ಆಟವನ್ನೇ ಬದಲಿಸಿದ ಉತ್ಸಾಹ

7

ಆಟವನ್ನೇ ಬದಲಿಸಿದ ಉತ್ಸಾಹ

ಗುರುರಾಜ ಕರ್ಜಗಿ
Published:
Updated:

 


ಕೆಲವು ತಿಂಗಳುಗಳ ಕೆಳಗೆ ಜಾನ್ ಮ್ಯಾಕ್ಸವೆಲ್ ಎಂಬಾತನೊಬ್ಬ ಬರೆದ ಸುಂದರ ಪುಸ್ತಕ ಓದುತ್ತಿದ್ದೆ.  ಅವರು ಈಗ ಅಮೆರಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ ರಗ್ಬಿ ಆಟ ಹೇಗೆ ಪ್ರಾರಂಭವಾಯಿತು ಎನ್ನುವುದನ್ನು ತುಂಬ ರೋಚಕವಾಗಿ ತಿಳಿಸುತ್ತಾರೆ.  ಅದನ್ನು ಅಮೇರಿಕನ್ ಫುಟಬಾಲ್ ಎಂತಲೂ ಕರೆಯುತ್ತಾರೆ.  ಈ ಆಟ ವಿಶೇಷವಾದದ್ದು.  ಆಟಗಾರರು ತಮ್ಮ ದೇಹಗಳಿಗೆ ಸಾಕಷ್ಟು ರಕ್ಷಣೆ ಮಾಡಿಕೊಂಡು ತಲೆಗೆ ಹೆಲ್ಮೆಟ್ ಧರಿಸಿ ಬರುತ್ತಾರೆ.  ಚೆಂಡನ್ನು ಕಾಲಿನಿಂದ ಒದೆಯುವುದಿಲ್ಲ. ಅದು ಕೈಗೆ ದೊರಕಿದೊಡನೆ ಅದನ್ನು ಕೈಯಲ್ಲಿ ಹಿಡಿದುಕೊಂಡು ಎದುರಿಗಿನ ಗೋಲಿನ ಕಡೆಗೆ ಓಡುತ್ತಾರೆ.ಎದುರಾಳಿಗಳು ಇವರ ಕೈಯಿಂದ ಚೆಂಡನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಒಬ್ಬರ ಮೇಲೊಬ್ಬರು ಬಿದ್ದು ಕುಸ್ತಿಯಾಡುವಂತೆ ತೋರುತ್ತದೆ.  ನೋಡಲು ಅದೊಂದು ಒರಟಾಟ.  ಕೊನೆಗೊಬ್ಬ ಆಟಗಾರ ಚೆಂಡನ್ನು ಹಿಡಿದುಕೊಂಡು ಗೋಲಿನ ಗೆರೆ ದಾಟಿದರೆ ಗೋಲ್ ಆದಂತೆ.  ಈ ಆಟವನ್ನು ನೋಡಲು ಸಹಸ್ರಾರು ಜನ ಬಂದು ಸೇರುತ್ತಾರೆ. ಕುತೂಹಲಕಾರಿ ವಿಷಯ ಏನೆಂದರೆ ಆ ಆಟದ ಮೂಲ ರೂಪುರೇಷೆ ದೊರೆತದ್ದು ಇಂಗ್ಲೆಂಡಿನಲ್ಲಿ ನಡೆದ ಒಂದು ಘಟನೆಯಿಂದ. 

 

 ಲಂಡನ್ನಿನಲ್ಲಿ ಎರಡು ಪ್ರತಿಷ್ಠಿತ ಶಾಲೆಗಳ ನಡುವೆ ಫುಟ್‌ಬಾಲ್ ಆಟ ನಡೆಯುತ್ತಿತ್ತು.  ಅದೊಂದು ತುರುಸಿನ ಪಂದ್ಯ.  ಅದು ಫೈನಲ್ ಆಗಿದ್ದರಿಂದ ಆಟ ನೋಡಲು ಜನ ಕಿಕ್ಕಿರಿದು ನೆರೆದಿದ್ದರು.  ಎರಡೂ ತಂಡಗಳು ತಲಾ ಒಂದೊಂದು ಗೋಲು ಗಳಿಸಿವೆ.  ಆಟ ಮುಗಿಯಲು ಇನ್ನು ಕೇವಲ ಒಂದೂವರೆ ನಿಮಿಷ ಮಾತ್ರವಿದೆ.  ಆಗ ಒಂದು ಶಾಲೆಯ ಕೋಚ್ ತನ್ನ ತಂಡದ ಒಬ್ಬ ಆಟಗಾರನನ್ನು ಬದಲಾಯಿಸಿದ.  ಈಗ ಮೈದಾನದ ಒಳಗೆ ನಡೆದವನು ಭಾರಿ ಉತ್ಸಾಹಿ ಹುಡುಗ.  ಅಂತಹ ಅನುಭವಿ ಏನೂ ಅಲ್ಲ.  ಅವನನ್ನು ಆಗ ಕಳುಹಿಸಿದ್ದು ತಪ್ಪಾಯಿತು ಎಂದು ಎಲ್ಲರಿಗೂ ಎನಿಸಿತು.  ಆ ಹುಡುಗನಿಗೆ ಏನಾದರೂ ಮಾಡಿ ತನ್ನ ತಂಡವನ್ನು ಗೆಲ್ಲಿಸಲೇಬೇಕೆಂಬ ಹಟ.  ಅವನಿಗೆ ಅನುಭವದ ಕೊರತೆ ಇದ್ದರೂ ಶಾಲೆಯ ಮೇಲಿನ ಪ್ರೀತಿಗೆ ಕೊರತೆ ಇರಲಿಲ್ಲ.  ಚೆಂಡು ಕಂಡ ಕಡೆಗೆ ಓಡಿದ,  ಜಾರಿ ಬಿದ್ದರೂ ತಡವರಿಸಿಕೊಂಡು ಓಡಿದ,  ತನ್ನದಲ್ಲದ ಸ್ಥಳದಲ್ಲಿಯೂ ನುಗ್ಗಿದ. ಅಂತೂ ಒಂದು ಬಾರಿ ಅವನ ಹತ್ತಿರ ಚೆಂಡು ಬಂದಿತು.  ಅವನಿಗೆ ಅತೀವ ಸಂತೋಷವಾಯಿತು.  ಚೆಂಡನ್ನು ಕೈಯಲ್ಲಿ ಹಿಡಿದುಕೊಂಡು ಓಡತೊಡಗಿದ. ಫುಟ್‌ಬಾಲ್ ಆಟದಲ್ಲಿ ಚೆಂಡನ್ನು ಕೈಯಲ್ಲಿ ಹಿಡಿಯುವಂತಿಲ್ಲ. ಅವನಿಗೆ ಮೈಮೇಲೆ ಎಚ್ಚರವೇ ಇಲ್ಲ.ಅವನ ತಲೆಯಲ್ಲಿದ್ದದ್ದು ಒಂದೇ, ಚೆಂಡು ಗೋಲಿನೊಳಗೆ ಹೋಗಬೇಕು, ತನ್ನ ಶಾಲೆ ಗೆಲ್ಲಬೇಕು. ಎಲ್ಲ ಆಟಗಾರರು, ಅಂಪೈರುಗಳು, ನೆರೆದಿದ್ದ ಜನರು ಆಶ್ಚರ್ಯದಿಂದ ನೋಡುತ್ತಿದ್ದಂತೆ ಆತ ಹರ್ಷದಿಂದ ಕೇಕೆ ಹಾಕುತ್ತ ಓಡಿ ಗೋಲಿನತ್ತ ನುಗ್ಗಿ ಚೆಂಡನ್ನು ಒಳಗೆ ಎಸೆದು ಕುಣಿದು ಕುಪ್ಪಳಿಸುತ್ತ ನಿಂತ.  ಆಟವನ್ನು ನೋಡುತ್ತಿದ್ದ ಪ್ರೇಕ್ಷಕರು ಅವನ ಉತ್ಸಾಹವನ್ನು, ಗೆಲ್ಲಬೇಕೆಂಬ ಛಲವನ್ನು ಕಂಡು ಎದ್ದು ನಿಂತು, ದೀರ್ಘಕಾಲ ಚಪ್ಪಾಳೆ ತಟ್ಟಿ ಮೆಚ್ಚುಗೆ ತೋರಿಸಿದರು.  ಅದನ್ನು ಗೋಲೆಂದು ಪರಿಗಣಿಸದಿದ್ದರೂ ಅವನ ತನ್ಮಯತೆ ಎಲ್ಲರನ್ನು ಬೆರಗಾಗಿಸಿತು. ಇದರ ಪರಿಣಾಮವಾಗಿ ರಗ್ಬಿ ಎಂಬ ಹೊಸ ಆಟ ಹುಟ್ಟಿಕೊಂಡಿತು. ನಮ್ಮ ಜೀವನದಲ್ಲೂ ಉತ್ಸಾಹದ ಪಾತ್ರ ತುಂಬ ದೊಡ್ಡದು.  ಅದನ್ನು ಕಳೆದುಕೊಂಡ ಬದುಕೆಂದರೆ ಠುಸ್ಸೆಂದ ಬಲೂನಿದ್ದಂತೆ. ಬತ್ತದ ಉತ್ಸಾಹ, ಜೀವನದ ಕಾರ್ಪಣ್ಯಗಳ ಕಹಿ ಕಡಿಮೆ ಮಾಡಿ ಅದನ್ನು ಹೆಚ್ಚು ಸಹ್ಯವಾಗಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry