ಮಂಗಳವಾರ, ಮೇ 24, 2022
31 °C

ಆತ್ಮಗೌರವ ದುಡ್ಡಿಗೆ ಸಿಗುವುದಲ್ಲ...

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ಯಾವುದೇ ಅಪರಾಧ ಮಾಡದಿದ್ದರೂ ವಿನಾಕಾರಣ ಶಿಕ್ಷೆಗೆ ಒಳಪಡುವಂಥ ಪ್ರಕರಣಗಳು ನಮ್ಮ ಮುಂದೆ ಅವೆಷ್ಟೋ ಇವೆ. ಕೋಮು ಗಲಭೆ, ಸ್ಫೋಟ ಮತ್ತಿತರ ಪ್ರಕರಣಗಳಲ್ಲಿ ಇಂಥ ಉದಾಹರಣೆಗಳನ್ನು ನಾವು ನೋಡುತ್ತೇವೆ. 2007ರ ಮೇ 18 ರಂದು ಹೈದರಾಬಾದ್‌ನ ಮೆಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಆದದ್ದೂ ಇದೇ ಕಥೆ. ಇದರಲ್ಲಿ 21 ಮಂದಿ ಮುಸ್ಲಿಂ ಯುವಕರನ್ನು  ವಿನಾಕಾರಣ ಎಳೆಯಲಾಗಿತ್ತು.ಇವರ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿತ್ತು. ಮಾಡದ ಅಪರಾಧವನ್ನು ಒಪ್ಪಿಕೊಳ್ಳುವಂತೆ ಪೊಲೀಸರು ಇವರಿಗೆ ಕೊಟ್ಟ ಚಿತ್ರಹಿಂಸೆ ಅಷ್ಟಿಷ್ಟಲ್ಲ. ಕೊನೆಗೆ ಆದದ್ದಾದರೂ ಏನು? ಎಷ್ಟೇ ಜಗ್ಗಾಡಿದರೂ ಇವರ ವಿರುದ್ಧದ ಆರೋಪ ಸಾಬೀತು ಪಡಿಸಲು ಯಾವುದೇ ಸಾಕ್ಷ್ಯ ಸಿಗಲಿಲ್ಲ.ಹಾಗಾಗಿ ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು. ಇತ್ತೀಚೆಗೆ ಬರ್ಖಾ ದತ್ ಅವರು ಟಿ.ವಿ ಕಾರ್ಯಕ್ರಮದಲ್ಲಿ ಈ ಪ್ರಕರಣದ ಮೇಲೆ ಬೆಳಕು ಚೆಲ್ಲಿ ಮುಗ್ಧ ಮುಸ್ಲಿಂ ಯುವಕರು ಇದರಲ್ಲಿ ಯಾವ ರೀತಿ ಬಲಿಪಶುಗಳಾದರು ಎಂಬುದನ್ನು ತೆರೆದಿಟ್ಟರು.ಈ ಪ್ರಕರಣವು ನಮ್ಮ ಪೂರ್ವಗ್ರಹ ಪೀಡಿತ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ನಮ್ಮ ದೇಶದಲ್ಲಿ ಎಲ್ಲೇ ಕೋಮು ಗಲಭೆ ನಡೆಯಲಿ ಅಥವಾ ಸ್ಫೋಟ ಸಂಭವಿಸಲಿ, ಪೊಲೀಸರ ಅನುಮಾನದ ಕಣ್ಣು ಮೊದಲು ಬೀಳುವುದೇ ಮುಸ್ಲಿಮರ ಮೇಲೆ.ಹಿಂದುಮುಂದು ಯೋಚಿಸದೇ ಅವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಕೊನೆಗೆ ನಿರಪರಾಧಿಗಳೆಂದು ಬಿಡುಗಡೆ ಮಾಡಿದ ಮಾತ್ರಕ್ಕೆ ಅವರಿಗಂಟಿದ ಕಳಂಕ, ಆದ ಅವಮಾನ ತೊಳೆದು ಹೋಗುವುದೇ?ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಕೊನೆಗೆ ನಿರಪರಾಧಿಗಳೆಂದು ಬಿಡುಗಡೆಯಾಗಿರುವ ಈ ಯುವಕರಿಗೆ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಘೋಷಿಸಿದ್ದಾರೆ.ಈ ಯುವಕರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪ್ರಯತ್ನ ಮಾಡಲಾಗುವುದು, ಅಗತ್ಯ ನೆರವು ನೀಡಲಾಗುವುದು ಎಂದೆಲ್ಲಾ ಭರವಸೆಗಳ ಮಹಾಪೂರ ಹರಿಸಿದ್ದಾರೆ. ಆದರೆ  ಕಳೆದುಕೊಂಡ `ಆತ್ಮಗೌರವ~ವನ್ನು ನೆರವಿನ ಮೂಲಕ, ಹಣದ ಮೂಲಕ ಮರಳಿ ಪಡೆಯಲಾದೀತೇ?ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು (ಎನ್‌ಸಿಎಂ) ಈ ಯುವಕರಿಗೆ ತಲಾ 3 ಲಕ್ಷ ರೂಪಾಯಿ ನೆರವು ನೀಡುವಂತೆ ಶಿಫಾರಸು ಮಾಡಿದೆ. ಎನ್‌ಸಿಎಂ ನಿರ್ಧಾರಿಂದ ಇವರೇನು ಸಂತೋಷಗೊಂಡಿಲ್ಲ.ದುಡ್ಡಿನಿಂದ ಕಳಂಕ ತೊಡೆದುಕೊಳ್ಳಲು ಹೇಗೆ ಸಾಧ್ಯ ಎಂಬ ಸಿನಿಕತನ ಇವರಲ್ಲಿ ಮನೆ ಮಾಡಿದೆ. ಅದೇನೇ ಇರಲಿ, ಕೊನೆಗೂ ಈ ಯುವಕರನ್ನು ನಿರಪರಾಧಿಗಳೆಂದು ಕೋರ್ಟ್ ಬಿಡುಗಡೆ ಮಾಡಿತಲ್ಲಾ, ಅದಕ್ಕಾದರೂ ಸಮಾಧಾನಪಟ್ಟುಕೊಳ್ಳೋಣ.`ನಗರದಲ್ಲಿ ಏನೇ ಉತ್ಸವ ಇರಲಿ, ಏನಾದರೂ ಸಂಘರ್ಷ ಉಂಟಾಗಲಿ, ಪೊಲೀಸರ ಹದ್ದಿನ ಕಣ್ಣು ನಮ್ಮತ್ತಲೇ ನೆಟ್ಟಿರುತ್ತದೆ. ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ನಮ್ಮನ್ನು ವಿನಾಕಾರಣ ಎಳೆಯಲಾಯಿತು. ಇದೀಗ ನಿರಪರಾಧಿಗಳೆಂದು ಬಿಡುಗಡೆಯಾದರೂ ನಮಗಂಟಿರುವ ರಾಷ್ಟ್ರದ್ರೋಹದ ಹಣೆಪಟ್ಟಿ ಹಾಗೆಯೇ ಇರುತ್ತದೆ~ ಎಂದು ನಿಟ್ಟುಸಿರು ಬಿಡುತ್ತಾರೆ ಈ ಯುವಕರು.`ಧರ್ಮದ ಕಾರಣಕ್ಕೆ ನಾವು ಇಷ್ಟೆಲ್ಲ ಹಿಂಸೆ ಅನುಭವಿಸಬೇಕಾಯಿತು. ಲಕ್ಷಗಟ್ಟಲೆ ಹಣ ಕೊಟ್ಟ ಮಾತ್ರಕ್ಕೆ ನಾವು ಅನುಭವಿಸಿದ ಮಾನಸಿಕ ಯಾತನೆಯನ್ನು ಮರೆಯಲಾದೀತೇ?~ ಎಂದು ಪ್ರಶ್ನಿಸುತ್ತಾರೆ ಹೈದರಾಬಾದ್‌ನ ಹಫೀಜ್‌ಬಂಜಾರಾದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಜುನೇದ್. ಈ ಪ್ರಕರಣದಲ್ಲಿ ಬಂಧಿತರಲ್ಲಿ ಇವರೂ ಒಬ್ಬರಾಗಿದ್ದರು.ಕಳೆದ ತಿಂಗಳು 14ರಂದು ರಾಜಸ್ತಾನದ ಭರತ್‌ಪುರದಲ್ಲಿ ನಡೆದ ಹಿಂಸಾಚಾರವು ಇಂಥ ಪ್ರಕರಣಗಳಿಗೆ ಇನ್ನೊಂದು ಉದಾಹರಣೆಯಾಗಿ ನಿಲ್ಲುತ್ತದೆ. (ಭೂಮಿಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ಗುರ್ಜರರು ಹಾಗೂ ಮುಸ್ಲಿಮರ ಮಧ್ಯೆ ನಡೆದ ಹಿಂಸಾಚಾರದಲ್ಲಿ 8 ಮಂದಿ ಮುಸ್ಲಿಮರು ಮೃತಪಟ್ಟ್ದ್ದಿದರು).ಸ್ಥಳೀಯ ಪೊಲೀಸರು ಗುರ್ಜರ ಸಮುದಾಯ ಹಾಗೂ ಕೆಲವು ಹಿಂದು ಸಂಘಟನೆಗಳಿಗೆ ಕುಮ್ಮಕ್ಕು ನೀಡಿದ್ದೇ ಈ ಹಿಂಸಾಚಾರಕ್ಕೆ ಕಾರಣ ಎನ್ನುವುದು ರಹಸ್ಯವಾಗಿಯೇನು ಉಳಿದಿಲ್ಲ. ಶಸ್ತ್ರಧಾರಿ ಪೊಲೀಸರು ಗುರ್ಜರ ಸಮುದಾಯದ ಕೆಲವರೊಂದಿಗೆ ಸೇರಿಕೊಂಡು ಮಸೀದಿಯೊಳಗೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ಈ 8 ಮಂದಿ ಸಜೀವ ದಹನಗೊಂಡರು.`ನಿಜಕ್ಕೂ ಈ ಘಟನೆ ಜಲಿಯನ್‌ವಾಲಾಬಾಗ್ ಹತ್ಯಾಕಾಂಡವನ್ನು ನೆನಪಿಸುತ್ತದೆ~ ಎಂದು ಪಿಯುಸಿಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕವಿತಾ ಶ್ರೀವಾತ್ಸವ ದೂರುತ್ತಾರೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನಾ ತಂಡ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿಯೂ ಕವಿತಾ ಇದೇ ಅಂಶವನ್ನು ಪ್ರಸ್ತಾಪಿಸಿದ್ದಾರೆ. `ಕೆಲವು ಹಿಂದು ಮುಖಂಡರ ಒತ್ತಡದ ಮೇರೆಗೆ ಜಿಲ್ಲಾಧಿಕಾರಿ ಗೋಲಿಬಾರ್‌ಗೆ ಆದೇಶ ನೀಡಬೇಕಾಯಿತು~ ಎಂಬ ಬಲವಾದ ನಂಬಿಕೆ ಮುಸ್ಲಿಂ ಸಮುದಾಯದಲ್ಲಿ ಇದೆ ಎನ್ನುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಸಂವಿಧಾನದ ಆಶಯದ ಪ್ರಕಾರ ಕಾನೂನು ಹಾಗೂ ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ಎನ್ನುವ ಮುಸ್ಲಿಮರ ಪ್ರಶ್ನೆಗೆ ಇಡೀ ದೇಶ ಉತ್ತರಿಸಬೇಕಾಗಿದೆ.ಈಗ ಗುಜರಾತ್ ಕೋಮು ಗಲಭೆ ಪ್ರಕರಣಕ್ಕೆ ಬರೋಣ. ದಶಕ ಕಳೆದರೂ ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ನಿಜವಾದ ಶಿಕ್ಷೆ ಆಗಿಲ್ಲ. ಹೀಗಿರುವಾಗ ಮುಸ್ಲಿಂ ಸಮುದಾಯವು ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಇಡುವುದಾದರೂ ಹೇಗೆ?

 

ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆಸಿದ್ದ ಮೂರು ದಿನಗಳ `ಸದ್ಭಾವನಾ ಉಪವಾಸ~ಕ್ಕೆ ಏನೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಮೋದಿ ಆಗಾಗ ಇಂಥ ತಮಾಷೆ ಮಾಡುತ್ತಲೇ ಇರುತ್ತಾರೆ. ಹೀಗೆ ಏಕಾಏಕಿ `ಕೋಮು ಸೌಹಾರ್ದ~ ಮಂತ್ರ ಜಪಿಸಿದ ಮಾತ್ರಕ್ಕೆ ಜನ ಮರುಳಾಗುವುದಿಲ್ಲ ಎನ್ನುವುದು ಮೋದಿ ಅವರಿಗೆ ಗೊತ್ತಿದ್ದರೆ ಸಾಕು.ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ದೋಷಮುಕ್ತರಾಗಿರುವ 21 ಮುಸ್ಲಿಂ ಯುವಕರ ಮಾನಸಿಕ ಸ್ಥಿತಿ ಯಾರಿಗಾದರೂ ಅರ್ಥವಾಗುತ್ತದೆಯೇ? ಇಡೀ ಬದುಕಿನುದ್ದಕ್ಕೂ ಇವರು ಈ ಯಾತನೆಯಿಂದ ಹೊರಕ್ಕೆ ಬರಲು ಸಾಧ್ಯವಿಲ್ಲ.ಇವರ ಇಂಥ ಸ್ಥಿತಿಗೆ ಕಾರಣರಾದ ಪೊಲೀಸರ ವಿರುದ್ಧ ಏನಾದರೂ ಕ್ರಮ ತೆಗೆದುಕೊಳ್ಳಲಾಗಿದೆಯೇ? ಇವರನ್ನು ಅಮಾನತುಗೊಳಿಸಿದ ಸುದ್ದಿಯನ್ನು ನಾನಂತೂ ಎಲ್ಲಿಯೂ ಓದಿಲ್ಲ.

 

ಏನೂ ತಪ್ಪು ಮಾಡದೇ ಈ ಯುವಕರು ಜೈಲಿನಲ್ಲಿ ಐದು ವರ್ಷಗಳ ಕಾಲ ತಮ್ಮ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡಿದ್ದಕ್ಕೆ ಯಾರು ಹೊಣೆ?ಈ ಯುವಕರಿಗೆ ಆದ ಅನ್ಯಾಯವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳುತ್ತಾರೆ.  ಆದರೆ ಈ ತನಕ ಯಾವ ಅಧಿಕಾರಿಯನ್ನೂ ದಂಡಿಸಿಲ್ಲ ಅಥವಾ ಹಿಂಬಡ್ತಿ ನೀಡಿಲ್ಲ. ಆಡಳಿತ ಯಂತ್ರವನ್ನು ನಡೆಸಲು ಪೊಲೀಸ್ ವ್ಯವಸ್ಥೆಯನ್ನು ನೆಚ್ಚಿಕೊಂಡವರಿಗೆ ಇದನ್ನು ಪ್ರಶ್ನಿಸುವುದಕ್ಕೂ ಮುಖ ಇಲ್ಲದಂತೆ ಆಗಿದೆ.ಆಂಧ್ರ ಹಾಗೂ ಕೇಂದ್ರ ಸರ್ಕಾರಗಳೆರಡೂ ಈ ಯುವಕರನ್ನು ಮರೆತೇ ಬಿಟ್ಟಿವೆ. ಈ ಪ್ರಕರಣ ಬೆಳಕಿಗೆ ಬಂದಾಗ ಸಂಸತ್ ಅಧಿವೇಶನ ನಡೆಯುತ್ತಿತ್ತು.ವಿಪರ್ಯಾಸವೆಂದರೆ ಇದೇ ಇರಬೇಕು. ಲೋಕಸಭೆಯಲ್ಲಾಗಲೀ, ರಾಜ್ಯಸಭೆಯಲ್ಲಾಗಲೀ ಯಾರೊಬ್ಬರೂ ಈ ಬಗ್ಗೆ ಸೊಲ್ಲೆತ್ತಲಿಲ್ಲ. ಗುಜರಾತ್ ಕೋಮು ಗಲಭೆ ಪ್ರಕರಣದಲ್ಲಿ ಮೋದಿ ಅವರ ಪಾತ್ರ ಇದ್ದದ್ದನ್ನು ಬಹಿರಂಗಪಡಿಸಿದ್ದಕ್ಕೆ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಸರ್ಕಾರ ಜರುಗಿಸಿದ ಕ್ರಮದ ಬಗ್ಗೆ ಸಂಸತ್‌ನಲ್ಲಿ ಒಂದು ಸಣ್ಣ ಚರ್ಚೆ ನಡೆಯಿತು ಅಷ್ಟೆ.ಈ ಅಧಿಕಾರಿಗಳಲ್ಲಿ ಒಬ್ಬರಾದ ಸಂಜಯ್ ಭಟ್ ಅವರನ್ನು ಮೊದಲು ಅಮಾನತುಗೊಳಿಸಲಾಯಿತು. ನಂತರದಲ್ಲಿ ಬಂಧಿಸಲಾಯಿತು. ಗಲಭೆಯಲ್ಲಿ ಮೋದಿ ಅವರ ಪಾತ್ರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಕ್ಕೆ ಇದೀಗ ಅವರು ವಿಚಾರಣೆಗೊಳಪಡುತ್ತಿದ್ದಾರೆ.ಪ್ರಕರಣ ನಡೆದು ಕೆಲವು ವರ್ಷಗಳ ಬಳಿಕವಾದರೂ ಸಂಜಯ್ ಭಟ್ ಅವರ `ಆತ್ಮಸಾಕ್ಷಿ~ ಎಚ್ಚೆತ್ತುಕೊಂಡಿತಲ್ಲ ಎನ್ನುವುದು ವಿಶೇಷ. ಗಲಭೆ ಸಂದರ್ಭದಲ್ಲಿಏನೇನು ನಡೆಯಿತು ಎನ್ನುವುದನ್ನೆಲ್ಲ ಅವರು ತಾವು ಸಲ್ಲಿಸಿದ ಪ್ರಮಾಣಪತ್ರದಲ್ಲಿ ವಿವರಿಸಿದ್ದಾರೆ.ಈ ಪ್ರಕರಣದಲ್ಲಿ ಇನ್ನೊಬ್ಬ ಅಧಿಕಾರಿ ರಾಹುಲ್ ಶರ್ಮ ಅವರ ಮೇಲೂ ಮೋದಿ ಸರ್ಕಾರ ಸವಾರಿ ಮಾಡಿದೆ. ಗಲಭೆ ಸಂದರ್ಭದಲ್ಲಿ ಬಿಜೆಪಿ ಮುಖಂಡರ ದೂರವಾಣಿ ಸಂಭಾಷಣೆಯ ಧ್ವನಿಸುರುಳಿಯನ್ನು ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಕೊಟ್ಟಿದ್ದಕ್ಕಾಗಿ ಶರ್ಮ ಅವರಿಗೆ ಸರ್ಕಾರ ನೋಟಿಸ್ ನೀಡಿದೆ.

 

ತನ್ನ ವರದಿಯನ್ನು ಬಹಿರಂಗಪಡಿಸುವುದಕ್ಕೆ ಮುನ್ನವೇ ಎಸ್‌ಐಟಿ ಅಸ್ತಿತ್ವ ಕಳೆದುಕೊಂಡ್ದ್ದಿದು ಮಾತ್ರ ವಿಚಿತ್ರ. ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳಿಸಿದೆ. ಕೋರ್ಟ್ ತೀರ್ಪು ದೋಷಪೂರ್ಣವಾಗಿದೆ. ಅದು ಹೋಗಲಿ, ಸಂಜಯ್ ಭಟ್ ಹಾಗೂ ರಾಹುಲ್ ಶರ್ಮ ಅವರು ಬಹಿರಂಗಪಡಿಸಿದ ವಿಷಯಗಳ ಬಗ್ಗೆ ಕೋರ್ಟ್ ಏನನ್ನೂ ಹೇಳದಿರುವುದು ವಿಪರ್ಯಾಸ!ಅದೇನೇ ಇರಲಿ, ಈ ಇಬ್ಬರು ಅಧಿಕಾರಿಗಳು ಸರ್ಕಾರಕ್ಕೆ ಸೊಪ್ಪು ಹಾಕದೇ ಕೆಲವೊಂದು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ ಎನ್ನುವುದು ಗಮನಾರ್ಹ ಅಂಶ. ಕನಿಷ್ಠ ಪಕ್ಷ  ಗೃಹ ಸಚಿವ ಪಿ.ಚಿದಂಬರಂ ಅವರಾದರೂ ಇವರಿಬ್ಬರ ಹಿತ ಕಾಯುವ ಮಾತುಗಳನ್ನು ಆಡಿದ್ದರು.

 

ನಿರೀಕ್ಷೆಯಂತೆ ಬಿಜೆಪಿ ಚಿದಂಬರಂ ಅವರ ಮೇಲೆ ಗೂಬೆ ಕೂರಿಸಿತು. `ರಾಜ್ಯಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಕೇಂದ್ರವು ಯಾಕೆ ಮೂಗು ತೂರಿಸಬೇಕು~ ಎಂದು ಅವರ ಮೇಲೆ ವಾಗ್ದಾಳಿ ನಡೆಸಿತು.ಇದೀಗ ಈ ಪ್ರಕರಣದಲ್ಲಿ ಬಿಜೆಪಿ ಮೋದಿ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಷ್ಟೇ ತಡವಾದರೂ ಸರಿ, ಈ ವಿಷಯದಲ್ಲಿ ಮೋದಿ ಅವರು ಶಿಕ್ಷೆಗೊಳಪಡಬೇಕು ಎನ್ನುವುದನ್ನು ಪಕ್ಷವು ಅರ್ಥಮಾಡಿಕೊಳ್ಳಬೇಕಾಗಿದೆ.ವಿವೇಚನೆ ಇಲ್ಲದೆಯೇ ಮೋದಿಗೆ ಬೆಂಬಲ ನೀಡುತ್ತಿರುವುದಕ್ಕೆ ಬಿಜೆಪಿ ಖಂಡಿತವಾಗಿಯೂ ಬೆಲೆ ತೆರಬೇಕಾಗುತ್ತದೆ. ಈ ದೇಶದಲ್ಲಿ ಶೇ 12 ರಷ್ಟು ಮುಸ್ಲಿಂ ಮತದಾರರ ವಿಶ್ವಾಸ ಕಳೆದುಕೊಂಡಾಗ ಇವೆಲ್ಲವೂ ಬಿಜೆಪಿಗೆ ಅರ್ಥವಾಗಬಹುದು..!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.