ಆರ್ಥಿಕ ಹಿಂಜರಿತದ ಗುಮ್ಮ: ಭೀತಿ ನಿರಾಧಾರ

7

ಆರ್ಥಿಕ ಹಿಂಜರಿತದ ಗುಮ್ಮ: ಭೀತಿ ನಿರಾಧಾರ

ಡಿ. ಮರಳೀಧರ
Published:
Updated:

ಪ್ರತಿಯೊಬ್ಬರೂ ಆರ್ಥಿಕ ಹಿಂಜರಿಕೆ ಬಗ್ಗೆ ಏಕೆ ಮಾತನಾಡುತ್ತಿದ್ದಾರೆ ಎನ್ನುವುದು ನನಗಂತೂ ಅರ್ಥವಾಗುತ್ತಿಲ್ಲ. ದೇಶದ ಅರ್ಥ ವ್ಯವಸ್ಥೆಯ ಇತರ ಧನಾತ್ಮಕ ಸಂಗತಿಗಳ ಬಗ್ಗೆ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಣಿಗಳು ಮಾತನಾಡದಿರುವುದು ಕೂಡ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಪರಿಸ್ಥಿತಿ ಮತ್ತು ದೇಶದ ಅರ್ಥ ವ್ಯವಸ್ಥೆ ಮೇಲೆ ಅದು ಬೀರಬಹುದಾದ ಪ್ರತಿಕೂಲ ಪರಿಣಾಮಗಳ ಹೊರತಾಗಿಯೂ, ನಮ್ಮಲ್ಲಿ ಸಾಕಷ್ಟು ಧನಾತ್ಮಕವಾದ ಆರ್ಥಿಕ ವಿದ್ಯಮಾನಗಳಿವೆ. ಅವುಗಳಲ್ಲಿ ಕೆಲ ವಿಷಯಗಳನ್ನು ನಾನು ಇಲ್ಲಿ ಚರ್ಚಿಸಿರುವೆ.

ದೇಶದ ಅರ್ಥವ್ಯವಸ್ಥೆಯು ತನ್ನ ಸಾಮರ್ಥ್ಯಕ್ಕೆ ಅನುಸಾರ ಸಾಧಾರಣ ಮಟ್ಟದಲ್ಲಿ ವೃದ್ಧಿಯಾಗುತ್ತಿದೆ. ದೇಶದ ರಫ್ತು ವಹಿವಾಟು ತಿಂಗಳಿನಿಂದ ತಿಂಗಳಿಗೆ ಶೇ 40ರಷ್ಟು ಏರಿಕೆ ದಾಖಲಿಸುತ್ತ ಹೆಚ್ಚಳಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಈ ಆರ್ಥಿಕ ವೇಗ ಕಾಯ್ದುಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ ಎಂದು ವಾಣಿಜ್ಯ ಕಾರ್ಯದರ್ಶಿ ಖುಲ್ಲರ್ ಹೇಳಿಕೆಯೊಂದನ್ನು ಬಿಡುಗಡೆ ಮಾಡುತ್ತಾರೆ. ನ್ಯೂಯಾರ್ಕ್‌ನಿಂದ ಸ್ವದೇಶಕ್ಕೆ ಮರಳುವ ಮಾರ್ಗ ಮಧ್ಯೆ ಪ್ರಧಾನಿ ಮನಮೋಹನ್ ಸಿಂಗ್  ಮಾಧ್ಯಮಗಳ ಜತೆ ಮಾತನಾಡುತ್ತ, ಆರ್ಥಿಕ ಸ್ಥಿತಿ ಗತಿ ಬಗ್ಗೆ ಸಣ್ಣ ಸಂದೇಹ ವ್ಯಕ್ತಪಡಿಸುತ್ತಿದ್ದಂತೆ, ಟೆಲಿವಿಷನ್ ಚಾನೆಲ್‌ಗಳು ಅದನ್ನೇ ದೊಡ್ಡ ಸಂಗತಿಯನ್ನಾಗಿ ಬಿಂಬಿಸಿದವು. ನಮ್ಮ ಹಣಕಾಸು ಸಚಿವರು ಕೂಡ ಆರ್ಥಿಕ ಕುಂಠಿತದ ತೂಗು ಕತ್ತಿ ಬಗ್ಗೆ ಉದ್ದಿಮೆ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ನಾನು ಎಂಬಿಎ ವಿದ್ಯಾರ್ಥಿಗಳ ತರಗತಿ ಉದ್ದೇಶಿಸಿ ಮಾತನಾಡುವಾಗ, ಮಾಮೂಲಿನಂತೆ ಅವರಿಗೆ `ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯ ಇರುವ  ಉದ್ಯೋಗ ಅವಕಾಶಗಳ ಬಗ್ಗೆ ನಿಮ್ಮ ಅನಿಸಿಕೆ ಮತ್ತು ನಿರೀಕ್ಷೆಗಳು ಏನಿವೆ~ ಎಂದು ಪ್ರಶ್ನಿಸಿದೆ.

ಅಭಿವೃದ್ಧಿ ಹೊಂದಿದ ಬಹುತೇಕ ದೇಶಗಳು ಈಗಾಗಲೇ `ಡಬಲ್ ಡಿಪ್~ ಆರ್ಥಿಕ ಹಿಂಜರಿಕೆಗೆ ಒಳಗಾಗಿವೆ ಎಂದೇ ಅನೇಕರು ಭಾವಿಸಿದ್ದರು. (ಅರ್ಥ ವ್ಯವಸ್ಥೆಯೊಂದು ಆರ್ಥಿಕ ಹಿಂಜರಿಕೆಯಿಂದ ಚೇತರಿಸಿಕೊಳ್ಳುವ ಆರಂಭಿಕ ಹಂತದಲ್ಲಿಯೇ ಮತ್ತೆ ಹಿಂಜರಿಕೆಗೆ ಒಳಗಾಗುವ ಸಾಧ್ಯತೆಗೆ `ಡಬಲ್ ಡಿಪ್~ ಎನ್ನುವರು). ಅವರಲ್ಲಿ ಅನೇಕರು ಅರ್ಥಶಾಸ್ತ್ರ ಅಧ್ಯಯನ ಮಾಡಿರದಿದ್ದರೂ, ಅವರಿಗೆ ಆರ್ಥಿಕ ಹಿಂಜರಿಕೆಯ ನಿಜವಾದ ವ್ಯಾಖ್ಯಾನವೂ ಗೊತ್ತಿರಲಿಲ್ಲ. ಆದರೆ, ವಿಶ್ವದಾದ್ಯಂತ ಎಂತಹದ್ದೋ ಒಂದು ಬಗೆಯ ಋಣಾತ್ಮಕ ವಿದ್ಯಮಾನಗಳು ಘಟಿಸುತ್ತಿವೆ ಎನ್ನುವುದು ಮಾತ್ರ ಅವರ ನಂಬಿಕೆಯಾಗಿತ್ತು.

ನಮ್ಮ ಅರ್ಥವ್ಯವಸ್ಥೆಯ ವಾಸ್ತವ ಚಿತ್ರಣ ಹೇಗಿದೆ ಎನ್ನುವುದಕ್ಕೆ ಕಾರು, ಬೈಕ್ ಮತ್ತಿತರ ವಾಹನಗಳ ಮಾರಾಟ ಭರಾಟೆಯು ಬೆಳಕು ಚೆಲ್ಲುತ್ತದೆ. ಭಾರಿ ಸಂಖ್ಯೆಯಲ್ಲಿನ ವಾಹನಗಳ ಮಾರಾಟವು ಆರ್ಥಿಕ ಚಟುವಟಿಕೆಗಳ ಬಗೆಗಿನ ನಿರಾಶಾ ಭಾವನೆ ತಪ್ಪು ಎನ್ನುವ ಸಂದೇಶವನ್ನು ಸ್ಪಷ್ಟವಾಗಿ ನೀಡುತ್ತವೆ. ಸದ್ಯಕ್ಕೆ ಹಬ್ಬದ ದಿನಗಳ ಖರೀದಿ ಸಂಭ್ರಮವನ್ನೂ ನಾವು ಕಾಣುತ್ತಿದ್ದೇವೆ. ಈ ತಿಂಗಳಾಂತ್ಯದ ಹೊತ್ತಿಗೆ ವಾಹನಗಳ ಮಾರಾಟ ಮತ್ತು ಖರೀದಿ ವಹಿವಾಟು ಇನ್ನಷ್ಟು ಸುಧಾರಿಸಿರುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ಮಟ್ಟಿಗೆ ವ್ಯವಹಾರಿಕ ಧೋರಣೆ ತಳೆದು ತನ್ನ ಬಿಗಿ ಪಟ್ಟು ಸಡಿಲಿಸಿದ್ದರೆ, ವಾಹನಗಳ ಮಾರಾಟ ಪ್ರಮಾಣ ಇನ್ನೂ ಸಾಕಷ್ಟು ಏರಿಕೆಯಾಗಿರುತ್ತಿತ್ತು. ಸಾಲಗಳ ಮೇಲಿನ ಬ್ಯಾಂಕ್ ಬಡ್ಡಿ ದರಗಳು ಖರೀದಿ ಉತ್ಸಾಹಕ್ಕೆ ತಣ್ಣೀರೆರಚಿರುವುದು ನಿಜ. ಅದರಿಂದ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹಕ್ಕೆ ಅಡ್ಡಿ ಉಂಟಾಗಿದೆ.

ಇತ್ತೀಚೆಗೆ ನಾನು ನನ್ನ ಬ್ಯಾಂಕರುಗಳ ಸಭೆಯಲ್ಲಿ ಭಾಗವಹಿಸಿದ್ದೆ. ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳುವ ಸಾಧ್ಯತೆ ಬಗೆಗಿನ ಪ್ರಶ್ನೆಗಳೇ ಅಲ್ಲಿ ನನಗೆ ಮೊದಲು ಎದುರಾಗಿದ್ದವು. ನಮ್ಮ ಸಂಸ್ಥೆಯು 30 ದೇಶಗಳಿಗೆ ಸರಕುಗಳನ್ನು ರಫ್ತು ಮಾಡುತ್ತದೆ. ಜತೆಗೆ ದೇಶದಲ್ಲಿನ ಮಾರಾಟವೂ ಉತ್ತಮ ಮಟ್ಟದಲ್ಲಿಯೇ ಇದೆ. ವಸ್ತುಸ್ಥಿತಿ ಹೀಗಿದ್ದರೂ ಈ ಎದೆಗುಂದಿಸುವ ಮನೋಭಾವ ಎಲ್ಲೆಡೆ ಆವರಿಸಿದೆ. ಗಾಲ್ಫ್  ಕೋರ್ಸ್‌ಗೆ ಹೋದಾಗ ನನ್ನನ್ನು ಹಿಂಬಾಲಿಸುವ ಪರಿಚಾರಕ (ಕ್ಯಾಡಿ) ಕೂಡ ಈ ವಿಷಯದ ಬಗ್ಗೆ ಮಾತನಾಡುತ್ತಾನೆ. ಟೆಲಿವಿಷನ್ ಚರ್ಚಾಗೋಷ್ಠಿಯಲ್ಲಿ ನಾನು ಮಾತನಾಡುವುದನ್ನು ಕುತೂಹಲದಿಂದ ವೀಕ್ಷಿಸುವ ಆತನು ಕೂಡ, `ಇದೇನು ಸರ್, ಆರ್ಥಿಕ ಹಿಂಜರಿಕೆಯು ನಿಜವಾಗಿಯೂನಮ್ಮನ್ನು ಕಾಡುತ್ತಿದೆಯೇ~ ಎಂದೂ ಪ್ರಶ್ನಿಸುತ್ತಾನೆ.

ಅರ್ಥ ವ್ಯವಸ್ಥೆಯು ಮೂಲತಃ ಮಾನವೀಯ ವರ್ತನೆ ಆಧರಿಸಿರುತ್ತದೆ. ಮನೋಭಾವದ ಏರಿಳಿತ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಎರಾಬಿರಿಯಾಗಿ ಚಲಿಸುತ್ತಿರುವ ಷೇರು ಬೆಲೆ ಮತ್ತು ಕರೆನ್ಸಿಗಳ (ಡಾಲರ್ - ರೂಪಾಯಿ) ವಿನಿಮಯ ದರಗಳು ಈ ಮಾತನ್ನು ರುಜುವಾತು ಪಡಿಸುತ್ತವೆ. ದೇಶದ ಅರ್ಥ ವ್ಯವಸ್ಥೆ ಮೇಲೆ ಹಲವಾರು ಕಾರ್ಮೋಡಗಳು ಕವಿದಿದ್ದರೂ ಈ ಹಠಾತ್ ಸ್ವರೂಪದ ಏರಿಳಿತಗಳಿಗೆ ಅಷ್ಟು  ಮಹತ್ವ ನೀಡಬೇಕಾದ ಅಗತ್ಯ ಇಲ್ಲ. ಆದರೂ, ಎಲ್ಲೆಡೆ ನಿರುತ್ಸಾಹ ಮಾತ್ರ ಕಂಡುಬರುತ್ತಿದೆ. ಉದ್ದಿಮೆ ಸಂಸ್ಥೆಗಳು ತಮ್ಮ ಬಂಡವಾಳ ಹೂಡಿಕೆ ಯೋಜನೆಗಳ ಬಗ್ಗೆ ಮರುಚಿಂತನೆ ಮಾಡಲು ಪ್ರೇರಣೆ ನೀಡುವಷ್ಟು ಇಂತಹ ಭಾವನೆ ಬಲವಾಗಿದೆ.

ನಕಾರಾತ್ಮಕ ಭಾವನೆಗಳು ಇನ್ನಷ್ಟು ಅದೇ ಬಗೆಯ ಅನಿಸಿಕೆಗಳಿಗೆ ಉತ್ತೇಜನ ನೀಡುತ್ತವೆ. ಬಹುಶಃ ಇದೇ ಕಾರಣಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಹಿಡಿದು ನನ್ನ ಗಾಲ್ಫ್ ಪರಿಚಾರಕನ ವರೆಗೆ ಪ್ರತಿಯೊಬ್ಬರೂ ಎದೆಗುಂದಿಸುವ ವಿಚಾರಗಳ ಚಕ್ರವ್ಯೆಹದಲ್ಲಿ ಸಿಲುಕಿರುವಂತೆ ಕಂಡು ಬರುತ್ತದೆ.

ಇಂತಹ ಋಣಾತ್ಮಕ ಆಲೋಚನೆಗಳನ್ನು ಬದಿಗಿಟ್ಟು ಸಕಾರಾತ್ಮಕ ವಿದ್ಯಮಾನಗಳತ್ತಲೂ ಕೊಂಚ ಗಮನ ಹರಿಸೋಣ. ನಮ್ಮ ಪ್ರಧಾನಿ ಅಥವಾ ಹಣಕಾಸು ಸಚಿವರಿಂದ ಸಕಾರಾತ್ಮಕ ಧೋರಣೆ ಮತ್ತು ದೂರದೃಷ್ಟಿಯ ನಾಯಕತ್ವ ನಿರೀಕ್ಷಿಸೋಣ. ದೇಶವು ಈ ನಾಯಕರಿಂದ ಕನಿಷ್ಠ ಇಂತಹ ಧೋರಣೆಯನ್ನಷ್ಟೇ ನಿರೀಕ್ಷಿಸುತ್ತದೆ ಎನ್ನುವುದನ್ನು ಮರೆಯಬಾರದು.

ಭಾರತವು ಯುವ ಜನಾಂಗದ ಆಶೋತ್ತರಗಳಿಂದ ಮುನ್ನಡೆಯುತ್ತಿದೆ. ಯಾವುದೇ ದೃಷ್ಟಿಕೋನದಿಂದ ನೋಡಿದರೂ ನಮ್ಮ ದೇಶವು ವಿಶ್ವದ ಇತರ ದೇಶಗಳಿಗಿಂತ ಉತ್ತಮ ಸಾಧನೆಯನ್ನೇ ಮಾಡುತ್ತಿದೆ. ನಮ್ಮ ಆರ್ಥಿಕ ಅಭಿವೃದ್ಧಿಗೆ ಇರುವ ಅವಕಾಶಗಳು ಅಗಣಿತ. ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವಲ್ಲಿ ನಾವು ಸಾಕಷ್ಟು ಹಿಂದೆ ಬಿದ್ದಿರುವುದೂ ನಿಜ. ಇದೇ ಕಾರಣಕ್ಕೆ ನಮ್ಮಲ್ಲಿ ಎಲ್ಲ ಬಗೆಯ ಉತ್ಪನ್ನ ಮತ್ತು ಸೇವೆಗಳಿಗೆ `ಮರೆಮಾಚಿದ ಬೇಡಿಕೆ~ ಗಮನಾರ್ಹವಾಗಿ ಇರುವುದೂ ವೇದ್ಯವಾಗುತ್ತದೆ.

ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಈ ಪರಿಸ್ಥಿತಿಯು ಸಂಪೂರ್ಣ ಭಿನ್ನವಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಯ ಉನ್ನತ ಹಂತ ತಲುಪಿ ಬಿಟ್ಟಿವೆ. ಅದೇ ಕಾರಣಕ್ಕೆ ಆ ದೇಶಗಳು ಈಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ. ನಾವು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ವೇಗವಾಗಿ ಮುನ್ನಡೆಯಬೇಕಾಗಿದೆ.

ಜಾಗತಿಕ ಅರ್ಥ ವ್ಯವಸ್ಥೆಯ ದಿಕ್ಕು ದೆಸೆ ಬದಲಾಗುತ್ತಿದ್ದು, ಭಾರತದಂತಹ ಅಭಿವೃದ್ಧಿಶೀಲ ದೇಶಗಳತ್ತ ಗಮನ ಹರಿಸುತ್ತಿದೆ. ಬಹುಶಃ 2013ನೇ ವರ್ಷ ಈ ವಿಷಯದಲ್ಲಿ ಐತಿಹಾಸಿಕವಾಗುವ ಸಾಧ್ಯತೆಗಳಿವೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಪ್ರಕಾರ, ಖರೀದಿ ಸಾಮರ್ಥ್ಯ ಸಮಾನತೆ ಆಧರಿಸಿದ ಶ್ರೀಮಂತ ದೇಶಗಳ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಪ್ರಮಾಣಕ್ಕಿಂತ, ಬಡ ದೇಶಗಳ `ಜಿಡಿಪಿ~ ಪ್ರಮಾಣವು ತ್ವರಿತವಾಗಿ ಹೆಚ್ಚಳಗೊಳ್ಳುತ್ತಿದೆ. ಇದೇ ಮಾನದಂಡ ಆಧರಿಸಿ 2016ರಲ್ಲಿ  ಚೀನಾದ `ಜಿಡಿಪಿ~ಯು ಅಮೆರಿಕಕ್ಕಿಂತ ಹೆಚ್ಚಿಗೆ ಇರಲಿದೆ. ಇತ್ತೀಚೆಗಷ್ಟೇ ಜಪಾನ್ ಅನ್ನು ಹಿಂದಿಕ್ಕಿರುವ ಚೀನಾ, ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ.

ವಿದೇಶಿ ನೇರ ಬಂಡವಾಳ, ಸಾಲ, ಬಂಡವಾಳ ಹೂಡಿಕೆ ಮತ್ತಿತರ ಇತರ ಆರ್ಥಿಕ ಮಾನದಂಡಗಳು ಅಭಿವೃದ್ಧಿಶೀಲ ದೇಶಗಳ ಅರ್ಥವ್ಯವಸ್ಥೆಯನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ. ಭಾರತ ಮತ್ತಿತರ ಅಭಿವೃದ್ಧಿಶೀಲ ದೇಶಗಳೂ ಸದ್ಯಕ್ಕೆ ಅಭಿವೃದ್ಧಿಯ ಓಘವನ್ನು ಸಮರ್ಪಕವಾಗಿ ಕಾಯ್ದುಕೊಂಡಿವೆ.

ಅಭಿವೃದ್ಧಿಶೀಲ ದೇಶಗಳಲ್ಲಿನ ಈ ಆರ್ಥಿಕ ಓಟಕ್ಕೆ ಅಲ್ಲಿನ ಸರ್ಕಾರಗಳೇ ಮುಖ್ಯ ಅಡ್ಡಿಯಾಗಿ ಪರಿಣಮಿಸಿವೆ. ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಕೂಡ ಇದೇ ಬಗೆಯ ಅನಿಸಿಕೆ ವ್ಯಕ್ತಪಡಿಸಿದೆ. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಸಂದರ್ಶನವೊಂದರಲ್ಲಿ ಆಡಿದ ಮಾತುಗಳು ಬ್ಯಾಂಕ್‌ನ ನಿಲುವನ್ನು ಪುಷ್ಟೀಕರಿಸುತ್ತವೆ. ಭಾರತ ಮತ್ತು ಚೀನಾ ಸರ್ಕಾರಗಳ ಧೋರಣೆ ಬಗ್ಗೆಯೂ ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಸರ್ಕಾರಗಳು ತಳೆದಿರುವ ನಿಲುವನ್ನು ಸರಿಪಡಿಸುವ ಗಂಭೀರ ಪ್ರಯತ್ನಗಳು ನಡೆದಿದ್ದರೆ ಅದರ ಫಲಿತಾಂಶವೇ ಬೇರೆಯಾಗಿರುತ್ತಿತ್ತು.

2008ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿದ್ದ ಆರ್ಥಿಕ ಉತ್ತೇಜನಾ ಕ್ರಮಗಳು ಸರಿಯಾಗಿರುವುದರ ಜತೆಗೆ ಸ್ಪಷ್ಟ ಸಂಕೇತವನ್ನೂ ಒಳಗೊಂಡಿದ್ದವು. ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದವು. ರೂ. 1,86,000 ಕೋಟಿಗಳಷ್ಟು ಮೊತ್ತದ ಮೂರು ಆರ್ಥಿಕ ಉತ್ತೇಜನಾ ಕೊಡುಗೆಗಳ ಫಲವಾಗಿ ಅರ್ಥ ವ್ಯವಸ್ಥೆಯು ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಿತ್ತು. ಆರ್ಥಿಕ ಹಿಂಜರಿತದ ದುಷ್ಪರಿಣಾಮಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗಿತ್ತು. ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು ಕೂಡ ಯಾವುದೇ ಒತ್ತಡಕ್ಕೆ ಒಳಗಾಗಿರಲಿಲ್ಲ. ಕರೆನ್ಸಿಗಳ ವಿನಿಮಯ ದರ ಮತ್ತು ಬ್ಯಾಂಕ್ ಬಡ್ಡಿ ದರಗಳನ್ನೂ `ಆರ್‌ಬಿಐ~ ಸಮರ್ಥವಾಗಿ ನಿಭಾಯಿಸಿತ್ತು.

ಆದರೆ, ಈಗ ಮತ್ತೆ ವರ್ತಮಾನಕ್ಕೆ ಬಂದರೆ, ದೇಶವು ಹಲವಾರು ಹಗರಣಗಳಲ್ಲಿ ಸಿಲುಕಿಕೊಂಡಿದೆ. ಎಲ್ಲಿಯೂ ದಕ್ಷ ಆಡಳಿತದ ಕುರುಹುಗಳೇ ಕಾಣುತ್ತಿಲ್ಲ. ಸರ್ಕಾರದ  ಮುಖ್ಯಸ್ಥರು ಯಾರು ಎನ್ನುವುದು ಯಾರೊಬ್ಬರಿಗೂ ಗೊತ್ತಿಲ್ಲ. ಎಲ್ಲವೂ ಅಯೋಮಯ. ಹತ್ತಾರು ಎಡವಟ್ಟುಗಳು, ಗೋಜಲುಗಳಿಂದಾಗಿ ಇಡೀ ಅರ್ಥ ವ್ಯವಸ್ಥೆಯೇ ಅನಾಥಗೊಂಡಿರುವಂತೆ ಭಾಸವಾಗುತ್ತಿದೆ.

ಇದಕ್ಕೂ ಮೊದಲು ಜಾರಿಗೆ ತರಲು ಉದ್ದೇಶಿಸಿದ್ದ ಭಾರಿ ಮಹತ್ವಾಕಾಂಕ್ಷೆಯ ಸುಧಾರಣಾ ಕ್ರಮಗಳನ್ನೆಲ್ಲ ಮರೆತಂತಾಗಿದೆ. ಯಾರೊಬ್ಬರೂ ಅವುಗಳ ಬಗ್ಗೆ ಮಾತನಾಡುತ್ತಿಲ್ಲ. ಪ್ರಾದೇಶಿಕ ಸರ್ವಶಕ್ತ ದೇಶ (ಸೂಪರ್ ಪವರ್) ಎನ್ನುವುದನ್ನು ಮರೆತು ರಾಜಕೀಯ ಅಸ್ಥಿರತೆಯ ಮತ್ತು ಬರೀ ಸೀಮಿತ ಸರಕುಗಳ ಉತ್ಪಾದನೆ ಮೇಲೆ ಅವಲಂಬಿಸಿದ ನಿಕೃಷ್ಟ ದೇಶದಂತೆ (ಬನಾನಾ ರಿಪಬ್ಲಿಕ್) ಭಾರತ ವರ್ತಿಸುತ್ತಿದೆ. ನಮ್ಮ ನಾಯಕಗಣವು ಗೂಳಿಯ ಕೊಂಬುಗಳನ್ನು ಗಟ್ಟಿಯಾಗಿ ಹಿಡಿದು ಅದನ್ನು ಮಣಿಸಿ, ನಕಾರಾತ್ಮಕ ಭಾವನೆ ಹೋಗಲಾಡಿಸಲು ಶ್ರಮಿಸುವರೇ, ಕಾದು ನೋಡಬೇಕು.

 (ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: 

 editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry