ಭಾನುವಾರ, ನವೆಂಬರ್ 17, 2019
29 °C

ಅಸ್ಥಿರತೆ: ಕ್ಷೀಣಿಸುತ್ತಿರುವ ಹೂಡಿಕೆ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯಲ್ಲಿ ನಿರೀಕ್ಷೆಗಳು, ಹೆಚ್ಚಿನ ಪ್ರಭಾವಿ ಎಂಬುದು ಹಿಂದಿನ   ವಾರದ ಪೇಟೆಯ ಏರಿಳಿತಗಳನ್ನು ಗಮನಿಸಿದಾಗ ಅರಿವಾಗುವುದು. ದೇಶದ ತಾಂತ್ರಿಕ ವಲಯದ ದಿಗ್ಗಜ ಕಂಪೆನಿಗಳಾದ ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ಗಳು ಒಂದೇ ದಿನ ಮೊದಲ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದವು. ಗುರುವಾರ ಮುಂಜಾನೆ ಇನ್ಫೋಸಿಸ್  ಕಂಪೆನಿಯ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿ ಇಲ್ಲವೆಂದು ಭಾರಿ ಒತ್ತಡದ ಕಾರಣ ಶೇ 8ಕ್ಕೂ ಹೆಚ್ಚಿನ ಇಳಿಕೆ ಕಂಡಿತು. ಇದರೊಂದಿಗೆ ವಲಯದ ಇತರೆ ಕಂಪೆನಿಗಳಾದ ವಿಪ್ರೊ, ಟಿಸಿಎಸ್, ಎಚ್‌ಸಿಎಲ್ ಟೆಕ್, ಹೆಕ್ಸಾವೇರ್ ಟೆಕ್ನಾಲಜಿ ಮುಂತಾದವುಗಳು ಸಹ ಗಮನಾರ್ಹ ಕುಸಿತ ಕಂಡವು. ಸಂಜೆ   `ಟಿಸಿಎಸ್~  ಕಂಪೆನಿಯ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿದೆ ಎಂಬ ಕಾರಣಕ್ಕಾಗಿ, ದಿನದ ವಹಿವಾಟು ಆರಂಭದ ಕ್ಷಣಗಳಲ್ಲಿ ರೂ. 45ಕ್ಕೂ ಹೆಚ್ಚಿನ ಏರಿಕೆ ಕಂಡು ನಂತರ ಇಳಿಕೆ ಪಡೆಯಿತು. ಅಂದರೆ ಪ್ರತಿಯೊಂದು ಬೆಳವಣಿಗೆಯ ಪ್ರಭಾವವು ತಾತ್ಕಾಲಿಕ ಸ್ಪಂದನ ಪಡೆಯುತ್ತದೆ. ಹಲವು ಬಾರಿ ನಿರೀಕ್ಷೆಯು ಸರಿಯೋ, ಇಲ್ಲವೊ ಎಂದು ಅರಿಯುವುದಕ್ಕೆ ಮುನ್ನವೇ ಪೇಟೆಯು ತನ್ನ ಸ್ಪಂದನೆಯನ್ನು ಹಿಮ್ಮುಖಗೊಳಿಸುವುದು ಉದಾಹರಣೆಗೆ ಬುಧವಾರ ಕ್ಯಾಸ್ಟ್ರಾಲ್ ಕಂಪೆನಿಯು 16 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸುವುದೆಂಬ ಸುದ್ದಿಗೆ ದಿಢೀರ್ ಏರಿಕೆ ಪ್ರದರ್ಶಿಸಿತು ಅಂದು ಸುಮಾರು ಶೇಕಡ ಮೂರುವರೆಯಷ್ಟು ಏರಿಕೆಯಿಂದ ರೂ. 571ನ್ನು ದಾಟಿ, ಲಾಭದ ನಗದೀಕರಣದ ಒತ್ತಡದಿಂದ ಕುಸಿದು  ರೂ. 555 ರಲ್ಲಿ ವಾರಾಂತ್ಯ ಕಂಡಿತು.

ಒಟ್ಟಿನಲ್ಲಿ ಹಿಂದಿನವಾರ ಸಂವೇದಿ ಸೂಚ್ಯಂಕವು 307 ಅಂಶಗಳಷ್ಟು ಕುಸಿತ ಕಂಡು ನಿರೀಕ್ಷೆಯು ಸಾಕ್ಷಾತ್ಕಾರವಾಗದಿದ್ದಾಗ ಉಂಟಾಗಬಹುದಾದ ಅಘಾತದ ರುಚಿ ತೋರಿಸಿದೆ. ಜೊತೆಗೆ ಮಧ್ಯಮ ಶ್ರೇಯಾಂಕದ ಸೂಚ್ಯಂಕವನ್ನು 66 ಪಾಯಿಂಟುಗಳ ಕುಸಿತ ಕಾಣುವಂತಾಯಿತು, ಲೋಹ ವಲಯ ಸೂಚ್ಯಂಕ ಶೇ 3.28 ರಷ್ಟು, ಐ.ಟಿ. ಸೂಚ್ಯಂಕ ಶೇ 5.2ರ ಕುಸಿತ ಕಂಡವು. ವಿದೇಶಿ ವಿತ್ತೀಯ ಸಂಸ್ಥೆಗಳು ವಾರದುದ್ದಕ್ಕೂ ಖರೀದಿಯ ದಿಶೆಯಲ್ಲಿದ್ದು ಒಟ್ಟು ರೂ. 1,493 ಕೋಟಿ ಹೂಡಿಕೆ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ. 2,041 ಕೋಟಿ ಮಾರಾಟ ಮಾಡಿದವು. ಪೇಟೆಯ ಬಂಡವಾಳ ಮೌಲ್ಯವು ರೂ. 61.55 ಲಕ್ಷ ಕೋಟಿಗೆ ಕುಸಿದಿದೆ.

ಹೊಸ ಷೇರಿನ ವಿಚಾರ

ದೆಹಲಿ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಾಗುತ್ತಿರುವ ಅಸೀಮ್ ಗ್ಲೋಬಲ್ ಲಿ. ಕಂಪೆನಿಯು 16 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.

ಎಸ್.ಎಂ.ಇ. ವೇದಿಕೆಯಲ್ಲಿ ಬಿಡುಗಡೆ

ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಎಸ್.ಎಂ.ಇ. ವಿಭಾಗದಲ್ಲಿ ಪ್ರತಿ ಷೇರಿಗೆ ರೂ. 20 ರಂತೆ ವಿತರಿಸಿದ ಮ್ಯಾಕ್ಸ್ ಅಲರ್ಟ್ ಸಿಸ್ಟಮ್ಸ ಲಿ. 13 ರಿಂದ `ಎಂ.ಟಿ.~ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ಈ ಷೇರಿನ ಮಾರ್ಕೆಟ್ ಲಾಟ್ 6000 ಷೇರುಗಳಾಗಿವೆ.

ಬೋನಸ್ ಷೇರಿನ ವಿಚಾರ

*ಏಷಿಯನ್ ಸ್ಟಾರ್ ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್‌ಗೆ 21ನೇ ಜುಲೈ ನಿಗದಿತ ದಿನವಾಗಿದೆ.

*`ಟಿ~ ಗುಂಪಿನ ಲೈಫ್‌ಲೈನ್ ಡ್ರಗ್ಸ್ ಅಂಡ್ ಫಾರ್ಮಲಿ ವಿತರಿಸಲಿರುವ 4:1ರ ಅನುಪಾತದ ಬೋನಸ್‌ಗೆ ಪ್ರಕಟಿಸಿದ ನಿಗದಿತ ದಿನಾಂಕವನ್ನು ರದ್ದುಗೊಳಿಸಿ ಹೊಸ ದಿನವನ್ನು ಗೊತ್ತುಪಡಿಸಲಿದೆ.

*ಕ್ಯಾಸ್ಟ್ರಾಲ್ ಇಂಡಿಯಾ ಕಂಪೆನಿಯು 16 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಎಂ.ಸಿ.ಎಕ್ಸ್ ಷೇರು ವಿನಿಮಯ ಕೇಂದ್ರ

ಸರಕುಪೇಟೆ ಮತ್ತು ಕರೆನ್ಸಿ ವಿನಿಮಯ ಕೇಂದ್ರಗಳನ್ನು ಆರಂಭಿಸಿರುವ ಎಂ.ಸಿ.ಎಕ್ಸ್ ಪ್ರವರ್ತಕ ಸಮೂಹವು ಎಂ.ಸಿ.ಎಕ್ಸ್ ಎಸ್.ಎಕ್ಸ್ ಎಂಬ ಹೆಸರಿನಲ್ಲಿ ಷೇರು ವಿನಿಮಯ ಕೇಂದ್ರವನ್ನು ಆರಂಭಿಸಲು ನಿಯಂತ್ರಕ `ಸೆಬಿ~ಯಿಂದ ಅನುಮತಿ ಪಡೆದಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿನ ಚಟುವಟಿಕೆಯು ಇತ್ತೀಚಿನ ದಿನಗಳಲ್ಲಿ `ಊಹಿಕೆ~ ವ್ಯವಹಾರಕ್ಕೆ ಒತ್ತು ನೀಡುವಂತಹ ವಹಿವಾಟಿನ ಗಾತ್ರಕ್ಕೆ ಮಹತ್ವ ನೀಡಿ ಹೂಡಿಕೆ ಎಂಬುದಕ್ಕೆ ಸ್ಥಾನವಿಲ್ಲದೆ ಅಪಾರವಾದ ಸಾಮಾನ್ಯ ಜನರ ಬಂಡವಾಳವನ್ನು ಕರಗಿಸಿ ನಂಬಿಕೆಯ ಕೊರತೆಗೆ ಕಾರಣವಾಗಿವೆ. ಹಲವಾರು ವಹಿವಾಟುಗಳಲ್ಲಿನ ವಹಿವಾಟಾಗುತ್ತಿರುವ ಷೇರುಗಳ ಸಂಖ್ಯೆಯು ಕೇವಲ ಒಂದಂಕಿಯದೂ ಆಗಿರುತ್ತವೆ. ಇದು ಕೇವಲ ಷೇರಿನ ದರಗಳ ದಾಖಲೆಗಾಗಿ ಮಾತ್ರವೇ ಹೊರತು ಹೂಡಿಕೆದಾರರಿಗೆ ಅನುಕೂಲಕರವಲ್ಲ. ಈ ದಿಶೆಯಲ್ಲಿ ಹೊಸ ಷೇರು ವಿನಿಮಯ ಕೇಂದ್ರವು ಸ್ಥಳೀಯ ಜನಸಂಪತ್ತನ್ನು ಆಕರ್ಷಿಸಿ ಹೂಡಿಕೆ ಆಧಾರಿತ, ಸಾಧ್ಯವಾದಷ್ಟು ಸುರಕ್ಷಿತ ಪದ್ಧತಿ ಅಳವಡಿಸಿಕೊಂಡು ಭಿನ್ನತೆ ಪ್ರದರ್ಶಿಸಿದರೆ ಯಶಸ್ಸು ಶತಸಿದ್ಧ. ಸ್ಥಳೀಯ ಜನ ಸಂಪತ್ತನ್ನು ಸುರಕ್ಷಿತ ಚಟುವಟಿಕೆಗೆ ಆಕರ್ಷಿಸುವುದು ಆಧ್ಯತೆಯಾಗಬೇಕು.

ಲಾಭಾಂಶ ವಿಚಾರ

*ಸಿರಾ ಸ್ಯಾನಿಟರಿ ವೇರ್ ಶೇ 60 (ಮುಖ ಬೆಲೆ ರೂ. 5), (ನಿಗದಿತ ದಿನಾಂಕ: 27ನೇ  ಆಗಸ್ಟ್), ಫ್ಲೆಕ್ಸ್‌ಫುಡ್ ಶೇ 20, ಬಿಲ್‌ಕೇರ್ ಲಿ. ಶೇ 20, ಕಿಲ್‌ಬರ್ನ್ ಕೆಮಿಕಲ್ಸ್ ಶೇ 15, ಟಿಸಿಎಸ್ ಶೇ 300 (ಮುಖ ಬೆಲೆ ರೂ. 1) (ನಿಗದಿತ ದಿನಂಕ 24ನೇ ಜುಲೈ), ಯುಥ್ಲೆಕ್ಸ್ ಶೇ 20.

* ಗ್ಲೋಸ್ಟರ್ ಲಿ. ಕಂಪೆನಿ ವಿತರಿಸಲಿರುವ ಪ್ರತಿ ಷೇರಿಗೆ ರೂ. 20ರ ಲಾಭಾಂಶ (ವಿಶೇಷ ಲಾಭಾಂಶ ಸೇರಿ) 3ನೇ ಆಗಸ್ಟ್ ನಿಗದಿತ ದಿನವಾಗಿದೆ.

* ಸ್ಟೆಲೆಕ್ಸ್ ಏನರ್ಜಿ ಸಿಸ್ಟಮ್ಸ (ಹಿಂದಿನ ಹೆಸರು ನ್ಯೂಮರಿಕ್ ಪವರ್ ಸಿಸ್ಟಮ್ಸ ಲಿ), ಕಂಪೆನಿ ವಿತರಿಸಲಿರುವ ಪ್ರತಿ ಷೇರಿಗೆ ರೂ. 15ರ ಲಾಭಾಂಶಕ್ಕೆ 19ನೇ ಜುಲೈ ನಿಗದಿತ ದಿನವಾಗಿದೆ.

ಕಂಪೆನಿ ಮಾಲಿಕತ್ವ ಬದಲಾವಣೆ

ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಆಫ್ ಇಂಡಿಯಾವು ಶಾಂತಿ ಗೇರ್ಸ್‌ ಪ್ರವರ್ತಕರ ಶೇ 44.12ರ ಭಾಗಿತ್ವ ಕೊಳ್ಳುವ ಒಪ್ಪಂದ ಮಾಡಿಕೊಂಡಿದೆ.

ಶ್ರೀರಾಂ ಟ್ರಾನ್ಸ್‌ಪೋರ್ಟ್

ವಾಹನ ಸಾಲದ ಕಂಪೆನಿ ಶ್ರೀರಾಂ ಟ್ರಾನ್ಸ್‌ಪೋರ್ಟ್ ಪೈನಾನ್ಸ್ ಕಂಪೆನಿಯು ರೂ. 300 ಕೋಟಿ ಮೌಲ್ಯದ ಅಪರಿವರ್ತನೀಯ ಡಿಬೆಂಚರ್ (ಎನ್.ಸಿ.ಡಿ.) ಗಳನ್ನು ಸಾರ್ವಜನಿಕ ವಿತರಣೆಗೆ ಬಿಡುಗಡೆ ಮಾಡಲಿದೆ.

ರೂ. 1000 ಮುಖ ಬೆಲೆಯ ಡಿಬೆಂಚರ್‌ಗಳು ಮೂರು ವರ್ಷದ ಹಾಗೂ ಐದು ವರ್ಷದ ಅವಧಿಯದಾಗಿದ್ದು ಮೂರು ವರ್ಷದ ಡಿಬೆಂಚರ್ ಶೇ 10.25 ಹಾಗೂ ಐದು ವರ್ಷದ ಡಿಬೆಂಚರ್‌ಗಳು ಶೇ 10.50 ರಂತೆ ವಾರ್ಷಿಕ ಬಡ್ಡಿಗಳಿಸಿ ಕೊಡುತ್ತವೆ. ಈ ಯೋಜನೆಯಲ್ಲಿ ವ್ಯಕ್ತಿಗಳು, ಹಿಂದು ಅವಿಭಕ್ತ ಕುಟುಂಬ (ಎಚ್.ಯು.ಎಫ್.) ಗಳು ಹೂಡಿಕೆ ಮಾಡಬಹುದಾಗಿದ್ದು, ಯೋಜನೆಯು 26ನೇ ಜುಲೈಯಿಂದ ಸಾರ್ವಜನಿಕ ವಿತರಣೆಗೆ ತೆರೆದಿಟ್ಟು ಆಗಸ್ಟ್ 10ರ ವರೆಗೂ ತೆರೆದಿರುತ್ತದೆ. ಹೂಡಿಕೆಯು ಕನಿಷ್ಠ 10 ಡಿಬೆಂಚರ್‌ಗಳಾಗಿರಬೇಕು. ಹೂಡಿಕೆಗೆ ಮುನ್ನ ಬಡ್ಡಿ ದರದ ಬಗ್ಗೆ ಖಾತ್ರಿಪಡಿಸಿಕೊಳ್ಳಿರಿ.

ಕಂಪೆನಿ ವಿಲೀನ ವಿಚಾರ

ಆರತಿ ಡ್ರಗ್ಸ್ ಕಂಪೆನಿಯಲ್ಲಿ ಅಂಗ ಸಂಸ್ಥೆ ಸುಯಶ್ ಲ್ಯಾಬೊರೆಟರೀಸ್ ವಿಲೀನಗೊಳ್ಳಲು ಮುಂಬೈ ಉಚ್ಚನ್ಯಾಯಾಲಯ ಅನುಮತಿಸಿದೆ.

ವಾರದ ವಿಶೇಷ

 ಷೇರುಪೇಟೆಯಲ್ಲಿ ಕ್ಷಿಪ್ರಗತಿಯಲ್ಲಿ ಹಣಗಳಿಸಬೇಕೆಂಬ ಕಾತುರತೆ ಎಲ್ಲರಲ್ಲೂ ಉದ್ಭವಿಸಿರುವುದನ್ನು ಈಗಿನ ದಿನಗಳಲ್ಲಿ ಎಲ್ಲರಲ್ಲೂ ಕಾಣಬಹುದಾಗಿದೆ. ಇದಕ್ಕೆ ಮುಖ್ಯ ಕಾರಣವು ಎಲ್ಲೆಡೆ ಕಾಣುತ್ತಿರುವ ಅಸ್ಥಿರತೆಯಯಾಗಿದೆ. ಸುಮಾರು ರೂ. 62 ಲಕ್ಷ ಕೋಟಿ ಬಂಡವಾಳ ಮೌಲ್ಯವಿರುವ ಷೇರುಪೇಟೆಯಲ್ಲಿ ಕೇವಲ ಎರಡು ಸಾವಿರ ಕೋಟಿ ಮೌಲ್ಯದ ವಹಿವಾಟನ್ನು ದಿನ ನಿತ್ಯ ಕಾಣುತ್ತಿದ್ದೇವೆ. ಇದು ಅತ್ಯಲ್ಪವಾದ್ದರಿಂದ ಅಸ್ಥಿರತೆ ಹೆಚ್ಚು. ಪೇಟೆಯಲ್ಲಿ ಭಾಗವಹಿಸುವ ಹೂಡಿಕೆದಾರರ ಸಂಖ್ಯೆಯಯ ಕ್ಷೀಣಿಸುತ್ತಿದೆ. ಹಲವಾರು ಬಾರಿ ನಾವು ಕಂಪೆನಿಯ ಷೇರು ವಹಿವಾಟಾದರೂ ನಮ್ಮ ಷೇರು ಮಾರಾಟ ಮಾಡಲು ಅಸಾಧ್ಯವಾಗಿರುತ್ತದೆ. ಇದಕ್ಕೆ ಕಾರಣ ಬೇಡಿಕೆಯ ಕೊರತೆಯಾಗಿರುತ್ತದೆ. 

ಇಂದಿನ ದಿನಗಳಲ್ಲಿ ಹೆಚ್ಚಾಗಿ ಅಂಕಿ ಅಂಶಗಳನ್ನಾಧರಿಸಿ ಚಟುವಟಿಕೆಯನ್ನು ನಿರ್ಧರಿಸುವುದು ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಕೇವಲ ಪೇಟೆಯ ದರವನ್ನುವಲಂಭಿಸಿ ವಹಿವಾಟು ನಿರ್ಧರಿಸುವುದು ಸರಿಯಲ್ಲ. ಸೋಮವಾರ 9 ರಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಕಂಪೆನಿಗಳಾದ ಸಿ.ಎಫ್.ಎಲ್. ಕ್ಯಾಪಿಟಲ್, ಇಂಡಿಯಾ ಟೂರಿಸಂ ಡೆವೆಲಪ್‌ಮೆಂಟ್, ಮಾರ್ಗೊಫೈನಾನ್ಸ್; ಗಾರ್ನೆಟ್ ಇಂಟರ್‌ನ್ಯಾಶನಲ್ ಕಂಪ್ಯೂಟರ್ ಪಾಯಿಂಟ್, ಬುಧವಾರ 11 ರಂದು ಎನ್.ಕೆ. ಇಂಡಸ್ಟ್ರೀಸ್, ಇನ್ನೊವೇಷನ್ ಸಾಪ್ಟ್‌ವೇರ್, ಡೈನಮಿಕ್ ಇಂಡಸ್ಟ್ರೀಸ್, ಬಿಸಿಸಿ ಫೈನಾನ್ಸ್ ಶಕ್ತಿ ಪ್ರೆಸ್, ಸರೂಪ್ ಇಂಡಸ್ಟ್ರೀಸ್, ಗುರುವಾರದಂದು ಇನ್ನೊವೇಷನ್ ಸಾಪ್ಟ್‌ವೇರ್, ಹರಿಯಾ ಎಕ್ಸ್‌ಪೋರ್ಟ್, ಲಕ್ಷ್ಮಿ ಪ್ರಿಸಿಶನ್ ಸ್ಕ್ರೂ, ಶಕ್ತಿ ಪ್ರೆಸ್, ಇಂಡಿಯಾ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್, ಟೆಕ್ಸ್‌ಪ್ಲಾಸ್ಟ್ ಇಂಡಸ್ಟ್ರೀಸ್ ಕಂಪೆನಿಗಳು ವಹಿವಾಟು ದಾಖಲಿಸಿವೆ. 

ಇಂಡಿಯಾ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್ ಗುರುವಾರದ ದರವು ವಾರ್ಷಿಕ ಗರಿಷ್ಠ ಮಟ್ಟವಾಗಿದೆ. ಸೋಜಿಗವೆಂದರೆ ಈ ಎಲ್ಲಾ ಕಂಪೆನಿಗಳಲ್ಲಿ ಆಯಾದಿನ ವಹಿವಾಟಿನ ಷೇರುಗಳ ಸಂಖ್ಯೆಯು ಒಂದೊಂದೇ ಷೇರಾಗಿದೆ. ಅಂದರೆ ನೂರು ಷೇರು ಮಾರಾಟ ಮಾಡಲಾಗಲಿ, ಕೊಳ್ಳುವುದಾಗಲಿ ಇಲ್ಲ. ಕೇವಲ ಒಂದು ಷೇರಿನಿಂದ ಮಾತ್ರ ದಾಖಲೆ ನಿರ್ಮಿಸುವಂತಹ ಇಂತಹ ಕಂಪೆನಿಗಳಲ್ಲಿ ವಹಿವಾಟು ನಡೆಸುವಾಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ.

98863-13380 

(ಮಧ್ಯಾಹ್ನ 4.30ರ ನಂತರ)

ಪ್ರತಿಕ್ರಿಯಿಸಿ (+)