ಆಡಳಿತ ರಂಗದಲ್ಲಿ ಅಂಗನೆಯ ಹೆಜ್ಜೆಗುರುತು

7

ಆಡಳಿತ ರಂಗದಲ್ಲಿ ಅಂಗನೆಯ ಹೆಜ್ಜೆಗುರುತು

Published:
Updated:
ಆಡಳಿತ ರಂಗದಲ್ಲಿ ಅಂಗನೆಯ ಹೆಜ್ಜೆಗುರುತು

2001 ಹಾಗೂ 2011ರ ಮಧ್ಯದ ದಶಕದಲ್ಲಿ ಮಹಿಳಾ ಪದವೀಧರರ ಸಂಖ್ಯೆ ಶೇ  116ರಷ್ಟು  ಅಪಾರ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಪುರುಷ ಪದವೀಧರರ ಏರಿಕೆ ಪ್ರಮಾಣ ಶೇ 65ರಷ್ಟಿತ್ತು. ಆದರೆ ಈ ಶೈಕ್ಷಣಿಕ ಪ್ರಗತಿ  ಸಹಜವಾಗಿಯೇ ಉದ್ಯೋಗಗಳಾಗಿ ಮಹಿಳೆಯರಿಗೆ ಪರಿವರ್ತನೆಯಾಗಿಲ್ಲ.   ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ 2005ರಿಂದ ನಿರಂತರವಾಗಿ ಕುಸಿಯುತ್ತಿದೆ.

ಹೀಗಾಗಿ ಈ ಕ್ಷೇತ್ರದಲ್ಲಿ  131 ರಾಷ್ಟ್ರಗಳ  ಪೈಕಿ ಭಾರತ 120ರ ಸ್ಥಾನದಲ್ಲಿದೆ. ಉದ್ಯೋಗದಲ್ಲಿರುವ ಭಾರತೀಯ ಮಹಿಳೆಯರ ಪ್ರಮಾಣ ಕೇವಲ ಶೇ 27ರಷ್ಟು ಎಂಬುದು ಆತಂಕಕಾರಿ. ಆದರೆ ಚೀನಾ ಹಾಗೂ ಬ್ರೆಜಿಲ್‌ಗಳಲ್ಲಿ ಈ ಪ್ರಮಾಣ ಶೇ 65ರಿಂದ 70ರಷ್ಟಿದೆ ಎಂಬಂತಹ ಅಂಕಿಅಂಶಗಳನ್ನು ಕಳೆದ ವಾರ ಬಿಡುಗಡೆಯಾದ ವಿಶ್ವ ಬ್ಯಾಂಕ್ ಭಾರತ ಅಭಿವೃದ್ಧಿ  ವರದಿ ತಿಳಿಸಿದೆ. ಕುಟುಂಬದೊಳಗೆ ಸಿರಿವಂತಿಕೆ ಹೆಚ್ಚಾದಂತೆ ಮಹಿಳೆಯರು ಉದ್ಯೋಗ ರಂಗದಿಂದ ಹೊರಹೋಗುತ್ತಿರುವ ವಿಪರ್ಯಾಸ ಇದು ಎಂದು ಅಧ್ಯಯನಗಳು ಗುರುತಿಸಿವೆ.

ಭಾರತದ ಉದ್ಯೋಗ ಜಗತ್ತಿನಲ್ಲಾಗುತ್ತಿರುವ ಈ ಪಲ್ಲಟಗಳ ಕಾರ್ಮೋಡದ ಮಧ್ಯೆಯೇ  ಯುಪಿಎಸ್‌ಸಿ ನಡೆಸುವ  ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ ಕೋಲಾರದ ಕೆ.ಆರ್‍. ನಂದಿನಿ ಪ್ರಥಮ ರ್‍‍ಯಾಂಕ್ ಗಳಿಸಿದ ಸುದ್ದಿ ಹೊರಬಂದಿದ್ದು  ಮಿಂಚಿನ ಬೆಳಕಾಗಿತ್ತು. ಅದೂ ನಿರಂತರವಾಗಿ ಕಳೆದ ಮೂರು ವರ್ಷಗಳಿಂದ ನಾಗರಿಕ ಸೇವಾ ಪರೀಕ್ಷೆಯ ಪ್ರಥಮ ರ್‍್ಯಾಂಕ್‌ಅನ್ನು ಮಹಿಳೆಯರೇ ಗಳಿಸಿಕೊಳ್ಳುತ್ತಿರುವುದು ಮತ್ತೊಂದು ಹೆಗ್ಗಳಿಕೆ. 2015ರಲ್ಲಿ ಇರಾ ಸಿಂಘಾಲ್, 2016ರಲ್ಲಿ ಟೀನಾ ಧಾಬಿ ಹಾಗೂ ಈಗ ಕೆ.ಆರ್. ನಂದಿನಿ  ಈ ಸಾಧನೆ ಮೆರೆದಿದ್ದಾರೆ.

‘ಸತತ ಮೂರು ವರ್ಷಗಳಿಂದ ಮಹಿಳೆಯರೇ ಮೊದಲ ರ್‍್ಯಾಂಕ್ ಪಡೆಯುತ್ತಿರುವುದು ಮಹಿಳಾ ಶಕ್ತಿಯ ಉದಯ. ಸ್ಫೂರ್ತಿದಾಯಕ ಸಂಕೇತ ಇದು’ ಎಂದಿರುವ  ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಮಾತುಗಳು ಸರಿಯಾದುದು. ಏಕೆಂದರೆ ಭಾರತದ ಆಡಳಿತ ವ್ಯವಸ್ಥೆಯ ಉನ್ನತ ಸ್ಥಾನಗಳಲ್ಲಿ ಈಗಲೂ ಮಹಿಳೆಯರ ಪ್ರಮಾಣ ಶೇ 10ರಿಂದ 15. ಇಂತಹ ಸಂದರ್ಭದಲ್ಲಿ ಈ ಬಾರಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಮೊದಲ 25 ಸ್ಥಾನ ಗಳಿಸಿದವರಲ್ಲಿ ಏಳು ಮಂದಿ ಮಹಿಳೆಯರಿದ್ದಾರೆ ಎಂಬುದೂ ದೊಡ್ಡ ಸಂಗತಿ.  ಆದರೆ ಆಯ್ಕೆಯಾದ ಒಟ್ಟು 1099 ಅಭ್ಯರ್ಥಿಗಳಲ್ಲಿ  253 ಮಂದಿ ಮಾತ್ರ ಮಹಿಳೆಯರು ಎಂಬುದು ಇನ್ನೂ ಸಾಗಬೇಕಿರುವ ಹಾದಿಗೆ ಸೂಚಕ.

ನಾಗರಿಕ ಸೇವಾ ರಂಗ, ರಾಷ್ಟ್ರದ ಗುರಿಗಳ ಸಾಧನೆಯಲ್ಲಿ ಮುಖ್ಯವಾದ ಅಂಗ ಎಂಬುದನ್ನು ನಾವು ಮರೆಯುವಂತಿಲ್ಲ. ಈ ನಾಗರಿಕ ಸೇವೆ, ಬ್ರಿಟಿಷ್ ಕಾಲದಿಂದ  ಅಸ್ತಿತ್ವದಲ್ಲಿದ್ದರೂ ಈ ಕ್ಷೇತ್ರಕ್ಕೆ  ಮಹಿಳೆ ಪ್ರವೇಶವಾದದ್ದು ತೀರಾ ತಡವಾಗಿ. 1935ರ ಭಾರತ ಸರ್ಕಾರದ ಕಾಯಿದೆಯ ಪ್ರಕಾರ, ವಿವಿಧ ಇಲಾಖೆಗಳಲ್ಲಿ ಕ್ಲಾಸ್ 1 ಹುದ್ದೆಗಳಿಗೆ ಮಹಿಳೆಯರು ಅನರ್ಹರಾಗಿದ್ದರು. ಕ್ಲಾಸ್ 2 ಹಾಗೂ ಗುಮಾಸ್ತಗಿರಿಯ ನೌಕರಿಗಳಿಗಷ್ಟೇ ಅವರು ಅರ್ಹರಾಗಿದ್ದರು. ಇದು 1948ರವರೆಗೂ ಮುಂದುವರೆಯಿತು.

1934ರಷ್ಟು ಹಿಂದೆ ಭಾರತದ ಸಂವಿಧಾನ ರಚನೆಯಾಗುವ ಮೊದಲು ಜವಾಹರಲಾಲ್ ನೆಹರೂ ಅವರು ಈ ಮಾತುಗಳನ್ನು ಬರೆದಿದ್ದರು... ‘ಮಹಿಳೆಗೆ ಏಕೈಕ ಆರ್ಥಿಕ ಆಸರೆ ಹಾಗೂ ವೃತ್ತಿ ಎಂಬಂತೆ ಮದುವೆಯನ್ನು ಪರಿಭಾವಿಸುವ ಕ್ರಮ ಬದಲಾಗಬೇಕು. ಹಾಗಾದಾಗ ಮಾತ್ರ ಆಕೆ ಏನಾದರೂ ಸ್ವಾತಂತ್ರ್ಯ ಹೊಂದಬಹುದು. ಸ್ವಾತಂತ್ರ್ಯ ಎಂಬುದು ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ. ಸ್ವಂತ ಸಂಪಾದನೆ ಮಾಡಿ ಆರ್ಥಿಕವಾಗಿ ಮಹಿಳೆ ಸ್ವತಂತ್ರವಾಗಿಲ್ಲದಿದ್ದಲ್ಲಿ  ಆಕೆ ಪತಿ ಅಥವಾ ಇನ್ಯಾರನ್ನಾದರೂ ಅವಲಂಬಿಸಬೇಕಾಗುತ್ತದೆ. ಅವಲಂಬಿತರು ಎಂದಿಗೂ ಸ್ವತಂತ್ರರಾಗುವುದಿಲ್ಲ’.

ಈ ವಿಚಾರ ಮನಸ್ಸಿನಲ್ಲಿಟ್ಟುಕೊಂಡೇ ನಂತರ ಸಂವಿಧಾನ ರಚನೆಯಂತಹ ಮಹತ್ವದ ಕೆಲಸದಲ್ಲಿ ಸರೋಜಿನಿ ನಾಯ್ಡು, ಹಂಸಾ ಮೆಹ್ತಾ, ದುರ್ಗಾಬಾಯಿ ದೇಶಮುಖ್ ಅವರಂತಹ ಮಹಿಳೆಯರನ್ನು ನೆಹರೂ ಅವರು ತೊಡಗಿಸಿದರು.  ಮೂಲಭೂತ ಹಕ್ಕುಗಳ ಅಧ್ಯಾಯದಲ್ಲಿ ಮಹಿಳೆಗೆ ಸಮಾನ ಸ್ಥಾನಮಾನ ನೀಡುವಂತಹ  ವಿಚಾರಕ್ಕೆ ಸಂವಿಧಾನ ರಚನಾ ಸಭೆಯಲ್ಲೂ ಯಾವುದೇ ವಿರೋಧವೂ ಎದುರಾಗಿರಲಿಲ್ಲ.

ಉದ್ಯೋಗಕ್ಕೆ ಸಂಬಂಧಿಸಿದಂತೆ ಸಮಾನ ಅವಕಾಶಗಳನ್ನು ಸಂವಿಧಾನ ನೀಡಿದರೂ ಉದ್ಯೋಗರಂಗಕ್ಕೆ ಮಹಿಳೆಯರ ಪ್ರವೇಶ ಸುಗಮವೇನೂ ಆಗಿರಲಿಲ್ಲ ಎಂಬುದನ್ನು ಅಂಕಿಅಂಶಗಳೇ ಹೇಳುತ್ತವೆ. 1971ರವರೆಗೂ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳ ಪ್ರಮಾಣ ಕೇವಲ ಶೇ 2.82ರಷ್ಟಿತ್ತು.  ರಾಜ್ಯ ಸರ್ಕಾರಗಳಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ ಕೇವಲ ಶೇ 8.50ರಷ್ಟಿತ್ತು. 

ಅದೂ 1970ರ ದಶಕದ ಅಂತ್ಯದವರೆಗೂ  ಹೆಚ್ಚಿನ ಮಹಿಳೆಯರು– ಶಾಲೆಗಳ ಉಪಾಧ್ಯಾಯರು, ದಾದಿಯರು, ಸೂಲಗಿತ್ತಿಯರು ಅಥವಾ ವೈದ್ಯೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದದ್ದೇ ಹೆಚ್ಚು ಎಂಬುದನ್ನು ಅಧ್ಯಯನವೊಂದು ತಿಳಿಸಿದೆ.  ಇಂತಹ ಸಾಮಾಜಿಕ ಸನ್ನಿವೇಶದಲ್ಲಿ ನಾಗರಿಕ ಸೇವಾ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶವೇ ಕ್ರಾಂತಿಕಾರಕ ಹೆಜ್ಜೆ .

ಸ್ವಾತಂತ್ರ್ಯಾನಂತರ ಭಾರತದಲ್ಲಿ  ನಾಗರಿಕ  ಸೇವೆಗಳಿಗಾಗಿ  ಮೊದಲ ಸ್ಪರ್ಧಾತ್ಮಕ ಪರೀಕ್ಷೆ 1948ರಲ್ಲಿ ನಡೆಯುತ್ತದೆ. ನಂತರ, 1949ರಲ್ಲಿ ನಾಗರಿಕ ಸೇವೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ  ವಿದೇಶಾಂಗ ಸೇವೆಯನ್ನು ಆಯ್ಕೆ ಮಾಡಿಕೊಂಡ ಸಿ.ಬಿ.ಮುತ್ತಮ್ಮ ನಮ್ಮ ಕೊಡಗಿನವರು ಎಂಬುದೂ ಹೆಗ್ಗಳಿಕೆ. ತಮ್ಮ ವೃತ್ತಿಬದುಕಿನುದ್ದಕ್ಕೂ ಹಲವು ಬಗೆಯ ಲಿಂಗತಾರತಮ್ಯಗಳ ವಿರುದ್ಧ ಮುತ್ತಮ್ಮ  ಹೋರಾಟ ನಡೆಸಿದರು.

ಈ  ಹೋರಾಟಗಳ ಫಲವಾಗಿ ಇಂದು ಮಹಿಳೆಯರು ಬಹಳ ಕ್ರಿಯಾಶೀಲ ಹಾಗೂ ಪ್ರಮುಖ ಹುದ್ದೆಗಳನ್ನು ಭಾರತೀಯ ರಾಜತಾಂತ್ರಿಕ ವಲಯದಲ್ಲಿ ನಿರ್ವಹಿಸುತ್ತಿದ್ದಾರೆ. ಚೋಕಿಲಾ ಅಯ್ಯರ್, ನಿರುಪಮಾ ರಾವ್‌ ಹಾಗೂ  ಸುಜಾತಾ ಸಿಂಗ್‌ ಅವರು ವಿದೇಶಾಂಗ ಕಾರ್ಯದರ್ಶಿಯಂತಹ ಉನ್ನತ ಹುದ್ದೆಗೇರಿದ್ದು ಸಣ್ಣ ಸಂಗತಿಯಲ್ಲ. 

ಅನ್ನಾ ರಾಜಂ ಮಲ್ಹೋತ್ರಾ, 1951ರಲ್ಲಿ  ಐಎಎಸ್‌ಗೆ ಸೇರ್ಪಡೆಯಾದ ಪ್ರಥಮ ಮಹಿಳೆ. ಜೊತೆಗೆ,  ಕೇಂದ್ರ ಸರ್ಕಾರದಲ್ಲಿ ಕಾರ್ಯದರ್ಶಿ ಹುದ್ದೆಗೇರಿದ ಮೊದಲ ಮಹಿಳೆಯೂ ಹೌದು. 

ನಾಗರಿಕ ಸೇವೆಗೆ ವಿವಾಹಿತ ಮಹಿಳೆಯನ್ನು ನೇಮಕ ಮಾಡುವಂತಿಲ್ಲ. ವಿವಾಹವಾದಲ್ಲಿ ಆಕೆ  ರಾಜೀನಾಮೆ ನೀಡಬೇಕೆಂಬ ನಿಯಮ ಆ ಕಾಲದಲ್ಲಿತ್ತು.   ಮದ್ರಾಸ್ ರಾಜ್ಯಕ್ಕೆ ಅನ್ನಾ ರಾಜಂ ಅವರು  ನಿಯೋಜಿತರಾದಾಗ ಅಲ್ಲಿ ಮುಖ್ಯಮಂತ್ರಿಯಾಗಿದ್ದವರು ಸಿ. ರಾಜಗೋಪಾಲಾಚಾರಿ. ತತ್ವಶಃ ಅವರೂ ಮಹಿಳೆಯರು ಸಾರ್ವಜನಿಕ ಸೇವೆಗೆ ಸೇರುವುದಕ್ಕೆ ವಿರೋಧವಾಗಿದ್ದರು. 

ಕಾನೂನು ಸುವ್ಯವಸ್ಥೆ ಸಂದರ್ಭಗಳನ್ನು ನಿಭಾಯಿಸಲು ಮಹಿಳೆಗೆ ಸಾಧ್ಯವಾಗದೆಂದು  ಜಿಲ್ಲಾ ಸಬ್ ಕಲೆಕ್ಟರ್ ಹುದ್ದೆಗೆ ಬದಲು  ಸೆಕ್ರೆಟೇರಿಯಟ್‌ನಲ್ಲಿ  ಹುದ್ದೆ ನೀಡಲು ಮುಂದಾಗಿದ್ದರು. ಆದರೆ ಕುದುರೆ ಸವಾರಿ, ರೈಫಲ್, ರಿವಾಲ್ವರ್ ಶೂಟಿಂಗ್  ಹಾಗೂ ಮ್ಯಾಜಿಸ್ಟ್ರೇಟ್ ಅಧಿಕಾರ ಬಳಸುವ ಬಗ್ಗೆ ತರಬೇತಿ ಪಡೆದುಕೊಂಡಿದ್ದ ಅನ್ನಾ ಅವರು ತಾವು ಪುರುಷ ಸಹೋದ್ಯೋಗಿಗಳಿಗಿಂತ ಕಡಿಮೆ ಏನಿಲ್ಲ ಎಂದು ಮನವರಿಕೆ ಮಾಡಿ ಕೊಡಲು ಸೆಣಸಬೇಕಾಯಿತು. ಅಂತೂ ಕಡೆಗೂ ಹೊಸೂರಿನಲ್ಲಿ ಸಬ್ ಕಲೆಕ್ಟರ್ ಆಗಿ  ಕಾರ್ಯ ನಿರ್ವಹಿಸಿದ ಮೊದಲ ಮಹಿಳೆಯಾದರು ಅವರು.

ಸಾರ್ವಜನಿಕ ಆಡಳಿತದ ಬಗ್ಗೆ ನಿರ್ಧಾರ ಕೈಗೊಳ್ಳುವ ಮಹಿಳೆ ಸಾಮರ್ಥ್ಯದ ಬಗ್ಗೆ ಬಹುತೇಕ  ಪುರುಷರಿಗೆ ಆತಂಕವಿರುತ್ತಿತ್ತು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಹಾಗಾಗಿ ತನ್ನನ್ನು ಸಾಬೀತುಪಡಿಸಿಕೊಳ್ಳಬೇಕಾದ ಹೊಣೆಗಾರಿಕೆ ಅವರಿಗೆ ಹೆಚ್ಚು ಇತ್ತು. ಆದರೆ ಇದಕ್ಕೆ ಪುರುಷರು ವೈಯಕ್ತಿಕವಾಗಿ ಕಾರಣರಲ್ಲ. ಸಾಂಪ್ರದಾಯಿಕ ಮನಸ್ಥಿತಿ  ಅಭಿವ್ಯಕ್ತಗೊಳ್ಳುತ್ತಿದ್ದ ರೀತಿ ಅದು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಆ ನಂತರ ಮತ್ತೊಬ್ಬ ಮಹಿಳೆ ಐಎಎಸ್‌ಗೆ ಸೇರ್ಪಡೆಯಾಗಲು 10 ವರ್ಷಗಳು ಕಾಯಬೇಕಾಯಿತು.

1961ರಲ್ಲೂ ಒಬ್ಬರೇ ಒಬ್ಬರು ಮಹಿಳೆ   ಐಎಎಸ್ ಗೆ ಸೇರ್ಪಡೆಯಾದರು. ನಾಗರಿಕ ಸೇವೆಗೆ ಸೇರಿದ ಅಧಿಕಾರಿಗಳು ವಿವಾಹವಾದಲ್ಲಿ ರಾಜೀನಾಮೆ ನೀಡಬೇಕೆಂಬ ನಿಯಮ ಬದಲಾದದ್ದು 1972ರಲ್ಲಿ.  ಸೇವೆಗೆ ಸೇರಲು ವಿವಾಹಿತ ಸ್ತ್ರೀಯರಿಗೂ ಅವಕಾಶ ಕಲ್ಪಿಸಲಾಯಿತಲ್ಲದೆ  ಹೆರಿಗೆ ರಜೆಯ ಅವಕಾಶವನ್ನೂ ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲಾಯಿತು.

1971ರವರೆಗೆ ಐಪಿಎಸ್‌ಗೆ ನೇಮಕಗೊಳ್ಳಲು ಮಹಿಳೆಯರಿಗೆ ಅವಕಾಶ ಇರಲಿಲ್ಲ.1972ರಲ್ಲಿ  ತಾರತಮ್ಯದ ನಿಯಮ ರದ್ದು ಮಾಡಲಾಯಿತು.  ಹೀಗಾಗಿ, ಮಹಿಳಾ ಐಪಿಎಸ್ ಅಧಿಕಾರಿಗಾಗಿ ರಾಷ್ಟ್ರ 1972ರವರೆಗೆ ಕಾಯಬೇಕಾಗುತ್ತದೆ. ರಾಷ್ಟ್ರದ ಮೊದಲ ಐಪಿಎಸ್ ಅಧಿಕಾರಿಯಾದ ಕಿರಣ್ ಬೇಡಿ ಹೆಸರು ರಾಷ್ಟ್ರದಲ್ಲಿ ಕೇಳದವರೇ ಇಲ್ಲ ಎನ್ನಬಹುದು.

ಭಾರತೀಯ ಅರಣ್ಯ ಸೇವೆಗೆ ಮಹಿಳೆಯ ಪ್ರವೇಶವಾಗಿದ್ದು ಇನ್ನೂ ತಡವಾಗಿ.1980ರಲ್ಲಿ ಮೊದಲಬಾರಿಗೆ  ಭಾರತೀಯ ಅರಣ್ಯ ಸೇವೆಗೆ ಮಹಿಳೆಯರು  ಸೇರ್ಪಡೆಯಾದರು. ಅರಣ್ಯ ಸೇವೆಯಲ್ಲಿ ಈಗಲೂ ಮಹಿಳೆಯರ ಸಂಖ್ಯೆ ಕಡಿಮೆಯೇ ಇದೆ.

ಲಿಂಗತ್ವ ಸಮತೋಲಿತ ಕಾರ್ಯತಂಡವನ್ನು ಹೊಂದಲು  ಸರ್ಕಾರ ಶ್ರಮಿಸುತ್ತಿದೆ. ಹೀಗಾಗಿ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು ಮಹಿಳಾ ಅಭ್ಯರ್ಥಿಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಅಧಿಸೂಚನೆಗಳಲ್ಲಿ ಹೇಳಿಕೊಂಡೇ ಬರಲಾಗುತ್ತಿದೆ.  ಆದರೆ ಈಗಲೂ ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 20 ಪುರುಷ ಐಎಎಸ್ ಅಧಿಕಾರಿಗಳಿಗೆ ಒಬ್ಬರೇ ಮಹಿಳಾ ಅಧಿಕಾರಿ ಇದ್ದಾರೆ. ರಾಷ್ಟ್ರದ 29 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಪಟ್ಟಿಯಲ್ಲಿ ಕೇವಲ ಇಬ್ಬರು ಮಹಿಳೆಯರಿರುವುದು ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆ ಜಾಲತಾಣದಲ್ಲಿರುವ (ಕಳೆದ ವರ್ಷದ ಆಗಸ್ಟ್ 5ರವರೆಗೆ)  ಅಂಕಿಅಂಶಗಳಿಂದ ವ್ಯಕ್ತ.

ಸಾರ್ವಜನಿಕ ನೀತಿ ನಿರೂಪಣೆಯ ಕಾರ್ಯಗಳಲ್ಲಿ ನಾಗರಿಕ ಸೇವಾ ಅಧಿಕಾರಿಗಳದ್ದು ಪ್ರಮುಖ ಪಾತ್ರ. ಜನಸಂಖ್ಯೆಯ ಅರ್ಧಭಾಗವಾಗಿರುವ ಮಹಿಳೆಯರೂ  ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರಬಲ್ಲ ಇಂತಹ ಸಾರ್ವಜನಿಕ ನೀತಿ ನಿರೂಪಣೆ ಹಾಗೂ  ಯೋಜನೆಗಳನ್ನು ರೂಪಿಸುವಲ್ಲಿ ಸಹಭಾಗಿಗಳಾಗಬೇಕಾದ್ದು ಅವಶ್ಯ. ಸರ್ಕಾರದ ನೀತಿಗಳ ಫಲಾನುಭವಿಗಳಾಗಷ್ಟೇ ಮಹಿಳೆಯರು ಉಳಿಯಬಾರದು. ಇಂತಹ ನೀತಿಗಳ ನಿರೂಪಣೆ ಹಾಗೂ ಅನುಷ್ಠಾನ ಪ್ರಕ್ರಿಯೆಯಲ್ಲಿ ಅವರೂ ಪಾಲುದಾರರಾಗಲು ಅಧಿಕಾರ ಸ್ಥಾನಗಳಲ್ಲಿ ಮಹಿಳೆಯರು ಇರುವುದು ಅಗತ್ಯ.

ನಮ್ಮ ಬದುಕಿನಲ್ಲಿ ಅಂತರ್ಗತವಾಗಿಬಿಟ್ಟಿರುವ ಸಾಮಾಜಿಕ  ಅಡೆತಡೆಗಳನ್ನು ದಾಟುವುದು ಸುಲಭವಲ್ಲ. ಆದರೂ ಇತ್ತೀಚಿನ ದಿನಗಳಲ್ಲಿ ಬದಲಾವಣೆ ಕಾಣಿಸುತ್ತಿದೆ ಎಂಬುದೇ ಸಮಾಧಾನಕರ. ಹೆಚ್ಚಿನ ಯುವ ಮಹಿಳೆಯರು ನಾಗರಿಕ ಸೇವಾ ಕ್ಷೇತ್ರಕ್ಕೆ ಬರುವಂತಾಗಬೇಕು. ದಶಕಗಳಿಂದ ಆಡಳಿತದ ಈ  ಕ್ಷೇತ್ರದಲ್ಲಿ ಗಾಜಿನ ಚಾವಣಿಯನ್ನು ಭೇದಿಸಿರುವ ಮಹಿಳೆಯರು ಕಿರಿಯರಿಗೆ ಪ್ರೇರಣೆಯಾಗಬೇಕು.   

2001ರಲ್ಲಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ನಮ್ಮ ರಾಜ್ಯದ ವಿಜಯಲಕ್ಷ್ಮಿ ಬಿದರಿ ಅವರು ಪ್ರಥಮ ಸ್ಥಾನ ಪಡೆದಿದ್ದೂ ದೊಡ್ಡ ಸಾಧನೆಯಾಗಿತ್ತು. ಈಗ 16 ವರ್ಷಗಳ ನಂತರ ಕೆ.ಆರ್. ನಂದಿನಿ ಮತ್ತೊಮ್ಮೆ  ಆ ಸಾಧನೆ ಮಾಡಿದ್ದಾರೆ. ಈ ಸಾಧಕರು ನಮ್ಮ ಇನ್ನಷ್ಟು ಯುವತಿಯರಿಗೆ ಸ್ಫೂರ್ತಿಯಾಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry