ಸೋಮವಾರ, ಅಕ್ಟೋಬರ್ 21, 2019
23 °C

ಅಮ್ಮನ ಮನಸಿನ ತಾತಯ್ಯ...

ಡಾ. ಆಶಾ ಬೆನಕಪ್ಪ
Published:
Updated:
ಅಮ್ಮನ ಮನಸಿನ ತಾತಯ್ಯ...

ತುಮಕೂರಿನ ನಂಜಯ್ಯ (71) ದೂರವಾಣಿ ಎಕ್ಸ್‌ಚೇಂಜ್ ವಿಭಾಗದಲ್ಲಿ ಸೂಪರ್‌ವೈಸರ್ ಆಗಿ ನಿವೃತ್ತರಾದವರು. ಅವರಿಗೆ ಇಬ್ಬರು ಗಂಡು ಮಕ್ಕಳು. ಇದ್ದ ಒಬ್ಬಳೇ ಮಗಳು ಏಳು ವರ್ಷದ ಹಿಂದೆ ಖಿನ್ನತೆಯಿಂದ ನರಳಿ ಸಾವಿಗೀಡಾಗಿದ್ದರು. ಅವರ ಮೊಮ್ಮಗ (ಮಗಳ ಮಗ) ದೀಪಕ್‌ನನ್ನು ನೋಡಿಕೊಳ್ಳಲು ಜೊತೆಯಲ್ಲೇ ಇರುತ್ತಿದ್ದರಿಂದ ನಂಜಯ್ಯ ನನಗೆ ಆತ್ಮೀಯರಾದರು.ದೀಪಕ್ ಅಪರೂಪದ ಕಾಯಿಲೆಯಿಂದ ನರಳುತ್ತಿದ್ದ ಮಗು. ಒಂದೂವರೆ ವರ್ಷದ ಶಿಶುವಾಗಿದ್ದಾಗಲೇ ದೀಪಕ್‌ಗೆ `ಥಲಸ್ಸೇಮಿಯಾ~ ಕಾಯಿಲೆ ಇರುವುದು ಪತ್ತೆಯಾಗಿತ್ತು. ಥಲಸ್ಸೇಮಿಯಾ ಅನುವಂಶಿಕವಾಗಿ ಬರುವ ಅಪರೂಪದ ಕಾಯಿಲೆ. ರಕ್ತಕೋಶಗಳ ಸಾಮಾನ್ಯ ಜೀವಿತಾವಧಿ ಸುಮಾರು 120 ದಿನ.ಈ ಸರಾಸರಿಗೆ ಹೋಲಿಸಿದರೆ ಥಲಸ್ಸೇಮಿಯಾ ಉಳ್ಳವರ ರಕ್ತಕೋಶಗಳ ಜೀವಿತಾವಧಿ ತುಂಬಾ ಕಡಿಮೆ. ಇಂತಹ ಮಕ್ಕಳನ್ನು ರಕ್ತ ನೀಡುವ ಮೂಲಕ ಮಾತ್ರ ಉಳಿಸಲು ಸಾಧ್ಯ. ಸಾಮಾನ್ಯವಾಗಿ ತಿಂಗಳಿಗೊಮ್ಮೆ ಒಂದು ಬಾಟಲ್ ರಕ್ತ ಬೇಕಾಗುತ್ತದೆ. ಮಕ್ಕಳು ಬೆಳೆದಂತೆ 15 ದಿನಕ್ಕೆ ಎರಡು ಬಾಟಲ್‌ನಂತೆ ರಕ್ತದ ಅಗತ್ಯವಿರುತ್ತದೆ.ರಕ್ತ ವರ್ಗಾವಣೆ ಮೂಲಕ ಜೀವ ಉಳಿಸುವುದು ಬಡವರಿಗೆ ಇರುವ ಏಕೈಕ ಚಿಕಿತ್ಸಾ ವಿಧಾನವಾದರೂ ಅದರಿಂದಲೂ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ರಕ್ತಕೋಶದಲ್ಲಿನ ಕಬ್ಬಿಣದ ಅಂಶಗಳು ದೇಹದ ವಿವಿಧ ಭಾಗಗಳಲ್ಲಿ ಶೇಖರಣೆಯಾಗುತ್ತವೆ. ಈ ಕಬ್ಬಿಣವನ್ನು ಪ್ರತಿ ರಕ್ತ ವರ್ಗಾವಣೆ ನಂತರವೂ ನರಕ್ಕೆ ಅಥವಾ ನೇರವಾಗಿ ಔಷಧ ನೀಡುವ ಮೂಲಕ (ಇವು ಅಷ್ಟೇನೂ ಪರಿಣಾಮಕಾರಿಯಲ್ಲ) ತೆಗೆದುಹಾಕಬೇಕು.

 

ಈ ಮಕ್ಕಳು ವರ್ಗಾವಣೆಗೆ ಸಂಬಂಧಿಸಿದ ಸೋಂಕಿಗೆ ತುತ್ತಾಗುವ ಸಂಭವವಿರುತ್ತದೆ. ಈ ಸೋಂಕುಗಳನ್ನು ದುಬಾರಿ ಬೆಲೆಯ `ಹೆಪಟೈಟಿಸ್ ಎ~ ಮತ್ತು `ಬಿ~ ವ್ಯಾಕ್ಸೀನುಗಳ ಮೂಲಕ ಮಾತ್ರ ತಡೆಯಲು ಸಾಧ್ಯ.ಒಂದೂವರೆ ವರ್ಷದ ವಯಸ್ಸಿನಿಂದ ಕೊನೆ ಉಸಿರು ಎಳೆಯುವವರೆಗೂ ದೀಪಕ್‌ನ ಜೊತೆಗಿದ್ದದ್ದು ಆತನ ಪ್ರೀತಿಯ ಅಜ್ಜ. ಆಸ್ಪತ್ರೆಯಲ್ಲಿ `ಥಲಸ್ಸೇಮಿಯಾ~ ಕುಟುಂಬದ ಪೋಷಕರು ಮತ್ತು ಥಲಸ್ಸೇಮಿಯಾ ರೋಗಿಗಳ ವಾರ್ಡ್‌ನಲ್ಲಿ ನಂಜಯ್ಯ ನನ್ನ ಪಾಲಿಗೆ `ತಾತಯ್ಯ~ ಆಗಿದ್ದರು.

 

ಎಲ್ಲಾ ಸಿಬ್ಬಂದಿಯ ತೀವ್ರ ಮೆಚ್ಚುಗೆ ಮತ್ತು ಗೌರವಕ್ಕೆ ಅವರು ಪಾತ್ರರಾಗಿದ್ದರು. ಇಂದಿಗೂ ಅವರನ್ನು ಎಲ್ಲ ದಾದಿಯರು ಎತ್ತರದ, ದೃಢಕಾಯದ ಸಜ್ಜನ ವ್ಯಕ್ತಿತ್ವದ ಗೌರವಸ್ಥರೆಂದು ನೆನೆಸಿಕೊಳ್ಳುವರು. ಮೃದು ಭಾಷಿ ಮತ್ತು ಕರುಣಾಮಯಿ ವ್ಯಕ್ತಿತ್ವದ ಅವರು `ಥಲ್~ ವಾರ್ಡ್‌ನಲ್ಲಿನ ಕಾರ್ಯಗಳಿಗೆ ನಮಗೆ ನೆರವಾಗುತ್ತಿದ್ದರು.ತಮ್ಮ ಮುದ್ದಿನ ಮೊಮ್ಮಗ ದೀಪುವಿಗೆ ಬೇಕಾದ `ಓ~ ಪಾಸಿಟಿವ್ ರಕ್ತಕ್ಕಾಗಿ ಸ್ವತಃ ಅವರೇ ಓಡಾಡುತ್ತಿದ್ದರು. ರಕ್ತ ನಮ್ಮ ಬ್ಲಡ್ ಬ್ಯಾಂಕಿನಲ್ಲೇ ಲಭ್ಯವಿದ್ದಾಗ ಉಚಿತವಾಗಿ ಸಿಗುತ್ತಿತ್ತು. ಇಲ್ಲದಿದ್ದರೆ ಅವರು ಖಾಸಗಿ ರಕ್ತನಿಧಿಗಳಿಂದ ಹಣ ಕೊಟ್ಟು ಕೊಂಡು ತರಬೇಕಾಗುತ್ತಿತ್ತು.ನಮಗೆಲ್ಲರಿಗೂ ಅಚ್ಚುಮೆಚ್ಚಾಗಿದ್ದ ತಾತಯ್ಯ ಪ್ರತಿ ಹದಿನೈದು ದಿನಕ್ಕೊಮ್ಮೆ ನಮ್ಮ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಆಸ್ಪತ್ರೆ ಸಿಬ್ಬಂದಿಯ ಆರೋಗ್ಯದ ಜೊತೆಗೆ ಅವರುಗಳ ಕುಟುಂಬದವರ ಬಗ್ಗೆ ಕೂಡ ವಿಚಾರಿಸುತ್ತಿದ್ದರು. ಉತ್ಸಾಹದ ಚಿಲುಮೆಯಾಗಿದ್ದ ತಾತಯ್ಯ, ಇತರ `ಥಲಸ್ಸೇಮಿಯಾ~ ಪೀಡಿತ ಮಕ್ಕಳ ಪೋಷಕರಿಗೆ ಸ್ಫೂರ್ತಿಯಾಗಿದ್ದರು.ಮಾರಣಾಂತಿಕ ಕಾಯಿಲೆಯಿದ್ದರೂ ಹೆಚ್ಚು ಕಾಲ ಬದುಕುವ ವರ ಪಡೆದ ಕೆಲವೇ ಮಕ್ಕಳಲ್ಲಿ ದೀಪಕ್ ಕೂಡ ಒಬ್ಬನಾಗಿದ್ದ. ಕಾಯಿಲೆಯ ನಡುವೆಯೇ ಆತ ಲಲಿತಕಲೆಗಳ ವಿಷಯದಲ್ಲಿ ಪದವೀಧರನೂ ಆಗಿದ್ದ. ಇದೆಲ್ಲವೂ ಸಾಧ್ಯವಾಗಿದ್ದು ಆತನ ಅಜ್ಜನ ಪ್ರಾಮಾಣಿಕ ಕಾಳಜಿ, ಪರಿಶ್ರಮದಿಂದ.ಮೊಮ್ಮಗನನ್ನು ಬಸ್ಸಿನಲ್ಲಿ ಆಸ್ಪತ್ರೆಗೆ ಕರೆತರುವುದಿಂದ ಹಿಡಿದು, ವಿವಿಧ ಪರೀಕ್ಷೆಗಳಿಗಾಗಿ ಓಡಾಡುವುದು, ಸಮಯಕ್ಕೆ ಸರಿಯಾಗಿ ರಕ್ತ ಮತ್ತು ಔಷಧವನ್ನು ಹೊಂದಿಸುವುದು ಎಲ್ಲವನ್ನೂ ತಾತಯ್ಯ ಅತೀವ ಶ್ರದ್ಧೆಯಿಂದ ಮಾಡುತ್ತಿದ್ದರು. ದೀಪಕ್ ದೇಹದಲ್ಲಿನ ಕಬ್ಬಿಣವನ್ನು ತೆಗೆಯಲು ಬಳಕೆಯಾಗುತ್ತಿದ್ದ ಔಷಧವನ್ನು ತಯಾರಿಸುತ್ತಿದ್ದ ಬೆಂಗಳೂರಿನ ಘಟಕ ಸ್ಥಗಿತಗೊಂಡಿದ್ದರಿಂದ ತಾತಯ್ಯ ಮದ್ರಾಸ್‌ನಿಂದ ಔಷಧ ತರಿಸುತ್ತಿದ್ದರು.ಈ ಔಷಧ ದೊರಕುವ ಸ್ಥಳ, ಅದರ ವೆಚ್ಚದ ಅರಿವಿದ್ದ ಅವರಿಗೆ ಇತರೆ ಮಕ್ಕಳಿಗೆ ಇದು ಸಿಗುತ್ತಿಲ್ಲ ಎಂಬ ದುಃಖವೂ ಇತ್ತು. ಖರ್ಚನ್ನು ಲೆಕ್ಕಿಸದೆ ಅವರು ದೀಪುವಿನ ಆರೈಕೆ, ಚಿಕಿತ್ಸೆ ಮತ್ತು ಶಿಕ್ಷಣಕ್ಕಾಗಿ ತಮ್ಮ ಸಂಪಾದನೆಯ ಬಹುಭಾಗವನ್ನು ಖರ್ಚು ಮಾಡಿದರು. ದೀಪುವಿನ ರಕ್ತವರ್ಗಾವಣೆ ಚಿಕಿತ್ಸೆ ನಡೆಯುವಾಗ ಆತನ ಪಕ್ಕದಲ್ಲೇ ತಾತಯ್ಯ ಇರುತ್ತಿದ್ದರು.ಮೊಮ್ಮಗನನ್ನು ಅಪ್ಪಿಕೊಳ್ಳುತ್ತ, ಸ್ಪರ್ಶಿಸುತ್ತ ಅವನ ಎಲ್ಲಾ ನೋವುಗಳನ್ನೂ ಹಂಚಿಕೊಳ್ಳಲು ಪ್ರಯತ್ನಿಸುವಂತೆ ಕುಳಿತಿರುತ್ತಿದ್ದರು. ಮೊಮ್ಮಗನ ರಾಗಕ್ಕೆ ಅಜ್ಜ ನರ್ತಿಸುತ್ತಿದ್ದರು. ಮಸಾಲೆ ದೋಸೆಗೆ ಬೇಡಿಕೆಯಿಟ್ಟಾಗ ತಾತಯ್ಯ `ಆನಂದ ವಿಹಾರ~ಕ್ಕೆ ಓಡಿ ತರುತ್ತಿದ್ದರು. ದೀಪುವಿನ, ಕ್ಯಾಮೆರಾ ಉಳ್ಳ ಸೆಲ್‌ಫೋನ್ ಬೇಡಿಕೆ ಸಹ ಈಡೇರಿತ್ತು.

ದೀಪಕ್ ಓರ್ವ ಕಲಾವಿದನಾಗಿದ್ದ.ಆತ ತನ್ನ ಪೈಂಟಿಂಗ್‌ಗಳನ್ನು ಥಲಸ್ಸೇಮಿಯಾ ವಾರ್ಡ್‌ಗೆ ದಾನ ಮಾಡಿದ್ದ. ಚಿಕಿತ್ಸೆ ಸಂದರ್ಭದಲ್ಲಿ ಹೆಚ್ಚಿನ ರೋಗಿಗಳು ಮತ್ತು ಅವರ ಪೋಷಕರು ಖಿನ್ನರಾಗಿ ಇರುವುದು ಸಾಮಾನ್ಯ. ಆದರೆ, ದೀಪು ಮತ್ತು ಆತನ ತಾತ ಬದುಕಿನ ಬೆಳಕಿನತ್ತ ಸದಾ ಎದುರು ನೋಡುತ್ತಿದ್ದರು. ಅವರಿಬ್ಬರೂ ಒಂದೇ ಆತ್ಮ ಎರಡು ಜೀವದಂತಿದ್ದರು. ವಯಸ್ಸಿನ ಅಂತರವಿದ್ದರೂ ಇಬ್ಬರಲ್ಲಿ ಪೀಳಿಗೆಯ ಅಂತರವಿರಲಿಲ್ಲ.ರಕ್ತ ವರ್ಗಾವಣೆ ಮುಗಿದ ಕೂಡಲೇ ತಮ್ಮ ವಸ್ತುಗಳನ್ನೆಲ್ಲಾ ಜೋಡಿಸಿಕೊಂಡು ತುಮಕೂರಿಗೆ ವಾಪಸು ಹೊರಡಲು ಸಿದ್ಧರಾಗುತ್ತಿದ್ದರು. ರಕ್ತವರ್ಗಾವಣೆಯನ್ನು ತುಮಕೂರಿನಲ್ಲೇ ಮಾಡಬಹುದೆಂದು ನಾನು ಹಲವು ಬಾರಿ ಹೇಳಿದ್ದೆನಾದರೂ, ನಮ್ಮ ಮತ್ತು ವಾಣಿ ವಿಲಾಸ ಆಸ್ಪತ್ರೆಯೊಂದಿಗಿನ ಭಾವುಕ ಸಂಪರ್ಕದಿಂದ ತಾತಯ್ಯ ನನ್ನ ಮಾತನ್ನು ಲೆಕ್ಕಿಸುತ್ತಲೇ ಇರಲಿಲ್ಲ.ಆಸ್ಪತ್ರೆಯಲ್ಲಿ ರಕ್ತ ಮತ್ತು ಹಾಸಿಗೆ ಉಚಿತವಾಗಿ ಸಿಗುತ್ತಿದ್ದರೂ ಉಳಿದೆಲ್ಲಾ ಖರ್ಚುವೆಚ್ಚಗಳನ್ನು ಪೋಷಕರೇ ಭರಿಸಬೇಕಾಗಿತ್ತು.ಕೊನೆಯ ಬಾರಿಗೆ ಆಸ್ಪತ್ರೆಗೆ ದಾಖಲಾಗುವಾಗ ದೀಪು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ತಾನು ಬಿಡಿಸಿದ ವರ್ಣಚಿತ್ರಗಳ ಫೋಟೋಗಳನ್ನು ನನಗೆ ಹೆಮ್ಮೆಯಿಂದ ತೋರಿಸಿದ್ದ. ತನ್ನ ಇಪ್ಪತ್ತೆರಡನೇ ವಯಸ್ಸಿನಲ್ಲಿ ದೀಪಕ್ ಮರಣವನ್ನಪ್ಪಿದಾಗ `ಕಾರ್ಡ್ ನಂ.7~ಅನ್ನು ನೋವಿನಿಂದಲೇ ಮುಚ್ಚಿದೆವು.ದೀಪುವಿನ ಅಗಲಿಕೆಯೊಂದಿಗೆ `ತಾತ~ ಅವರನ್ನೂ ಮಿಸ್ ಮಾಡಿಕೊಂಡೆವು. ಅವರಿಗೆ ಇಲ್ಲಿಗೆ ಬರಲು ಬೇರೆ ಕಾರಣಗಳೂ ಉಳಿದಿರಲಿಲ್ಲ. ದೀಪಕ್‌ನ ಸಾವು ಮತ್ತು ತಾತಯ್ಯನ ಗೈರುಹಾಜರಿಯನ್ನು ನಿಧಾನವಾಗಿ ಮರೆಯುತ್ತಿದ್ದಾಗಲೇ ಒಂದು ತಿಂಗಳ ಬಳಿಕ ತಾತಯ್ಯ ಇದ್ದಕ್ಕಿದ್ದಂತೆ ನನ್ನ ಕೊಠಡಿಗೆ ಬಂದರು.ನನ್ನ ಜೊತೆ ಒಂದೆರಡು ಗಂಟೆ ಕುಳಿತ ಅವರು ತಮ್ಮ ಪ್ರೀತಿಯ ಮೊಮ್ಮಗನನ್ನು ನೆನಪಿಸಿಕೊಂಡರು. ದೀಪುವನ್ನು ಅಕ್ಕರೆಯಿಂದ ನೋಡಿಕೊಂಡ ದಾದಿಯರು, ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಸೇವೆಯನ್ನು ಸ್ಮರಿಸಿಕೊಂಡರು. ರೋಗಿಗಳೊಂದಿಗೆ ಅಷ್ಟೇನೂ ಹಿತಕರವಾಗಿ ನಡೆದುಕೊಳ್ಳದ ಕೆಲವು ವಿದ್ಯಾರ್ಥಿಗಳಿಗೆ ತಿಳಿಹೇಳುವಂತೆಯೂ ನನ್ನನ್ನು ಕೋರಿಕೊಂಡರು.ದೀಪುವಿನ ಇಪ್ಪತ್ತಕ್ಕೂ ಹೆಚ್ಚು ವರ್ಷದ ಆಸ್ಪತ್ರೆ ದಾಖಲೆಗಳನ್ನು ಒಂದು ಅಮೂಲ್ಯ ಸಂಗ್ರಹದಂತೆ ತಾತಯ್ಯ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದಾರೆ. ಆ ದಾಖಲೆಗಳಲ್ಲಿ ಸೇವೆಯಿಂದ ನಿವೃತ್ತರಾದ ಹಾಗೂ ನಿಧನರಾದ ವೈದ್ಯರ ಸಹಿಗಳಿವೆ. ದೊಡ್ಡ ವೈದ್ಯರಾಗಲು ಹೊರಟ ವಿದ್ಯಾರ್ಥಿಗಳ ನೆನಪುಗಳಿವೆ.ಥಲಸ್ಸೇಮಿಯಾ ಕುರಿತು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅವರಲ್ಲಿನ ಮಾಹಿತಿ ಅಮೂಲ್ಯ ಆಕರದಂತಿದೆ. ಅಷ್ಟು ಮಾತ್ರವಲ್ಲ, ಸ್ವತಃ ತಾತಯ್ಯ ಥಲಸ್ಸೇಮಿಯಾದ ನುರಿತ ತಜ್ಞರಾಗಿ ಬದಲಾಗಿದ್ದಾರೆ.ಆಸ್ಪತ್ರೆಯಿಂದ ಹೊರಡುವ ಮುನ್ನ ದೀಪುಗಾಗಿ ತಂದಿದ್ದ ತಿಂಗಳ ಔಷಧದ ಪಾಕೆಟ್ಟನ್ನು ಅವರು ನನ್ನ ಕೈಗಿತ್ತರು. ಅದನ್ನು ವಾರ್ಡ್‌ನಲ್ಲಿರುವ ಬಡ ರೋಗಿಗಳಿಗೆ ನೀಡುವಂತೆ ಮನವಿ ಮಾಡಿದರು. ಆ ಸಂದರ್ಭದಲ್ಲಿ ಅವರು ಹೇಳಿದ್ದು- `ಆತ ಹೋಗುತ್ತಾನೆ ಎಂದು ನನಗೆ ತಾನೆ ಹೇಗೆ ಗೊತ್ತಾಗಬೇಕು?~.ಬೆಂಗಳೂರಿಗೆ ಬಂದಾಗಲೆಲ್ಲಾ ಭೇಟಿ ಮಾಡುವಂತೆ ತಾತಯ್ಯ ಅವರನ್ನು ನಾನು ಕೋರಿದೆ. ಮುಖದಲ್ಲಿ ವೇದನೆ ತುಂಬಿಕೊಂಡ ಅವರು, `ನನ್ನನ್ನು ನೋಡಿದಾಗ ನಿಮಗೆ ದೀಪು ನೆನಪಿಗೆ ಬಂದು ದುಃಖವಾಗುತ್ತದೆ~ ಎಂದರು. ತಮ್ಮ ದೂರವಾಣಿ ಸಂಖ್ಯೆ ಮತ್ತು ವಿಳಾಸ ನೀಡಿ ಫೋನ್ ಮೂಲಕ ಸಂಪರ್ಕದಲ್ಲಿ ಇರೋಣ ಎಂದರು.ದೀಪುವಿನ ಸಾವಿನಿಂದಾಗಿ, ಯಾವುದೇ ಸವಾಲುಗಳಿಲ್ಲದೆ ಹಾಗೂ ಸ್ಫೂರ್ತಿಯ ಸೆಲೆಗಳಿಲ್ಲದೆ,  ತಾತಯ್ಯನವರಿಗೆ ಒಮ್ಮೆಗೇ ವಯಸ್ಸಾದಂತೆ ಕಾಣಿಸಿತು.

ಸಾವಿನೊಂದಿಗೆ ಎಲ್ಲಾ ಸಂಬಂಧಗಳೂ ಅಂತ್ಯಗೊಳ್ಳುತ್ತವೆ.

 

Post Comments (+)