ಶನಿವಾರ, ಮೇ 21, 2022
23 °C

ಅಭಿವ್ಯಕ್ತಿಯ ಪಾವಿತ್ರ್ಯಕ್ಕೆ ಹಿಂಸಾರಸಿಕತೆಯ ಮಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಮೂಹ ಮಾಧ್ಯಮ’ ಎಂಬುದರ ವ್ಯಾಖ್ಯೆ­ಯನ್ನೇ ಇಂಟರ್‌ನೆಟ್ ಬದಲಾಯಿಸಿ­ಬಿಟ್ಟಿದೆ. ನಿರ್ದಿಷ್ಟ ಸಂಪಾದಕ, ಪ್ರಕಾಶಕ, ಮುದ್ರಕ ಅಥವಾ ಪ್ರಸಾರಕನಿರುವ ಹಳೆಯ ಮಾಧ್ಯಮಗಳ ಸ್ವರೂಪಕ್ಕೂ ಇಂಟರ್‌ನೆಟ್ ಸಾಧ್ಯಮಾಡಿರುವ ಸಮೂಹ ಮಾಧ್ಯಮದ ಸ್ವರೂಪಕ್ಕೂ ಪರಸ್ಪರ ಹೋಲಿಕೆ ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣ­ಗಳು ಎಂದು ಕರೆಯುವ ಹೊಸ ಕಾಲದ ಮಾಧ್ಯಮದಲ್ಲಿ ವೈಯಕ್ತಿಕ ಮಟ್ಟದ ಸಂವಹನ ಮತ್ತು ಸಮೂಹ ಸಂವಹನಗಳೆರಡೂ ಏಕಕಾಲಕ್ಕೆ ಸಾಧ್ಯವಿದೆ.ಫೇಸ್‌ಬುಕ್, ಗೂಗಲ್‌ ಪ್ಲಸ್, ಟ್ವಿಟ್ಟರ್ ಖಾತೆಗಳು ನಮ್ಮ ಇ–ಮೇಲ್ ಖಾತೆಗ­ಳಂತೆ ಕೇವಲ ವೈಯಕ್ತಿಕವಲ್ಲ. ಇವು ಸಾರ್ವಜನಿಕ ಖಾತೆಗಳೂ ಹೌದು. ಇಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳು ಸಾರ್ವಜನಿಕ­ವಾಗಿಯೂ ಲಭ್ಯ­ವಿ­ರು­ತ್ತವೆ. ಈ ವೇದಿಕೆಗಳು ಸಾರ್ವಜನಿಕ ಸಂವ­ಹನದ ಅನುಕೂಲಕ್ಕಾಗಿಯೇ ಸವಲತ್ತುಗಳನ್ನು ಸೃಷ್ಟಿಸಿಕೊಟ್ಟಿದೆ. ಪರಿಣಾಮ­ವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ­ದಂತೆಯೂ ಹೊಸ ಸವಾಲುಗಳು ಸೃಷ್ಟಿಯಾಗಿವೆ.ಫೇಸ್‌ಬುಕ್ ಗುಂಪುಗಳನ್ನು ಉದಾಹರಣೆ­ಯಾಗಿ ತೆಗೆದುಕೊಂಡರೆ ಈ ಸವಾಲಿನ ಸಂಕೀರ್ಣ ಸ್ವರೂಪ ಅರ್ಥವಾಗುತ್ತದೆ. ಈ ಗುಂಪುಗಳನ್ನು ಸದಸ್ಯತ್ವವುಳ್ಳವರಿಗೆ ಸೀಮಿತವಾಗಿ ರೂಪಿಸಲು ಸಾಧ್ಯವಿರುವಂತೆಯೇ ಫೇಸ್‌ಬುಕ್‌ ಖಾತೆ ಹೊಂದಿದವರೆಲ್ಲರೂ ಪ್ರತಿಕ್ರಿಯಿಸಲು ಸಾಧ್ಯವಾ­ಗು­ವಂತೆ ಸಾರ್ವಜನಿಕ ಗುಂಪಾಗಿಯೂ ರೂಪಿಸ­ಬಹುದು. ಈ ಬಗೆಯ ಸಾರ್ವಜನಿಕ ಗುಂಪು­ಗ­ಳಲ್ಲಿ ಯಾರು ಯಾರನ್ನಾದರೂ ನಿಂದಿಸಿದರೆ ಅದಕ್ಕೆ ಯಾರು ಜವಾಬ್ದಾರರು?ಫೇಸ್‌ಬುಕ್ ಸಂಸ್ಥೆ ತಾನು ಗುಂಪನ್ನು ರಚಿಸು­ವುದಕ್ಕೆ ಬೇಕಿರುವ ಮೂಲ ಸೌಕರ್ಯವನ್ನು ಮಾತ್ರ ಒದಗಿಸಿದ್ದೇನೆ. ಇದೊಂದು ಉಚಿತ ಸವಲತ್ತು, ಇಂಥ ಗುಂಪುಗಳಿಗೆ ಅವುಗಳನ್ನು ಹುಟ್ಟು ಹಾಕಿದವರೇ ಜವಾಬ್ದಾರರು ಎನ್ನುತ್ತದೆ. ಈ ವಾದದಲ್ಲಿಯೂ ಹುರುಳಿದೆ. ಫೇಸ್‌ಬುಕ್ ಖಾತೆ ಇರುವ ಯಾರು ಬೇಕಾದರೂ ತನಗೆ ಬೇಕು ಅನ್ನಿಸುವ ಉದ್ದೇಶಕ್ಕಾಗಿ ಒಂದು ಗುಂಪನ್ನು ಹುಟ್ಟು ಹಾಕಬಹುದು. ಈ ಗುಂಪಿಗೆ ಮೊದಲ ನಿರ್ವಾಹಕನಾಗಿರುತ್ತಾನೆ. ಈತ ಗುಂಪಿಗೆ ಸದಸ್ಯರನ್ನು ಸೇರಿಸಿಕೊಳ್ಳಬಹುದು. ಹೀಗೆ ಸದಸ್ಯ­ರಾದವರಲ್ಲಿ ಕೆಲವರನ್ನು ನಿರ್ವಾಹಕರಾಗಿಯೂ ನೇಮಿಸಬಹುದು. ಈ ನಿರ್ವಾಹಕರಿಗೂ ಮೂಲ ನಿರ್ವಾಹಕನಿಗೆ ಇರುವಷ್ಟೇ ಅಧಿಕಾರಗಳಿರುತ್ತವೆ.ಈ ಗುಂಪಿನ ಗೋಡೆಯ (Wall) ಮೇಲೆ ಪ್ರಕಟವಾಗುವ ಬರಹಗಳಿಗೆ ಈ ನಿರ್ವಾಹಕರು ಜವಾಬ್ದಾರರೇ? ತಾಂತ್ರಿಕವಾಗಿ ಹಾಗೂ ತಾತ್ವಿಕವಾಗಿ ಅವರ ಮೇಲೆ ಜವಾಬ್ದಾರಿ ಇದೆ. ಕೇವಲ ಆಸಕ್ತಿಯ ಕಾರಣಕ್ಕಾಗಿ ಸಾರ್ವಜನಿಕ ಗುಂಪೊಂದನ್ನು ರೂಪಿಸುವಾತ ಅದರಲ್ಲಿರುವ ಸಾವಿರಾರು ಸಂಖ್ಯೆಯ ಸದಸ್ಯರ ಚಟುವಟಿಕೆಗಳ ಮೇಲೆ ಕಣ್ಣಿಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ಹಾಗೆ ನೋಡಿದರೆ ನೂರಾರು ಸಂಖ್ಯೆಯ ವರದಿಗಾರರು, ಅಷ್ಟೇ ಸಂಖ್ಯೆಯ ಉಪ ಸಂಪಾದಕರು ಇತ್ಯಾದಿಗಳನ್ನು ಹೊಂದಿರುವ ಪತ್ರಿಕಾ ಸಂಸ್ಥೆಯೊಂದರ ಸಮ­ಸ್ಯೆಯೂ ಇದುವೇ ತಾನೆ. ಓದುಗರ ಪತ್ರ ವಿಭಾಗ­ದಲ್ಲಿ ನಿಂದನಾತ್ಮಕ ಪತ್ರವೊಂದು ಪ್ರಕಟವಾದರೆ ಅದಕ್ಕೂ ಸಂಪಾದಕ, ಪ್ರಕಾಶಕ, ಮುದ್ರಕ ಎಲ್ಲರೂ ಜವಾಬ್ದಾರರಾಗುತ್ತಾರಲ್ಲವೇ? ಇದೇ ತರ್ಕ­ವನ್ನು ಸಾಮಾಜಿಕ ಜಾಲತಾಣಕ್ಕೂ ಅನ್ವಯಿ­ಸಬೇಕಲ್ಲವೇ ಎಂಬ ಪ್ರಶ್ನೆಯೂ ಇಲ್ಲಿದೆ.ಇಂಟರ್‌ನೆಟ್ ಜಗತ್ತೂ ಕೂಡಾ ಹೊರಜ­ಗತ್ತಿನ ಪ್ರತಿಬಿಂಬವೇ. ಇಲ್ಲಿಯೂ ಹಿಂಸಾರಸಿಕರು, ರೌಡಿಗಳು, ಕೊಳಕು ಮಾತುಗಳನ್ನೇ ಅಭಿವ್ಯಕ್ತಿ­ಯಾ­ಗಿ­ಸಿಕೊಂಡವರೆಲ್ಲಾ ಇದ್ದಾರೆ. ಹೊರಜಗತ್ತಿ­ನಲ್ಲಿ ಇಲ್ಲದೇ ಇರುವ ಸವಲತ್ತೊಂದು ಇವರಿಗೆ ಇಂಟರ್‌ನೆಟ್‌ನಲ್ಲಿದೆ. ಅದು ಅನಾಮಿಕತೆ. ಆತ ನಿಜವಾದ ಹೆಸರು, ಛಾಯಾಚಿತ್ರ, ವಿಳಾಸ ಇತ್ಯಾ­ದಿ­ಗಳೆಲ್ಲವನ್ನೂ ಬಹಿರಂಗಪಡಿಸಿ­ಕೊಂಡಿ­ದ್ದರೂ ಹೊರ­ಜಗತ್ತಿನಲ್ಲಿ ಸಾಧ್ಯವಿಲ್ಲದ ಅನಾಮಿ­ಕತೆ­ಯೊಂದು ಇಲ್ಲಿ ಸಾಧ್ಯ. ದೂರ ದೇಶ­ವೊಂದ­ರಲ್ಲಿ ಕುಳಿತು ಭಾರತದ ಯಾವುದೋ ಮೂಲೆಯ ಪಟ್ಟಣದಲ್ಲಿರುವ ಯಾರೋ ಒಬ್ಬರ ಮೇಲೆ ವಾಗ್ದಾಳಿ ನಡೆಸುವುದು ಸುಲಭ. ನಿಂದನೆಗೆ ಗುರಿಯಾದಾತ ಪೊಲೀಸರಿಗೆ ದೂರು ನೀಡಿದರೂ ಈ ಬಗೆಯ ದಾಳಿ ನಡೆಸಿದಾತನ ಮೇಲೆ ಅದರ ಪರಿಣಾಮವಾಗುವುದು ಸ್ವಲ್ಪ ಅನುಮಾನವೇ.ಭಾರತಕ್ಕೇ ಸೀಮಿತವಾಗಿ ಈ ಸಮಸ್ಯೆಯನ್ನು ನೋಡಿದರೆ ಮತ್ತೊಂದು ದುರಂತಮಯ ಮುಖ ಕಾಣಸಿಗುತ್ತದೆ. ಇಲ್ಲಿಯೂ ಮುಖವಿಲ್ಲದೆ ಸಿಕ್ಕಸಿಕ್ಕ­ವರ ಮೇಲೆ ದಾಳಿ ನಡೆಸುವವರಿದ್ದಾರೆ. ಆದರೆ ಅಷ್ಟೇ ಪ್ರಮಾಣದಲ್ಲಿ ತಮ್ಮೆಲ್ಲಾ ಗುರುತನ್ನು ಬಹಿರಂಗವಾಗಿಟ್ಟುಕೊಂಡು ಬಹಳ ಕೀಳು ದರ್ಜೆಯ ಮಾತುಗಳನ್ನಾಡುವವರೂ ಇದ್ದಾರೆ. ಇವರ ಮುಖ್ಯ ಸಮಸ್ಯೆ ಅರಿವಿನ ಕೊರತೆ. ತಾವು ಬರೆಯುವುದನ್ನು ಮುಖ್ಯವಾಹಿನಿಯ ಪ್ರಕಟಣೆ­ಗಳು ಮಾನ್ಯ ಮಾಡುವುದಿಲ್ಲ ಎಂಬ ಸಿಟ್ಟು ಇವರಿಗಿದೆ. ಆದರೆ ಸಾರ್ವಜನಿಕವಾಗಿ ಬಳಸುವ ಭಾಷೆಗೊಂದು ಗಾಂಭೀರ್ಯವಿರಬೇಕೆಂಬುದು ನೆನಪಿಲ್ಲ. ಅದಕ್ಕಿಂತ ಹೆಚ್ಚಾಗಿ ಇವರಿಗಿರುವ ಸಿಟ್ಟು ಸ್ವಂತ ಅವರದ್ದೂ ಅಲ್ಲ. ನಿರ್ದಿಷ್ಟ ಧಾರ್ಮಿಕ ಮತ್ತು ರಾಜಕೀಯ ತಾತ್ವಿಕತೆಗಳನ್ನಷ್ಟೇ ಕುರು­ಡಾಗಿ ನಂಬಿದ್ದರಿಂದ ಹುಟ್ಟಿಕೊಂಡದ್ದು. ಇದಕ್ಕೆ ಹಿಂಸಾರಸಿಕತೆ, ರೌಡಿ ಮನಃಸ್ಥಿತಿಗಳೆಲ್ಲಾ ಸೇರಿ­ಕೊಂಡರೆ ಆಗಬಹುದಾದ ಅನಾಹುತಗಳೆಲ್ಲಾ ಇವರ ತಥಾಕಥಿತ ಪ್ರತಿಕ್ರಿಯೆಗಳಲ್ಲಿ ಕಾಣಿಸಿಕೊಳ್ಳುತ್ತವೆ.ಆನ್‌ಲೈನ್ ಚರ್ಚಾವೇದಿಕೆಗಳಿಗೆ ನುಗ್ಗಿ ಅಲ್ಲಿ ವಿಷಯವನ್ನು ಮೀರಿ ವೈಯಕ್ತಿಕ ನಿಂದನೆ ಇತ್ಯಾದಿ­ಗಳ ಮೂಲಕ ದಾಂದಲೆ ಎಬ್ಬಿಸುವವರನ್ನು ‘ಟ್ರಾಲ್’ ಎನ್ನುತ್ತಾರೆ. ತಮ್ಮ ನಿಲುವನ್ನು ಸರಿ ಎಂದು ಸಾಧಿಸುವುದಕ್ಕಾಗಿ ಯಾವುದೇ ಹೆಣ್ಣಿಗೆ ಅತ್ಯಾಚಾರದ ಬೆದರಿಕೆ ಒಡ್ಡುವ, ಯಾರನ್ನು ಬೇಕಾದರೂ ಅವಾಚ್ಯ ಶಬ್ದಗಳಲ್ಲಿ ನಿಂದಿಸುವ ಈ ‘ಟ್ರಾಲ್’ಗಳ ಮನಃಸ್ಥಿತಿಯ ಅಧ್ಯಯನ ಮಾಡಿ­ರುವ ಹಲವು ಸಂಶೋಧನಾ ಲೇಖನಗಳು ದೊರೆ­ಯುತ್ತವೆ. ಸಾಮಾನ್ಯವಾಗಿ ಈ ಆನ್‌ಲೈನ್ ವೇದಿ­ಕೆ­ಗಳಲ್ಲಿ ಕೆಟ್ಟ ಮಾತುಗಳನ್ನು ಬರೆಯುವ­ವರು, ಜಾತಿ ನಿಂದನೆ, ಜನಾಂಗೀಯ ನಿಂದನೆಗ­ಳನ್ನು ಮಾಡುವವರಾರೂ ನಿಜ ಬದುಕಿನಲ್ಲಿ ಅಂಥ-­ದ್ದನ್ನು ಮಾಡುವ ಧೈರ್ಯ ಹೊಂದಿದ­ವರಲ್ಲ. ಆದರೆ ಇಂಟರ್‌ನೆಟ್‌ಗೆ ಪ್ರವೇಶಿಸಿದಾಕ್ಷಣ ಅವರು ಹೊರಜಗತ್ತಿನ ನಿರ್ಬಂಧಗಳಿಂದ ಮುಕ್ತ­ರಾಗಿಬಿ­ಡು­ತ್ತಾರೆ. ಪರಿಣಾಮವಾಗಿ ಅವರೊಳಗೆ ಸುಪ್ತ­ವಾ­ಗಿರುವ ಹಿಂಸ್ರಪಶು ಹೊರಗೆ ಬಂದು­ಬಿಡುತ್ತದೆ.ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನಗಳೆ­ರಡರ ವಿಷಯದಲ್ಲಿಯೂ ಸ್ವಲ್ಪ ಅತಿ ಎನಿಸು­ವಂಥ ಕಾನೂನುಗಳನ್ನೇ ಹೊಂದಿರುವ ನಾರ್ಡಿಕ್ ದೇಶಗಳಲ್ಲಿಯೂ ಇಂಟರ್‌ನೆಟ್ ಟ್ರಾಲ್‌ಗಳ ವಿಷಯದಲ್ಲಿ ಸಾರ್ವಜನಿಕ ಚರ್ಚೆಗಳು ಹೆಚ್ಚಾಗು­ತ್ತಿವೆ. ಟ್ರಾಲ್‌ಗಳನ್ನು ಪತ್ತೆ ಹಚ್ಚಿ ಅವರ ಬಣ್ಣ ಬಯಲು ಮಾಡುವ ಟಿ.ವಿ.ಕಾರ್ಯಕ್ರಮ­ವೊಂದು ಸ್ವೀಡನ್ ಟಿ.ವಿ.ಚಾನೆಲ್ ಒಂದು ನಡೆಸುತ್ತಿದೆ. ಇಲ್ಲಿನ ಟ್ರಾಲ್‌ಗಳಿಗೂ ಭಾರತದ ಟ್ರಾಲ್‌ಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.ಶೋಷಿತರ ಪರವಾದ ನಿಲುವುಗಳು, ಸ್ತ್ರೀಪರ­ವಾದ ನಿಲುವುಗಳನ್ನು ಹೊಂದಿದವರನ್ನು ಹುಡುಕಿ ವಾಗ್ದಾಳಿ ನಡೆಸುವುದು ಇವರ ಪ್ರಮುಖ ಹವ್ಯಾಸ. ಇದರ ನಡುವೆ ನಿರ್ದಿಷ್ಟ ವ್ಯಕ್ತಿ­ಗಳ ಮೇಲೆ ಹರಿಹಾಯುವುದಂತೂ ಇದ್ದದ್ದೇ. ಕೆಲವು ವೆಬ್‌ಸೈಟ್‌ಗಳಂತೂ ತಮ್ಮ ಪ್ರತಿಕ್ರಿಯೆಯ ವಿಭಾಗವನ್ನೇ ತಾತ್ಕಾಲಿಕವಾಗಿ ಮುಚ್ಚಿಬಿಡುವ­ಷ್ಟರ ಮಟ್ಟಿಗೆ ಇವರ ಅಟಾಟೋಪ ಏರಿದ್ದೂ ಇದೆ. ಟ್ರಾಲ್‌ಗಳಿಂದ ಇಂಟರ್‌ನೆಟ್ ಅನ್ನು ಮುಕ್ತ­ಗೊಳಿಸಬೇಕು ಎಂಬುದಕ್ಕೆ ಯಾರ ಆಕ್ಷೇಪವೂ ಇಲ್ಲ. ಆದರೆ ಈ ಟ್ರಾಲ್‌ಗಳು ಯಾರು ಎಂದು ವ್ಯಾಖ್ಯಾನಿಸಿಕೊಳ್ಳುವುದು ಎಲ್ಲರಿಗೂ ಕಷ್ಟ. ಬಲಪಂಥೀಯರಿಗೆ ಎಡಪಂಥೀಯ ಟ್ರಾಲ್‌ಗಳು ಮಾತ್ರ ಕಾಣಿಸುತ್ತಾರೆ. ಎಡಪಂಥೀಯರಿಗೆ ಬಲ­ಪಂಥೀಯ ಟ್ರಾಲ್‌ಗಳು ಮಾತ್ರ ಕಾಣಿಸುತ್ತಾರೆ.ಭಾರತದಲ್ಲಂತೂ ಟ್ರಾಲಿಂಗ್ ಒಂದು ಉದ್ದಿ­ಮೆಯೂ ಆಗಿ ಪರಿವರ್ತನೆಗೊಂಡಿದೆ. ಕಳೆದ ಚುನಾವಣೆಯ ಅವಧಿಯಲ್ಲಿ ನಿರ್ದಿಷ್ಟ ಪಕ್ಷಗಳು ಮತ್ತು ವ್ಯಕ್ತಿಗಳನ್ನು ಟೀಕಿಸುವುದಕ್ಕಾಗಿಯೇ ಭಾರೀ ಸಂಪನ್ಮೂಲವನ್ನು ವ್ಯಯಿಸಿದ ರಾಜಕೀಯ ಪಕ್ಷಗಳಿವೆ. ಒಬ್ಬಿಬ್ಬರನ್ನಷ್ಟೇ ಹಿಂಬಾಲಿಸುವ ಕೋಟ್ಯಂತರ ಟ್ವಿಟ್ಟರ್ ಖಾತೇದಾರರೂ, ಕೆಲವೇ ಪುಟಗಳನ್ನು ಲೈಕ್ ಮಾಡಲು ಹುಟ್ಟಿಕೊಂಡ ಫೇಸ್‌­ಬುಕ್ ಖಾತೆಗಳು ಇವರಿಂದಲೇ ಸೃಷ್ಟಿಯಾ­ಗಿ­ದ್ದವು. ಹೀಗೆ ಹೊರಗುತ್ತಿಗೆಯ ಮೂಲಕ ಅನೇಕ ಆನ್‌ಲೈನ್ ಗುಂಪುಗಳೂ ಸೃಷ್ಟಿಯಾಗಿದ್ದವು. ಇವು­ಗಳೆಲ್ಲವೂ ಟ್ರಾಲ್ ಮನಃಸ್ಥಿತಿಯ ಅನೇಕರಿಗೆ ವೇದಿಕೆಯೂ ಆದವು. ನಿರ್ದಿಷ್ಟ ವಿಚಾರಧಾರೆಯ ಪ್ರತಿಪಾದನೆಗೆ ಹುಟ್ಟಿಕೊಂಡ ಈ ಬಗೆಯ ಗುಂಪುಗಳು ಮತ್ತು ಪುಟಗಳಲ್ಲಿ ಅವುಗಳ ನಿಲು­ವನ್ನು ಒಪ್ಪಿಕೊಂಡು ಮುಂದುವರಿಯುವ ಟ್ರಾಲ್‌­ಗಳ ಬದುಕು ಸುರಕ್ಷಿತ. ಯಾರಾದರೂ ಕಾನೂನು ಕ್ರಮಕ್ಕೆ ಮುಂದಾದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಎಂದು ಹುಯಿಲೆ­ಬ್ಬಿಸುವುದಕ್ಕೆ ಒಂದು ಪ್ರಭಾವಶಾಲಿ ‘ಸಜ್ಜನ ವರ್ಗ’ವೇ ಇರುತ್ತದೆ.ಈ ವಾದ ವಿವಾದಗಳೇನೇ ಇದ್ದರೂ ಒಂದಂತೂ ನಿಜ. ಇಂಟರ್‌ನೆಟ್‌ನಲ್ಲಿ ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿವ್ಯಕ್ತಿಸು­ವುದೂ ಮನುಷ್ಯರೇ. ಹೊರಜಗತ್ತಿನಲ್ಲಿ ನಮ್ಮ ಮಾತುಗಳಿಗೆ ಹೇಗೆ ನಾವೇ ಉತ್ತದಾಯಿ­ಗಳಾ­ಗಿದ್ದೇವೆಯೋ ಹಾಗೆಯೇ ಜಾಲಜಗತ್ತಿನಲ್ಲಿಯೂ ನಮ್ಮ ಮಾತುಗಳಿಗೆ ನಾವೇ ಉತ್ತರದಾಯಿಗಳು ಎಂಬುದನ್ನು ನೆನಪಿಟ್ಟುಕೊಂಡು ವ್ಯವಹರಿಸು­ವುದು ನಾಗರಿಕ ಗುಣ. ಇಲ್ಲವಾದರೆ ತಂತ್ರಜ್ಞಾನ ಸಾಧ್ಯಮಾಡಿಕೊಟ್ಟಿರುವ ಅಭಿವ್ಯಕ್ತಿಯ ಅತ್ಯು­ತ್ತಮ ಪರಿಕರವೊಂದು ಪ್ರಭುತ್ವಗಳ ನಿಯಂತ್ರ­ಣಾಸಕ್ತಿಯ ಬಲಿಪಶುವಾಗುವ ಸಾಧ್ಯತೆಯೇ ಹೆಚ್ಚು. ಟ್ರಾಲಿಂಗ್ ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ವಾದಿಸುವವರು ಇರುವಂತೆಯೇ ಅಭಿ­ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಭುತ್ವದ ಕಡಿವಾಣ ಬೇಕು ಎಂದು ವಾದಿಸುವವರೂ ಇರಬಹುದಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.