ಅವ್ವ ನ ನೆನಪುಗಳು...

7

ಅವ್ವ ನ ನೆನಪುಗಳು...

Published:
Updated:

ಮೊನ್ನೆ ಕ್ಲಾಸಿನಲ್ಲಿ ಒಬ್ಬಳು ಹುಡುಗಿ ಅಳುತ್ತಾ ಕೂತಿದ್ದಳು. ನನ್ನ ಪಾಠ ಕೇಳಿ ಆಕೆ ಅಳುತ್ತಿರಬಹುದೆಂದು ಭಾವಿಸಿದೆ. ಆಕೆ ಕಣ್ಣೀರು ಹಾಕುವಷ್ಟು ರಸಪೂರ್ಣವಾಗಿ ನಾನು ಪಾಠ ಕೊಚ್ಚುತ್ತಿದ್ದೇನಲ್ಲಾ ಎಂದು ಹೆಮ್ಮೆಯೂ ಆಯಿತು. ಬಹಳಷ್ಟು ಸಲ ಸಾವಿನ ಪ್ರಸಂಗಗಳ ಪ್ರಸ್ತಾಪ ಬಂದಾಗ ಕೆಲ ಸೂಕ್ಷ್ಮ ಮನಸ್ಸಿನ ಮಕ್ಕಳು ಅತ್ತಿದ್ದುಂಟು. ಜೀವನದಲ್ಲಿ ತಂದೆ, ತಾಯಿ, ಅಣ್ಣ, ತಮ್ಮರನ್ನು ಕಳಕೊಂಡ ಹೆಣ್ಣು ಮಕ್ಕಳು ಹೀಗೆ ಭಾವುಕರಾಗುವುದಿದೆ. ಆಮೇಲೆ ನಾನವರನ್ನು ಕರೆದು ಕಾರಣ ಕೇಳಿ ಸಮಾಧಾನ ಹೇಳಿದ್ದೂ ಇದೆ. ಆದರೆ, ಇಂಥ ವಿಷಯಗಳಿಗೆ ಸೆಂಟಿಮೆಂಟಲ್ಲಾಗಿ ಕಣ್ಣೀರು ಜಡಿದ ಯಾವ ಹುಡುಗರನ್ನೂ ನಾನು ಇಲ್ಲೀ ತನಕ ನೋಡಲು ಸಾಧ್ಯವಾಗಿಲ್ಲ. ಅದೇ ಪ್ರೇಮ ವೈಫಲ್ಯವಾದ ಪ್ರೇಮಿಗಳ ಕಥೆ ಕೆತ್ತಿದಾಗ ಒಂದಿಷ್ಟು ಮೀಸೆ ಮೂಡಿಸಿಕೊಂಡ ಗಂಡು ಹೈಕಳುಗಳು ಲೈಟಾಗಿ ಕಣ್ಣಂಚುಗಳ ಒರೆಸಿಕೊಂಡಿದ್ದಿದೆ.ಒಂದು ದಿನ ಜಾನಪದ ಪದ್ಯವೊಂದನ್ನು ಪಾಠ ಮಾಡುತ್ತಿದ್ದೆ. ಅಲ್ಲಿ ತಾಯಿ ಮಮತೆ ಕುರಿತಂತೆ ಹೇಳುವುದಿತ್ತು. ಅವ್ವನನ್ನು ಬಾಲ್ಯದಲ್ಲೇ ಕಳೆದುಕೊಂಡ ನಾನೂ ಆ ಕ್ಷಣ ಭಾವುಕನಾಗಿದ್ದೆ. ಆಕೆಯ ಮುಖ ಹೇಗಿತ್ತು ಎನ್ನುವುದೂ ಗೊತ್ತಿಲ್ಲದ ನನ್ನ ಸಂಕಟವನ್ನೂ ಪಾಠದ ಜೊತೆ ಪೋಣಿಸಿಕೊಂಡಿದ್ದೆ. ಕೆಲ ಮಕ್ಕಳು ಕಣ್ಣು ಅರಳಿಸಿ ಕೇಳುತ್ತಿದ್ದರು. ನಿದ್ದೆಗೆ ಜಾರುವ ಸನ್ನಾಹದಲ್ಲಿದ್ದ ಕೆಲವು ಆಕಳಿಕೆ ನಿಲ್ಲಿಸಿ ನೆಟ್ಟಗೆ ಕುಳಿತವು.‘ನೋಡಿ ಅಪ್ಪ ಅಮ್ಮ ಇದ್ದವರಿಗೆ ಅವರ ಬೆಲೆ ಏನೆಂಬುದು ಅವರು ಬದುಕಿರುವಾಗ ಗೊತ್ತೇ ಆಗುವುದಿಲ್ಲ. ಅವರು ಸತ್ತ ಮೇಲೆ ಅವರ ಪ್ರಾಮುಖ್ಯ ಸಿಡಿಲಿನಂತೆ ಬಡಿಯುತ್ತದೆ. ಅದರಲ್ಲೂ ಅವ್ವನನ್ನು ಬಾಲ್ಯದಲ್ಲೇ ಕಳಕೊಂಡಿರುವವರ ಪಾಡಂತೂ ಹೇಳಬಾರದು. ಅವ್ವ ಅಪ್ಪ ನಿಜ ಹೇಳೋದಂದ್ರೆ ಸತ್ತಿರಲ್ಲ. ನಮ್ಮೊಳಗೇ ಕೂತಿರ್ತಾರೆ. ಅವರನ್ನ ನೋಡಲೇ ಬೇಕು ಅಂದ್ರೆ ನಮ್ಮ ಮಕ್ಕಳಾಗಿ ಮತ್ತೆ ಒಡಮೂಡಿ ಬರ್ತಾರೆ. ಮಗಳು, ಅವ್ವನಂತೆ ಪ್ರೀತಿ ತೋರಬಲ್ಲಳು. ಅವ್ವನ ಪ್ರೀತಿ ಅನ್ನೋದು ಕಾಣದ ಸುವಾಸನೆ ಇದ್ದಂಗೆ. ಉಸಿರಾಟದ ಗಾಳಿ ಇದ್ದಂಗೆ. ಇದಕ್ಕೊಂದು ಲಗತ್ತಾಗಿರೋ ಆಧುನಿಕ ಕಥೆ ಹೇಳ್ತಿನಿ ಕೇಳಿ.ಅಪ್ಪನ ಸಾವಿನ ನಂತರ ಆ ಹುಡುಗ ತನ್ನ ತಾಯೀನ ಅನಾಥಾಶ್ರಮಕ್ಕೆ ಸೇರಿಸಿದ. ಅಪ್ಪಿತಪ್ಪಿ ಈ ಕಡೆ ಬಂದ್ರೆ ತಾಯೀನ ಕ್ಷಣಕಾಲ ನೋಡಿ ಮಾತಾಡಿಸಿ ಹೋಗ್ತಿದ್ದ. ಅವನಿಗೆ ಕೆಲಸವೋ ಕೆಲಸ.  ಕಂಪ್ಯೂಟರ್, ಮೊಬೈಲು, ಸಿನಿಮಾ, ಶಾಪಿಂಗು, ಕ್ಲಬ್ಬು, ಪಾರ್ಟಿ, ಹೆಂಡತಿ, ಮಕ್ಕಳು, ಫ್ರೆಂಡ್ಸು ಇವರೆಲ್ಲರ ನಡುವೆ ಪಾಪ ಅವನಿಗೆ ಪುರುಸೊತ್ತೇ ಸಿಗುತ್ತಿರಲಿಲ್ಲ.ಹೀಗಿರುವಾಗ ಒಂದಿನ ಅನಾಥಾಶ್ರಮದಿಂದ ಅವನಿಗೊಂದು ಫೋನು ಬಂತು. ಅಬ್ಬರದ ಗೆಳೆಯರ ಪಾರ್ಟಿಯ ನಡುವೆಯೂ ಅವನು ಫೋನನ್ನು ಎತ್ತಿಕೊಂಡ. ನಿಮ್ಮ ತಾಯಿಯ ಉಸಿರು ಯಾಕೋ ನಿಲ್ಲಂಗೆ ಕಾಣಿಸ್ತಾ ಇದೆ. ಆಕೆ ಕೊನೆ ಕ್ಷಣಗಳನ್ನು ಎಣಿಸ್ತಾ ಬಿದ್ದಿದ್ದಾಳೆ. ಈಗ್ಲೋ ಆಗ್ಲೋ  ಆಕೆ ಮಾತಾಡೋದನ್ನೂ ನಿಲ್ಲಿಸಿ ಬಿಡಬಹುದು. ನೀವು ಅರ್ಜೆಂಟಾಗಿ ಬಂದು ಬಿಡಿ. ಅವಳು ನಿಮಗೇನೋ ಹೇಳಬೇಕೂಂತ ಚಡಪಡಿಸ್ತಾ ಇದ್ದಾಳೆ.  ದಯವಿಟ್ಟು ಬೇಗ ಬನ್ನಿ. ತಡ ಮಾಡಬೇಡಿ.ಇದನ್ನು ಕೇಳಿದ ಮಗ ಎಲ್ಲಾ ಬಿಟ್ಟು ಓಡೋಡಿ ಬಂದ. ಅರ್ಜೆಂಟಾಗಿ ಬರಲು ಹೇಳಿದೆಯಂತಲ್ಲ ಏನಮ್ಮಾ ವಿಷಯ ಎಂದು ಆರ್ದ್ರತೆಯಿಂದ ಕೇಳಿದ. ತಾಯಿ ತೊದಲುತ್ತಾ ಇಲ್ಲಿನ ರೂಮುಗಳಿಗೆ ಮೊದಲು ಫ್ಯಾನುಗಳನ್ನು ಹಾಕಿಸು. ಇಲ್ಲಿ ಸೆಖೆ ತುಂಬಾ ಜಾಸ್ತಿ. ತಡಕೊಳ್ಳೋಕೆ ಆಗಲ್ಲ. ಹಾಗೆಯೇ ಒಂದು ಹೊಸ ಫ್ರಿಜ್ಜನ್ನು ತಂದಿಡು. ಹಳಸಿದ ಊಟ ಉಣ್ಣಲಾಗದೆ ಅದೆಷ್ಟೋ ರಾತ್ರಿಗಳನ್ನು ನಾನು ಉಪವಾಸದಿಂದ ಮಲಗಿದ್ದೇನೆ. ಇಲ್ಲಿನ ಹಾಸಿಗೆಗಳು ಒರಟು, ತುಂಬಾ ಚುಚ್ಚುತ್ತವೆ. ಮೊದಲು ಇಲ್ಲಿಗೆ ಮೃದುವಾದ ಹಾಸಿಗೆಗಳನ್ನು ತಂದು ಹಾಕಿಸು.

ಮಗ ಕೇಳಿದ, ಅಲ್ಲಮ್ಮ ಇಲ್ಲಿ ಇಷ್ಟು ತೊಂದರೆಗಳಿದ್ದಾವೆ ಎಂದು ಈ ಮೊದಲು ಯಾಕೆ ನನಗೆ ಹೇಳಲಿಲ್ಲ. ಇಲ್ಲಿರುವವರೆಲ್ಲಾ ಇನ್ನು ಕೆಲವೇ ನಿಮಿಷಗಳಲ್ಲಿ ನೀನು ಸತ್ತು ಹೋಗುತ್ತೀಯ ಎಂದು ನಂಬಿ ನಿಂತಿದ್ದಾರೆ. ಅಂಥದ್ದದರಲ್ಲಿ ಇಷ್ಟೆಲ್ಲಾ ಸವಲತ್ತುಗಳನ್ನು ನಾನು ಯಾರಿಗಾಗಿ ಮಾಡಬೇಕಾಗಿದೆ ಹೇಳು. ನೀನೇ ಇರುವುದಿಲ್ಲ ಎಂದಮೇಲೆ ಸುಖಾಸುಮ್ಮನೆ ಇಷ್ಟೊಂದು ಖರ್ಚು ನಾನ್ಯಾಕೆ ಮಾಡಲಿ. ನಿನ್ನ ಮಾತೇ ನನಗೆ ಅರ್ಥವಾಗುತ್ತಿಲ್ಲ ಎಂದನು.ಆಗ ತಾಯಿ ಮೆಲ್ಲಗೆ ಹೇಳಿದಳು. ನೀನು ಹೇಳುತ್ತಿರುವುದು ಸರಿ. ನಾನು ಸೆಖೆಯನ್ನು, ಹಸಿವನ್ನು, ನೋವನ್ನು, ಒಂಟಿತನವನ್ನು ಸಹಿಸಿಕೊಳ್ಳಬಲ್ಲೆ. ನಾನು ಬಡತನದ ಮನೆಯಿಂದ ಬಂದವಳು. ನಿಮ್ಮಪ್ಪನ ಸಾವಿನ ನಂತರ ಇದೆಲ್ಲಾ  ನನಗೆ ಇನ್ನೂ ಹೆಚ್ಚಾಗಿ ಅಭ್ಯಾಸವಾಗಿ ಹೋಯಿತು. ಆದರೆ ನನಗೆ ಹೆದರಿಕೆ ಇರುವುದು ನಿನ್ನ ಬಗ್ಗೆ ಮಗನೆ. ನೀನಿಲ್ಲಿಗೆ ಮುಂದೆ ಬಂದಾಗ ನಿನಗೆ ತೊಂದರೆಯಾಗಬಾರದಲ್ಲ!. ನಾನೆಷ್ಟಾದರೂ ನಿನ್ನ ತಾಯಿ ತಾನೇ? ಎನ್ನುತ್ತಾ ಪ್ರಾಣ ಬಿಡುತ್ತಾಳೆ. ಈ ಕಥೆ ತಾಯಿಯ ಗಾಢ ಪ್ರೀತಿಗೆ ಒಂದು ಉದಾಹರಣೆಯಲ್ವಾ?’ ಎಂದು ಹೇಳಿ ಸುಮ್ಮನೆ ನಿಂತೆ.ಕಥೆ ಕೇಳಿದ ವಿದ್ಯಾರ್ಥಿಗಳೆಲ್ಲಾ ಒಂದು ಯೋಚನೆಗೆ ವಾಲಿ ಬಿದ್ದಂತೆ ಕಂಡರು. ನಾನು ಯಾವುದಾದರೂ ಗಂಡು ಪಿಳ್ಳೆ ನನ್ನ ಕರುಳು ಹಿಂಡುವ ಕಥೆಗೆ ಒಂದು ಹನಿ ಕಣ್ಣೀರು ಕೆಡವಬಹುದೆಂದು ಕಾದು ಎಲ್ಲರ ಕಣ್ಣುಗಳನ್ನೂ ಗುರಾಯಿಸಿದೆ. ಅವು ಕೊಂಚ ನೊಂದಂತೆ ಇದ್ದವೇ ಹೊರತು ಕಂಗೆಟ್ಟಿರಲಿಲ್ಲ. ಉದ್ದ, ಅಗಲ, ದಪ್ಪದ ನಿಟ್ಟುಸಿರುಗಳನ್ನು ಮಾತ್ರ ಚೆಲ್ಲಿ ನೆಟ್ಟಗೆ ಕೂತವು.ಹಾಳಾದ ಗಂಡು ಮಕ್ಕಳಿಗೆ ಹೃದಯವೇ ಇಲ್ಲ ಎಂದು ಬೈದುಕೊಂಡು ಹುಡುಗಿಯರ ಕಡೆ ತಿರುಗಿದೆ. ನನ್ನ ಪುಣ್ಯಕ್ಕೆ ಕಥೆ ನಾಟಿದ ಹುಡುಗಿಯೊಬ್ಬಳು ಮುಸಿಮುಸಿ ಅಳುತ್ತಿದ್ದಳು. ಪರವಾಗಿಲ್ಲ ನನ್ನ ಕಥೆ ಕ್ಲಿಕ್ ಆಗಿದೆ ಎಂದು ಸಮಾಧಾನವಾಯಿತು. ಕಾರಣ ಗೊತ್ತಿದ್ದೂ ಯಾಕೆಂದು ವಿಚಾರಿಸಿದೆ. ‘ನಂಗೆ ತಾಯಿ ಇಲ್ಲ ಸಾರ್. ನೀವು ಹೇಳುವಾಗ ಅವರ ಚಿತ್ರ ನೆನಪಿಗೆ ಬಂದ್ಬಿಟ್ಟಿತು’ ಎಂದಳು. ಈ ಮಾತು ನನ್ನ ಕರುಳಿಗೂ ಚುಚ್ಚಿತು. ನಿನಗೆ ಕಂಪನಿ ಕೊಡಲು ನಾನಿದ್ದೇನೆ. ಹೆದರಬೇಡ. ನಂದೂ ನಿನ್ನ ಥರದ್ದೇ ಕೇಸು ಎಂದು ಧೈರ್ಯ ಹೇಳಿದೆ.

ಇಷ್ಟಾದರೂ ಈ ಕಥೆ ಒಬ್ಬ ಹುಡುಗನಿಗೂ ತಾಗಲಿಲ್ಲವಲ್ಲ. ಯಾವ ಮಗನೂ ಕಣ್ಣೀರು ಹಿಂಡಲಿಲ್ಲವಲ್ಲ. ಈ ವಿಷಯದಲ್ಲಿ ಹುಡುಗಿಯರೇ ವಾಸಿ. ಬೇಗ ಸ್ಪಂದಿಸುತ್ತಾರೆ. ಬೇಗ ಮರುಗುತ್ತಾರೆ. ಈ ಹುಡುಗರು ಕೊರಡುಗಳಿದ್ದಂತೆ ಎಂದು ಮನಸ್ಸಲ್ಲಿ ಶಪಿಸಿಕೊಂಡೆ.

ಪಾಠ ಮುಗಿಸಿ ಬಂದು ಕೂತ ಬಹಳ ಹೊತ್ತಿನ ನಂತರ ನಾಲ್ಕೈದು ಹುಡುಗರು ಬಂದರು. ಅವರ ಕಣ್ಣುಗಳು ನಿಜಕ್ಕೂ ತೇವವಾಗಿದ್ದವು. ಅಲ್ಲಿ ತರಗತಿಯಲ್ಲಿ ಹುಡುಗೀರ ಎದುರು ಫಕ್ಕನೆ ಅಳಲು ಅವಕ್ಕೆ ಕಷ್ಟವಾಗಿತ್ತು. ಹೀಗಾಗಿ ಒಟ್ಟಿಗೆ ಶೌಚಾಲಯಕ್ಕೆ ಹೋಗಿ ಅಲ್ಲಿ ನಿಂತು ಅವರವರ ತಾಯಂದಿರ ನೆನೆದು ಕಣ್ಣೀರು ಹಾಕಿದವು.ಆಗ ನನಗೆ ತಿಳಿದ ಸತ್ಯ, ದುಃಖ ಎನ್ನುವುದು ಯಾವುದೋ ಕಥೆ ಕೇಳಿದ ತಕ್ಷಣಕ್ಕೆ ಉದುರಬೇಕಾಗಿಲ್ಲ. ಮನದೊಳಗೆ ಸುರಿಯುವ ಕಣ್ಣೀರು ಯಾರಿಗೂ ಕಾಣುವಂಥದ್ದಲ್ಲ. ಮನುಷ್ಯ ಅಳದೆಯೂ ತೀವ್ರವಾದ ದುಃಖವನ್ನು ತನ್ನೊಳಗೆ ಪ್ರಕಟಿಸಬಲ್ಲ. ಆದರೂ ಲೋಕದಲ್ಲಿ ನನ್ನಂಥ ಮೂರ್ಖರು ತಕ್ಷಣಕ್ಕೆ ಸುರಿಯುವ ಕಣ್ಣೀರಿಗೆ ಹೆಚ್ಚು ಬೆಲೆ ಕೊಟ್ಟು ಆದರಿಸುತ್ತಾರೆ. ಕಣ್ಣಿಗೆ ಕಾಣುವಂತೆ ಅಳುವವನೇ ನಿಜವಾದ ದುಃಖಿತ ಎಂದು ಭಾವಿಸುತ್ತಾರೆ.‘ತಾಯಿ ಕಥೆ ಕೇಳಿ ನಿಮ್ಮ ಅಂತಃಕರಣ ಕರಗಿದ್ದರೆ ಒಳ್ಳೆಯದೇನೆ. ಆದರೆ ನನ್ನ ಬೇಜಾರಿರುವುದು ನೀವು ನಿಮ್ಮ ದುಃಖವನ್ನು ಆ ದರಿದ್ರ ನಾರುವ ಶೌಚಾಲಯದಲ್ಲಿ ಸುರಿಸಿದರಲ್ಲ ಆ ಜಾಗ ಸರಿಯಿಲ್ಲ ಕಂಡ್ರಯ್ಯ’ ಎಂದು ಅವರಿಗೆ ಪರಿಹಾಸ್ಯ ಮಾಡಿದೆ. ಮಿಡಿಯುವ ಮಕ್ಕಳ ನಿಶ್ಕಲ್ಮಶ ಮನಸ್ಸನ್ನು ಬಲು ಹತ್ತಿರದಿಂದ ನೋಡುವ ನನಗೆ ಅವರ ಬಗ್ಗೆ ಬಹಳಷ್ಟು ಸಾರಿ ಹೆಮ್ಮೆ ಎನಿಸುತ್ತದೆ. ಮತ್ತೊಂದು ದಿನ ಅಣ್ಣ ತಂಗಿಯ ಪ್ರೀತಿ ವಾತ್ಸಲ್ಯದ ಮೇಲೆ ಭಾಷಣ ಬಿಗಿದೆ. ಅಂಥದ್ದೇ ಕರುಳು ಹಿಂಡುವ ಮತ್ತೊಂದು ಕಥೆ ಹೇಳಿದೆ. ಅಣ್ಣ ತಂಗಿಗೆ ಎಷ್ಟು ಅಗತ್ಯ ಎಂದು ವಿವರಿಸಿದೆ. ನನ್ನ ಅಂದಾಜು ಸರಿಯಿತ್ತು. ಈ ವಿಷಯದಲ್ಲಿ ಅನಾಥಳಾದ ಒಬ್ಬಳು ಹುಡುಗಿ ಅಲ್ಲಿದ್ದಳು. ಅವಳ ಹೃದಯಕ್ಕೆ ನನ್ನ ಮಾತುಗಳು ನಾಟಿ ಕಣ್ಣುಗಳಲ್ಲಿ ಸಣ್ಣ ಮೋಡ ಹೊಗೆಯಾಡತೊಡಗಿತು. ‘ನಿನಗೆ ಅಣ್ಣ ಇಲ್ಲ ಅಲ್ಲವೇ? ಅಣ್ಣನ ಪ್ರೀತಿ, ವಾತ್ಸಲ್ಯ ನೆನಪಾಯಿತಲ್ಲವೇ?’ ಎಂದು ಪೌರಾಣಿಕ ನಾಟಕ ಶೈಲಿಯಲ್ಲಿ ಅವಳನ್ನು ಪ್ರಶ್ನಿಸಿದೆ. ಇಷ್ಟು ಖಚಿತವಾಗಿ ಅಳೋಕೆ ರೆಡಿಯಾಗಿದ್ದಾಳೆಂದರೆ ಅವಳಿಗಿದ್ದ ಒಬ್ಬಣ್ಣನೋ? ಇಲ್ಲಾ ತಮ್ಮನಿದ್ದವನೋ ಈಗ ಸತ್ತಿದ್ದಾನೆ ಎಂಬ ಹುಂಬ ಊಹೆ ನನ್ನದು. ಕರುಣಾಜನಕ ಕಥೆಗಳನ್ನು ಹೇಳಿ ಯಾರ್‍್ಯಾರ ಮನೆಯಲ್ಲಿ ಯಾರ್‍್ಯಾರು ಸತ್ತಿದ್ದಾರೆ? ಯಾರ್‍್ಯಾರು ಯಾರ್‍್ಯಾರನ್ನು ಕಳೆದುಕೊಂಡು ಅನಾಥರಾಗಿದ್ದಾರೆ, ಅವರ ಕಣ್ಣೀರಿನ ಹಿಂದೆ ಯಾರ ಸಾವಿದೆ ಎಂದು ಪತ್ತೆ ಹಚ್ಚುತ್ತಾ ನಿಲ್ಲುವುದು ಎಂಥ ಪರಮ ಮೂರ್ಖತನದ ಕೆಲಸವಲ್ಲವೇ? ಸದ್ಯ ಅವಳಣ್ಣ ನನ್ನ ಪ್ರಕಾರ ಸತ್ತಿರಲಿಲ್ಲ. ಮನೆ ಬಿಟ್ಟು ಓಡಿ ಹೋಗಿದ್ದನಷ್ಟೇ. ಮತ್ತೆ ಯಥಾ ಪ್ರಕಾರ ಪ್ರಕಾಂಡ ಮೂರ್ಖ ಪಂಡಿತನಾದ ನಾನು ‘ನಿನ್ನಣ್ಣ ಓಡೋಡಿ ಹೋಗಿದ್ದು ಯಾಕೆ’ ಎಂದು ಪ್ರಶ್ನಿಸಿದೆ. ಅದಕ್ಕವಳು ಅಯ್ಯೋ ಲೋಫರ್ ನನ್ಮಗ ಸಾರ್. ಒಂದು ಹುಡುಗಿ ಹಿಂದೆ ಓಡೋಗಿದ್ದಾನೆ ಎಂದು ರೋಷದಿಂದ ಹೇಳಿದಳು. ಕ್ಷಣದ ಹಿಂದೆ ಆಕೆಗಿದ್ದಿದ್ದು ಅಣ್ಣನಿಗಾಗಿ ಕಣ್ಣೀರು, ಈಗ ಅತ್ತಿಗೆ ಮೇಲಿನ ರೋಷದ ಬಿಸಿನೀರು. ‘ನೀನು ಭಲೇ ಹುಡುಗಿ ಕಣಮ್ಮ. ಮೇಷ್ಟ್ರು ಎದುರಿಗೆ ಹಂಗೆಲ್ಲಾ ಅಶ್ಲೀಲ ಪದಗಳ ಪ್ರಯೋಗ ಮಾಡಬಾರದು.ಶಾಂತಚಿತ್ತಳಾಗಿ ನಿನ್ನ ದುಃಖದ ಹಿಂದಿರುವ ಕಥೆಯನ್ನು ಹೇಳು ಎಂದೆ. ಮತ್ತೆ ಅವಳ ಬೈಗುಳ ಶುರುವಾದವು. ‘ಆ ಬೇವರ್ಸಿ ಸಿಕ್ರೆ ಬರೀ ಬೈಯ್ಯೋದಲ್ಲ ಸಾರ್. ಪರಕೆ ಜೊತೆ ಚಪ್ಲಿ ಪೂಜೇನೂ ಆಗ್ತಾವೆ. ನನ್ನ ಕ್ಲೋಸ್ ಫ್ರೆಂಡು ಸಾರ್ ಅವಳು. ಮಳ್ಳಿ ಹಂಗೆ ನನ್ನ ಪಕ್ಕಾನೆ ಕೂತಿರೋಳು. ದಿನಾ ನನ್ನ ಜೊತೆಯಾಗೇ ಓಡಾಡ್ತಿದ್ಲು. ಅದ್ಯಾವ ಮಾಯದಲ್ಲಿ ನಮ್ಮಣ್ಣನ್ನ ಬುಟ್ಟಿಗೆ ಹಾಕ್ಕೊಂಡ್ಳೋ ಗೊತ್ತೇ ಆಗಲಿಲ್ಲ ಸಾರ್. ಅವಳು ಸಿಕ್ರೆ ಕೋಳಿ ಕತ್ತು ತಿರುಗಿಸಿದಂಗೆ ತಿರುಗ್ಸಿ ಅವಳ ಕತ್ತು ಮುರೀತೀನಿ ನೋಡ್ತಿರಿ ಸಾರ್’ ಎಂದು ಬುಸುಗುಟ್ಟಿದಳು. ಅಣ್ಣ ಹುಡುಗಿ ಹಿಂದೆ ಓಡಿಹೋದ ಎಂದು ಅಪ್‌ಸೆಟ್ ಆದ ಮೊದಲ ಹುಡುಗಿ ಇವಳೇ ಇರ್ಬೇಕು.‘ನೀನು ಅವರಿಬ್ಬರು ಓಡಿ ಹೋಗಿದ್ದಕ್ಕೆ ಬೇಜಾರಾಗಿದ್ದಲ್ಲ! ನಿನಗೆ ಹೇಳದೆ, ಸುಳಿವು ಕೊಡದೆ ಹೋದ್ರು ಅನ್ನೋ ಬೇಜಾರ್ ನಿಂದು. ಹೋಗಲಿ ಬಿಡಮ್ಮ ಬಂದೇ ಬರುತ್ತಾರೆ’ ಎಂದು ಅವರ ಪರವಾಗಿ ನಾನೇ ಸಮಾಧಾನ ಹೇಳಿದೆ. ಆಪ್ತ ಗೆಳತಿಯಾದವಳು ಅತ್ತಿಗೆಯಾದಳಲ್ಲ ಎನ್ನುವ ಸಂತೋಷವೂ ಅವಳಿಗಿರಲಿಲ್ಲ. ಐನಾತಿ ತನ್ನ ಗೆಳೆತನ ಉಪಯೋಗಿಸಿಕೊಂಡು ತನ್ನಣ್ಣನನ್ನೇ ಎಗರಿಸಿದಳಲ್ಲ ಎಂಬ ಸಿಟ್ಟು ಆಕೆಗಿದ್ದಂತೆ ಕಂಡಿತು. ‘ಅಣ್ಣ ನನಗೇನೇನೋ ಕೊಡುಸ್ತಾ ಇದ್ದ ಸಾರ್. ಈ ರಂಡೆ ಸಿಕ್ಕ ಮೇಲೆ ಅವನು ನನ್ನ ಕಡೆ ತಿರುಗಿ ನೋಡ್ತಾನೆ ಅಂತಿರಾ ಸಾರ್?’ ಎಂದು ಜಾತಕಶಾಸ್ತ್ರದ ಪ್ರಶ್ನೆಯೊಂದನ್ನು ಎಸೆದಳು. ಇದ್ಯಾಕೋ ನನ್ನ ತಲೆಗೇ ಬರುತ್ತಿದೆ ಅಂತನ್ನಿಸಿತು. ಓಡಿ ಹೋದವನು ಇವರಣ್ಣ ಮತ್ತಿವಳ ಫ್ರೆಂಡ್. ನನಗೂ ಈ ಪರಾರಿಗೂ ಸಂಬಂಧವೇ ಇಲ್ಲ. ಅಂಥದ್ದರಲ್ಲಿ ಆ ಪ್ರೇಮಿಗಳ ಪರವಾಗಿ ನಾನ್ಯಾಕೆ ದಡ್ಡ ಶಿಖಾಮಣಿಯಂತೆ ಭರವಸೆ ಕೊಡುತ್ತಿದ್ದೇನೆ. ಇದು ನಾನು ಮಾಡುತ್ತಿರುವ ಮತ್ತೊಂದು ಮೂರ್ಖತನದ ಕೆಲಸವಲ್ಲವೇ? ಅಂತನ್ನಿಸಿತು.ಹದಿಹರೆಯದ ಉಡಾಫೆ, ಒರಟುತನ, ಹುಡುಗಾಟಿಕೆಗಳ ಹುಸಿ ಜಾಗದಲ್ಲಿ ನೆನಪು, ಕರುಣೆ, ತಾಳ್ಮೆ, ನಮ್ರತೆಗಳ ಪಸಿ ಮೂಡಲು ದುಃಖದ ಕತೆಗಳಿದ್ದರೆ ಒಳ್ಳೆಯದಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry