ಅಳಿವಿನಂಚಿನಲ್ಲಿರುವ ಜೀವಿ ‘ಮನುಷ್ಯ’!

7

ಅಳಿವಿನಂಚಿನಲ್ಲಿರುವ ಜೀವಿ ‘ಮನುಷ್ಯ’!

ಟಿ.ಕೆ.ತ್ಯಾಗರಾಜ್
Published:
Updated:
ಅಳಿವಿನಂಚಿನಲ್ಲಿರುವ ಜೀವಿ ‘ಮನುಷ್ಯ’!

ಒಡಿಶಾದ ಅಂಗನವಾಡಿಯೊಂದರಲ್ಲಿ ನಾಲ್ಕು ವರ್ಷದ ಪುಟ್ಟ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿಯೊಬ್ಬರು ಬಿಸಿ ಗಂಜಿ ಎರಚಿದ ಪರಿಣಾಮ ಅದು ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಅಂಗನವಾಡಿಗೆ ನಿಗದಿತ ಸಮಯಕ್ಕೆ ಮೊದಲೇ ಆ ಮಗು ಬಂದಿದ್ದೇ ಅಪರಾಧ ಎನ್ನುವಂತೆ ಈ ಶಿಕ್ಷೆ ವಿಧಿಸಲಾಗಿದೆ.

ಉತ್ತರ ಪ್ರದೇಶದ ದಾದ್ರಿ ಬಳಿಯ ಬಿಸಾರ ಗ್ರಾಮದಲ್ಲಿ ಹಸುವಿನ ಮಾಂಸ ಇಟ್ಟುಕೊಂಡಿದ್ದಾರೆಂಬ ಶಂಕೆಯ ಮೇಲೆ ಮನೆಯೊಂದಕ್ಕೆ ನುಗ್ಗಿ ಇಟ್ಟಿಗೆ ಮತ್ತು ದೊಣ್ಣೆಗಳಿಂದ ದಾಳಿ ಮಾಡಿದ ದುಷ್ಕರ್ಮಿಗಳ ಗುಂಪೊಂದು ಮೊಹ್ಮದ್ ಅಖ್ಲಾಕ್ ಎಂಬುವರನ್ನು ಕೊಂದು ಹಾಕಿದ ಘಟನೆ ಒಂದೂವರೆ ವರ್ಷದ ಹಿಂದೆ ನಡೆದಿದೆ.

ಮುಂಬೈ ಸಮೀಪದ ಉಲ್ಲಾಸನಗರದಲ್ಲಿ ಅಂಗಡಿಯೊಂದರಿಂದ ಆಹಾರದ ಪೊಟ್ಟಣ ಕದ್ದ ಇಬ್ಬರು (ಒಬ್ಬ ಎಂಟು ವರ್ಷ, ಇನ್ನೊಬ್ಬ ಒಂಬತ್ತು ವರ್ಷ) ಬಾಲಕರನ್ನು ವಿವಸ್ತ್ರಗೊಳಿಸಿ ತಲೆ ಅರ್ಧದಷ್ಟು ಬೋಳಿಸಿ ಮನಸೋಇಚ್ಛೆ ಹೊಡೆದು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಶಿಕ್ಷಿಸಿದ ಅಮಾನವೀಯ ಘಟನೆ ಇತ್ತೀಚೆಗಷ್ಟೇ ವರದಿಯಾಗಿದೆ.

ಬಿಹಾರದ ಮುಜಫ್ಫರ್‌ಪುರದ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಆಸ್ಪತೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಮಹಿಳೆಯೊಬ್ಬಳ ಕಳೇಬರವನ್ನು ಕಸದ ಕೈಗಾಡಿಯಲ್ಲಿ ಶವಾಗಾರಕ್ಕೆ ಕೊಂಡೊಯ್ದ ಘಟನೆ ಮನುಕುಲವೇ ನಾಚಿ ತಲೆ ತಗ್ಗಿಸುವಂತೆ ಮಾಡಿದೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯಲು ಅಸಹಾಯಕರಾಗಿದ್ದ ವೃದ್ಧರೊಬ್ಬರಿಗೆ ಕ್ಷಕಿರಣ ಪರೀಕ್ಷೆಗಾಗಿ ಗಾಲಿ ಕುರ್ಚಿ ನೀಡದ್ದರಿಂದ ಅವರ ಪತ್ನಿಯೇ ಬೆಡ್‌ಶೀಟ್ ಮೇಲೆ ಮಲಗಿಸಿ ಎಳೆಯುತ್ತಾ ಕರೆದೊಯ್ದ ಘಟನೆ ಈಗ ರಾಜ್ಯದಾದ್ಯಂತ ಸುದ್ದಿಯಾಗಿದೆ.

ಇವು ಕೇವಲ ಕೆಲವೇ ಉದಾಹರಣೆಗಳು. ನಾಲ್ಕೈದು ವರ್ಷದ ಪುಟ್ಟ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ದಲಿತರೆಂಬ ಕಾರಣಕ್ಕೆ ನಡೆದ ಮಾರಣ ಹೋಮಗಳು, ಜಾನುವಾರುಗಳನ್ನು ಸಾಗಿಸುತ್ತಿದ್ದಾರೆಂಬ ಕಾರಣಕ್ಕೆ ನಡೆಯುವ ಹಲ್ಲೆಗಳು, ಯಾವುದೋ ತಪ್ಪಿಗೆ ಜನರೇ ಸ್ವತಃ ಬೇಕಾಬಿಟ್ಟಿಯಾಗಿ ಥಳಿಸಿ ಶಿಕ್ಷೆ ವಿಧಿಸುವ ಪ್ರಕರಣಗಳು ಒಂದೇ, ಎರಡೇ?

ಯಾಕೆ ಹೀಗಾಗುತ್ತಿದೆ? ಮನುಷ್ಯ ಮೂಲತಃ ಪ್ರಾಣಿಯಾಗಿದ್ದು ಹಿಂಸೆ, ಕ್ರೌರ್ಯ ಮೊದಲಾದ ಗುಣಗಳು ಆತನಲ್ಲಿ ಸಹಜ ಎನ್ನುವ ವಾದವೂ ಇದೆ. ಜಗತ್ತಿನಲ್ಲಿ ಎಷ್ಟು ಜನಸಂಖ್ಯೆ ಇದೆಯೋ ಅಷ್ಟೇ ವಿಭಿನ್ನ ವ್ಯಕ್ತಿತ್ವದವರು ಇರುತ್ತಾರೆ. ಒಬ್ಬರು ಇನ್ನೊಬ್ಬರ ತರಹ ಇರುವುದಿಲ್ಲ. ಪ್ರತಿಯೊಬ್ಬರ ಅಂತರಂಗದಲ್ಲಿ ಖಳನೂ ಇರುತ್ತಾನೆ, ಉದಾತ್ತ ಗುಣಗಳ ನಾಯಕನೂ ಇರುತ್ತಾನೆ.

ನಾವು ಯಾವುದನ್ನು ಹೆಚ್ಚು ಪೋಷಿಸುತ್ತೇವೆಯೋ ಆ ವ್ಯಕ್ತಿತ್ವವೇ ಬಯಲಿಗೆ ಬರುತ್ತದೆ. ವಿಶ್ವ ಸುಂದರಿ ಸ್ಪರ್ಧೆಗಾಗಿ ಅಳತೆ ಹಾಕಿದಂತೆ  ಸುಂದರಿಯರನ್ನು ಸೃಷ್ಟಿಸುವ ಕೆಲಸವೇನೋ ಆಹಾರ ತಜ್ಞರು ಮಾಡಬಹುದು. ಎಷ್ಟೋ ಜನರ ಕಣ್ಣಿಗೆ, ತಜ್ಞರು ರೂಪಿಸಿದ ವಿಶ್ವಸುಂದರಿಯರಿಗಿಂತ ಸಹಜ ಸುಂದರಿಯರೇ ಹೆಚ್ಚು ಆಕರ್ಷಕವಾಗಿ ಕಾಣಲೂಬಹುದು.

ಆದರೆ ಮನುಕುಲದ ವಿಚಾರಕ್ಕೆ ಬಂದರೆ ಉದಾತ್ತ ಗುಣಗಳೇ ತುಂಬಿರುವ ಮನುಷ್ಯರನ್ನು ಸೃಷ್ಟಿಸುವುದು ಸಾಧ್ಯವೇ? ವಿಚಿತ್ರ ಎಂದರೆ ಯಾವುದೇ ದಂಪತಿ ತಾವು ಸೂಚಿಸಿದ ನಿಗದಿತ ವೇಳೆಯಲ್ಲಿ ಸಂಭೋಗ ನಡೆಸಿದರೆ, ಆರೋಗ್ಯವಂತ ಮತ್ತು ಉದಾತ್ತ ಗುಣಗಳಿರುವ ಮಕ್ಕಳು ಹುಟ್ಟುತ್ತಾರೆ ಎಂದು ಹೇಳುವ ಜ್ಯೋತಿಷಿಗಳೂ ನಿಮಗೆ ಸುದ್ದಿವಾಹಿನಿಗಳಲ್ಲಿ ಕಾಣಸಿಗುತ್ತಾರೆ. ಇದಕ್ಕೆ ಸಂಬಂಧಿಸಿದ ಜಾಲತಾಣಗಳೂ ಅಂತರ್ಜಾಲದಲ್ಲಿ ಸುಲಭವಾಗಿ ಸಿಗುತ್ತಿವೆ! ಅದೇನೇ ಇರಲಿ. ಜಗತ್ತಿನಲ್ಲಿರುವಷ್ಟೂ ಜನರು ಉದಾತ್ತ ಗುಣಗಳಿರುವವರೇ ಆಗಿಬಿಟ್ಟಿದ್ದರೆ ಈ ಬದುಕು ನೀರಸವಾಗಿಬಿಡುತ್ತಿತ್ತೇನೋ ಎಂದೂ ಅನ್ನಿಸುತ್ತದೆ.

ಪ್ರೀತಿ, ಕರುಣೆ, ದಯೆ ಇವೇ ಮೊದಲಾದ ಗುಣಗಳನ್ನು ಒಳಗೊಂಡಿದ್ದರೆ ಮಾತ್ರ ನಾವು ಮನುಷ್ಯತ್ವ ಎಂದು ಬಳಸುತ್ತೇವೆ. ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡರೆ ಅಮಾನವೀಯ, ಅಮಾನುಷ ಮೊದಲಾದ ಪದಗಳನ್ನು ಬಳಸುತ್ತೇವೆ. ಅಂಥವರನ್ನು ಮನುಷ್ಯತ್ವ ಇಲ್ಲದವರು ಎಂದು ದೂರುತ್ತೇವೆ. ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಈಗ ನಮ್ಮ ಕಣ್ಣೆದುರೇ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಮನುಷ್ಯ ಮನುಷ್ಯನಾಗಿ ಉಳಿದಿಲ್ಲ ಅನ್ನಿಸತೊಡಗುತ್ತದೆ.

ಈಗ ನಾವು ಗುರುತಿಸುತ್ತಿರುವ ಅಥವಾ ಹೇಳಿಕೊಳ್ಳುತ್ತಿರುವ ಮನುಷ್ಯ ರೂಪುಗೊಂಡಿರುವುದು ಲಕ್ಷಾಂತರ ವರ್ಷಗಳ ವಿಕಸನದಲ್ಲಿ. ಈ ಮೇಲಿನ ಘಟನೆಗಳನ್ನೆಲ್ಲ ನೋಡಿದರೆ ನಾವು ಲಕ್ಷಾಂತರ ವರ್ಷಗಳ ಹಿಂದಕ್ಕೆ ಹೋಗುತ್ತಿದ್ದೇವೇನೋ ಎಂಬ ಅನುಮಾನವೂ ಕಾಡತೊಡಗುತ್ತದೆ.

ಮುಂಬೈನಲ್ಲಿ ಪುಟ್ಟ ಮಕ್ಕಳಿಬ್ಬರು ಅಂಗಡಿಯೊಂದರಲ್ಲಿ ಆಹಾರದ ಪೊಟ್ಟಣಗಳನ್ನು ಕದಿಯುವಂಥ ಪರಿಸ್ಥಿತಿ ಇತ್ತೆಂದರೆ ಅವುಗಳಿಗೆ ಎಷ್ಟೊಂದು  ಹಸಿವಾಗಿರಬಹುದು ಎಂದು ಯೋಚಿಸುವ ವ್ಯವಧಾನವೂ ಅಂಗಡಿ ಮಾಲೀಕನಿಗೆ  ಇರಲಿಲ್ಲ. ಅಥವಾ ಅಂಗಡಿಯಲ್ಲಿ ನೋಡಿದ ಆಹಾರದ ಪೊಟ್ಟಣ ಖರೀದಿಸುವುದು ತಮ್ಮಿಂದ ಸಾಧ್ಯವಿಲ್ಲ ಎನ್ನುವ ಕಡುಬಡತನ ಆ ಮಕ್ಕಳಿಗೆ ಇದ್ದಿರಬಹುದು.

ಹಾಗೆ ಆ ಮಕ್ಕಳು ಆಹಾರದ ಪೊಟ್ಟಣವನ್ನು ಕದ್ದಾಗ ಅಂಗಡಿ ಮಾಲೀಕ ಮಕ್ಕಳಿಗೆ ಒಳ್ಳೆ ಮಾತುಗಳಿಂದ ಬುದ್ಧಿ ಹೇಳಬಹುದಿತ್ತು ಅಥವಾ ಪೋಷಕರನ್ನು ಕರೆಸಿ ಮಕ್ಕಳು ಕದ್ದಿದ್ದ ಆಹಾರದ ಪೊಟ್ಟಣಗಳ ಬೆಲೆಯನ್ನು ಪಡೆದುಕೊಳ್ಳಬಹುದಿತ್ತು. ಅರ್ಧ ತಲೆ ಬೋಳಿಸಿ ಮೆರವಣಿಗೆಯ ಶಿಕ್ಷೆಗೆ ಒಳಗಾದ ಆ ಮಕ್ಕಳ ಮನೋಸ್ಥಿತಿ ಹೇಗಿದ್ದಿರಬಹುದು? ಆ ಮಕ್ಕಳ ಯಾತನೆ ಅನುಭವಿಸಿದರಷ್ಟೇ ಗೊತ್ತಾಗಬಲ್ಲುದು.

ಆಹಾರಕ್ಕೆ ಸಂಬಂಧಿಸಿದ ಕಳ್ಳತನದ ಪ್ರಕರಣಗಳನ್ನು ಓದಿದಾಗೆಲ್ಲ ನನಗೆ ನೆನಪಾಗುವುದು ಈ ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರಾದ ಜಗಜೀವನರಾಮ್. ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯೂ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಆಹಾರ ಮತ್ತು ಕೃಷಿ ಸಚಿವರೂ ಆಗಿದ್ದ ಜಗಜೀವನರಾಮ್ ಜಗದ ಜೀವಗಳ ಬೆಲೆ ಅರಿತಿದ್ದವರು. ಈ ಕಾರಣದಿಂದಲೇ ಅವರು, ‘ನನ್ನ ಆಡಳಿತದಲ್ಲಿ ಆಹಾರಕ್ಕಾಗಿ ಕಳ್ಳತನ ನಡೆಸಿದವರಿಗೆ ಶಿಕ್ಷೆ ಇಲ್ಲ. ಯಾಕೆಂದರೆ ಎಲ್ಲರಿಗೂ ಆಹಾರ ಒದಗಿಸುವಲ್ಲಿ ವಿಫಲನಾದವನಿಗೆ ಶಿಕ್ಷೆ ಕೊಡುವ ಅಧಿಕಾರವೂ ಇಲ್ಲ’ ಎಂದು ನಿಜವಾದ ಮನುಷ್ಯನಂತೆ ಮಾತನಾಡಿದ್ದರು.

ಈಗ ಅಂಥ ಒಬ್ಬ ನಾಯಕ ಸಿಗುವುದು ಸಾಧ್ಯವೇ ಅಥವಾ ಇಂಥ ಮಾತುಗಳನ್ನು ಈಗಿನ ನಾಯಕರಿಂದ ನಿರೀಕ್ಷಿಸಬಹುದೇ? ಇದೇ ರೀತಿ ನೆನಪಾಗುವ ಇನ್ನೊಬ್ಬ ವ್ಯಕ್ತಿ ಮೊಹಮ್ಮದ್ ಅಸ್ಲಾಂ ತಾತ. ಬೆಂಗಳೂರಿಗೆ ನಮ್ಮ ಮೆಟ್ರೊ ಬರುವ ಮುನ್ನ ಕೆ.ಆರ್.ವೃತ್ತ ಮತ್ತು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ನಡುವಿನ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಸಾಮಾನ್ಯವಾಗಿ ಸಪೋಟ ಮಾರುತ್ತಿದ್ದ ಅಸ್ಲಾಂ ತಾತ ಬಡ ಮಕ್ಕಳಿಗೆ ಉಚಿತವಾಗಿಯೇ ಹಣ್ಣುಗಳನ್ನು ನೀಡುತ್ತಿದ್ದರು.

ಕೆಲವೊಮ್ಮೆ ಮಾಮೂಲಿಯಂತೆ ವ್ಯಾಪಾರವಾಗದೇ ವಾಪಸಾಗುವಾಗ ಇನ್ನೊಂದು ದಿನ ಹಣ್ಣುಗಳನ್ನು ಹಾಗೇ ಉಳಿಸಿಕೊಂಡರೆ ಕೆಟ್ಟುಹೋಗುವ (ಅದೆಷ್ಟೋ ಅಂಗಡಿ ಮಾಲೀಕರು ಮಾಡುವಂತೆ ಹಾಳಾದ ನಂತರ ಎಸೆಯುವ ಆಯ್ಕೆಯೂ ಅವರಿಗಿದೆ) ಆತಂಕದಿಂದ ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕರೆದು ಕೊಟ್ಟಿರುವುದನ್ನೂ ನೋಡಿದ್ದೇನೆ. ಅಂದ ಹಾಗೆ ಅವರು ಮುಸ್ಲಿಮರನ್ನು ಮಾತ್ರ ಹುಡುಕಿ ಹಣ್ಣುಗಳನ್ನು ಕೊಟ್ಟಿರುವುದು ನಾನು ನೋಡಿಯೇ ಇಲ್ಲ. ಇತ್ತೀಚೆಗೆ ಅವರೇಕೋ ಕಾಣಸಿಗುತ್ತಿಲ್ಲ.

ಉತ್ತರಪ್ರದೇಶದ ಬಿಸಾರ ಗ್ರಾಮದ ಮನೆಯೊಂದರಲ್ಲಿ ಹಸುವಿನ ಮಾಂಸ ಇತ್ತೆಂಬ ಶಂಕೆಯ ಮೇಲೆ ಅಖ್ಲಾಕ್‌ ಎಂಬ ವೃದ್ಧನನ್ನು ಕೊಂದ ಘಟನೆ ನಿಜಕ್ಕೂ ಮನುಷ್ಯರಾಗಿರುವವರನ್ನು ಬೆಚ್ಚಿಬೀಳಿಸುತ್ತದೆ. ಅವರ ಮನೆಯಲ್ಲಿದ್ದ ಮಾಂಸವನ್ನು ಮೊದಲು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಮೇಕೆಯ ಮಾಂಸ ಎಂದು ಸಾಬೀತಾಗಿತ್ತು. ವಿವಿಧ ರೀತಿಯ ಒತ್ತಡಗಳ ನಂತರ ಇನ್ನೊಮ್ಮೆ ನಡೆಸಿದ ‘ವಿಶೇಷ’ ಪರೀಕ್ಷೆಯಲ್ಲಿ ಅದು ಹಸುವಿನ ಮಾಂಸ ಎಂದು ಪತ್ತೆಯಾಯಿತು! ಆದರೂ ಕೊಲ್ಲುವ ಅಧಿಕಾರ ಕೊಟ್ಟವರು ಯಾರು?

ರಾಮಜನ್ಮಭೂಮಿಗೆ ಸಂಬಂಧಿಸಿದ ಇಟ್ಟಿಗೆ ಯಾತ್ರೆಯ ಸಂದರ್ಭದಲ್ಲಿ ನನ್ನ ಪ್ರೀತಿಯ ಮೇಷ್ಟ್ರು ಪಿ.ಲಂಕೇಶ್ ‘ಇಟ್ಟಿಗೆ ಪವಿತ್ರವಲ್ಲ, ಜೀವ ಪವಿತ್ರ’ ಎಂದು ಬರೆದಿದ್ದುದು ನೆನಪಾಗುತ್ತದೆ. ಈಗ ಅದನ್ನು ‘ಗೋವು ಪವಿತ್ರವಲ್ಲ, ಜೀವ ಪವಿತ್ರ’ ಎಂದು ಓದಿಕೊಳ್ಳಬಹುದಾಗಿದೆ. ಇಷ್ಟಕ್ಕೂ ಯಾರು ಏನನ್ನು ತಿನ್ನಬೇಕು ಎಂದು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ.

ಮಡಿಕೇರಿಯ ನಮ್ಮ ಮನೆಯಲ್ಲಂತೂ ಸೋಮವಾರ ಮತ್ತು ಶನಿವಾರ ಹೊರತುಪಡಿಸಿ ಉಳಿದ ಐದೂ ದಿನಗಳು ಮೀನು, ಕುರಿ ಮಾಂಸ ಮತ್ತು ಕೋಳಿ ಮಾಂಸ ತಿನ್ನುತ್ತಿದ್ದೆವು. ಆದರೆ ದನ ಮತ್ತು ಹಂದಿ ಮಾಂಸ ಮನೆಯಲ್ಲಿ ಮಾಡುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಯಾರೂ ತಿನ್ನುತ್ತಿರಲಿಲ್ಲ. ಸುಮಾರು ನಲವತ್ತೈದು ಐವತ್ತು ವರ್ಷಗಳ ಹಿಂದೆ ನಮ್ಮ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಅಚ್ಚಯ್ಯ ಮತ್ತು ಬೋಪಯ್ಯ ಎಂಬ ವಿದ್ಯಾರ್ಥಿಗಳಾಗಿದ್ದ ಸೋದರರು ತಮ್ಮ ಊರಿನಿಂದ ಕಳಿಸುತ್ತಿದ್ದ ಹಂದಿ ಮಾಂಸವನ್ನು ನನ್ನ ಅಮ್ಮನಿಗೆ ಕೊಟ್ಟು ‘ನಿಮ್ಮ ಮಕ್ಕಳಿಗೆ ಕೊಡಿ. ದಪ್ಪ ಆಗ್ತಾರೆ, ಕೆಂಪು ಕೆಂಪಾಗ್ತಾರೆ’ ಎಂದು ಹೇಳುತ್ತಿದ್ದರು. ಅದನ್ನು ನನ್ನ ಅಮ್ಮ ಗುಟ್ಟಾಗಿ ಕೊಡುತ್ತಿದ್ದುದು ನನಗಿನ್ನೂ ನೆನಪಿದೆ.

ನಂತರದ ದಿನಗಳಲ್ಲಿ ಎ.ಕೆ.ಸುಬ್ಬಯ್ಯ ಅವರ ಮನೆಯಲ್ಲೂ ಒಂದೆರಡು ಸಲ ‘ಪಂದಿ ಕರಿ’ ತಿಂದಿದ್ದೇನೆ. ಗೆಳೆಯರೊಬ್ಬರ ಕೋಣೆಯಲ್ಲಿ ಪೋರ್ಕ್ ಸಾಸೇಜ್ ತಂದು ಮಾಡಿಕೊಳ್ಳುವ ಜತೆ ಹೋಟೆಲ್‌ಗಳಿಗೂ ಹೋಗಿ ಹಂದಿ ಮಾಂಸದ ರುಚಿ ಸವಿದಿದ್ದೇನೆ. ಆದರೆ ಮೊಟ್ಟಮೊದಲ ಸಲ ನಾನು ದನದ ಮಾಂಸ ತಿಂದಿದ್ದು ಮಂಗಳೂರಿನಲ್ಲಿ ‘ಮುಂಗಾರು’ ದಿನಪತ್ರಿಕೆಯಲ್ಲಿ ಇದ್ದ ದಿನಗಳಲ್ಲಿ.

1985ರ ಗಣೇಶ ಚತುರ್ಥಿ ದಿನ ಬೈಕಂಪಾಡಿಯ ಹೋಟೆಲೊಂದರಲ್ಲಿ ದನದ ಮಾಂಸ ತಿಂದಿದ್ದೆ. ಆನಂತರವೂ ಮಂಗಳೂರಿನಲ್ಲಿ ದನದ ಮಾಂಸಕ್ಕೆ ಪ್ರಖ್ಯಾತವಾಗಿದ್ದ ಹೋಟೆಲೊಂದರಲ್ಲಿ ಬೀಫ್ ಚಿಲ್ಲಿ ಸವಿಯಲು ಆಗಿಂದಾಗ್ಗೆ ಹೋಗಿ ಬರುವ ಪರಿಪಾಠ ಇರಿಸಿಕೊಂಡಿದ್ದೇನೆ. ಆಹಾರ ನನ್ನ ಇಷ್ಟ, ಅದು ನನ್ನ ಹಕ್ಕು.

ಆಸ್ಪತ್ರೆಗಳಲ್ಲೋ, ಸತ್ತ ನಂತರವೂ ಮನುಷ್ಯನ ದೇಹಕ್ಕೆ ಒಂದು ಘನತೆ ಇರುತ್ತದೆ ಎಂಬ ಅರಿವೂ ಇರುವುದಿಲ್ಲ. ಕಸದ ಗಾಡಿಯಲ್ಲಿ ಹೆಣವನ್ನು ಕೊಂಡೊಯ್ಯುತ್ತಾರೆಂದರೆ ಮನುಷ್ಯತ್ವ ಕಿಂಚಿತ್ತಾದರೂ ಉಳಿದಿದೆ ಅನ್ನಿಸುವುದೇ ಇಲ್ಲ. ಅಹಂಕಾರವೋ ಬಡಜನರ ಬಗ್ಗೆ ನಿರ್ಲಕ್ಷ್ಯವೋ ಆಸ್ಪತ್ರೆಗಳ ಬಹುತೇಕ ಸಿಬ್ಬಂದಿಗೆ  ರೋಗಿಗಳ ಜತೆ ಹೇಗೆ ವರ್ತಿಸಬೇಕೆನ್ನುವ ಕನಿಷ್ಠ ತಿಳಿವಳಿಕೆಯೂ ಇರುವುದಿಲ್ಲ. ಹೆಣಗಳೇ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿವೆಯೇನೋ ಎಂಬಂತೆ ಯಾಂತ್ರಿಕವಾಗಿ ವರ್ತಿಸುವುದು ಸಾಮಾನ್ಯವಾಗಿಬಿಟ್ಟಿದೆ.

ನಾವು ಆಗಿಂದಾಗ್ಗೆ ಯಾವುದೋ ಒಂದು ಹಕ್ಕಿ, ಪ್ರಾಣಿ ಅಥವಾ ಸಸ್ಯ ಅಳಿವಿನಂಚಿನಲ್ಲಿದೆ ಎನ್ನುವ ಸುದ್ದಿಯನ್ನು ಓದುತ್ತಿರುತ್ತೇವೆ. ಅಂಥ ಪಕ್ಷಿ, ಪ್ರಾಣಿ ಅಥವಾ ಸಸ್ಯಗಳನ್ನು ಉಳಿಸಲು ಜನಜಾಗೃತಿ ಕಾರ್ಯಕ್ರಮವನ್ನೂ ಆಯೋಜಿಸುತ್ತಿರುತ್ತೇವೆ. ಜವಾಬ್ದಾರಿಯುತ ನಾಗರಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ, ಯಾವುದೇ ಗೊಡವೆ ಇಲ್ಲದಂತೆ ಬದುಕುವವರು ತಾವಾಯಿತು ತಮ್ಮ ಪಾಡಾಯಿತು ಎನ್ನುವಂತೆ ಮೌನದಲ್ಲೇ ಮಹಾಸುಖವನ್ನು ಅನುಭವಿಸುತ್ತಿರುತ್ತಾರೆ.  ಆದರೆ ‘ಮನುಷ್ಯ’ನೇ ಅಳಿವಿನಂಚಿನಲ್ಲಿದ್ದಾನೆ ಎಂದು ನಿಮಗೆ ಒಮ್ಮೆಯಾದರೂ ಅನ್ನಿಸಿದೆಯೇ?

ನನ್ನಂತೆಯೇ ಅದೆಷ್ಟೋ ಮಂದಿಗೆ ಹೀಗೇ ಅನ್ನಿಸಿರಲಿಕ್ಕೂ ಸಾಕು. ಮನುಷ್ಯ ಎನ್ನುವುದಕ್ಕೆ ನಾನು ಬೇಕೆಂದೇ ‘ಮನುಷ್ಯ’ ಎಂದು ಉಲ್ಲೇಖಿಸಿದ್ದೇನೆ. ಉದ್ಧರಣ ಚಿಹ್ನೆ (Inverted comma) ಬಳಸಿರುವಲ್ಲಿ ನಿಜವಾದ ಮನುಷ್ಯ ಎಂದು ಹೇಳುತ್ತಿದ್ದೇನೆ. ಮನುಷ್ಯ ಎನ್ನುವ ರೂಪ ಮಾತ್ರ ಉಳಿದಿರುವ ಮನುಷ್ಯನಲ್ಲಿ ದಯೆ, ಪ್ರೀತಿ, ಕರುಣೆ, ಪರೋಪಕಾರ ಸೇರಿದಂತೆ ಆತನ ಮೂಲಗುಣಗಳು ಮಾಯವಾಗುತ್ತಿರುವುದಕ್ಕೆ ಅನೇಕ ಉದಾಹರಣೆಗಳು ಗೋಚರಿಸುತ್ತಿರುವುದರಿಂದ ನನಗೆ ಹಾಗನ್ನಿಸುತ್ತಿದೆ.

ಮನುಷ್ಯತ್ವವೇ ಸತ್ತಿರುವ ವ್ಯಕ್ತಿಗಳು ‘ಮನುಷ್ಯ’ರಾಗಿ ಉಳಿದಿರುವುದು ಸಾಧ್ಯವೇ? ಜಾಗತೀಕರಣ ಓಟದ ವೇಗದ ಜತೆ ಸ್ಪರ್ಧಿಸುತ್ತಿರುವ  ಮನುಷ್ಯ ನಿಜಕ್ಕೂ ತನ್ನತನವನ್ನು ಕಳೆದುಕೊಳ್ಳುತ್ತಿದ್ದಾನೆ. ಸುಲಭ ಮಾರ್ಗದಲ್ಲಿ ಗಳಿಸಬಹುದಾದ ಹಣ, ಕಂಪ್ಯೂಟರ್, ಮೊಬೈಲ್ ಫೋನ್, ಟಿ.ವಿ. ಮೊದಲಾದ ಭೌತಿಕ ವಸ್ತುಗಳ ಮಾಯಾಲೋಕದಲ್ಲಿ ನಿಧಾನವಾಗಿ (ಮನುಷ್ಯತ್ವವನ್ನೇ ಮರೆಯುವಂಥ) ವಿಸ್ಮೃತಿಗೆ ಒಳಗಾಗುತ್ತಿದ್ದಾನೆ. ‘ಮನುಷ್ಯ’ನನ್ನು ಮತ್ತೆ ಜಾಗೃತಗೊಳಿಸುವುದು ಹೇಗೆ? ಮನೆಯಲ್ಲೇ ಹೆತ್ತವರಿಂದ ಈ ಪಾಠ ಆರಂಭವಾಗಬೇಕು. ಹಾಗೇ ಶಾಲೆಗಳಲ್ಲೂ ಇದು ಮುಂದುವರಿಯಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry