ಅಮೆರಿಕ ಚುನಾವಣೆ ಮತ್ತು ಸಾಮಾಜಿಕ ಪ್ರತಿಫಲನ

7

ಅಮೆರಿಕ ಚುನಾವಣೆ ಮತ್ತು ಸಾಮಾಜಿಕ ಪ್ರತಿಫಲನ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:

ಈ ವರ್ಷದ ನವೆಂಬರ್ ತಿಂಗಳಿನಲ್ಲಿ ನಡೆಯುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್‌ ಪಕ್ಷಗಳೆರಡೂ ದೀರ್ಘ ಪ್ರೈಮರಿ ಚುನಾವಣೆಗಳ ನಂತರ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಎರಡೂ ಪಕ್ಷಗಳ ರಾಷ್ಟ್ರೀಯ ಸಮಾವೇಶಗಳು ಈ ತಿಂಗಳ ಉತ್ತರಾರ್ಧದಲ್ಲಿ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಮುಂದಿನ ನಾಲ್ಕು ತಿಂಗಳುಗಳಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳು, ಅಧ್ಯಕ್ಷ- ಉಪಾಧ್ಯಕ್ಷ ಅಭ್ಯರ್ಥಿಗಳ ನಡುವಣ ಚರ್ಚೆ ಇವುಗಳೆಲ್ಲ ನಡೆಯಲಿವೆ. ಚುನಾವಣಾ ಫಲಿತಾಂಶದ ಮೇಲೆ ಈ ಎಲ್ಲ ಚಟುವಟಿಕೆಗಳೂ ಪ್ರಭಾವ ಬೀರಲಿವೆ. ಅವುಗಳ ಕುರಿತಾದ ವಿಸ್ತೃತ ಚರ್ಚೆಗಳು ಮುಂದಿನ ತಿಂಗಳುಗಳಲ್ಲಿ ನಡೆಯಲಿವೆ. ಅಮೆರಿಕದ ರಾಜಕೀಯ ಆಯ್ಕೆಗಳ ಪ್ರಭಾವ ಜಗತ್ತಿನ ಇತರ ಎಲ್ಲ ಭಾಗಗಳ ಮೇಲೂ ಆಗುವುದರಿಂದ, ಈ ಚುನಾವಣೆಗಳನ್ನು ನಾವ್ಯಾರೂ ನಿರ್ಲಕ್ಷಿಸುವಂತಿಲ್ಲ.ಅಮೆರಿಕದ ಇತಿಹಾಸವನ್ನು ಪಾಠ ಮಾಡುವ ನನಗೆ 2016ರ ಅಧ್ಯಕ್ಷೀಯ ಚುನಾವಣೆಗಳು ತುಂಬ ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳಿಕೊಳ್ಳುವಂತೆ ಮಾಡಿವೆ. ಅದೇನೆಂದರೆ, ಈ ಚುನಾವಣೆಗಳು ಇಂದಿನ ಅಮೆರಿಕದ ಸಮಾಜದ ಬಗ್ಗೆ ಏನನ್ನು ಹೇಳುತ್ತವೆ ಎನ್ನುವುದು. ಇದಕ್ಕೆ ಕಾರಣ ಸರಳವಾದುದು. ಡೆಮಾಕ್ರಟಿಕ್ ಪಕ್ಷವು ಹಿಲರಿ ರೊಧಾಮ್‌ ಕ್ಲಿಂಟನ್ ಅವರನ್ನು ಆಯ್ಕೆ ಮಾಡುವ ಮೂಲಕ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಅಧ್ಯಕ್ಷ ಪದವಿಗೆ ಅಭ್ಯರ್ಥಿಯಾಗಿಸುತ್ತಿದೆ.ಡೆಮೊಕ್ರಾಟರು ಮಾಡಿರುವ ಈ ಆಯ್ಕೆ ಈಗ ಅಧಿಕಾರದಲ್ಲಿರುವ ಕಪ್ಪುವರ್ಣೀಯ ಅಧ್ಯಕ್ಷ ಬರಾಕ್ ಒಬಾಮರ ನಂತರದ್ದು ಎನ್ನುವುದು ಇಲ್ಲಿ ಗಮನಾರ್ಹ. ಅಂದರೆ ಇದುವರೆಗೆ ಅಧಿಕಾರದ ರಾಜಕಾರಣದಲ್ಲಿ ಅವಕಾಶಗಳನ್ನು ಪಡೆಯದೆ ನಿರ್ಲಕ್ಷಿತವಾಗಿದ್ದ ವರ್ಗಗಳು ಈಗ ಮುಖ್ಯವಾಹಿನಿಗೆ ಬರುತ್ತಿವೆ ಎನ್ನುವುದನ್ನು ನಾವಿಲ್ಲಿ ಗುರುತಿಸಬಹುದು.ಒಬಾಮ ಅಥವಾ ಕ್ಲಿಂಟನ್‌ರ ರಾಜಕೀಯ ನಂಬಿಕೆಗಳು ಮತ್ತು ಸಾರ್ವಜನಿಕ ನೀತಿಗೆ ಸಂಬಂಧಿಸಿದ ನಿಲುವುಗಳು ಕ್ರಾಂತಿಕಾರಕವಾದವು ಅಲ್ಲ, ಬದಲಿಗೆ ಅಮೆರಿಕದ ರಾಜಕಾರಣದ ಮುಖ್ಯವಾಹಿನಿಗೆ ಸೇರಿದವು ಎನ್ನುವುದೇನೊ ನಿಜವೆ. ಆದರೂ ಸಾಂಕೇತಿಕವಾಗಿಯಾದರೂ ಸರಿಯೇ, ಇದುವರೆಗೆ ಅಮೆರಿಕದ ರಾಜಕಾರಣವನ್ನು ನಿಯಂತ್ರಿಸುತ್ತಿದ್ದ ಶ್ವೇತವರ್ಣೀಯ, ಆಂಗ್ಲೊ-ಸ್ಯಾಕ್ಸನ್ ಹಿನ್ನೆಲೆಯ ಪುರುಷರ ಪ್ರಭಾವ ಕಡಿಮೆಯಾಗುತ್ತಿದೆ ಎನ್ನುವುದು ಇಲ್ಲಿ ಪ್ರಸ್ತುತ.ಇದಕ್ಕೆ ಪ್ರತಿಯಾಗಿ ರಿಪಬ್ಲಿಕನ್ ಪಕ್ಷವು ಡೊನಾಲ್ಡ್ ಟ್ರಂಪ್ ಎನ್ನುವ ಪೂರ್ಣಾವಧಿ ಉದ್ಯಮಿ ಮತ್ತು ಟೆಲಿವಿಷನ್ ರಿಯಾಲಿಟಿ ಕಾರ್ಯಕ್ರಮಗಳ ಕೇಂದ್ರ ಬಿಂದುವನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಮುಖ್ಯವಾಗಿ ರಿಯಲ್ ಎಸ್ಟೇಟ್ ಮತ್ತು ಹೋಟೆಲ್ ಉದ್ಯಮ ನಡೆಸುವ ಟ್ರಂಪ್ ಈ ಮೊದಲೂ ಆಗಾಗ ರಾಜಕಾರಣಕ್ಕೆ ಕೈಹಾಕುತ್ತಿದ್ದರು.ಆದರೆ 2016ರ ರಿಪಬ್ಲಿಕನ್ ಪಕ್ಷದ ಪ್ರೈಮರಿ ಚುನಾವಣೆಗಳಲ್ಲಿ ತಾನು ಸಾಂಪ್ರದಾಯಿಕ ರಾಜಕಾರಣಿಯಲ್ಲ ಎಂದೇ ಪ್ರಚಾರ ಮಾಡಿಕೊಳ್ಳುತ್ತ, ಇದುವರೆಗೆ ಯಶಸ್ಸನ್ನು ಗಳಿಸಿದ್ದಾರೆ. ಇಂತಹ ಹೊರಗಿನ, ಅದರಲ್ಲೂ ಉದ್ಯಮ ಕ್ಷೇತ್ರದ ಅನುಭವವಿರುವ ಅಭ್ಯರ್ಥಿಯಿಂದ ಮಾತ್ರ, ಈಗ ದಾರಿ ತಪ್ಪಿರುವ ಅಮೆರಿಕ ಮತ್ತೆ ಜಾಗತಿಕ ನಾಯಕತ್ವ ಪಡೆಯಲು ಸಾಧ್ಯ ಎಂದೇ ಟ್ರಂಪ್ ವಾದಿಸುತ್ತಾರೆ.ಟ್ರಂಪ್ ಅವರ ಭಾಷಣಗಳಲ್ಲಿ ಜನಾಂಗೀಯ ನಿಂದನೆಯ (ರೇಸಿಸ್ಟ್) ಮಾತುಗಳು, ಇತರ ದೇಶಗಳ ಮೇಲೆ ಬಲಪ್ರಯೋಗದ ನುಡಿಗಳು ಸಾಮಾನ್ಯವಾಗಿ ಆಗಾಗ ಕೇಳಿಬರುತ್ತವೆ. ಗಂಭೀರ ರಾಜಕೀಯ ಚಿಂತನೆ ಹಾಗೂ ರಚನಾತ್ಮಕ ಕಾರ್ಯಕ್ರಮಗಳ ಬದಲಿಗೆ ಉದ್ವೇಗದ, ಉದ್ರೇಕದ ಮಾತುಗಳನ್ನೇ ಹೆಚ್ಚಾಗಿ ಅವರು ಆಡುವುದು.ಉದಾಹರಣೆಗೆ, ಔದ್ಯಮಿಕ ವಲಯದಿಂದ ಹಿಡಿದು ಭಯೋತ್ಪಾದಕರನ್ನು ವಿರೋಧಿಸುವವರೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಈಗ ಅಮೆರಿಕ ಸೋಲುತ್ತಿದೆ, ಆದರೆ ತಾನು ಅಧ್ಯಕ್ಷನಾದ ನಂತರ ಬರೀ ಗೆಲ್ಲುತ್ತಲೇ ಇರುತ್ತದೆ; ತನಗೆ ಏನಾದರೂ ಇತರ ದೇಶಗಳಿಂದ ವಿರೋಧ ಬಂದಲ್ಲಿ, ಅವುಗಳನ್ನು ಬಾಂಬ್ ಹಾಕಿಯಾದರೂ ಸರಿಯೆ ಸೋಲಿಸಿಯೇ ತೀರುತ್ತೇನೆ ಎನ್ನುತ್ತಾರೆ. ಇಂತಹ ಮಾತುಗಳು ಸಂಪ್ರದಾಯಸ್ಥ (ಕನ್ಸರ್ವೇಟಿವ್) ಶ್ವೇತವರ್ಣೀಯರೇ ಹೆಚ್ಚಿರುವ ರಿಪಬ್ಲಿಕನ್ ಪಕ್ಷದೊಳಗೆ ವ್ಯಾಪಕವಾದ ಜನಪ್ರಿಯತೆಯನ್ನು ಗಳಿಸಿವೆ.ಈ ಹಿಂದೆಯೂ ಮಿಟ್ ರಾಮ್ನಿಯವರಂತಹ ಔದ್ಯಮಿಕ ಹಿನ್ನೆಲೆಯ ಅಭ್ಯರ್ಥಿಯನ್ನು, ರಾಷ್ಟ್ರೀಯ ಭದ್ರತೆಯ ಹಾಗೂ ಅಮೆರಿಕದ ಜಾಗತಿಕ ಪ್ರಾಬಲ್ಯದ ಅವಶ್ಯಕತೆಯ ಬಗ್ಗೆ ಗಟ್ಟಿದನಿಯಲ್ಲಿ ಮಾತನಾಡುತ್ತಿದ್ದ, ಸ್ವತಃ ಸೈನಿಕನೂ ಆಗಿದ್ದ ಜಾನ್ ಮೆಕೇನ್ ಅವರಂತಹ ಅಭ್ಯರ್ಥಿಯನ್ನು ಕಳೆದೆರಡು ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷವು ಆಯ್ಕೆ ಮಾಡಿತ್ತು. ಇವರಿಬ್ಬರೂ ಶ್ವೇತವರ್ಣೀಯ ಪುರುಷರಾದರೂ ರಾಜಕಾರಣದ ಮುಖ್ಯವಾಹಿನಿಯಿಂದ ಬಂದವರು.ಗಂಭೀರವಾಗಿ ಚಿಂತಿಸುವ, ರಚನಾತ್ಮಕ ಕಾರ್ಯಕ್ರಮಗಳನ್ನು ದೇಶದ ಮುಂದಿಡುವ ಸಾಮರ್ಥ್ಯವುಳ್ಳವರು. ಇವರಿಬ್ಬರಿಗೆ ಹೋಲಿಸಿದಾಗ ಟ್ರಂಪ್ ಒಮ್ಮೊಮ್ಮೆ ವಿದೂಷಕನಂತೆ, ಮಗದೊಮ್ಮೆ ಅಪಾಯಕಾರಿ ಪುಢಾರಿಯಂತೆ ತೋರುತ್ತಾರೆ. 2016ರಲ್ಲಿ ಅವರ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದವರು ಸಹ ಟ್ರಂಪ್ ಅವರಿಗಿಂತ ಭಿನ್ನವಾಗಿ ಮಾತನಾಡುತ್ತಿರಲಿಲ್ಲ.  ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ಇವರಿಬ್ಬರೂ ಅಮೆರಿಕದ ಎರಡು ಪಕ್ಷಗಳ ಅಭ್ಯರ್ಥಿಗಳಾಗಿರುವುದು ಆಕಸ್ಮಿಕವಲ್ಲ. ಬದಲಿಗೆ ಅಮೆರಿಕದ ಸಮಾಜದಲ್ಲಿ ಕಳೆದ ಅರ್ಧ ಶತಮಾನದಲ್ಲಾಗಿರುವ ಹಾಗೂ ಮುಂದಿನ ಅರ್ಧ ಶತಮಾನದಲ್ಲಿ ಆಗಬಹುದಾದ ಜನಾಂಗೀಯ ಅನುಪಾತದಲ್ಲಿನ (ಡೆಮೊಗ್ರಾಫಿಕ್ ರೇಷಿಯೊ) ಬದಲಾವಣೆಗಳನ್ನು ಸೂಚಿಸುತ್ತದೆ.ಅಮೆರಿಕ ಮೊದಲಿನಿಂದಲೂ ವಲಸಿಗರ ಸಮಾಜ. 1609ರಲ್ಲಿ ಮೊದಲ ಇಂಗ್ಲಿಷ್‌ ವಲಸಿಗರು ಅಮೆರಿಕದ ಪೂರ್ವ ತೀರದಲ್ಲಿ ಹಡಗಿನಿಂದ ಇಳಿದು ವಲಸೆ ಪ್ರಕ್ರಿಯೆ ಪ್ರಾರಂಭಿಸಿದ ನಂತರದಿಂದ ಸತತವಾಗಿ ಮುಂದಿನ ನಾಲ್ಕು ಶತಮಾನಗಳಲ್ಲಿ ಹತ್ತಾರು ಕೋಟಿ ಯುರೋಪಿಯನ್ನರು, ಆಫ್ರಿಕನ್ನರು ಮತ್ತು ಏಷ್ಯನ್ನರು ಅಮೆರಿಕಕ್ಕೆ ಬಂದು, ನೆಲೆಸಿದ್ದಾರೆ. ಬಹುಶಃ ತನ್ನ ಅಸ್ತಿತ್ವದುದ್ದಕ್ಕೂ ವಲಸಿಗರನ್ನು ಈ ಪ್ರಮಾಣದಲ್ಲಿ ಬರಮಾಡಿಕೊಳ್ಳುತ್ತಲೇ ಇರುವ ದೇಶ ಮತ್ತೊಂದಿಲ್ಲ.ಇಲ್ಲಿ ಗಮನಾರ್ಹ ಅಂಶವೇನೆಂದರೆ, 20ನೆಯ ಶತಮಾನದವರೆಗೂ ವಲಸಿಗರು ಮುಖ್ಯವಾಗಿ ಪಶ್ಚಿಮ ಯುರೋಪಿನ, ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಹಿನ್ನೆಲೆಯ ಸಮಾಜಗಳಿಂದಲೇ ಬಂದವರು. ಇತರ ಅಲ್ಪಸಂಖ್ಯಾತ ಗುಂಪುಗಳವರೂ ಅಮೆರಿಕಕ್ಕೆ ವಲಸೆ ಬಂದರೂ, ಅವರುಗಳ ಸಂಖ್ಯೆ ಕಡಿಮೆ. ಒಟ್ಟಾರೆ ಅಮೆರಿಕದ ಸಮಾಜ ಯುರೋಪಿನ ಜನಾಂಗೀಯ, ಧಾರ್ಮಿಕ ವೈವಿಧ್ಯವನ್ನು ಪ್ರತಿಫಲಿಸಿತೇ ಹೊರತು, ಜಾಗತಿಕ ಮಟ್ಟದ ವೈವಿಧ್ಯವನ್ನಲ್ಲ.ಎರಡನೆಯ ಮಹಾಯುದ್ಧದ ನಂತರ ಈ ಪ್ರಕ್ರಿಯೆಯಲ್ಲಿ ಬದಲಾವಣೆಗಳಾಗಿವೆ. 1965ರ ನಂತರ ವಲಸಿಗರು ಮುಖ್ಯವಾಗಿ ಏಷ್ಯಾ (ಪೂರ್ವ ಮತ್ತು ದಕ್ಷಿಣ ಏಷ್ಯಾಗಳೆರಡರಿಂದಲೂ) ಹಾಗೂ ಲ್ಯಾಟಿನ್ ಅಮೆರಿಕದ ದೇಶಗಳಿಂದ ಬಂದವರು. ಲ್ಯಾಟಿನ್ ಅಮೆರಿಕದ ಹಿಸ್ಪಾನಿಕ್ ವಲಸಿಗರು ಶ್ವೇತವರ್ಣೀಯರೇ ಆದರೂ ಅವರೆಲ್ಲರೂ ಶತಮಾನಗಳಿಂದ ಮೆಕ್ಸಿಕೊ, ಗ್ವಾಟೆಮಾಲದಂತಹ ಮಧ್ಯ ಅಮೆರಿಕದ ದೇಶಗಳಲ್ಲಿ ನೆಲೆಸಿದ್ದವರು. ಮೂಲದಲ್ಲಿ ಸ್ಪೇನಿನಿಂದ ವಲಸೆ ಬಂದ ಇವರುಗಳ ಪೈಕಿ ಹೆಚ್ಚಿನವರು ಕ್ಯಾಥೋಲಿಕರು ಮತ್ತು ಅಕ್ರಮವಾಗಿ ಅಮೆರಿಕ ಪ್ರವೇಶಿಸಿದವರು. ಹಾಗಾಗಿ ಅಮೆರಿಕದ ಶ್ವೇತವರ್ಣೀಯರಿಗೆ ಇವರುಗಳ ಬಗ್ಗೆ ಸಹಾನುಭೂತಿಯಾಗಲಿ, ತಮ್ಮವರೇ ಎಂಬ ಭಾವನೆಯಾಗಲಿ ಇಲ್ಲ. 2016ರಲ್ಲಿ ಅಮೆರಿಕ ಜನಾಂಗೀಯ ಮತ್ತು ವರ್ಣಗಳ ಹಿನ್ನೆಲೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವೈವಿಧ್ಯಮಯವಾಗಿದೆ. 1965ರಲ್ಲಿ ಶೇ 84ರಷ್ಟು ಶ್ವೇತವರ್ಣೀಯರಿದ್ದರೆ ಇಂದು ಆ ಪ್ರಮಾಣ ಸುಮಾರು ಶೇ 65ಕ್ಕಿಳಿದಿದೆ. 2055ರ ಹೊತ್ತಿಗೆ ಶ್ವೇತವರ್ಣೀಯರು ಅರ್ಧಕ್ಕಿಂತ ಕಡಿಮೆ ಸಂಖ್ಯೆಯವರಾಗುತ್ತಾರೆ ಎಂಬ ನಿರೀಕ್ಷೆಯಿದೆ.ಆ ವೇಳೆಗೆ ಅಮೆರಿಕದಲ್ಲಿ ಹಿಸ್ಪಾನಿಕ್ ಮತ್ತು ಏಷ್ಯನ್ನರ ಪ್ರಮಾಣ ಶೇ 36ರಷ್ಟಾಗಬಹುದು. ಹೀಗಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಹಿಸ್ಪಾನಿಕರು, ಏಷ್ಯನ್ನರು ಮತ್ತು ಕಪ್ಪುವರ್ಣೀಯರಂತಹ ಅಲ್ಪಸಂಖ್ಯಾತ ಸಮುದಾಯಗಳ ಪ್ರಭಾವ ಹೆಚ್ಚುತ್ತಲೇ ಇದೆ. ಈ ಸಮುದಾಯಗಳು ಶೇ 70ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಡೆಮಾಕ್ರಟಿಕ್‌ ಪಕ್ಷವನ್ನು ಬೆಂಬಲಿಸುತ್ತಾರೆ. ಜೊತೆಗೆ ಅಮೆರಿಕದ ಬಹುಸಂಖ್ಯಾತ ಶ್ವೇತವರ್ಣೀಯರ ಪೈಕಿ ಮಹಿಳೆಯರು ಮತ್ತು ಯುವಕರು ಸಹ ಇದೇ ಪಕ್ಷದ ಬೆಂಬಲಿಗರು. ಹಾಗಾಗಿಯೇ ಬರಾಕ್ ಒಬಾಮ ಹಾಗೂ ಹಿಲರಿ ಕ್ಲಿಂಟನ್ ಈ ಪಕ್ಷದ ಉಮೇದುವಾರರಾಗಿ ಆಯ್ಕೆಯಾಗಿರುವುದು ಆಶ್ಚರ್ಯದ ಮಾತಲ್ಲ.ರಿಪಬ್ಲಿಕನ್ ಪಕ್ಷವು ಇಂದು ಭವಿಷ್ಯದ ಕುರಿತಾಗಿ ಆತಂಕಿತರಾಗಿರುವ ಶ್ವೇತವರ್ಣೀಯ ಪುರುಷರ ಪಕ್ಷವಾಗಿ ಹೊರಹೊಮ್ಮುತ್ತಿದೆ. ಕ್ಷೇತ್ರಗಳನ್ನು ರೂಪಿಸುವಾಗ ಹಸ್ತಕ್ಷೇಪ ಮಾಡಿ, ಅಮೆರಿಕದ ಪ್ರತಿನಿಧಿಗಳ ಸಭೆ ಮತ್ತು ಸೆನೆಟ್‌ನ ಚುನಾವಣೆಗಳಲ್ಲಿ ರಿಪಬ್ಲಿಕನ್ನರು ತಮ್ಮ ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ. ಆದರೆ ಅಧ್ಯಕ್ಷೀಯ ಚುನಾವಣೆಗಳಲ್ಲಿ ಜನಾಂಗೀಯ ವೈವಿಧ್ಯದ ಕಾರಣದಿಂದ ರಿಪಬ್ಲಿಕನ್ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಅಮೆರಿಕದ ಶ್ವೇತವರ್ಣೀಯ ಪುರುಷರಿಗೆ ತಾವು ಅಧಿಕಾರ, ದೇಶದೊಳಗೆ ತಮಗಿದ್ದ ಪ್ರಭಾವವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಭಾವನೆ ಗಾಢವಾಗಿ ಮೂಡಿದೆ. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಆಶ್ಚರ್ಯದ ವಿಷಯವಲ್ಲ.21ನೆಯ ಶತಮಾನದ ಅಮೆರಿಕದ ಜನಾಂಗೀಯ ವೈವಿಧ್ಯದ ಜೊತೆಗೆ, ಅಮೆರಿಕದ ಶ್ವೇತವರ್ಣೀಯ ಪುರುಷ ಎದುರಿಸುತ್ತಿರುವ ಮತ್ತೊಂದು ಬಹುಮುಖ್ಯ ಆತಂಕವನ್ನೂ ಇಲ್ಲಿ ಸಂಕ್ಷಿಪ್ತವಾಗಿ ಗುರುತಿಸಬೇಕು. ಅದೇನೆಂದರೆ, ಜಾಗತೀಕರಣದ ಕಾರಣದಿಂದ ಅಮೆರಿಕದ ಉತ್ಪಾದನಾ ವ್ಯವಸ್ಥೆ ಹೆಚ್ಚುಕಡಿಮೆ ಸಂಪೂರ್ಣವಾಗಿ ಚೀನಾ, ಮೆಕ್ಸಿಕೊಗಳಂತಹ ಹೊರದೇಶಗಳಿಗೆ ವರ್ಗಾವಣೆಗೊಂಡಿರುವುದು.ಹೀಗಾಗಿ 1870ರ ನಂತರ ಅಮೆರಿಕದ ಪೂರ್ವ ಮತ್ತು ಮಧ್ಯಪಶ್ಚಿಮದ ರಾಜ್ಯಗಳಲ್ಲಿನ ಬಹುತೇಕ ಕಾರ್ಖಾನೆಗಳು, ಅವುಗಳಿದ್ದ ನಗರಗಳು ಇಂದು ತಮ್ಮ ಆರ್ಥಿಕ ಚೈತನ್ಯ ಕಳೆದುಕೊಂಡಿವೆ. ಇದರ ಹೊಡೆತ ಶ್ವೇತವರ್ಣೀಯ ಪುರುಷರ ಮೇಲಾದಷ್ಟು ಇನ್ನಾರ ಮೇಲೂ ಆಗಿಲ್ಲ. ತಮ್ಮ ದೇಶವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ಅವರ ಆತಂಕದ ಭಾವನೆ ಪ್ರಬಲ ರಾಷ್ಟ್ರೀಯತೆ, ಜಾಗತೀಕರಣ ವಿರೋಧಿ ನೀತಿಗಳ ರೂಪದಲ್ಲಿ ಅಭಿವ್ಯಕ್ತಿ ಪಡೆಯುತ್ತಿದೆ. ಇದರ ಸಚೇತನ ರೂಪವೇ ಡೊನಾಲ್ಡ್ ಟ್ರಂಪ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry