ಅಯೋಧ್ಯೆ ಪ್ರಕರಣ: ಸರ್ಕಾರದ ವಾಗ್ದಾನ ಏನಾಯಿತು?

7

ಅಯೋಧ್ಯೆ ಪ್ರಕರಣ: ಸರ್ಕಾರದ ವಾಗ್ದಾನ ಏನಾಯಿತು?

ಎ.ಸೂರ್ಯ ಪ್ರಕಾಶ್
Published:
Updated:
ಅಯೋಧ್ಯೆ ಪ್ರಕರಣ: ಸರ್ಕಾರದ ವಾಗ್ದಾನ ಏನಾಯಿತು?

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಎಲ್ಲ ವಾದಿ-ಪ್ರತಿವಾದಿಗಳು ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಕೆಲವು ವಾರಗಳ ಹಿಂದೆ ಹೇಳಿದರು.

ಇಂಥದ್ದೊಂದು ಮಾತುಕತೆಯ ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಿದ್ಧವಿರುವುದಾಗಿಯೂ ಅವರು ಹೇಳಿದರು. ಈ ವಿವಾದವು ‘ಭಾವನೆಗಳು ಹಾಗೂ ಧರ್ಮಕ್ಕೆ ಸಂಬಂಧಿಸಿದ್ದು’ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ, ವಾದಿ-ಪ್ರತಿವಾದಿಗಳು ‘ತುಸು ಬಿಟ್ಟುಕೊಡಬೇಕು, ತುಸು ಪಡೆದುಕೊಳ್ಳಬೇಕು... ವಿವಾದ ಬಗೆಹರಿಸಲು ಒಂದು ಪ್ರಯತ್ನ ನಡೆಸಬೇಕು’ ಎಂದರು. ಮಾತುಕತೆ ಮೂಲಕ ವಿವಾದ ಬಗೆಹರಿಯುವುದಿಲ್ಲ ಎಂದಾದರೆ ಮಾತ್ರ, ನ್ಯಾಯಾಲಯ ಇದರಲ್ಲಿ ಮಧ್ಯಪ್ರವೇಶ ಮಾಡಬೇಕು ಎಂಬುದು ಅವರ ನಿಲುವು.ಈ ಪ್ರಕರಣ ಎಷ್ಟು ಸೂಕ್ಷ್ಮ ಎಂಬುದನ್ನು ಪರಿಗಣಿಸಿ ಹೇಳುವುದಾದರೆ, ಮುಖ್ಯ ನ್ಯಾಯಮೂರ್ತಿಯವರ ಸಲಹೆಯ ಅನುಸಾರ ಪ್ರಕರಣವನ್ನು ನ್ಯಾಯಾಲಯದ ಆವರಣದಿಂದ ಹೊರಗೆ ಒಯ್ದು, ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದೇ ಒಳಿತು. ಆದರೆ, ಸುದೀರ್ಘ ಅವಧಿಯ, ನಿಭಾಯಿಸಲು ಸಾಧ್ಯವಾಗದಂತೆ ಕಾಣುವ ಈ ಪ್ರಕರಣದ ವಿಚಾರದಲ್ಲಿ ನ್ಯಾಯಾಲಯದ ಒಳಗೆ ಹಾಗೂ ಹೊರಗೆ ಹಲವು ಸಂಗತಿಗಳು ಘಟಿಸಿವೆ.

ಹೀಗೆ ಆಗಿಹೋಗಿರುವ ವಿಚಾರಗಳು ಸಂಧಾನದ ಮೂಲಕ ಖಂಡಿತ ಬಗೆಹರಿಯವು. ಬಾಬರಿ ಮಸೀದಿಗೆ ಮೊದಲು ಅಲ್ಲಿ ಹಿಂದೂ ದೇವಸ್ಥಾನ ಅಥವಾ ಹಿಂದೂ ಧಾರ್ಮಿಕ ಕಟ್ಟಡ ಇತ್ತು ಎಂಬುದು ಸಾಬೀತಾದರೆ ಆ ಜಾಗವನ್ನು ಹಿಂದೂಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ 1994ರ ಸೆಪ್ಟೆಂಬರ್‌ನಲ್ಲಿ ಮಾಡಿದ ವಾಗ್ದಾನ ಅಂತಹ ಸಂಗತಿಗಳಲ್ಲಿ ಒಂದು.ಫಾರೂಕಿ ಪ್ರಕರಣದಲ್ಲಿ (ಡಾ.ಎಂ. ಇಸ್ಮಾಯಿಲ್ ಫಾರೂಕಿ ಮತ್ತು ಇತರರು ಹಾಗೂ ಕೇಂದ್ರ ಸರ್ಕಾರ ಮತ್ತು ಇತರರ ನಡುವಿನ ಪ್ರಕರಣ) ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ 1994ರ ಅಕ್ಟೋಬರ್‌ನಲ್ಲಿ ತೀರ್ಪು ನೀಡಿತು.ಈ ತೀರ್ಪು ನೀಡುವಾಗ ಸುಪ್ರೀಂ ಕೋರ್ಟ್‌, ರಾಷ್ಟ್ರಪತಿಯವರು ತನ್ನ ಮುಂದೆ ಇಟ್ಟಿದ್ದ ಕೆಲವು ಪ್ರಶ್ನೆಗಳನ್ನೂ ಇತ್ಯರ್ಥಪಡಿಸಿತು. ಸಂವಿಧಾನದ 143(1)ನೇ ವಿಧಿಯ ಅನುಸಾರ ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ ಮುಂದೆ ಕೆಲವು ಪ್ರಶ್ನೆಗಳನ್ನು ಹಿಂದಿನ ವರ್ಷ ಇರಿಸಿದ್ದರು.

ರಾಷ್ಟ್ರಪತಿಯವರು ಎತ್ತಿದ್ದ ಪ್ರಶ್ನೆ ಹೀಗಿತ್ತು: ‘ರಾಮ ಜನ್ಮಭೂಮಿ - ಬಾಬರಿ ಮಸೀದಿ ಕಟ್ಟಡ ಇದ್ದ ಪ್ರದೇಶದಲ್ಲಿ (ಕಟ್ಟಡದ ಒಳ ಹಾಗೂ ಹೊರ ಆವರಣವನ್ನು ಸೇರಿಸಿ) ಹಿಂದೂ ದೇವಸ್ಥಾನ ಅಥವಾ ಹಿಂದೂ ಧಾರ್ಮಿಕ ಕಟ್ಟಡ ಇತ್ತೇ?’ ಈ ಪ್ರಶ್ನೆಗೆ ಉತ್ತರಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು. ರಾಷ್ಟ್ರಪತಿಯವರು ಎತ್ತಿದ್ದ ಪ್ರಶ್ನೆ ‘ಸಂದರ್ಭದ ಅಗತ್ಯವನ್ನು ಮೀರಿದ್ದು, ಅನವಶ್ಯಕವಾಗಿದ್ದು, ಇದಕ್ಕೆ ಉತ್ತರಿಸಬೇಕಾಗಿಲ್ಲ’ ಎಂದು ಕೋರ್ಟ್‌ ಹೇಳಿತು.‘ಅಯೋಧ್ಯೆಯಲ್ಲಿನ ನಿರ್ದಿಷ್ಟ ಪ್ರದೇಶಗಳ ಸ್ವಾಧೀನ ಕಾಯ್ದೆ - 1993’ರ ಸಾಂವಿಧಾನಿಕ ಮಾನ್ಯತೆಯನ್ನು ಫಾರೂಕಿ ಪ್ರಕರಣದಲ್ಲಿ ಪ್ರಶ್ನಿಸಲಾಗಿತ್ತು. ವಿವಾದಿತ ಕಟ್ಟಡಕ್ಕೆ ಸಂಬಂಧಿಸಿದಂತೆ ವಿಚಾರಣೆಯ ಹಂತದಲ್ಲಿದ್ದ ತಕರಾರುಗಳು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಈ ಕಾಯ್ದೆಯ ಸೆಕ್ಷನ್ 4(3)ರ ಅನುಸಾರ ರದ್ದು ಮಾಡಲಾಗಿತ್ತು. ಒಟ್ಟಾರೆ ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಈ ಸೆಕ್ಷನ್‌ಅನ್ನು ರದ್ದು ಮಾಡಿತು. ಇದರ ಪರಿಣಾಮವಾಗಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆಗಳು ಪುನರಾರಂಭಗೊಂಡವು.ಮಸೀದಿಯ ನಿರ್ಮಾಣಕ್ಕೆ ಮೊದಲು ಅಲ್ಲಿ ಹಿಂದೂ ದೇವಸ್ಥಾನ ಅಥವಾ ಹಿಂದೂ ಧಾರ್ಮಿಕ ಕಟ್ಟಡ ಇತ್ತೇ ಎಂಬ ವಿಚಾರವಾಗಿ ತಕರಾರು ಮೂಡಿದೆ. ‘ಸುಪ್ರೀಂ ಕೋರ್ಟ್‌ನಿಂದ ಅಭಿಪ್ರಾಯ ಪಡೆದು ಈ ತಕರಾರು ಇತ್ಯರ್ಥಪಡಿಸಲಾಗುವುದು’ ಎಂದು ಸರ್ಕಾರ ಹೇಳುತ್ತಿದೆ ಎಂಬ ಮಾತುಗಳು ರಾಷ್ಟ್ರಪತಿಯವರು ಎತ್ತಿದ್ದ ಪ್ರಶ್ನೆಗಳಲ್ಲಿ ಅಡಕವಾಗಿದ್ದವು. ಇವು ಕೇವಲ ಅಕಾಡೆಮಿಕ್ ಪ್ರಶ್ನೆಗಳು, ಸಾಂವಿಧಾನಿಕ ವಿಚಾರವೇನೂ ಇದರಲ್ಲಿ ಇಲ್ಲ ಎಂದು ಮುಸ್ಲಿಂ ಹಿತಾಸಕ್ತಿಗಳ ಪರ ಇದ್ದವರು ರಾಷ್ಟ್ರಪತಿಯವರ ಪ್ರಶ್ನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.ಈ ಬಗ್ಗೆ ಪ್ರತಿಹೇಳಿಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌, ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು. ಕೋರ್ಟ್‌ ಸೂಚನೆಗೆ ಪ್ರತಿಯಾಗಿ ಸಾಲಿಸಿಟರ್ ಜನರಲ್ ಅವರು ಕೇಂದ್ರ ಸರ್ಕಾರದ ಪರವಾಗಿ 1994ರ ಸೆಪ್ಟೆಂಬರ್ 14ರಂದು ಲಿಖಿತ ಹೇಳಿಕೆ ಸಲ್ಲಿಸಿದರು. ಕೋರ್ಟ್‌ ನೀಡುವ ಅಭಿಪ್ರಾಯವನ್ನು ಕೇಂದ್ರ ಸರ್ಕಾರವು ‘ಅಂತಿಮ, ಪಾಲಿಸಲೇಬೇಕಾಗಿದ್ದು’ ಎಂಬುದಾಗಿ ಪರಿಗಣಿಸುತ್ತದೆ ಎಂದು ಸಾಲಿಸಿಟರ್ ಜನರಲ್ ಹೇಳಿದರು.

‘ಸುಪ್ರೀಂ ಕೋರ್ಟ್‌ ನೀಡುವ ಅಭಿಪ್ರಾಯವು ಸಮುದಾಯಗಳ ಪಾಲಿಗೆ ಮಾರ್ಗದರ್ಶನ ನೀಡುವಂತೆ ಇರುತ್ತದೆ. ಕೋರ್ಟ್‌ ಇತ್ಯರ್ಥಪಡಿಸುವ ವಾಸ್ತವ ಸಂಗತಿಗಳ ವಿಚಾರವಾಗಿ ಸಮುದಾಯಗಳು ಭಿನ್ನಾಭಿಪ್ರಾಯ ತಳೆಯುವುದಿಲ್ಲ’ ಎಂಬ ವಿಶ್ವಾಸ ಕೂಡ ಆಗ ಕೇಂದ್ರ ಸರ್ಕಾರಕ್ಕೆ ಇತ್ತು.ಇದಕ್ಕಿಂತ ಮುಖ್ಯವಾಗಿ, ಸಾಲಿಸಿಟರ್ ಜನರಲ್ ಅವರು, ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸುವ ಯತ್ನಕ್ಕೆ ಫಲ ಸಿಗದಿದ್ದರೆ, ಸುಪ್ರೀಂ ಕೋರ್ಟ್ ನೀಡುವ ಅಭಿಪ್ರಾಯಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ಎರಡೂ ಸಮುದಾಯಗಳನ್ನು ಸಮಾನವಾಗಿ ಕಾಣಲಿದೆ ಎಂದು ಹೇಳಿದ್ದರು.

‘ರಾಷ್ಟ್ರಪತಿಯವರು ಎತ್ತಿರುವ ಪ್ರಶ್ನೆಗೆ ಹೌದು ಎಂಬ ಉತ್ತರ ಬಂದರೆ, ಅಂದರೆ ಧ್ವಂಸಗೊಂಡ ಕಟ್ಟಡದ ನಿರ್ಮಾಣಕ್ಕೂ ಮೊದಲು ಅಲ್ಲಿ ಹಿಂದೂ ದೇವಸ್ಥಾನ, ಕಟ್ಟಡ ಇದ್ದಿದ್ದರೆ, ಸರ್ಕಾರದ ಕ್ರಮವು ಹಿಂದೂ ಸಮುದಾಯದ ಆಕಾಂಕ್ಷೆಗಳಿಗೆ ಅನುಗುಣವಾಗಿ ಇರುತ್ತದೆ.

ರಾಷ್ಟ್ರಪತಿಯವರ ಪ್ರಶ್ನೆಗೆ ಇಲ್ಲವೆಂಬ ಉತ್ತರ ಬಂದರೆ, ಅಂದರೆ ಅಲ್ಲಿ ಹಿಂದೂ ದೇವಸ್ಥಾನ, ಕಟ್ಟಡ ಇರಲಿಲ್ಲ ಎಂದಾದರೆ, ಆಗ ಸರ್ಕಾರವು ಮುಸ್ಲಿಂ ಸಮುದಾಯದ ಆಕಾಂಕ್ಷೆಗಳಿಗೆ ಅನುಗುಣವಾಗಿ ಕ್ರಮ ಕೈಗೊಳ್ಳುತ್ತದೆ’ ಎಂದಿದ್ದರು. ಸಾಲಿಸಿಟರ್ ಜನರಲ್ ನೀಡಿದ ಈ ಹೇಳಿಕೆಯನ್ನು ಕೋರ್ಟ್‌ ದಾಖಲಿಸಿಕೊಂಡಿತು.ಬಾಬರಿ ಕಟ್ಟಡದ ಅಡಿಯಲ್ಲಿ ದೇವಸ್ಥಾನ ಇದ್ದಿದ್ದು ಸಾಬೀತಾದರೆ  ಆ ಜಾಗವನ್ನು ಹಿಂದೂಗಳಿಗೆ ಸ್ವಯಂಪ್ರೇರಿತವಾಗಿ ಹಸ್ತಾಂತರ ಮಾಡಲಾಗುವುದು ಎಂದು ಮುಸ್ಲಿಂ ನಾಯಕರು ಹೇಳಿದ್ದರು. ಹಾಗಾಗಿ ನರಸಿಂಹ ರಾವ್ ನೇತೃತ್ವದ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಈ ವಾಗ್ದಾನ ನೀಡಿತು. ರಾಷ್ಟ್ರಪತಿಯವರು ಎತ್ತಿದ್ದ ಪ್ರಶ್ನೆಗೆ ಉತ್ತರ ದೊರೆತರೆ ಉಳಿದೆಲ್ಲ ವಿಚಾರಗಳು ತೃಪ್ತಿಕರ ರೀತಿಯಲ್ಲಿ ಬಗೆಹರಿಯುತ್ತವೆ ಎಂದು ಸರ್ಕಾರ ಭಾವಿಸಿತ್ತು.ಆದರೆ, ಈ ಪ್ರಶ್ನೆಗೆ ಉತ್ತರಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು. ವಿವಾದಿತ ಜಾಗದಲ್ಲಿ ಉತ್ಖನನ ನಡೆಸಲು ಅಲಹಾಬಾದ್ ಹೈಕೋರ್ಟ್‌ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಆದೇಶಿಸಿತು. ವಿಸ್ತೃತವಾಗಿ ತನಿಖೆ ನಡೆಸಿದ ಎಎಸ್‌ಐ, ‘ಒಟ್ಟಾರೆಯಾಗಿ ಗಮನಿಸಿದರೆ, ವಿವಾದಿತ ಕಟ್ಟಡದ ಅಡಿಯಲ್ಲಿದ್ದ ಬೃಹತ್ ಕಟ್ಟಡದ ಪುರಾತತ್ವ ಸಾಕ್ಷ್ಯಗಳನ್ನು ಪರಿಗಣಿಸಿದರೆ, ಹತ್ತನೆಯ ಶತಮಾನದಿಂದ ಆರಂಭಿಸಿ ವಿವಾದಿತ ಕಟ್ಟಡ ನಿರ್ಮಾಣವಾಗುವವರೆಗಿನ ರಾಚನಿಕ ಹಂತಗಳ ನಿರಂತರತೆಯನ್ನು ಗಮನಿಸಿದರೆ, ಶಿಲೆ, ಅಲಂಕೃತ ಇಟ್ಟಿಗೆಗಳು ಹಾಗೂ ವಿರೂಪಗೊಂಡ ಗಂಡು-ಹೆಣ್ಣಿನ ಮೂರ್ತಿಯನ್ನು ಪರಿಗಣಿಸಿದರೆ, ಇವು ಉತ್ತರ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವ ಗುಣಲಕ್ಷಣಗಳಿರುವ ಅವಶೇಷಗಳನ್ನು ಸೂಚಿಸುತ್ತವೆ’ ಎಂದು ವರದಿ ನೀಡಿತು.ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ, ರಾಷ್ಟ್ರಪತಿಯವರು ಎತ್ತಿದ್ದ ಪ್ರಶ್ನೆಗೆ ಎಎಸ್‌ಐ ವರದಿಯು ನಿರ್ಣಾಯಕ ಉತ್ತರ ನೀಡಿದೆ. ಭಾರಿ ಪ್ರಮಾಣದ ಸಾಕ್ಷ್ಯಗಳನ್ನು ಗಮನಿಸಿ,  ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್‌ನ ಮೂವರು ನ್ಯಾಯಮೂರ್ತಿಗಳು ಎಎಸ್‌ಐ ವರದಿಯ ಆಧಾರದಲ್ಲಿ, ವಿವಾದಿತ ಕಟ್ಟಡದ ಅಡಿಯಲ್ಲಿ ಹಿಂದೂ ದೇವಸ್ಥಾನ ಇತ್ತು ಎಂಬ ನಿರ್ಣಯಕ್ಕೆ ಬಂದರು.ಸರ್ಕಾರ, ಸುಪ್ರೀಂ ಕೋರ್ಟ್‌ಗೆ ನೀಡಿದ್ದ ಮಹತ್ವದ ವಾಗ್ದಾನ, ವಿವಾದಿತ ಕಟ್ಟಡದ ಅಡಿಯಲ್ಲಿ ದೇವಸ್ಥಾನ ಇತ್ತು ಎಂಬ ಬಗ್ಗೆ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ ದೊಡ್ಡ ಪ್ರಮಾಣದ ಪುರಾತತ್ವ ಹಾಗೂ ವೈಜ್ಞಾನಿಕ ಆಧಾರಗಳು ಮತ್ತು ಆ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳ ಅಭಿಪ್ರಾಯಗಳು ಕಣ್ಣೆದುರು ಇರುವ ಸತ್ಯಗಳು. ಇವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಮುಂದಾಗಬಹುದಾದ ಇತ್ಯರ್ಥದ ವೇಳೆ ಇವೆಲ್ಲವೂ ಕೇಂದ್ರ ಸ್ಥಾನದಲ್ಲಿ ನಿಲ್ಲುತ್ತವೆ. ಆದರೆ, ನ್ಯಾಯಮೂರ್ತಿ ಖೇಹರ್ ಹೇಳಿದಂತೆ, ಇದನ್ನು ಮಾತುಕತೆ ಮೂಲಕ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದು ಉತ್ತಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry