ಆಂತರ್ಯದ ಮರಗಟ್ಟುವಿಕೆ

7

ಆಂತರ್ಯದ ಮರಗಟ್ಟುವಿಕೆ

ಗುರುರಾಜ ಕರ್ಜಗಿ
Published:
Updated:

ಕೆಲವರ್ಷಗಳ ಹಿಂದೆ ಓದಿದ ಒಂದು ಇಂಗ್ಲಿಷ್ ಪದ್ಯ  ಕೋಲ್ಡ್ ವಿದಿನ್,  ನನ್ನ ಮನಸ್ಸನ್ನು ಬಹಳವಾಗಿ ಕಾಡಿದೆ. ಅದು ಪುಟ್ಟ ಪದ್ಯವಾದರೂ ಓದಿದವರ ಮನದಲ್ಲಿ ಏಳಿಸುವ ಚಿಂತನೆ ಅದ್ಭುತವಾದದ್ದು.ಆರು ಜನ ಹಿಮಪರ್ವತದ ಗುಹೆಯಲ್ಲಿದ್ದಾರೆ. ಭಾರೀ ಪ್ರಮಾಣದ ಹಿಮಪಾತವಾದದ್ದರಿಂದ ಹೊರಗೆ ಹೋಗುವುದೇ ಅಸಾಧ್ಯ. ಮರಗಟ್ಟುವ ಚಳಿ. ರಾತ್ರಿಯಾಗುತ್ತ ಬಂದಿದೆ. ಸಂಜೆಗೆ ಹಾಕಿದ ಬೆಂಕಿ ಆರುತ್ತ ಬಂದಿದೆ. ಇನ್ನೊಂದು ಅರ್ಧಗಂಟೆಯಲ್ಲಿ ಅದಕ್ಕೆ ಹೊಸ ಒಣಕಟ್ಟಿಗೆ ಹಾಕದಿದ್ದರೆ ತಾವೆಲ್ಲ ರಾತ್ರಿ ಚಳಿಯಲ್ಲೇ ಕೊರೆಯಬೇಕಾದ ಪರಿಸ್ಥಿತಿ. ಪ್ರತಿಯೊಬ್ಬರ ಹತ್ತಿರವೂ ಒಂದೊಂದು ಮರದ ತುಂಡು ಇದೆ.ಮೊದಲನೆಯ ವ್ಯಕ್ತಿ ಒಬ್ಬ ಹೆಂಗಸು. ಆಕೆ ತನ್ನ ಮರದ ತುಂಡನ್ನು ಹಿಂದೆ ಅಡಗಿಸಿ ಇಟ್ಟುಕೊಂಡಿದ್ದಾಳೆ. ಯಾಕೆಂದರೆ ಸಂಜೆಯ ಹೊತ್ತಿನಲ್ಲಿ ಬೆಂಕಿಯ ಬೆಳಕಿನಲ್ಲಿ ಉಳಿದ ಐದು ಜನರಲ್ಲಿ ಒಬ್ಬ ಕಪ್ಪು ಮನುಷ್ಯನಿರುವುದನ್ನು ಗಮನಿಸಿದ್ದಾಳೆ. ಛೇ ಇಂಥಲ್ಲಿ ಕೂಡ ಕಪ್ಪು ಮಂದಿ ತನ್ನ ಬೆನ್ನು ಬಿಡುವುದಿಲ್ಲ? ತನ್ನಲ್ಲಿದ್ದ ಕಟ್ಟಿಗೆಯನ್ನು ಬೆಂಕಿಗೆ ಹಾಕಿದರೆ ಅವನಿಗೂ ಅದರ ಬಿಸಿಯ ಲಾಭ ದೊರಕುತ್ತದಲ್ಲ! ಎಂದು ಆಕೆ ಅದನ್ನು ಬೆಂಕಿಗೆ ಹಾಕದೇ ಹಾಗೆಯೇ ಉಳಿಸಿಕೊಂಡಳು.ಎರಡನೆಯವನು ಒಬ್ಬ ಪಾದ್ರಿ. ಆತನೂ ಗಮನಿಸಿದ್ದ. ಉಳಿದ ಐವರಲ್ಲಿ ಒಬ್ಬ ಅವನ ಚರ್ಚಿಗೆ ಸೇರಿದವನಲ್ಲ. ಬೇರೊಂದು ಮತಕ್ಕೆ ಸೇರಿದವನ ಬಗ್ಗೆ ನನಗೇಕೆ ಕನಿಕರ? ತನ್ನ ಬಳಿಯಿದ್ದ ಮರದ ತುಂಡನ್ನು ಬೆಂಕಿಗೆ ಹಾಕಿದರೆ ಅವನಿಗೂ ಅನುಕೂಲವಾದೀತಲ್ಲವೇ? ಅದು ಸಾಧ್ಯವಿಲ್ಲ ಎಂದುಕೊಂಡು ಕಟ್ಟಿಗೆಯ ತುಂಡನ್ನು ಬೆಂಕಿಗೆ ಹಾಕದೇ ಹಾಗೆಯೇ ಮುಚ್ಚಿಟ್ಟುಕೊಂಡ.ಮೂರನೆಯವ ತುಂಬ ಬಡವ. ಅವನ ಹರಿದ ಬಟ್ಟೆಗಳು, ಮುಖದಲ್ಲಿಯ ಮ್ಲಾನ ಅವನ ಕಥೆಯನ್ನು ಸಾರುತ್ತಿತ್ತು. ಚಳಿಗೆ ನಡುಗುತ್ತಲೇ ಹರಿದ ಕೋಟನ್ನು ಮತ್ತಷ್ಟು ಎಳೆದುಕೊಂಡು ಬೆಚ್ಚಗಾಗಲು ಪ್ರಯತ್ನಿಸುತ್ತಿದ್ದ. ಅವನಿಗೆ ಶ್ರೀಮಂತರ ಬಗ್ಗೆ ವಿಪರೀತ ಕೋಪ. ಅವರು ಹಾಗೆ ಆಸೆಬುರುಕರಂತೆ ಹಣ ಸಂಪಾದಿಸಿದ್ದಕ್ಕೇ ಅಲ್ಲವೇ ತನ್ನಂತಹವರು ದೀನರಾಗಿ ಉಳಿದಿರುವುದು? ಉಳಿದ ಐದು ಜನರಲ್ಲಿ ಅತ್ಯಂತ ಶ್ರೀಮಂತನೊಬ್ಬನಿದ್ದದ್ದು ಅವನಿಗೆ ಮತ್ತಷ್ಟು ಸಂಕಟ ತಂದಿತ್ತು. ತನ್ನ ಬಳಿಯಿದ್ದ ಮರವನ್ನು ಬೆಂಕಿಗೆ ಹಾಕಿ ಈ ಶ್ರೀಮಂತನಿಗೆ ಅನುಕೂಲ ಕೊಡಲೇ? ಖಂಡಿತ ಸಾಧ್ಯವಿಲ್ಲ ಎಂದುಕೊಂಡು ಆತ ತನ್ನ ಬಳಿಯಿದ್ದ ಮರದ ತುಂಡನ್ನು ಬೆಂಕಿಗೆ ಹಾಕದೇ ಅಡಗಿಸಿ ಇಟ್ಟುಕೊಂಡ.ನಾಲ್ಕನೆಯವನು ಅತ್ಯಂತ ಶ್ರೀಮಂತ. ತಾನು ಇಂಥ ದರಿದ್ರ ವಾತಾವರಣದಲ್ಲಿ ಯಾಕೆ ಸಿಕ್ಕಿಹಾಕಿಕೊಂಡೆನೋ ಎಂದು ತಳಮಳಿಸುತ್ತಿದ್ದ. ಈ ಹಿಮಸುರಿಯುವ ವಾತಾವರಣದಲ್ಲಿ ಹೆಲಿಕಾಪ್ಟರ್ ಕೂಡ ಬರುವಂತಿಲ್ಲ. ತನ್ನ ಆಸ್ತಿ ಅದೆಷ್ಟು ಲಕ್ಷ ಕೋಟಿಯಾದರೂ ಈಗ ತಾನು ಅಸಹಾಯಕನಾಗಿದ್ದೇನೆ. ಅದರಲ್ಲೂ ಗುಂಪಿನಲ್ಲಿದ್ದ ಬಡವನ ಮುಖ ನೋಡಿದರೆ ರೋಷ ಉಕ್ಕುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ದರಿದ್ರನೊಬ್ಬನೊಡನೆ ಕೂರುವ ಪರಿಸ್ಥಿತಿ ಬಂದಿತಲ್ಲ! ತನ್ನ ಮರದ ತುಂಡನ್ನು ಬೆಂಕಿಗೆ ಹಾಕಿ ಅವನ ಶರೀರ ಬೆಚ್ಚಗಾಗುವಂತೆ ನಾನೇಕೆ ಮಾಡಲಿ? ಅವನೇ ಚಳಿಗೆ ಕೊರಗಿ ಸಾಯಲಿ ಎಂದು ಅವನನ್ನು ದುರುಗುಟ್ಟಿ ನೋಡಿದ.ಐದನೆಯವನು ಕಪ್ಪು ಮನುಷ್ಯ. ಈ ಬಿಳಿಯರೇ ನಮ್ಮನ್ನು ಶತಮಾನಗಳ ಕಾಲ ತುಳಿದವರು. ಯಾವಾಗಲೂ ತಮ್ಮ ಸ್ವಾರ್ಥವನ್ನೇ ನೋಡಿಕೊಳ್ಳುವ ಇವರಿಗೆ ಅನುಕೂಲವಾಗುವಂತೆ ನಾನೇಕೆ ನನ್ನ ಮರದ ತುಂಡನ್ನು ಬೆಂಕಿಗೆ ಹಾಕಲಿ ಎಂದುಕೊಂಡು ಆ ತುಂಡನ್ನು ಹಿಂದೆ ಬಚ್ಚಿಟ್ಟುಕೊಂಡ.ಆರನೇಯವನಿಗೆ ಚಿಂತೆ. ಉಳಿದ ಐವರು ತಮ್ಮ ಮರದ ತುಂಡನ್ನು ಬೆಂಕಿಗೆ ಹಾಕದಿದ್ದಾಗ ತಾನೊಬ್ಬನೇ ಹಾಕಿ ಪ್ರಯೋಜನವೇನು? ತಾನೂ ಹಾಕುವುದು ಬೇಡ. ಅವರೇನಾದರೂ ರಾತ್ರಿ ಬೆಂಕಿಗೆ ತಮ್ಮ ಮರವನ್ನು ಹಾಕಿದರೆ ತಾನೂ ಹಾಕಿದರಾಯಿತು ಎಂದು ಸುಮ್ಮನೇ ನೋಡುತ್ತ ಕುಳಿತ.ಬೆಳಗಾಗುವಾಗ ಹಿಮಪಾತ ನಿಂತಿತ್ತು. ಇವರನ್ನು ಪಾರು ಮಾಡಲು ಬಂದ ಜಾಗೃತ ಪಡೆಯವರು ಗುಹೆಯಲ್ಲಿ ಬಂದು ನೋಡಿದಾಗ ಆರೂ ಜನ ಚಳಿಯಲ್ಲಿ ಮರಗಟ್ಟಿ ಹೆಣವಾಗಿದ್ದರು. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಮರದ ತುಂಡು, ಆದರೆ ಬೆಂಕಿ ಆರಿಹೋಗಿತ್ತು. ಎಂಥ ಮೂರ್ಖರು! ಎಲ್ಲರೂ ಮರಗಳನ್ನು ಬೆಂಕಿಗೆ ಹಾಕಿದ್ದರೆ ಎಲ್ಲರೂ ಬದುಕಬಹುದಿತ್ತು ಎಂದುಕೊಂಡರು ಜಾಗೃತ ಪಡೆಯವರು.ಅವರು ಹೊರಗಿನ ಚಳಿಯಲ್ಲಿ ಮರಗಟ್ಟಿ ಸತ್ತವರಲ್ಲ; ಹೃದಯ ಆಂತರ್ಯದಲ್ಲಿ ಇರಬೇಕಾದ ಪರಸ್ಪರ ಪ್ರೀತಿ, ಸಹಬಾಳ್ವೆಯ ಮರಗಟ್ಟುವಿಕೆಯಿಂದ ಸತ್ತವರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry