ಅಭಿವೃದ್ಧಿಗೆ ಹಳೆಯ ಮಾರ್ಗವೇ ಒಳಿತು

7

ಅಭಿವೃದ್ಧಿಗೆ ಹಳೆಯ ಮಾರ್ಗವೇ ಒಳಿತು

ಡಿ. ಮರಳೀಧರ
Published:
Updated:
ಅಭಿವೃದ್ಧಿಗೆ ಹಳೆಯ ಮಾರ್ಗವೇ ಒಳಿತು

ಜನರ ಒಳಿತು ಮತ್ತು ದೇಶದ ಅಭಿವೃದ್ಧಿ ಬಗ್ಗೆ ಇಬ್ಬರು ಪ್ರಮುಖ ಆರ್ಥಿಕ ತಜ್ಞರು ವ್ಯಕ್ತಪಡಿಸಿರುವ ಎರಡು ವಿಭಿನ್ನ ವಿಚಾರಧಾರೆಗಳ ಸುತ್ತ ನಡೆಯುತ್ತಿರುವ ಚರ್ಚೆ, ವಾಗ್ವಾದ ದಿನೇ ದಿನೇ ಹೊಸ ಹೊಸ ವಿವಾದಕ್ಕೆ ಎಡೆ ಮಾಡಿಕೊಡುತ್ತಿದೆ. ಡಾ. ಅಮರ್ತ್ಯ ಸೇನ್ ಮತ್ತು ಜಗದೀಶ್ ಭಗವತಿ ಅವರ ಆರ್ಥಿಕ ಚಿಂತನೆಗಳು ಚರ್ಚೆಗೆ ಎಡೆ ಮಾಡಿಕೊಟ್ಟಿರುವ ಹೊಸ ವಿಚಾರಗಳ ಬಗ್ಗೆ ನಾನು ಇಲ್ಲಿ ಚರ್ಚಿಸುತ್ತಿರುವುದು ಓದುಗರಿಗೆ ಈಗಾಗಲೇ ಗೊತ್ತಾಗಿರಬಹುದು. ಈ ಇಬ್ಬರೂ ಆರ್ಥಿಕ ಚಿಂತಕರು, ದೇಶವೊಂದು ಅಳವಡಿಸಿಕೊಳ್ಳಬೇಕಾದ ಅಭಿವೃದ್ಧಿ ಪಥ ಮತ್ತು ಜನರ ಕಲ್ಯಾಣಕ್ಕೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ವಿಭಿನ್ನ ಆಲೋಚನೆಗಳನ್ನು ಹೊಂದಿದ್ದಾರೆ.ವಿವರವಾಗಿ ಹೇಳುವುದಾದರೆ, ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಸರ್ಕಾರಿ ಕಾರ್ಯಕ್ರಮಗಳ ಮೂಲಕ ಸಂಪನ್ಮೂಲಗಳ ವಿತರಣೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎನ್ನುವುದು ಡಾ. ಸೇನ್ ಅವರ ಚಿಂತನೆಯಾಗಿದೆ. ಭಗವತಿ ಅವರು ಇದಕ್ಕೆ ತದ್ವಿರುದ್ಧವಾದ ಚಿಂತನೆಯಾದ- ಸರ್ಕಾರವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟರೆ ಅದರ ಫಲವಾಗಿ ಬಡತನ ತನ್ನಷ್ಟಕ್ಕೆ ತಾನೇ ಕಡಿಮೆಯಾಗುತ್ತ ಹೋಗುತ್ತದೆ ಎಂದು ಪ್ರತಿಪಾದಿಸುತ್ತಾರೆ.ದೇಶದ ಅರ್ಥ ವ್ಯವಸ್ಥೆಯ ಈ ಹಿಂದಿನ ಸಾಧನೆಯನ್ನು ಈ ಸಂದರ್ಭದಲ್ಲಿ  ಪರಾಮರ್ಶಿಸುವುದು ಹೆಚ್ಚು ಪ್ರಸ್ತುತವಾಗುತ್ತದೆ. ಸ್ವಾತಂತ್ರ್ಯಾನಂತರದ ಮೊದಲ ಮೂರರಿಂದ ನಾಲ್ಕು ದಶಕಗಳು ಅಕ್ಷರಶಃ ಯಾವುದೇ ಪ್ರಗತಿ ಕಾಣದೇ ಹಾಗೆಯೇ ಕಳೆದು ಹೋದವು. ಆರ್ಥಿಕ ಪ್ರಗತಿಯ ಎಲ್ಲ ಮಾನದಂಡಗಳು ಕಳಪೆಯಾಗಿದ್ದವು. ಆರ್ಥಿಕ ವೃದ್ಧಿ ದರ ತುಂಬ ಕಡಿಮೆ ಮಟ್ಟದಲ್ಲಿತ್ತು. ಅತಿ ಹಿಂದುಳಿದ ದೇಶ ಎದುರಿಸುವ ಎಲ್ಲ ಬಗೆಯ ಮೂಲ ಸಮಸ್ಯೆಗಳಿಂದ ದೇಶಿ ಅರ್ಥ ವ್ಯವಸ್ಥೆಯೂ ಬಳಲಿ ಬೆಂಡಾಗಿತ್ತು. ಭಾರತ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳ ಅರ್ಥ ವ್ಯವಸ್ಥೆಯ ನಡುವಣ ಅಂತರ ಹೆಚ್ಚುತ್ತಲೇ ಹೋಗಿತ್ತು. ದೇಶದ ಆರ್ಥಿಕ ದುಃಸ್ಥಿತಿ ಬಗ್ಗೆ ನಮ್ಮ ಜನನಾಯಕರಿಗೆ ಯಾವುದೇ ಚಿಂತೆಯೇ ಇದ್ದಿರಲಿಲ್ಲ.ಇದ್ದಕ್ಕಿದ್ದಂತೆ 90ರ ದಶಕದಲ್ಲಿ ಜ್ಞಾನೋದಯವಾದಂತಾಯಿತು. ರಾಜಕೀಯ ಮುಖಂಡರು ಸುಖನಿದ್ದೆಯಿಂದ ಎಚ್ಚೆತ್ತುಕೊಂಡರು. ಆರ್ಥಿಕ ಸುಧಾರಣೆಗಳನ್ನು ಕಾರ್ಯರೂಪಕ್ಕೆ ತರಲು ಟೊಂಕಕಟ್ಟಿ ನಿಂತರು. ಹಳೆಯ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಆದೇಶ ಜಾರಿಯ ಕ್ರಮಗಳನ್ನೆಲ್ಲ ಒಂದೊಂದಾಗಿ ಕೈಬಿಟ್ಟರು.ಅರ್ಥವ್ಯವಸ್ಥೆಯು ಕ್ರಮೇಣ ಚೇತರಿಕೆಯ ಹಾದಿಗೆ ಹೊರಳಿ, ನಿರೀಕ್ಷೆಗಳನ್ನೆಲ್ಲ ಹುಸಿ ಮಾಡಿ ಗಮನಾರ್ಹ ಮಟ್ಟವನ್ನೂ ತಲುಪಿ ಅಚ್ಚರಿ ಮೂಡಿಸಿತು. ಸದ್ಯಕ್ಕೆ ಭಾರತ ವಿಶ್ವದಲ್ಲಿಯೇ ಗರಿಷ್ಠ ಆರ್ಥಿಕ ವೃದ್ಧಿ ದರದ ಎರಡನೇ ಅರ್ಥವ್ಯವಸ್ಥೆಯಾಗಿದೆ. ಖರೀದಿ ಸಾಮರ್ಥ್ಯ ಸಮಾನತೆ ಆಧರಿಸಿದ ನಾಲ್ಕನೆಯ ಗರಿಷ್ಠ ಪ್ರಮಾಣದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಅರ್ಥ ವ್ಯವಸ್ಥೆಯಾಗಿ ಬೆಳೆದು ನಿಂತಿದೆ. ಬಡತನದ ಪ್ರಮಾಣವು 2004ರ ಶೇ 38ಕ್ಕೆ ಹೋಲಿಸಿದರೆ ಈಗ ಅದು ಶೇ 22ಕ್ಕೆ ಇಳಿದಿದೆ. ಕೇವಲ 7 ವರ್ಷಗಳಲ್ಲಿ ಬಡತನದ ಪ್ರಮಾಣವು ಗಮನಾರ್ಹ ಇಳಿಕೆ ಕಂಡಿದೆ.ದೇಶಿ ಅರ್ಥವ್ಯವಸ್ಥೆಯು ಮುಂಬರುವ ವರ್ಷಗಳಲ್ಲಿ ತುಳಿಯಬೇಕಾದ ಮಾರ್ಗದ ಬಗ್ಗೆ ಇಬ್ಬರು ಆರ್ಥಿಕ ತಜ್ಞರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿರುವುದು ಈಗ ಚರ್ಚೆಯ ಕೇಂದ್ರ ಬಿಂದುವಾಗಿದೆ. ಸರ್ಕಾರವು ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ಗಮನಾರ್ಹ ಪ್ರಮಾಣದ ಬಂಡವಾಳ ಹೂಡಿಕೆ ಮಾಡುವುದರಿಂದಷ್ಟೇ ಜನರ ಸಬಲೀಕರಣವಾಗಲಿದ್ದು, ಅದರಿಂದ ಸಮಾನತೆಯ ಅಭಿವೃದ್ಧಿ ಕನಸು ಸಾಕಾರಗೊಳ್ಳಲಿದೆ ಎಂದು ಡಾ. ಸೇನ್ ಅವರು ತಮ್ಮ ಹೊಸ ಪುಸ್ತಕದಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.ಜಗದೀಶ ಭಗವತಿ ಅವರದ್ದು, ಸೇನ್ ಅವರ ಚಿಂತನೆಗೆ ತದ್ವಿರುದ್ಧವಾದ ಚಿಂತನೆಯಾಗಿದೆ. ಸರ್ಕಾರವು ಎರಡನೇ ತಲೆಮಾರಿನ ಆರ್ಥಿಕ ಸುಧಾರಣಾ ಕ್ರಮಗಳನ್ನು ಆದ್ಯತೆ ಮೇರೆಗೆ ಜಾರಿಗೆ ತರಬೇಕು, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನಕಾರಿಯಾದ ಅನುಕೂಲಗಳನ್ನು ಇನ್ನಷ್ಟು ಹೆಚ್ಚಿನ  ಪ್ರಮಾಣದಲ್ಲಿ ಕಲ್ಪಿಸಿಕೊಡಬೇಕು. ಇದರಿಂದ ಕುಂಠಿತಗೊಂಡಿರುವ ಅರ್ಥವ್ಯವಸ್ಥೆಗೆ ಚೇತರಿಕೆ ದೊರೆತು, ಗರಿಷ್ಠ ಮಟ್ಟದ ಆರ್ಥಿಕ ವೃದ್ಧಿ ದರ ಸಾಧ್ಯವಾಗಲಿದೆ. ಇದರ ಒಟ್ಟಾರೆ ಫಲವಾಗಿ ಸರ್ವಾಂಗೀಣ ಸುಧಾರಣೆ ಕಂಡುಬಂದು ಬಡತನದ ಮಟ್ಟವೂ ತಗ್ಗಲಿದೆ ಎಂದು ಅವರು ವಾದಿಸುತ್ತಿದ್ದಾರೆ.ಈ ಎರಡೂ ವಿಭಿನ್ನ ಬಗೆಯ ಆರ್ಥಿಕ ಚಿಂತನೆಗಳನ್ನು, ತಮ್ಮದೇ ಆದ ವಿಚಾರಧಾರೆಗಳಿಂದ ಪ್ರಭಾವಿತರಾಗಿರುವ ದೇಶ- ವಿದೇಶಗಳ ಅನೇಕ ಆರ್ಥಿಕ ತಜ್ಞರು ಮತ್ತು ಚಿಂತಕರು ಬೆಂಬಲಿಸಿರುವುದರಿಂದ ಅವುಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಈ ಇಬ್ಬರೂ ಚಿಂತಕರು ತಮ್ಮ ವಾದಕ್ಕೆ ಪುಷ್ಟಿಯಾಗಿ ಅನೇಕ ಅಂಕಿ ಸಂಖ್ಯೆಗಳನ್ನೂ ಒದಗಿಸಿರುವುದರಿಂದ ಅವುಗಳನ್ನು ಸುಲಭವಾಗಿ ತಳ್ಳಿಹಾಕಲೂ ಬರಲಾರದು.  ಈ ವಾದ- ವಿವಾದವು ಅದೆಷ್ಟರ ಮಟ್ಟಿಗೆ ತೀಕ್ಷ್ಣ ಸ್ವರೂಪ ಪಡೆದಿದೆ ಎಂದರೆ, ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುತ್ತಿವೆ. `ಭಾರತ ರತ್ನ' ಪುರಸ್ಕಾರವನ್ನು ಡಾ. ಸೇನ್ ವಾಪಸು ನೀಡಬೇಕು ಎನ್ನುವ ಮೂರ್ಖತನದ ಬೇಡಿಕೆಯ ಮಟ್ಟವನ್ನೂ ತಲುಪಿದೆ.ಇಬ್ಬರೂ ಆರ್ಥಿಕ ತಜ್ಞರು ದೇಶದ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರಿಬ್ಬರಲ್ಲಿ ಸದ್ಯದ ವಾಸ್ತವತೆಗೆ ಹೆಚ್ಚು ಸೂಕ್ತವಾಗಿ ಹೊಂದಾಣಿಕೆಯಾಗುವಂತಹ ಆರ್ಥಿಕ ಧೋರಣೆ ಅಳವಡಿಸಿಕೊಳ್ಳುವ ಅಗತ್ಯ ಇದೆ. ಡಾ. ಸೇನ್ ಅವರ ಅಭಿವೃದ್ಧಿ ಆರ್ಥಿಕತೆಯ ಮಾದರಿಯು ಉತ್ತಮವಾಗಿದ್ದು, ಆರ್ಥಿಕ ನೀತಿಯನ್ನು ದಕ್ಷತೆಯಿಂದ ಜಾರಿಗೆ ತಂದರೆ ಉದ್ದೇಶಿತ ಗುರಿ ತಲುಪಲು ಸಾಧ್ಯವಾಗಲಿದೆ. ಆದರೆ, ದೇಶದಲ್ಲಿನ ಸಾಮಾಜಿಕ, ಆರ್ಥಿಕ ಪರಿಸರದಲ್ಲಿ ಕಂಡು ಬರುತ್ತಿರುವ ಸೋರಿಕೆಯ ಹಿನ್ನೆಲೆಯಲ್ಲಿ ಈ ಉದ್ದೇಶಿತ ಗುರಿ ಈಡೇರಿಕೆ ಅಷ್ಟು ಸುಲಭವಲ್ಲ ಎಂಬ ಅನುಮಾನವೂ ಮೂಡುತ್ತದೆ.1985ರ ಮುಂಚಿನ ವರ್ಷಗಳಲ್ಲಿ ಸರ್ಕಾರವು ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡುವ ಒಟ್ಟು ವೆಚ್ಚದಲ್ಲಿ ಅಂತಿಮವಾಗಿ ಶೇ 20ಕ್ಕಿಂತ ಕಡಿಮೆ ಹಣವಷ್ಟೇ ಜನರಿಗೆ  ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಇದನ್ನು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರೇ ಒಪ್ಪಿಕೊಂಡು ಕಳವಳ ವ್ಯಕ್ತಪಡಿಸಿದ್ದರು.ಮೂವತ್ತು ವರ್ಷಗಳ ನಂತರದ ಅವಧಿಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕತೆ ಮಟ್ಟ ಇನ್ನಷ್ಟು ಪಾತಾಳಕ್ಕೆ ಇಳಿದಿರುವಾಗ, ಜನರಿಗೆ ತಲುಪುವ ನೆರವಿನ ಪ್ರಮಾಣ ಶೇ 10ರ ಆಸುಪಾಸಿನಲ್ಲಿ ಇರಬಹುದು ಎಂದೂ ನಾವು ಈಗ ಅಂದಾಜಿಸಬಹುದು. ಸೋರಿಕೆ ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮತ್ತು ದೇಶದಾದ್ಯಂತ ಇನ್ನಷ್ಟು ವಿಸ್ತರಿಸಲು ಹೊರಟಿರುವ- ಫಲಾನುಭವಿಗಳಿಗೆ ನಗದು ನೇರ ವರ್ಗಾವಣೆಯನ್ನೂ ಡಾ. ಸೇನ್ ಅನುಮೋದಿಸುವುದಿಲ್ಲ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದ್ಯಕ್ಕೆ ಬಿಡುಗಡೆ ಮಾಡುವ ಅನುದಾನವನ್ನು ಅಧಿಕಾರಶಾಹಿಯು ಪ್ರಾಮಾಣಿಕತೆಯಿಂದ ಇನ್ನಷ್ಟು ದಕ್ಷತೆಯಿಂದ ಜಾರಿಗೆ ತರಲು ಮನಸ್ಸು ಮಾಡಿದರೂ ಕಡಿಮೆ ಪ್ರಮಾಣದ ಸಾಕ್ಷರತೆ, ಅಪೌಷ್ಟಿಕತೆ, ಆರೋಗ್ಯ, ಸ್ವಚ್ಛತೆ ಮತ್ತಿತರ ಅಭಿವೃದ್ಧಿ ಮಾನದಂಡಗಳು ಗಮನಾರ್ಹವಾಗಿ ಸುಧಾರಣೆ ಕಾಣಲಿವೆ. ಅದಕ್ಷತೆ, ಅಪ್ರಾಮಾಣಿಕತೆ, ಸೋರಿಕೆ, ಲಂಚಗುಳಿತನ ಮತ್ತಿತರ ಸಮಸ್ಯೆಗಳನ್ನು ದಕ್ಷ ರೀತಿಯಲ್ಲಿ ಪರಿಹರಿಸಿಕೊಳ್ಳದಿದ್ದರೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಸುಧಾರಣೆಯ ಕನಸು ಕನಸಾಗಿಯೇ ಉಳಿಯಲಿದೆ.ಹಣಕಾಸು ನಿಯತಕಾಲಿಕೆಗಳಲ್ಲಿ ಅಂಕಣಕಾರರಾಗಿರುವ ಭಗವತಿ ಮತ್ತು ಅರವಿಂದ ಪನಗರಿಯಾ ಅವರು ಅಭಿವೃದ್ಧಿ ಬಗ್ಗೆ ಗಟ್ಟಿಯಾಗಿ ಬೇರೆ ದನಿಯಲ್ಲಿಯೇ ಪ್ರತಿಪಾದಿಸುತ್ತಾರೆ. ಆರ್ಥಿಕ ಬೆಳವಣಿಗೆಯಲ್ಲಿ ಮಾರುಕಟ್ಟೆ ಆಧಾರಿತ ಆರ್ಥಿಕ ಸುಧಾರಣಾ ಕ್ರಮಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸುವ ಅರ್ಥಶಾಸ್ತ್ರಜ್ಞರ ಸಾಲಿಗೆ ಸೇರಿರುವ ಈ ಇಬ್ಬರೂ ಚಿಂತಕರು, ಆರ್ಥಿಕ ಸುಧಾರಣಾ ಕ್ರಮಗಳಿಂದಲೇ ಭಾರತವು ಗರಿಷ್ಠ ಮಟ್ಟದ ಪ್ರಗತಿ ಸಾಧಿಸಲಿದೆ ಎಂದು ವಾದಿಸುತ್ತಾರೆ. ಜತೆಗೆ ತಕ್ಷಣಕ್ಕೆ ಇನ್ನಷ್ಟು ಸುಧಾರಣೆಗಳ ಅಗತ್ಯವೂ ಇದೆ ಎಂದೂ ಹೇಳುತ್ತಾರೆ.ಆರ್ಥಿಕ ವೃದ್ಧಿ ದರ ಹೆಚ್ಚಳದಿಂದ ವರಮಾನ ಹೆಚ್ಚಳಗೊಳ್ಳಲಿದೆ, ಸಂಪತ್ತಿನ ಮರು ವಿತರಣೆಯಾಗಲಿದೆ. ಇದರಿಂದ ಜನಸಮುದಾಯದ ಜೀವನ ಮಟ್ಟವೂ ಸುಧಾರಿಸಲಿದೆ ಎಂಬುದು ಅವರ ದೃಢ ನಂಬಿಕೆಯಾಗಿದೆ. ಗರಿಷ್ಠ ಮಟ್ಟದ ಆರ್ಥಿಕ ಚಟುವಟಿಕೆಗಳ ಫಲವಾಗಿ ಸರ್ಕಾರದ ವರಮಾನ ಸುಧಾರಣೆಗೊಂಡರೆ ಮಾತ್ರ ಸರ್ಕಾರವು ಸಾಮಾಜಿಕ ವಲಯಕ್ಕೆ ಮಾಡುವ ವೆಚ್ಚದ ಪ್ರಮಾಣ ಹೆಚ್ಚಲಿದೆ ಎನ್ನುವುದು ಅವರ ನಿಲುವಾಗಿದೆ.ಒಂದು ದಶಕದ ಅವಧಿಯಲ್ಲಿ ಸಾಮಾಜಿಕ ವಲಯಗಳಿಗೆ ಸರ್ಕಾರವು ಬಜೆಟ್‌ನಲ್ಲಿ ಬಿಡುಗಡೆ ಮಾಡುವ ಅನುದಾನದ ಪ್ರಮಾಣವು ಗಮನಾರ್ಹವಾಗಿ ಹೆಚ್ಚಳಗೊಂಡಿರುವುದು ನಿಜವೂ ಹೌದು. ಬೆಂಗಳೂರಿನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುವಾಗ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಆಡಿದ ಮಾತುಗಳನ್ನು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. `ಸಾಮಾಜಿಕ ವಲಯಗಳಿಗೆ ಸರ್ಕಾರದ ಅನುದಾನ ಹೆಚ್ಚಳಗೊಳ್ಳಲು ಉದ್ಯಮ ವಲಯವು ನೆರವಾಗಿರುವುದಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಹೇಳಿದ್ದರು.ಗ್ರಾಮೀಣ ಭಾರತದಲ್ಲಿ ನಾವು ಈಗ ಕಾಣುತ್ತಿರುವ ಬದಲಾವಣೆಗಳಿಗೆ ಹಲವಾರು ಕಾರಣಗಳಿವೆ. ಅದರಲ್ಲೂ ಮುಖ್ಯವಾಗಿ ಸರ್ಕಾರದ ಯೋಜನೆಗಳು, ಆರ್ಥಿಕ ಚಟುವಟಿಕೆಗಳಲ್ಲಿನ ಹೆಚ್ಚಳ, ಇದರ ಪರಿಣಾಮವಾಗಿ ಕೂಲಿ ಮತ್ತು ಆದಾಯ ಮಟ್ಟದಲ್ಲಿನ ಸುಧಾರಣೆಗಳ ಫಲವಾಗಿ ಗ್ರಾಮೀಣ ಪ್ರದೇಶದ ಒಟ್ಟಾರೆ ಚಿತ್ರಣ ಬದಲಾಗಿದೆ. ಗ್ರಾಹಕರ ವೆಚ್ಚದ ವಿಷಯದಲ್ಲಿ ಗ್ರಾಮೀಣ ಮಾರುಕಟ್ಟೆಯಲ್ಲಿ ಕ್ರಾಂತಿಯೇ ನಡೆದಿದೆ. ಆದಾಗ್ಯೂ 30 ಕೋಟಿಯಷ್ಟು ಭಾರತೀಯರು ಅಭಿವೃದ್ಧಿ ಲಾಭದಿಂದ ವಂಚಿತರಾಗಿದ್ದು, ಈಗಲೂ ಅವರ ಬದುಕು ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದೆ.ಭಾರತದ ಮಟ್ಟಿಗೆ ಆರ್ಥಿಕ ಅಭಿವೃದ್ಧಿಯ ಹೊಸ ಪಯಣ ಈಗಷ್ಟೇ ಆರಂಭಗೊಂಡಿದೆ. ಇದುವರೆಗಿನ ಸಾಬೀತಾದ ಪಥದಲ್ಲಿಯೇ ಮುಂದುವರೆಯುವುದೇ ಸದ್ಯದ ಅಗತ್ಯವಾಗಿದೆ. ಯಾವುದೇ ಒಂದು ದೇಶದ ಇತಿಹಾಸದಲ್ಲಿ ಎರಡು ದಶಕಗಳ ಅವಧಿ ಅಲ್ಪಾವಧಿಯದು ಆಗಿರುತ್ತದೆ. ಕಳೆದುಹೋದ ದಶಕಗಳಿಗಿಂತ ಮುಂಬರುವ ದಶಕಗಳು ಹೆಚ್ಚು ಫಲ ನೀಡಬಹುದು. ಈ ಮಧ್ಯೆ ಸರ್ಕಾರವು ಸಾಮಾಜಿಕ ವೆಚ್ಚದ ದಕ್ಷ ವಿನಿಯೋಗದತ್ತ ಹೆಚ್ಚು ಗಮನ ನೀಡುವಂತಾದರೆ ಸಮಾಜದ ಪ್ರಗತಿಯ ಚಿತ್ರಣ ನಿರೀಕ್ಷಿಸಿದ ಬಗೆಯಲ್ಲಿಯೇ ಬದಲಾದೀತು.

ನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry