ಆರೋಗ್ಯ ವ್ಯವಸ್ಥೆ ಖಾಸಗೀಕರಣ-ಸಾಧನೆಯೋ ಅಸಮಾನತೆ ಸಂಕೇತವೊ...

7

ಆರೋಗ್ಯ ವ್ಯವಸ್ಥೆ ಖಾಸಗೀಕರಣ-ಸಾಧನೆಯೋ ಅಸಮಾನತೆ ಸಂಕೇತವೊ...

ಆರ್. ಇಂದಿರಾ
Published:
Updated:
ಆರೋಗ್ಯ ವ್ಯವಸ್ಥೆ ಖಾಸಗೀಕರಣ-ಸಾಧನೆಯೋ ಅಸಮಾನತೆ ಸಂಕೇತವೊ...

ಯಾವುದೇ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ಪ್ರಜೆಗಳಿಗೂ ಅಗತ್ಯ ಬಿದ್ದಾಗ ಆರೋಗ್ಯ ರಕ್ಷಕ ಸೇವೆಗಳು ಲಭ್ಯವಾಗಬೇಕೆಂಬುದು ಸಾರ್ವತ್ರಿಕ ಸ್ವೀಕೃತಿಯಿರುವ ಸತ್ಯ. ಆದರೆ ಭಾರತದ ಮಟ್ಟಿಗೆ ಇದು ಇಂದಿಗೂ ನಿಜವಾಗಿಲ್ಲ.

ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಪ್ರಾದೇಶಿಕ ಹಿನ್ನೆಲೆ, ಲಿಂಗ ಅಥವಾ ಸಾಮಾಜಿಕ ಸ್ಥಾನ ಮುಂತಾದ ಅಂಶಗಳು ಇಂದಿಗೂ ಯಾರಿಗೆ ಯಾವ ಗುಣಮಟ್ಟದ ಆರೋಗ್ಯ ಸೇವೆಗಳು ದೊರೆಯುತ್ತವೆ ಅಥವಾ ದೊರೆಯುವುದಿಲ್ಲ ಎಂಬುದನ್ನು ನಿರ್ಧರಿಸುತ್ತಿವೆ.

ದೇಶದ ಎಲ್ಲೆಡೆ ಏಕಸ್ವರೂಪದ ಸಾರ್ವತ್ರಿಕ ಆರೋಗ್ಯ ರಕ್ಷಕ ಸೇವೆಗಳು ಲಭ್ಯವಿರದ ಕಾರಣ ಇಂದಿಗೂ ಬಡವರು, ಗ್ರಾಮೀಣ ಸಮುದಾಯಗಳು, ಮಹಿಳೆಯರು ಮತ್ತು ಮಕ್ಕಳು ಅತ್ಯಾವಶ್ಯಕ ಆರೋಗ್ಯ ರಕ್ಷಕ ಸೇವೆಗಳನ್ನು ಪ್ರಯೋಜನವನ್ನು ಪಡೆಯುವಲ್ಲಿ ಸೋತಿದ್ದಾರೆ.ಆರ್ಥಿಕ ಉದಾರೀಕರಣದ ಯುಗ ಆರಂಭವಾದ ಮೇಲೆ ಭಾರತ ಕಂಡ ಗಮನಾರ್ಹ-ಗೋಚರ ಬದಲಾವಣೆಗಳಲ್ಲಿ ಒಂದು, ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಗುಣಮಟ್ಟದಲ್ಲಿ ಉಂಟಾದ ಏರಿಕೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾದ ಅದ್ಭುತ ಬದಲಾವಣೆಗಳ ಪೂರ್ಣ ಪ್ರಯೋಜನವನ್ನು ಪಡೆದ ವೈದ್ಯಕೀಯ ವ್ಯವಸ್ಥೆ ಭಾರತವನ್ನು ಗುಣಮಟ್ಟದ ಆರೋಗ್ಯ ರಕ್ಷಕ ಸೇವೆಗಳನ್ನು ಒದಗಿಸುವ ದೇಶಗಳ ಸಾಲಿಗೆ ಸೇರಿಸಿತು ನಿಜ. ಆದರೆ ಈ ಬೆಳವಣಿಗೆಯ ಬಹುಪಾಲು ಪ್ರಯೋಜನವನ್ನು ಪಡೆದದ್ದು ಖಾಸಗಿ ಬಂಡವಾಳಶಾಹಿ ವಲಯ.ಒಂದು ಮಾಹಿತಿಯ ಮೂಲದ ಪ್ರಕಾರ ದೇಶದಲ್ಲಿ ಶೇಕಡ 80ರಷ್ಟು ವೈದ್ಯರು, ಶೇಕಡ 26ರಷ್ಟು ದಾದಿಯರು, ಶೇಕಡ 40ರಷ್ಟು ಹಾಸಿಗೆಗಳು ಮತ್ತು ಶೇಕಡ 70ರಷ್ಟು ತುರ್ತು ಚಿಕಿತ್ಸಾ ವಾಹನಗಳು ಲಭ್ಯವಿರುವುದು ಖಾಸಗಿ ಆರೋಗ್ಯ ರಕ್ಷಕ ವ್ಯವಸ್ಥೆಯಲ್ಲಿ.ಸಹಜವಾಗಿಯೇ ಶೇಕಡ 60ರಷ್ಟು ಒಳರೋಗಿಗಳು ದಾಖಲಾಗುತ್ತಿರುವುದು ಖಾಸಗಿ ಆರೋಗ್ಯ ಸೇವಾ ಕೇಂದ್ರಗಳಲ್ಲಿ. ಜನಸಂಖ್ಯೆ ಬೆಳೆಯುತ್ತಾ ಹೋದ ಹಾಗೆಲ್ಲ ಸರ್ಕಾರಿ ವೈದಕೀಯ ಸೇವೆಗಳಷ್ಟೇ ಎಲ್ಲ ಜನರ ಆರೋಗ್ಯ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎನ್ನುವುದು ಒಪ್ಪಬೇಕಾದ ಸಂಗತಿಯೇ.

ಈ ಕಾರಣದಿಂದಲೇ ಯೋಜನಾ ಆಯೋಗವೇ ಖಾಸಗಿ-ಸಾರ್ವಜನಿಕ ಕ್ಷೇತ್ರಗಳ ಸಹಭಾಗಿತ್ವವನ್ನು ಪ್ರತಿಪಾದಿಸಿದೆ. ಆದರೆ ಇಂತಹುದೊಂದು ಪರಿಸ್ಥಿತಿ ಇದುವರೆಗೂ ನಮ್ಮ ದೇಶದಲ್ಲಿ  ಸೃಷ್ಟಿಯಾಗಿಲ್ಲ.  ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆಯೂ ಆರೋಗ್ಯ ರಕ್ಷಣಾ ಸೇವೆಗಳ ಲಭ್ಯತೆಯಲ್ಲಿ ಗಮನಾರ್ಹವಾದ ವ್ಯತ್ಯಾಸವಿದೆ.ನಗರ ಪ್ರದೇಶಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ನಾಲ್ಕು ಪಟ್ಟು ಹೆಚ್ಚಿನ ವೈದ್ಯರೂ, ಮೂರು ಪಟ್ಟು ಹೆಚ್ಚು ದಾದಿಯರೂ ಇದ್ದಾರೆ. ಆದರೆ ನಮ್ಮ ದೇಶದಲ್ಲಿ ನಗರ ಜನಸಂಖ್ಯೆಯ ಶೇಕಡ 27.8 ಮತ್ತು ಗ್ರಾಮೀಣ ಜನತೆ ಶೇಕಡ 72.18 ರಷ್ಟು ಇದ್ದಾರೆ. ಇಂದಿಗೂ ದೇಶದ ಅರ್ಧದಷ್ಟು ಗ್ರಾಮಗಳಿಗೆ ಸೂಕ್ತ ವೈದ್ಯಕೀಯ ಸೇವೆಗಳ ಲಭ್ಯತೆ ಇಲ್ಲದಂಥ ಪರಿಸ್ಥಿತಿಯಿದೆ.ಆರೋಗ್ಯ ರಕ್ಷಣೆಗೆ ಅಗತ್ಯವಾದ ಸುರಕ್ಷಿತ ಶೌಚಾಲಯಗಳು, ಪರಿಶುದ್ಧ ಕುಡಿಯುವ ನೀರು, ವಾಸಯೋಗ್ಯವಾದ ವಸತಿ ಸೌಕರ್ಯ ಮುಂತಾದ ಸೌಲಭ್ಯಗಳಿಂದಲೂ ಗ್ರಾಮೀಣ ಜನತೆ ದೇಶದ ವಿವಿಧ ಭಾಗಗಳಲ್ಲಿ, ವಿವಿಧ ಪ್ರಮಾಣಗಳಲ್ಲಿ ವಂಚಿತರಾಗಿರುವುದರಿಂದ ಅವರನ್ನು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತವೆ.

ಒಂದೆಡೆ ನಗರಗಳಲ್ಲಿ ಬೆಳೆಯುತ್ತಿರುವ ಐಷಾರಾಮಿ ಆಸ್ಪತ್ರೆಗಳು, ಆರೋಗ್ಯ ಸೇವಾ ಕೇಂದ್ರಗಳು, ವ್ಯಾಯಾಮ ಶಾಲೆಗಳು, ಸೌಂದರ್ಯ ರಕ್ಷಣಾ ತಾಣಗಳು, ಮತ್ತೊಂದೆಡೆ ಸುಮಾರು ಅರ್ಧದಷ್ಟು ಗ್ರಾಮೀಣ ಜನತೆ ಇಂದಿಗೂ ತೆರೆದ ಸ್ಧಳಗಳನ್ನು ಬಹಿರ್ದೆಶೆಗಾಗಿ ಉಪಯೋಗಿಸುವಂಥ ಸ್ಥಿತಿಯಲ್ಲಿರುವುದು - ಇದು ಈ ಸಮಾಜದ ವೈರುಧ್ಯ, ಅಸಮತೆಯ ಕರಾಳ ಮುಖದರ್ಶನ.ಕಾಲದಿಂದ ಕಾಲಕ್ಕೆ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಸರ್ಕಾರಿ ಮೂಲದ ಹಣ ತೊಡಗಿಸುವಿಕೆ ಕಡಿಮೆಯಾಗುತ್ತಾ ಹೋದದ್ದರಿಂದ ಆರ್ಥಿಕ ಅನುಕೂಲಗಳನ್ನು ಪಡೆಯದ ಒಂದು ಇಡೀ ವರ್ಗವೇ ಉತ್ಕೃಷ್ಟ ಹಾಗೂ ಸುರಕ್ಷಿತ ವೈದಕೀಯ ನೆರವನ್ನು ಪಡೆಯಲಾಗುತ್ತಿಲ್ಲವಷ್ಟೆ. ಭಾರತದ ಸಾರ್ವಜನಿಕ ವೆಚ್ಚದಲ್ಲಿ ಒಟ್ಟು ದೇಶಿಯ ಉತ್ಪನ್ನದಲ್ಲಿ ಆರೋಗ್ಯ ಸೇವೆಗಳಿಗೆ ನಿಗದಿಯಾಗಿರುವ ಪ್ರಮಾಣ ಶೇಕಡ 1 ರಷ್ಟು ಮಾತ್ರ.

ಈ ಮಾಪಕವನ್ನು ತೆಗೆದುಕೊಂಡಾಗ ನಮ್ಮ ದೇಶ ಹೆಚ್ಚು ಕಡಿಮೆ ಇತರ ಎಲ್ಲ ದೇಶಗಳಿಗಿಂತ ತಳದಲ್ಲಿರುವುದು ಕಂಡು ಬರುತ್ತದೆ. ಭಾರತದಲ್ಲಿ ಆರೋಗ್ಯ ರಕ್ಷಣೆಯ ಮೇಲೆ ಜನರು ವ್ಯಯ ಮಾಡುವ ಹಣದಲ್ಲಿ ಶೇಕಡ 70ರಷ್ಟು ಅವರ ಸ್ವಂತ ಸಂಪನ್ಮೂಲಗಳಿಂದ ಆಗುವಂತಹುದು.

ಇದರಲ್ಲಿ ಶೇಕಡ 70ರಷ್ಟು ಔಷಧಗಳ ಮೇಲೆ ವ್ಯಯವಾಗುತ್ತಿದ್ದು, ಸುಭದ್ರ ಆದಾಯ ಮೂಲಗಳಿಲ್ಲದವರಿಗೆ ಈ ಖರ್ಚು ದೊಡ್ಡ ಹೊರೆಯಾಗುತ್ತಿದೆ ಎಂದೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಮುಕ್ಕಾಲು ಭಾಗಕ್ಕೆ ಯಾವುದೇ ಬಗೆಯ ಆರೋಗ್ಯ ವಿಮೆಯ ಸೌಲಭ್ಯವಿಲ್ಲದಿರುವುದರಿಂದ ವೈದ್ಯಕೀಯ ವೆಚ್ಚಗಳನ್ನು ಅವರು ತಮ್ಮ ಸ್ವಂತ ಸಂಪನ್ಮೂಲಗಳಿಂದಲೇ ಭರಿಸಬೇಕು.ಹನ್ನೆರಡನೇ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ಆರೋಗ್ಯ ವೆಚ್ಚ ಒಟ್ಟು ದೇಶಿಯ ಉತ್ಪನ್ನದಲ್ಲಿ ಶೇಕಡ 2.5 ರಷ್ಟಾದರೂ ಆಗಬೇಕೆಂಬ ಆಶಯವನ್ನು  ಸಾರ್ವತ್ರಿಕ ಆರೋಗ್ಯ ಹರವನ್ನು (Universal Health Coverage)) ಕುರಿತಂತೆ ಸಲಹೆಗಳನ್ನು ನೀಡಲು ರಚಿತವಾದ ಸಮಿತಿ ವ್ಯಕ್ತಪಡಿಸಿದೆ.

ಈಗಾಗಲೇ ಬ್ರೆಜಿಲ್, ಮೆಕ್ಸಿಕೊ ಮುಂತಾದ ದೇಶಗಳು ಅರ್ಥಪೂರ್ಣ ಅಭಿವೃದ್ಧಿಗೆ ಸಾರ್ವತ್ರಿಕ ಆರೋಗ್ಯ ಹರವನ್ನು ಸಾಧಿಸುವುದು ಅನಿವಾರ್ಯ ಎಂಬುದನ್ನು ಮನಗಂಡು ಆ ನಿಟ್ಟಿನಲ್ಲಿ ಕಾರ್ಯಗತವಾಗಿವೆ. ಆದರೆ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆ ಏಕೆ ಸಮಾಜದ ಅಂಚಿನಲ್ಲಿರುವ ವರ್ಗಗಳ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸಲು ವಿಫಲವಾಗುತ್ತಿದೆ?ಭಾರತದಲ್ಲಿ ಸ್ವಾತಂತ್ರ್ಯಾನಂತರದಲ್ಲಿ ಬಹುಕಾಲ ಆರೋಗ್ಯ ರಕ್ಷಣೆ ಸರ್ಕಾರದ ಪ್ರಧಾನ ಆದ್ಯತೆಗಳಲ್ಲಿ ಸೇರಿರಲಿಲ್ಲ ಎನ್ನುವುದು ಒಂದು ಕಠೋರ ಸತ್ಯ. 1982-83ರವರೆಗೂ ರಾಷ್ಟ್ರೀಯ ಆರೋಗ್ಯ ನೀತಿಗೆ ಸಂಸತ್ತಿನ ಬೆಂಬಲ ದೊರೆಯಲಿಲ್ಲ.

ಸುಮಾರು ಎರಡು ದಶಕಗಳ ನಂತರ ರೂಪಿತವಾದ ರಾಷ್ಟ್ರೀಯ ಆರೋಗ್ಯ ನೀತಿ ಭಾರತದಲ್ಲಿ ಆರೋಗ್ಯ ಕ್ಷೇತ್ರಕ್ಕೆ ನಿಗದಿಯಾಗಿರುವ ಪಾಲು ತೀರಾ ಕಡಿಮೆ ಪ್ರಮಾಣದಲ್ಲಿದ್ದು, ಸಾರ್ವಜನಿಕ ಆರೋಗ್ಯ ಕ್ಷೇತ್ರದ ಗುಣಮಟ್ಟವನ್ನು ಹೆಚ್ಚಿಸಲು ಸಕಲ ಪ್ರಯತ್ನಗಳನ್ನು ಮಾಡಬೇಕು ಎಂದು ಸೂಚಿಸಿತ್ತು.

ಆದರೆ ಇದುವರೆಗೂ ಬಹುತೇಕ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯದ ವಿಚಾರದಲ್ಲಾಗಲಿ, ಔಷಧಗಳ ಲಭ್ಯತೆಯನ್ನು ಹೆಚ್ಚಿಸುವುದರಲ್ಲಾಗಲಿ ಗಮನಾರ್ಹವಾದ ಬದಲಾವಣೆಗಳು ಕಂಡು ಬಂದಿಲ್ಲ ಎನ್ನುವುದು, ಏಕೆ ಬಡವರೂ ಸೇರಿದಂತೆ ಅತ್ಯಧಿಕ ಸಂಖ್ಯೆಯ ಜನರು ಖಾಸಗಿ ವೈದ್ಯಕೀಯ ಸೇವೆಗಳತ್ತ ಧಾವಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.ಆರ್ಥಿಕ ಉದಾರೀಕರಣದ ಯುಗ ಪ್ರಾರಂಭವಾದ ಸುಮಾರು ಹತ್ತು ವರ್ಷಗಳ ಒಳಗೆ ದೇಶದ ಶ್ರಿಮಂತರು ಹೆಚ್ಚು ಹೆಚ್ಚು ಖಾಸಗಿ ಆರೋಗ್ಯ ರಕ್ಷಕ ವಲಯದತ್ತ ಸರಿಯತೊಡಗಿದರು. ಬಡ ಜನತೆಗೆ ಸರ್ಕಾರಿ ವ್ಯವಸ್ಥೆಯನ್ನೆ ಅವಲಂಬಿಸಬೇಕಾದ ಅನಿವಾರ್ಯತೆಯಿತ್ತು.

ಮಾನವ ಸಂಬಂಧಗಳು ಶ್ರಿಮಂತರಿಗಾಗಲಿ ಬಡವರಿಗಾಗಲಿ ಒಂದೇ ಆದರೂ ದುಬಾರಿ ಔಷಧಿಗಳನ್ನು ಕೊಳ್ಳಲಾಗಲಿ, ಸುರಕ್ಷಿತ ಆಸ್ಪತ್ರೆ ವಾಸಕ್ಕೆ ತಗಲುವ ವೆಚ್ಚವನ್ನು ಭರಿಸಲಾಗಲಿ ಆಗದ ಸ್ಥಿತಿಯಲ್ಲಿದ್ದ ಎಷ್ಟೋ ಮಂದಿ ತಮ್ಮ ಕುಟುಂಬದ ಸದಸ್ಯರನ್ನೋ ನೆರೆಹೊರೆಯವರನ್ನೋ ಕಳೆದುಕೊಂಡಿರುವಂಥ ನಿದರ್ಶನಗಳು ನಮ್ಮಲ್ಲಿವೆ.

ಈ ಪ್ರಕರಣಗಳೆಲ್ಲ ತಡೆಯಬಹುದಾಗಿದ್ದ ಸಾವುಗಳ ಸಾಲಿಗೆ ಸೇರುತ್ತವೆ. ಇಂಥ ಅಸಹಾಯಕ ಸ್ಥಿತಿಗೆ ಅವರನ್ನು ತಳ್ಳಿದ್ದಕ್ಕೆ ಹೊಣೆ ಹೊತ್ತುಕೊಳ್ಳುವವರು ಯಾರು?

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಶೇಕಡ 25ರಷ್ಟು ರೋಗಗಳಿಗೆ ಚಿಕಿತ್ಸೆ ದೊರೆಯುತ್ತಿಲ್ಲ, ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂದರೆ ದೇಶದ ಅನೇಕ ಪ್ರದೇಶಗಳಲ್ಲಿ ಇಂಥ ವ್ಯಾಧಿಗಳಿಗೆ ಚಿಕಿತ್ಸೆ ನೀಡಲು ಅಥವಾ ತಡೆಗಟ್ಟಲು ಅವಶ್ಯವಾದ ಔಷಧಿಗಳು ಸುಲಭ ಬೆಲೆಗಳಲ್ಲಿ ದೊರೆಯುತ್ತಿಲ್ಲ ಎನ್ನುವುದು.

ಶ್ರಿಮಂತರಿಗೆ ಅಥವಾ ಮಧ್ಯಮ ವರ್ಗದವರಿಗೆ ಅಗತ್ಯ ಔಷಧಿ ಎಷ್ಟೇ ದುಬಾರಿಯಾಗಲಿ, ಅದನ್ನು ಕೊಳ್ಳುವ ಶಕ್ತಿ ಇರುತ್ತದೆ. ಆದರೆ ಮಾರಣಾಂತಿಕವಲ್ಲದ ವ್ಯಾಧಿಯನ್ನು ತಡೆಗಟ್ಟಲು ಅಥವಾ ಸೂಕ್ತ ಔಷಧವನ್ನು ಕೊಟ್ಟು ರೋಗವನ್ನು ನಿವಾರಿಸಲು  ಕೊಳ್ಳುವ ಶಕ್ತಿಯಿಂದ ವಂಚಿತರಾದವರು ಏನು ಮಾಡಬೇಕು?ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಮತ್ತೊಂದು ದುರಂತವೆಂದರೆ ಅನೇಕ ಖಾಸಗಿ ವೈದ್ಯರು ದುಬಾರಿ ಮತ್ತು ಎಷ್ಟೋ ಬಾರಿ  ಅನವಶ್ಯಕ  ಔಷಧಿಗಳನ್ನು ಬೇರೆ ತಮ್ಮ ಬಳಿ ಬರುವ ರೋಗಿಗಳಿಗೆ ತೆಗೆದುಕೊಳ್ಳಲು ಸೂಚಿಸುತ್ತಿರುವುದು. ಇಂಥ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹೇಳಿಕೊಳ್ಳುವುದೂ ಕೂಡ ಈ ಸಮಾಜದಲ್ಲಿ ಅಂತಸ್ತಿನ ಸಂಕೇತವೆಂದು ಪರಿಗಣಿಸಲಾಗುತ್ತಿದೆ.

ಇದೆಂಥಾ ವಿಪರ್ಯಾಸ? ಒಂದೆಡೆ ಜೀವ ರಕ್ಷಕ ಔಷಧಿಗಳನ್ನೂ ಕೊಳ್ಳಲಾಗದಂಥ ಸ್ಥಿತಿಯಲ್ಲಿ ಬಡವರು, ಮತ್ತೊಂದೆಡೆ ಅಗತ್ಯವಿಲ್ಲದಿದ್ದರೂ ತೋರಿಕೆಗಾಗಿ ಖಾಸಗಿ-ಐಷಾರಾಮಿ ಸೇವೆಗಳನ್ನು ಬಳಸಿಕೊಳ್ಳುವ ಶ್ರಿಮಂತರು. ಇದೆಂಥಾ ಅಭಿವೃದ್ಧಿಯ ಸಂಕೇತ?ಇತ್ತೀಚೆಗೆ ಭಾರತ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರವಾಗಿ ತನ್ನನ್ನು ಗುರುತಿಸಿಕೊಳ್ಳುತ್ತಿದೆ. ಇಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯಲು ಹೊರ ದೇಶಗಳಿಂದಲೂ ಸಾವಿರಾರು ಜನರು ನಮ್ಮ ದೇಶಕ್ಕೆ ಬರುತ್ತಿದ್ದು, ಭಾರತದ ವೈದ್ಯಕೀಯ ವ್ಯವಸ್ಥೆಗೆ ಒಂದು ಅಂತಾರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಯಾಗಿದೆ.

ಭಾರತೀಯ ಸಾಂಪ್ರದಾಯಿಕ ವೈದ್ಯ ವ್ಯವಸ್ಥೆಯೂ ಈ ಮಾರುಕಟ್ಟೆಯ ಒಂದು ಭಾಗವಾಗಿದ್ದು, ಈ ಸೇವೆಗಳನ್ನು ಒದಗಿಸುವ ಅನೇಕ ಕೇಂದ್ರಗಳ ಸೇವೆ ಹೊರ ದೇಶದವರಿಗೆ ಮಾತ್ರ ಲಭ್ಯವಿದೆ. ಇಂಥ ಕೆಲವು ಕ್ಷೇತ್ರಗಳಲ್ಲಿ ನಾವು ಡಾಲರ್ ರೂಪದಲ್ಲಿ ಮಾತ್ರ ಹಣ ಸ್ವೀಕಾರ ಮಾಡುವುದು ಎಂದು ಹೇಳುವುದೂ ಉಂಟು.

ಗುಣಮಟ್ಟದ ವೈದ್ಯಕೀಯ ಸೇವೆಯನ್ನರಸಿ ಹೊರ ದೇಶಗಳಿಗೆ ಶ್ರಿಮಂತರು ಹೋಗುತ್ತಿದ್ದಂಥ ಕಾಲವೊಂದಿತ್ತು. ಇಂದು ಅತಿ ಉತ್ಕೃಷ್ಟ ಮಟ್ಟದಲ್ಲಿರುವ ಭಾರತೀಯ ಆರೋಗ್ಯ ಸೇವೆಗಳನ್ನರಸಿ ವಿಶ್ವದೆಲ್ಲೆಡೆಯಿಂದ ನಮ್ಮಲ್ಲಿಗೆ ಜನ ಬರುತ್ತಿರುವಂಥ ಪರಿಸ್ಥಿತಿ ಸೃಷ್ಟಿಯಾಗಿರುವುದು ಹೆಮ್ಮೆಯ ವಿಷಯವೇ ಸರಿ.

ಆದರೆ ಭಾರತದಲ್ಲೇ ಕೋಟ್ಯಂತರ ಜನರಿಗೆ ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸಲು ನಮ್ಮ ಸಾರ್ವಜನಿಕ ವ್ಯವಸ್ಥೆ ಅಸಮರ್ಥವಾಗಿರುವುದು ಮಾತ್ರ ಸಹಿಸಲಾರದಷ್ಟು-ಸ್ವೀಕರಿಸಲಾಗದಷ್ಟು ನೋವಿನ ವಿಷಯವೆನ್ನುವುದು ಪ್ರಶ್ನಾತೀತ.ಭಾರತದ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿರುವ ವೈಪರೀತ್ಯಗಳನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಿ, ಅಂಚಿನಲ್ಲಿರುವ ಗುಂಪುಗಳ ಮನೆಬಾಗಿಲಿಗೆ ವೈದ್ಯಕೀಯ ನೆರವನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಅನೇಕ ಸ್ವಯಂಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ.

ಆದರೆ ಸಮಸ್ಯೆಯ ಆಳ ಸಾಗರದಷ್ಟೇ ಹಿರಿದಾಗಿದ್ದು, ಪರಾವಲಂಬಿ ಸ್ಥಿತಿಯಲ್ಲಿರುವ ಎಲ್ಲರನ್ನೂ ತಲುಪಲು ಈ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ.ಶೀಘ್ರವಾಗಿ, ಬೃಹದಾಕಾರವಾಗಿ ಬೆಳೆಯುತ್ತಿರುವ ವೈದ್ಯಕೀಯ ಶಿಕ್ಷಣ ವ್ಯವಸ್ಥೆ, ಸಣ್ಣ ಹಾಗೂ ಬೃಹತ್ ನಗರಗಳಲ್ಲಿ ತಲೆಯೆತ್ತುತ್ತಿರುವ ಸುಸಜ್ಜಿತ, ಐಷಾರಾಮಿ ವೈದ್ಯಕೀಯ ಕೇಂದ್ರಗಳು, ದಿನೇ ದಿನೇಗುಣಮಟ್ಟವನ್ನು ಹೆಚ್ಚಿಸಿಕೊಳ್ಳುತ್ತಿರುವ ವೈದ್ಯಕೀಯ ಸೇವೆಗಳು - ಇವೆಲ್ಲ ಭಾರತವನ್ನು ಇಡೀ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಆರೋಗ್ಯ ರಕ್ಷಕ ಸೇವಾ ವ್ಯವಸ್ಥೆಯನ್ನು ಹೊಂದಿರುವ ದೇಶಗಳ ಸಾಲಿಗೆ ಸೇರಿಸುತ್ತಿವೆ.

ಆದರೆ ಈ ಬೆಳವಣಿಗೆಯೆಲ್ಲ ಖಾಸಗಿ ವಲಯದಲ್ಲಿ ಕೇಂದ್ರೀಕೃತವಾಗಿದೆ. ಉಳ್ಳವರ ಸ್ವತ್ತಾಗಿರುವ ಈ ವ್ಯವಸ್ಥೆ ಬಡವರನ್ನು ಹೊರಗಿರಿಸಿದೆ. ಎಲ್ಲಿಯವರೆಗೂ ಈ ಅಸಮತೆಯನ್ನು ಪೋಷಿಸುವ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಲಾಗುವುದಿಲ್ಲವೋ ಅಲ್ಲಿಯವರೆಗೂ ಈ ಕ್ಷೇತ್ರದಲ್ಲಿನ ನಮ್ಮ ಸಾಧನೆಗಳ ಹಿರಿಮೆ ನಮ್ಮದಾಗುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry