ಅರಣ್ಯ ನಿರ್ವಹಣೆಗೆ ಅಗತ್ಯವಿದೆ ಮಹಿಳಾ ಸಂವೇದನೆ

7

ಅರಣ್ಯ ನಿರ್ವಹಣೆಗೆ ಅಗತ್ಯವಿದೆ ಮಹಿಳಾ ಸಂವೇದನೆ

ಆರ್. ಇಂದಿರಾ
Published:
Updated:
ಅರಣ್ಯ ನಿರ್ವಹಣೆಗೆ ಅಗತ್ಯವಿದೆ ಮಹಿಳಾ ಸಂವೇದನೆ

ಅರಣ್ಯವಾಸಿ ಮಹಿಳೆಯರೊಡನೆ ನನಗೆ ಸಂಪರ್ಕವೇರ್ಪಟ್ಟದ್ದು ಸುಮಾರು ಹದಿನೈದು ವರ್ಷಗಳ ಹಿಂದೆ ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಹುದುಗಿರುವ ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮ ಡೇರಿಯಾಕ್ಕೆ ನನ್ನ ಸಂಶೋಧನಾ ಕಾರ್ಯದ ಅಂಗವಾಗಿ ಪ್ರಥಮವಾಗಿ ಭೇಟಿಯಿತ್ತಾಗ. ಅರಣ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ವಹಿಸಬಹುದಾದ ಪಾತ್ರ ಹಾಗೂ ವಾಸ್ತವದಲ್ಲಿ ಅವರ ಭಾಗವಹಿಸುವಿಕೆಯ ಸ್ವರೂಪ ಎಂಬ ಎರಡು ವಿಷಯಗಳನ್ನು ಕುರಿತ ಅಧ್ಯಯನವನ್ನು ಕೈಗೊಳ್ಳಲು ನಾನು ಪಯಣ ಬೆಳೆಸಿದ್ದು ಮೈಸೂರಿನಿಂದ ಸುಮಾರು 475 ಕಿಲೋಮೀಟರ್ ದೂರದಲ್ಲಿರುವ ಜೋಯಿಡಾ ತಾಲೂಕಿನಲ್ಲಿರುವ ಈ ಗ್ರಾಮದತ್ತ.ನನ್ನ ಸಂಶೋಧನೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗೊಳ್ಳಲು ಮೂಲ ಪ್ರೇರಣೆಯೆಂದರೆ ಇಡೀ ಜಿಲ್ಲೆಯನ್ನು ಆವರಿಸಿರುವ ದಟ್ಟ ಕಾಡುಗಳು, ಅವುಗಳಲ್ಲಿ ಹುದುಗಿರುವ ಅಪೂರ್ವ ಜೀವವೈವಿಧ್ಯ ಮತ್ತು ಈ ಅರಣ್ಯಗಳೊಡನೆ ತಮ್ಮ ಬದುಕನ್ನು ಬೆಸೆದಿರುವ ಜನ ಸಮುದಾಯಗಳು. ಅವರ ಸಹಭಾಗಿತ್ವದಿಂದ ಸುಸ್ಧಿರ ಅರಣ್ಯ ನಿರ್ವಹಣೆಯ ಪ್ರಯತ್ನಗಳು ಕೂಡ ಈ ಪ್ರದೇಶದಲ್ಲಿ ಆರಂಭವಾಗಿದ್ದರಿಂದ ಅರಣ್ಯಾಭಿವೃದ್ಧಿ ಮತ್ತು ಮಹಿಳಾಭಿವೃದ್ಧಿಗಳ ನಡುವೆ ಇರಬಹುದಾದ ಸಂಬಂಧವನ್ನು ಅರಿಯಲು ಇದು ಅತ್ಯಂತ ಪ್ರಶಸ್ತವಾದ ಕ್ಷೇತ್ರವೆನಿಸಿತ್ತು.ಸಂಶೋಧನಾ ಕ್ಷೇತ್ರಾಧ್ಯಯನ ಪ್ರಾರಂಭವಾಗುವುದಕ್ಕೆ ಮುನ್ನ ಸ್ಧಳೀಯ ಸಮುದಾಯಗಳೊಡನೆ ಸಂಪರ್ಕ ಸೇತುವೆಯನ್ನು ಬೆಸೆಯುವುದು ಸಾಮಾಜಿಕ ಸಂಶೋಧಕರ ಮೊದಲ ಕರ್ತವ್ಯ. ಸ್ನೇಹಿತರೊಬ್ಬರೊಡನೆ ಡೇರಿಯಾಗೆ ಹೋಗಿ ಊರ ಪ್ರಮುಖರೊಡನೆ (ಆಗ ಅಲ್ಲಿದ್ದವರೆಲ್ಲಾ ಪುರುಷರೇ) ನನ್ನ ಭೇಟಿಯ ಉದ್ದೇಶಗಳನ್ನು ಅವರಿಗೆ ವಿವರಿಸಲಾರಂಭಿಸಿದಾಗ ಅಲ್ಲಿದ್ದ ಕೆಲ ಹಿರಿಯರಿಂದ ನನಗೆ ಮೊದಲು ಎದುರಾದದ್ದು ಅನುಮಾನ ಮತ್ತು ಅಸಮಾಧಾನಗಳಿಂದ ಕೂಡಿದ ಪ್ರಶ್ನೆ ಮತ್ತು ಪ್ರತಿಭಟನೆಗಳು.ನಾನು ಅಲ್ಲಿನ ಮಹಿಳೆಯರನ್ನು ಭೇಟಿ ಮಾಡಿ, ಅವರೊಡನೆ ಬೆರೆತು ನನ್ನ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಅವರಿಂದ ಮಾಹಿತಿಯನ್ನು ಪಡೆಯಬೇಕೆಂದು ಹೇಳಿದ್ದೇ ಅವರ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿತ್ತು. ಮಹಿಳೆಯರಿಗೇನು ಗೊತ್ತಿದೆ ಅರಣ್ಯ ಕಾರ್ಯಕ್ರಮಗಳು ಅಥವಾ ಅರಣ್ಯದ ಬಗ್ಗೆ, ಅವರನ್ನು ಕೇಳಿ ತಿಳಿದು ಕೊಳ್ಳುವಂತಹುದೇನಿಲ್ಲ. ಮೇಲಾಗಿ ನಮ್ಮ ಸಮುದಾಯಗಳಲ್ಲಿ ಮಹಿಳೆಯರು ಹೊರಗಿನಿಂದ ಬಂದವರೊಡನೆ ಮಾತನಾಡುವ ಪ್ರತೀತಿಯೇ ಇಲ್ಲ  ಎಂದು ನನ್ನೊಡನೆ ಹಿರಿಯರೊಬ್ಬರು ವಾದಕ್ಕಿಳಿದರು.ನನ್ನ ಸಂಶೋಧನಾ ಆಶೋತ್ತರಗಳಿಗೆ ದೊರೆತ ಪ್ರಾರಂಭಿಕ ಪ್ರತಿಕ್ರಿಯೆಯಿಂದ ಉತ್ಸಾಹಕ್ಕೆ ತಣ್ಣೀರೆರಚಿದಂಥ ಭಾವನೆ ಮೂಡಿತು. ಇದು ಸಾಮಾಜಿಕ ಸಂಶೋಧಕರಿಗೆ ಸಾಮಾನ್ಯವಾದ ಒಂದು ಅನುಭವವಾದ್ದರಿಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ನಾನು ಮುಂದುವರೆಸಿದೆ. ಅವರಿಗೆ ನಮ್ಮ ಕಾರ್ಯದ ಬಗ್ಗೆ ನಂಬಿಕೆ ಮೂಡುವಂಥ, ಅದರ ಪ್ರಾಮುಖ್ಯತೆಯನ್ನು ಅವರು ಒಪ್ಪಿಕೊಳ್ಳುವಂಥ ವಾತಾವರಣವನ್ನು ಕಾಲಕ್ರಮೇಣ ಊರಿನ ಕೆಲ ಯುವಕರ ಬೆಂಬಲದಿಂದ ಸೃಷ್ಟಿಸಲು ಸಾಧ್ಯವಾಯಿತು.ದಿನಗಳುರುಳಿದಂತೆ ನಮ್ಮ ಮತ್ತು ಅವರ ನಡುವೆ ಇದ್ದ ದೂರಗಳು ಸರಿದು, ಅಲ್ಲಿನ ಮಹಿಳೆಯರು ಮನೆಯಿಂದ ಹೊರಬಂದು ನಮ್ಮಡನೆ ಮುಕ್ತವಾಗಿ ಮಾತನಾಡಲಾರಂಭಿಸಿದರು. ಜೋಯಿಡಾ ತಾಲೂಕಿನ ಬೇರೆ ಬೇರೆ ಗ್ರಾಮಗಳನ್ನೂ ಸಂಶೋಧನಾ ವ್ಯಾಪ್ತಿಯೊಳಗೆ ಸೇರಿಸಿಕೊಂಡು ನಮ್ಮ  ಕ್ಷೇತ್ರಾಧ್ಯಯನವನ್ನು ಮುಂದುವರೆಸಿದ್ದರಿಂದ ಅರಣ್ಯವಾಸಿ ಮಹಿಳೆಯರು ಮತ್ತು ಅರಣ್ಯದೊಡನೆ ಅವರ ಸಂಬಂಧವನ್ನು ಕುರಿತ ಸ್ಪಷ್ಟ ಚಿತ್ರವೊಂದು ನಮ್ಮ ಮುಂದೆ ಮೂಡುತ್ತಾ ಹೋಯಿತು. ಅದರ ಜೊತೆಜೊತೆಗೇ ಅರಣ್ಯಾಭಿವೃದ್ಧಿ ವ್ಯವಸ್ಥೆಯಲ್ಲಿ ಮಹಿಳೆಯರು ಯಾವ ಸ್ಥಾನದಲ್ಲಿದ್ದಾರೆ ಎಂಬುದರ ಬಗ್ಗೆಯೂ ಅರಿವು ಬೆಳೆಯುತ್ತಾ ಹೋಯಿತು.ಅರಣ್ಯಾವಲಂಬಿತ ಮಹಿಳೆಯರ ಬದುಕಿನ ವಾಸ್ತವಗಳು ಹಾಗೂ ಅನುಭವಗಳ ಚಿತ್ರಣ ನಮ್ಮ ಮುಂದೆ ತೆರೆದುಕೊಳ್ಳುತ್ತಾ ಹೋದ ಹಾಗೆಲ್ಲ, ಅನೇಕರಿಂದ ವೈಭವೀಕರಿಸಲ್ಪಡುವ  ಬುಡಕಟ್ಟು ಬದುಕು  ನಮ್ಮ ಸಮಾಜದ ಇತರ ಪುರುಷಪ್ರಧಾನ ವ್ಯವಸ್ಥೆಗಳಿಗಿಂತ ಹೆಚ್ಚು ಭಿನ್ನವಾಗೇನೂ ಇಲ್ಲ ಎಂಬ ಸತ್ಯ ಹೆಚ್ಚು ಹೆಚ್ಚು ಸ್ಥಾಪಿತವಾಗುತ್ತಾ ಹೋಯಿತು.ಅರಣ್ಯಾಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೃಷ್ಟಿಯಾದ ವ್ಯವಸ್ಥೆಯಲ್ಲಿಯೂ ಮಹಿಳೆಯರಿಗೆ ನೀಡಿರುವ ಪಾತ್ರ ಹೆಚ್ಚು ಕಡಿಮೆ ಅಲಂಕಾರಿಕ. ಗ್ರಾಮ ಅರಣ್ಯ ಸಮಿತಿಗಳಲ್ಲಾಗಲಿ, ಈಗಿರುವ ಪರಿಸರಾಭಿವೃದ್ಧಿ ಸಮಿತಿಗಳಲ್ಲಾಗಲಿ ಕಡ್ಡಾಯವಾಗಿ ಮಹಿಳಾ ಪ್ರಾತಿನಿಧ್ಯ ಇರಲೇಬೇಕಾದ್ದರಿಂದ ನಿಗದಿತವಾದ ಸ್ಥಾನಗಳಲ್ಲಿ ಮಹಿಳೆಯರನ್ನು ತರಲಾಗಿದೆಯೇ ಹೊರತು ಬಹುತೇಕ ಸಂಸ್ಥೆಗಳಲ್ಲಿ ಅವರ ಸಕ್ರಿಯ ಸಹಭಾಗಿತ್ವ ಇಲ್ಲವೇ ಇಲ್ಲ. ಇವರಲ್ಲನೇಕರಿಗೆ ತಮ್ಮ ಜವಾಬ್ದಾರಿಗಳ ಬಗ್ಗೆಯಾಗಲಿ, ಹಕ್ಕುಗಳ ಬಗ್ಗೆಯಾಗಲಿ ಅರಿವೂ ಇಲ್ಲ, ಅವರಿಗೆ ಅದನ್ನು ಮೂಡಿಸಬೇಕೆಂಬ ಹಂಬಲವಾಗಲಿ, ಬದ್ಧತೆಯಾಗಲಿ ಪುರುಷಪ್ರಧಾನ ಮೌಲ್ಯಗಳಿಂದ ಆವೃತ್ತವಾಗಿರುವ ಆಡಳಿತಾತ್ಮಕ ಮತ್ತು ಸಾಮಾಜಿಕ ವ್ಯವಸ್ಥೆಗಳಲ್ಲಿ ಹೆಚ್ಚು ಕಡಿಮೆ ಕಾಣಸಿಗುತ್ತಿಲ್ಲ.ಅರಣ್ಯವನ್ನು ನಿರ್ವಹಿಸಿ - ರಕ್ಷಿಸುವ ಕಾರ್ಯ ಯೋಜನೆಗಳಲ್ಲಿ ಮಹಿಳೆಯರು ಬಹು ಮಟ್ಟಿಗೆ ಅಗೋಚರರು. ಅವರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸ್ಧಾನ ನೀಡಲು ವ್ಯವಸ್ಥೆಗಳಲ್ಲಿ ಕಾತುರತೆಯಾಗಲಿ, ಕಾಳಜಿಗಳಾಗಲಿ ಅಲ್ಲೊಂದೆಡೆ ಇಲ್ಲೊಂದೆಡೆ ಮಾತ್ರ ಕಾಣಸಿಗುವುದು. ಆದರೆ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಕೆಲಸದಲ್ಲಿ ಮಾತ್ರ ಮಹಿಳೆಯರನ್ನು ಕೂಲಿಯಾಳುಗಳಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪುರುಷರು ಕೂಲಿ ಕೆಲಸಗಳನ್ನರಸಿ ಇತರ ಸ್ಥಳಗಳಿಗೆ ವಲಸೆ ಹೋಗುವುದರಿಂದಲೂ, ಅವರನ್ನು ಕೆಲಸಕ್ಕೆ ತೆಗೆದುಕೊಂಡರೆ ಹೆಚ್ಚಾಗಿ ಕೂಲಿಯನ್ನು ನೀಡಬೇಕಾಗಿರುವುದರಿಂದಲೂ ತಮ್ಮತಮ್ಮ ಊರುಗಳಲ್ಲೇ ಉಳಿಯುವ ಮಹಿಳೆಯರು ಇಂಥ ಕೆಲಸಗಳಿಗೆ ಒಂದು ಸಿದ್ಧ ಕೂಲಿ ಕಾರ್ಮಿಕ ವರ್ಗವಾಗಿ ಲಭ್ಯವಾಗುತ್ತಾರೆ. ಅವರಿಗೆ ಉದ್ಯೋಗ ನೀಡುವ ನೆಪದಲ್ಲಿ ಹೊಸದೊಂದು ಬಗೆಯ ಶೋಷಣೆ ಪ್ರಾರಂಭವಾಗಿದೆ.ಮಹಿಳೆಯರನ್ನು ದುಡಿಮೆಗಾರರಾಗಿ ಒಪ್ಪಿಕೊಳ್ಳುವ ವ್ಯವಸ್ಥೆಗೆ ಅವರ ಅನುಭವವನ್ನು ಬಳಸಿಕೊಂಡು ಅರಣ್ಯ ರಕ್ಷಣೆ ಮಾಡಲು ಆಗುವುದಿಲ್ಲವೇಕೆ? ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಅರಣ್ಯ ಭೂಮಿಯ ವ್ಯಾಪ್ತಿ ಇಳಿಮುಖವಾಗುತ್ತಿದ್ದು ಇದರ ಬಗ್ಗೆ ಕಳವಳವನ್ನು ವ್ಯಕ್ತ ಪಡಿಸುತ್ತಿರುವವರಲ್ಲಿ ಎಷ್ಟು ಮಂದಿ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ?ಈಗ ಚಾಲ್ತಿಯಲ್ಲಿರುವ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಡ ಅನೇಕ ಕಡೆಗಳಲ್ಲಿ ಅರಣ್ಯವಾಸಿ ಮಹಿಳೆಯರಿಗೆ ನ್ಯಾಯ ದೊರೆಯುತ್ತಿಲ್ಲ. ಈ ಯೋಜನೆಯಡಿಯಲ್ಲಿ ತಮಗೆ ದಕ್ಕಬೇಕಾದ ಉದ್ಯೋಗಾವಕಾಶಗಳು ಮತ್ತು ಸಲ್ಲಬೇಕಾದ ವೇತನದ ಬಗ್ಗೆ ಅನೇಕ ಮಹಿಳೆಯರಿಗೆ ಅರಿವೂ ಇಲ್ಲ, ಮಾಹಿತಿಯೂ ಇಲ್ಲ. ಕೆಲವೆಡೆಗಳಲ್ಲಂತೂ ಸ್ಥಳೀಯ ರಾಜಕೀಯ ಸಂಸ್ಥೆಗಳ ಪ್ರಬಲ ಶಕ್ತಿಗಳು ಮಹಿಳೆಯರಿಗೆ ಸಲ್ಲಬೇಕಾದ ಹಣವನ್ನು ಕೂಡ ಅವರ ಅಜ್ಞಾನ ಮತ್ತು ಅನಕ್ಷರಸ್ಧ ಸ್ಧಿತಿಗಳನ್ನು ದುರ್ಬಳಕೆ ಮಾಡಿಕೊಂಡು ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.ಮಹಿಳೆಯರಿಗೆ ಸೂಕ್ತ ವೇದಿಕೆಯನ್ನು ನೀಡಿ ಅವರ ಧ್ವನಿಗಳನ್ನು ಹತ್ತಿಕ್ಕದೇ ಹೋದರೆ ಈಗಿರುವ ಕಾರ್ಯಕ್ರಮಗಳನ್ನೇ ಹೇಗೆ ಅರಣ್ಯ ಸ್ನೇಹಿಯಾಗಿಸಬಹುದು ಎಂಬುದನ್ನು ಅಧಿಕಾರಾರೂಢ ವ್ಯವಸ್ಥೆ ಮನಗಂಡಿಲ್ಲವೆಂಬುದು ವಿಷಾದನೀಯ. ನಮ್ಮ ಸಂಶೋಧನಾ ಸಂಯೋಜನೆಯ ಆಶ್ರಯದಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಕಾರ್ಯಕ್ರಮವೊಂದರಲ್ಲಿ ಅರಣ್ಯದಲ್ಲಿ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆಗಾಗಿ ಪರವಾನಗಿಯನ್ನು ನೀಡುವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿತ್ತು. 

ಈ ಚರ್ಚೆಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ಅಲ್ಲಿಗೆ ಆಗಮಿಸಿದ್ದ ಅರಣ್ಯ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದ ಮಾತುಗಳು ಸಂಬಂಧಿಸಿದವರ ಮನಸ್ಸನ್ನು ತೆರೆಸುವಂತಾಗಬೇಕು - ಸ್ಥಳೀಯ ಸಮುದಾಯದ ಮಹಿಳೆಯರಿಗೆ ನೀವು ಕಾಡಿನಲ್ಲಿ ಬೆಳೆಯುವ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಅನುಮತಿ ನೀಡಿದರೆ, ಬಡವರಿಗೆ ಆದಾಯದ ಮೂಲವೊಂದನ್ನು ತೆರೆದಂತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಯಾವ ಗಿಡವನ್ನು ಯಾವಾಗ ಮತ್ತು ಹೇಗೆ ತೆಗೆಯಬೇಕೆಂಬ ಅರಿವು-ಅನುಭವ ಮತ್ತು ಅರಣ್ಯವನ್ನು ನಮ್ಮ ಮಕ್ಕಳಿಗಾಗಿ ಉಳಿಸಿ ಹೋಗಬೇಕೆಂಬ ಕಾಳಜಿಗಳೆರಡೂ ನಮಗಿವೆ. ಆದರೆ ಹೊರಗಿನವರಿಗೆ ಅರಣ್ಯದ ಬಗ್ಗೆ ಯಾವ ಭಾವನಾತ್ಮಕ ಸಂಬಂಧವಿದೆ? ಅವರ ಏಕೈಕ ಗುರಿ ಲಾಭಗಳಿಕೆ. ಇದನ್ನು ತಿಳಿದಿದ್ದರೂ ಮಹಿಳೆಯರ ಸ್ಧಳೀಯ ಜ್ಞಾನವನ್ನು ಬಳಸಿಕೊಂಡು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು ಅಭಿವೃದ್ಧಿ ವ್ಯವಸ್ಥೆಯಲ್ಲಿ ಅವಕಾಶಗಳಿದ್ದರೂ ಲಿಂಗ ಸೂಕ್ಷ್ಮತೆಯ ಅಭಾವದಿಂದ ಅಂಥ ಪ್ರಯತ್ನಗಳು ನಡೆದಿರುವುದೇ ವಿರಳ.ಹಾಲಿ ಉತ್ತರ ಕನ್ನಡದ ಅನೇಕ ಕಾಡುಗಳಲ್ಲಿ ಕಿರು ಅರಣ್ಯ ಉತ್ಪನ್ನ ಸಂಗ್ರಹಣೆಗೆ ನೀಡಿರುವ ಪರವಾನಗಿಯಿಂದ ಅರಣ್ಯಕ್ಕೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಇದಕ್ಕೆ ನಿದರ್ಶನವಾಗಿ ಸೀಗೆಕಾಯಿಯನ್ನೇ ತೆಗೆದುಕೊಳ್ಳಬಹುದು. ಸೀಗೆ ಬಳ್ಳಿ ಮುಳ್ಳುಗಳಿಂದ ಆವೃತ್ತವಾಗಿರುವುದರಿಂದ, ಅದರಿಂದ ಸೀಗೆಕಾಯಿ ತೆಗೆಯಲು ವ್ಯವಧಾನ ಹಾಗೂ ಸಮಯ ಎರಡೂ ಅಗತ್ಯವಿದೆ. ಆದರೆ ಎಷ್ಟು ಜನ ಗುತ್ತಿಗೆದಾರರಿಗೆ ಅಂಥ ಕಾಳಜಿಗಳಿವೆ? ಇಡೀ ಬಳ್ಳಿಯನ್ನೇ ಕಿತ್ತು ಅದರ ಜೀವಿತಾವಧಿಯನ್ನೇ ಮೊಟುಕುಗೊಳಿಸಿ ಬಿಡುತ್ತಾರೆ. ಅದೇ ಸ್ಥಳೀಯ ಸಮುದಾಯಗಳಿಗೆ ಪರವಾನಗಿ ನೀಡಿದರೆ ಅರಣ್ಯ ಸಂಪತ್ತಿನ ಸುಸ್ಥಿರ ಬಳಕೆಯಾಗುತ್ತದೆ, ತಲೆತಲಾಂತರದಿಂದ ಅದನ್ನು ಪೋಷಿಸುತ್ತಿರುವವರಿಗೆ ಜೀವನ ನಿರ್ವಹಣೆಯ ಮಾರ್ಗವೂ ತೆರೆದುಕೊಳ್ಳುತ್ತದೆ.ಮಹಿಳೆಯರಿಗೆ ಪರವಾನಗಿ ಕೊಡುವ ಮಾತಿರಲಿ, ಸ್ಥಳೀಯ ಸಮುದಾಯಗಳ ಇರುವಿಕೆಯನ್ನೇ ಲಾಭಪ್ರೇರಿತ ಅರಣ್ಯ ಉದ್ಯಮಗಳು ಅಲಕ್ಷಿಸುತ್ತಿರುವಂತಿದೆ. ಇಂಥ ಬೇಡಿಕೆಗಳು ಆಗಿಂದಾಗ್ಗೆ ಅಲ್ಲಲ್ಲಿ ವ್ಯಕ್ತವಾಗುತ್ತಿದ್ದರೂ ವ್ಯವಸ್ಥೆಯ ತಟಸ್ಧ ಸ್ಧಿತಿ ಭಯ ಹುಟ್ಟಿಸುತ್ತಿದೆ. ಹೊರಗಿನ ಗುತ್ತಿಗೆದಾರರಿಗೆ ಅರಣ್ಯ ಸಂಪತ್ತನ್ನು ಸಂಗ್ರಹಿಸಲು ಅನುಮತಿ ನೀಡಿದರೆ ಮಹಿಳೆಯರ ಮೇಲೆ ಮತ್ತೊಂದು ಪರಿಣಾಮವಾಗುತ್ತದೆ. ಅವರು ಕರೆತರುವ ಕಾರ್ಮಿಕರೆಲ್ಲಾ ಪುರುಷರೇ ಆಗಿರುವುದರಿಂದ ಅರಣ್ಯವಾಸಿ ಸಮುದಾಯಗಳ ಮಹಿಳೆಯರು ಮುಕ್ತವಾಗಿ ಅರಣ್ಯದಲ್ಲಿ ಸಂಚರಿಸಲು ಹಿಂಜರಿಯುತ್ತಿದ್ದಾರೆ. ಎಂದರೆ ಅವರೇ ಬೆಳೆಸಿ ಪೋಷಿಸಿದ ಅರಣ್ಯದಲ್ಲಿ ಅವರ ಸಂಚಲನಕ್ಕೆ ಈಗ ಅಡ್ಡಿಯುಂಟಾಗಿದೆ.

ಮಹಿಳೆಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವಂಥ ಸಾಂಸ್ಕೃತಿಕ ವ್ಯವಸ್ಧೆ ಈಗಾಗಲೇ ಅರಣ್ಯವಾಸಿ ಸಮುದಾಯಗಳಲ್ಲಿ ಜಾರಿಯಲ್ಲಿದೆ. ಈಗಂತೂ ಬಹುತೇಕ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಮನೆಯಿಂದ ಹೊರ ಹೋಗುವುದನ್ನೇ ಕಡಿಮೆ ಮಾಡುವಂಥ ಸ್ಧಿತಿಯೂ ಸೃಷ್ಟಿಯಾಗಿದೆ.

ಕೆಲವು ಅರಣ್ಯ ಪ್ರದೇಶಗಳ್ಲ್ಲಲಂತೂ ಹೊರಗಿನಿಂದ ಬರುವ ಜನರ ಪ್ರವೇಶ ಹೆಚ್ಚಾಗುತ್ತಿರುವುದು ಮತ್ತೊಂದು ಬಗೆಯ ನಕಾರಾತ್ಮಕ ಬೆಳವಣಿಗೆಗೆ ದಾರಿ ಮಾಡಿದೆ. ಹೊರಗುತ್ತಿಗೆದಾರರು ಅರಣ್ಯವನ್ನು ಕತ್ತರಿಸಿ ಕಾಲ್ದಾರಿಗಳನ್ನು ಮಾಡಿರುವುದನ್ನೇ ಬಂಡವಾಳವನ್ನಾಗಿರಿಸಿಕೊಂಡು ಮದ್ಯ ಮಾರಾಟ ಜಾಲಗಳು ಅಕ್ರಮವಾಗಿ ಮದ್ಯವನ್ನೂ ಒಳತರುತ್ತಿದ್ದು, ಅದರ ಸೇವನೆಯಿಂದ ಕೆಲ ಕುಟುಂಬಗಳಲ್ಲಿ ಮಹಿಳೆಯರ ಮೇಲೆ ಪುರುಷರು ದೌರ್ಜನ್ಯವನ್ನೆಸಗುತ್ತಿರುವಂಥ ಘಟನೆಗಳೂ ವರದಿಯಾಗಿವೆ.ಅಭಿವೃದ್ಧಿ ಅಥವಾ ಆರ್ಥಿಕ ಬೆಳವಣಿಗೆಯ ಪರಿಣಾಮಗಳನ್ನು ಮಹಿಳೆಯರ ದೃಷ್ಟಿಕೋನದಿಂದ ವಿಮರ್ಶಿಸಿದಾಗ ಅನೇಕ ಸಂದರ್ಭಗಳಲ್ಲಿ ಹೊಸ ಹೊಸ ಯೋಜನೆಗಳು ಅವರು ಈಗ ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುತ್ತವೆಂಬುದು ಅರಿವಾಗುತ್ತದೆ. ಹೆಚ್ಚು ಕಡಿಮೆ ಲಿಂಗ ಸಮಾನತೆಯ ತತ್ವಕ್ಕೆ ಬದ್ಧವಾದ ಜೀವನ ಕ್ರಮವನ್ನು ಅಳವಡಿಸಿಕೊಂಡಿದ್ದ ಅರಣ್ಯ ಸಮುದಾಯಗಳಲ್ಲಿ ಇಂದು ವಾಣಿಜ್ಯೀಕೃತ ಬದುಕು ತಂದಿಟ್ಟಿರುವ ಆಮಿಷಗಳು ಮಹಿಳೆಯರ ಕೊಡುಗೆಯನ್ನು ಗೌಣವಾಗಿಸುತ್ತಿವೆ.ಎಲ್ಲಿಯವರೆಗೂ ಅರಣ್ಯ ಭೂಮಿ ಸಾಮುದಾಯಿಕ ಆಸ್ತಿಯಾಗಿತ್ತೋ, ಅಲ್ಲಿಯವರೆಗೂ ಕುಟುಂಬದಲ್ಲಿ ಶ್ರೇಣೀಕೃತ ಸಂಬಂಧಗಳಿಗೆ ಹೆಚ್ಚು ಅವಕಾಶವಿರಲಿಲ್ಲ. ಆಹಾರಾನ್ವೇಷಣೆಲ್ಲಾಗಲಿ, ಆಹಾರದ ರಕ್ಷಣೆಲ್ಲಾಗಲಿ ಸ್ತ್ರೀಯ ಪಾತ್ರವನ್ನು ಅಲ್ಲಗಳೆಯುತ್ತಿರಲಿಲ್ಲ. ಆದರೀಗ ಭೂ ಒಡೆತನದ ಪ್ರಶ್ನೆ ಎದ್ದಿದೆ. ಖಾಸಗಿ ಆಸ್ತಿಯಾಗಿ ಪರಿವರ್ತಿತವಾಗಿರುವ ಭೂಮಿಯ ಮೇಲಿನ ಅನುವಂಶೀಯ ಹಕ್ಕು ಹೆಚ್ಚು ಕಡಿಮೆ ಗಂಡು ಸಂತಾನದ ಪಾಲಾಗಿದೆ. ರಕ್ಷಿತ ಅರಣ್ಯ ಪ್ರದೇಶಗಳು ಅಥವಾ ರಾಷ್ಟ್ರೀಯ ಉದ್ಯಾನಗಳಿಂದ ಸ್ಧಳಾಂತರಿಸುತ್ತಿರುವ ಕುಟುಂಬಗಳಿಗೆ ನೀಡುವ ಪರಿಹಾರದಲ್ಲಿಯೂ 18 ವಯಸ್ಸಿಗೆ ಮೇಲ್ಪಟ್ಟ ಗಂಡು ಮಗ ಸ್ವತಂತ್ರ ಹಕ್ಕುದಾರ. ಆದರೆ ಮಗಳಿಗೆ ಮಾತ್ರ ಆ ಹಕ್ಕಿಲ್ಲ.ಆಧುನಿಕ ಸಮಾಜ ಎಂದು ಕರೆಸಿಕೊಳ್ಳುವ ವ್ಯವಸ್ಧೆಯಲ್ಲಿ ತಾಂಡವವಾಡುತ್ತಿರುವ ಎಲ್ಲ ಪುರುಷಪ್ರಧಾನ ಮೌಲ್ಯಗಳೂ ಈ ಹೊತ್ತು ಅರಣ್ಯ ಸಮುದಾಯಗಳನ್ನು ಪ್ರವೇಶಿಸಿವೆ. ದುರದೃಷ್ಟವೆಂದರೆ ಬಹುತೇಕ ಮಹಿಳಾ ಸ್ವಸಹಾಯ ಸಂಘಗಳಾಗಲಿ, ಚುನಾಯಿತ ಮಹಿಳಾ ಪ್ರತಿನಿಧಿಗಳಾಗಲಿ ಅರಣ್ಯಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ತಮಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿಲ್ಲವೆನ್ನುವುದು. ಅರಣ್ಯ ಸಮುದಾಯಗಳ ಸ್ವಯಂ ಆಡಳಿತ ವ್ಯವಸ್ಧೆಯಲ್ಲಿ ನಾಯಕತ್ವದ ಸ್ಧಾನದಲ್ಲಿದ್ದ ಮಹಿಳೆಯರು ಇಂದು ನೇಪಥ್ಯಕ್ಕೆ ಸರಿಯುತ್ತಿದ್ದಾರೆ.ಅರಣ್ಯಾಭಿವೃದ್ಧಿಯಲ್ಲಿ ಮಹಿಳೆಯರ ಸೀಮಾಂತೀಕರಣ ಯಾವುದೇ ಒಂದು ಪ್ರದೇಶದಲ್ಲಿ ಕಂಡು ಬರುವ ಕಥೆಯಲ್ಲ. ವಿಶ್ವದಾದ್ಯಂತ ಅನೇಕ ಅರಣ್ಯ ಸಮುದಾಯಗಳಲ್ಲಿ ಅವರ ಸ್ಧಿತಿಯಲ್ಲಿ ಪಲ್ಲಟಗಳುಂಟಾಗುತ್ತಿವೆ. ಈಗಲಾದರೂ ಮಹಿಳೆಯರ ಜೀವನಾನುಭವಗಳು ಹಾಗೂ ದೃಷ್ಟಿಕೋನಗಳನ್ನು ಒಳಗೊಂಡ ಅರಣ್ಯ ನಿರ್ವಹಣಾ ಆಚರಣೆಗಳು ಅನುಷ್ಠಾನಕ್ಕೆ ಬಾರದಿದ್ದರೆ ಅರಣ್ಯಾಭಿವೃದ್ಧಿ ದೃಷ್ಟಿಯಿಂದ ಖಂಡಿತಾ ಒಳ್ಳೆಯದಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry