ಅಪ್ಪ ಸತ್ತೋದ್ರು ಸಾರ್...!

7

ಅಪ್ಪ ಸತ್ತೋದ್ರು ಸಾರ್...!

Published:
Updated:

ಅವನ ಹೆಸರು ವಿಷ್ಣುಪ್ರಸಾದ್. ನೋಡಲು ಪಾಪದವನಂತೆ ಕಾಣುತ್ತಿದ್ದ. ಯಾರ ಜೊತೆಗೂ ಅಷ್ಟೊಂದು ಮಾತಾಡುತ್ತಿರಲಿಲ್ಲ. ಪಿಯುಸಿ ಸೈನ್ಸ್‌ಗೆ ಸೇರಿಕೊಂಡಿದ್ದ. ಕ್ಲಾಸಿನಲ್ಲಿ ಜೋಕ್ಸ್ ಮಾಡಿದಾಗ ಎಲ್ಲರೂ ಘೊಳ್ಳೆಂದು ನಕ್ಕರೆ ಇವನು ಮಾತ್ರ ಸೀರಿಯಸ್ಸಾಗೇ ಇರುತ್ತಿದ್ದ. ಇವನ ಸಮಸ್ಯೆ ಏನಿರಬಹುದು ಕೇಳೋಣ ಎಂದು  ನಾನು ಆಲೋಚಿಸಿದೆನಾದರೂ, ಅದಕ್ಕೆ ಅವಕಾಶವಾಗಿರಲಿಲ್ಲ. ಕಾಲೇಜು ಆರಂಭವಾಗಿ ಒಂದು ತಿಂಗಳಷ್ಟೇ ಆಗಿತ್ತು. ಹೊಸ ವಾತಾವರಣದಲ್ಲಿ ಹೊಂದಿಕೊಳ್ಳಲು ಕೆಲ ಹುಡು ಗರು ಸಮಯ ತೆಗೆದುಕೊಳ್ಳುತ್ತಾರೆ. ಮೊದಲ ಸಲ ಮನೆಬಿಟ್ಟು ನಗರಕ್ಕೆ ಬಂದವರೂ ಹೀಗೆ ಮಂಕಾಗುತ್ತಾರೆ. ಹಾಸ್ಟೆಲ್ ಸೇರಿದ ಮಕ್ಕಳ ಗೋಳು ಹೆಚ್ಚು ಕಡಿಮೆ ಹೀಗೆ ಇರುತ್ತೆ. ಕೆಲವೊಮ್ಮೆ ಕಾಲೇಜಿನ ವಾತಾವರಣ ಒಗ್ಗದ ಕೆಲವರೂ ಹೀಗೆ ಮುಗುಮ್ಮಾಗಿ ಇರ್ತಾರೆ. ಇದೂ ಅಂಥದ್ದೇ ಕೇಸುಗಳ ಪೈಕಿ  ಒಂದಿರಬಹುದೆಂದು ನಾನು ಭಾವಿಸಿದೆ.  ಒಮ್ಮೆ ವಿದ್ಯಾ ಎಂಬ ಹುಡುಗಿ ಬಂದು ಸಾರ್ ನಿಮ್ಮ ಹತ್ರ ಮಾತಾಡಬೇಕಿತ್ತಲ್ಲ ಎಂದಳು. ಚೂಟಿ ಇದ್ದಾಳೆಂದು ಅವಳನ್ನೇ ತರಗತಿ ಪ್ರತಿನಿಧಿ ಮಾಡಿದ್ದೆವು. ಸದಾ ನಗುನಗುತ್ತಾ  ಮಾತಾಡುವ ಆಕೆಯ ಮುಖದಲ್ಲಿ ದುಗುಡವಿತ್ತು. ನಾನು, ಏನಮ್ಮ, ಏನು ತೊಂದರೆ. ಬಹಳ ಡಲ್ ಆಗಿದ್ದೀಯಲ್ಲ.? ಏನು ವಿಷಯ, ಯಾರಾದರೂ ಏನಾದರೂ ಅಂದ್ರಾ? ಎಂದು ಕೇಳಿದೆ. ಅದಕ್ಕವಳು ನನಗೇನೂ ತೊಂದರೆ ಇಲ್ಲಾ ಸಾರ್. ನಮ್ಮ ಮನೆ ಮುಂದೆ ಒಂದು ಹೊಸ ಮನೆ  ಕಟ್ತಾ ಇದ್ದಾರೆ. ರಾತ್ರಿ ಹೊತ್ತು ಅಲ್ಲಿ ಯಾರೂ ಇರಲ್ಲ.  ಅವನು ಅಲ್ಲೇ ಬಂದು ಮಲಗ್ತಾನೆ ಸಾರ್. ಎಲ್ಲಿಂದನೋ ತಿಂಡಿ ಕಟ್ಟಿಸಿಕೊಂಡು ಬಂದು ಬೀದಿ ದೀಪದ ಬೆಳಕಲ್ಲಿ ತಿಂತಾನೆ. ಅಲ್ಲೇ ಕೂತ್ಕೊಂಡು ಓದ್ತಾನೆ. ಪಾಪ ಅವನಿಗೆ ಯಾರೂ ದಿಕ್ಕುದೆಸೆ ಇದ್ದಂಗಿಲ್ಲ ಸಾರ್.ಒಂದಿನ  ನಾನು ನಮ್ಮ ಮಮ್ಮಿಗೆ ಹೇಳಿ ಕರೆದು ಊಟ ಕೊಡಿಸಲು ಹೋದರೆ ಬೇಡ ಬೇಡಾಂತ ಹೊರಟೇ ಹೋದ. ಈ ವಿಷಯಾನ ನಮ್ಮ ಪಪ್ಪನಿಗೆ ಹೇಳಿದೆ. ಅವರು ಕರೆದು ಅವನ ವಿಚಾರಿಸಲು ಹೋದರೆ ನಮ್ಮ ಪಪ್ಪ ಹೋಡಿಯೋಕೆ ಕರೀತಿದ್ದಾರಂತ ಅಂದ್ಕೊಂಡು ಹೆದರಿ ಓಡಿ ಹೋದ ಸಾರ್. ಅವತ್ತಿಂದ ಅವನು ನಮ್ಮ ಮನೆ ಹತ್ರನೂ ಸುಳೀತಿಲ್ಲ. ಈ ವಿಷಯ ಪ್ಲೀಸ್ ಯಾರಿಗೂ ಹೇಳ್ಬೇಡ ಕಣೆ. ನಿನ್ನ ಕೈ ಮುಗೀತೀನಿ ಅಂತ ಇವತ್ತು ಬೆಳಿಗ್ಗೆ ಕ್ಲಾಸ್ ಹೊರಗೆ ರಿಕ್ವೆಸ್ಟ್ ಮಾಡ್ಕೊಂಡ ಸಾರ್. ನನಗೂ ಏನು ಮಾಡೋದು ಅಂತ ತೋಚದೆ ನಿಮ್ಮ ಹತ್ರ ಬಂದು ಹೇಳ್ತಿದ್ದೀನಿ. ಪ್ಲೀಸ್ ನೀವೇ ಕರೆದು ಅವನ ಪ್ರಾಬ್ಲಂ ಏನೂಂತ ಕೇಳಿ ಸಾರ್. ಅವನ ನೋಡಿದ್ರೆ ಪಾಪಚ್ಚಿ ಅನ್ಸುತ್ತೆ.  ಬೇಕಾದ್ರೆ ನಾನೂ ನನ್ನ ಹತ್ರ ಇರೋ ಪಾಕೆಟ್ ಮನೀನೆಲ್ಲಾ ಒಟ್ಟು ಮಾಡಿ ಕೊಡ್ತೀನಿ ಸಾರ್. ಅವನಿಗೆ ಸಹಾಯ ಆಗೋದಾದ್ರೆ ಎಂದು ಮುಗ್ಧವಾಗಿ ಹೇಳಿದಳು. ಇಷ್ಟು ಹೇಳುವಾಗಲೇ ಅವಳ ಮುದ್ದು ಕಣ್ಣುಗಳಲ್ಲಿ ಸಣ್ಣಗೆ ನೀರು ಮೂಡಿತ್ತು.ವಿದ್ಯಾಳ ಶುದ್ಧ ಮನಸ್ಸಿನ ಮಾನವೀಯ ಮಾತುಗಳ ಕೇಳಿ ನಾನು ಕರಗೇ ಹೋದೆ. ಅವಳ ಪುಟ್ಟ ಹೃದಯದಲ್ಲಿರುವ ಕರುಣೆಯ ಸ್ವರೂಪ ಕಂಡು ನಾನು ವಿಸ್ಮಿತನಾದೆ. ಅವಳ ಬಗ್ಗೆ ಅತೀವ ಗೌರವ ಮೂಡಿತು. ಇನ್ನೊಬ್ಬರ ಕಷ್ಟವನ್ನ ಇಷ್ಟೊಂದು ಸೂಕ್ಷ್ಮವಾಗಿ ನೋಡುವ ನೀನು ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯುತ್ತೀಯ. ಅಂದಹಾಗೆ ನೀನು ಯಾವ ಹುಡುಗನ ಬಗ್ಗೆ ಹೇಳ್ತಾ ಇದ್ದೀಯಾ ಅನ್ನೋದು ನನಗೆ ಗೊತ್ತಾಗಲಿಲ್ಲ ಎಂದೆ. ಆಗವಳು ವಿಷ್ಣುಪ್ರಸಾದ್ ಸಾರ್ ಎಂದಳು. ಓಹೋ ಆ ಸೈಲೆಂಟ್ ಹುಡುಗನೇ? ಆಗಲಿ. ನಾನವನ ಬಗ್ಗೆ ವಿಚಾರಿಸುತ್ತೇನೆ.  ನೀನೀಗ ಹೋಗು ಎಂದು ಅವಳನ್ನು ಕಳಿಸಿಕೊಟ್ಟೆ.ಅವನ ಪರಿಸ್ಥಿತಿ ಕೇಳಿ ನನಗೆ ದಿಗಿಲಾಯಿತು. ಎಲ್ಲೋ ಬೀದಿಯಲ್ಲಿ ಬದುಕುತ್ತಾ, ಕ್ಲಾಸಿಗೆ ತಪ್ಪದೆ ಬರುತ್ತಿರುವ ಇವನ ಕಥೆ ವಿಚಿತ್ರ ಎನಿಸಿತು. ಆ ದಿನ  ಮಧ್ಯಾಹ್ನವೇ ಅವನನ್ನು ಸ್ಟಾಫ್ ರೂಮಿಗೆ ಕರೆಸಿಕೊಂಡೆ. ಹೇಳು ಏನು ನಿನ್ನ ಕಥೆ ಎಂದೆ. ನನ್ನ ಪ್ರಶ್ನೆಗೆ ಉತ್ತರ ಕೊಡದೆ ಸುಮ್ಮನೆ ನಿಂತು ಕಣ್ಣೀರು ಹಾಕಿದ. ಅವನು ಸ್ವಲ್ಪ ಹೊತ್ತು ಅತ್ತು ಹಗುರಾಗಲಿ ಎಂದು ಕಾದೆ. ಕುಡಿಯಲು ನೀರು ಕೊಟ್ಟೆ. ಈಗ ಮಾತಾಡು, ಅಳೋದ್ರಿಂದ ಸಮಸ್ಯೆ ಬಗೆಹರಿಯೋದಿಲ್ಲ. ನಿನ್ನ ಕಷ್ಟ ಏನು  ಅನ್ನೋದು ಮೊದಲು ಹೇಳು. ನಿನ್ನ ಅಪ್ಪ ಅಮ್ಮ ಯಾರು? ನಿನ್ನದು ಯಾವ ಊರು? ನಿನ್ನ ಕಾಲೇಜಿಗೆ ಯಾರು ಸೇರಿಸಿದರು? ಯಾಕೆ ಬೀದಿ ಬದಿಯಲ್ಲಿ ವಾಸ ಮಾಡ್ತಿದ್ದೀಯ? ಅನ್ನೊದೆಲ್ಲಾ ವಿವರವಾಗಿ ಹೇಳು. ನನ್ನ ಕೈಲಾದ ಸಹಾಯವನ್ನು ಖಂಡಿತಾ ಮಾಡ್ತೀನಿ. ಹೆದರಬೇಡ ಎಂದು ಧೈರ್ಯ ತುಂಬಿದೆ.ನನಗೆ ಅಪ್ಪ ಅಮ್ಮ ಇಲ್ಲಾ ಸಾರ್. ಆಕ್ಸಿಡೆಂಟ್‌ನಲ್ಲಿ ಸತ್ತೋದ್ರು ಎಂದು ಮತ್ತೆ ಅಳತೊಡಗಿದ. ಹಾಗಾದರೆ ನಿನಗೆ ಕಾಲೇಜಿಗೆ ಯಾರು ಸೇರಿಸಿದರೋ ಎಂದೆ. ನಾನೇ ಸೇರಿದೆ ಎಂದ. ಊರು ಭದ್ರಾವತಿ ಎಂದ. ಅಪ್ಪ ಅಮ್ಮ ಯಾವಾಗ ಸತ್ತರೋ ಎಂದರೆ ಬಹಳ ಹಿಂದೆ ಎಂದ. ಹೆಂಗೆ ಎಂದರೆ ಮೌನವಾದ. ಓಹೋ ಇವನು  ಸಿಕ್ಕಾಪಟ್ಟೆ ನೊಂದು ಹೋಗಿದ್ದಾನೆ. ಮೇಲಾಗಿ ಹೆದರಿದ್ದಾನೆ. ಇವನ ಎದೆಯೊಳಗಿನ ಎಲ್ಲಾ ವಿಷಯಗಳನ್ನು  ಈಗಲೇ ಹೊರ ತೆಗೆಯೋದು ಕಷ್ಟ.  ಹೀಗಾಗಿ, ಒಂದಷ್ಟು ದಿನ ಕಳೆಯಲಿ. ಆಮೇಲೆ ಎಲ್ಲಾ ವಿಚಾರಿಸಿದರಾಯಿತು  ಎಂದು ನನ್ನ ಪ್ರಶ್ನಾವಳಿಯನ್ನು ನಿಲ್ಲಿಸಿದೆ.  ಇವನಿಗೆ ಊಟ ಮತ್ತು ವಸತಿಯನ್ನು ಹೇಗೆ ಕಲ್ಪಿಸುವುದು? ಎಲ್ಲಿ ಇರಿಸುವುದು? ಎಂದು ತೀವ್ರವಾಗಿ ಯೋಚಿಸತೊಡಗಿದೆ. ಆಗ, ಪಾರ್ಟ್ ಟೈಮ್ ಉಪನ್ಯಾಸಕನಾಗಿದ್ದ ನನ್ನಲ್ಲೂ  ಬಿಡಿಗಾಸಿರಲಿಲ್ಲ.ನನ್ನದೂ ಶೋಚನೀಯ ಸ್ಥಿತಿ. ಆದರೂ ಈ ಹುಡುಗನಿಗೆ ಏನಾದರೂ ಸಹಾಯ ಮಾಡಬೇಕೆಂದು ಮನಸ್ಸು ಹಂಬಲಿಸತೊಡಗಿತು.

ನನ್ನ ಜೊತೆ ವಿಷ್ಣುವನ್ನು ಇರಿಸಿಕೊಳ್ಳುವುದರ ಬಗ್ಗೆ ಆಲೋಚಿಸಿದೆ. ಅದು ಬಿಲ್‌ಕುಲ್ ಸಾಧ್ಯವಾಗದ ಕೆಲಸ. ಏಕೆಂದರೆ,  ನಾನಿದ್ದದ್ದೇ ಅತಂತ್ರ ಸ್ಥಿತಿಯಲ್ಲಿ. ಅದು ಸಣ್ಣದರಲ್ಲೇ ಅತಿ ಸಣ್ಣ ರೂಮು. ನನ್ನ  ರೂಮಿಗೆ ಯಾರೇ ಅತಿಥಿಗಳು ಬಂದರೂ ಅವರು ಹೊರಗೇ ನಿಂತು ಮಾತಾಡಿಕೊಂಡು ಹೋಗಬೇಕಾಗಿತ್ತು. ಅದು ಅಷ್ಟು ಚಿಕ್ಕದಾಗಿತ್ತು. ಇಂಥ  ಇಕ್ಕಟ್ಟಿನಲ್ಲೂ ನಾಗರಾಜನೆಂಬ ನನ್ನ ಶಿಷ್ಯನಿಗೆ ಇದ್ದುದ್ದರಲ್ಲೇ ಆಶ್ರಯ ಕೊಟ್ಟಿದ್ದೆ. ಈಗ ನನ್ನ ರೂಮಿನಲ್ಲಿ ಇರಿಸಿಕೊಳ್ಳುವ ವಿಚಾರ ಕೈಬಿಟ್ಟು ಬೇರೆ  ಒಂದು ವ್ಯವಸ್ಥೆ ಮಾಡಬೇಕಿತ್ತು.  ನಗರದಲ್ಲಿ ರೂಮು ಮಾಡಿಕೊಂಡು ಓದುತ್ತಿದ್ದ ಕೆಲ ಹುಡುಗರನ್ನು ಕರೆದು ವಿಚಾರಿಸಿದೆ. ಕೆಲ ದಿನ ಅವನಿಗೆ ಆಶ್ರಯ ಕೊಡಿ. ಆಮೇಲೆ ಏನಾದರೂ ಯೋಚಿಸೋಣ. ದಯವಿಟ್ಟು ಸಹಾಯ ಮಾಡ್ರಪ್ಪ ಎಂದು ಮನವಿ ಮಾಡಿಕೊಂಡೆ. ಆ ಹುಡುಗರು ಆಯ್ತೆಂದು ಒಪ್ಪಿದರು.      ಊಟಕ್ಕೆ ನಾನು ನನ್ನ ಶಿಷ್ಯ ನಾಗರಾಜ್ ಗಣೇಶ್ ಭವನ್ ಎಂಬ ಹೋಟೆಲ್ಲಿಗೆ ಹೋಗುತ್ತಿದ್ದೆವು. ನಮ್ಮ ಹರಕು ಹಣಕಾಸಿಗೆ ಹೊಟ್ಟೆ ತುಂಬಾ ಊಟ, ತಿಂಡಿ ಕೊಡುವ ಹೋಟೆಲ್ ಅದೊಂದೇ ಇದ್ದದ್ದು. ಅದರ ಮಾಲೀಕರಿಗೆ ಈ ಹುಡುಗನ ಕಷ್ಟ ಹೇಳಿದೆ. ಅದಕ್ಕವರು ನೀವು ವಾರದಲ್ಲಿ ಐದು ದಿನದ ಬಿಲ್ಲು ಕೊಡಿ ಸಾಕು. ಉಳಿದ ಎರಡು ದಿನದ ಊಟ ನಾನು ಫ್ರೀಯಾಗಿ ಕೊಡ್ತೀನಿ. ಓದೋ ಮಕ್ಕಳಲ್ಲವಾ? ಎಂದು ಆ ಪುಣ್ಯಾತ್ಮ ಒಂದೇ ಮಾತಿಗೆ ಒಪ್ಪಿಕೊಂಡು ಬಿಟ್ಟರು. ಸದ್ಯ ವಿಷ್ಣು ಪ್ರಸಾದನಿಗೆ ಒಂದು ತಾತ್ಕಾಲಿಕ ಪರಿಹಾರ ಸಿಕ್ಕಿತಲ್ಲ ಎಂದು  ನನಗೆ ಸಂತೋಷವಾಯಿತು.ಅವನು ದಿನಾ ಬಂದು ಊಟ ಮಾಡುತ್ತಿದ್ದನೋ ಇಲ್ಲವೋ ಎಂದು ವಿಚಾರಿಸುತ್ತಲೇ ಇದ್ದೆ. ನನ್ನ ಲೆಕ್ಕದ ಪುಸ್ತಕದಲ್ಲಿ ಅವನು ಊಟಮಾಡಿ ಸಹಿ ಹಾಕಿ ಹೋಗುತ್ತಿದ್ದ. ಬರುಬರುತ್ತಾ,  ಊಟದ ಜೊತೆ ಐಸ್ ಕ್ರೀಮ್ ಕೂಡ ಆರ್ಡರ್ ಮಾಡಿ ತಿನ್ನತೊಡಗಿದ. ಆ ಹುಡುಗನಿಂದ ನಿಮ್ಮ ಲೆಕ್ಕ ಜಾಸ್ತಿಯಾಗ್ತಾ  ಉಂಟಲ್ಲ. ಆದೀತೋ? ಎಂದು ಮಾಲೀಕರು ಮೊನಚಾಗಿ ಕೇಳಿದರು.  ತಿನ್ನೋ ವಯಸ್ಸು. ತಿನ್ನಲಿ ಬಿಡಿ ಎಂದೆ. ಓಹೋ ಈಗ ನಿಮ್ಮ ಸಂಬಳ ಜಾಸ್ತಿಯಾಗಿರಬೇಕು? ಎಂದವರು ನಕ್ಕರು. ವಿಷ್ಣು  ಒಮ್ಮೆ ಸಿಕ್ಕಾಗ ಹೇಳಿದೆ.  ಮಗು, ನನ್ನ ಸಂಬಳ ಬಹಳ ಕಡಿಮೆ ಇದೆ. ದಯವಿಟ್ಟು ಬೇಜಾರಾಗಬೇಡ. ನೀನು ಊಟ ತಿಂಡಿ ಬಿಟ್ಟು ಬೇರೇನೆ ತಿಂದರೂ ನನಗೆ ಹಣ ಹೊಂದಿಸಲು  ಕಷ್ಟವಾಗುತ್ತೆ. ನೀನೆ ಅರ್ಥ ಮಾಡ್ಕೋತಿಯಲ್ಲಾ ಎಂದೆ. ಅವನು ಆಯ್ತು ಸಾರ್ ಎಂದು ಒಪ್ಪಿಕೊಂಡ.  ಹೀಗೆ ಎರಡು ತಿಂಗಳು ಕಳೆದು ಹೋಯಿತು.ಒಂದು ದಿನ ಮಧ್ಯ ವಯಸ್ಕರೊಬ್ಬರು ನನಗಾಗಿ ಕಾಲೇಜಿನ ಕಟ್ಟೆ ಮೇಲೆ ಕಾಯುತ್ತಾ ಕೂತಿದ್ದರು. ನಾನು ನಿಮ್ಮನ್ನು ಕಾಣಲೆಂದು ಭದ್ರಾವತಿಯಿಂದ ಬಂದಿದ್ದೇನೆ. ನಿಮ್ಮ ಹತ್ತಿರ ತುರ್ತಾಗಿ  ಮಾತಾಡಬೇಕು ಎಂದರು. ಅವರು  ದುಗುಡದಲ್ಲಿದ್ದರು. ಸ್ಟಾಫ್ ರೂಮಿಗೆ ಕರೆದುಕೊಂಡು ಹೋದೆ. ಈಗ ಹೇಳಿ ಸಾರ್ ನನ್ನಿಂದ ಏನಾಗಬೇಕು ಎಂದೆ.  ಅವರು ಒಂದೇ ಉಸಿರಿಗೆ ನಾನು ವಿಷ್ಣುಪ್ರಸಾದ್ ತಂದೆ ಸಾರ್ ಎಂದು ಬಿಟ್ಟರು. ನನ್ನ ತಲೆ ಮೇಲೆ ಐಸಿನ ನೀರು ಸುರಿದಂತಾಯಿತು. ನಾನು ಯಾರ ತಂದೆ ಹೇಳಿ ಎಂದು ಮತ್ತೊಮ್ಮೆ ಕೇಳಿ ಖಾತ್ರಿ ಪಡಿಸಿಕೊಂಡೆ. ನನಗೆ ನಂಬಲಾಗಲಿಲಲ್ಲ. ಮತ್ತೆ, ನನಗೆ ತಂದೆ ತಾಯಿ ಇಲ್ಲ. ಆಕ್ಸಿಡೆಂಟ್‌ನಲ್ಲಿ ಸತ್ತೋದ್ರೂ ಅಂದನಲ್ಲಾ ಸಾರ್ ಅವನು ಎಂದೆ. ನನ್ನ ಈ ಮಾತನ್ನು ಅವರು ನಿರೀಕ್ಷಿಸಿರಲಿಲ್ಲ. ನಾನು ಸತ್ತೆ! ಅಂತ ಹೇಳಿದನಾ ಸಾರ್ ಅವನು ಎಂದವರೆ  ಹಣೆಹಣೆ ಚಚ್ಚಿಕೊಂಡು ಅಳತೊಡಗಿದರು. ನಾನು ಸಮಾಧಾನ ಹೇಳಲು ಎದ್ದು ನಿಂತೆ. ಅಷ್ಟರಲ್ಲಾಗಲೇ ಅವರು ತಮ್ಮ ಪೂರ್ಣ ಹಿಡಿತ ಕಳೆದುಕೊಂಡವರಂತೆ ಗಡಗಡ ನಡುಗುತ್ತಿದ್ದರು. ಬೇಗ ವಿಷ್ಣುಪ್ರಸಾದ್‌ನ ಕರೆತರುವಂತೆ ಅಲ್ಲಿದ್ದವರಿಗೆ ಕೂಗಿ ಹೇಳಿದೆ. ನೀವು ಸಮಾಧಾನವಾಗಿರಿ. ಅವನು ಹೇಳಿದ್ದನ್ನು ನಾನು ನಿಮಗೆ ಹೇಳಿದೆ ಅಷ್ಟೇ. ದಯವಿಟ್ಟು ಬೇಜಾರಾಗಬೇಡಿ ಎಂದು ಸಾಂತ್ವಾನ  ಹೇಳತೊಡಗಿದೆ. ಅಷ್ಟರಲ್ಲಿ ವಿಷ್ಣುಪ್ರಸಾದ್ ಬಂದ. ಅವನನ್ನು ನೋಡಿದೆ. ಅವನೂ ಗಾಬರಿಯಲ್ಲಿ ನಿಂತಿದ್ದ.ಅವರಪ್ಪನ ಆಗಮನವನ್ನು ಅವನು ನಿರೀಕ್ಷಿಸಿರಲಿಲ್ಲ. ವಿಷ್ಣು ಇವರ್‍್ಯಾರೋ ಎಂದು ಕೊಂಚ ಸಿಟ್ಟಿನಲ್ಲೇ ಕೇಳಿದೆ. ಗೊತ್ತಿಲ್ಲ ಎಂದ. ನನ್ನ  ಬದುಕಿರುವಾಗಲೇ ಸಾಯಿಸಿಯೇ ಬಿಟ್ಟಿಯಲ್ಲೋ ಮಗನೆ ಎಂದವರೇ ಅವನ ಕಡೆ ತಿರುಗಲು ಯತ್ನಿಸಿದರು. ಇದ್ದಕ್ಕಿದ್ದಂತೆ ಏನಾಯಿತೋ ದಢಾರೆಂದು ಕುಸಿದು ಬಿಟ್ಟರು. ನೋಡಿದರೆ ಪ್ರಜ್ಞೆಯೇ ಇರಲಿಲ್ಲ.  ಸಡನ್ನಾಗಿ ನಡೆದ ಈ ಘಟನೆಯಿಂದ  ನನಗೂ ಆಘಾತವಾದಂತಾಯಿತು.  ಬಾಯಿಯೇ ಒಣಗಿ ಹೋಯಿತು.  ಎಲ್ಲರನ್ನೂ ಕೂಗಿ ಸಹಾಯಕ್ಕೆ ಕರೆದೆ. ಉಪನ್ಯಾಸಕರೆಲ್ಲಾ ಓಡೋಡಿ ಬಂದು ಅವರನ್ನು ಉಪಚರಿಸಿದರು.ಅವರ ಪ್ರಜ್ಞೆ ಮರಳಿದಾಗ ಅವರೊಂದು ದುರಂತದ ಕಥೆ ಹೇಳಿದರು. ವಿಷ್ಣು  ತಾಯಿ ತೀರಿಹೋದಾಗ ನಾನು ಇನ್ನೊಂದು ಮದುವೆಯಾದೆ. ನನ್ನ ಎರಡನೇ ಹೆಂಡತಿ ಬಲು ಬಜಾರಿ. ಇವರಿಬ್ಬರ ಜಗಳ ಬಿಡಿಸಿ ಬಿಡಿಸಿ  ನಾನೂ ಸಾಕಾದೆ. ಚಿಕ್ಕಮ್ಮನ ಕಾಟ ಜಾಸ್ತಿಯಾಗಿ ಇವನು ಮನೆ ಬಿಟ್ಟಿದ್ದಾನೆ.  ಅವಳೂ ವಿಷಯ ಮರೆಮಾಚಿ ವಿಷ್ಣು  ಶಿವಮೊಗ್ಗದ ಹಾಸ್ಟೆಲ್‌ನಲ್ಲಿ ಇದ್ದಾನೆ. ಅವನಿಗೆ ಫ್ರೀ ಹಾಸ್ಟೆಲ್ ಸಿಕ್ಕಿದೆ ಎಂದು ಸುಳ್ಳು ಬೊಗಳಿದಳು. ನಾನು ನಿಜವೆಂದು ನಂಬಿದೆ. ಅವನಿಗೆ ಇಲ್ಲಿ ಸೇರಿಸಿ ಹೋದವನು ನಾನೇನೆ. ಎರಡೆರಡು ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ನನಗೆ ಬಿಡುವೇ ಇರೋದಿಲ್ಲ ಸಾರ್. ಇಷ್ಟು ದಿನವಾದರೂ ಒಮ್ಮೆಯೂ ಮಗ ಮನೆಗೆ ಬಂದಿಲ್ಲವಲ್ಲ ಎಂದು ಅನುಮಾನ ಬಂದು ಹುಡುಕಿಕೊಂಡು ಬಂದೆ. ನೀವು ಅವನ ನೋಡಿಕೊಳ್ಳುತ್ತಿದ್ದೀರೆಂದು ಗೊತ್ತಾಯಿತು. ಇಲ್ಲಿ ನೋಡಿದರೆ ಇವನು ನನ್ನನ್ನೇ ಸಾಯಿಸಿದ್ದಾನೆ. ನನ್ನಿಂದ ತಪ್ಪಾಗಿದೆ ನಿಜ. ಮಗನಾದವನು  ಮನೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಾರದೇ ಸಾರ್? ಎಂದು ಮತ್ತೆ ರೋಧಿಸತೊಡಗಿದರು. ಭದ್ರಾವತಿಯ ಕಾರ್ಖಾನೆಯಲ್ಲಿ ಸಣ್ಣ ನೌಕರರಾಗಿ, ತೀವ್ರ ಕಾಯಿಲೆಗಳಿಂದ ಬಳಲುತ್ತಿರುವ, ಇನ್ನೊಂದು ಮದುವೆಯಾಗಿ ಪರಿತಪಿಸುತ್ತಿರುವ  ಇವರಿಗೆ ಬುದ್ಧಿ ಹೇಳುವುದೋ?  ವಿಷ್ಣುವಿನ ಹುಡುಗು ಬುದ್ಧಿಯ ಮೇಲೆ ಸಿಟ್ಟಾಗುವುದೋ? ನನಗೂ ತಿಳಿಯಲಿಲ್ಲ. ಯಾರು ತಪ್ಪು, ಯಾರು ಸರಿ ಎಂದೂ ನಿರ್ಣಯಿಸಲಾಗಲಿಲ್ಲ. ಮುರಿದು ಹೋದ, ತಾಳತಪ್ಪಿದ, ಅನೇಕ ಸಂಸಾರಗಳಲ್ಲಿ ಹುಟ್ಟಿ  ಬೆಳೆಯುವ ಮಕ್ಕಳು ಪ್ರೀತಿ, ಗೌರವ, ನೆಮ್ಮದಿ ಪಡೆಯದೆ ಅನಾಥವಾಗಿರುತ್ತವೆ. ತಂದೆ ತಾಯಿಯ ಆರೈಕೆ ಮತ್ತು ಬೆಚ್ಚನೆ ಪ್ರೇಮದ ಸ್ಪರ್ಶವಿಲ್ಲದೆ ಒದ್ದಾಡುತ್ತಿರುತ್ತವೆ. ಅವರ ಬದುಕಿನ ಹಿನ್ನೆಲೆ ತಿಳಿಯದೆ ಆ ಮಕ್ಕಳನ್ನು ನಾವು ಒರಟರು, ಸುಳ್ಳರು, ಸಭ್ಯತೆ ಇಲ್ಲದವರು, ದುರುಳರು, ಸಂಸ್ಕೃತಿ, ನಾಗರಿಕತೆ ಇಲ್ಲದವರೆಂದು ಸುಲಭವಾಗಿ ಜರಿದುಬಿಡುತ್ತೇವೆ.  ಅವರೆದೆಯ ಹೊಕ್ಕು ನೋಡಿದರೆ ಅಲ್ಲಿ ಜ್ವಾಲಾಮುಖಿಗಳಿದ್ದಾವೆ. ಕಣ್ಣೀರಿನ ನದಿಗಳಿದ್ದಾವೆ. ಸುಡುವ ಕುಲುಮೆಗಳಿದ್ದಾವೆ. ಮಕ್ಕಳು ಏಕೆ ಹೀಗೆ ಮಾಡುತ್ತಿವೆ ಎನ್ನುವ ಮೊದಲು ಅವರ ಮನೆಯ, ಮನದ ಪರಿಸ್ಥಿತಿ ತೆರೆದು ನೋಡುವುದು ಒಳಿತು. ಇನ್ನೊಬ್ಬರ  ಬಗೆಗಿನ ಸುಲಭ ತೀರ್ಮಾನ ಘನಘೋರ ಪಾತಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry