ಅಭಿನಯದಿಂದ ಅನುಭವ

7

ಅಭಿನಯದಿಂದ ಅನುಭವ

ಗುರುರಾಜ ಕರ್ಜಗಿ
Published:
Updated:

ಹೆನ್ರಿ ಫಾಸೆಟ್ ಇಂಗ್ಲೆಂಡಿನ ಪಾರ್ಲಿಮೆಂಟ್ ಸದಸ್ಯನಾಗಿದ್ದ. ಅವನ ಬಗ್ಗೆ ಎಲ್ಲರಿಗೂ ಗೌರವ. ಆಗಿನ ಪ್ರಧಾನಮಂತ್ರಿಗಳು ಹೆನ್ರಿ ಫಾಸೆಟ್‌ನನ್ನು ತಮ್ಮ ದೇಶದ ಪೋಸ್ಟಮಾಸ್ಟರ್ ಜನರಲ್ ಎಂದು ನೇಮಕ ಮಾಡಿದರು.ಅದು ಅಂಚೆ-ತಂತಿ ವಿಭಾಗಕ್ಕೆ ಅತ್ಯಂತ ದೊಡ್ಡ ಹುದ್ದೆ. ಆಗೆಲ್ಲ ಈ-ಮೇಲ್‌ಗಳು ಇಲ್ಲದಿದ್ದಾಗ ಅಂಚೆಯ ಮೂಲಕವೇ ಎಲ್ಲ ಸಂಪರ್ಕಗಳು ಸಾಧ್ಯವಾಗುತ್ತಿದ್ದುದು. ಬಹಳ ಜನರಿಗೆ ಈ ನೇಮಕದಿಂದ ಸಂತೋಷವಾದಂತೆ ಆಶ್ಚರ್ಯವೂ ಆಯಿತು. ಯಾಕೆಂದರೆ ಹೆನ್ರಿ ಫಾಸೆಟ್ ಪೂರ್ತಿ ಕುರುಡ!ಫಾಸೆಟ್ ಹುಟ್ಟುಕುರುಡನಲ್ಲ. ಅವನು ಕುರುಡನಾದದ್ದೊಂದು ಕಥೆ. ಅವನು ಇಪ್ಪತ್ತು ವರ್ಷದವನಾಗಿದ್ದಾಗ ನಡೆದ ಘಟನೆಯಲ್ಲಿ ಕಣ್ಣುಗಳನ್ನು ಕಳೆದುಕೊಂಡ. ಅಲ್ಲಿಯವರೆಗೂ ಬುದ್ಧಿವಂತ ಮತ್ತು ಚೆಲುವನೆಂದು ಹೆಸರು ಪಡೆದಿದ್ದ ಫಾಸೆಟ್‌ನ ಮೇಲೆ ಅವನ ಅಪ್ಪನಿಗೆ ತುಂಬ ಪ್ರೀತಿ ಮತ್ತು ಅಭಿಮಾನ. ತಂದೆ-ಮಗ ನಿಜವಾಗಿಯೂ ಸ್ನೇಹಿತರಂತೆಯೇ ಇದ್ದರು.ಒಂದು ದಿನ ತಂದೆ ಮಗ ಕಾಡಿಗೆ ಹೋದರು. ತಮಾಷೆಗಾಗಿ ಬೇಟೆಯಾಡುವುದು ಉದ್ದೇಶ. ತಂದೆ ಏರ್‌ಗನ್ ಹಿಡಿದುಕೊಂಡು ಮುಂದೆ ನಡೆಯುತ್ತಿದ್ದರೆ ಹಿಂದೆ ಹೆನ್ರಿ ಇದ್ದ. ಅವನ ಹಿಂದೆ ಏನೋ ಸದ್ದಾದಂತಾಯಿತು. ಇಬ್ಬರೂ ಸರಕ್ಕನೇ ತಿರುಗಿ ನೋಡಿದರು. ಅಲ್ಲೊಂದು ಮೊಲ ಹೊರಗೆ ಬಂದು ನಿಂತಿದೆ! ತಂದೆ ಗುರಿ ಇಟ್ಟು ಹೊಡೆಯಲು ಸಿದ್ಧರಾದರು. ಅವರಿಗೆ ಹೊಡೆಯಲು ಅನುಕೂಲವಾಗಲೆಂದು ಹೆನ್ರಿ ಥಟ್ಟನೇ ಪಕ್ಕಕ್ಕೆ ಸರಿದು ಕುಳಿತುಕೊಂಡ.ಈ ಸದ್ದು ಕೇಳಿ ಮೊಲ ಕೂಡ ಚಕ್ಕನೇ ಹಾರಿತು. ಅದನ್ನೇ ನೋಡುತ್ತ ತಂದೆ ಗುಂಡು ಹಾರಿಸಿದ. ಹಾರಿಸಿದ ಗುಂಡು ಮೊಲಕ್ಕೆ ಬಡಿಯದೇ ನೇರವಾಗಿ ಬಂದು ಹೆನ್ರಿಯ ಮುಖಕ್ಕೆ ಅಪ್ಪಳಿಸಿತು. ಕ್ಷಣದಲ್ಲಿ ಅವನ ಮುಖ ಗುರುತು ಸಿಕ್ಕದಷ್ಟು ರಕ್ತಮಯವಾಗಿತ್ತು.ತಂದೆ ಅವನನ್ನು ಆಸ್ಪತ್ರೆಗೆ ಸೇರಿಸಿದರು. ಎರಡು ಮೂರು ಶಸ್ತ್ರಚಿಕಿತ್ಸೆ ಮಾಡಿದರು. ಹೆನ್ರಿಯ ಪ್ರಾಣ ಉಳಿಯಿತು, ಮುಖ ವಿಕಾರವಾಯಿತು ಮತ್ತು ಎರಡೂ ಕಣ್ಣುಗಳ ದೃಷ್ಟಿ ಶಾಶ್ವತವಾಗಿ ಹೋಗಿಬಿಟ್ಟಿತು. ತಾನು ಸತ್ತು ಹೋಗಿದ್ದರೇ ಚೆನ್ನಾಗಿತ್ತು ಎನ್ನಿಸಿತು ಹೆನ್ರಿಗೆ. ತನ್ನ ತಪ್ಪಿನಿಂದ ಮಗನಿಗಾದ ಅನ್ಯಾಯವನ್ನು ಕಂಡು ತಂದೆಯ ಹೃದಯ ಕುಸಿದು ಹೋಯಿತು.ತಾನು ಮಾಡಿದ ಅಪರಾಧಕ್ಕೆ ಸಾವೇ ತಕ್ಕ ಶಿಕ್ಷೆ ಎಂದುಕೊಂಡು ಆತ್ಮಹತ್ಯೆಗೆ ತಂದೆ ಪ್ರಯತ್ನಿಸಿದ. ಮಗನೇ ಅದನ್ನು ತಡೆದ. ತಂದೆಯ ಮನದಲ್ಲಿ ಸ್ಥಿರವಾಗಿ ನಿಂತ ಅಪರಾಧಿ ಭಾವವನ್ನು ತೆಗೆದುಹಾಕಬೇಕೆಂದು ತೀರ್ಮಾನಿಸಿದ. ತಾನು ಒಳಗೆ ನರಳಿದರೂ ಪರವಾಗಿಲ್ಲ. ತಂದೆಯನ್ನು ಸಂತೋಷವಾಗಿಡಬೇಕು ಎಂದುಕೊಂಡ. ತಂದೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹೇಳಿದ,  `ಅಪ್ಪಾ ಚಿಂತೆ ಮಾಡಬೇಡಿ, ನಾನು ಮತ್ತೆ ಓದಬಲ್ಲೆ ನನ್ನ ಕಣ್ಣಿನಿಂದ ಅಲ್ಲದೇ ಹೋದರೂ ಮತ್ತೊಬ್ಬರು ಓದಿ ಹೇಳಬಲ್ಲರು. ಬ್ರೈಲ್ ಲಿಪಿಯನ್ನು ಓದಬಲ್ಲೆ. ಜೀವ ಉಳಿಯಿತಲ್ಲ ಅಷ್ಟು ಸಾಕು.~ ಹೆನ್ರಿ ತುಂಬ ಸಂತೋಷವನ್ನು ನಟಿಸಿದ.ಅಂದಿನಿಂದ ಅವನ ಜೀವನ ನಟನೆಯೇ ಆಯಿತು. ತಂದೆಯ ತೋರಿಕೆಗೆ ಒಳಗೆ ಕುದಿಯುತ್ತಿದ್ದರೂ ಹೊರಗಡೆ ನಕ್ಕ. ಒಳಗೆ ನಿರಾಸೆ ಕೊರೆಯುತ್ತಿದ್ದಾಗ ಹೊರಗೆ ಆಶಾವಾದದ ಮಾತನಾಡಿದ. ನಿಜವಾಗಿಯೂ ಸಂತೋಷವಿರಲಿಲ್ಲ, ಉತ್ಸಾಹವಿರಲಿಲ್ಲ. ತಂದೆಗಾಗಿ ಸಾಧನೆಯ ಪ್ರಯತ್ನದ ನಾಟಕವನ್ನಾಡಿದ. ಆದರೆ ಮುಂದುವರೆದಂತೆ ನಾಟಕ ನಾಟಕವಾಗಿಯೇ ಉಳಿಯಲಿಲ್ಲ.ಹೆಚ್ಚು ಹೆಚ್ಚು ಓದಿದ ಹಾಗೆ ತಿಳಿದುಕೊಂಡ ಹಾಗೆ ಅಭಿನಯ ಅನುಭವವಾಯಿತು, ನಾಟಕ ಮನಃ ಪರಿವರ್ತನೆಯ ಭೂಮಿಕೆಯಾಯಿತು, ಆಸೆ ಚಿಗುರಿತು. ಅವನು ಕಲ್ಪನೆ ಕೂಡ ಮಾಡದಷ್ಟು ಜನಮನ್ನಣೆ ಹರಿದುಬಂತು. ಹೆನ್ರಿ ಫಾಸೆಟ್ ಇಂಗ್ಲೆಂಡಿನ ಅಂಚೆ-ತಂತಿ ಇಲಾಖೆಯ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಅಭೂತಪೂರ್ವ ಯಶಸ್ಸು ಗಳಿಸಿದ.ಒಳ್ಳೆಯ ಕಾರ್ಯಗಳನ್ನು, ಚಿಂತನೆಗಳನ್ನು ಮೊದಮೊದಲು ಒತ್ತಾಯ ಪೂರ್ವಕವಾಗಿಯಾದರೂ ಮನಸ್ಸಿನಿಂದ ಮಾಡಿಸಬೇಕು. ಈ ಪ್ರಯತ್ನ ಮುಂದುವರೆದಂತೆ ನಮಗರಿವಿಲ್ಲದಂತೆಯೇ ಅದು ಪ್ರಿಯವಾದ ಕಾರ್ಯವಾಗುತ್ತದೆ, ನಮ್ಮ ಜೀವನದ ಸಾಮಾನ್ಯ, ನೈಜಕ್ರಿಯೆಯಾಗುತ್ತದೆ. ಆಗ ವಿಶೇಷ ಪ್ರಯತ್ನವಿಲ್ಲದೇ ಉನ್ನತಿಯ ಮಾರ್ಗ ತೋರುತ್ತದೆ. ಅದಕ್ಕೆ ಹೆನ್ರಿ ಫಾಸೆಟ್‌ನ ಜೀವನವೇ ಉದಾಹರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry