ಶುಕ್ರವಾರ, ಡಿಸೆಂಬರ್ 6, 2019
20 °C

ಅಲ್ಲಿ ಏನೇನಾಗಿದೆ ಅಂತ ‘ರಕ್ತಪತ್ರ’ ಹೊರಡಿಸಿ

ನಾರಾಯಣ ಎ
Published:
Updated:
ಅಲ್ಲಿ ಏನೇನಾಗಿದೆ ಅಂತ ‘ರಕ್ತಪತ್ರ’ ಹೊರಡಿಸಿ

ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಮತ್ತೊಮ್ಮೆ ಬರೆಯಬೇಕಾದುದಕ್ಕೆ ವಿಷಾದವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಜನ ಕೋಮುದ್ವೇಷದ ಕೆಂಡ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಹೊಸತೇನೂ ಇಲ್ಲ. ಹೊಸತು ಅಂತ ಏನಾದರೂ ಇದ್ದರೆ ಅದು ಇಷ್ಟು. ಹೋದ ವಾರ ಜಿಲ್ಲೆಯಲ್ಲಿ ಮತ್ತೊಂದು ಸುತ್ತು ಹೆಣ ಬಿದ್ದಾಗ ರಾಜ್ಯದ ಆಳುವ ಪಕ್ಷದ ಮತ್ತು ವಿರೋಧ ಪಕ್ಷದ ಮುಂದಾಳುಗಳು, ಹೆಣ್ಣಾಳುಗಳು, ಗಂಡಾಳುಗಳು ಸಾಲು ಸಾಲಾಗಿ ಅಲ್ಲಿ ಹೋಗಿದ್ದಾರೆ.

ಹೋಗಿದ್ದು ಮಾತ್ರವಲ್ಲ, ಭಯಂಕರವಾಗಿ ಮಾತಾಡಿದ್ದಾರೆ. ಬೇರೊಂದು ಸಂದರ್ಭದಲ್ಲಾಗಿದ್ದರೆ ಈ ಮಾತುಗಳನ್ನು ಷೇಕ್ಸ್‌ಪಿಯರ್ ಹೇಳಿದ ಹಾಗೆ ಪರಿಣಾಮಶೂನ್ಯ ಪ್ರಖರ ಪ್ರಲಾಪ (sound and fury, signifying nothing!) ಅಂತ ಬಿಟ್ಟು ಬಿಡಬಹುದಿತ್ತು. ಆದರೆ ಈ ಬಾರಿ ಕೇಳಿಸಿದ್ದು ಅಂತಿಂಥ ಮಾತುಗಳಲ್ಲ. ಅವುಗಳ ಬೀಭತ್ಸವನ್ನು ವಿವರಿಸಲು ದಕ್ಷಿಣ ಕನ್ನಡದ ಯಕ್ಷಗಾನ ಸಾಹಿತ್ಯಕ್ಕೆ ಮಾತ್ರ ಸಾಧ್ಯ.

‘ಗದಾಯುದ್ಧ’ ಯಕ್ಷಗಾನ ಪ್ರಸಂಗದಲ್ಲಿ ದುರ್ಯೋಧನ ರಣರಂಗದ ಉದ್ದಗಲಕ್ಕೆ ಬಿದ್ದ ‘ಹೆಣನ ಪರ್ವತವನೇರಿಳಿಯುತ್ತಾ’  ವೈಶಂಪಾಯನ ಸರೋವರಾಭಿಮುಖವಾಗಿ ಸಾಗುತ್ತಿದ್ದರೆ ಆತನಿಗೆ ವಿಕಾರ ಸ್ವರಗಳು ಕೇಳಿಸಲಾರಂಭಿಸುತ್ತವೆ.

ಆ ಸ್ವರಗಳನ್ನು ಯಕ್ಷಗಾನದ ಹಾಡು ಕಟ್ಟಿಕೊಡುವುದು ಹೀಗೆ: ಕಾಕರವ, ಗೂಕರವ, ಪ್ರೇತರವ, ಭೂತರವ... ಕೆಲದಿನಗಳಿಂದ ಈಚೆಗೆ  ಕರಾವಳಿಯಾದ್ಯಂತ ರಾಜಕೀಯ ಪಕ್ಷಗಳ ಮುಂದಾಳುಗಳು, ಹೆಣ್ಣಾಳು ಮತ್ತು ಗಂಡಾಳುಗಳು ಬಾಯಿಬಿಟ್ಟರೆ ಕೇಳಿಸುತ್ತಿದ್ದದ್ದು ಅಕ್ಷರಶಃ ಅದೇ ಕಾಕರವ, ಗೂಕರವ, ಪ್ರೇತರವ, ಭೂತರವ... ಹಾ!

ವಿರೋಧ ಪಕ್ಷದ ಮಂದಿ ಮತ್ತು ಅವರನ್ನು ಪೋಷಿಸುವ ಕೆಲ ಸಂಘಟನೆಗಳ ಮಂದಿ  ಹೋದಲ್ಲಿ ಬಂದಲ್ಲಿ ‘ಹಿಂದೂಗಳ ಮಾರಣಹೋಮ ನಡೆಯುತ್ತಿದೆ’ ಎನ್ನುತ್ತಿದ್ದಾರೆ. ಇದು ಭಯಾನಕ ಹೇಳಿಕೆ. ಜನರನ್ನು ಕೆರಳಿಸಬಹುದಾದ ಹೇಳಿಕೆ. ಬಹುಶಃ ಅಲ್ಲಿ ಮುಸ್ಲಿಮರ ಮಾರಣಹೋಮ ನಡೆಯುತ್ತಿದೆ ಎಂದು ಇನ್ನು ಕೆಲ ಸಂಘಟನೆಗಳು ಭಾವಿಸಿರಬೇಕು. ಇಲ್ಲದೆ ಹೋಗಿದ್ದರೆ ನಮ್ಮದೊಂದು ಹೆಣಕ್ಕೆ ಅವರದೊಂದೋ ಎರಡೋ ಉರುಳಿಸಿಯೇ ಸಿದ್ಧ ಅಂತ ಎರಡೂ ಕಡೆಯವರು ಇಷ್ಟೊಂದು ಕರಾರುವಾಕ್ಕಾಗಿ ಕಾರ್ಯಕ್ಕಿಳಿಯುತ್ತಿರಲಿಲ್ಲ.

ಭಾರತದ ಕೋಮುದ್ವೇಷದ ಪಥಸಂಚಲನವೇ ಹಾಗೆ. ಅಲ್ಲಿ ಲೆಕ್ಕಾಚಾರಗಳೆಲ್ಲಾ ಪಕ್ಕಾ ಇರುತ್ತವೆ. ಈ ಅಪಾಯಕಾರಿ ಮಾರಣ ಹೋಮದ ಪ್ರಚಾರಕ್ಕೆ ಅಂತ್ಯ ಕಾಣಿಸಲು ಆಳುವ ಸರ್ಕಾರ ಮಾಡಬಹುದಾದ ಒಂದೇ ಒಂದು ಕೆಲಸ ಅಂದರೆ ದಕ್ಷಿಣ ಕನ್ನಡದಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ಒಂದು ಶ್ವೇತಪತ್ರ ಹೊರಡಿಸುವುದು. ಇದನ್ನು ಶ್ವೇತಪತ್ರ ಎಂದು ಕರೆದರೆ ಶ್ವೇತ ಬಣ್ಣಕ್ಕೆ ಕಳಂಕ. ಆದುದರಿಂದ ಇದನ್ನು ‘ರಕ್ತಪತ್ರ’ ಎಂದು ಕರೆಯಬಹುದು ಮತ್ತು ಅದರಲ್ಲಿ ಈ ಕೆಳಗಿನ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳಿರಬೇಕು.

ಈ ಸರ್ಕಾರ ಬಂದಂದಿನಿಂದ ಜಿಲ್ಲೆಯಲ್ಲಿ ಕೊಲೆಯಾದ ಹಿಂದೂಗಳ ಸಂಖ್ಯೆ ಎಷ್ಟು? ಅಲ್ಲಿ ಕೊಲೆಯಾದ ಮುಸ್ಲಿಮರ ಸಂಖ್ಯೆ ಎಷ್ಟು? ಕೊಲೆಯಾದ ಹಿಂದೂಗಳಲ್ಲಿ ಮುಸ್ಲಿಂ ವ್ಯಕ್ತಿಗಳಿಂದ ಕೊಲೆಯಾದವರ ಸಂಖ್ಯೆ ಎಷ್ಟು? ಕೊಲೆಯಾದ ಮುಸ್ಲಿಮರಲ್ಲಿ ಹಿಂದೂ ವ್ಯಕ್ತಿಗಳಿಂದ ಕೊಲೆಯಾದವರ ಸಂಖ್ಯೆ ಎಷ್ಟು? ಕೊಲೆಯಾದ ಹಿಂದೂಗಳಲ್ಲಿ ಹಿಂದೂ ವ್ಯಕ್ತಿಗಳಿಂದಲೇ ಕೊಲೆಯಾದವರ ಸಂಖ್ಯೆ ಎಷ್ಟು?

ಕೊಲೆಯಾದ ಮುಸ್ಲಿಮರಲ್ಲಿ ಮುಸ್ಲಿಮರಿಂದಲೇ ಕೊಲೆಯಾದವರ ಸಂಖ್ಯೆ ಎಷ್ಟು? ಹಿಂದೂ ವ್ಯಕ್ತಿಗಳನ್ನು ಕೊಂದ ಮುಸ್ಲಿಂ ಕೊಲೆಗಾರರ ಹಿಂದೆ ಯಾವುದಾದರೂ ವ್ಯವಸ್ಥಿತ ಶಕ್ತಿಗಳಿದ್ದವೇ? ಹಾಗೆಯೇ ಮುಸ್ಲಿಂ ವ್ಯಕ್ತಿಗಳನ್ನು ಕೊಂದ ಹಿಂದೂ ಕೊಲೆಗಾರರ ಹಿಂದೆ ಯಾವುದಾದರೂ ವ್ಯವಸ್ಥಿತ ಶಕ್ತಿಗಳಿದ್ದವೇ?

ಮೇಲಿನ ಎಲ್ಲಾ ಸಾಲಿಗೆ ಸೇರಿದ ಪ್ರಕರಣಗಳಲ್ಲಿ ವೈಯಕ್ತಿಕ ದ್ವೇಷ, ವ್ಯಾವಹಾರಿಕ ವೈಮನಸ್ಯ ಇತ್ಯಾದಿ ಕಾರಣಗಳಿಂದ ಎಷ್ಟು ಕೊಲೆಗಳು ನಡೆದಿವೆ? ಇವಿಷ್ಟೂ ರಕ್ತಪತ್ರದಲ್ಲಿ ಇರಬೇಕಾದ ಮೂಲಭೂತ ಅಂಕಿ-ಅಂಶಗಳು. ಆದರೆ ಇಷ್ಟು ಸಾಲದು. ಈ ರಕ್ತಪತ್ರಕ್ಕೊಂದು ಅನುಬಂಧ ಬೇಕು. ಅದರಲ್ಲಿ ಏನೇನಿರಬೇಕೆಂದರೆ: ಹಿಂದೂ ಹೆಣಬಿದ್ದಾಗ ಯಾವ ಪಕ್ಷದ ಯಾವ  ಮುಂದಾಳು, ಯಾವ ಹೆಣ್ಣಾಳು, ಯಾವ ಗಂಡಾಳುಗಳು ಏನೇನು ಹೇಳಿದರು? ಮುಸ್ಲಿಂ ಹೆಣ ಬಿದ್ದಾಗ ಯಾವ ಪಕ್ಷದ ಯಾವ ಮುಂದಾಳು, ಯಾವ ಹೆಣ್ಣಾಳು, ಯಾವ ಗಂಡಾಳುಗಳು ಏನೇನು ಹೇಳಿದರು?

ಇವಿಷ್ಟು ಮಾಹಿತಿ ಅಧಿಕೃತವಾಗಿ ಹೊರಬಂದರೆ ಮಾರಣಹೋಮದ ಪ್ರಚಾರದಲ್ಲಿ ಎಷ್ಟು ಸತ್ಯ ಇದೆ, ಎಷ್ಟು ಸುಳ್ಳು ಇದೆ ಎನ್ನುವ ಚಿತ್ರಣ ಅಖಂಡ ಕರ್ನಾಟಕಕ್ಕೆ ಗೊತ್ತಾಗುತ್ತದೆ. ಈಗ ಅಲ್ಲಿ ನಡೆಯುತ್ತಿರುವುದು ಆಧಾರವಿಲ್ಲದ, ಅರ್ಥವಿಲ್ಲದ, ಅರ್ಧ-ಸತ್ಯಗಳನ್ನು ವೈಭವೀಕರಿಸಿ ಜನರ ಭಾವನೆಗಳನ್ನು ಪ್ರಚೋದಿಸುವ ಪ್ರಯತ್ನ. ಈಗ ಅಲ್ಲಿ ನಡೆಯುತ್ತಿರುವುದು ಇದ್ದ ಸಮಸ್ಯೆಗಳನ್ನು ಅಡಗಿಸಿಡುವ ಪ್ರಯತ್ನ. ಇವೆರಡೂ ಅಪಾಯಕಾರಿ.

ದಕ್ಷಿಣ ಕನ್ನಡದಿಂದ ಕೇಳಿಸಿದ ವಿಕೃತ ಭಾಷಣಗಳು ಅಪಾಯಕಾರಿ ಅಂತ ಅನಿಸುವುದು ಅವು ಕೋಮು ಭಾವನೆಗಳನ್ನು ಪ್ರಚೋದಿಸುತ್ತವೆ ಎನ್ನುವ ಒಂದೇ ಕಾರಣಕ್ಕಲ್ಲ. ಅದಕ್ಕಿಂತ ಮುಖ್ಯವಾಗಿ ಅಲ್ಲಿ ಕೇಳಿಸಿದ ಮಾತುಗಳಲ್ಲಿ ಇಡೀ ಸಾಂವಿಧಾನಿಕ ವ್ಯವಸ್ಥೆಯ ಬಗ್ಗೆ ಪರೋಕ್ಷವಾಗಿ ಧಿಕ್ಕಾರವಿತ್ತು. ಕಾನೂನು ಕಟ್ಟಳೆಗಳ ಬಗ್ಗೆ ಅಣಕವಿತ್ತು.

ಅಲ್ಲಿ ಮಾತನಾಡುತ್ತಿದ್ದವರು ‘ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ನಾಡು ಸುಡುತ್ತೇವೆ’, ‘ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡರೆ ಊರಿಗೆ ಬೆಂಕಿ ಇಡುತ್ತೇವೆ’ ಎಂದು ಸರ್ಕಾರಕ್ಕೆ ಬೆದರಿಕೆ ಹಾಕುತ್ತಿದ್ದರು. ಸಂವಿಧಾನದಲ್ಲಿ, ಕಾನೂನಿನಲ್ಲಿ ಮತ್ತು ಧರ್ಮದಲ್ಲಿ ನಂಬಿಕೆ ಇದ್ದ ಯಾರೂ ಹೀಗೆಲ್ಲಾ ಮಾತನಾಡುವುದಿಲ್ಲ.

ನಾವೆಲ್ಲ ಚರಿತ್ರೆಯಲ್ಲಿ ಓದಿದ ಪ್ರಕಾರ ಬೆಂಕಿ ಇಡುವ, ಸುಟ್ಟು ಬೂದಿ ಮಾಡುವ ಯೋಚನೆಗಳೆಲ್ಲಾ ಬರುವುದು ಕ್ರೂರ ದಾಳಿಕೋರರ ತಲೆಯಲ್ಲಿ ಮತ್ತು ವಿಕೃತ ಸರ್ವಾಧಿಕಾರಿಗಳ ಮನಸ್ಸಿನಲ್ಲಿ. ಆಳುವ ಸರ್ಕಾರವೊಂದು ಕಾನೂನು ಅನುಷ್ಠಾನಗೊಳಿಸದೆ ಇದ್ದಾಗ, ಕಾನೂನು ಧಿಕ್ಕರಿಸಿದಾಗ ಪ್ರತಿಭಟಿಸಬೇಕಾದುದು ವಿರೋಧ ಪಕ್ಷಗಳ ಕರ್ತವ್ಯ.

ಅಂತಹ ಪ್ರತಿಭಟನೆಗಳನ್ನೂ  ಕಾನೂನಿನ, ಸಂವಿಧಾನದ ವ್ಯಾಪ್ತಿಯಲ್ಲೇ ನಡೆಸಬೇಕು ಎನ್ನುವುದು ನಾಗರಿಕತೆ, ಸಭ್ಯತೆ ಮತ್ತು ಮಾನವೀಯತೆ. ಅದು ಬಿಟ್ಟು ಸರ್ಕಾರವೊಂದು ಕಾನೂನು ಪ್ರಕಾರ ತಾನು ಕೈಗೊಳ್ಳಬೇಕಾದ ಕ್ರಮಕ್ಕೆ ಮುಂದಾದರೆ  ಕಂಡ-ಕಂಡಲ್ಲಿ ಕೊಳ್ಳಿ ಇಡುತ್ತೇವೆ ಎಂದು ಅಬ್ಬರಿಸುವುದು ಯಾವ ಸಂಸ್ಕಾರ? ಯಾವ ಭಾರತಿ? 

ರಾಜ್ಯದ ದುರ್ದೈವ; ವಿರೋಧ ಪಕ್ಷದಲ್ಲಿ ಇಂತಹವರೆಲ್ಲಾ ಇದ್ದಾರೆ ಮತ್ತು ಅವರನ್ನು ಜನರು ಚುನಾಯಿಸಿದ್ದಾರೆ ಎನ್ನುವಷ್ಟರಲ್ಲೇ ಮುಗಿಯುವುದಿಲ್ಲ. ಕಾನೂನಾತ್ಮಕ ಆಡಳಿತದ (rule of law) ಆಶಯಕ್ಕೆ ಮೂಲ ಪೆಟ್ಟು ನೀಡುವ, ತನ್ಮೂಲಕ ಇಡೀ ಸಂವಿಧಾನದ ಪರಮಾಧಿಕಾರವನ್ನೇ ಪರೋಕ್ಷವಾಗಿ ಪ್ರಶ್ನಿಸುವ ಇಂತಹ ಬೆಳವಣಿಗೆಗಳನ್ನು  ಸರ್ಕಾರ ನಡೆಸುವವರು ‘ಏನೋ ನುಸಿಕಚ್ಚಿತು’ ಎನ್ನುವಷ್ಟು ಲಘುವಾಗಿ ತೆಗೆದುಕೊಂಡಿರುವುದು ಇದೆಯಲ್ಲಾ ಅದು ದುರಂತದೊಳಗಣ ದುರಂತ.

ಒಂದೆಡೆ ಕೋಮು ಭಾವನೆಗಳನ್ನು ಕೆರಳಿಸುವ ಮಾತುಗಳಾದರೆ ಇನ್ನೊಂದೆಡೆ ಇಡೀ ಸಂವಿಧಾನ ವ್ಯವಸ್ಥೆಗೆ ಸವಾಲೊಡ್ಡುವ ರೀತಿಯಲ್ಲಿ ಸರ್ಕಾರ ನಡೆಸುವವರನ್ನು ಕರೆಕರೆದು ಕೆಣಕುವ ಕೆಲಸ ನಡೆಯುತ್ತಿದ್ದರೆ   ಸರ್ಕಾರಕ್ಕೆ ಜೀವ ಇದೆ ಎಂದು ತೋರಿಸುವ ಕನಿಷ್ಠ ಜವಾಬ್ದಾರಿಯಾದರೂ ಸರ್ಕಾರ ನಡೆಸುವವರಿಗೆ ಇರಬೇಕಲ್ಲವೇ?

ಹಾಗೆ ನೋಡಿದರೆ ದಕ್ಷಿಣ ಕನ್ನಡದ ಮಟ್ಟಿಗೆ ಆಳುವ ಸರ್ಕಾರಗಳು ಈ ಮಹತ್ತರ ಜವಾಬ್ದಾರಿ ಮರೆತು ಎಷ್ಟೋ ಕಾಲವಾಯಿತು. ಸರ್ಕಾರದ ಕಣ್ಣೆದುರೇ ಈ ಜಿಲ್ಲೆಯಲ್ಲಿ ಹುಟ್ಟಿಕೊಂಡ  ಗೋ-ಭಯೋತ್ಪಾದನೆ ಈಗ ದೇಶದಾದ್ಯಂತ ರಫ್ತಾಗಿದೆ.  ನೈತಿಕ-ರೌಡಿಗಿರಿ ಅಂದರೆ ಜನರ ವೈಯಕ್ತಿಕ ಬದುಕಿನ ಮೇಲೆ ಹಿಂಸಾತ್ಮಕ ದಾಳಿ ಮಾಡುವ ಅನಾಗರಿಕ ಆಚಾರವೊಂದು ಈ ಜಿಲ್ಲೆಯಲ್ಲಿ ಹುಟ್ಟಿಕೊಂಡು ಈಗ ದೇಶದಾದ್ಯಂತ ವಿಜೃಂಭಿಸುತ್ತಿದೆ. ಅದು ನಡೆದುಹೋದದ್ದು ಆಳುವ ಸರ್ಕಾರಗಳ ಕಣ್ಣಮುಂದೆಯೇ.

ಒಂದು ಕಾಲದಲ್ಲಿ ಉದ್ಯಮಶೀಲತೆಯ ಹೊಸ ಹೊಸ ಮಾದರಿಗಳನ್ನು ದೇಶಕ್ಕೆ ನೀಡುತ್ತಿದ್ದ ಜಿಲ್ಲೆ ಈ ರೀತಿ ಅಸಾಂವಿಧಾನಿಕ ಮತ್ತು ಮನುಷ್ಯವಿರೋಧಿ ಮಾದರಿಗಳಿಗೆಲ್ಲಾ ಕಾವು ನೀಡುವ ಮೂಲಕ ಆಳುವ ಸರ್ಕಾರಗಳ ಅಸ್ತಿತ್ವನ್ನೇ ಅಣಕಿಸಿದರೂ ಅಧಿಕಾರ ನಡೆಸುವ ಯಾರಿಗೂ ಇದು ಗಂಭೀರವಾದ ಬೆಳವಣಿಗೆ ಅಂತ ಅನಿಸದೇ ಹೋಯಿತು. ನಾಲ್ಕು ವರ್ಷಗಳಿಗೆ ಹಿಂದೆ ಈಗಿನ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಲಾದರೂ ಪರಿಸ್ಥಿತಿ ಸುಧಾರಿಸೀತು ಎನ್ನುವ ಭರವಸೆ ಹುಸಿಯಾಯಿತು.

ಯಾಕೆ ಹೀಗೆಲ್ಲಾ ಆಗುತ್ತಿದೆ ಅಲ್ಲಿ ಎಂದು ಎಲ್ಲಾ ಕೋನಗಳಿಂದಲೂ ಪರಿಶೀಲಿಸಿ, ಜಾತಿ-ಧರ್ಮ ಎಂದು ಮುಖ ಮೂತಿ ನೋಡದೆ ನಿಷ್ಪಕ್ಷಪಾತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಎಲ್ಲಾ ಧರ್ಮಗಳ ಎಲ್ಲಾ ರೀತಿಯ ಪಾಶವೀ ಶಕ್ತಿಗಳನ್ನು ಹತ್ತಿಕ್ಕದ ಆಳುವ ಸರ್ಕಾರಗಳ ಅಸಡ್ಡೆ ಫಸಲಿಗೆ ಬಂದು ನಿಂತಿದೆ. ಕಾನೂನು ಕತ್ತೆ ಬಾಲ ಎನ್ನುವ ಪ್ರವೃತ್ತಿಯ ಮನೋವ್ಯಾಧಿ ಈಗ ಉಲ್ಬಣಾವಸ್ಥೆ ತಲುಪಿದೆ.

ಆಳುವ ಸರ್ಕಾರದ, ಆಳುವ ಪಕ್ಷದ ಮತ್ತು ವಿರೋಧ ಪಕ್ಷಗಳ ಹೆಣ್ಣಾಳು, ಗಂಡಾಳು, ಮುಂದಾಳುಗಳು ಹೇಗಾದರೂ ಇರಲಿ. ಈ ದೇಶದ ಆಡಳಿತ ವ್ಯವಸ್ಥೆ ಹೇಗಿದೆ ಎಂದರೆ ಇಂತಹ ಎಲ್ಲಾ ವಿಕೃತಿಗಳನ್ನು ಮೀರಿ ಸುವ್ಯವಸ್ಥೆ ನೆಲೆಸುವುದಕ್ಕೆ ಏನೇನು ಮಾಡಬೇಕು ಅಷ್ಟು ಮಾಡುವ ಅಧಿಕಾರವನ್ನು ಅದು ಜಿಲ್ಲಾಧಿಕಾರಿ ಎಂದು ಕರೆಯಲಾಗುವ ಜಿಲ್ಲಾಡಳಿತದ ಮುಂದಾಳುವಿಗೆ ನೀಡುತ್ತದೆ. ಆದುದರಿಂದ ಜಿಲ್ಲಾಡಳಿತದ ಮುಂದಾಳುವಿನ ಸ್ಥಾನಕ್ಕೆ ಯಾವತ್ತೂ ಭಾರತೀಯ ಆಡಳಿತ ಸೇವೆಗೆ ಅರ್ಥಾತ್ ಐಎಎಸ್‌ಗೆ ಸೇರಿದ ಮಂದಿಯನ್ನೇ ನೇಮಿಸುವುದು.

ದಕ್ಷಿಣ ಕನ್ನಡದ ಮಟ್ಟಿಗೆ ಐಎಎಸ್ ಎಂಬ ಸಾಂವಿಧಾನಿಕ ಸ್ತಂಭಕ್ಕೂ ಗೆದ್ದಲು ಹಿಡಿದ ಹಾಗೆ ಕಾಣುತ್ತದೆ. ಇಲ್ಲದೇ ಹೋದರೆ ಪ್ರತಿಬಂಧಕಾಜ್ಞೆ ಧಿಕ್ಕರಿಸಿ ಜನ ಸೇರುವುದು ಎಂದರೇನು? ಸೇರಿದ ಜನ ಮತ್ತೆ ಮತ್ತೆ ‘ಹೊಡಿಮಗ ಹೊಡಿ, ಸುಡು ಮಗ ಸುಡು’ ಅಂತ ಗುಡುಗುವುದೆಂದರೇನು?

ದಕ್ಷಿಣ ಕನ್ನಡ ಎಂತಹ ಐಎಎಸ್ ಮಂದಿಗಳನ್ನೆಲ್ಲಾ ಕಂಡಿದೆ. ಈಗಲೂ ಜಿಲ್ಲಾ ಕೇಂದ್ರಸ್ಥಾನದ ಗೋಡೆಗಳು ಗಲಭೆಯ ಸಂದರ್ಭಗಳಲ್ಲಿ ಅಪ್ರತಿಮ ಧೈರ್ಯ ತೋರಿಸಿ ಸುವ್ಯವಸ್ಥೆ ಕಾಪಾಡಿದ ಹಲವು ಆಡಳಿತ ಮುಂದಾಳುಗಳ ಕತೆ ಸಾರುತ್ತವೆ.ಆ ಗೋಡೆಗಳು 60ರ ದಶಕದಲ್ಲಿ ವಿದ್ಯಾರ್ಥಿ

ಗಲಭೆಯನ್ನು ಅದ್ಭುತವಾಗಿ ಹತ್ತಿಕ್ಕಿದ ಎನ್.ಎ. ಮುತ್ತಣ್ಣ ಎಂಬುವರ ಕತೆ ಹೇಳುತ್ತವೆ, 70ರ ದಶಕದ ವಿನಾಶಕಾರಿ ನೆರೆಯನ್ನು ನಿಭಾಯಿಸಿದ ಜೆ.ಕೆ. ಅರೋರಾ ಎಂಬುವರ ಕತೆ ಹೇಳುತ್ತವೆ, 90ರ ದಶಕದ ಅಂತ್ಯದಲ್ಲಿ ಗುಲ್ಲು ಸುದ್ದಿಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಭೀಕರ ಸುರತ್ಕಲ್ ಗಲಭೆಯನ್ನು ಪ್ರಾಣ ಪಣಕ್ಕಿಟ್ಟು ನಿಯಂತ್ರಿಸಿದ ಇ.ವಿ. ರಮಣ ರೆಡ್ಡಿ ಎಂಬುವರ ಕತೆ ಹೇಳುತ್ತವೆ.

2003 ರಲ್ಲಿ ಉಗ್ರ ಪ್ರಚೋದನಕಾರಿ ಭಾಷಣ ಮಾಡಿದ್ದಕ್ಕೆ ಮಾಜಿ ಶಾಸಕರೊಬ್ಬರ ವಿರುದ್ಧ ಕೇಸು ಜಡಿದು ಆ ವ್ಯಕ್ತಿ ವರ್ಷಾನುಗಟ್ಟಲೆ ಏಕಾಂಗಿಯಾಗಿ ವಿಲಿವಿಲಿ ಒದ್ದಾಡಿ ರಾಜಕೀಯದ ಬಗ್ಗೆಯೇ ಜುಗುಪ್ಸೆ ಪಟ್ಟುಕೊಳ್ಳಲು ಕಾರಣರಾದ (ಆಧಾರ: ಅವರ ಆತ್ಮಚರಿತ್ರೆ) ಅರವಿಂದ ಶ್ರೀವಾಸ್ತವ ಎನ್ನುವವರೊಬ್ಬರ ಕತೆ ಹೇಳುತ್ತವೆ. ‘ವರ್ತಮಾನದ ಕತೆ ಹೇಳಾ’ ಅಂತ ಆ ಗೋಡೆಗಳನ್ನು ಕೇಳಿದರೆ ಅವು ‘ಫಿಶಿಂಗ್ ರಾಡ್‌ನ, ಟೆನಿಸ್ ಬಾಲ್‌ನ’ ಕತೆ ಹೇಳುತ್ತವೆ. ಅಯ್ಯೋ ದಕ್ಷಿಣ ಕನ್ನಡ.

ಜಿಲ್ಲೆಯ ಜನ ಶಾಂತಿಪ್ರಿಯರು; ಯಾರೋ ರಾಜಕೀಯದ ಮಂದಿ ಎಲ್ಲರ ನೆಮ್ಮದಿ ಕೆಡಿಸುತ್ತಿದ್ದಾರೆ ಎನ್ನುವ ಮಾತೊಂದಿದೆ. ಇದು ವ್ಯರ್ಥ ಮಾತು.  ಸಾಮಾನ್ಯ ಜನ ಎಲ್ಲೆಲ್ಲೂ ಶಾಂತಿಪ್ರಿಯರೇ- ಅದು ಅಫ್ಗಾನಿಸ್ತಾನವಾದರೂ ಸರಿ, ಪಾಕಿಸ್ತಾನವಾದರೂ ಸರಿ. ಆದರೆ ಅಪ್ರಿಯ ಸತ್ಯ ಏನು ಎಂದರೆ ಜನ ತಾವು ಯಾವುದಕ್ಕೆ ಅರ್ಹರೋ ಅದನ್ನೇ ಪಡೆಯುತ್ತಾರೆ. ದಕ್ಷಿಣ ಕನ್ನಡದ ಜನ ಅಲ್ಲಿನ ಸದ್ಯದ ವಿಕಾರಗಳಿಗೆಲ್ಲಾ ತಮ್ಮನ್ನು ತಾವು ಅರ್ಹರನ್ನಾಗಿಸಿಕೊಂಡದ್ದು ಹೇಗೆ ಎನ್ನುವ ಪ್ರಶ್ನೆಗೆ ಅವರೇ ಉತ್ತರ ಕಂಡುಕೊಳ್ಳಬೇಕು.

ಪ್ರತಿಕ್ರಿಯಿಸಿ (+)