ಶನಿವಾರ, ಮೇ 8, 2021
19 °C

ಅಲ್ಪಾವಧಿ:ಚುರುಕು ಏರಿಳಿತ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯ ಕೇವಲ ಮೂರು ದಿನದ ವಹಿವಾಟಿನಲ್ಲಿ ವಲಯಾಧಾರಿತ ಸೂಚ್ಯಂಕಗಳು ಏರಿಕೆ ಕಂಡವು. ಈ ವಾರ ವಿದೇಶೀ ವಿತ್ತೀಯ ಸಂಸ್ಥೆಗಳು ಅನಿರೀಕ್ಷಿತವಾಗಿ, ತಮ್ಮ  ಚಟುವಟಿಕೆಯ ದಿಶೆಯನ್ನು ಬದಲಿಸಿ ವಿಶ್ಲೇಷಣೆಗಳನ್ನು ಹುಸಿಯಾಗಿಸಿ, ದಿಢೀರ್ ಮೌಲ್ಯಗಳನ್ನು ಗುರುತಿಸಿ ಖರೀದಿ ಮಾಡಿದವು. ಈ ಮೂರು ದಿನದ ವಹಿವಾಟಿನಲ್ಲಿ ್ಙ 2,145 ಕೋಟಿ ಮೌಲ್ಯದ ಖರೀದಿ ನಡೆದಿದೆ.

 

ಹಿಂದಿನವಾರ 3,436 ಕೋಟಿ ಮೌಲ್ಯದ ಷೇರು ಮಾರಾಟವಾಗಿದ್ದವು. ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ569 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿವೆ. ಅಲ್ಪಾವಧಿಯ ಚಟುವಟಿಕೆಯದಾದರೂ ಚುರುಕಾದ ಏರಿಳಿತಗಳು ವಿಭಿನ್ನ ಕಾರಣಗಳಿಗೆ ದಾಖಲಾದವು.ಬೋಡಲ್ ಕೆಮಿಕಲ್ಸ್‌ನ ಬೋನಸ್ ಗೊಂದಲ ಭಾರಿ ಇಳಿತಕ್ಕೆ ಕಾರಣವಾದರೆ, ಜೆಬಿ ಕೆಮಿಕಲ್ಸ್‌ನ ಪ್ರತಿ ಷೇರಿಗೆ ರೂ 40ರ ಲಾಭಾಂಶದ ನಂತರದಲ್ಲಿ ಷೇರಿನ ಬೆಲೆಯು     ಶೇ 39ಕ್ಕೂ ಹೆಚ್ಚಿನ ಕುಸಿತ ಪ್ರದರ್ಶಿಸಿತು.ಎವರಾನ್ ಎಜುಕೇಷನ್ ಕಾನೂನಿನ ಕ್ರಮದ ಕಾರಣ ಮತ್ತು ಅದರ ಮುಖ್ಯಸ್ಥರನ್ನು ವಶಕ್ಕೆ ತೆಗೆದುಕೊಂಡ ಕಾರಣ ಶೇ 15ಕ್ಕೂ ಹೆಚ್ಚಿನ ಕುಸಿತ ಕಂಡಿದೆ. ಸತತ ಇಳಿಕೆ ಕಂಡಿದ್ದ ಮಣಪುರಂ ಪೈನಾನ್ಸ್ ಶೇ 29 ಜೆಎಸ್‌ಡಬ್ಲು ಸ್ಟೀಲ್ ಶೇ 18 ರಷ್ಟು ಏರಿಕೆ ಕಂಡಿವೆ. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಸಿಂಡಿಕೇಟ್ ಬ್ಯಾಂಕ್, ಡಿಎಲ್‌ಎಫ್, ರಿಲೈಯನ್ಸ್ ಇಂಡಸ್ಟ್ರೀಸ್, ಹಿಂಡಾಲ್ಕೊ ಗಮನಾರ್ಹ ಏರಿಕೆ ಕಂಡವು.

 

ಒಟ್ಟು ಈ ವಾರ ಸಂವೇದಿ ಸೂಚ್ಯಂಕವು 972 ಅಂಶಗಳಷ್ಟು ಏರಿಕೆಕಂಡಿತು. ಮಧ್ಯಮ ಶ್ರೇಯಾಂಕದ ಸೂಚ್ಯಂಕ289 ಅಂಶಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 222 ಅಂಶಗಳಷ್ಟು ಏರಿಕೆ ದಾಖಲಿಸಿತು. ಪೇಟೆ ಬಂಡವಾಳೀಕರಣ ಮೌಲ್ಯ ರೂ 58.17 ಲಕ್ಷ ಕೋಟಿಯಿಂದ ರೂ61.10 ಲಕ್ಷ ಕೋಟಿಗೆ ಹೆಚ್ಚಿದ್ದು ಮತ್ತೊಂದು ವಿಶೇಷ.ಲಾಭಾಂಶದ ವಿಚಾರ

ಅಲ್‌ಕೆಮಿಸ್ಟ್ ಶೇ 20, ಆರಿಯನ್ ಪ್ರೊಸಿಸ್ಟಂಸ್ ಶೇ 22, ಫಾರ್ಚೂನ್ ಫೈನಾನ್ಶಿಯಲ್ ಸರ್ವಿಸಸ್ ಶೇ 20, ಜಿಯೋಡಿಸಿತ್ ಶೇ 70 (ಮುಖಬೆಲೆ ರೂ2), ಇಂಡ್‌ಸ್ವಿಫ್ಟ್ ಲಿ. ಶೇ 20 (ಮು.ಬೆ. ರೂ2), ಕೆ.ಸಿ.ಪಿ. ಲಿ., ಶೇ 25 (ಮು.ಬೆ. ರೂ 1), ಮಾರ್ಗ್‌ಲಿ ಶೇ 20, ಮೆಡಿಕ್ಯಾಪ್ಸ್ ಶೇ 15, ಶಿವವಾಣಿ ಆಯಿಲ್ ಅಂಡ್ ಗ್ಯಾಸ್ ಎಕ್ಸ್‌ಪ್ಲೊರೇಷನ್ ಸರ್ವಿಸಸ್ ಶೇ 20, ಟ್ವಿಲೈಟ್ ಲಿಟಾಕಾ ಫಾರ್ಮ ಶೇ 30 (ಮು.ಬೆ. ರೂ5), ಉಷರ್ ಆಗ್ರೊ ಶೇ 15, ವಿಮಲ್ ಆಯಿಲ್ ಶೇ 15.ಬೋನಸ್ ಷೇರಿನ ವಿಚಾರ

*ಟಿ ಗುಂಪಿಗೆ ಸೇರಿದ ಆನಂದ್ ಎಲೆಕ್ಟ್ರಿಕ್ ಸಪ್ಲೈ ಕಂಪೆನಿಯು ಸೆಪ್ಟೆಂಬರ್ 10 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.*ಬೋಡಲ್ ಕೆಮಿಕಲ್ಸ್ ಬೋನಸ್ ಪ್ರಕಟಣೆಯನ್ನು ಅಲ್ಲಗೆಳೆದಿದೆ.

ಹೊಸ ಷೇರಿನ ವಿಚಾರಪ್ರತಿ ಷೇರಿಗೆ ರೂ100 ರಂತೆ ಸಾರ್ವಜನಿಕ ವಿತರಣೆ ಮಾಡಿದ ಬ್ರೂಕ್ಸ್ ಲ್ಯಾಬೊರೆಟರೀಸ್ ಲಿ. ಕಂಪೆನಿಯು ಸೆಪ್ಟೆಂಬರ್ 5 ರಿಂದ `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.ಶ್ರೀರಾಂ ಸಿಟಿ ಯೂನಿಯನ್ ಫೈನಾನ್ಸ್ ಎನ್‌ಸಿಡಿ ವಹಿವಾಟಿಗೆ ಬಿಡುಗಡೆರೂ1 ಸಾವಿರ ಮುಖಬೆಲೆಯುಳ್ಳ ಈ ಕಂಪೆನಿಯ ಎನ್‌ಸಿಡಿಗಳು ಇತ್ತೀಚೆಗೆ ಸಾರ್ವಜನಿಕ ವಿತರಣೆಯಾಗಿದ್ದು ಶೇ 11.50 ಯಿಂದ ಶೇ 12.10 ರವರೆಗಿನ ಬಡ್ಡಿದರದ ವಿವಿಧ ಯೋಜನೆಗಳುಳ್ಳ ಈ ಎನ್‌ಸಿಡಿಗಳು 2 ರಿಂದ ಎಫ್ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.ಮುಖಬೆಲೆ ಸೀಳಿಕೆ ವಿಚಾರ

*ಮ್ಯಾಕ್ಸಿಮಾ ಸಿಸ್ಟಂಸ್ ಕಂಪೆನಿ 5 ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

*ಇನ್ನೊವೇಟಿವ್ ಟೆಕ್‌ಪ್ಯಾಕ್ ಷೇರನ್ನು ರೂ  10 ರಿಂದ ರೂ1ಕ್ಕೆ ಸೀಳಲಿದೆ.

ಖಾಸಗಿಯವರಿಗೆ ಬ್ಯಾಂಕಿಂಗ್ ಪ್ರವೇಶ ಆರ್‌ಬಿಐ ಕರಡು ಸೂತ್ರಬಹಳ ದಿನಗಳಿಂದ ನಿರೀಕ್ಷಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್‌ನ, ಖಾಸಗಿ ವಲಯದವರಿಗೆ ಬ್ಯಾಂಕಿಂಗ್ ಪ್ರವೇಶದ ಸೂತ್ರಗಳು ಪ್ರಕಟಗೊಂಡಿದೆ.ಇದರ ಪ್ರಕಾರ ರಿಯಲ್ ಎಸ್ಟೇಟ್ ಮತ್ತು ಬ್ರೋಕಿಂಗ್ ಸಂಸ್ಥೆಗಳಿಗೆ ಅವಕಾಶವಿರುವುದಿಲ್ಲ. ಪ್ರವರ್ತಕರು ವೈವಿಧ್ಯಮಯ ಮಾಲಿಕತ್ವದ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು, ಮತ್ತು ಕನಿಷ್ಠ ರೂ 500 ಕೋಟಿಗಳ ಪಾವತಿಸಿದ ಬಂಡವಾಳವಿರಬೇಕು. ಇವು ಮುಖ್ಯ ಅರ್ಹತೆಗಳು.ಮತ್ತೊಂದು ಗಮನಾರ್ಹ ಅಂಶವೆಂದರೆ ಎರಡು ವರ್ಷಗಳೊಳಗೆ ಆ ಕಂಪೆನಿ ಷೇರು ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಿಗೆ ನೋಂದಾಯಿಸಿಕೊಳ್ಳಬೇಕಾಗಿದೆ. ಈ ಕಾರಣದಿಂದಾಗಿ, ಬಜಾಜ್ ಫೈನ್ ಸರ್ವ್, ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್, ರಿಲೈಯನ್ಸ್ ಕ್ಯಾಪಿಟಲ್, ಎಂ.ಎಂ. ಫೈನಾನ್ಶಿಯಲ್ಸ್ ಚುರುಕಾದ ಚಟುವಟಿಕೆಯಿಂದ ಏರಿಕೆ ಕಂಡವು.ವಾರದ ವಿಶೇಷ


ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಅಂಕಿ-ಅಂಶಗಳ ಪ್ರಕಾರ, ದೇಶೀಯ ಹೂಡಿಕೆದಾರರು, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಅಪಾಯನ್ನು ಎದುರಿಸಲು ಇಚ್ಚಿಸದೆ ತಮ್ಮ ಹಣವನ್ನು ಸುರಕ್ಷಿತ ಮಾರ್ಗದಲ್ಲಿ ಉಳಿಸುವತ್ತ ಗಮನಹರಿಸುತ್ತಿದ್ದಾರೆ.ಈ ವರ್ಷದಲ್ಲಿ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಯು ಹೆಚ್ಚಾಗಿ, ನಿಗದಿತ ಇಳುವರಿ ಯೋಜನೆಗಳತ್ತ ಹೂಡಿಕೆದಾರರ ಒಲವು ಇರುವುದನ್ನು ಬಿಂಬಿಸುತ್ತದೆ. ಬ್ಯಾಂಕ್ ಠೇವಣಿಗಳ ಪ್ರಗತಿಯು ಶೇ 6 ರಷ್ಟಿದ್ದರೆ,  ಬ್ಯಾಂಕಿಂಗೇತರ ಕಂಪೆನಿಗಳಲ್ಲಿನ ಠೇವಣಿಯು ಶೇ 57.9 ರಷ್ಟು ಹೆಚ್ಚಾಗಿದೆ.  ಷೇರುಪೇಟೆಯ ಹೂಡಿಕೆಯಲ್ಲಿ ನಿರಾಸಕ್ತಿ ಮೂಡಿದ್ದು, ಒಟ್ಟು ರೂ4,636 ಕೋಟಿ ಹಣವನ್ನು ಹಿಂತೆಗೆಯಲಾಗಿದೆ. ಅದೇ ರೀತಿ ಮ್ಯುಚುಯಲ್ ಫಂಡ್ ವಿಭಾಗದಲ್ಲಿ ರೂ18,719 ಕೋಟಿಯಷ್ಟು ಹಣಹಿಂತೆಗೆಯಲಾಗಿದೆ.ಈ ಬೆಳವಣಿಗೆಯು ಸಣ್ಣ ಹೂಡಿಕೆದಾರರಲ್ಲಿ ಉಂಟಾಗಿರುವ ನಂಬಿಕೆಯ ಕೊರತೆಯನ್ನು ತೋರಿಸುತ್ತದೆ. ಜಾಗತಿಕ ಪೇಟೆಗಳಲ್ಲಿ ಅಸ್ಥಿರತೆ ಮುಂದುವರೆದಿರುವ ವಾತಾವರಣದಲ್ಲಿ ನಿಶ್ಚಿತ ಇಳುವರಿ ಯೋಜನೆಯತ್ತ ತಿರುಗಿರುವುದೇನೋ ಸರಿ.

 

ಆದರೆ, ಬ್ಯಾಂಕಿಂಗೇತರ ಕಂಪೆನಿಗಳತ್ತ ಅಧಿಕ ಬಡ್ಡಿ ಆಸೆಯಿಂದ, ತಿರುಗುವುದು ಅಪಾಯದಿಂದ ಹೊರತಲ್ಲ. ಕೇವಲ ಬಡ್ಡಿ ಹಣದ ಗಳಿಕೆಯ ದೃಷ್ಟಿಯಿಂದ ನೋಡದೆ, ಹೂಡಿಕೆ ಹಣದ ಸುರಕ್ಷತೆಯ ಬಗೆಯೂ ಯೋಚಿಸುವುದು ಅತ್ಯವಶ್ಯಕ.ಕಂಪೆನಿ ಡಿಪಾಜಿಟುಗಳು `ಅಸುರಕ್ಷಿತ~ವೆಂಬ ಅಂಶವನ್ನು ಆಯಾ ಕಂಪೆನಿ ಡಿಪಾಜಿಟುಗಳ ಅರ್ಜಿ ಫಾರಂನಲ್ಲಿ ನಮೂದಿಸಲಾಗಿರುವುದನ್ನು ಗಮನದಲ್ಲಿಡಿ.ಈ ರೀತಿಯ ವಾತಾವರಣವು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ  ಕಂಡುಬಂದಿದೆ. ಅಮೆರಿಕದ ನಗದು ನಿರ್ವಾಹಕರು ಈಕ್ವಿಟಿ ಹೂಡಿಕೆಯನ್ನು ಆಗಸ್ಟ್ ತಿಂಗಳಲ್ಲಿ  ಶೇ 65.4 ರಿಂದ ಶೇ 63ಕ್ಕೆ ಇಳಿಸಿದರೆ, ಯುರೋಪಿನ ಹೂಡಿಕೆದಾರರು ಇದೇ ಪ್ರವೃತ್ತಿ ಪ್ರದರ್ಶಿಸಿದ್ದಾರೆ.

 

ಬ್ರಿಟನ್‌ನಲ್ಲಿ ಈಕ್ವಿಟಿ ಹೂಡಿಕೆಯು ಶೇ 41.2ಕ್ಕೆ ಇಳಿದು ವಾರ್ಷಿಕ ಕನಿಷ್ಠ ಮಟ್ಟದಲ್ಲಿದೆ. ಈ ಬೆಳವಣಿಗೆಯ ಜೊತೆಗೆ ಪ್ರಮುಖ ಅಂಶವೆಂದರೆ ಹೆಚ್ಚಿನ-ಹೂಡಿಕೆದಾರರು ಈಕ್ವಿಟಿಯಿಂದ ಬಾಂಡ್‌ಗಳತ್ತ ತಿರುಗಿದ್ದಾರೆ. ಈ ಕಾರ್ಯವನ್ನು ನಮ್ಮ ಮ್ಯುಚುಯಲ್ ಫಂಡ್‌ಗಳು ಕಳೆದ ಎರಡು ವರ್ಷಗಳಿಂದಲೂ ಅನುಸರಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.