ಅರ್ಥದ ಪ್ರಶ್ನೆ: ಕಾಡು ಮತ್ತು ಮರ

7

ಅರ್ಥದ ಪ್ರಶ್ನೆ: ಕಾಡು ಮತ್ತು ಮರ

ಓ.ಎಲ್. ನಾಗಭೂಷಣಸ್ವಾಮಿ
Published:
Updated:
ಅರ್ಥದ ಪ್ರಶ್ನೆ: ಕಾಡು ಮತ್ತು ಮರ

ಭರ್ತೃಹರಿ ಅರ್ಥದ ಇಡಿತನದ ಬಗ್ಗೆ, ವಾಕ್ಯದ ಅಖಂಡತೆಯ ಬಗ್ಗೆ ಹೇಳಿದ ವಿಚಾರಗಳನ್ನು ನೋಡಿದೆವು (ಸಾ.ಪು, ಮೇ 12, 2012). ಬಟ್ಟೆಗೂ ಅದರ ಎಳೆಗಳಿಗೂ ಇರುವ ಸಂಬಂಧದ ಹಾಗೆ ಪದ-ವಾಕ್ಯ ಅರ್ಥದ ಸಂಬಂಧ; ಹಾಸು ಮತ್ತು ಹೊಕ್ಕು ಎಳೆಗಳನ್ನು ಬಿಡಿ ಬಿಡಿಯಾಗಿ ನೋಡಿದರೆ ಅರ್ಥಹೀನ; ಅರ್ಥದ ಬಟ್ಟೆ ಅಖಂಡ, ಮುಖ್ಯ ಅನ್ನುವುದು ಭರ್ತೃಹರಿಯ ನಿಲುವು. ಅದಕ್ಕೆ ವಿರುದ್ಧವಾದ ಚಿಂತನೆ ಪೂರ್ವ ಮೀಮಾಂಸಕರದ್ದು.ವಾಕ್ಯ ಇಡಿಯಾಗಿರುವ ಅಖಂಡವಲ್ಲ, ಅರ್ಥವೂ ಅಖಂಡವಲ್ಲ; ಕಾಡು ಎಂದರೆ ಅಲ್ಲಿರುವ ಎಲ್ಲ ಮರಗಳ ಮೊತ್ತ; ಕಾಡಿನಲ್ಲಿರುವ ಒಂದೊಂದು ಮರವೂ ಸ್ವತಂತ್ರ; ಮರಗಳು ಇಲ್ಲದೆ ಕಾಡಿಲ್ಲ. ವಾಕ್ಯವೂ ಹಾಗೆಯೇ; ವಾಕ್ಯವೆಂದರೆ ಅದರಲ್ಲಿರುವ ಎಲ್ಲ ಪದಗಳ ಮೊತ್ತ; ಒಂದೊಂದು ಪದಕ್ಕೂ ಸ್ವತಂತ್ರವಾದ ಅರ್ಥ ಇರುತ್ತದೆ; ಅದನ್ನು ಗ್ರಹಿಸದೆ ಇದ್ದರೆ ಭಾಷೆಯ ಮೂಲಕ ದೊರೆಯುವ ಜ್ಞಾನ ದೊರೆಯಲಾರದು.ಇದು ಅರ್ಥ ಚಿಂತನೆಯ ಇನ್ನೊಂದು ದಾರಿ, ಇನ್ನೊಂದು ದಿಕ್ಕು. ಇದನ್ನು ಪ್ರತಿಪಾದಿಸಿದವರು ಪೂರ್ವಮೀಮಾಂಸಕರೆಂದು ಪ್ರಸಿದ್ಧರಾಗಿರುವ ಕುಮಾರಿಲ ಮತ್ತು ಪ್ರಭಾಕರ. ಈ ಹಳಬರ ಚಿಂತನೆಗಳನ್ನಷ್ಟು ಪರಿಶೀಲಿಸೋಣ.ಮೀಮಾಂಸೆ ಅಂದರೆ ಜಿಜ್ಞಾಸೆ, ಪರೀಕ್ಷೆ. ಪೂರ್ವ ಅಂದರೆ ಸಂಹಿತೆ, ಬ್ರಾಹ್ಮಣ, ಆರಣ್ಯಕಗಳೆಂಬ ವೇದ ಮೊದಲ ಭಾಗ, ಪೂರ್ವ ಭಾಗ. ಇವು ಮೂರನ್ನೂ ಒಟ್ಟಾಗಿ ಕರ್ಮಕಾಂಡವೆಂದು ಕರೆಯುತ್ತಾರೆ. ಕೊನೆಯ ಭಾಗವಾದ ಉಪನಿಷತ್ತನ್ನು ಜ್ಞಾನಕಾಂಡವೆನ್ನುತ್ತಾರೆ. ಅವುಗಳ ಪರೀಕ್ಷೆಯನ್ನು ಉತ್ತರ ಮೀಮಾಂಸೆ ಅಥವ ವೇದಾಂತ ಅನ್ನುತ್ತಾರೆ. ಪೂರ್ವಮೀಮಾಂಸೆಗೆ ಧರ್ಮ ಜಿಜ್ಞಾಸೆ, ವೇದಾಂತಕ್ಕೆ ಬ್ರಹ್ಮ ಜಿಜ್ಞಾಸೆ ಎಂಬ ಹೆಸರುಗಳೂ ಇವೆ.ಧರ್ಮ ಅನ್ನುವುದು ಹಿಂದೆ ಇದ್ದದ್ದಲ್ಲ, ಈಗ ಇರುವುದೂ ಅಲ್ಲ, `ಧರ್ಮವು ಭವಿಷ್ಯತ್~; ಅದನ್ನು ಸಾಧಿಸಿಕೊಳ್ಳಬೇಕಾದರೆ ಮನುಷ್ಯರು ಯಾವ ಬಗೆಯ ಕ್ರಿಯೆಗಳನ್ನು ಹೇಗೆ ಮಾಡಬೇಕು ಅನ್ನುವುದನ್ನು ತಿಳಿಯಬೇಕು. ಹಾಗೆ ತಿಳಿಯಲು ಇರುವ ದಾರಿ ಭಾಷೆ ಮಾತ್ರ. ಆದ್ದರಿಂದಲೇ ಧರ್ಮಕ್ಕೆ ತಕ್ಕ ಕ್ರಿಯೆಗಳನ್ನು ವಿವರಿಸುವ ಭಾಷೆಯ ಜ್ಞಾನ ಮುಖ್ಯ. ದೇವರು, ಸ್ವರ್ಗ, ಮೋಕ್ಷ, ಇವು ಯಾವುವೂ ಪೂರ್ವಮೀಮಾಂಸೆಯ ಆಸಕ್ತಿಯಲ್ಲ.

 

`ಸರಿ~ಯಾದ ಕರ್ಮ ಅಥವ ಕ್ರಿಯೆಗಳನ್ನು ವೇದಗಳು ಹೇಳಿವೆ, ಅವನ್ನು ಸರಿಯಾಗಿ ಅರ್ಥಮಾಡಿಕೊಂಡು ಆಚರಿಸುವುದು ಹೇಗೆ ಅನ್ನುವುದನ್ನು ತಿಳಿಯಬೇಕು ಅನ್ನುವುದು ಅದರ ಗುರಿ.`ಶಬ್ದ~ವೆಂದರೆ ವೇದದ ಶಬ್ದ ಅನ್ನುವುದು ಒಂದು ಸೀಮಿತವಾದ ಅರ್ಥ, `ಭಾಷೆ~ ಅನ್ನುವುದು ಇನ್ನೊಂದು ವಿಸ್ತಾರವಾದ ಅರ್ಥ. ಪೂರ್ವ ಮೀಮಾಂಸಕರಿಗೆ ವೇದಗಳು ಸತ್ಯ, ವೇದಗಳು ಪ್ರಮಾಣ ಅನ್ನುವುದನ್ನು ಸಾಧಿಸುವ ಗುರಿ ಇತ್ತು. ಅದು ನಮಗಿಂದು ಕುತೂಹಲದ ವಿಷಯವೂ ಅಲ್ಲ, ಆಸಕ್ತಿಯ ವಿಷಯವೂ ಅಲ್ಲ, ಅಗತ್ಯವೂ ಅಲ್ಲ.ಭಾಷೆಯನ್ನು ಜ್ಞಾನದ ಪ್ರಮಾಣವೆಂದು ನಂಬಿದ್ದಾದರೆ ಆಗ ಭಾಷೆಯ ಮೂಲಕ ಜ್ಞಾನ ಹೇಗೆ ವ್ಯಕ್ತವಾಗುತ್ತದೆ, ಅದನ್ನು ತಿಳಿಯುವ ಕ್ರಮ ಯಾವುದು ಅನ್ನುವ ಪ್ರಶ್ನೆ ಸದಾ ಹೊಸತು, ಸದಾ ಪ್ರಸ್ತುತ. ಹಾಗಾಗಿ ಭಾಷೆಯ ಸ್ವರೂಪವನ್ನು ಕುರಿತ ಪೂರ್ವಮೀಮಾಂಸೆಯ ಚಿಂತನೆಗಳು ಭಾಷೆಯ ತತ್ವಶಾಸ್ತ್ರದಲ್ಲಿ ಮತ್ತೆ ಮುಖ್ಯವಾಗಿ ಕಾಣತೊಡಗಿವೆ.ವೇದಗಳು ಸೃಷ್ಟಿಯಾದದ್ದು ಕ್ರಿಪೂ 1200ರಿಂದ ಕ್ರಿಶ 1ರವರೆಗಿನ ಅವಧಿಯಲ್ಲಿ; ಇದರ ಪರಿಶೀಲನೆ ನಡೆದದ್ದು ಕ್ರಿಪೂ ಮೂರನೆಯ ಶತಮಾನದ ಜೈಮಿನಿಯ ಪೂರ್ವಮೀಮಾಂಸಾ ಸೂತ್ರಗಳಲ್ಲಿ; ಅದಕ್ಕೆ ಕ್ರಿಶ 400ರ ಸುಮಾರಿನಲ್ಲಿ ಶಬರ ವ್ಯಾಖ್ಯಾನವನ್ನು ರಚಿಸಿದ.

 

ಇದನ್ನು ಆಧಾರವಾಗಿಟ್ಟುಕೊಂಡು ಕ್ರಿಶ 7ನೆಯ ಶತಮಾನದ, ಬಹುಶಃ ಈಗಿನ ಅಸ್ಸಾಂ ಪ್ರದೇಶದ ಕುಮಾರಿಲ `ಶ್ಲೋಕವಾರ್ತಿಕ~, `ತಂತ್ರವಾರ್ತಿಕ~ ಮತ್ತು ಈಗ ಲಭ್ಯವಿಲ್ಲದ `ತುಪ್ತಿಕ~ಗಳನ್ನು ಬರೆದ, ಅವನ ಸಮಕಾಲೀನನಾಗಿದ್ದ ಪ್ರಭಾಕರ. ಇವರಿಬ್ಬರೂ ಭಾಷೆ-ಅರ್ಥ-ಜ್ಞಾನದ ಬಗ್ಗೆ ನಡೆಸಿದ ಚಿಂತನೆಗಳು ಭರ್ತೃಹರಿಯ ಚಿಂತನೆಗಳಿಗಿಂತ ಬೇರೆ ಥರದವು.ಭಾರತೀಯ ಚಿಂತಕರು ಆ ಕಾಲದಲ್ಲಿ ಪ್ರಮಾಣಗಳ ಬಗ್ಗೆ ತುಂಬ ಚರ್ಚೆ ಮಾಡುತಿದ್ದರು. ಪ್ರಮಾಣವೆಂದರೆ ಜ್ಞಾನವನ್ನು ಅಧಿಕೃತವೆಂದು ಒಪ್ಪಲು ಇರುವ ಆಧಾರ. ಪ್ರತ್ಯಕ್ಷ-ಕಣ್ಣಿಗೆ ಕಾಣುವುದು; ಅನುಮಾನ-ಊಹೆ; ಉಪಮಾನ-ಹೋಲಿಕೆ; ಆಪ್ತವಾಕ್ಯ-ನಂಬಲು ಅರ್ಹನಾದ ವ್ಯಕ್ತಿ ಹೇಳಿದ ಸಂಗತಿ; ಶಬ್ದ-ಭಾಷೆ, ಇತ್ಯಾದಿ.

 

ಬೌದ್ಧರು ಪ್ರತ್ಯಕ್ಷ, ಅನುಮಾನವನ್ನು ಮಾತ್ರ ಪ್ರಮಾಣ ಮಿಕ್ಕವೆಲ್ಲ ಈ ಎರಡರಲ್ಲೇ ಇವೆಯೆಂದರು. ಪೂರ್ವಮೀಮಾಂಸಕರು ಶಬ್ದ ಅಥವ ಭಾಷೆ ಜ್ಞಾನಕ್ಕೆ ಪ್ರಮಾಣ; ಕಣ್ಣು ಎದುರಿಗಿರುವುದನ್ನು ಮಾತ್ರ ಕಾಣಬಲ್ಲದು, ಭಾಷೆ ಆಲೋಚನೆಯನ್ನೂ, ಅಮೂರ್ತವಾದುದನ್ನೂ, ಹಿಂದೆ ಆದದ್ದು, ಈಗ ಆಗುತಿರುವುದು, ಮುಂದೆ ಆಗಬಹುದಾದ್ದು ಎಲ್ಲವನ್ನೂ ಜ್ಞಾನವಾಗಿಸಬಲ್ಲದು; ಹಾಗಾಗಿ `ಭವಿಷ್ಯತ್~ ಆಗಿರುವ ಧರ್ಮವನ್ನು ತಿಳಿಯಲು ಶಬ್ದವೇ ಪ್ರಮಾಣ, ಶಬ್ದವು ನಿತ್ಯ ಎಂದು ಹೇಳಿದ ಜೈಮಿನಿ.ಅರ್ಥದ ಬಗ್ಗೆ ಪೂರ್ವಮೀಮಾಂಸಕರ ಚಿಂತನೆಗಳನ್ನು ತೀರ ಸರಳಗೊಳಿಸಿ ಹೀಗೆ ಹೇಳಬಹುದು. ಪದಗಳಿಗೆ ಸ್ವತಂತ್ರವಾದ ಅರ್ಥವಿಲ್ಲ, ಅಸ್ತಿತ್ವವಿಲ್ಲ, ಅವು ವಾಕ್ಯದಲ್ಲಿ ಐಕ್ಯವಾಗುತ್ತವೆ, ಅರ್ಥ ಅಖಂಡವೆನ್ನುವುದು ಸರಿಯಲ್ಲ.`ಹಸು ಮೇಯುತ್ತದೆ~, `ಹಸು ಹಾಯುತ್ತದೆ~; `ಅಗಸ ತೊಳೆದಂತಿಹುದು~, `ಆಗಸ ತೊಳೆದಂತಿಹುದು~ ಅನ್ನುವ ವಾಕ್ಯಗಳನ್ನು ನೋಡಿ. ಎರಡೂ ವಾಕ್ಯ ಬೇರೆ ಬೇರೆ ಅನ್ನುವುದು ನಮಗೆ ಗೊತ್ತಾಗುವುದು ಅಲ್ಲಿರುವ ಬೇರೆ ಬೇರೆ ಪದಗಳಿಂದ ಅಲ್ಲವೇ? ಇಲ್ಲದಿದ್ದರೆ ಯಾವುದೋ ಇನ್ನೆರಡು ಪದಗಳನ್ನು ಬಳಸಬಹುದಿತ್ತಲ್ಲ! ಅಷ್ಟೇ ಅಲ್ಲ `ಮೇಯುತ್ತದೆ/ಹಾಯುತ್ತದೆ~, `ಅಗಸ/ಆಗಸ~ ಅನ್ನುವ ಪದಗಳ ಅರ್ಥ ಕೂಡ ಬೇರೆ ಅನ್ನುವುದು ಗೊತ್ತಾಗುವುದು `ಮೇ~ ಮತ್ತು `ಹಾ~, `ಅ~ ಮತ್ತು `ಆ~ ಅನ್ನುವ ಬೇರೆ ಬೇರೆ ದನಿಗಳಿಂದ.ಪದಗಳಿಗೂ ಅರ್ಥ ಇದೆ, ಪದಗಳನ್ನು ರೂಪಿಸುವ ದನಿಗಳಿಗೂ ಅರ್ಥ ಇರುತ್ತದೆ. ಪದವೊಂದರ ಕೊನೆಯ ಅಕ್ಷರ ತನ್ನ ಹಿಂದಿನ ಎಲ್ಲ ಅಕ್ಷರಗಳ ನೆನಪಿನ ಮುದ್ರಿಕೆಯನ್ನು ಹೊತ್ತು ಪದವು ಪೂರ್ಣವಾದಾಗ ಶಬ್ದ ಜ್ಞಾನ ಹುಟ್ಟುತ್ತದೆ.ಪದಕ್ಕೆ ಏನು ಅರ್ಥವೋ ಅದು ಜ್ಞಾನಕ್ಕೆ ಕಾರಣ ಅನ್ನುತ್ತಾನೆ ಕುಮಾರಿಲ. ವಾಕ್ಯವೊಂದರ ಅರ್ಥ ಅದರಲ್ಲಿರುವ ಎಲ್ಲ ಪದಗಳ ಫಲಿತ ಅನ್ನುತ್ತಾನೆ ಪ್ರಭಾಕರ.ವಾಕ್ಯ ಅಥವ ಆಲೋಚನೆಯನ್ನು ಅರ್ಥಪೂರ್ಣವಾಗಿಸುವ ಮೂರು ಅಂಶಗಳನ್ನು ಮೀಮಾಂಸಕರು ಗುರುತಿಸುತ್ತಾರೆ.1. ಆಕಾಂಕ್ಷಾ: ಅರ್ಥದ ಪೂರ್ಣತೆಗೆ ಒಂದು ಪದ ಇನ್ನೊಂದು ಪದವನ್ನು, ಇತರ ಪದಗಳನ್ನು ಬಯಸುತ್ತದೆ~. ವಾಕ್ಯದ ಅಖಂಡತೆಯು ಅದರಲ್ಲಿರುವ ಪ್ರತಿಯೊಂದು ಪದವೂ ಇತರ ಪದಗಳೊಡನೆ ಸಂಬಂಧದಿಂದ ಮೂಡುತ್ತದೆ. ಬಿಡಿ ಪದ ಪೂರ್ಣ ಅರ್ಥವನ್ನು ಹೊಮ್ಮಿಸದು. ಕೇಳುಗರು ಪದಗಳು ಜೊತೆಗೂಡಿದಾಗಷ್ಟೇ ಹೇಳುವವರ ಆಲೋಚನೆಯ ಆಕಾಂಕ್ಷೆ, ಕೇಳುವವರ ಅರ್ಥಮಾಡಿಕೊಳ್ಳಬೇಕೆಂಬ ಆಕಾಂಕ್ಷೆಗಳು ಈಡೇರುತ್ತವೆ.

 

2. ಯೋಗ್ಯತಾ: ಪದಗಳ ನಡುವೆ ಯುಕ್ತವಾದ ತಾರ್ಕಿಕ ಹೊಂದಾಣಿಕೆ ಇರಬೇಕು. ಇಲ್ಲದಿದ್ದರೆ ಅರ್ಥ ಹೊಮ್ಮುವುದಿಲ್ಲ. ಕೋತಿ, ವೋಲ್ವೋ, ಮಹಡಿ, ಮಲಗು, ಇತ್ಯಾದಿ ಯಾವ ಯಾವ ಪದಗಳೋ ಯಾವ ಯಾವ ರೀತಿಯಲ್ಲೋ ಒಟ್ಟುಗೂಡಿದರೆ ವಾಕ್ಯಕ್ಕೆ, ಅರ್ಥಕ್ಕೆ `ಯೋಗ್ಯತೆ~ ಇರುವುದಿಲ್ಲ. ಹಾಗೆಯೇ `ಬೆಂಕಿ ತಣ್ಣಗಿದೆ~ ಅನ್ನುವಂಥ ಅತಾರ್ಕಿಕ ಸಂಯೋಜನೆಗಳೂ ಯೋಗ್ಯತೆ ಇಲ್ಲದವು.3. ಆಸತ್ತಿ: ವಾಕ್ಯವೊಂದರ ಪದಗಳು ನಿರಂತರವಾಗಿ, ಸನಿಹದಲ್ಲೇ ಉಚ್ಚರಿತವಾಗಬೇಕು. ಈಗ `ಮನೆಗೆ~ ಎಂದು ಹೇಳಿ ಅರ್ಧಗಂಟೆಯ ನಂತರ `ಹೋಗುತ್ತೇನೆ~ ಅಂದರೆ ಆಸತ್ತಿ ಕೆಡುತ್ತದೆ. ಸನ್ನಿಧಿ ಅನ್ನುವ ಮಾತನ್ನೂ ಆಸತ್ತಿ ಅನ್ನುವ ಅರ್ಥದಲ್ಲಿ ಬಳಸುತ್ತಾರೆ. ಹೆಸರು ಪದಗಳು, ಕೆಲಸ ಪದಗಳು, ಗುಣ ಪದಗಳು ಒಂದರ ಸನ್ನಿಧಿಯಲ್ಲಿ ಇನ್ನೊಂದು ಇದ್ದರೇನೇ ಅರ್ಥ ಹುಟ್ಟುವುದು.ಇನ್ನು ಅರ್ಥ ಹೇಗೆ ಆಗುತ್ತದೆ ಅನ್ನುವ ಬಗ್ಗೆ ಎರಡು ಭಿನ್ನ ನಿಲುವುಗಳಿವೆ. ವಾಕ್ಯದ ಒಂದೊಂದು ಪದಗಳಿಗೂ ಸ್ವತಂತ್ರವಾದ ಪ್ರತ್ಯೇಕವಾದ ಅರ್ಥ ಇರುತ್ತದೆ. ಈ ಬಿಡಿ ಅರ್ಥಗಳನ್ನೆಲ್ಲ ಒಟ್ಟಾಗಿ ಅನ್ವಯಸಿಕೊಳ್ಳುವುದರಿಂದ ಆನಂತರದಲ್ಲಿ ವಾಕ್ಯದ ಅರ್ಥ ಹುಟ್ಟುತ್ತದೆ ಅನ್ನುವುದು ಕುಮಾರಿಲ ಭಟ್ಟ ತಾಳುವ ನಿಲುವು. ಇದಕ್ಕೆ ಅಭಿಹಿತ-ಅನ್ವಯವಾದ ಎಂಬ ಹೆಸರಿದೆ.ಪದವು ಮಾಡಬೇಕಾದ ಕ್ರಿಯೆಗೆ ಸಂಬಂಧಿಸಿದ್ದಾಗಿ ಅರ್ಥವಾಗುತ್ತದೆ. ಈ ನಿಯೋಗಗಳ ಸಂಬಂಧದಿಂದ ವಾಕ್ಯದ ಅರ್ಥ. ವಾಕ್ಯದಲ್ಲಿ ಪದದ ಅರ್ಥ ಪ್ರತ್ಯೇಕವೂ ಹೌದು. ಇತರ ಪದಗಳೊಡನೆ ಸೇರಿದ್ದೂ ಹೌದು ಅನ್ನುವುದು ಪ್ರಭಾಕರನ ನಿಲುವು. ಇದಕ್ಕೆ ಅನ್ವಿತ-ಅಭಿದಾನವಾದ ಎಂಬ ಹೆಸರಿದೆ.ಪೂರ್ವ ಮೀಮಾಂಸೆಯು ವಾಕ್ಯದ ಸತ್ಯತೆಯ ಬಗೆಗೂ ತನ್ನದೇ ಅಭಿಪ್ರಾಯ ಹೊಂದಿದೆ. ಸತ್ಯತೆಯ ಪರಿಶೀಲನೆಯ ಪ್ರಶ್ನೆಯೇ ಬರುವುದಿಲ್ಲ. ಯಾಕೆಂದರೆ ವೇದಗಳು ವೈಯಕ್ತಿಕ ಸೃಷ್ಟಿಯಲ್ಲ, ಅವು ಅಪೌರುಷೇಯ. ಆದರೆ ಅರ್ಥದ ಸಂದರ್ಭದಲ್ಲಿ ವಾಕ್ಯದ ಸತ್ಯವನ್ನು ವಿವರಿಸುವ ಕ್ರಮವೊಂದಿರಬೇಕು.ಹೇಳಿಕೆ ಸತ್ಯವೋ ಅಲ್ಲವೋ ಎಂಬುದು ಮೀಮಾಂಸಕರ ಪ್ರಶ್ನೆಯಲ್ಲ, ಅದರ ಸತ್ಯ ಯಾವುದರಲ್ಲಿ ನಿಹಿತವಾಗಿದೆ ಅನ್ನುವುದು. ಇಂಥದೊಂದು ಯಜ್ಞ ಮಾಡಬೇಕು ಎಂದಿದ್ದರೆ ಯಾಕೆ ಎಂಬ ಪ್ರಶ್ನೆ ಅನಗತ್ಯ, ಆದರೆ ಅದರ ಫಲ ದೊರೆಯಲು ಸರಿಯಾಗಿ ಮಾಡುವುದು ಹೇಗೆ ಎಂದು ಅರಿಯುವುದು ಮುಖ್ಯ ಅನ್ನುತ್ತಾರೆ ಪೂರ್ವಮೀಮಾಂಸಕರು.ಶಬ್ದವನ್ನು ಸತ್ಯವೆಂದು ಭಾವಿಸುವ ನಿಲುವು ಶಬ್ದವೇ ಸತ್ಯವೆಂಬ ರೂಪ ತಾಳುವುದು ಬಲು ಸುಲಭ. ಸತ್ಯದ ಅಧಿಕಾರ `ಶಾಸ್ತ್ರ~ಗಳ ಭಾಷೆಗೆ ಸೇರಿದ್ದಾಗಿ ಮೂಲಭೂತವಾದವೆಂದು ನಾವು ಇಂದು ಗುರುತಿಸುವ ನಿಲುವು ಕೂಡ ತಲೆ ಎತ್ತಬಹುದು. ಅದು ಬೇರೆಯದೇ ಚರ್ಚೆಯ ವಿಷಯ.

 

ಭಾಷೆಯನ್ನು ಕುರಿತ ಈ ಪ್ರಾಚೀನ ನಿಲುವು ಹಲವು ಆಧುನಿಕ ರೂಪಗಳನ್ನೂ ತಳೆದಿದೆ. ಗ್ರಹಿಕೆಯ ವಿಜ್ಞಾನ (ಕಾಗ್ನೆಟಿವ್ ಸೈನ್ಸ್)ದ ಒಬ್ಬ ಪ್ರಮುಖ ಚಿಂತಕ ಅಲನ್ ಫೊಡೊರ್ ಚಿಂತನೆಯ ಭಾಷೆ ಸ್ವತಂತ್ರ, ಸ್ವಯಂಪೂರ್ಣ ಘಟಕಗಳನ್ನು ಹೊಂದಿರುತ್ತದೆ ಅನ್ನುವ ಪ್ರತಿಪಾದನೆ ಮಾಡಿದ್ದಾನೆ.ಆತ ಡಾರ್ವಿನ್‌ನ ವಿಕಾಸವಾದದಲ್ಲಿ ತಪ್ಪು ಕಂಡು ಹಿಡಿಯುವುದಕ್ಕೂ ಭಾಷೆಯನ್ನು ಕುರಿತು ಪೂರ್ವಮೀಮಾಂಸಕರಂಥ ಧೋರಣೆ ತಳೆದಿರುವುದಕ್ಕೂ ಸಂಬಂಧ ಇದ್ದೀತು. ಹಾಗೆಯೇ ಪ್ರತಿಪದಾರ್ಥವನ್ನು ಗುರುತಿಸಿ, ಆ ಮೂಲಕ ತಾತ್ಪರ್ಯವನ್ನು ಗ್ರಹಿಸುವ ಶಿಕ್ಷಣ ಕ್ರಮದ ಹಿಂದೆಯೂ ಭಾಷೆಯೆಂಬುದು ಬಿಡಿ ಮರಗಳ ಸಮೂಹ ಅನ್ನುವ ಧೋರಣೆ ಕೆಲಸ ಮಾಡುತ್ತದೆ.ಇತ್ತೀಚೆಗೆ ಒಬ್ಬ ಕನ್ನಡ ಅಧ್ಯಾಪಕರು ದೇವನೂರ ಮಹದೇವರ `ಕುಸುಮಬಾಲೆ~ ಕೃತಿಯಲ್ಲಿ ಬರುವ ಜೋತಮ್ಮಗಳನ್ನು ಎಲ್ಲಮ್ಮನ ಭಕ್ತೆಯರಾದ ಜೋಗಮ್ಮಗಳೆಂದು ವಿವರಿಸಿದ್ದು ಕೇಳಿದಾಗ ಪೂರ್ವಮೀಮಾಂಸಕರಂತೆ ವಾಕ್ಯದ ಪ್ರತಿ ಪದಗಳಿಗೂ ತಕ್ಕ ಗಮನ ಕೊಟ್ಟು ಅರ್ಥಮಾಡಿಕೊಳ್ಳುವುದು ಅಗತ್ಯವೆಂದು ಅನ್ನಿಸಿತು.

 

ಆದರೆ ಇನ್ನೂರು ಪದಗಳಿರುವ ಕಿರು ಕವಿತೆಯೊಂದರಲ್ಲಿ ಆ ಎಲ್ಲ ಪದಗಳ ನಡುವೆ ಗಣಿತಾತ್ಮಕವಾಗಿ ಕಲ್ಪಿಸಬಹುದಾದ ಸಾವಿರ ಸಾವಿರ ಸಂಬಂಧಗಳನ್ನು ಪರಿಶೀಲಿಸುತ್ತ ಕೂರುವುದು ಸಾಧ್ಯವೇ ಅನ್ನುವ ಪ್ರಶ್ನೆಯೂ ಹುಟ್ಟುತ್ತದೆ. ಕಾಡನ್ನು ನೋಡುತ್ತ ಮರಗಳನ್ನು ಮರೆಯುವುದು, ಮರಗಳನ್ನಷ್ಟೆ ವಿವರವಾಗಿ ಗಮನಿಸುತ್ತ ಕಾಡನ್ನು ಅರಿಯದೆ ಹೋಗುವುದು ಎರಡೂ ಅತಿರೇಕಗಳೇ. 

             

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry