ಅಭಿವ್ಯಕ್ತಿ ಸ್ವಾತಂತ್ರ್ಯವೇ? ಸೈಬರ್ ಗೂಂಡಾಗಿರಿಯೇ?

7

ಅಭಿವ್ಯಕ್ತಿ ಸ್ವಾತಂತ್ರ್ಯವೇ? ಸೈಬರ್ ಗೂಂಡಾಗಿರಿಯೇ?

ಎನ್.ಎ.ಎಂ. ಇಸ್ಮಾಯಿಲ್
Published:
Updated:
ಅಭಿವ್ಯಕ್ತಿ ಸ್ವಾತಂತ್ರ್ಯವೇ? ಸೈಬರ್ ಗೂಂಡಾಗಿರಿಯೇ?

ರೇಂದ್ರ ಮೋದಿ ತಮ್ಮ ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಘೋಷಿಸಿದ ಮೇಲೆ ಸಾರ್ವಜನಿಕ ಕಾರ್ಯಕ್ರಮ­ವೊಂದರಲ್ಲಿ ಜ್ಞಾನ­ಪೀಠ ಪುರಸ್ಕೃತ ಸಾಹಿತಿ ಯು.ಆರ್.­ಅನಂತ­ಮೂರ್ತಿ ನರೇಂದ್ರ ಮೋದಿ ಪ್ರಧಾನಿಯಾಗು­ವುದರ ಕುರಿತಂತೆ ತಮಗಿರುವ ತಕರಾರನ್ನು ಹಂಚಿಕೊಂಡರು. ಸಹಜ­ವಾಗಿಯೇ ಇದು ಬಿಜೆಪಿಯ ಬೆಂಬಲಿಗರು ನರೇಂದ್ರ ಮೋದಿ ಅಭಿಮಾನಿಗಳನ್ನು  ಕೆರಳಿಸಿತು.

ಟ್ವಿಟ್ಟರ್, ಫೇಸ್‌­ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳು ಇಲ್ಲದೇ ಇದ್ದ ಕಾಲಘಟ್ಟದಲ್ಲಿ ಈ ಘಟನೆ ಸಂಭವಿಸಿದ್ದರೆ  ಒಂದೆರಡು ದಿನಗಳ ಕಾಲದ ಖಂಡನೆ, ಪ್ರತಿಖಂಡನೆ, ವಾದ-ಪ್ರತಿವಾದಗಳನ್ನು ಮಂಡಿಸುವ ಮಾಧ್ಯಮ ಚರ್ಚೆಗಳಲ್ಲಿ ಮುಗಿದು ಹೋಗುತ್ತಿತ್ತು. ವಿಷಯದ ‘ಗಾಂಭೀರ್ಯ’­ದಿಂದಾಗಿ ಇದು ವಾರ­ಗಳು, ತಿಂಗಳುಗಳ ಕಾಲ ಮುಂದು­ವರಿದಿದ್ದರೂ ಚರ್ಚೆಯ ಭಾಷೆ ಅಶ್ಲೀಲವಾಗುವ ಸಂಭವವಿರಲಿಲ್ಲ.ಅಭಿವ್ಯಕ್ತಿಗೆ ಅನಂತ ಅವಕಾಶವನ್ನು ಕಲ್ಪಿಸಿರುವ ಇಂಟರ್‌ನೆಟ್‌ನ  ಈ ಕಾಲದಲ್ಲಿ ಸಂಭವಿಸಿದ್ದೇನು? ಯಾವ ಪತ್ರಿಕೆಗೂ ಮುದ್ರಿಸಲು ಸಾಧ್ಯವಿಲ್ಲದಂಥ ಮಾತುಗಳನ್ನು ಆಧುನಿಕ ತಂತ್ರಜ್ಞಾನ­ವನ್ನು ಬಳಸಬಲ್ಲ ಅನೇಕ ವಿದ್ಯಾವಂತರು ಬರೆದು ಅಂತರಜಾಲಕ್ಕೆ ಶಾಶ್ವತ­ವಾಗಿ ಸೇರಿಸಿಬಿಟ್ಟರು. ಒಂದು ವೈಯಕ್ತಿಕ ಮಟ್ಟದ ಅಭಿಪ್ರಾಯಕ್ಕೆ ಹೀಗೆಲ್ಲಾ ಪ್ರತಿಕ್ರಿಯಿಸ­ಬೇಕೇ ಎಂದು ಪ್ರಶ್ನಿಸಿದ ಕನ್ನಡದ ಕಥೆಗಾರ­ರೊಬ್ಬರು ಕೂಡಾ ಬಗೆ ಬಗೆಯ ಹೀಯಾಳಿಕೆಗೆ ಗುರಿ­ಯಾದರು.ಬಹಿರಂಗವಾಗಿ ಹೇಳಲಾಗದ, ಪತ್ರಿಕೆಗಳಲ್ಲಿ ಮುದ್ರಿಸಲಾಗದ ಮಾತು­ಗಳನ್ನು ಬರೆದವರು ಹೇಳಿಕೊಂಡಿರುವ ಪರಿಚಯವನ್ನು ನಂಬುವು­ದಾದರೆ ಅದರಲ್ಲಿ ಪ್ರತಿಷ್ಠಿತ ಐ.ಟಿ. ಕಂಪೆನಿಗಳ ಉದ್ಯೋಗಿಗಳಿದ್ದಾರೆ, ವೈದ್ಯರಿದ್ದಾರೆ, ಸರ್ಕಾರಿ ಸ್ವಾಮ್ಯದ ಉದ್ಯಮದ ಉದ್ಯೋಗಿಗಳಿದ್ದಾರೆ ಅಷ್ಟೇಕೆ ಸರ್ಕಾರಿ ನೌಕರರೂ ಇದ್ದಾರೆ. ಎಲ್ಲರೂ ಯುವಕರೇ, ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ‘ರಾಷ್ಟ್ರೀಯವಾದಿ’ಗಳು, ಎಲ್ಲರೂ ‘ಭಾರತೀಯ ಸಂಸ್ಕೃತಿ’ಯ ಅಭಿಮಾನಿಗಳು.ಸದ್ಯಕ್ಕೆ ಭಾರತದಲ್ಲಿರುವ ಇಂಟರ್‌­ನೆಟ್ ಬಳಕೆದಾರರ ಪ್ರಮಾಣ ಶೇಕಡಾ 11. ಆದರೆ, ‘ಸೈಬರ್ ಬುಲ್ಲಿಯಿಂಗ್’ ಅಥವಾ ಸೈಬರ್ ಗೂಂಡಾಗಿರಿಯಲ್ಲಿ ಭಾರತಕ್ಕೆ ಇರುವ ಸ್ಥಾನ ಪ್ರಪಂಚದಲ್ಲಿ ಮೂರನೆಯದ್ದು. ಮೊದಲ ಸ್ಥಾನ ಶೇಕಡಾ 42ರಷ್ಟು ಇಂಟರ್‌ನೆಟ್ ಬಳಕೆದಾರ­ರಿರುವ ಚೀನಾ ದೇಶದ್ದಾದರೆ ಶೇಕಡಾ 74ರಷ್ಟು ಇಂಟರ್‌ನೆಟ್ ಬಳಕೆದಾರ­ರಿರುವ ಸಿಂಗಪುರದ್ದು ಎರಡನೇ ಸ್ಥಾನ. ಸೈಬರ್ ಗೂಂಡಾಗಿರಿ­ಯಲ್ಲಿ ಭಾರತಕ್ಕೆ ಇರುವ ಸ್ಥಾನವೇ ನಮ್ಮ ಸಾಮಾಜಿಕ ಜಾಲತಾಣಗಳ ಚರ್ಚೆ­ಯಲ್ಲಿ ಏನು ನಡೆಯುತ್ತದೆ ಎಂಬುದನ್ನು ಹೇಳುತ್ತಿದೆ.ಕೆಲಕಾಲದ ಹಿಂದೆ ಪ್ರತಿಷ್ಠಿತ ಭಾರತೀಯ ಪೋರ್ಟಲ್ ರಿಡಿಫ್ ಏರ್ಪಡಿಸಿದ್ದ ಸಾರ್ವಜನಿಕ ಚಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೋರಾಟಗಾರ್ತಿ ಕವಿತಾ ಕೃಷ್ಣನ್‌  ಅವರಿಗೆ ಒಬ್ಬಾತ ಅತ್ಯಾಚಾರದ ಬೆದರಿಕೆ ಒಡ್ಡಿದ್ದ. ಇದಕ್ಕೆ ಕಾರಣವಾದದ್ದೇನು? ಸ್ವತಃ ‘Rapist’ ಎಂಬ ಬಳಕೆದಾರ ನಾಮದೊಂದಿಗೆ ಚಾಟ್‌ ರೂಮ್‌ಗೆ ಬಂದಿದ್ದ ಆತ ಮೊದಲಿಗೆ ಹೆಂಗಸರು ತುಂಡು­ಉಡುಗೆ ತೊಡುವುದನ್ನು ಬಿಟ್ಟರೆ ಅತ್ಯಾಚಾರ ಮಾಡದಿರಬಹುದು ಎಂದು ವಾದಿಸಿದ. ಈತನ ವಾದವನ್ನು ಕವಿತಾ ಕೃಷ್ಣನ್ ಮನ್ನಿಸಲಿಲ್ಲ. ಕೊನೆಗೆ ತನ್ನ ಗುರಿಯನ್ನು ಹೆಚ್ಚು ಸ್ಪಷ್ಟವಾಗಿಸಿ ಕವಿತಾ­ರಿಗೆ ಅತ್ಯಾಚಾರದ ಬೆದರಿಕೆಯೊಡ್ಡಿದ.ಇಂಥದ್ದೇ ಅನುಭವ ಖ್ಯಾತ ಪತ್ರಕರ್ತೆ ಸಾಗರಿಕಾ ಘೋಷ್ ಅವರದ್ದೂ ಕೂಡಾ. ಟ್ವಿಟ್ಟರ್‌ನಲ್ಲಿ ಅವರಿಗಿರುವ ಹಿಂಬಾಲಕರ ಸಂಖ್ಯೆ ಒಂದು ಲಕ್ಷ ಮೀರುತ್ತದೆ. ಮೊದಲೆಲ್ಲಾ ಪ್ರಚಲಿತ ವಿದ್ಯಮಾನಗಳ ಕುರಿತಂತೆ ತಮ್ಮ ಅನಿಸಿಕೆಗಳನ್ನು ಟ್ವೀಟ್ ಮಾಡುತ್ತಿದ್ದ ಸಾಗರಿಕಾ ಈಗ ಕೇವಲ ತಮ್ಮ ಟಿ.ವಿ. ಕಾರ್ಯಕ್ರಮಗಳ ವಿವರ ನೀಡುವು­ದಕ್ಕೆ ಸೀಮಿತರಾಗಿದ್ದಾರೆ. ಬಹಳ ಅಪರೂಪ­ಕ್ಕಷ್ಟೇ ಟ್ವಿಟ್ಟರ್‌ನಲ್ಲಿ ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದಿಸು­ತ್ತಾರೆ. ಅವರ ಈ ನಿಲುವಿಗೆ ಕಾರಣ­ವಾದದ್ದು ಕೂಡಾ ಸೈಬರ್ ಗೂಂಡಾಗಿರಿಯೇ.ಅವರಿಗೆ ಟ್ವಿಟ್ಟರ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಬೆದರಿಕೆಗಳು ಬರು­ತ್ತಿದ್ದೆವು. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಒಂದು ದಿನ ಟ್ವಿಟ್ಟರ್‌ನಲ್ಲಿ ಅವರ ಹದಿ ಹರೆಯದ ಮಗಳ ಹೆಸರು, ಆಕೆ ಓದುತ್ತಿರುವ ಶಾಲೆ, ತರಗತಿ ಇತ್ಯಾದಿಗಳೆಲ್ಲವೂ ಕಾಣಿಸಿಕೊಂಡಾಗ ಅವರು ಭಯಭೀತರಾದರು. ಇದೇ ಬಗೆಯ ಅನುಭವ ಕವಯಿತ್ರಿ ಮೀನಾ ಕಂದಸಾಮಿ ಅವರದ್ದೂ ಕೂಡಾ.

ಹೈದರಾಬಾದ್‌­ನಲ್ಲಿ ನಡೆದ beef-eating festival  ಕುರಿತು ತಮ್ಮ ಅಭಿಪ್ರಾಯ  ವ್ಯಕ್ತಪಡಿಸಿದ್ದಕ್ಕೆ ಸಾಮೂಹಿಕ ಅತ್ಯಾಚಾರ ನಡೆಸಿ ಅದನ್ನು ಟಿ.ವಿ.ಯಲ್ಲಿ ನೇರ ಪ್ರಸಾರ ಮಾಡುತ್ತೇವೆ ಎಂಬ ಟ್ಟಿಟ್ಟರ್ ಬೆದರಿಕೆಯನ್ನು ಅರಗಿಸಿಕೊಳ್ಳಬೇಕಾಯಿತು. ಸರ್ಕಾರಿ ನೌಕರನೆಂದು ಹೇಳಿ­ಕೊಳ್ಳುವ ವ್ಯಕ್ತಿಯೊಬ್ಬರು ಸ್ಥಾಪಿಸಿ ನಿರ್ವಹಿಸುತ್ತಿರುವ ಕನ್ನಡದ ಫೇಸ್‌ಬುಕ್ ಗುಂಪೊಂದರಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ, ಸೋನಿಯಾಗಾಂಧಿ ಕುರಿತಂತೆ ಅತ್ಯಂತ ಅಶ್ಲೀಲವಾದ ಹೇಳಿಕೆಗಳನ್ನು ಪೂನಾದಲ್ಲಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿ ಪದೇ ಪದೇ ಹಾಕುತ್ತಿದ್ದ.

ಈ ಗುಂಪಿನ ಹಲವು ಸದಸ್ಯರು ಈ ಹೇಳಿಕೆಗಳನ್ನು ಆಕ್ಷೇಪಿಸಿದ­ರಾದರೂ ಗುಂಪಿನ ನಿರ್ವಾಹಕರು ಅದನ್ನು ತೆಗೆದು ಹಾಕಲಿಲ್ಲ. ಗುಂಪಿನ ನಿರ್ವಾಹಕರಿಗೆ ಅಶ್ಲೀಲತೆಯನ್ನು ಪ್ರೋತ್ಸಾಹಿಸುವ ಉದ್ದೇಶವಿರ­ಲಾರದು. ನಿರ್ವಾಹಕರು ತಮಗೆ ಬಂದಿರುವ ದೂರುಗಳನ್ನು ಸಮಯಾಭಾವದಿಂದ ಗಮನಿಸದೆ ಇದ್ದಿರಬಹುದು. ಆದರೆ ಆಗುವ ಅನಾಹುತ ಮಾತ್ರ ಆಗಿ ಹೋಗಿತ್ತು.ಭಾರತವೂ ಸೇರಿದಂತೆ ಜಗತ್ತಿನಾ­ದ್ಯಂತ ಸೈಬರ್ ಗೂಂಡಾಗಿರಿಯ ಕುರಿತಂತೆ ನಡೆದ ಅಧ್ಯಯನಗಳೆಲ್ಲವೂ ಒಂದು ಅಂಶದತ್ತ ಬೊಟ್ಟು ಮಾಡುತ್ತವೆ. ವರ್ಚುವಲ್ ಜಗತ್ತಿನ ಗೂಂಡಾಗಳು ನಿಜ ಜಗತ್ತಿನಲ್ಲಿ ಗೂಂಡಾ­ಗಳಾಗಿರಬೇಕಿಲ್ಲ. ಕಂಪ್ಯೂಟರ್, ಮೊಬೈಲ್, ಟ್ಯಾಬ್‌ಗಳ ತೆರೆಯ ಮೇಲೆ ಕಾಣಿಸುವ ಅವರ ವ್ಯಕ್ತಿತ್ವಕ್ಕೂ ನಿಜ ಬದುಕಿನ ವ್ಯಕ್ತಿತ್ವಕ್ಕೂ ಅರ್ಥಾರ್ಥ ಸಂಬಂಧವಿರುವುದಿಲ್ಲ. ಇದನ್ನು ಮನುಷ್ಯನ ಸೈಬರ್ ಅಸ್ಮಿತೆಗಳ ಕುರಿತಂತೆ ಅಧ್ಯಯನ ನಡೆಸಿರುವ ಮನಃಶಾಸ್ತ್ರಜ್ಞ ಜಾನ್ ಸುಲರ್ ‘ಅಂಜಿಕೆರಾಹಿತ್ಯದ ಪರಿಣಾಮ’ ಎಂದು ವಿವರಿಸುತ್ತಾನೆ.ಮರ್ಯಾದೆಗೆ ಅಂಜುವ ಅಗತ್ಯವಿಲ್ಲ ಎಂಬ ಮನಸ್ಥಿತಿ ಇರುವವರ ಸಂಖ್ಯೆ ಭಾರತೀಯ ಸೈಬರ್ ಲೋಕದಲ್ಲಿ ದೊಡ್ಡದು. ಈ ಕ್ಷೇತ್ರದಲ್ಲಿ ಇತ್ತೀಚೆಗಷ್ಟೇ ಅಪರಾಧ ಶಾಸ್ತ್ರದ ತಜ್ಞರು ಅಧ್ಯಯನಗಳನ್ನು ಆರಂಭಿಸಿದ್ದಾರೆ. ಅವುಗಳು ಹೇಳುತ್ತಿರುವಂತೆ ಭಾರತೀಯ ಸೈಬರ್ ಲೋಕದ ಗೂಂಡಾಗಳಲ್ಲಿ ಹೆಚ್ಚಿನವರು ಅಂತರ್ಮುಖಿಗಳಾದ ಗಂಡಸರು. ಇವರು ನಿಜ ಬದುಕಿನಲ್ಲಿ ಇರುವ ವೈದ್ಯ, ವಕೀಲ, ಶಿಕ್ಷಕ ಇಂಥ ಗೌರವಾನ್ವಿತ ಹುದ್ದೆಗಳಲ್ಲಿರುತ್ತಾರೆ. ಅವರ ಕರಾಳಮುಖ ಕಾಣಿಸುವುದು ಕಂಪ್ಯೂಟರ್ ತೆರೆಯಲ್ಲಿ ಮಾತ್ರ.ಈ ಗೂಂಡಾಗಳಲ್ಲಿ ಎಲ್ಲಾ ಛಾಯೆಯ ಮೂಲಭೂತವಾದವನ್ನು ಪ್ರತಿಪಾದಿಸುವವರೂ ಇದ್ದಾರೆ. ಆದ್ದರಿಂದ ಇಲ್ಲಿ ಗ್ಯಾಂಗ್ ವಾರ್‌ಗಳೂ ಕೂಡಾ ನಡೆಯುತ್ತವೆ. ಸೋನಿಯಾ ಮತ್ತು ರಾಹುಲ್‌ರನ್ನು ಟೀಕಿಸುವ  ನರೇಂದ್ರಮೋದಿ ಬೆಂಬಲಿಗರ ಜೊತೆ ಟ್ವಿಟ್ಟರ್ ಯುದ್ಧಕ್ಕೆ ಇಳಿದ ಒಬ್ಬಾತ­ನಂತೂ ಮೋದಿಯವರ ಮಹಿಳಾ ಬೆಂಬಲಿಗರ ಮೇಲೆ ಅತ್ಯಾಚಾರ­ವೆಸಗುವ ಘೋಷಣೆ ಮಾಡಿದ್ದ. ಇದು ಸೈಬರ್ ಗೂಂಡಾಗಿರಿಯ ರಾಜಕೀಯ ಆಯಾಮ. ಮಕ್ಕಳ ಮೇಲೆ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಗೂಂಡಾಗಿರಿಯ ಆಯಾಮವು ಮತ್ತೊಂದಿದೆ. ಇಲ್ಲಿಯೂ ಬೀದಿ ಕಾಮಣ್ಣರಂಥವರ ಕಾಟವನ್ನೂ ಹೆಣ್ಣು ಮಕ್ಕಳು ಎದುರಿಸಬೇಕಾಗುತ್ತದೆ.

ಸೈಬರ್ ಗೂಂಡಾಗಿರಿಯ ವಿಚಾರ ಬಂದಾಗಲೆಲ್ಲಾ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66Aಯ ಪ್ರಸ್ತಾಪವೂ ಬಂದೇ ಬರುತ್ತದೆ. ಬಾಳ ಠಾಕ್ರೆ ಅಂತ್ಯ ಸಂಸ್ಕಾರದಂದು ನಡೆದ ಮುಂಬೈ ಬಂದ್ ಕುರಿತಂತೆ ಪ್ರತಿಕ್ರಿಯಿಸಿದ್ದಕ್ಕೆ ಇಬ್ಬರು ಹೆಣ್ಣು ಮಕ್ಕಳನ್ನು ಬಂಧಿಸಿದ ಘಟನೆ ಎಲ್ಲರಿಗೂ ನೆನಪಿದೆ. ಆಂಧ್ರಪ್ರದೇಶದ ಮಾನವ ಹಕ್ಕು ಹೋರಾಟಗಾರ್ತಿಯೊಬ್ಬರನ್ನು ಬಂಧಿ­ಸಿದ ಘಟನೆಯೂ ಎಲ್ಲರಿಗೂ ತಿಳಿದಿರು­ವಂಥದ್ದೇ. ಈ ಎರಡೂ ಪ್ರಕರಣಗಳಲ್ಲಿ ರಾಜಕೀಯ ಒತ್ತಡಗಳಿದ್ದುದರಿಂದ ಬಂಧನಗಳು ಸಂಭವಿಸಿದವು.

ಆದರೆ ಸಾಮಾನ್ಯ ಸಂದರ್ಭಗಳಲ್ಲಿ ಪೊಲೀಸರು ಸೈಬರ್ ಗೂಂಡಾಗಿರಿಯ ವಿರುದ್ಧ ಕೇಸು ದಾಖಲಿಸಿಕೊಳ್ಳುವುದಕ್ಕೇ ಒಪ್ಪುವುದಿಲ್ಲ. ಗೂಂಡಾಗಿರಿಯ ಬಲಿಪಶುಗಳು ತುಂಬಾ ಪ್ರಭಾವಶಾಲಿಗಳಾಗಿದ್ದರಷ್ಟೇ ಅವರಿಗೆ ನ್ಯಾಯ ದೊರೆಯುತ್ತದೆ. ಕೆಲವೊಮ್ಮೆ ಪ್ರಭಾವಶಾಲಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುವುದಕ್ಕೂ ಈ ಕಾಯ್ದೆಯನ್ನು ಬಳಸಿಕೊಳ್ಳುತ್ತಾರೆ. ಈ ಸೈಬರ್ ಗೂಂಡಾಗಿರಿಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66A ಕಲಮು ಪರಿಹಾರವಲ್ಲ.

ಇದಕ್ಕೆ ಈ ತನಕ ಬಲಿಯಾ­ಗಿ­ರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮಾತ್ರ. ಸೈಬರ್ ಜಗತ್ತಿನ ಗೂಂಡಾ­ಗಿರಿಗೆ ಪರಿಹಾರ ಕಂಡು­ಕೊಳ್ಳಲು ಬೇಕಾಗಿರುವ ಕಾನೂನುಗಳ ಸ್ವರೂಪ ಬೇರೆ. ಗೂಂಡಾಗಿರಿಯ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಸಾಮಾಜಿಕ ಜಾಲ ತಾಣಗಳು ತೋರುತ್ತಿರುವ ಸೋಮಾರಿತನಕ್ಕೆ ಚುರುಕು ಮುಟ್ಟಿಸುವ ಕೆಲಸ ಮೊದಲು ನಡೆಯಬೇಕು. ಹಾಗೆಯೇ ಸೈಬರ್ ಗೂಂಡಾಗಿರಿಯ ಸ್ವರೂಪ ಮತ್ತು ತೀವ್ರತೆಯನ್ನು ಅರ್ಥ ಮಾಡಿಕೊಳ್ಳು­ವುದಕ್ಕೆ ಪೊಲೀಸರಿಗೆ ವಿಶೇಷ ತರಬೇತಿಗಳ ಅಗತ್ಯವೂ ಇದೆ.ಎಲ್ಲದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನಾದರೂ ಹೇಳುವುದೆಂದರೆ ಒಂದು ಸಣ್ಣ ಗೆಳೆಯರ ಗುಂಪಿನೊಳಗೆ ಪಿಸುಗುಟ್ಟುವುದಲ್ಲ. ಬದಲಿಗೆ ಬೀದಿಯಲ್ಲಿ ಮೈಕ್ ಹಿಡಿದು ಘೋಷಿಸುವುದು ಎಂಬುದರ ಅರಿವು ಈ ತಾಣಗಳ ಬಳಕೆದಾರರಿಗೂ ಬರಬೇಕಾ­ಗಿದೆ. ಒಬ್ಬನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಮತ್ತೊಬ್ಬನ ಭಿನ್ನಾಭಿಪ್ರಾಯದ ಹಕ್ಕನ್ನು ಕಿತ್ತುಕೊಳ್ಳುವ ಮಟ್ಟಕ್ಕೆ ಹೋದರೆ ಅದು ಅಪರಾಧವಾಗುತ್ತದೆ ಎಂಬುದನ್ನು ಸೈಬರ್ ಸ್ವಾತಂತ್ರ್ಯವನ್ನು ಅನುಭವಿಸು­ತ್ತಿರುವ ನಾವು ಮರೆಯಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry