ಅವಕಾಶಗಳ ನಗದೀಕರಣ ಮುಖ್ಯ

7

ಅವಕಾಶಗಳ ನಗದೀಕರಣ ಮುಖ್ಯ

ಕೆ. ಜಿ. ಕೃಪಾಲ್
Published:
Updated:
ಅವಕಾಶಗಳ ನಗದೀಕರಣ ಮುಖ್ಯ

ಷೇರುಪೇಟೆಯಲ್ಲಿ ಷೇರಿನ ಬೆಲೆಗಳು ಘಟನೆ ಮತ್ತು ಬೆಳವಣಿಗೆಗಳಿಗೆ ಮುಂಚೆಯೇ ಸ್ಪಂದಿಸಿ ಮೆರೆಯುತ್ತವೆ ಎಂಬುದಕ್ಕೆ ಈ ವಾರದ ಏರಿಳಿತಗಳು ಉತ್ತಮ ಉದಾಹರಣೆ. ಗಣರಾಜ್ಯೋತ್ಸವದ ಪ್ರಯುಕ್ತ ಹೆಚ್ಚಿನ ವಾಣಿಜ್ಯೋದ್ಯಮಗಳು, ಮಾಲ್‌ಗಳು, 'ಬಿಗ್ ಸೇಲ್' ಎಂಬ ಹಣೆಪಟ್ಟಿಯೊಂದಿಗೆ ವಿವಿಧ ರೀತಿಯ ಕೊಡುಗೆಗಳನ್ನು ಪ್ರಕಟಿಸುತ್ತವೆ. ಷೇರುಪೇಟೆಯಲ್ಲಿ ಈ ವಾರದ ಚಟುವಟಿಕೆಯಲ್ಲಿ ಹಲವಾರು ಅವಕಾಶಗಳನ್ನು ಕಂಡಿದ್ದೇವೆ. ವಿಶೇಷವಾಗಿ ಬ್ಯಾಂಕಿಂಗ್ ವಲಯ ಅದರಲ್ಲೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹೆಚ್ಚಿನ ಅವಕಾಶಗಳನ್ನು ಒದಗಿಸಿವೆ.

ಈ ಸಂದರ್ಭದಲ್ಲಿ ಹೂಡಿಕೆಗೆ ಲಭ್ಯವಾಗುವ ಲಾಭದ ಪ್ರಮಾಣದ ಮೇಲೆ ಗಮನಹರಿಸಿ ಅನುಕೂಲಕ್ಕೆ ಬಳಸಿಕೊಂಡರೆ ಮಾತ್ರ ಯಶಸ್ವಿ ಹೂಡಿಕೆಯಾಗಲು ಸಾಧ್ಯ. ಎಲ್ಲವೂ ವ್ಯಾವಹಾರಿಕ ದೃಷ್ಟಿಯಿಂದ ಕಾಣುವ ಈ ಜಗತ್ತಿನಲ್ಲಿ  ಯಶಸ್ಸು ಕಾಣಬೇಕಾದರೆ ಅವಕಾಶಗಳನ್ನು ನಗದೀಕರಿಸಿಕೊಳ್ಳಲೇಬೇಕು ಎಂಬುದಕ್ಕೆ ವಿಶ್ವ ಆರ್ಥಿಕವೇದಿಕೆ ಪ್ರಕಟಿಸಿದ ‘ಹಿಂದಿನ ವರ್ಷ ಸೃಷ್ಟಿಯಾದ ಶೇ82 ರಷ್ಟು ಸಂಪತ್ತು  ವಿಶ್ವದ ಶೇ1 ರಷ್ಟು ಜನಸಂಖ್ಯೆಗೆ ಮಾತ್ರ  ತಲುಪಿದೆ' ಎಂಬ ಅಂಶ ದೃಢೀಕರಿಸುತ್ತದೆ.

ಇತ್ತೀಚಿಗೆ ಪೇಟೆಯು ಎಲ್ಲಾ ರೀತಿಯ ಹೂಡಿಕೆದಾರರಿಗೆ ಅವಕಾಶ ಸೃಷ್ಟಿಸಿಕೊಡುತ್ತಿದೆ. ಅದರಲ್ಲೂ ಅಲ್ಪಕಾಲಿಕ ಹೂಡಿಕೆಗೆ ಹೆಚ್ಚು ಒತ್ತು ಕೊಡುತ್ತಿದೆ. ಉತ್ತಮವಾದ ಫಲಿತಾಂಶ ಪ್ರಕಟಿಸಿದೆ ಎಂಬ ಕಾರಣಕ್ಕಾಗಿ ₹930 ರ ಸಮೀಪದಲ್ಲಿದ್ದ ರಿಲಯನ್ಸ್ ಇಂಡಸ್ಟ್ರೀಸ್  ಷೇರಿನ ಬೆಲೆ ಮಂಗಳವಾರ ₹990 ರವರೆಗೂ ಕಂಡಿತು. ಆದರೆ ಸ್ಥಿರತೆ ಕಾಣದೆ ಷೇರಿನ ಬೆಲೆಯೂ ₹960 ರ ಸಮೀಪಕ್ಕೆ ಹಿಂದಿರುಗಿದೆ. ಅಂದರೆ ಕೇವಲ ನಾಲ್ಕು ದಿನಗಳಲ್ಲಿ ಷೇರಿನ ಬೆಲೆ ₹ 60 ರಷ್ಟು ಏರಿಕೆ ಕಂಡು ₹30 ರಷ್ಟು ಇಳಿಕೆ ಕಂಡಿದೆ.

ಸೋಮವಾರ  ರಿಲಯನ್ಸ್ ಕ್ಯಾಪಿಟಲ್ ಟ್ರಸ್ಟೀ ಕಂಪನಿ ರಿಲಯನ್ಸ್ ಗ್ರೋತ್ ಫಂಡ್  ಪರವಾಗಿ   12.11 ಲಕ್ಷ  ಕೆಳಮಧ್ಯಮ ಶ್ರೇಣಿ ಕಂಪನಿ ಇಂಡೊಕೋ ರೆಮೆಡಿಸ್ ಲಿ ಕಂಪನಿ ಷೇರುಗಳನ್ನು  ಖರೀದಿಸಿದ ಕಾರಣ ₹275 ರ ಸಮೀಪದಿಂದ ಚುರುಕಾದ ಚಟುವಟಿಕೆಯ ಕಾರಣ ₹317 ರವರೆಗೂ ಏರಿ, ₹297 ರಲ್ಲಿ ವಾರಾಂತ್ಯ ಕಂಡಿದೆ.

ಜುಲೈ ತಿಂಗಳಲ್ಲಿ ಜಿಎಸ್‌ಟಿಯಿಂದ ವಾರ್ಷಿಕ ಗರಿಷ್ಠ  ₹353 ನ್ನು ತಲುಪಿದ್ದ ಐಟಿಸಿ ಷೇರಿನ ಬೆಲೆ ನಂತರದಲ್ಲಿ ನವೆಂಬರ್ ತಿಂಗಳಲ್ಲಿ ₹250ರ ಸಮೀಪಕ್ಕೆ ಕುಸಿದು ಈ ವಾರ ಮತ್ತೊಮ್ಮೆ ಪುಟಿದೆದ್ದು ₹283 ರ ಸಮೀಪಕ್ಕೆ ಜಿಗಿತ ಕಂಡಿರುವುದು ಪೇಟೆಯ ಚಂಚಲತೆ ಬಿಂಬಿಸುತ್ತದೆ.

ಬ್ಯಾಂಕಿಂಗ್ ವಲಯಕ್ಕೆ ಬಂಡವಾಳ ಒದಗಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಪ್ರೇರಿತವಾಗಿ ಸರ್ಕಾರಿ ವಲಯದ ಬ್ಯಾಂಕ್‌ಗಳು ತ್ವರಿತ ಏರಿಕೆ ಕಂಡವು.  ಕೆನರಾ ಬ್ಯಾಂಕ್ ಷೇರು ಶುಕ್ರವಾರ ಒಂದೇ ದಿನ ₹384 ರ ಗರಿಷ್ಠದಿಂದ ₹358 ರ ಸಮೀಪಕ್ಕೆ ಕುಸಿದಿದೆ. ಇದರ ಹಿಂದೆ ಮೂರು ದಿನಗಳಲ್ಲಿ ₹350 ರ ಸಮೀಪದಿಂದ ₹384 ರವರೆಗೂ ಷೇರಿನ ಬೆಲೆ ಏರಿಕೆ ಕಂಡಿತ್ತು.  ಅದೇ ರೀತಿ ಎಸ್‌ಬಿಐ,  ಪಂಜಾಬ್ ನ್ಯಾಷನಲ್ ಬ್ಯಾಂಕ್,  ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಮುಂತಾದವು ಪ್ರದರ್ಶಿಸಿದ ಅಲ್ಪಕಾಲಿಕ ಅವಕಾಶಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡವರೇ ಧನ್ಯರು.

ಕಚ್ಚಾ ತೈಲಬೆಲೆ ಏರಿಕೆಯ ಕಾರಣ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಒತ್ತಡದಲ್ಲಿದ್ದರೆ, ಎಚ್‌ಪಿಸಿಎಲ್‌ ಕಂಪನಿಯನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಲಿರುವ ಒಎನ್‌ಜಿಸಿ ಉತ್ತಮ ಏರಿಕೆ ಪಡೆದುಕೊಂಡಿತು. ಕಚ್ಚಾ ರಬ್ಬರ್ ಇಳಿಕೆ, ಡಾಲರ್ ಬೆಲೆ ಏರಿಕೆ, ಚಿನಿವಾರಪೇಟೆಯಲ್ಲಿ ಕಾಣುತ್ತಿರುವ ಚಟುವಟಿಕೆಗಳು ಎಲ್ಲವೂ ತಾತ್ಕಾಲಿಕ. ಇವುಗಳು ಅಲ್ಪಕಾಲದಲ್ಲಿ ವ್ಯಾಲ್ಯೂ ಪಿಕ್ ಅವಕಾಶ ಕಲ್ಪಿಸಿಕೊಡುತ್ತವೆ. ಅದರ ಉಪಯೋಗ ಪಡಿಸಿಕೊಳ್ಳುವುದು ಇಂದಿನ ಅಗತ್ಯ.

ಹೊಸ ಷೇರು:  ಪ್ರತಿ ಷೇರಿಗೆ ₹245 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ನ್ಯೂಜೆನ್ ಸಾಫ್ಟ್ ವೇರ್ ಟೆಕ್ನಾಲಜಿಸ್ ಲಿಮಿಟೆಡ್ 29ರಿಂದ  ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರು

l ಸರ್ಕಾರಿ ಸ್ವಾಮ್ಯದ ತೈಲ ಮಾರಾಟದ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ತಿಂಗಳ 30 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

l ಗಾರ್ನೆಟ್ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ 2:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ( ಈ ಷೇರಿನ ಬೆಲೆ ಕಳೆದ ಒಂದು ವರ್ಷದಲ್ಲಿ ₹360 ರ ಸಮೀಪದಿಂದ ₹1,870 ರವರೆಗೂ ಜಿಗಿತ ಕಂಡಿದೆ ಎಂಬ ಅಂಶ ಗಮನದಲ್ಲಿರಿಸಿರಿ).

l ಸಿಟಾಡೆಲ್ ರಿಯಾಲ್ಟಿ ಆ್ಯಂಡ್ ಡೆವಲಪರ್ಸ್ ಲಿಮಿಟೆಡ್ ಫೆಬ್ರುವರಿ 2 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಹಕ್ಕಿನ ಷೇರು:

l ಟಾಟಾ ಸ್ಟೀಲ್ ಲಿಮಿಟೆಡ್ ಕಂಪನಿ ಪ್ರತಿ ಷೇರಿಗೆ ₹510 ರಂತೆ  4:25 ರ ಅನುಪಾತದಲ್ಲಿ ವಿತರಿಸಲಿರುವ ಹಕ್ಕಿನ ಷೇರಿಗೆ ಮತ್ತು ₹615 ರಂತೆ 2:25 ರ ಅನುಪಾತದ ಭಾಗಶಃ ಪಾವತಿಸುವ ಹಕ್ಕಿನ ಷೇರಿಗೆ ಫೆಬ್ರುವರಿ 1 ನಿಗದಿತ ದಿನ.

l ಪಿರಾಮೆಲ್ ಇಂಟರ್ ಪ್ರೈಸಸ್ ಲಿಮಿಟೆಡ್ ಕಂಪನಿ  ₹2  ರ ಮುಖಬೆಲೆಯ ಪ್ರತಿ ಷೇರಿಗೆ ₹2,380 ರಂತೆ 1:23 ರ ಅನುಪಾತದಲ್ಲಿ ವಿತರಿಸಲಿರುವ ಹಕ್ಕಿನ ಷೇರಿಗೆ ಫೆಬ್ರುವರಿ 1 ನಿಗದಿತ ದಿನ.

l ಎಲ್ಪ್ರೋ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ  ಪ್ರತಿ ಷೇರಿಗೆ ₹32.10 ರಂತೆ 9:40 ರ ಅನುಪಾತದಲ್ಲಿ ವಿತರಿಸಲಿರುವ ಹಕ್ಕಿನ ಷೇರಿಗೆ ಫೆಬ್ರುವರಿ 9 ನಿಗದಿತ ದಿನ.

***

ವಾರದ ಮುನ್ನೋಟ

ಫೆಬ್ರುವರಿ 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದೆ.  ನೇರ ತೆರಿಗೆ ರಿಯಾಯ್ತಿ ಮಿತಿ ಏರಿಕೆ, ದೀರ್ಘಾವಧಿಯ ಬಂಡವಾಳ ಗಳಿಕೆ ತೆರಿಗೆಯಲ್ಲಿ ಬದಲಾವಣೆ, ವಿತ್ತೀಯ ಕೊರತೆ, ಇತರೆ ಸುಧಾರಣಾ ಕ್ರಮಗಳು ಈಗಾಗಲೇ ಉತ್ತುಂಗದಲ್ಲಿರುವ ಷೇರುಪೇಟೆಯಲ್ಲಿ ಹೆಚ್ಚಿನ ಏರಿಳಿತಗಳನ್ನು ಉಂಟುಮಾಡಲಿದೆ. ಹೆಚ್ಚಿನ ಕಂಪನಿಗಳು ತಮ್ಮ ಸಾಧನೆಯ ಅಂಕಿ ಅಂಶಗಳನ್ನು ಪ್ರಕಟಿಸಲಿರುವುದು ಸಹ ಏರಿಳಿತಗಳಿಗೆ ಪೂರಕ ಅಂಶವಾಗಿದೆ.

ಕಳೆದ ಒಂದು ತಿಂಗಳಲ್ಲಿ ₹304 ರ ಸಮೀಪದಿಂದ ₹233 ರವರೆಗೂ ಕುಸಿದಿರುವ ಬಾಂಬೆ ಡೈಯಿಂಗ್, ₹608 ರಿಂದ ₹487 ರವರೆಗೂ ಕುಸಿದಿರುವ ಕನ್ಸಾಯಿ ನೆರೊಲ್ಯಾಕ್, ₹289 ರಿಂದ ₹250 ರ ಸಮೀಪಕ್ಕೆ ಕುಸಿದಿರುವ ರ‍್ಯಾಲಿಸ್ (Rallis ) ಇಂಡಿಯಾಗಳು ಮುಂದಿನ ದಿನಗಳಿಗೆ ಉತ್ತಮ ಹೂಡಿಕೆಗಳಾಗಿವೆ.

(ಮೊ: 9886313380, ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry