ಮಂಗಳವಾರ, ಮಾರ್ಚ್ 2, 2021
31 °C

ಆರ್ಥಿಕತೆಯ ಪುನಶ್ಚೇತನಕ್ಕೆ ಆದ್ಯತೆ ಇರಲಿ

ಡಿ. ಮರಳೀಧರ Updated:

ಅಕ್ಷರ ಗಾತ್ರ : | |

ಆರ್ಥಿಕತೆಯ ಪುನಶ್ಚೇತನಕ್ಕೆ ಆದ್ಯತೆ ಇರಲಿ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ಮಹ­ತ್ವದ ದಿನ ಹತ್ತಿರವಾಗತೊಡಗಿದೆ. ಚುನಾ­ವಣೆಗೆ ಸಂಬಂಧಿಸಿದ ಚರ್ಚೆಗಳ ಧಾಟಿ ‘ಆದರೆ– ಹೋದರೆ’ ಎಂಬುದರ ಬದಲು ‘ಮುಂದೆ ಏನು‘ ಎಂಬುದರತ್ತ ನಿಧಾನವಾಗಿ ತಿರುಗತೊಡಗಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುವ ಸಾಧ್ಯತೆ ದಟ್ಟವಾಗುತ್ತಲೇ ಚರ್ಚೆಗಳಲ್ಲಿ ಇಂತಹ ಬದಲಾವಣೆಗಳು ಕಾಣಿಸತೊಡಗಿವೆ.ಮೇಲೆ ಎದ್ದಿದ್ದ ಚುನಾವಣಾ ದೂಳೆಲ್ಲ ಚದುರಿ ಶುಭ್ರ ವಾತಾವರಣ ಮೂಡುವ ಹಂತ­ದಲ್ಲೇ ಹೊಸ ಸರ್ಕಾರ ದೇಶದ ಆರ್ಥಿಕ ಸ್ಥಿತಿಗತಿ­ಯನ್ನು ಮೊದಲಾಗಿ ಗಣನೆಗೆ ತೆಗೆದು­ಕೊಳ್ಳಲೇಬೇಕು. ಆರ್ಥಿಕ ಸ್ಥಿತಿಯ ಪುನಶ್ಚೇತನಕ್ಕೆ ದಿನ ವಿಳಂಬ ಮಾಡುವಂತೆಯೇ ಇಲ್ಲ. ದಕ್ಷ ಆರ್ಥಿಕ ನಿರ್ವಹಣೆ ಎಂಬುದು ಭಾರಿ ಸವಾಲಿನ ಸಂಗತಿ­ಯಾಗಿದ್ದು, ಅದರ ನಿರ್ವಹಣೆಗೆ ತಕ್ಷಣ­ದಿಂದಲೇ ಕಾರ್ಯ­ಪ್ರವೃತ್ತ­ವಾಗಬೇಕು. ಸ್ವಿಚ್‌ ಅದು­ಮಿದ ತಕ್ಷಣ ವಿದ್ಯುತ್‌ ದೀಪ ಉರಿ­ಯು­ವಂತೆ ಆರ್ಥಿಕತೆ ಎಂಬುದು ಎಲೆಕ್ಟ್ರಿಕ್‌ ಸ್ವಿಚ್‌ ಏನೂ ಅಲ್ಲ. ಆರ್ಥಿ­ಕತೆ ಎಂಬುದು ಬಹಳ ಸಂಕೀರ್ಣ ಹಾಗೂ ಒಂದ­ಕ್ಕೊಂದು ಸಂಬಂಧ ಇರುವ ವಿಷಯ.ಜಾಗತಿಕ, ರಾಷ್ಟ್ರೀಯ ಮತ್ತು ಸ್ಥಳೀಯ ಅಂಶ­ಗಳು ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತವೆ. ಇಂತಹ ಪ್ರಭಾವಗಳು ಬಹು ಆಯಾಮದಿಂದ ಕೂಡಿರುವುದರಿಂದ ಈ ವಿಷಯವನ್ನು ಅತಿ ತುರ್ತು ನೆಲೆಯಲ್ಲಿ ಕೈಗೆತ್ತಿಕೊಳ್ಳ­ಲೇಬೇಕಾ­ಗು­ತ್ತದೆ. ಆರ್ಥಿಕತೆ ಎಂಬುದು ಪ್ರಬಲವಾದ ಭಾವನೆ­­ಗಳಿಂದಲೇ ಮುಂದಕ್ಕೆ ಚಲಿಸುತ್ತಿರುತ್ತದೆ ಎಂಬು­­ದನ್ನು ನಾನು ಹೇಳುತ್ತಿರುತ್ತೇನೆ. ಚುನಾ­ವಣಾ ಫಲಿತಾಂಶ ಹೊರಬಿದ್ದ ತಕ್ಷಣ ಹಣ­ಕಾಸು ವಿಚಾರಕ್ಕೆ ಬಹಳ ಮಹತ್ವ ಬಂದುಬಿಡುತ್ತದೆ. ಷೇರು ಮಾರುಕಟ್ಟೆ ಈಗಾಗಲೇ ಇದೇ ಭಾವನೆ­ಯೊಂದಿಗೆ ನೂತನ ವ್ಯವಸ್ಥೆಯತ್ತ ಆಶಾಗಣ್ಣಿ­ನಿಂದ ಎದುರು ನೋಡತೊಡಗಿದೆ.

ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವು­ದ­ರತ್ತ ತಕ್ಷಣ ಗಮನ ಹರಿಸಬೇಕಿದೆ. ಜನಸಾ­ಮಾ­ನ್ಯರು ಅದರಲ್ಲೂ ಬಡವರ್ಗದ ಮಂದಿ ಹಣ­ದು­ಬ್ಬರ­­ದಿಂದ  ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲವು ವರ್ಷ­ಗಳಿಂದ ಏರುಗತಿಯಲ್ಲೇ ಸಾಗಿ­ರುವ ಆಹಾರ ಹಣದುಬ್ಬರ ಬಡವರ ಆದಾಯ­ವೆಲ್ಲ ಕರಗಿ ಹೋಗುವಂತೆ ಮಾಡಿಬಿಟ್ಟಿದೆ. ಆರ್‌ಬಿಐ ಮತ್ತು ಹಣಕಾಸು ಸಚಿವಾಲಯ ಬೇಡಿಕೆ ವಿಚಾರ­ಗಳತ್ತ ಹೆಚ್ಚಿನ ಗಮನ ಹರಿಸುತ್ತಿವೆ, ಪೂರೈಕೆ ವಿಚಾರಗಳನ್ನು ಕಡೆಗ­ಣಿ­ಸಿವೆ. ನಿಯಂ­ತ್ರಣಕ್ಕೆ ಬಾರದ ಸಬ್ಸಿಡಿಗಳು ಮತ್ತು ಸರ್ಕಾ­ರದ ಉದಾರ ಕೊಡುಗೆ­ಗಳು ಹಣ­ದುಬ್ಬರದ ಬೆಂಕಿಗೆ ತುಪ್ಪ ಸುರಿದಂತಾಗಿದೆ.ಚುನಾವಣೆ ಕೊನೆಗೊಂಡಿರುವುದರಿಂದ ನೂತನ ಸರ್ಕಾರ ಈ ವಿಚಾರದಲ್ಲಿ ಪ್ರಾಯೋಗಿಕ ಮತ್ತು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಜನಸಾಮಾನ್ಯ (ಆಮ್‌ ಆದ್ಮಿ) ಈ ವಿಚಾರದಲ್ಲಿ ತುಂಬ ಸಮಯ ತಾಳ್ಮೆಯಿಂದ ಇರುವುದು ಸಾಧ್ಯವಿಲ್ಲ. ಚುನಾ­ವಣಾ ಪ್ರಚಾರ ಸಂದರ್ಭದಲ್ಲಿ ಹಣದುಬ್ಬರ ತಡೆಗೆ ಉತ್ತಮ ನಿರ್ವಹಣೆ ಮಾಡುವ ಭರವಸೆ­ಯನ್ನು ನೀಡಲಾಗಿದೆ. ಅದನ್ನು ತಕ್ಷಣ ಜಾರಿಗೆ ತರ­ಬೇಕು ಎಂದು ಜನಸಾಮಾನ್ಯರು ನಿರೀಕ್ಷಿಸಿ­ದರೆ ಅದರಲ್ಲಿ ಅಚ್ಚರಿ ಇಲ್ಲ. ಈ ಭರವಸೆ­ಯಂತೆಯೇ ನೂತನ ಸರ್ಕಾರ ನಡೆದು­ಕೊಂ­ಡಿದ್ದೇ ಆದರೆ ಜನಸಾಮಾನ್ಯರಲ್ಲಿ ಆರಂಭದಲ್ಲೇ ಉತ್ತಮ ಅಭಿಪ್ರಾಯ ಮೂಡಿಸುವುದು ಸರ್ಕಾರಕ್ಕೆ ಸಾಧ್ಯವಿದೆ. ಮುಂದೆ ಸರ್ಕಾರ ಮುನ್ನಡೆಸುವಲ್ಲಿ ಇದು ಬಹಳ ರಚನಾತ್ಮಕ ಪರಿಣಾಮವನ್ನೂ ಬೀರುವುದು ನಿಶ್ಚಿತ.ಉದ್ಯಮ ಸಮುದಾಯ ನೂತನ ಸರ್ಕಾರದ ಪ್ರಥಮ ನಡೆಗಳನ್ನೇ ಕಾತರದಿಂದ ನೋಡ­ತೊಡ­ಗಿದೆ. ಆರ್ಥಿಕ ಕ್ಷೇತ್ರದ ಹಲವಾರು ವಿಚಾರಗಳತ್ತ ಗಮನ ಹರಿಸಬೇಕಿದ್ದರೂ, ಬಡ್ಡಿ ದರಗಳತ್ತ ಅತಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ಆರ್ಥಿಕ ಕ್ಷೇತ್ರದ ಸಾಧನೆಗಳಲ್ಲಿ ಬಡ್ಡಿ ದರ ಬಹಳ ದೊಡ್ಡ ಪ್ರಭಾವ ಬೀರುತ್ತದೆ. ನಿರಂತರವಾಗಿ ಬಡ್ಡಿ ದರ ಹೆಚ್ಚಳ­ವಾಗಿದ್ದರಿಂದ ಕಳೆದ ಮೂರು ವರ್ಷ­ಗಳಲ್ಲಿ ಮೂಲ­ಸೌಲಭ್ಯ ಕ್ಷೇತ್ರದಲ್ಲಿನ ಬಂಡವಾಳ ಹೂಡಿಕೆ ಪ್ರಮಾಣ ಕಡಿಮೆಯಾಗುವಂತಾಗಿದೆ ಹಾಗೂ ಹಲವಾರು ಉದ್ಯಮಗಳು ಆರ್ಥಿಕ­ವಾಗಿ ಲಾಭ­ದಾಯಕವೇ ಅಲ್ಲ ಎಂಬಂತಹ ಸ್ಥಿತಿಗೆ ತಲುಪಿಬಿಟ್ಟಿವೆ.

ವಸತಿ ಮತ್ತು ಹಿಂದೆ ಬಿದ್ದಿರುವ ವಾಹನ ಕ್ಷೇತ್ರಕ್ಕೆ ತಕ್ಷಣ ಉತ್ತೇಜನ ದೊರಕಲೇಬೇಕಿದ್ದು, ಕಡಿಮೆ ಬಡ್ಡಿದರ ಖಂಡಿತ ನೆರವಿಗೆ ಬರಲಿದೆ. ಬಡ್ಡಿದರ ವಿಚಾರದಲ್ಲಿ ತಕ್ಷಣ ಸೂಕ್ತ ನಿರ್ಧಾರ ಕೈಗೊಂಡಿದ್ದೇ ಆದರೆ ಆರ್ಥಿಕ ಹಿಂಜರಿತದಿಂದ ಕಂಗೆಟ್ಟು ಹೋಗಿರುವ ಇತರ ಹಲವಾರು ಉದ್ಯಮಗಳೂ ಚೇತರಿಸಿಕೊಳ್ಳುವುದು ಸಾಧ್ಯ­ವಿದೆ. ಇಂತಹ ಬದಲಾವಣೆಯಿಂದ ಭಾರಿ ಯಂತ್ರೋಪಕರಣಗಳು ಮತ್ತು ಗ್ರಾಹಕರ ಬಳಕೆಯ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚುವಂತಾ­ಗು­­ತ್ತದೆ. ಬಡ್ಡಿದರ ಕಡಿಮೆ ಮಾಡಿದರೆ ಹಣದುಬ್ಬರ ಪ್ರಮಾಣವೂ ಕಡಿಮೆಯಾಗು­ತ್ತದೆ. ಈ ಎಲ್ಲ ಅಂಶಗಳನ್ನೂ ಆರ್‌ಬಿಐ ಗಮ­ನಿಸಿ, ನೂತನ ಸರ್ಕಾರದೊಂದಿಗೆ ಅದು ಹೆಜ್ಜೆ ಹಾಕುತ್ತದೆ ಎಂದು ನಾನು ಆಶಿಸಿದ್ದೇನೆ.ಆರ್ಥಿಕ ಕ್ಷೇತ್ರದಲ್ಲಿ ಬಡ್ಡಿದರ ವಿಚಾರ ಬಹಳ ಮುಖ್ಯ­­ವಾಗಿರುವುದರಿಂದ ಇಲ್ಲಿ ತರುವ ಬದ­ಲಾವಣೆ­­ಗಳಿಗೆ ಬಹಳ ಬೇಗ ಫಲಿತಾಂಶ ದೊರಕಿಬಿಡುತ್ತದೆ.

ಜನರಲ್‌ ಎಲೆಕ್ಟ್ರಿಕ್‌ ಕಂಪೆನಿಯ ಮುಖ್ಯ ಕಾರ್ಯ­ನಿರ್ವಾಹಕ ಜೆಫ್‌ ಇಮ್ಲೆಟ್‌ ಈಚೆಗೆ ಭಾರತಕ್ಕೆ ಬಂದಿದ್ದರು. ಜಾಗತಿಕ ಹೂಡಿಕೆ­ದಾರ­ರಿಗೆ ಭಾರತದ ನೂತನ ಸರ್ಕಾರ ನೀಡುವ ಸಂದೇ­ಶದ ಬಗ್ಗೆ ಕಾತರದಿಂದ ಇರುವುದಾಗಿ ಅವರು ಹೇಳಿದ್ದರು. ಹಲವಾರು ಅಂತರ­ರಾಷ್ಟ್ರೀಯ ಆರ್ಥಿಕ ತಜ್ಞರು ಸಹ ಇದೇ ಅಂಶ­ವನ್ನು ಪ್ರಸ್ತಾ­ಪಿಸಿದ್ದು, ಸರ್ಕಾರ ತೆಗೆದುಕೊಳ್ಳುವ ಪ್ರಥಮ ಹೆಜ್ಜೆಯೇ ದೇಶದ ಆರ್ಥಿಕತೆಗೆ ಬಹಳ ಮುಖ್ಯ ಎಂದು ಅವರೆಲ್ಲರೂ ಅಭಿಪ್ರಾಯ­ಪಟ್ಟಿದ್ದಾರೆ.ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಉತ್ತೇಜಿಸುವ ನಿಟ್ಟಿನಲ್ಲಿ ನೂತನ ಸರ್ಕಾರ ಸ್ಪಷ್ಟವಾದ ಸಂದೇಶ ರವಾನಿಸಲೇಬೇಕು ಮತ್ತು ಹೂಡಿಕೆಯನ್ನು ಆಕರ್ಷಿಸುವುದಕ್ಕಾಗಿ ಈ ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ನೀತಿಗಳನ್ನು ಸುಧಾರಿಸುವ ಕೆಲಸ ಮಾಡಬೇಕು. ಯಾವುದೇ ರೀತಿಯ ಎಫ್‌ಡಿಐಗೆ ಸಂಘ ಪರಿ­ವಾರದ ಒಂದು ವಿಭಾಗ ಬಹಳವಾಗಿ ವಿರೋಧಿ­ಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೋದಿ ಅವರು ಅಧಿಕಾರಕ್ಕೆ ಬಂದದ್ದೇ ಆದಲ್ಲಿ  ಎಫ್‌ಡಿಐ ತರುವ ಅವರ ಪ್ರಯತ್ನವನ್ನು ತಡೆ­ಗಟ್ಟಲು ಸಂಘ ಪರಿವಾರದ ಈ ವಿಭಾಗ ತನ್ನೆಲ್ಲಾ ಶಕ್ತಿಯನ್ನೂ ಉಪಯೋಗಿಸುವ ಸಾಧ್ಯತೆಯೂ ಹೆಚ್ಚಿದೆ.  ಹೂಡಿಕೆದಾರರು ಸದಾ ಕಿರಿಕಿರಿ ಅನು­ಭವಿ­ಸುತ್ತಿರುವ ತೆರಿಗೆ ವಿಚಾರವನ್ನು ನೇರ­ವಾಗಿಯೇ ಬಗೆಹರಿಸುವ ಪ್ರಯತ್ನ ಮಾಡುವ ವಿಚಾರ, ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಅದಕ್ಕೆ  ಅದು ಆದ್ಯತೆಯ ವಿಷಯ ಆಗಬೇಕು. ಹೂಡಿಕೆದಾರರಿಗೆ ಭ್ರಮ­­ನಿರಸನ ಉಂಟುಮಾಡುವಂತಹ ಗತ­ಕಾ­ಲದ ತಿದ್ದುಪಡಿಗಳನ್ನು ತರಲು ಪ್ರಯತ್ನಿಸು­ವು­ದಿಲ್ಲ ಎಂಬ ನಿಟ್ಟಿನಲ್ಲಿ ಸ್ಪಷ್ಟ ಭರವಸೆ ನೀಡಲೇಬೇಕು.ಸುಧಾರಣೆಯ ವೇಗ ನಿಧಾನಗೊಳಿಸಿದ್ದೇ ಯುಪಿಎ 2 ಸರ್ಕಾರದ ಮೂರ್ಖತನವಾಗಿತ್ತು ಎಂಬು­ದನ್ನು ಚಿದಂಬರಂ ಅವರು ಒಪ್ಪಿ­ಕೊಂಡಿ­ದ್ದಾರೆ. ಅವರ ಈ ಹೇಳಿಕೆಯಿಂದ ಹೊರ­ಹೊಮ್ಮುವ ಸಂಕೇತವನ್ನು ನೂತನ ಸರ್ಕಾರ ಗಮ­ನಿಸ­ಬೇಕು ಮತ್ತು ಆರ್ಥಿಕ ಪುನಶ್ಚೇತನದ ಪೆಡ­ಲನ್ನು ತಕ್ಷಣ ತುಳಿಯಬೇಕು. ಆರ್ಥಿಕ ಸುಧಾ­ರಣೆಯಲ್ಲಿ ಅತ್ಯಂತ ಪ್ರಮುಖ ವಿಷಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ). ಜಿಎಸ್‌ಟಿ ವಿಚಾರದಲ್ಲಿ ಅಪಾರ ಕೆಲಸಗಳು ಈಗಾ­ಗಲೇ ನಡೆದಿದ್ದು, ಒಕ್ಕೂಟದ ನಿಜವಾದ ಅರ್ಥ­ದಲ್ಲಿ ಎಲ್ಲಾ ರಾಜ್ಯಗಳನ್ನು ಈ ವಿಚಾರ­ದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಂದಿನ ಸರ್ಕಾರಕ್ಕೆ ಆದ್ಯತೆಯ ಸಂಗತಿಯಾಗಬೇಕು.ಬಹಳ ಕಾಲದಿಂದ ನನೆಗುದಿಗೆ ಬಿದ್ದಿರುವ ಈ ಸುಧಾ­ರಣಾ ಕ್ರಮವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸಬೇಕು. ಜಿಎಸ್‌ಟಿ ವಿಚಾರ­ದಲ್ಲಿ ರಾಜ್ಯ­ಗಳು ವ್ಯಕ್ತಪಡಿಸುವ ಆತಂಕಗಳಿಗೆಲ್ಲ ಸಮ­ರ್ಪಕ ಉತ್ತರ ಕೊಟ್ಟು ಮತ್ತು ರಾಜ್ಯಗಳಿಗೆ ಯಾವುದೇ ಆತಂಕ ಇಲ್ಲ ಎಂಬುದನ್ನು ಮನವರಿಕೆ ಮಾಡಿ­ಕೊಡುವ ಮೂಲಕ ಯಾವುದೇ ರಾಜ್ಯವೂ ಜಿಎಸ್‌­ಟಿಗೆ ವಿರೋಧ ವ್ಯಕ್ತ­ಪಡಿಸದಂತೆ ನೋಡಿ­ಕೊಳ್ಳ­ಬೇಕು. ಇಂತಹ ಕ್ರಮವು ದೇಶೀಯ­ವಾಗಿ ಮಾತ್ರ­ವಲ್ಲ ವಿದೇಶಿ ಹೂಡಿಕೆ­ದಾರ­ರಿಗೂ ಉತ್ತಮ ಸಂದೇಶ ರವಾನಿ­ಸುತ್ತದೆ. ಸಾಮಾನ್ಯ­ವಾಗಿ ಇಂತಹ ಕ್ರಮಗಳನ್ನು ಪ್ರಕಟಿ­ಸು­ವುದು ಬಜೆಟ್‌ ಮಂಡನೆ ಸಮಯ­ದಲ್ಲಿ. ಆದರೆ ಸಮಯ ತಿನ್ನುವ ಇಂತಹ ಸುಧಾ­ರಣಾ ಕ್ರಮ­ಗಳಿ­ಗಾಗಿ ಮುಂದಿನ ಸರ್ಕಾರ ಬಜೆಟ್‌ ವರೆಗೆ ಕಾಯ­ಬಾರದು. ಸರ್ಕಾರದ ಯೋಜನೆ­ಗಳನ್ನು ಸಾಧ್ಯ­ವಾ­­ದಷ್ಟು ಬೇಗ ಸಿಗುವ ಅವ­ಕಾಶದಲ್ಲೇ ಪ್ರಕಟಿಸಬೇಕು.ನೂತನ ಆರ್ಥಿಕ ನೀತಿಯನ್ನು ನಿರ್ಧರಿಸು­ವಾಗ ಇತರ ವಿಚಾರಗಳಿಗಿಂತ ಮುಖ್ಯವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿ ವಿಷ­ಯವೇ ಪ್ರಧಾನ ಅಂಶವಾಗಿರಬೇಕು. ಯುವ­ಜನತೆಯ ನಿರುದ್ಯೋಗ ಎಂಬ ಟೈಂ ಬಾಂಬ್‌ ಅನ್ನು ತಕ್ಷಣ ನಿಷ್ಕ್ರಿಯಗೊಳಿಸಬೇಕು. ಇದೊಂದು ಸಮಯ ತಿನ್ನುವ ಪ್ರಕ್ರಿಯೆಯಾಗಿದ್ದರೂ, ತಕ್ಷಣದ ಆರಂಭವನ್ನಂತೂ ಮಾಡಲೇಬೇಕು.ದೀರ್ಘ ಕಾಲದ ನಿಷ್ಕ್ರಿಯತೆಯಿಂದಾಗಿ ತುಕ್ಕು ಹಿಡಿ­ದಂತಿ­ರುವ ಅದೇ ಹಿಂದಿನ ಅಧಿಕಾರ­ಶಾಹಿ­ಯನ್ನೇ ನೂತನ ಸರ್ಕಾರ ಅವಲಂಬಿಸಬೇಕಿದೆ. ಹೀಗಾಗಿ  ಅಧಿಕಾರಶಾಹಿಯನ್ನು  ಚುರುಕು­ಗೊ­ಳಿಸಿ ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಪ್ರಯತ್ನ ಮಾಡ­­­­ಬೇಕು. ಕೆಲಸ ಮಾಡುವ ಅಧಿಕಾರಿಗಳನ್ನು ಒಟ್ಟು­ಗೂಡಿಸಿ­ಕೊಂಡು, ಹಿಮ್ಮುಖವಾಗಿ ಚಲಿಸ­ತೊಡಗಿರುವ ಆರ್ಥಿಕತೆಯನ್ನು ಸರಿಯಾದ ದಾರಿಗೆ ತಂದು ನಿಲ್ಲಿಸುವ ಹೊಣೆಗಾರಿಕೆ ಮುಂದೆ ಅಧಿ­ಕಾರ ವಹಿಸಿಕೊಳ್ಳಲಿರುವ ಸರ್ಕಾರದ ಮೇಲಿದೆ. 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.