ಮಂಗಳವಾರ, ಮೇ 11, 2021
21 °C

ಅಸಾಧ್ಯವಾದದ್ದು ಸುಲಭಸಾಧ್ಯವಾಗುವ ಪರಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನನಗೆ ಜಾದೂ ತರಹದ ಪವಾಡಗಳಲ್ಲಿ ನಂಬಿಕೆಯಿಲ್ಲ. ಆದರೆ ನಮ್ಮ ಹೃದಯದಲ್ಲೇ ಗುಪ್ತಗಾಮಿನಿಯಾಗಿರುವ ಅತ್ಮವಿಶ್ವಾಸವನ್ನು ಎಚ್ಚರಗೊಳಿಸಿದರೆ ಅದು ಮಾಡುವ ಅತ್ಯದ್ಭುತ ಪರಿವರ್ತನೆಗಳ ಪವಾಡವನ್ನು ನಂಬುತ್ತೇನೆ. ಅಂಥವೆಷ್ಟನ್ನೋ ನಾವು ನಮ್ಮ ಜೀವನದಲ್ಲೇ ಕಂಡಿದ್ದೇವೆ.ಬಹಳ ಹಳೆಯ  ರೀಡರ್ಸ ಡೈಜೆಸ್ಟ್ ಮಾಸಿಕ ಪತ್ರಿಕೆಯ ಅರವತ್ತನೆಯ ದಶಕದ ಸಂಗ್ರಹವನ್ನು ತಿರುವಿ ಹಾಕುತ್ತಿದ್ದಾಗ ಒಂದು ಲೇಖನ. ಅದೊಂದು ಮಹಿಳೆ ಬರೆದ ಲೇಖನ, ಅದೊಂದು ಪತ್ರದ ರೂಪದಲ್ಲಿತ್ತು. ಆಕೆಗೆ ಎಂಭತ್ತು ವರ್ಷ ವಯಸ್ಸಾಗಿತ್ತು, ಅವಳ ಪತ್ರದ ಸಾರಾಂಶರೂಪ ಹೀಗಿದೆ.ನಾನೊಬ್ಬ ಪುಟ್ಟ ಮುದುಕಿ. ನನಗೆ ಸರಿಯಾದ ಶಿಕ್ಷಣವಿಲ್ಲ. ಚೆನ್ನಾಗಿ ಬರೆಯಲಾರೆ. ಆದರೂ ನನಗೆ ಅನ್ನಿಸಿದ್ದನ್ನು ತಮಗೆ ತಿಳಿಸಲು ಪ್ರಯತ್ನಿಸುತ್ತೇನೆ. ನಾನು ಹುಟ್ಟಿದ್ದೇ ತೊಂದರೆಯೊಂದಿಗೆ. ವೈದ್ಯರು ಅಂದೇ ಹೇಳಿಬಿಟ್ಟರಂತೆ ಈ ಹುಡುಗಿ ಎಂದೆಂದಿಗೂ ನಡೆಯುವುದೇ ಸಾಧ್ಯವಿಲ್ಲವೆಂದು. ಅಂತೆಯೇ ನಾನು ಕುಳಿತಲ್ಲಿಯೇ ಬೆಳೆದೆ. ನನ್ನ ವಯಸ್ಸಿನ ಮಕ್ಕಳು ನಡೆದಾಡುವುದನ್ನು, ಕುಣಿದಾಡುವುದನ್ನು ನೋಡಿದಾಗಲೆಲ್ಲ ನನ್ನ ಅಸಹಾಯತೆಯ ಬಗ್ಗೆ ದು:ಖ ನುಗ್ಗಿ ಬರುತ್ತಿತ್ತು.ಒಂದು ದಿನ ಹಟದಿಂದ ತೀರ್ಮಾನ ಮಾಡಿದೆ. ನಾನು ನಡೆದೇ ತೀರುತ್ತೇನೆ ಎಂದು. ಕಿಟಕಿಯ ಹತ್ತಿರ ನಿಂತು ಸರಳುಗಳನ್ನು ಬಲವಾಗಿ ಕೈಗಳಿಂದ ಹಿಡಿದುಕೊಂಡು ಎಳೆದು ಕಾಲ ಮೇಲೆ ನಿಲ್ಲಲು ಪ್ರಯತ್ನಿಸಿದೆ, ಜಾರಿ ಬಿದ್ದೆ. ಹತ್ತಾರು ಬಾರಿ ಹೀಗೆಯೇ ಆಯಿತು. ಕೊನೆಗೊಂದು ದಿನ ನನ್ನ ಕಾಲ ಮೇಲೇ ನಿಂತು ಸಮತೋಲನ ಕಾಯ್ದುಕೊಂಡೆ. ನನ್ನ ಅಪ್ಪ ಅಮ್ಮಂದಿರಿಗೆ ಆದ ಸಂತೋಷವನ್ನು ಹೇಳಲಾರೆ. ಅಮ್ಮ ನನಗೆ ಕೈಹಿಡಿದು ನಡೆಸತೊಡಗಿದರು. ಒಂದು ವರ್ಷದಲ್ಲಿ ನಾನು ಬಾತುಗೋಳಿಯ ಹಾಗೆ ಕುಂಟುತ್ತ ನಡೆಯಲಾರಂಭಿಸಿದೆ. ನಾನು ಎಂಟು ವರ್ಷದವಳಾಗುವಷ್ಟರಲ್ಲಿ ನಡೆಯುವುದು ಮಾತ್ರವಲ್ಲ, ಮೊಳಕಾಲು ನೆಲಕ್ಕೂರಿ ನೆಲ ಒರೆಸುವುದು, ಮೇಲಿನಿಂದ ಕೆಳಗೆ ಹಾರುವುದು, ನಿಧಾನವಾಗಿ ಓಡುವುದು ಕೂಡ ಸಾಧ್ಯವಾಯಿತು.ನಾನು ಕೆಲಸ ಮಾಡುತ್ತಲೇ ನನ್ನ ಇಬ್ಬರು ಮಕ್ಕಳನ್ನು ಬೆಳೆಸಿದೆ, ಓದಿಸಿದೆ ನನ್ನ ಅರವತ್ತನೇ ವರ್ಷದಲ್ಲಿ ಅಂಗಡಿಯಿಂದ ಮನೆಗೆ ಬರುವಾಗ ಅಪಘಾತವಾಗಿ ಪಾದದ ಕೀಲು ಮುರಿಯಿತು, ಮತ್ತೆ ಆಸ್ಪತ್ರೆ ಸೇರಿದೆ. ಕಾಲಿನ ಎಕ್ಸರೇ ತೆಗೆದ ವೈದ್ಯರು ನನ್ನ ಬಳಿಗೆ ಬಂದು ನೀವು ಇದುವರೆಗೆ ಹೇಗೆ ನಡೆದಿರಿ? ಇದೊಂದು ಪವಾಡವೆಂದರು.ಯಾಕೆಂದರೆ ಹುಟ್ಟಿನಿಂದಲೇ ನನಗೆ ಮೊಳಕಾಲಿನ ಮೂಳೆ ಪೃಷ್ಠಭಾಗವನ್ನು ಸೇರುವಲ್ಲಿ ಇರಬೇಕಾದ ಗೂಡುಗಳೇ ಇರಲಿಲ್ಲವಂತೆ. ಹಾಗೆ ಜೋಡಣೆ ಇಲ್ಲದೇ ನಡೆಯುವುದು ಅಸಾಧ್ಯವೆಂದರು. ಅಂಥ ಗೂಡುಗಳು ನನ್ನ ದೇಹದಲ್ಲಿ ಇಲ್ಲವೆಂದು ನನಗೆ ತಿಳಿದದ್ದೇ ಈಗ. ಆದರೆ ಇದುವರೆಗೂ ನಡೆದದ್ದು ಸುಳ್ಳಲ್ಲ. ಮತ್ತೆ ವೈದ್ಯರು ಹೇಳಿದರು.  ಈಗಾದ ಅಪಘಾತದಿಂದ ಮೂಳೆಯ ಮೇಲಿನ ಭಾಗಕ್ಕೂ ಪೆಟ್ಟಾಗಿದೆ. ನಿಮ್ಮ ಈಗಿನ ವಯಸ್ಸನ್ನು ಹಾಗೂ ಆಗಿರುವ ಪೆಟ್ಟನ್ನು ಗಮನಿಸಿದರೆ ಮತ್ತೆ ನೀವು ನಡೆಯವುದು ಸಾಧ್ಯವಿಲ್ಲ. ಆದಷ್ಟು ಗಾಲಿ ಕುರ್ಚಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡಿ.ಆದರೆ ನಾನು ಒಂದೇ ವರ್ಷದಲ್ಲಿ ಮತ್ತೆ ಮೊದಲಿನಂತೆ ನಡೆಯಲಾರಂಭಿಸಿದೆ. ಅಷ್ಟೇ ಅಲ್ಲ ನನ್ನ ಇಂದಿನ ಎಂಭತ್ತನೆಯ ವರ್ಷದಲ್ಲೂ ಊರುಗೋಲು ಕೂಡ ಇಲ್ಲದೇ ನಡೆಯುತ್ತಿದ್ದೇನೆ. ಇದನ್ನು ಇಲ್ಲಿಯ ವೈದ್ಯರು ಪವಾಡವೆಂದು ಹೇಳುತ್ತಿದ್ದಾರೆ.ದೇಹಶಾಸ್ತ್ರದ ಪ್ರಕಾರ ಈ ಹೆಣ್ಣುಮಗಳು ನಡೆಯಲೇಬಾರದು, ಆದರೆ ನಡೆದಿದ್ದಾಳೆ. ಇದೇ ರೀತಿ ಬದುಕಲು ಸಾಧ್ಯವೇ ಇಲ್ಲವೆಂದು ಹೇಳಿದ ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ಪವಾಡಗಳು ನಡೆದದ್ದು ಬಹುಶಃ ಸುಪ್ತವಾಗಿದ್ದ ಅತ್ಮವಿಶ್ವಾಸವನ್ನು, ನಂಬಿಕೆಯನ್ನು ಬಡಿದೆಬ್ಬಿಸಿದ್ದರಿಂದ. ಇದನ್ನೇ ಕೃಷ್ಣ ಅರ್ಜುನನಿಗೆ ಕುರುಕ್ಷೇತ್ರದಲ್ಲಿ, ಅಷ್ಟಾವತ್ತೆಗೆ ಮಥುರೆಯಲ್ಲಿ, ಜಾಂಬುವಂತ ಆಂಜನೆಯನಿಗೆ, ಸೇತುವೆ ಕಟ್ಟುವಾಗ ಶ್ರಿರಾಮ ಜೊತೆಗಿದ್ದ ಕಪಿಸೇನೆಗೆ ಮಾಡಿದ್ದಿರಬಹುದು. ಒಂದು ಬಾರಿ ಅಂತರ್ಗತವಾದ ನಂಬಿಕೆ ಜಾಗ್ರತವಾಯಿತೋ ಅಸಾಧ್ಯವಾದದ್ದು ಸುಲಭಸಾಧ್ಯವಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.