ಆತ್ಮಾವಲೋಕನ ಮಾಡಿಕೊಳ್ಳಲಿ ಸಚಿನ್

7

ಆತ್ಮಾವಲೋಕನ ಮಾಡಿಕೊಳ್ಳಲಿ ಸಚಿನ್

ಎ.ಸೂರ್ಯ ಪ್ರಕಾಶ್
Published:
Updated:
ಆತ್ಮಾವಲೋಕನ ಮಾಡಿಕೊಳ್ಳಲಿ ಸಚಿನ್

ಸಚಿನ್ ತೆಂಡೂಲ್ಕರ್ ಅವರು ರಾಜ್ಯಸಭೆಯಲ್ಲಿ ಆಗಸ್ಟ್‌ 3ರಂದು ದಿಢೀರ್ ಎಂದು ತುಸು ಹೊತ್ತು ಕಾಣಿಸಿಕೊಂಡಿದ್ದು ರಾಜ್ಯಸಭೆಗೆ ನಾಮನಿರ್ದೇಶನದ ಮೂಲಕ ನೇಮಕಗೊಳ್ಳುವ ಕೆಲವು ಸದಸ್ಯರ ಹಾಜರಾತಿ ಕಡಿಮೆ ಇರುವುದರ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ನಿರ್ದಿಷ್ಟವಾಗಿ ಹೇಳಬೇಕು ಎಂದರೆ, ನಾಮನಿರ್ದೇಶನದ ಮೂಲಕ ರಾಜ್ಯಸಭೆಗೆ ನೇಮಕ ಆಗಿರುವ ಸಚಿನ್ ತೆಂಡೂಲ್ಕರ್ ಹಾಗೂ ರೇಖಾ ಅವರ ಹಾಜರಾತಿ ದಾಖಲೆಗಳು ನಮ್ಮಲ್ಲಿ ತೀರಾ ನಿರಾಸೆ ಮೂಡಿಸುತ್ತವೆ. ದೇಶದ ಅತ್ಯುನ್ನತ ಶಾಸನಸಭೆಯ ಬಗ್ಗೆ ಅವರು ಹೊಂದಿರುವ ಅಗೌರವ ಮಾಧ್ಯಮಗಳ ತೀವ್ರ ಪರಿಶೀಲನೆಗೆ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತೆಂಡೂಲ್ಕರ್ ಅವರನ್ನು 2012ರ ಏಪ್ರಿಲ್ 27ರಂದು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲಾಯಿತು. ಇದಾದ ನಂತರ ಸಂಸತ್ತಿನ ಕಲಾಪಗಳು 22 ಬಾರಿ ನಡೆದಿವೆ. ಆದರೆ ತೆಂಡೂಲ್ಕರ್ ಅವರು 24 ದಿನಗಳ ಕಾಲ ಮಾತ್ರ ಸದನಕ್ಕೆ ಹಾಜರಾಗಿದ್ದಾರೆ. ನಾಮನಿರ್ದೇಶನಗೊಂಡ ಮೊದಲ ವರ್ಷದಿಂದಲೇ ಕಲಾಪಗಳಿಗೆ ಚಕ್ಕರ್ ಹೊಡೆಯುವುದನ್ನು ಅವರು ಆರಂಭಿಸಿದಂತಿದೆ. ಅವರ ನಾಮನಿರ್ದೇಶನ ಆದ ನಂತರ ಮೊದಲು ನಡೆದಿದ್ದು 2012ರ ಬಜೆಟ್ ಅಧಿವೇಶನ. ತೆಂಡೂಲ್ಕರ್ ಅವರು ಆ ಅಧಿವೇಶನಕ್ಕೇ ಬರಲಿಲ್ಲ. ಇದಾದ ನಂತರ, 2012ರ ಮುಂಗಾರು ಅಧಿವೇಶನದ ವೇಳೆ ಮೊದಲ ಬಾರಿಗೆ, ಒಂದು ದಿನದ ಮಟ್ಟಿಗೆ ಕಲಾಪಕ್ಕೆ ಹಾಜರಾಗಿದ್ದರು. ಆ ವರ್ಷದ ಚಳಿಗಾಲದ ಅಧಿವೇಶನಕ್ಕೆ ಗೈರಾದರು. 2013ರ ಬಜೆಟ್ ಅಧಿವೇಶನದ ಮೊದಲ ಹಾಗೂ ಎರಡನೆಯ ಭಾಗದ ಸಂದರ್ಭದಲ್ಲೂ ಗೈರಾಗಿದ್ದರು. 2014ರಲ್ಲೂ ಅವರ ಹಾಜರಾತಿ ಉತ್ತಮವಾಗಿಲ್ಲ. ಆ ವರ್ಷದ ಚಳಿಗಾಲದ ಅಧಿವೇಶನದ ಉತ್ತರಾರ್ಧ, ವಿಶೇಷ ಅಧಿವೇಶನ ಹಾಗೂ ಬಜೆಟ್ ಅಧಿವೇಶನದ ವೇಳೆ ಅವರು ಗೈರಾಗಿದ್ದರು.

ಸದನದ ಸದಸ್ಯೆಯಾಗಿರುವ ರೇಖಾ ಅವರೂ ಕಲಾಪಗಳಲ್ಲಿ ಆಸಕ್ತಿ ತೋರಿಸದಿರುವುದು ಬೇಸರದ ಸಂಗತಿ. ಇವರ ನೇಮಕ ಆಗಿದ್ದು ಕೂಡ 2012ರ ಏಪ್ರಿಲ್ 27ರಂದು. ಅದಾದ ನಂತರ ನಡೆದ 22 ಅಧಿವೇಶನಗಳ ಪೈಕಿ 18 ದಿನಗಳ ಕಾಲ ಮಾತ್ರ ಅವರು ಕಲಾಪಗಳಿಗೆ ಹಾಜರಾಗಿದ್ದಾರೆ. 2012, 2013 ಮತ್ತು 2014ರಲ್ಲಿ ರೇಖಾ ಅವರು ತಲಾ ಮೂರು ದಿನಗಳ ಕಾಲ ಕಲಾಪಗಳಿಗೆ ಹಾಜರಾಗಿದ್ದಾರೆ. ಈಗ ನಡೆಯುತ್ತಿರುವ ಮುಂಗಾರು ಅಧಿವೇಶನದ ವೇಳೆ ಒಮ್ಮೆ ಮಾತ್ರ ಅವರು ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಆಶ್ಚರ್ಯದ ವಿಚಾರವೆಂದರೆ, ಐದು ವರ್ಷಗಳ ಅವಧಿಯಲ್ಲಿ ಅವರು ಒಂದೇ ಒಂದು ಪ್ರಶ್ನೆ ಕೇಳಿಲ್ಲ.

ತೆಂಡೂಲ್ಕರ್ ಅವರ ಕಳಪೆ ಹಾಜರಾತಿಯ ಬಗ್ಗೆ 2014ರಿಂದಲೂ, ಅಂದರೆ ಅವರ ನೇಮಕ ಆದ ಎರಡು ವರ್ಷಗಳ ನಂತರ, ಮಾಧ್ಯಮಗಳಲ್ಲಿ ಚರ್ಚೆ ನಡೆದಿದೆ. ಮೂರು ವರ್ಷಗಳ ಹಿಂದೆ ಬಜೆಟ್ ಅಧಿವೇಶನ ನಡೆಯುತ್ತಿದ್ದಾಗ ಸಚಿನ್ ಅವರು ಅಲ್ಲಿರದೆ, ವಿಜಯವಾಡದಲ್ಲಿ ಒಂದು ಶಾಪಿಂಗ್ ಮಾಲ್ ಉದ್ಘಾಟನೆ ಮಾಡುತ್ತಿರುವುದು ಕಂಡುಬಂದ ನಂತರ ಅವರ ಹಾಜರಾತಿ ವಿಚಾರ ಮೊದಲ ಬಾರಿಗೆ ಚರ್ಚೆಗೆ ಬಂತು. ಮಾಧ್ಯಮಗಳು ಮಾಡಿದ ಟೀಕೆಗೆ ತೆಂಡೂಲ್ಕರ್ ಅವರು ಸಿಟ್ಟಿನಿಂದ ಪ್ರತಿಕ್ರಿಯಿಸಿದ ಪರಿ 'ನನ್ನನ್ನು ಪ್ರಶ್ನಿಸಲು ನಿಮಗೆಷ್ಟು ಧೈರ್ಯ' ಎಂಬ ಮನೋಭಾವವನ್ನು ಸೂಚಿಸಿದಂತೆ ಇತ್ತು. ಒಂದು ಸಂದರ್ಭದಲ್ಲಿ ಮಾಧ್ಯಮಗಳನ್ನು ನೇರವಾಗಿ ಟೀಕಿಸಿದ ಅವರು, 'ಈಚಿನ ದಿನಗಳಲ್ಲಿ ಮಾಧ್ಯಮಗಳು ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೇಳುತ್ತಿವೆ' ಎಂದರು.

ಅವರ ಕೋಪದ ಪ್ರತಿಕ್ರಿಯೆಗಳನ್ನು ಗಮನದಲ್ಲಿ ಇರಿಸಿಕೊಂಡು ನಾವು ಮಾಸ್ಟರ್ ಬ್ಲಾಸ್ಟರ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕು: ನಿಮ್ಮ ಕಳಪೆ ಸಂಸದೀಯ ಸಾಧನೆ ವಿಚಾರದಲ್ಲಿ ಮಾಧ್ಯಮಗಳು ಏಕೆ ಅಭಿಪ್ರಾಯ ಹೊಂದಬಾರದು? ಮಾಧ್ಯಮಗಳು ನಿಮ್ಮನ್ನು ದೇಶದ ಅತಿದೊಡ್ಡ ಹೀರೊ ಎಂದು ಕೊಂಡಾಡಿದಾಗ, ನಿಮ್ಮ ಮೇಲೆ ಸ್ತುತಿಯ ಮಳೆ ಸುರಿಸಿದಾಗ, ನಿಮಗೆ 'ಭಾರತ ರತ್ನ' ಘೋಷಿಸುವಂತಹ ಪ್ರಭಾವ ಬೀರಿದಾಗ, ರಾಜ್ಯಸಭೆಯ ಸದಸ್ಯತ್ವ ಸಿಗುವಂತಹ ಪ್ರಭಾವ ಬೀರಿದಾಗ ನಿಮಗೆ ಮಾಧ್ಯಮಗಳ ಜೊತೆ ತಕರಾರು ಇರಲಿಲ್ಲ. ಆದರೆ ಕಳಪೆ ಸಂಸದೀಯ ಸಾಧನೆಯ ವಿಚಾರದಲ್ಲಿ ನಿಮ್ಮನ್ನು ನ್ಯಾಯೋಚಿತವಾಗಿ ಪ್ರಶ್ನಿಸುವ ಮಾಧ್ಯಮಗಳ ಹಕ್ಕನ್ನೇ ನೀವೀಗ ಪ್ರಶ್ನಿಸುತ್ತಿದ್ದೀರಿ. ಎರಡನೆಯ ವಿಚಾರವೊಂದಿದೆ. ಇದರ ಬಗ್ಗೆ ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ. ನಿಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಿಸಲು ಸರ್ಕಾರವು ಸಾಂವಿಧಾನಿಕ ಅವಕಾಶಗಳನ್ನೇ ವಿಸ್ತರಿಸಿದೆ. ರಾಜ್ಯಸಭೆಗೆ 12 ಜನರನ್ನು ರಾಷ್ಟ್ರಪತಿ ನಾಮನಿರ್ದೇಶನದ ಮೂಲಕ ನೇಮಕ ಮಾಡಬೇಕು ಎಂದು ಸಂವಿಧಾನದ 80(1)(ಎ) ವಿಧಿ ಹೇಳುತ್ತದೆ. ನಾಮನಿರ್ದೇಶಿತ ಸದಸ್ಯರು 'ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜ ಸೇವಾ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವ ಹೊಂದಿದವರಾಗಿರಬೇಕು' ಎನ್ನುತ್ತದೆ 80(3) ವಿಧಿ.

ಅಂದಹಾಗೆ, ಈ ಪಟ್ಟಿಯಲ್ಲಿ 'ಕ್ರೀಡಾಪಟು'ಗಳ ಬಗ್ಗೆ ಉಲ್ಲೇಖ ಇಲ್ಲ. ನಮ್ಮ ಕಲ್ಪನೆಗಳನ್ನು ಎಷ್ಟೇ ಹಿಗ್ಗಿಸಿಕೊಂಡರೂ, ನಿಮ್ಮನ್ನು ಸಾಹಿತಿ, ವಿಜ್ಞಾನಿ, ಕಲಾವಿದ ಅಥವಾ ಸಮಾಜ ಸೇವಕ ಎಂದು ವರ್ಗೀಕರಿಸಲು ಸಾಧ್ಯವಿಲ್ಲ. ಹೀಗಿದ್ದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು, ಕ್ರಿಕೆಟ್‌ನಲ್ಲಿ ನೀವು ಹೊಂದಿರುವ ಹಿರಿಮೆಯು 2014ರ ಲೋಕಸಭಾ ಚುನಾವಣೆಯ ವೇಳೆ ತನ್ನ ಹೆಸರನ್ನು ತುಸುವಾದರೂ ಉತ್ತಮಪಡಿಸಬಹುದು ಎಂಬ ನಿರೀಕ್ಷೆಯಿಂದ ನಿಮ್ಮನ್ನು ನಾಮನಿರ್ದೇಶನದ ಮೂಲಕ ರಾಜ್ಯಸಭಾ ಸದಸ್ಯರನ್ನಾಗಿಸಿತು. ಆದರೆ ಆ ನಿರೀಕ್ಷೆ ನಿಜವಾಗಲಿಲ್ಲ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಕೆಟ್ಟ ಸೋಲನ್ನು ಅನುಭವಿಸಿತು.

ಎರಡನೆಯ ವಿಚಾರ: 2012ರ ಏಪ್ರಿಲ್‌ನಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶಿತರಾದ ತಕ್ಷಣ ನೀವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದಿರಿ. ಅವರಿಗೆ ಮಾತ್ರ 'ಧನ್ಯವಾದ ಸಮರ್ಪಿಸಬೇಕು', ಇಡೀ ಭಾರತಕ್ಕೆ ಅಲ್ಲ ಎಂದು ನೀವು ಭಾವಿಸಿದ್ದಿರಿ ಎಂಬುದು ಖಚಿತ. ರಾಜಕೀಯದ ಎಲ್ಲೆಗಳನ್ನು ಮೀರಿ ನಿಮಗೆ ಅಭಿಮಾನಿಗಳು ಇದ್ದಾರೆ, ರಾಷ್ಟ್ರದ ಹೀರೊ ಆಗಿ ನಡತೆಯಲ್ಲಿ ಸಮಾನ ಧೋರಣೆಯನ್ನು ಹೊಂದಿರಬೇಕು ಎಂಬುದನ್ನು ನೀವು ಮರೆತಿದ್ದಿರಿ. ಸರ್ಕಾರದ ನಿಜವಾದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರೇ ಆಗಿದ್ದ ಕಾರಣ, ಅವರಿಗೆ ಮಾತ್ರ ವಿಶೇಷ ಗೌರವ ಸಲ್ಲಿಸಿದರೆ ಸಾಕು ಎಂದು ನೀವು ಭಾವಿಸಿದಿರಿ. ಎಲ್.ಕೆ. ಅಡ್ವಾಣಿ, ಲಾಲು ಪ್ರಸಾದ್, ಮಾಯಾವತಿ, ಪ್ರಕಾಶ್ ಕಾರಟ್ ಅಥವಾ ಚಂದ್ರಬಾಬು ನಾಯ್ಡು ಸೇರಿದಂತೆ ಬೇರೆ ಯಾರೂ ನಿಮ್ಮ ಗಣನೆಗೆ ಬರಲಿಲ್ಲ.

'ರಾಜ್ಯಸಭೆಗೆ ನಿರಂತರವಾಗಿ ಅರವತ್ತು ದಿನಗಳ ಕಾಲ ಗೈರಾಗುವಂತೆ ಇಲ್ಲ. ಈ ನಿಯಮವನ್ನು ಸಚಿನ್ ಮುರಿದಿಲ್ಲ. ಅರವತ್ತು ದಿನಗಳ ಗಡುವುದು ಮುಗಿಯುವ ಮೊದಲು ಸಚಿನ್ ಅವರು ಸದನಕ್ಕೆ ಕೆಲ ಹೊತ್ತು ಹಾಜರಾಗುತ್ತಾರೆ' ಎಂದು ನಿಮ್ಮ ಸಮರ್ಥಕರು ಹೇಳುತ್ತಾರೆ. ನಿಮ್ಮ ನಡವಳಿಕೆಗಳ ಮೂಲಕ ನೀವು ಅಗೌರವ ತೋರಿರುವುದು ಸಂಸತ್ತಿಗೆ ಮಾತ್ರವೇ ಅಲ್ಲ, ದೇಶದ ಸಂವಿಧಾನ ನಿರ್ಮಾತೃಗಳನ್ನೂ ಅಗೌರವದಿಂದ ಕಂಡಿದ್ದೀರಿ. ರಾಜ್ಯಸಭೆಗೆ ನಾಮನಿರ್ದೇಶನದ ಮೂಲಕ ನೇಮಕಗೊಂಡ ಇನ್ನೊಬ್ಬ ಸದಸ್ಯ ಜಾವೆದ್ ಅಖ್ತರ್ ಅವರು ಒಮ್ಮೆ ಹೇಳಿದಂತೆ, ನಾಮನಿರ್ದೇಶನ ಎಂಬುದು ಮನೆಗೆ ಕೊಂಡೊಯ್ಯಬಹುದಾದ ಟ್ರೋಫಿ ಅಲ್ಲ. ದೇಶದ 130 ಕೋಟಿ ಜನರಿಗೆ ಉತ್ತರದಾಯಿ ಆಗುವ ದೊಡ್ಡ ಹೊಣೆ ಕೂಡ ಈ ಸದಸ್ಯತ್ವದ ಜೊತೆ ಬರುತ್ತದೆ.

ರಾಜ್ಯಸಭಾ ಸದಸ್ಯರಾಗುವ ಮೂಲಕ ಸಂಸತ್ತಿಗೆ ಉಪಕಾರ ಮಾಡುತ್ತಿದ್ದೀರೇನೋ ಎಂಬ ಭಾವನೆ ನಿಮ್ಮ ವರ್ತನೆಗಳಿಂದಾಗಿ ಮೂಡುತ್ತದೆ. 'ಭಾರತ ರತ್ನ'ಕ್ಕೆ ಪಾತ್ರರಾದವರು ಸಂಸತ್ತಿಗೆ ಈ ಮಟ್ಟದಲ್ಲಿ ಅಗೌರವ ತೋರಬಾರದು. ಕ್ರಿಕೆಟ್ಟಿನ ದಾಖಲೆಗಳನ್ನು ಪುಡಿಗಟ್ಟಿದ ನಿಮ್ಮ ಸಾಧನೆಯನ್ನು ಕೊಂಡಾಡುವ ಈ ಲೇಖಕ ಸೇರಿದಂತೆ ಕೋಟ್ಯಂತರ ಭಾರತೀಯರು ಸಂಸತ್ತಿನ ಬಗ್ಗೆ ನೀವು ಹೊಂದಿರುವ ಧೋರಣೆಯಿಂದಾಗಿ ಬೇಸರಗೊಂಡಿದ್ದಾರೆ. ಸಂಸತ್ತು ಎಂಬ ಸಂಸ್ಥೆಯ ಬಗ್ಗೆ ಎಲ್ಲರೂ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ತಮ್ಮ ಹೀರೊ ತನ್ನನ್ನು ಸಮರ್ಥಿಸಿಕೊಳ್ಳಲಾಗದ ಸ್ಥಿತಿಗೆ ತಲುಪುವುದನ್ನು, ಹೀರೊ ಬಗ್ಗೆ ಮಾಧ್ಯಮಗಳಲ್ಲಿ ವಿರೋಧ ವ್ಯಕ್ತವಾಗುವುದನ್ನು ಅಭಿಮಾನಿಗಳು ತಾಳಲಾರರು. ಸಂಸತ್ತಿನಲ್ಲಿ ಕೆಲಸ ಮಾಡುವಷ್ಟು ಸಮಯ ಹಾಗೂ ಕೆಲಸ ಮಾಡುವ ಮನಸ್ಸು ನಿಮಗೆ ಇಲ್ಲದಿರುವ ಕಾರಣ, ದೇಶದ ಜನರ ಪ್ರೀತಿಯನ್ನು ಮತ್ತೆ ಗೆದ್ದುಕೊಳ್ಳುವಂತಹ, 'ಭಾರತ ರತ್ನ'ಕ್ಕೆ ಸೂಕ್ತವಾದ ಘನತೆ ಪಡೆಯುವಂತಹ ನಿರ್ಧಾರವನ್ನು ನೀವು ಕೈಗೊಳ್ಳಬೇಕು. ತೀರ್ಮಾನ ಈಗ ನಿಮ್ಮ ಕೈಯಲ್ಲಿದೆ.

ಈ ಮಾತು ಯಥೋಚಿತವಾಗಿ, ಯಥಾ ಯುಕ್ತವಾಗಿ (mutatis mutandis) ರೇಖಾ ಅವರಿಗೂ ಅನ್ವಯವಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry