ಅಹಿಂಸಾ ನೆಲೆಯ ಹೋರಾಟದ ಮಾರ್ಗ

7

ಅಹಿಂಸಾ ನೆಲೆಯ ಹೋರಾಟದ ಮಾರ್ಗ

ವಸು ಮಳಲಿ
Published:
Updated:
ಅಹಿಂಸಾ ನೆಲೆಯ ಹೋರಾಟದ ಮಾರ್ಗ

ಗಾಂಧೀಜಿ ಅವರನ್ನು ಅಹಿಂಸಾತ್ಮಕ ಹೋರಾಟಕ್ಕೆ ರೂಪಕವಾಗಿ ಇಂದು ಇಡೀ ಜಗತ್ತೇ  ನೋಡುತ್ತಿದೆ. ವಸಾಹತು ವಿರೋಧಿ ಹೋರಾಟಕ್ಕೆ ಖಚಿತವಾದ ಅಹಿಂಸಾತ್ಮಕ ಸ್ವರೂಪವನ್ನು ತಂದುಕೊಟ್ಟವರು ಅವರು. ‘ಅಹಿಂಸಾತ್ಮಕ’  ಎಂದಾಗ ಅದರ ಅರ್ಥ ಮೊದಲನೆಯದಾಗಿ ನಿರಾಯುಧರಾಗಿ ನಡೆಸುವ ಪ್ರತಿಭಟನೆ. ನೇರವಾದ ಯದ್ಧಕ್ಕಿಳಿ ಯದೇ ಸತ್ಯಕ್ಕಾಗಿ, ನ್ಯಾಯಕ್ಕಾಗಿ ಪಟ್ಟುಹಿಡಿಯು ವುದು. ಕಾಯ್ದೆ ಭಂಗ, ಅಸಹಕಾರ ಮುಂತಾದ ಪ್ರತಿರೋಧದ ಬಗೆಗಳು-  ಸತ್ಯಾಗ್ರಹವೆಂದು ಕರೆಸಿಕೊಳ್ಳುತ್ತವೆ.ಗಾಂಧೀಜಿ ಹೋರಾಟಕ್ಕೆ ಇಳಿಯುವ ಮೂರು ದಶಕಗಳಿಗೆ ಮುಂಚೆಯೇ, ಜನರ ಸಹಭಾಗಿತ್ವ ದಲ್ಲಿ ಭಾರತದಲ್ಲಿ ಹೋರಾಟ ನಡೆದಿತ್ತು. ೧೮೫೭ರ ನಂತರ ಶಸ್ತ್ರಸಜ್ಜಿತವಾದ ಹೋರಾಟ ಗಳು ಕಾಣುವುದಿಲ್ಲ.  ೧೯೦೫ ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ನಡೆದ ಚಳವಳಿಯಾಗಲೀ, ಹೋಂ ರೂಲ್ ಚಳವಳಿಯಾಗಲೀ ಸಂಯಮದ ಹೋರಾಟಗಳೇ ಆಗಿದ್ದವು.  ವಸಾಹತು ನೀತಿಯನ್ನು ಸಂವಿಧಾನದ ಚೌಕಟ್ಟಿನಲ್ಲೇ ಪ್ರಶ್ನಿಸುತ್ತಾ ಬಂದ ಗೋಖಲೆ, ದಾದಾಬಾಯ್ ನವರೋಜಿ ಅವರು ಆ ವೇಳೆಗಾಗಲೇ  ಇಂತಹದ್ದೊಂದು ಮಾರ್ಗವನ್ನು ಕಂಡುಕೊಂಡಿ ದ್ದರು.

ಸತ್ಯಾಗ್ರಹವನ್ನು ಸ್ಪಷ್ಟ ರಾಜಕೀಯ ಸಿದ್ಧಾಂತವಾಗಿಸಿದ ಹೆಗ್ಗಳಿಕೆ ಗಾಂಧೀಜಿಗೆ ಸಲ್ಲುತ್ತದೆ. ರಾಜಕೀಯ ಸೂತ್ರವಾಗಿ ‘ಅಹಿಂಸೆ’ ಪರಿಕಲ್ಪನೆಯನ್ನು ನೋಡುವುದಾದರೆ ಅದರ ಹಿಂದೆ ಭಾರತದ ಅತ್ಯಂತ ಪ್ರಾಚೀನ ಪ್ರಯೋಗಗಳನ್ನು ನೆನೆಯಬೇಕಾಗುತ್ತದೆ. ಜೈನ ಧರ್ಮ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ‘ಅಹಿಂಸೊ ಪರಮೊ ಧರ್ಮಃ’ ಎಂದು ಪ್ರತಿಪಾದಿಸುತ್ತದೆ. ಆದರೆ ಅದನ್ನು ವ್ಯಕ್ತಿ ನೆಲೆಯಲ್ಲಿ ಆಚರಿಸುತ್ತದೆ. ಅದೊಂದು ರಾಜಕೀಯ ಚಿಂತನೆಯಾಗಿ ರೂಪುಗೊಳ್ಳಲಿಲ್ಲ.

ಹಾಗೆ ರಾಜಕೀಯ ಸಿದ್ಧಾಂತವಾಗಿ ರೂಪು ಪಡೆದದ್ದು  ಬುದ್ಧನಿಂದ. ಅಹಿಂಸೆ, ಯುದ್ಧ ವಿರೋಧಿ ನಿಲುವಾಗಿ ಅರ್ಥ ಪಡೆಯಿತು. ಬುದ್ಧನ ವಿಚಾರಗಳನ್ನು ರಾಜಕೀಯ ತತ್ವವಾಗಿ ಆಚರಣೆಗೆ ತರಲು ಸಾಧ್ಯವಾಗಿದ್ದು ಅಶೋಕನಿಗೆ. ಯುದ್ಧವನ್ನು ಕೈಬಿಟ್ಟು ಅಹಿಂಸೆಯ ಚಿಂತನೆ ಯನ್ನು ಹರಡುವುದನ್ನು ತನ್ನ ಗುರಿಯಾಗಿಸಿ ಕೊಂಡನು. ಜಗತ್ತಿನ ಚರಿತ್ರೆಯಲ್ಲೇ ಅಶೋಕ ಕಂಡುಕೊಂಡ ಮಾರ್ಗ ಅದ್ವಿತೀಯವಾದುದು. ’ಅಹಿಂಸೆ’ ಎಂಬ ಆದರ್ಶವೇ ಅಶೋಕನಿಗೆ ಶಸ್ತ್ರವಾಗಿ ಪರಿಣಮಿಸಿತು. ಅಹಿಂಸೆಯನ್ನು ರಾಜಕೀಯ ಚಿಂತನೆಯಾಗಿ ನೀಡಿದ ಬುದ್ಧ, ದೇವರ ಬಗೆಗೆ ಮಾತ್ರ ಮೌನ ವಹಿಸಿದ್ದನ್ನು ನಾವಿಂದು ಮತ್ತೆ ಪರಿಗಣಿಸಬೇಕಾಗಿದೆ.ಆಧುನಿಕ ಕಾಲಘಟ್ಟದಲ್ಲಿ ಅಹಿಂಸೆ, ರಾಜಕೀಯ ಚಿಂತನೆಯಾಗಬೇಕಾದ ಅನಿವಾರ್ಯವನ್ನು ಕಂಡುಕೊಳ್ಳಲು ಸಾಧ್ಯ ವಾಗಿದ್ದು ಗಾಂಧೀಜಿಗೆ. ವಿಪರ್ಯಾಸವೆಂದರೆ ಬುದ್ಧನ ಚಿಂತನೆಗಳನ್ನು ಆದರ್ಶವಾಗಿ ಗಾಂಧೀಜಿ ಎತ್ತಿ ಹಿಡಿಯಲಿಲ್ಲ. ಬಡತನ, ಶೋಷಣೆ ಇವು ಅವರ ಹೋರಾಟದ ಬದ್ಧತೆಯಾಗಿದ್ದರೂ ಪರಿಹಾರದ ನೆಲೆಗಳು ಬೇರೆಯಾಗಿದ್ದವು. ರಾಜಕೀಯದಲ್ಲಿ ಅಧ್ಯಾತ್ಮವನ್ನು ಬಯಸಿದರು. ಹಾಗೆ ಬುದ್ಧನ ಕಡೆಗೆ ನೋಡಿದವರು ಅಂಬೇಡ್ಕರ್. ಬುದ್ಧನ ನಂತರ ದೇವರ ಬಗೆಗೆ ಮಾತನಾಡದೆ ವಾಸ್ತವ ನೆಲೆಗಟ್ಟಿನ ಮೇಲೆ ನೋವಿಗೆ ಉತ್ತರ ಹುಡುಕಿದವರು ಕಾರ್ಲ್‌ ಮಾರ್ಕ್ಸ್‌.ಗಾಂಧಿ ಅವರನ್ನು  ಮಾರ್ಕ್ಸ್‌ಗೆ ಹೋಲಿಸು ವುದು ಇಲ್ಲಿ ನನ್ನ ಉದ್ದೇಶವಲ್ಲ. ಹಾಗೆ ಎರಡು ವ್ಯಕ್ತಿತ್ವಗಳನ್ನು ಹೋಲಿಸಿ ನೋಡುವುದರಲ್ಲಿ ನನಗೆ ಅರ್ಥವಿಲ್ಲವೆನಿಸುತ್ತದೆ ಅಥವಾ ಅಕಾಡೆಮಿಕ್ ಆದ ವ್ಯಾಯಾಮವೆನಿಸುತ್ತದೆ. ಬುದ್ಧ, ಮಾರ್ಕ್ಸ್‌, ಗಾಂಧಿ  ತಮಗೆ ತಾವೇ ಬದುಕನ್ನು ಪೂರೈಸಿದ ವ್ಯಕ್ತಿಗಳಲ್ಲ. ಇವರ ಬರಹ, ಭಾಷಣ ಕಡೆಗೆ ಬದುಕು ಸಮಾಜದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಿದ್ದರಿಂದ ಇವರ ವಿಚಾರಗಳನ್ನು ಹಲವು ಮಗ್ಗುಲುಗಳಿಂದ ಪ್ರಶ್ನಿಸಬೇಕಾಗಿದೆ.ಹತ್ತೊಂಬತ್ತನೇ ಶತಮಾನದಲ್ಲಿ ಮಾರ್ಕ್ಸ್‌ ವಿಚಾರಗಳು ಪ್ರಕಟಗೊಂಡ ನಂತರ ಆ ವಿಚಾರಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಚಿಂತಕರಿಗೆ ಅಷ್ಟು ಸುಲಭದ ವಿಷಯ ವಾಗಿರಲಿಲ್ಲ. ಮಾರ್ಕ್ಸ್‌ನ ವಿರೋಧದ ನೆಲೆಯಲ್ಲಿ ನಿಂತು ವಾದಿಸಿದವರು ಇದ್ದಾರೆ. ಅದನ್ನು ಒಪ್ಪಿ ದೇಶದ ರಾಜಕೀಯ ವ್ಯವಸ್ಥೆಗಳನ್ನೇ ಬದಲಿಸಿದ ವರು ಇದ್ದಾರೆ. ಭಾರತದಲ್ಲಿ  ಮಾರ್ಕ್ಸ್‌ನ ವಿಚಾರಧಾರೆ ಅಧಿಕೃತವಾಗಿ ಪ್ರವೇಶಿಸಿದ ಹೊತ್ತಿಗೇ, ಗಾಂಧೀಜಿಯವರೂ ಭಾರತದ ರಾಜಕೀಯ ವೇದಿಕೆಯನ್ನು ಪ್ರವೇಶಿಸಿದರು. ಗಾಂಧೀಜಿಯವರು ಎಲ್ಲೂ ತಮ್ಮನ್ನು ತಾವು  ಮಾರ್ಕ್ಸ್‌ವಾದಿಯಾಗಿ ಗುರುತಿಸಿಕೊಳ್ಳಲಿಲ್ಲ. ಆದರೆ ಸಮಾಜವಾದವನ್ನು ನಂಬಿದವರೇ ಆಗಿದ್ದರು. ಸದಾ ಅವರ ಒಡನಾಟದಲ್ಲಿದ್ದ ನೆಹರೂ ಆರಂಭದ ದಿನಗಳಲ್ಲಿ ಮಾರ್ಕ್ಸ್‌ವಾದ ವನ್ನು ಬಲವಾಗಿ ನಂಬಿದ್ದರು.ಭಾರತದ ಮಾರ್ಕ್ಸ್‌ವಾದಿ ಚಿಂತಕರು  ಗಾಂಧೀಜಿಯವರ ಒಟ್ಟು ಧೋರಣೆಗಳನ್ನು ಕಠಿಣ ವಿಮರ್ಶೆಗೆ ಒಳಪಡಿಸುತ್ತಾರೆ. ಕೇರಳದ ನಂಬೂದರಿ ಪಾಡ್ ಸ್ವಾತಂತ್ರ್ಯ ಹೋರಾಟದ ಬಗೆಗೆ ಬರೆಯುತ್ತಾ ವಸಾಹತು ವಿರೋಧಿ ಹೋರಾಟದ ಗೆಲುವಿಗೆ ಕಾರ್ಮಿಕರನ್ನು

ಕಾರಣ ವಾಗಿಸುತ್ತಾರೆ. ಅವರಿಗೆ ಗಾಂಧಿ ನೇತೃತ್ವದ ಕಾಂಗ್ರೆಸ್ ಮುಖ್ಯವಾಗುವುದಿಲ್ಲ. ಮಾರ್ಕ್ಸ್‌ವಾದಿ ಚರಿತ್ರೆಕಾರ ಸುಮಿತ್ ಸರ್ಕಾರ್ ಅವರು ಸಹ ಗಾಂಧೀ ಹೋರಾಟವನ್ನು ಪರಿಗಣಿಸಲು ಹಿಂದೆ ಬೀಳುತ್ತಾರೆ.

  ಮಾರ್ಕ್ಸ್‌ವಾದಿಗಳ ಕಠಿಣ ಟೀಕೆಗೆ ಒಳಗಾಗಲು ತಾತ್ವಿಕ ಕಾರಣಗಳಿದ್ದವು. ಎಡಪಂಥೀಯರು ಕಾರ್ಮಿಕರ ಹಾಗೂ ರೈತ ಹೋರಾಟಗಳಿಗೆ  ಆದ್ಯತೆಯನ್ನು ನೀಡುತ್ತಾರೆ. ಬಂಡವಾಳಶಾಹಿ ಹಾಗೂ ಜಮೀನ್ದಾರಿ ವ್ಯವಸ್ಥೆ ಯನ್ನು  ವಿರೋಧಿಸುವ ಅವರು ಸಮಸಮಾಜ ವನ್ನು ಕಟ್ಟಲು ಬಯಸುತ್ತಾರೆ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಹೊತ್ತಿಗೇ ಈ ಆಂತರಿಕ ಸುಧಾರಣೆಗಳನ್ನು ಬಯಸಿದ್ದರು.ಗಾಂಧೀಜಿ ೧೯೧೮–-೧೯ರಲ್ಲಿ ರೈತ ಹಾಗೂ ಕಾರ್ಮಿಕ ಹೋರಾಟಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಭಾರತದಲ್ಲಿ ಅವರ ಚಳವಳಿಯ ಸ್ವರೂಪವನ್ನು ಪ್ರಯೋಗಿಸಿದರು. ಬಂಡವಾಳ ಗಾರರು ಹಾಗೂ ಕಾರ್ಮಿಕರ ನಡುವೆ ಹೊಂದಾಣಿಕೆ ತರುವುದು ಅವರ ಪ್ರಯತ್ನ ವಾಗಿತ್ತು. ಅದಕ್ಕೆ ಅವರು ಕಂಡುಕೊಂಡ ಮಾರ್ಗ ಟ್ರಸ್ಟಿಷಿಪ್. ಅಂದರೆ ತಂದೆಯು ಮಗನ ಜವಾಬ್ದಾರಿಯನ್ನು ಹೊರುವಂತೆ ಬಂಡವಾಳ ಗಾರನೇ ಕಾರ್ಮಿಕರ ಜವಾಬ್ದಾರಿಯನ್ನು ಹೊರುವುದು.

ಜಮೀನ್ದಾರನೇ ಕೂಲಿಕಾರರ ಒಳಿತನ್ನು ಕಾಯ್ದುಕೊಳ್ಳುವುದು. ಅಲ್ಲಿ ಸಂಘರ್ಷವಿರುವುದಿಲ್ಲ - ಸೌಹಾರ್ದ ಇರುತ್ತದೆ ಎಂಬುದು ಟ್ರಸ್ಟಿಷಿಪ್‌ನ ಆದರ್ಶವಾಗಿತ್ತು. ಮಾರ್ಕ್ಸ್‌ವಾದದ ವರ್ಗ ಸಂಘರ್ಷಕ್ಕೆ ಪ್ರತಿಕ್ರಿಯೆ ನೀಡದ ಗಾಂಧಿ, ತಮ್ಮ ನಡೆಯಲ್ಲಿ ಉತ್ತರ ಕೊಟ್ಟಂತೆ ಕಾಣುತ್ತಾರೆ. ಮಾಲೀಕ ಮತ್ತು ಕಾರ್ಮಿಕನ ನಡುವೆ ಸಂಧಾನಗಳಾದಲ್ಲಿ ಅಲ್ಲಿ ಕಾರ್ಮಿಕನ ಸೋಲು ಖಚಿತವಾಗಿರುತ್ತದೆಂದು ಮಾರ್ಕ್ಸ್‌ವಾದ ನಂಬುತ್ತದೆ.

ಏಕೆಂದರೆ ಅಲ್ಲಿ ಕ್ರಾಂತಿ ಸಂಭವಿಸು ವುದಿಲ್ಲ. ಹೋರಾಟದ ಗುರಿ ಕ್ರಾಂತಿ. ಆದರೆ ಸಂಧಾನಗಳು ಅದರ ದಿಕ್ಕು ತಪ್ಪಿಸುತ್ತವೆ. ಕಾರ್ಮಿಕ, ಸಣ್ಣಪುಟ್ಟ ಇತ್ಯರ್ಥಗಳಿಗೆ ಸಮಾಧಾನ ಹೊಂದಿ ದೊಡ್ಡ ಬದಲಾವಣೆ ಯನ್ನು ಕೈಬಿಡುತ್ತಾನೆ. ಕಡೆಗೂ ಬಂಡವಾಳ ಶಾಹಿಯ ಆಳಾಗಿ ಕಾರ್ಮಿಕ ದುಡಿಯುತ್ತಾನೆ. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಭೂ ಸುಧಾರಣಾ ಹೋರಾಟಗಳೂ ಯಶಸ್ಸನ್ನು ಪಡೆಯಲಿಲ್ಲ. ಜಮೀನ್ದಾರರು ಮತ್ತು ಕೃಷಿ ಕೂಲಿ ಕಾರ್ಮಿಕರೆಂಬ ವರ್ಗಭೇದವನ್ನು ಕಾಂಗ್ರೆಸ್ ಪರಿಗಣಿಸಲಿಲ್ಲ. ರೈತ, ಜಮೀನ್ದಾರ, ಕೂಲಿ ಕಾರ್ಮಿಕ  ಹೀಗೆ ಎಲ್ಲರ ಬೆಂಬಲವನ್ನು ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಬಳಸಿಕೊಳ್ಳಲಾಯಿತು.

ಆದ್ದರಿಂದ ಜಮೀನ್ದಾರರ ವಿರುದ್ಧದ ಹೋರಾಟ ವನ್ನು ಬೆಂಬಲಿಸುವುದು ಕಾಂಗ್ರೆಸ್‌ಗೆ ಸಾಧ್ಯವಿರ ಲಿಲ್ಲ. ಕಡೆಗೆ ಜಾತಿ ನೆಲೆಯ ಹೋರಾಟಗಳೂ ಕಾಂಗ್ರೆಸ್‌ನಿಂದ ಹೊರಗುಳಿದವು. ಅಂಬೇಡ್ಕರ್ ಕೈಗೆತ್ತಿಕೊಂಡ ದಲಿತ ಹೋರಾಟ, ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರಿಬ್ಬರ ಪರಿಧಿಯಲ್ಲೂ ಉಳಿದಿರಲಿಲ್ಲ. ಗಾಂಧೀಜಿಯವರ ಹರಿಜನ ಹೋರಾಟ ಸುಧಾರಣಾ ನೆಲೆಯದ್ದಾಗಿತ್ತು. ಅಂದಿನ ಮಾರ್ಕ್ಸ್‌ವಾದ ಜಾತಿ ನೆಲೆಯ ಶೋಷಣೆಯನ್ನು ಪರಿಗಣಿಸಲು ವಿಫಲವಾಗಿತ್ತು.ಇಂತಹದೇ ಕಠಿಣವಾದ ಟೀಕೆ ಭೂದಾನ ಚಳವಳಿಯ ಹೊತ್ತಿನಲ್ಲೂ ಕೇಳಿಬರುತ್ತದೆ. ಸಾವಿರಾರು ಎಕರೆ ಜಮೀನು ಹೊಂದಿದವರು  ಐದಾರು ಎಕರೆ ಜಮೀನು ದಾನ ನೀಡಿ ದಾನ ಶೂರರೆನಿಸಿಕೊಳ್ಳುತ್ತಾರೆ. ಉಳಿದ ಸಾವಿರ ಎಕರೆ ಭೂಮಿ ಹಂಚಿಕೆಯಾಗದೆ ಹಾಗೆಯೇ ಉಳಿಯು ತ್ತದೆ. ಕಡೆಗೂ ಶ್ರೀಮಂತ ಜಮೀನ್ದಾರರು ಶ್ರೀಮಂತರಾಗಿಯೇ ಉಳಿಯುತ್ತಾರೆ. ಭೂಮಿ ಇಲ್ಲದ ರೈತರು ಕೂಲಿಗಳಾಗಿಯೇ ಉಳಿಯು ತ್ತಾರೆ.  ಸ್ವಾತಂತ್ರ್ಯಾ ನಂತರವೂ ಭೂ ಹಂಚಿಕೆ ಯನ್ನು ಬಯಸುವ ರೈತ ಹೋರಾಟಗಳು ನೆಲ ಕಚ್ಚುತ್ತವೆ. ಹಾಗಾಗಿ ಭಾರತದಲ್ಲಿ ಮಾರ್ಕ್ಸ್‌ ವಾದಿ ನೆಲೆಯ ಹೋರಾಟದ ಹಿನ್ನಡೆಗೆ ಪರೋಕ್ಷವಾಗಿ ಗಾಂಧೀಜಿ ಕಾರಣರಾಗುತ್ತಾರೆ.ವಿಪರ್ಯಾಸವೆಂದರೆ ಚರಕವನ್ನು  ಗಾಂಧೀಜಿ ರಾಷ್ಟ್ರೀಯ  ಹೋರಾಟದ ಸಂಕೇತವಾಗಿ ಬಳಸಿ ದರು. ಅದರಲ್ಲೂ ಗುಡಿ ಕೈಗಾರಿಕೆಯನ್ನು ಅದು ಬೆಂಬಲಿಸುತ್ತಿತ್ತು. ಬೃಹತ್ ಕೈಗಾರಿಕೆಗಳನ್ನು ಅವರು ವಿರೋಧಿಸಿದರು. ವಿದೇಶಿ ವಸ್ತುವಿನ ಬಳಕೆಯನ್ನು ಸದಾಕಾಲಕ್ಕೂ ನಿರಾಕರಿಸಿದರು. ಅದೇ ಹೊತ್ತಿಗೆ ಭಾರತೀಯ ಬಂಡವಾಳಗಾರ ರನ್ನು ಬೆಂಬಲಿಸಿದರು. ಇದೆಲ್ಲವನ್ನೂ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲೇ ಅರ್ಥೈಸಿಕೊಳ್ಳ ಬೇಕಾಗುತ್ತದೆ. ಇಲ್ಲವಾದಲ್ಲಿ ವಿರೋಧಾಭಾಸಕ್ಕೆ ತರ್ಕವನ್ನು ಹುಡುಕಬೇಕಾಗುತ್ತದೆ.

ಕೈಗಾರಿಕಾ ಕ್ರಾಂತಿಯ ಹಿನ್ನೆಲೆಯ ನಾಡಿನಿಂದ ಬಂದ ಮಾರ್ಕ್ಸ್‌ಗೆ ರಾಷ್ಟ್ರವೊಂದರ ಬಿಡುಗಡೆ ಮಾತ್ರ ಗುರಿಯಾಗಿರಲಿಲ್ಲ.

ಕಾರ್ಮಿಕನ ದುಡಿ ಮೆಯನ್ನು ಬಂಡವಾಳವಾಗಿಸುವ ತಂತ್ರಗಾರಿಕೆಗೆ ಪ್ರತ್ಯಕ್ಷದರ್ಶಿಯಾಗಿದ್ದರಿಂದ ದುಡಿಮೆಗಾರರ ಹಿತವನ್ನು ಬಯಸುವ ಆಲೋಚನೆ ಅವರದಾ ಗಿತ್ತು. ಸಂಪತ್ತಿನ ಅಸಮಾನ ಹಂಚಿಕೆಯೇ ಬಡತನಕ್ಕೆ ಕಾರಣವೆಂದು ಬಲವಾಗಿ ಪ್ರತಿಪಾದಿಸಿ ದರು. ಊಳಿಗಮಾನ್ಯ ವ್ಯವಸ್ಥೆಯ ಅಡಿಯಲ್ಲಿ ನಡೆದು ಬಂದ ರೈತನ ನಿರಂತರ ಶೋಷಣೆ ಯಿಂದ ಬಿಡುಗಡೆಯನ್ನು ಬಯಸಿದ್ದರು. ಇಲ್ಲಿ ಚಾರಿತ್ರಿಕವಾಗಿ ನಡೆಯುತ್ತಾ ಬಂದ ಹಿಂಸೆಯ ವಿರುದ್ಧದ ಹೋರಾಟಕ್ಕೆ ಯೋಜನೆಯನ್ನು ರೂಪಿಸಿದರು. ಆ ಹಿಂಸೆಯನ್ನು ತಪ್ಪಿಸುವ ಮೂಲಕ ಅಹಿಂಸೆಯನ್ನು ನೆಲೆಗೊಳಿಸಬೇಕಾ ಗಿತ್ತು. ಹೋರಾಟದ ಮಾರ್ಗದಲ್ಲಿ ಎದುರಾ ಗುವ ಪ್ರತಿರೋಧಗಳನ್ನು ಕಠಿಣವಾಗಿ ಎದುರಿಸ ಬೇಕಾದ ಅನಿವಾರ್ಯವನ್ನು ಮನಗಂಡಿದ್ದರು.ಮಾರ್ಕ್ಸ್‌ವಾದವನ್ನು ಹಾಗೂ ಮಾರ್ಕ್ಸ್‌ ವಾದಿಗಳನ್ನು ಸದಾ ಗುಮಾನಿಯಿಂದ ಕಾಣುತಿದ್ದ ಬ್ರಿಟಿಷರು ಭಾರತದಲ್ಲಿ ಬಹು ಬೇಗನೇ  ಕಮ್ಯುನಿಸ್ಟ್‌  ಪಕ್ಷವನ್ನು ನಿಷೇಧಿಸಿದರು.  ಎಡ ಪಂಥೀಯ ಹೋರಾಟ ಭೂಗತವಾಗಿ ಮುಂದುವರೆದಿತ್ತು. ಹೋರಾಟಗಳು ಅಹಿಂಸಾ ನೆಲೆಯದ್ದೇ  ಆಗಿದ್ದರೂ ಜನಾಂದೋಲನಗಳನ್ನು ಬ್ರಿಟಿಷರು ಹತ್ತಿಕ್ಕುತ್ತಿದ್ದರು. ಈ ಎಲ್ಲದರ ನಡುವೆಯೂ ತಲೆ ಎತ್ತಿದ ಉಗ್ರವಾದವನ್ನು ಮರೆಯುವಂತಿಲ್ಲ.

ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಿಗೆ ವಿಧಿಸಿದ ಮರಣ ದಂಡನೆಯನ್ನು ಹಿಂತೆಗೆದುಕೊಳ್ಳುವಂತೆ ಬ್ರಿಟಿಷ ರನ್ನು ಕೇಳದಿದ್ದುದು ಗಾಂಧೀಜಿಯ ಬಗೆಗೆ ಕಾಂಗ್ರೆಸ್ ನಾಯಕರಲ್ಲೂ ಅಸಮಾಧಾನ ಮೂಡಿಸಿತ್ತು. ಮನುಕುಲದಲ್ಲಿ ಬೇರು ಬಿಟ್ಟ ಹಿಂಸೆಯನ್ನು ತೊಡೆದು ಹಾಕಲು ಮಾರ್ಕ್ಸ್‌, ಪ್ರಣಾಳಿಕೆ ಯನ್ನು ರೂಪಿಸಿದರೆ, ಅಹಿಂಸಾ ನೆಲೆಯ ಹೋರಾಟದ ಮಾರ್ಗವನ್ನು ಜಗತ್ತಿಗೆ ನೀಡಿದ ಹೆಗ್ಗಳಿಕೆ ಭಾರತದ್ದು.

ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry