ಸೋಮವಾರ, ಜೂನ್ 14, 2021
21 °C

ಅವಸರದ ಸಾಧನೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಬ್ಬ ಸಾಧಕ ಗುರುವಿನ ಬಳಿಗೆ ಹೋದ. ಅವರ ಪಾದಕ್ಕೆರಗಿ ಬೇಡಿ­ಕೊಂಡ, ‘ಗುರುಗಳೇ ನನ್ನ ಮೇಲೆ ಕೃಪೆಯಿಟ್ಟು ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ.’ ಗುರುಗಳು ಅವನ ತಲೆಯ ಮೇಲೆ ಕೈಯಿಟ್ಟು ಹೇಳಿದರು, ‘ಆಗಬಹುದು. ಆದರೆ ನೀನು ಶಿಷ್ಯ­ನಾಗಲು ಕೆಲವೊಂದು ಕೆಲಸ ಮಾಡ­ಬೇಕಾ­ಗುತ್ತದೆ. ಅನಂತರ ನೀನು ನನ್ನ ಶಿಷ್ಯನಾಗುತ್ತೀ’.‘ಯಾವ ಯಾವ ಕೆಲಸ ಮಾಡಬೇಕಾಗುತ್ತದೆ?’ ಶಿಷ್ಯನಾಗುವವ ಕೇಳಿದ. ‘ಮೊದಲು ನನ್ನ ಮನೆಯಲ್ಲಿ ಸೇವಕನಾಗಿ ಕೆಲಸ ಮಾಡಬೇಕು. ಚಳಿಗಾಲ ಬರುತ್ತಿದೆಯಲ್ಲವೇ? ನೀನು ನಿತ್ಯ ಕಾಡಿಗೆ ಹೋಗಿ ಮರಕಡಿದು­ಕೊಂಡು ಬರಬೇಕು. ಅದಲ್ಲದೆ ಅಡು­ಗೆಯ ಜವಾಬ್ದಾರಿಯೂ ನಿನ್ನದೇ. ಈ ಕೆಲಸಗಳನ್ನು ಒಂದು ಆರು ತಿಂಗಳು ಮಾಡು. ನಂತರ ಏನು ಮಾಡ­ಬೇಕೆಂಬುದನ್ನು ಹೇಳುತ್ತೇನೆ’. ಶಿಷ್ಯ ಬಾಯಿ ತೆರೆದುಕೊಂಡು ಕೇಳು­ತ್ತಲೇ ಇದ್ದ.‘ಗುರುಗಳೇ ಕೆಲಸ­ಮಾಡು­ವುದೇನೋ ಸರಿಯೇ. ಆದರೆ ನಾನು ಸತ್ಯದ, ಜ್ಞಾನದ ಅನ್ವೇಷಕನಾಗಿ ಬರುತ್ತಿದ್ದೇನೆ. ಈ ಮರ ಕತ್ತರಿಸುವ, ಅಡುಗೆ ಮಾಡುವ ಕೆಲಸಕ್ಕೂ, ಜ್ಞಾನ ಪಡೆಯುವ ಕ್ರಿಯೆಗೂ ಏನು ಸಂಬಂಧ?’. ‘ಸಂಬಂಧ ಇದೆಯಪ್ಪ. ಅದಕ್ಕೇ ನಾನು ಈ ಕೆಲಸಗಳನ್ನು ಹೇಳುವುದು’ ಎಂದರು ಗುರುಗಳು. ‘ಏನು ಸಂಬಂಧ ಗುರುಗಳೇ? ಮರ ಕಡಿಯುವುದು, ಅಡುಗೆ ಮಾಡುವುದು ದೈಹಿಕ ಕ್ರಿಯೆಗಳು. ಜ್ಞಾನ ಸಂಪಾದನೆ ಬುದ್ಧಿಯ ಕೆಲಸ. ಅಲ್ಲವೇ?’ ಶಿಷ್ಯ ಪ್ರಶ್ನಿಸಿದ.‘ಇದೆಲ್ಲ ಕೆಲಸಗಳು ನಿನ್ನ ಮನಸ್ಸನ್ನು ಶಿಷ್ಯತ್ವಕ್ಕೆ ಸಿದ್ಧಗೊಳಿಸುತ್ತವೆ. ಮನಸ್ಸಿನ ಅಹಂಕಾರ ಕಡಿಮೆ ಮಾಡುತ್ತವೆ, ವಿಧೇಯತೆ ತರುತ್ತವೆ, ಗುರುವಿನ ಬಗ್ಗೆ ಭಕ್ತಿ ಸ್ಥಿರಗೊಳಿಸುತ್ತವೆ.’ ‘ಅಲ್ಲ ಗುರುಗಳೇ, ಈ ಕೆಲಸಗಳು ಮನಸ್ಸನ್ನು ಹದಗೊಳಿಸಿ ಜ್ಞಾನದ ಕಡೆಗೆ ತಿರುಗಿಸುವುದಾದರೆ ಈ ಕೆಲಸಗಳನ್ನು ಯಾವಾಗಲೂ ಮಾಡುವ ಮರಗೆಲಸ­ದವರು, ಮನೆಯಲ್ಲಿ ಅಡುಗೆ ಮಾಡುವ ಗೃಹಿಣಿಯರು ಈಗಾಗಲೇ ಜ್ಞಾನಿಗಳಾಗ­ಬೇಕಿತ್ತಲ್ಲ?’ ಕೇಳಿದ ಶಿಷ್ಯ.ಗುರುಗಳ ಮುಖದ ಮೇಲೆ ಬೇಸರದ ಗೆರೆಗಳು ಮೂಡಿದವು. ‘ಅಲ್ಲಪ್ಪ ಬರೀ ಕೆಲಸ ಮಾಡುವುದು ಮುಖ್ಯವಲ್ಲ. ಮಾಡುವ ಕೆಲಸವನ್ನು ಗುರುವಿನ ಮೇಲಿನ ಶ್ರದ್ಧೆಯಿಂದ, ಗೌರವದಿಂದ ಮಾಡಿದಾಗ ಮನಸ್ಸು ಗುರುವಿನ ಶಿಷ್ಯನಾಗಲು, ಅವನು ಹೇಳಿದ್ದನ್ನು ಸ್ವೀಕರಿಸಲು ಅರ್ಹವಾಗುತ್ತದೆ’ ಎಂದರು ಗುರುಗಳು. ‘ಈ ಸಮಯದಲ್ಲಿ ಗುರು­ಗಳು ಏನು ಮಾಡುತ್ತಾರೆ?’ ಬಿಡದೆ ಕೇಳಿದ ಶಿಷ್ಯ. ‘ಗುರುಗಳು ಏನೂ ಮಾಡುವುದಿಲ್ಲಪ್ಪ. ಎಲ್ಲವನ್ನೂ ಗಮನಿ­ಸುತ್ತ, ಏನು ಮಾಡಬೇಕೆಂಬ ನಿರ್ದೇಶನ­ಗಳನ್ನು ನೀಡುತ್ತಾರೆ’ ಎಂದರು ಗುರುಗಳು.  ಶಿಷ್ಯನ ಮುಖ ಅರಳಿತು.ತಕ್ಷಣ ಹೇಳಿದ, ‘ಹಾಗಾದರೆ ಗುರುಗಳೇ ನನ್ನನ್ನು ಗುರುವನ್ನಾಗಿ ಮಾಡುವುದಕ್ಕೇ ತರಬೇತಿ ಕೊಡಿ. ಶಿಷ್ಯನಾಗುವ ಬದಲು ಗುರುವೇ ಆಗಿಬಿಡುತ್ತೇನೆ. ಯಾಕೆಂದರೆ ನನ್ನ ಮನಸ್ಸು ಈಗ ಗುರುವಾಗುವುದಕ್ಕೆ ಸಿದ್ಧವಾಗಿಯೇ ಕುಳಿತಿದೆ. ಶಿಷ್ಯನಾಗಲು ಎಷ್ಟೊಂದು ಕಷ್ಟಪಡಬೇಕು. ಗುರು­ವಾಗು­ವುದೇ ಸುಲಭ’ ಎಂದ ಅವಸರದ ಶಿಷ್ಯ. ಈಗ ಎಲ್ಲವೂ ಫಾಸ್ಟ್‌ ಫುಡ್ ದಿನಗಳು.ಎಲ್ಲವೂ ಅವಸರದಲ್ಲಿಯೇ ಆಗಬೇಕು. ಬೇಗ ಶಿಕ್ಷಣವಾಗಬೇಕು, ಬೇಗ ಬೇಗ, ಶ್ರೀಮಂತರಾಗಬೇಕು, ಬೇಗನೇ ಪ್ರಸಿದ್ಧಿ ಬರಬೇಕು. ಕೆಲವು ವಿಷಯಗಳಲ್ಲಿ ಆತುರತೆ ನಡೆದೀತು. ಆದರೆ, ಕೆಲವು ವಿಷಯಗಳಲ್ಲಿ ಅದ­ರಲ್ಲೂ ಬದುಕಿನ ಮೌಲ್ಯಗಳನ್ನು ಅರಿ­ಯುವಾಗ, ಪಾಲಿಸುವಾಗ, ಜ್ಞಾನ ಪಡೆಯುವಾಗ, ದೇಶಪ್ರೇಮವನ್ನು ಕಲಿಸುವಾಗ ಅವಸರ ಸಲ್ಲದು. ಅವು ನಿಧಾನವಾಗಿ ನಮ್ಮೊಳಗಿಳಿದು ನಮ್ಮ ವ್ಯಕ್ತಿತ್ವ ಗಟ್ಟಿಮಾಡುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.