ಆಯ್ಕೆಗಳು

7

ಆಯ್ಕೆಗಳು

ಗುರುರಾಜ ಕರ್ಜಗಿ
Published:
Updated:

ಡಾ. ಬೋಸ್ ಅವರು ಅರ್ಥಶಾಸ್ತ್ರದ ಪ್ರಖ್ಯಾತ ಪ್ರಾಧ್ಯಾಪಕರು. ಅವರು ವಿಶ್ವವಿದ್ಯಾಲಯದ ಘನತೆಯನ್ನು ವಿಶ್ವದಾದ್ಯಂತ ಹರಡಿಸಿದವರು. ಅವರ ವಿದ್ಯಾರ್ಥಿಗಳಾಗುವುದೇ ಜೀವನದ ಬಹುದೊಡ್ಡ ಅವಕಾಶವೆಂದು ವಿದ್ಯಾರ್ಥಿಗಳು ಭಾವಿಸಿದ್ದರು. ಅವರು ಪಾಠ ಮಾಡುವ ರೀತಿಯೇ ಬೇರೆ. ಪಠ್ಯಪುಸ್ತಕವನ್ನು ಓದಿ ಪ್ರಶ್ನೆಗಳನ್ನು ಬಿಡಿಸುವ ಸಾಧಾರಣ ಉಪನ್ಯಾಸಕರಾಗಿರಲಿಲ್ಲ.   ಅವರ ತರಗತಿಯೇ ಒಂದು ಚರ್ಚಾಸ್ಪರ್ಧೆಯಂತಿರುತ್ತಿತ್ತು. ತರಗತಿಯ ವಿದ್ಯಾರ್ಥಿಗಳೆಲ್ಲ ಮೊದಲೇ ಸಿದ್ಧತೆ ಮಾಡಿಕೊಂಡು ಬರಬೇಕಿತ್ತು. ತಮಗರಿವಿಲ್ಲದಂತೆ ವಿದ್ಯಾರ್ಥಿಗಳು ಹೆಚ್ಚಿನ ಚಿಂತನೆಗೆ ತೊಡಗುತ್ತಿದ್ದರು. ವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿತ್ತು. ಎಲ್ಲರೂ ಶ್ರಮವಹಿಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಪರೀಕ್ಷೆ ಇನ್ನೊಂದು ವಾರವಿದೆ ಎಂದಾಗ ಡಾ. ಬೋಸ್ ತಮ್ಮ ವಿದ್ಯಾರ್ಥಿಗಳಿಗೆ ಹೇಳಿದರು, ನಾನು ನಿಮಗೆ ಬರುವ ಸೋಮವಾರ ಇನ್ನೊಂದು ಪರೀಕ್ಷೆ ಕೊಡುತ್ತೇನೆ. ನನ್ನ ದೃಷ್ಟಿಯಲ್ಲಿ ಇದು ನಿಮ್ಮ ಕೊನೆಯ ವಾರ್ಷಿಕ ಪರೀಕ್ಷೆಗಿಂತ ಮುಖ್ಯವಾದದ್ದು. ಇದರ ವಿಶೇಷವೆಂದರೆ, ನೀವು ಉತ್ತರ ಬರೆಯುವುದನ್ನು ಮುಗಿಸಿದ ಕೇವಲ ಹತ್ತು ನಿಮಿಷಗಳಲ್ಲಿ ಅವುಗಳ ಮೌಲ್ಯಮಾಪನ ಮಾಡಿ ಬಿಡುತ್ತೇನೆ. ವಿದ್ಯಾರ್ಥಿಗಳಿಗೆ ಅಚ್ಚರಿ. ಅರ್ಥಶಾಸ್ತ್ರದ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಲು ತುಂಬ ಸಮಯಬೇಕು. ಡಾ. ಬೋಸ್ ಹೇಳಿದ್ದಾರೆಂದ ಮೇಲೆ ಏನಾದರೂ ವಿಶೇಷವಿರಲೇಬೇಕು ಎಂದು ನಂಬಿ ಸಿದ್ಧರಾದರು. ಸೋಮವಾರ ಬಂದಿತು. ಡಾ. ಬೋಸ್ ಅವರು ಬಂದು ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಿಸಿದರು. ಈ ಪ್ರಶ್ನೆಪತ್ರಿಕೆಯಲ್ಲಿ ನಾಲ್ಕು ವಿಭಾಗಗಳು. ಪ್ರತಿಯೊಂದು ವಿಭಾಗದಲ್ಲಿ ಮೂರು ಪ್ರಶ್ನೆಗಳು. ಮೊದಲನೇ ಪ್ರಶ್ನೆ ಮೂಲಭೂತವಾಗಿದ್ದು ಅತ್ಯಂತ ಕಷ್ಟದ್ದಾಗಿತ್ತು. ಅದಕ್ಕೆ ಐವತ್ತು ಅಂಕಗಳು. ಎರಡನೇ ಪ್ರಶ್ನೆ ಕಷ್ಟದ್ದೆೀ ಆದರೂ ಮೊದಲಿನಷ್ಟಿಲ್ಲ. ಅದಕ್ಕೆ ಅಂಕಗಳು ಇಪ್ಪತ್ತು. ಮೂರನೇ ಪ್ರಶ್ನೆ ಸುಲಭವಾಗಿತ್ತು. ಅದಕ್ಕೆ ಹತ್ತು ಅಂಕಗಳು. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಶ್ನೆಪತ್ರಿಕೆಯ ನಾಲ್ಕು ವಿಭಾಗಗಳಲ್ಲಿ ಒಂದೊಂದು ಪ್ರಶ್ನೆ ಆರಿಸಿಕೊಂಡು ಉತ್ತರ ಬರೆಯಬೇಕಿತ್ತು.

ವಿದ್ಯಾರ್ಥಿಗಳು ತಮ್ಮ ತಮ್ಮ ಶಕ್ತಿಗಳಿಗೆ ಅನುಸಾರ ಪ್ರಶ್ನೆಗಳನ್ನು ಆಯ್ದುಕೊಂಡು ಉತ್ತರಗಳನ್ನು ಬರೆದರು. ಉತ್ತರ ಪತ್ರಿಕೆಗಳನ್ನು ಡಾ. ಬೋಸರಿಗೆ ಕೊಡಲು ಹೋದಾಗ ಅವರು ನಿಮ್ಮ ಉತ್ತರ ಪತ್ರಿಕೆ ನಿಮ್ಮಲ್ಲೇ ಇರಲಿ. ನಾನು ಹೇಳಿದಂತೆ ಹತ್ತು ನಿಮಿಷದಲ್ಲಿ ಮೌಲ್ಯಮಾಪನ ನಡೆದುಹೋಗುತ್ತದೆ. ಅದಲ್ಲದೇ ಮೌಲ್ಯಮಾಪನ ಮಾಡುವವರೂ ನೀವೇ ಎಂದರು. ಆಶ್ಚರ್ಯಪಡುತ್ತಿದ್ದ ವಿದ್ಯಾರ್ಥಿಗಳನ್ನು ನೋಡಿ ಮತ್ತೆ ನುಡಿದರು. ಯಾರು ಪ್ರತಿ ವಿಭಾಗದ ಮೊದಲನೇ ಪ್ರಶ್ನೆಗೆ ಉತ್ತರ ಬರೆದಿದ್ದೀರೋ ಅದಕ್ಕೆ ಪ್ರತಿಯೊಂದಕ್ಕೂ ಐವತ್ತು ಅಂಕ ಹಾಕಿ, ಎರಡನೇ ಪ್ರಶ್ನೆಗೆ ಉತ್ತರಿಸಿದವರು ಪ್ರತಿ ಪ್ರಶ್ನೆಗೆ ಇಪ್ಪತ್ತು ಅಂಕ ಹಾಕಿ, ಕೊನೆಗೆ ಕೇವಲ ಮೂರನೇ ಪ್ರಶ್ನೆಯನ್ನು ಉತ್ತರಿಸಿದವರು ಒಂದೊಂದಕ್ಕೆ ಹತ್ತು ಅಂಕ ಹಾಕಿ. ಮೊದಲನೆ ಪ್ರಶ್ನೆಯನ್ನು ಪ್ರಯತ್ನಿಸಿದವರಿಗೆಲ್ಲ ಎ ಗ್ರೇಡ್. ಎರಡನೇ ಪ್ರಶ್ನೆ ಬಿಡಿಸಿದವರಿಗೆ ಬಿ ಗ್ರೇಡ್ ಕೊನೆಯ ಪ್ರಶ್ನೆಗೆ ಪ್ರಯತ್ನಿಸಿದವರಿಗೆ ಸಿ ಗ್ರೇಡ್. ವಿದ್ಯಾರ್ಥಿಗಳು, ಸಾರ್, ಉತ್ತರಗಳನ್ನು ನೋಡದೇ ಗ್ರೇಡು ಕೊಡುವುದು ಹೇಗೆ ಎಂದು ಕೇಳಿದಾಗ ಡಾ. ಬೋಸ್ ಹೇಳಿದರು. ನಾನು ನಿಮ್ಮ ಅರ್ಥಶಾಸ್ತ್ರವನ್ನು ಪರೀಕ್ಷಿಸುತ್ತಿಲ್ಲ. ನಿಮ್ಮ ಮನೋಧರ್ಮ ಪರೀಕ್ಷಿಸುತ್ತಿದ್ದೆ. ಜೀವನದಲ್ಲಿ ಬರೀ ಸುಲಭದ ಆಯ್ಕೆಗಳನ್ನು ಮಾಡಿಕೊಳ್ಳುವವರು ಎತ್ತರಕ್ಕೆ ಏರಲಾರರು. ನಾನು ನಿಮಗೆ ಇಷ್ಟು ವರ್ಷ ತರಬೇತಿ ನೀಡಿದ್ದು ನಿಮ್ಮ ಧೈರ್ಯದಿಂದ, ದೂರದೃಷ್ಟಿಯಿಂದ ಆಕಾಶ ಮುಟ್ಟುವ ಉತ್ಸಾಹ ತುಂಬಲು, ಕೇವಲ ಸುಲಭದ ಆಯ್ಕೆಗಳಿಂದ ನೌಕರಿ ಪಡೆಯುವದಕ್ಕಲ್ಲ. ಸುಲಭದ ಆಯ್ಕೆಗಳು ಸಂಬಳ ಕೊಡಬಹುದು. ಜೀವನಕ್ಕೊಂದು ದಾರಿ ನೀಡಬಹುದು. ಆದರೆ, ನಾವೇ ಆರಿಸಿಕೊಂಡ ಕಷ್ಟದ ಆಯ್ಕೆಗಳು ನಮ್ಮನ್ನು ನಾಯಕರನ್ನಾಗಿ ಮಾಡುತ್ತವೆ. ಮತ್ತೊಬ್ಬರಿಗೆ ಮಾದರಿಯನ್ನಾಗಿ ಮಾಡುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry