಿಕ್ಕ ಟೈಮ್ ವೇಸ್ಟ್ ಮಾಡದೆ ಒಂದು ಗಳಿಗೆ ನಿದ್ದೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿರುತ್ತದೆ!ಮಾಲ್ ಒಳಗೆ ಆಡುವ  ಕ್ರಿಕೆಟ್

ವೀಡಿಯೊ ಗೇಮ್ಸ್ ಮತ್ತು ಬೌಲಿಂಗ್ ಕೇಂದ್ರಗಳು ಅಲ್ಲಲ್ಲಿ ತಲೆ ಎತ್ತುತ್ತಿರುವುದು ನೀವು ಗಮನಿಸಿರಬಹುದು. ಇವುಗಳಲ್ಲದೆ ಫುಟ್ಬಾಲ್, ಟೇಬಲ್ ಟೆನಿಸ್, ಕ್ರಿಕೆಟ್ ನಂಥ ಆಟಗಳನ್ನೂ ಮಾಲ್ಗಳಲ್ಲಿ ಆಡುವಂತೆ ಅನುವು ಮಾಡಿಕೊಟ್ಟು ಅದರಿಂದಲೂ ಲಾಭ ಮಾಡಬಹುದು ಎಂದು ಉದ್ಯೋಗಶೀಲರು ಈಚೆಗೆ ಕಂಡುಕೊಂಡಿದ್ದಾರೆ. ಇಂಥ ಆಟಗಳಿಗೆ ವಿಶಾಲ ಜಾಗ, ದೊಡ್ಡ ಮೈದಾನ ಬೇಕಲ್ಲವೆ? ಹೌದು, ಅಂತ ಜಾಗಗಳು ಕಡಿಮೆಯಾಗುತ್ತಿರುವುದರಿಂದಲೇ ಮಾಲ್ ಒಳಗಿನ ಆಟದ ಆರ್ಕೇಡ್ಗಳು ಹೆಚ್ಚಾಗುತ್ತಿರುವುದು.ಬನ್ನೇರುಘಟ್ಟ ರಸ್ತೆಯ ಗೋಪಾಲನ್ ಮಾಲ್ ನ ಕೊನೆಯ ಮಹಡಿಯಲ್ಲಿ ಆಟ ಆಡುವ ಹಲವು ಅಂಗಡಿಗಳು ಇವೆ. ಅಲ್ಲಿ ಒಂದು ಸಣ್ಣ ಜಾಗದಲ್ಲಿ ಕ್ರಿಕೆಟ್ ಕೂಡ ಆಡಬಹುದು. ಬೌಲಿಂಗ್ ಮಷೀನ್ ಒಂದು ನಿಮ್ಮತ್ತ ಚೆಂಡು ಎಸೆಯುತ್ತದೆ. ಬೌಲರ್ ಒಬ್ಬನ ವೀಡಿಯೊ ಚಿತ್ರ ನಿಮ್ಮತ್ತ ಬಂದು ಬಾಲ್ ಹಾಕುವಂತೆ ಇದನ್ನು ವಿನ್ಯಾಸ ಮಾಡಿದ್ದಾರೆ. ನೆಟ್ ಹಾಕಿದ ಈ ಪಿಚ್ನಲ್ಲಿ ಬೌಂಡರಿ ಹೊಡೆಯುವುದು ಕೇವಲ ಕಾಲ್ಪನಿಕ.

ಪುಟ ಬೀಳದೆ ಚೆಂಡು ಬಲೆಗೆ ತಾಕಿದರೆ ಅದನ್ನು ಲೆಕ್ಕ ಇದುವ ಕಂಪ್ಯೂಟರ್ ಆರು ರನ್ ಎಂದು ಪರಿಗಣಿಸುತ್ತದೆ. ಐದು ಓವರ್ ಆಡಲು `೨೦೦. ಬಿಲ್ಲು ಬಾಣ ಪಡೆದು ಆರ್ಚರಿ ಮಾಡಬಹುದು. ಹದಿನೈದು ಬಿಲ್ಲುಬಿಡಲು `೧೦೦. ಹೀಗೆ ಒಬ್ಬರು ನಾಲ್ಕೈದು ಆಟ ಆಡುತ್ತ ಹೋದರೆ ಒಂದೇ ಸಂಜೆಯಲ್ಲಿ ಒಂದೆರಡು ಸಾವಿರ ಖರ್ಚಾಗಿ ಹೋಗುತ್ತದೆ! ಖರ್ಚಿನ ವಿಷಯ ಬಿಡಿ. ಅಷ್ಟು ದುಡ್ಡು ಖರ್ಚು ಮಾಡಲು ಹಿಂದೇಟು ಹಾಕದವರು ಬೆಂಗಳೂರಿನಲ್ಲಿದ್ದಾರೆ.

  ಹಾಗಾದರೆ  ಹೀಗೆ ಆಡುವುದರಲ್ಲಿ ತಪ್ಪೇನಿದೆ? ತಪ್ಪಿಲ್ಲದಿದ್ದರೂ ಕೊರತೆಗಳು ಇವೆ. ಇದು ಮನರಂಜನೆಯೇ ಹೊರತು ಕ್ರೀಡೆ ಅಲ್ಲ. ಆಟದ ಮೈದಾನದಲ್ಲಿರುವ ಕ್ರೀಡಾ ಮನೋಭಾವ ಇಲ್ಲಿ ಮೂಡಿಬರಲು ಸಾಧ್ಯವಿಲ್ಲ. ಮೈದಾನದ ಬೆವರುವಿಕೆ, ಉತ್ಕರ್ಷ ಇಲ್ಲಿಲ್ಲ. ಆಕಾಶ ನೋಡುವ ಸುಖ ಇಲ್ಲ. ಮಣ್ಣಿನ ವಾಸನೆ ಇಲ್ಲ. ಬಿಸಿಲು ಮಳೆ ಗಾಳಿಗೆ ಮೈಯೊಡ್ಡುವ ಥ್ರಿಲ್ ಇಲ್ಲ. ಮೈದಾನದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡುವ ಉನ್ಮಾದವಿಲ್ಲ. ಪ್ರತಿಸ್ಪರ್ಧಿಯನ್ನು ಸೋಲಿಸುವ, ಅವನಿಂದ ಕಲಿಯುವ ಅವಕಾಶವಿಲ್ಲ. 

          

ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಇಂದು ಆಟದ ಮೈದಾನವೇ ಇಲ್ಲ. ಮೈದಾನ ಬಿಡಿ, ಖಾಸಗಿ ಲೇಔಟ್ಗಳಲ್ಲಿ ಅಗಲ ರಸ್ತೆ ಇರುವುದೇ ಅಪರೂಪವಾಗಿ ಹೋಗಿದೆ. ಆದಷ್ಟೂ ಹೆಚ್ಚು ಸೈಟ್ ಮಾಡಿ ಮಾರುವ ಉಮೇದಿನಲ್ಲಿ ಖಾಸಗಿ ಡೆವಲಪರ್ಸ್ ಇರುತ್ತಾರೆ. ಒಂದು ಬಡಾವಣೆಗೆ ಆಟದ ಮೈದಾನ, ಪಾರ್ಕ್ ಕಡ್ಡಾಯವಾಗಿ ಇರಬೇಕು ಎಂಬ ವಿಷಯವೂ ಸದಾ ತಮ್ಮ ಕೆಲಸದಲ್ಲಿ ತೊಡಗಿರುವ ಸಾರ್ವಜನಿಕರಿಗೆ ಮರೆತು ಹೋಗುತ್ತಿದೆ. ರಿಯಲ್ ಎಸ್ಟೇಟ್ ಹುಚ್ಚಿನಲ್ಲಿ ನಾವು ಏನೇನು ಕಳೆದುಕೊಳ್ಳುತ್ತಿದ್ದೇವೆ, ಅಲ್ಲವೇ?

ಪ್ರತಿಕ್ರಿಯಿಸಿ (+)