ಮಂಗಳವಾರ, ಮೇ 11, 2021
24 °C

ಅಪೇಕ್ಷಿತ ಗುಣಗಳು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಂದಾನೊಂದು ಕಾಲದಲ್ಲಿ ಒಂದು ಸಣ್ಣ ಊರಿನಲ್ಲಿ ಒಬ್ಬ ಹುಡುಗಿ ಇದ್ದಳು. ಅವಳು ಅಪರೂಪದ ಸುಂದರಿ, ಗುಣವಂತೆ. ಆಕೆಗೆ ಮದುವೆಯಾಗುವ ವಯಸ್ಸು ಬಂದಾಗ ಊರಿನ ಮೂವರು ಯುವಕರು ಆ ಹುಡುಗಿಯನ್ನು ಮದುವೆಯಾಗಲು ಬಯಸಿ ಆಕೆಯ ತಂದೆಯನ್ನು ಕೇಳಿದರು. ಆತ ಮದುವೆಯಾಗುವವನನ್ನು ಆಕೆಯೇ ಆರಿಸುತ್ತಾಳೆ ಎಂದು ಹೇಳಿ ಕಳುಹಿಸಿಬಿಟ್ಟ.

ಮುಂದೆ ಮೂರು ತಿಂಗಳು ಕಾಲ ಹುಡುಗಿ ಯಾವ ತೀರ್ಮಾನವನ್ನೂ ಮಾಡಲಿಲ್ಲ. ಒಂದು ದಿನ ಅವಳಿಗೆ ಭಾರೀ ಜ್ವರ ಬಂದಿತು. ಮರುದಿನವೇ ಎಚ್ಚರ ತಪ್ಪಿತು. ಸಂಜೆಯ ಹೊತ್ತಿಗೆ ಆಕೆಯ ಪ್ರಾಣ ಹೋಗಿಯೇ ಬಿಟ್ಟಿತು. ಮೂವರೂ ತರುಣರು ದುಃಖದಿಂದ ಅವಳ ಸಮಾಧಿ ಮಾಡಿದರು. ಒಬ್ಬ ತರುಣನಿಗೆ ಜಗತ್ತೇ ಶೂನ್ಯವಾದಂತಾಗಿ ಸಮಾಧಿಯ ಪಕ್ಕದಲ್ಲೇ ಕುಳಿತುಬಿಟ್ಟ. ತಾನು ಸಾಯುವವರೆಗೆ ಅಲ್ಲಿಯೇ ಅವಳ ನೆನಪಿನಲ್ಲೇ ಇದ್ದುಬಿಡುತ್ತೇನೆಂದು ತೀರ್ಮಾನ ಮಾಡಿದ. ಮತ್ತೊಬ್ಬ ತರುಣನಿಗೆ ಹುಡುಗಿಯ ತಂದೆಯ ದುಃಖವನ್ನು ನೋಡಲಾಗಲಿಲ್ಲ. ಪಾಪ! ದುಃಖದಲ್ಲಿ ಕುಸಿದುಹೋದ ಮುದುಕನಿಗೆ ಯಾರು ಸಾಂತ್ವನ ಹೇಳಿಯಾರು, ಯಾರು ಸೇವೆ ಮಾಡಿಯಾರು ಎಂದುಕೊಂಡು ಅವನಿಗೆ ಸಹಾಯ ಮಾಡುತ್ತ ಉಳಿದುಬಿಟ್ಟ.

ಮೂರನೆಯ ತರುಣನಿಗೂ ಹುಡುಗಿಯ ಸಾವು ತಡೆದುಕೊಳ್ಳಲಾಗದ ಆಘಾತವಾಗಿತ್ತು. ಅವನಿಗೆ ಜೀವನವೇ ಸಾಕೆನಿಸಿತು. ಊರನ್ನು ತೊರೆದು ಸನ್ಯಾಸಿಯಾಗಿ ಹೊರಟುಬಿಟ್ಟ. ಆತ ಊರು ಊರು ಅಲೆದ, ತರತರಹದ ಜನರನ್ನು ಕಂಡ. ಒಂದು ಸಲ ಒಬ್ಬ ಅವಧೂತನನ್ನು ಭೆಟ್ಟಿಯಾದ. ಅವನ ಲಕ್ಷಣಗಳೇ ವಿಚಿತ್ರ. ಅವನು ಏನು ಮಾಡಬಹುದು ಎಂಬುದನ್ನು ಹೇಳುವುದೇ ಸಾಧ್ಯವಿರಲಿಲ್ಲ. ಈ ತರುಣನನ್ನು ಮೆಚ್ಚಿಕೊಂಡು ತನ್ನ ಮನೆಗೆ ಕರೆದುಕೊಂಡು ಹೋದ.

ಈ ಅವಧೂತನ ಮನೆಯಲ್ಲಿದ್ದಾಗ ಒಂದು ವಿಚಿತ್ರ ನಡೆಯಿತು. ಅವಧೂತನ ಪುಟ್ಟ ಮಗ, ಸುಮಾರು ಆರೇಳು ವರ್ಷದವನು, ಬಂದು ತಂದೆಗೆ ಏನೇನೋ ಪ್ರಶ್ನೆಗಳನ್ನು ಕೇಳತೊಡಗಿದ. ಅವಧೂತನೋ ಯಾವುದೋ ವಿಚಾರದಲ್ಲಿದ್ದ. ಮಗು ಪದೇ ಪದೇ ಪ್ರಶ್ನೆ ಕೇಳಿದಾಗ ಅವನಿಗೆ ಬಹಳ ಸಿಟ್ಟು ಬಂದಿತು. ಆತ ಊಟ ಬಿಟ್ಟು ಎದ್ದು ಬಿಟ್ಟ. ಮಗುವನ್ನು ಕೈಯಿಂದ ಎತ್ತಿಕೊಂಡು ಗರಗರನೇ ತಿರುಗಿಸಿ ಧಗಧಗನೇ ಉರಿಯುತ್ತಿದ್ದ ಬೆಂಕಿಯಲ್ಲಿ ಎಸೆದುಬಿಟ್ಟು ಮರಳಿ ಬಂದು ಊಟ ಮಾಡತೊಡಗಿದ. ಮನೆಯಲ್ಲಿ ಯಾರೂ, ತಾಯಿ ಸಹಿತ, ಗಾಬರಿಯನ್ನು ತೋರಿಸಲಿಲ್ಲ. ಈ ತರುಣ ಸನ್ಯಾಸಿಗೆ ತಡೆಯುವುದಾಗಲಿಲ್ಲ. ಅವನೂ ಸಾಕಷ್ಟು ಕ್ರೌರ್ಯ ನೋಡಿದವನು. ಆದರೆ ಇಂಥದನ್ನು ಎಂದೂ ನೋಡಿರಲಿಲ್ಲ. ಅವಧೂತನಿಗೆ ಹೇಳಿದ. `ಸುಮ್ಮನೇ ಊಟ ಮಾಡು~ ಎಂದು ಬೈಸಿಕೊಂಡ. ಅವಧೂತ ನಿರಾಳವಾಗಿ ಊಟಮಾಡಿ ನಂತರ ಬೆಂಕಿಯ ಮುಂದೆ ನಿಂತು ಯಾವುದೋ ಮಂತ್ರವನ್ನು ಪಠಿಸಿದ. ಮರುಕ್ಷಣ ಮಗು ಬೆಂಕಿಯಿಂದ ಹೊರಗೆ ಬಂತು. ಸನ್ಯಾಸಿಗೆ ಬೆರಗೋ ಬೆರಗು. ಇದು ಹೇಗಾಯಿತು ಎಂದು ಅವಧೂತನನ್ನು ಕಾಡಿ ಬೇಡಿದ. ಆತ ಇನ್ನೆರಡು ಬಾರಿ ಹೀಗೆಯೇ ಮಾಡಿ ತೋರಿಸಿದ. ಸನ್ಯಾಸಿ ಆ ಮಂತ್ರವನ್ನು ಗಟ್ಟಿ ಮಾಡಿಕೊಂಡು ಓಡಿ ತನ್ನೂರಿಗೆ ಬಂದ. ತನ್ನ ಪ್ರಿಯೆಯ ಸಮಾಧಿಯ ಮುಂದೆ ನಿಂತು ಮಂತ್ರ ಹೇಳಿದ. ಕ್ಷಣ ಮಾತ್ರದಲ್ಲಿ ಆ ತರುಣಿ ಏನೂ ಆಗದವಳಂತೆ ಹೊರಗೆ ಬಂದು ನಿಂತಳು.

ಮತ್ತೆ ಮೂವರಲ್ಲಿ ಜಗಳ ಪ್ರಾರಂಭವಾಯಿತು. ಮೂವರೂ ತಮ್ಮ ಪ್ರೇಮವೇ ಹೆಚ್ಚಿನದು ಎಂದು ವಾದ ಮಾಡಿದರು. ಆಗ ತರುಣಿಯೇ ಸಮಸ್ಯೆಗೆ ಪರಿಹಾರ ನೀಡಿದಳು. ಯಾವ ತರುಣ ಮಂತ್ರವನ್ನು ಸಂಪಾದಿಸಿ ತಂದು ಮತ್ತೆ ಜೀವನವನ್ನು ಕೊಟ್ಟನೋ ಅವನು ತಂದೆ ಇದ್ದಂತೆ. ತಂದೆ ಮಾತ್ರ ಜೀವ ನೀಡಬಲ್ಲ. ಯಾರು ತನ್ನ ತಂದೆಯ ಜೊತೆಗೇ ಇದ್ದು ಅವರನ್ನು ನೋಡಿಕೊಂಡನೋ ಅವನು ತನ್ನ ಅಣ್ಣನಿದ್ದಂತೆ. ಯಾಕೆಂದರೆ ಮಗನಾಗಿ ತನ್ನ ಜವಾಬ್ದಾರಿ ನಿರ್ವಹಿಸಿದ್ದಾನೆ. ಯಾವ ಯುವಕ ತನ್ನ ಸಮಾಧಿಯನ್ನು ಬಿಟ್ಟಗಲದೇ ಅವಳಲ್ಲೇ ಮನವಿಟ್ಟು ಕುಳಿತಿದ್ದಾನೋ ಅವನೇ ತನ್ನನ್ನು ಮದುವೆಯಾಗಲು ತಕ್ಕವನು ಎಂದು ಹೇಳಿದಳು. ಈ ಮಾತು ಎಲ್ಲರಿಗೂ ಒಪ್ಪಿಗೆಯಾಯಿತು.

ಇದೇ ರೀತಿಯ, ಇದೇ ಅರ್ಥದ ಕಥೆ ಬೇತಾಳದ ಕಥೆಯಲ್ಲಿ, ಸೂಫೀ ಕಥೆಯಲ್ಲಿ, ಝೆನ್ ಕಥೆಯಲ್ಲಿ ಮತ್ತು ಫ್ರಾನ್ಸ್ ದೇಶದ ಮಕ್ಕಳ ಕಥೆಗಳಲ್ಲಿ ಬರುತ್ತದೆ. ಅಂದರೆ ತಂದೆಯ ಕರ್ತವ್ಯ, ಅಣ್ಣನ ಜವಾಬ್ದಾರಿ ಮತ್ತು ಪ್ರೇಮಿಯ ಅವಿರತ ಪ್ರೇಮ ಇದೆಲ್ಲವೂ ಎಲ್ಲ ಸಮಾಜದಲ್ಲಿ ಎಲ್ಲ ಕಾಲದಲ್ಲೂ ಅದೇ ಅಪೇಕ್ಷಿತ ಮಟ್ಟದಲ್ಲಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.