ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

7

ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

ನಾಗೇಶ ಹೆಗಡೆ
Published:
Updated:
ಅವಳ ದೇಹದಲ್ಲಿ ರೂಪುಗೊಂಡ ಅಮರ ಕೋಶ

ವಿಜ್ಞಾನ ರಂಗಕ್ಕೆ ಅತಿ ವಿಶೇಷ ಕೊಡುಗೆ ನೀಡಿದ ಮಹಿಳೆ ಯಾರು ಗೊತ್ತೆ? ಮೇರಿ ಕ್ಯೂರಿ, ಬಾರ್ಬರಾ ಮ್ಯಾಕ್ಲಿಂಟೊಕ್, ಡೊರೊಥಿ ಹಾಜ್ಕಿನ್, ರೇಚೆಲ್ ಕಾರ್ಸನ್ ಇವರನ್ನೆಲ್ಲ ಬದಿಗಿಡಿ. ಅತಿ ದೊಡ್ಡ ಕೊಡುಗೆ ಕೊಟ್ಟವಳ ಹೆಸರು ಹೆನ್ರಿಯೆಟ್ಟಾ ಲ್ಯಾಕ್ಸ್. ವಿಶೇಷ ಏನೆಂದರೆ ಅವಳು ವಿಜ್ಞಾನಿಯೇ ಅಲ್ಲ. ಅಮೆರಿಕಕ್ಕೆ ಕೂಲಿ ಮಾಡಲು ಹೋದ ಆಫ್ರಿಕನ್ ಕಪ್ಪು ಜನರ ಕುಟುಂಬದಲ್ಲಿ ಜನಿಸಿದವಳು. ದೊಡ್ಡವಳಾಗಿ, ಮದುವೆಯಾಗಿ, ಐದು ಮಕ್ಕಳ ತಾಯಿಯಾಗಿ 1951ರಲ್ಲಿ ತನ್ನ 31ನೇ ವಯಸ್ಸಿಗೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಾಲ್ಟಿಮೋರ್ ಆಸ್ಪತ್ರೆ ಸೇರಿದಳು.

ಅವಳಿಗೆ ಗರ್ಭದ ಕೊರಳಿನ ಕ್ಯಾನ್ಸರ್ ಬಂದಿತ್ತು. ಆಸ್ಪತ್ರೆಯ ಸಂಶೋಧನಾ ವಿಭಾಗದ ಸಹಾಯಕಿ ಮೇರಿ ಕ್ಯೂಬಿಸೆಕ್ ಎಂಬಾಕೆ ಈ ರೋಗಿಯ ಕೆಲವು ಕ್ಯಾನ್ಸರ್ ಕೋಶಗಳನ್ನು ಪ್ರತ್ಯೇಕ ಎತ್ತಿ ತಂದಳು. ಶೀಶೆಯಲ್ಲಿ ಕೋಳಿಯ ದೇಹದ್ರವದಲ್ಲಿ ಅವನ್ನು ಮುಳುಗಿಸಿ, ಅಂದಿನ ಪದ್ಧತಿಯ ಹಾಗೆ ರೋಗಿಯ ಹೆಸರನ್ನೇ ಸಂಕ್ಷಿಪ್ತವಾಗಿ ‘HeLa (ಹೀಲಾ) ಸೆಲ್ಸ್’ ಎಂದು ಬರೆದು, ದಿನಾಂಕ ಗೀಚಿ, ಅಟ್ಟಣಿಗೆಯಲ್ಲಿ ಇಟ್ಟಳು. ಲ್ಯಾಬಿನ ಹಿರಿಯ ವಿಜ್ಞಾನಿ ಜಾರ್ಜ್ ಗೈ

ಯಾವ ಕ್ಷಣದಲ್ಲಾದರೂ ಪ್ರಯೋಗಕ್ಕೆಂದು ‘ಒಂದು ಸ್ಯಾಂಪಲ್ ತಾ’ ಎಂದು ಹೇಳಿದರೆ ಆ ಕ್ಷಣಕ್ಕೆ ಸಿಗಬೇಕಲ್ಲ? ಆ ವಿಜ್ಞಾನಿ ಮಾತ್ರ ಕೆಲದಿನ ಅತ್ತ ಸುಳಿಯಲೇ ಇಲ್ಲ.

ಸಾಮಾನ್ಯವಾಗಿ ಮನುಷ್ಯರ ದೇಹದಿಂದ ಹೊರಕ್ಕೆ ತೆಗೆದ ಜೀವಕೋಶಗಳು ಎರಡು ಮೂರು ದಿನಗಳಿಗಿಂತ ಹೆಚ್ಚಿಗೆ ಬದುಕಿರುವುದಿಲ್ಲ. ಆದರೆ ವಾರ ಕಳೆದರೂ ಮೇರಿ ಸಂಗ್ರಹಿಸಿದ ಕ್ಯಾನ್ಸರ್ ಜೀವಕೋಶಗಳು ಜೀವಂತ ಇದ್ದವು. ಅಷ್ಟೇ ಅಲ್ಲ, ಮೂರು ವಾರಗಳ ನಂತರ ಅವು ನಿದ್ದೆಯಿಂದ ಎದ್ದಂತೆ ಮತ್ತೆ ಚುರುಕಾಗಿ ಅಲ್ಲೇ ವಿಭಜನೆಯಾಗುತ್ತ ಬೆಳೆಯತೊಡಗಿದ್ದವು. ಈ ವಿಲಕ್ಷಣ ಸಂಗತಿಯನ್ನು ಮೇರಿ ಮತ್ತೊಮ್ಮೆ ಪರೀಕ್ಷೆ ಮಾಡಿದಳು. ಬಾಸ್ ಬಳಿ ಹೋಗಿ ವಿವರಿಸಿದಳು. ಕುತೂಹಲದಿಂದ ಆತನೂ ಹೆನ್ರಿಯೆಟ್ಟಾಳ ಕ್ಯಾನ್ಸರ್ಕೋಶಗಳನ್ನು ಪರೀಕ್ಷಿಸಿದಾಗ ಅಚ್ಚರಿ ಕಾದಿತ್ತು. ಅವಳ ಕ್ಯಾನ್ಸರ್ ಕೋಶಗಳಿಗೆ ಸಾವೇ ಇರಲಿಲ್ಲ. ಎಲ್ಲಿಟ್ಟರಲ್ಲಿ ಅವು ಸಲೀಸಾಗಿ ಬೆಳೆಯುತ್ತಿದ್ದವು. ವಿಭಜನೆ ಆಗುತ್ತಿದ್ದವು. ಗಾಜಿನಬಟ್ಟಲಲ್ಲಿ, ಕೈಗವಸಿನ ತುದಿಯಲ್ಲಿ, ಪಿಪೆಟ್ ಕೊಳವೆಯ ಮೂತಿಯಲ್ಲಿ ಬದುಕಿ ಕೂತು, ನೀರಿನಂಶ ಸಿಕ್ಕಾಗ ಅಲ್ಲಲ್ಲೇ ಬೆಳೆಯುತ್ತಿದ್ದವು. ಸಂಭ್ರಮದಿಂದ ಗೈ ತನ್ನ ಇತರ ಕೆಲಸಗಳನ್ನು ಬದಿಗಿಟ್ಟು ಹೀಲಾ ಕೋಶಗಳ ಸಂವರ್ಧನೆಯ ಕೆಲಸವನ್ನೇ ಮುಖ್ಯವಾಗಿ ಕೈಗೊಂಡ. ದೊಡ್ಡ ಪ್ರಮಾಣದಲ್ಲಿ ಈ ಕೋಶಗಳನ್ನು ಫ್ಯಾಕ್ಟರಿಯಂತೆ ಉತ್ಪಾದಿಸಬಲ್ಲ ರೋಲರ್ ಡ್ರಮ್ ತಯಾರಿಸಿದ.

ಮನುಷ್ಯನ ದೇಹದಲ್ಲಿ ಸಾಮಾನ್ಯ ಜೀವಕೋಶಗಳು ಒಂದರಿಂದ ಎರಡಾಗಿ, ಎರಡರಿಂದ ನಾಲ್ಕಾಗಿ, ಎಂಟಾಗಿಸತತ ವಿಭಜನೆಗೊಳ್ಳುತ್ತ 50-60 ಬಾರಿ ಹೋಳಾದ ನಂತರಗತಿಸುತ್ತವೆ. ದೀರ್ಘಕಾಲ ಬಾಳದ ಹಾಗೆ ಅವುಗಳಲ್ಲಿ ಒಂದುಬಗೆಯ ಜೈವಿಕ ಗಡಿಯಾರ ಇರುತ್ತದೆ. ಅದಕ್ಕೆ ‘ಟೆಲೊಮರೇಸ್’ ಎನ್ನುತ್ತಾರೆ. ಒಂದೇ ಜೀವಕೋಶ ಮತ್ತೆ ಮತ್ತೆ ವಿಭಜನೆ ಆಗುತ್ತ ಹೋದ ಹಾಗೆ ಅವುಗಳಲ್ಲಿನ ಟೆಲೊಮರೇಸ್ ಕೂಡ ಚಿಕ್ಕದಾಗುತ್ತ ಆಗುತ್ತ ನಶಿಸಿಹೋಗುತ್ತದೆ. ಕೊನೆಯ ಕ್ಷಣದಲ್ಲಿ ಜೀವಕೋಶದೊಳಗಿನ ಡಿಎನ್‌ಎ ವರ್ಣತಂತು ಭಗ್ನಗೊಂಡು ಇಡೀ ಕೋಶವೇ ಮುದ್ದೆಯಾಗಿ ಇತರ ಹೊಸ ಜೀವಕೋಶಗಳಿಗೆ ಆಹಾರವಾಗುತ್ತದೆ. ಯಾವುದೋ ರೋಗದ ಪರೀಕ್ಷೆ ಮಾಡಲೆಂದು ಕೆಲವು ಜೀವಕೋಶಗಳನ್ನು ದೇಹದ ಹೊರಕ್ಕೆ ತೆಗೆದು ಎಂಥದ್ದೇ ಸೂಕ್ತ ಪೋಷಕ ದ್ರವ್ಯಗಳಲ್ಲಿ ಅವುಗಳನ್ನು ಅದ್ದಿಟ್ಟರೂ ಅಷ್ಟೆ. ಗಡಿಯಾರ ಬಂದ್ ಆದಹಾಗೆ ನಿಗದಿತ ಸಮಯದ ನಂತರ ಅವುಗಳ ವಿಭಜನೆ ಕ್ರಿಯೆ ನಿಂತುಹೋಗುತ್ತದೆ (ಆಕರ ಕೋಶ, ಅಂದರೆ ಸ್ಟೆಮ್ ಸೆಲ್‌ಗಳು ಮಾತ್ರ ನಿರಂತರ ವಿಭಜನೆ ಆಗುತ್ತವೆ). ಹೀಗೆ ನಿಗದಿತ ಆಯಸ್ಸಿರುವ ಜೀವಕೋಶಗಳನ್ನು ಗಾಜಿನ ಬಟ್ಟಲಲ್ಲಿ ಬೆಳೆಸಿ, ಅವುಗಳ ಮೇಲೆ ವಿವಿಧ ಬಗೆಯ ಔಷಧಗಳನ್ನೋ, ವಿಕಿರಣ ವಿಷಗಳನ್ನೋ ಸಿಂಚನ ಮಾಡಿ ಪರೀಕ್ಷೆ ಮಾಡುವುದು ಫಜೀತಿಯ ಕೆಲಸ. ಜೀವಕೋಶ ತಾನಾಗಿ ಸಾಯುವ ಮೊದಲೇ ಪರೀಕ್ಷೆ ಪೂರ್ಣವಾಗಬೇಕು. ಪರೀಕ್ಷೆ ಅರ್ಧ ಹಂತದಲ್ಲಿದ್ದಾಗಲೇ ಜೀವಕೋಶ ಅವಸಾನಗೊಂಡರೆ ಮತ್ತೊಂದು ಜೀವಕೋಶದ ಮೇಲೆ ಹೊಸದಾಗಿ ಪರೀಕ್ಷೆ ಆರಂಭಿಸಬೇಕು. ಇಂಥ ವೈಫಲ್ಯಗಳನ್ನು ಅನೇಕ ಬಾರಿ ಎದುರಿಸಿದ ಜಾರ್ಜ್ ತನಗೆ ಸಿಕ್ಕ ವಿಶಿಷ್ಟ ಜೀವಕೋಶವನ್ನು ಇತರರಿಗೂ ಪರಿಚಯಿಸಿದ. ಪಕ್ಕದಲ್ಲೇ ಸಾಕ್ ಸಂಸ್ಥೆಯಲ್ಲಿ ಪೋಲಿಯೊ ರೋಗಕ್ಕೆ ಲಸಿಕೆ ತಯಾರಿಸಲು ಜೀವವಿಜ್ಞಾನಿಗಳು ಏನೆಲ್ಲ ಪರದಾಡುತ್ತಿದ್ದರು. ಹೀಲಾ ಕೋಶಗಳು ಸಿಕ್ಕಿದ್ದೇ ತಡ, ಅವುಗಳ ಮೇಲೆ ಪೋಲಿಯೊ ವೈರಾಣುಗಳನ್ನು ಚಿಮುಕಿಸಿ ಕೇವಲ ಐದಾರು ತಿಂಗಳಲ್ಲೇ, ಅದೇ 1951ರಲ್ಲಿ ಯಶಸ್ವಿಯಾಗಿ ಪೋಲಿಯೊ ಲಸಿಕೆಯನ್ನು ತಯಾರಿಸಿದರು.

ಬಾಲ್ಟಿಮೋರ್ ನಗರದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಉತ್ಪಾದನೆಯಾಗುತ್ತಿದ್ದ ಹೀಲಾ ಸೆಲ್‌ಗಳಿಗೆ ಇನ್ನಿಲ್ಲದ ಬೇಡಿಕೆ ಬಂತು. ಗೈ ಈಗ ಕೊಡು-ಗೈ ದೊರೆಯಾದ. ಹೆನ್ರಿಯೆಟ್ಟಾ ತೀರಿಕೊಂಡು ಗೋರಿ ಸೇರಿದಳು; ಅವಳ ಅಂಗಾಂಶದಲ್ಲಿ ಬೆಳೆದ ಜೀವಕೋಶಗಳು ಜಗದ್ವಾಪಿಯಾದವು. ಮೊದಲ ಹತ್ತಾರು ವರ್ಷಗಳಂತೂ ಎಲ್ಲೆಲ್ಲೂ ಅದಕ್ಕೆ ಬೇಡಿಕೆ. ಅಮೆರಿಕ ಸರ್ಕಾರ ವಿಶೇಷ ಧಾರಾಳತನ ತೋರಿಸಿ ತನ್ನ ಕಡುವೈರಿ ಸೋವಿಯತ್ ರಷ್ಯಕ್ಕೆ ಅದನ್ನು ಒದಗಿಸಿದ್ದೇನು; ರಷ್ಯನ್ನರು ತಮ್ಮ ಬಾಹ್ಯಾಕಾಶ ನೌಕೆಯಲ್ಲಿ ಹೀಲಾ ಕೋಶಗಳನ್ನಿಟ್ಟು, ಅಲ್ಲಿನ ಗುರುತ್ವಶೂನ್ಯದಲ್ಲಿ ಅವುಗಳ ಸಂವರ್ಧನೆ ಮಾಡಿದ್ದೇನು. ಈಗಂತೂ ಅವು ನೂರಾರು ದೇಶಗಳಲ್ಲಿ ಅಸಂಖ್ಯಾತ ವೈದ್ಯಕೀಯ ಪ್ರಯೋಗಗಳಿಗೆ ಮೂಲ ಸಾಮಗ್ರಿಯಾಗಿ ಬಳಕೆಯಾಗುತ್ತಿವೆ. ಎಷ್ಟೊಂದು ಬಗೆಯ ರೋಗಗಳಿಗೆ ಅವುಗಳ ನೆರವಿನಿಂದಲೇ ಔಷಧಗಳು, ಲಸಿಕೆಗಳು ಸೃಷ್ಟಿಯಾಗಿವೆ. ಮನುಷ್ಯರನ್ನು ಬಾಧಿಸುವ ನಾನಾ ಬಗೆಯ ವೈರಾಣುಗಳನ್ನು ಹೀಲಾ ಕೋಶದ ಮೇಲೆ ಬೆಳೆಸಿ ಅವುಗಳ ಗುಣವಿಶೇಷಗಳನ್ನೆಲ್ಲ ಅಧ್ಯಯನ ಮಾಡಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಸಂಶೋಧಕರು ಹೀಲಾ ಸೆಲ್ ಆಧರಿಸಿಯೇ ತಮ್ಮ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ; ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕೆಲವರು ಆರಂಭದ ಪರಿಶುದ್ಧ ತಳಿಯನ್ನೂ ಸಂರಕ್ಷಿಸಿ ಇಟ್ಟುಕೊಂಡಿದ್ದಾರೆ. ಮತ್ತೆ ಕೆಲವರು ಬೇರೆ ಬೇರೆ ಕಾಯಿಲೆಗಳ (ಉದಾ ಥೈರಾಯ್ಡ್‌, ಪ್ರಾಸ್ಟೇಟ್ ಊತ, ಮೂತ್ರಕೋಶ) ಪರೀಕ್ಷೆಗೆ ಸುಲಭವಾಗುವಂತೆ ಮಾರ್ಪಡಿಸಿಕೊಂಡಿದ್ದಾರೆ. ಹೀಲಾ ಕೋಶದ್ದೇ ಪ್ರತ್ಯೇಕ ತಳಿನಕ್ಷೆ ತಯಾರಿಸಲಾಗಿದೆ. ಅದನ್ನೊಂದು ಪ್ರತ್ಯೇಕ ಜೀವ ಪ್ರಭೇದ ಎಂದು ಸಾಧಿಸುವ ಯತ್ನಗಳೂ ನಡೆದಿವೆ.

ಹೀಲಾ ಕೋಶಗಳು ನಮ್ಮ ಶರೀರಕ್ಕೆ ಆಕಸ್ಮಿಕವಾಗಿ ಸೇರಿಕೊಂಡರೆ ಅಲ್ಲೇನೂ ಕ್ಯಾನ್ಸರ್ ರೋಗ ಬರುವುದಿಲ್ಲ. ಆದರೆ ಅಶಿಸ್ತಿನ ವಿಜ್ಞಾನಿಗಳಿಗೆ ಈ ಕೋಶಗಳು ಸಖತ್ ಛಡಿ ಏಟನ್ನೂ ಕೊಟ್ಟಿವೆ. ಅವುಗಳನ್ನು ಲ್ಯಾಬಿನಲ್ಲಿ ಬೆಳೆಸುತ್ತಿದ್ದರೆ ತೀರಾ ತೀರಾ ಹುಷಾರಾಗಿರಬೇಕು. ಸಲಕರಣೆಗಳನ್ನು ಅತ್ಯಂತ ಚೊಕ್ಕಟ ಇಟ್ಟಿರಬೇಕು. ವಿಜ್ಞಾನಿಗಳು ಕೈಗವಸು, ಮುಖವಾಡ ಇತ್ಯಾದಿಗಳನ್ನು ಅಡಿಯಿಂದ ಮುಡಿಯವರೆಗೆ ಧರಿಸಿ ಮಡಿ ಇರಬೇಕು. ತುಸು ನಿರ್ಲಕ್ಷ್ಯ ವಹಿಸಿದರೆ, ಹೀಲಾ ಕೋಶಗಳು ಗಾಜಿನ ಪ್ರಣಾಳದಿಂದ ಹೊರಬಿದ್ದು ದೂಳಿನ ಕಣಗಳ ಮೇಲೆ ಸವಾರಿ ಮಾಡಿ, ಗಾಳಿಯಲ್ಲೂ ತೇಲಾಡಿ ಇನ್ಯಾವುದೋ ಬಟ್ಟಲ ಮೇಲೆ ಇಳಿದು ಅಲ್ಲೇ ವಂಶ ವಿಸ್ತರಣೆ ಮಾಡಿ ಅಕ್ಕಪಕ್ಕದ ಲ್ಯಾಬಿನ ಇತರ ಪ್ರಯೋಗಗಳನ್ನೂ ಕೆಡಿಸಿಬಿಡುತ್ತವೆ. ಗಂಡಸರ ಲ್ಯಾಬ್‌ಗಳಲ್ಲಿ ಮಾತ್ರ ಇಂಥ ಭಾನಗಡಿ ಜಾಸ್ತಿ ಇರುತ್ತದೇನೊ. ಕೆಲವರಂತೂ ಐದಾರು ವರ್ಷಗಳ ಶ್ರಮವನ್ನೂ ಅಷ್ಟೊಂದು ಹಣವನ್ನೂ ಹಳ್ಳಕ್ಕೆ ಹಾಕಿದಂತೆ ವ್ಯಥಿಸಿದವರಿದ್ದಾರೆ. ಉದ್ಯೋಗ ಕಳೆದುಕೊಂಡವರಿದ್ದಾರೆ. ಕ್ಷಮೆ ಯಾಚಿಸಿ, ಪ್ರಕಟಿತ ಸಂಶೋಧನೆಗಳನ್ನು ಹಿಂದಕ್ಕೆ ಪಡೆದ ಅದೆಷ್ಟೊ ಉದಾಹರಣೆಗಳಿವೆ. ಅಲ್ಲಿ ಇಲ್ಲಿ ಹಾಗಿರಲಿ, ಅಮೆರಿಕದವರು ರಷ್ಯಕ್ಕೆ ಬೇಕಂತಲೆ ಮುಸುರೆ ಸ್ಯಾಂಪಲ್ ಕೊಟ್ಟರೆಂದು ತಕರಾರು ಎದ್ದು ಆಗೊಂದು ಶೀತಲ ವಾಗ್ಯುದ್ಧವೇ ಆಗಿದ್ದೂ ಇದೆ.

ಹೀಲಾ ಕೋಶಗಳಿಗೆ ಅಷ್ಟೆಲ್ಲ ಮಾನ್ಯತೆ ಕೊಟ್ಟ ವಿಜ್ಞಾನಿ ಜಾರ್ಜ್ ಗೈ ಮಾತ್ರ ತಾನು ಸಾಯುವವರೆಗೂ ಅದರ ಮೂಲ ಯಾವುದು ಎಂದು ಹೇಳಿರಲಿಲ್ಲ. ವಿಜ್ಞಾನವೆಂದರೆ ನೈತಿಕತೆಯೂ ಇರಬೇಕು ತಾನೆ? ಹೆನ್ರಿಯೆಟ್ಟಾ ಸಾವಪ್ಪಿದ 20 ವರ್ಷಗಳ ನಂತರ ಗೈ ಸಹಾಯಕಿ ಮೇರಿ ಕ್ಯೂಬಿಸೆಕ್ ಮೂಲಕ ಮೂಲದ ಗುಟ್ಟು ಹೊರಬಂತು. ಹೆನ್ರಿಯೆಟ್ಟಾಳ ಮಕ್ಕಳು ಸಂಭ್ರಮಿಸಬೇಕೆ, ಮುಜುಗರ ಅನುಭವಿಸಬೇಕೆ, ಕಾನೂನು ಕ್ರಮಕ್ಕೆ ಮುಂದಾಗಬೇಕೆ- ಅವೆಲ್ಲ ಮಸಾಲೆಗಳನ್ನೂ ಸೇರಿಸಿ ಪುಸ್ತಕ ಬಂತು, ಕಾದಂಬರಿ ಬಂತು, ನಾಟಕ, ಸಾಕ್ಷ್ಯಚಿತ್ರ, ಸಿನಿಮಾ ಕೂಡ ಬಂತು. ಅಮೆರಿಕದ ಮಾಧ್ಯಮ ರಾಣಿ ಎನ್ನಿಸಿಕೊಂಡ ನಟಿ ಓಪ್ರಾ ವಿನ್ ಫ್ರಿ ಸಿನಿಮಾದಲ್ಲಿ ಹೆನ್ರಿಯೆಟ್ಟಾಳ ಮಗಳಾಗಿ ಅಭಿನಯಿಸಿದ್ದಾಳೆ. ಈಗಂತೂ ಪ್ರತಿ ವರ್ಷ ಹೀಲಾ ಹೆಸರಿನಲ್ಲಿ ವಿಜ್ಞಾನ ಹಬ್ಬ ಅಲ್ಲಿ ನಡೆಯುತ್ತಿದೆ. ವಿಜ್ಞಾನಿಗಳಿಗೆ ಫೆಲೊಶಿಪ್, ಪಾರಿತೋಷಕಗಳ ವಿತರಣೆ ಆಗುತ್ತಿದೆ.

ಭಾರತದಲ್ಲಿ ಹೀಲಾ ಕೋಶಗಳ ಬಳಕೆ ಆಯುರ್ವೇದಕ್ಕೂ ವಿಸ್ತರಿಸಿದೆ. ತ್ರಿಫಲಾ ಚೂರ್ಣದ (ಅಳಲೆ, ನೆಲ್ಲಿ ಮತ್ತು ತಾರಿಕಾಯಿ ಪುಡಿ) ಕಷಾಯದಲ್ಲಿ ಹೀಲಾ ಕೋಶಗಳನ್ನು ಅದ್ದಿ ತೆಗೆದು ವಿಕಿರಣ ಹಾಯಿಸಿ ಚೂರ್ಣದ ಗುಣವಿಶೇಷಗಳನ್ನು ಪರೀಕ್ಷೆಗೆ ಒಡ್ಡಿ ಪಾಸ್ ಮಾಡಿದವರಿದ್ದಾರೆ. ಅದಕ್ಕಿಂತ ವಿಶೇಷ ಇನ್ನೊಂದಿದೆ: ಜಾರ್ಜ್ ಗೈ ಅಲ್ಲಿ ಹೀಲಾ ಕೋಶಗಳನ್ನು ಬೆಳೆಸಲೆಂದು, ನಿಯಂತ್ರಿಸಲೆಂದು ಸಂಭ್ರಮಿಸುತ್ತಿದ್ದ ದಿನಗಳಲ್ಲಿ ಆತನ ಶಿಷ್ಯೆಯಾಗಿ ಭಾರತದ ಡಾ. ಕಮಲ್ ರಣದಿವೆ ಎಂಬ 32ರ ಯುವತಿ ಅಲ್ಲೇ ಕೆಲಸ ಮಾಡುತ್ತಿದ್ದಳು. ಪುಣೆಯಲ್ಲಿ ಅವರಪ್ಪ ಡಾಕ್ಟರ್ ಆಗು ಎಂದು ಒತ್ತಾಯಿಸಿದರೂ ಕೇಳದೇ ತಾನು ಸಂಶೋಧಕಿ ಆಗುತ್ತೇನೆಂದು 1934ರಲ್ಲೇ ಬಿಎಸ್ಸಿಯಲ್ಲಿ ಪ್ರಶಸ್ತಿ ಪದಕ ಪಡೆದವರು ಅವರು. ನಂತರ ಗಣಿತ ಶಿಕ್ಷಕನೊಬ್ಬನ ಕೈಹಿಡಿದು ಮಗು ಹುಟ್ಟಿದ ನಂತರವೂ ಮತ್ತೆ ಮೈಕೊಡವಿ ಎಮ್ಮೆಸ್ಸಿ ಪೂರೈಸಿ 1943ರಲ್ಲಿ ಮುಂಬೈಗೆ ಬಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ಬಾಂಬೆ

ವಿ.ವಿ.ಯಲ್ಲಿ ಜೀವವಿಜ್ಞಾನ ಸಂಶೋಧನೆಯಲ್ಲಿ ಡಾಕ್ಟರೇಟ್ ಕೂಡ ಪಡೆದರು. ಸ್ತನ ಕ್ಯಾನ್ಸರ್ ಮೇಲೆ ಕಮಲ್ ನಡೆಸಿದ ಸಂಶೋಧನೆಯ ಗುಣಮಟ್ಟ ಎಷ್ಟಿತ್ತೆಂದರೆ ಡಾಕ್ಟರೇಟ್ ನಂತರದ ಅಧ್ಯಯನಕ್ಕಾಗಿ ಅಮೆರಿಕದ ಸುವಿಖ್ಯಾತ ಹಾಪ್ಕಿನ್ಸ್ ವಿ.ವಿ. ಆಸ್ಪತ್ರೆಯಲ್ಲಿ ಸುಲಭವಾಗಿ ಪ್ರವೇಶ ದೊರಕಿತು.

ಗೈ ಕೈಕೆಳಗೆ ಪಳಗಿ ಎರಡು ವರ್ಷಗಳ ನಂತರ ಅಲ್ಲಿಂದ ಹಿಂದಿರುಗುವಾಗ ಸಹಜವಾಗಿಯೇ ಡಾ.ಕಮಲಾರ ಟೆಸ್ಟ್ ಟ್ಯೂಬ್‌ನಲ್ಲಿ ಹೀಲಾ ಕೋಶಗಳಿದ್ದವು. ಅವುಗಳನ್ನು ಬೆಳೆಸಲೆಂದೇ ಕಮಲ್ ಮುಂಬೈಯ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ಪ್ರಯೋಗಾಲಯವನ್ನು ಅವರು ಆರಂಭಿಸಿದರು. ಅಲ್ಲಿ ನಡೆಯುವ ಸಂಶೋಧನೆಗಳಿಗೆ ರಾಷ್ಟ್ರವ್ಯಾಪಿ ಪ್ರಾಮುಖ್ಯ ಸಿಗತೊಡಗಿತು. ಪ್ರಯೋಗಾಲಯವೇ ಸರ್ವಸ್ವ ಎಂಬಂತೆ ದುಡಿಯುತ್ತ 1964ರಲ್ಲಿ ಪ್ರೊ. ಕಮಲ್ ರಣದಿವೆ ಅದೇ ಸಂಸ್ಥೆಗೆ (ಈಗ ಅದು ಭಾರತೀಯ ಕ್ಯಾನ್ಸರ್ಸಂಶೋಧನಾ ಕೇಂದ್ರ) ನಿರ್ದೇಶಕರಾದರು. ಆರಂಭದಿಂದಲೂ ಪ್ರತಿ ಕೆಲಸದಲ್ಲೂ ರಾಷ್ಟ್ರಪ್ರಜ್ಞೆಯನ್ನು ಮೆರೆಯುತ್ತಿದ್ದ ಅವರು ಆಗ ಮಾಡಿದ ಮೊದಲ ಕೆಲಸ ಏನೆಂದರೆ ವಿದೇಶಗಳಲ್ಲಿ ಕ್ಯಾನ್ಸರ್ ರಂಗದಲ್ಲಿ ಸಂಶೋಧನೆ ನಡೆಸುತ್ತಿರುವ ಎಲ್ಲ ಭಾರತೀಯರ ಪಟ್ಟಿ ತಯಾರಿಸಿದರು. ಭಾರತಕ್ಕೆ ಹಿಂದಿರುಗಿ ಇಲ್ಲಿಯೇ ನೆಲೆ ನಿಲ್ಲಲು ಸಿದ್ಧರಿದ್ದರೆ ಎಲ್ಲ ಬಗೆಯ ಸಂಶೋಧನೆಗಳಿಗೆ ಅವಕಾಶ ಕೊಡುವುದಾಗಿಹೇಳಿದರು. ಕ್ಯಾನ್ಸರ್ ರೋಗಕ್ಕೆ, ಅದರಲ್ಲೂ ಮಹಿಳೆಯರಲ್ಲಿಕಾಣಿಸಬಹುದಾದ ಕ್ಯಾನ್ಸರ್ ರೋಗಗಳ ಬಗ್ಗೆ ಪ್ರಯೋಗ ನಡೆಸಲೆಂದೇ ಡಾ. ರಣದಿವೆ ವಿಶೇಷ ತಳಿಯ ಬಿಳಿ ಇಲಿಗಳನ್ನು ಸೃಷ್ಟಿಸಿದರು. ಗರ್ಭದ ಕೊರಳಿನ ಕ್ಯಾನ್ಸರಿಗೂ ವೈರಸ್ಸಿಗೂ ಇರುವ ಸಂಬಂಧವನ್ನು ಪತ್ತೆ ಹಚ್ಚಲು ಶ್ರಮಿಸಿ

ದರು. ಆದಿವಾಸಿಗಳ ಮಕ್ಕಳಲ್ಲಿ ಪೋಷಕಾಂಶ ಕೊರತೆಯಸರ್ವೇಕ್ಷಣೆ ನಡೆಸಿದರು. ಪದ್ಮಭೂಷಣ ಪ್ರಶಸ್ತಿಯಿಂದ ಸಮ್ಮಾನಿತರಾದರು. ಸ್ವಾತಂತ್ರ್ಯಕ್ಕೂ ಮೊದಲೇ ವಿಜ್ಞಾನಿಗಳಾಗಿ ಖ್ಯಾತರೆನಿಸಿದ ಆನಂದಿಬಾಯಿ ಜೋಷಿ, ಜಾನಕಿ ಅಮ್ಮಾಳ್, ಕಮಲಾ ಸೊಹೋನಿ, ಕನ್ನಡತಿ ರಾಜೇಶ್ವರಿ ಚಟರ್ಜಿ, ಅಣ್ಣಾಮಣಿ, ಅಸೀಮಾ ಚಟರ್ಜಿಯಂಥ ಪ್ರತಿಭಾವಂತ, ಪರಿಶ್ರಮಿ ಮಹಿಳೆಯರ ಸಾಲಿಗೆ ಸೇರ್ಪಡೆಯಾದರು.

ಎಲ್ಲಿಂದ ಎಲ್ಲಿಗೆ ನೋಡಿ. ಆಫ್ರಿಕಾ ಮೂಲದ ಮಹಿಳೆಯೊಬ್ಬಳ ದೇಹದ್ರವ್ಯವೊಂದು ಅಮೆರಿಕದ ಪ್ರಯೋಗಾಲಯ ಸಹಾಯಕಿಯ ಆಸರೆಯಲ್ಲಿ ಬದುಕುಳಿದು ಬೆಳೆದು, ಜಗತ್ತಿನ ಬಹುಪಾಲು ವೈದ್ಯಕೀಯ ಸಂಶೋಧನೆಗಳಿಗೆ ಅಸ್ತಿವಾರವಾಗಿ, ಭಾರತೀಯ ಮಹಿಳೆಯೊಬ್ಬಳ ನೆರವಿನಿಂದ ಈ ಉಪಖಂಡದಲ್ಲೂ ತನ್ನ ಛಾಪನ್ನು ದಿನವೂ ಮೂಡಿಸುವಂತಾಗಿದೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry