ಆರ್‍ಎಸ್‍ಎಸ್‌ನ ಪ್ರತಿಗಾಮಿ ‘ಪವಿತ್ರ ಗ್ರಂಥ’

7

ಆರ್‍ಎಸ್‍ಎಸ್‌ನ ಪ್ರತಿಗಾಮಿ ‘ಪವಿತ್ರ ಗ್ರಂಥ’

ರಾಮಚಂದ್ರ ಗುಹಾ
Published:
Updated:
ಆರ್‍ಎಸ್‍ಎಸ್‌ನ ಪ್ರತಿಗಾಮಿ ‘ಪವಿತ್ರ ಗ್ರಂಥ’

ಬೆಂಗಳೂರು ಪುಸ್ತಕ ಪ್ರಕಾಶನಕ್ಕೆ ಪ್ರಸಿದ್ಧವಾದ ನಗರವೇನೂ ಅಲ್ಲ. ಇಂಗ್ಲಿಷ್‌ನ ಯಾವುದೇ ಪ್ರಮುಖ ಪ್ರಕಾಶಕರ ಸಕ್ರಿಯವಾದ ಶಾಖೆ ಇಲ್ಲಿ ಇಲ್ಲ. ಹಾಗೆಯೇ ಕನ್ನಡದ ಪ್ರಮುಖ ಪ್ರಕಾಶಕರು ಮೈಸೂರು ಅಥವಾ ಧಾರವಾಡದವರು. ಹಾಗಿದ್ದೂ ನನ್ನ ತವರು ನಗರದಲ್ಲಿ ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಒಂದು ಪುಸ್ತಕ ಭಾರತದ ರಾಜಕಾರಣ ಮತ್ತು ಸಮಾಜದ ಬಗ್ಗೆ ಅಧ್ಯಯನ ಮಾಡುವ ಎಲ್ಲ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಓದಬೇಕಾದುದು. ಮೂವತ್ತಕ್ಕೂ ಹೆಚ್ಚು ವರ್ಷ ಕಾಲ ಆರ್‍ಎಸ್‍ಎಸ್ ಅನ್ನು ಮುನ್ನಡೆಸಿದ ಮತ್ತು ನಿಧನರಾಗಿ ಬಹಳ ಕಾಲದ ನಂತರವೂ ಸಂಘಟನೆಯ ಸಿದ್ಧಾಂತಿ ಮತ್ತು ಮಾರ್ಗದರ್ಶಕರಾಗಿರುವ ಎಂ.ಎಸ್.ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ಎಂಬುದು ಈ ಕೃತಿ. ನಾಗಪುರದಲ್ಲಿ ನಡೆಯುವ ಆರ್‍ಎಸ್‍ಎಸ್‌ನ ಪ್ರತಿ ಕಾರ್ಯಕ್ರಮದಲ್ಲಿಯೂ (ಇತರೆಡೆಗಳಲ್ಲಿ ಕೂಡ) ಗಡ್ಡಧಾರಿ ಗೋಲ್ವಾಲ್ಕರ್ ಅವರ ಚಿತ್ರವನ್ನು ದೊಡ್ಡದಾಗಿ ಪ್ರದರ್ಶಿಸಲಾಗುತ್ತದೆ.ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ ಕೃತಿಯನ್ನು 1966ರಲ್ಲಿ ಮೊದಲಿಗೆ ಪ್ರಕಟಿಸಿದ್ದು ಬೆಂಗಳೂರಿನ ಚಾಮರಾಜಪೇಟೆ ಪ್ರದೇಶದಲ್ಲಿದ್ದ ವಿಕ್ರಮ ಪ್ರಕಾಶನ. ಇಂಗ್ಲಿಷ್ ಅನುವಾದದ ಈ ಕೃತಿಯಲ್ಲಿ ಗೋಲ್ವಾಲ್ಕರ್ ಅವರ ಭಾಷಣಗಳು ಮತ್ತು ಲೇಖನಗಳಿವೆ. ಇಪ್ಪತ್ತು ವರ್ಷದ ಹಿಂದೆ ಓದಿದ್ದ ಈ ಕೃತಿಯನ್ನು ಇತ್ತೀಚೆಗೆ ನಾನು ಮತ್ತೆ ಓದಿದೆ. ಕೇಂದ್ರದಲ್ಲಿ ಬಿಜೆಪಿ ಬಹುಮತದ ಸರ್ಕಾರ ನಡೆಸುತ್ತಿದ್ದು ನರೇಂದ್ರ ಮೋದಿ  ನೇತೃತ್ವ ವಹಿಸಿದ್ದಾರೆ; ಮೋದಿ ಅವರು ಗೋಲ್ವಾಲ್ಕರ್ ಅವರ ಅಭಿಮಾನಿಯಾಗಿದ್ದು ‘ಪೂಜನೀಯ ಶ್ರೀ ಗುರೂಜಿ’ ಎಂಬ ಸುದೀರ್ಘ ಮತ್ತು ಗೌರವಪೂರ್ಣ ಲೇಖನದಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ.ಬಿಜೆಪಿಯ ಹಲವು ಹಿರಿಯ ಮುಖಂಡರು ಆರ್‍ಎಸ್‍ಎಸ್‌ನಿಂದ ಬಂದವರು ಮತ್ತು ಪಕ್ಷದ ಚಟುವಟಿಕೆಗಳು ಗೋಲ್ವಾಲ್ಕರ್ ಅವರ ಚಿಂತನೆಗಳಿಂದ ಗಾಢ ಪ್ರಭಾವಕ್ಕೆ ಒಳಗಾಗಿವೆ. ಹಾಗಾಗಿ ‘ಬಂಚ್ ಆಫ್ ಥಾಟ್ಸ್’ ಕೃತಿ ಸಮಕಾಲೀನ ಸಂದರ್ಭದಲ್ಲಿ ಮುಖ್ಯವಾದುದಾಗಿದೆ. ಧರ್ಮನಿಷ್ಠ ಕ್ರೈಸ್ತರಿಗೆ ಬೈಬಲ್, ಮುಸ್ಲಿಮರಿಗೆ ಕುರ್‍ಆನ್, ಮಾರ್ಕ್ಸ್‌ವಾದಿಗಳಿಗೆ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ ಇದ್ದ ಹಾಗೆಯೇ ಹಿಂದುತ್ವವಾದಿಗಳಿಗೆ ‘ಬಂಚ್ ಆಫ್ ಥಾಟ್ಸ್’ ಪವಿತ್ರ ಗ್ರಂಥವಾಗಿದ್ದು ಅದರಲ್ಲಿರುವ ಚಿಂತನೆ ಅವರ ವರ್ತನೆಯ ಮೇಲೆ ಪ್ರಭಾವ ಬೀರುತ್ತದೆ. ಗೋಲ್ವಾಲ್ಕರ್ ಅವರ ಕೃತಿಗಳನ್ನು ಓದದ ಹಿಂದುತ್ವವಾದಿ ಕಾರ್ಯಕರ್ತರು ಅದನ್ನು ಓದಿರುವವರು ಮಾಡಿದ ಬೋಧನೆಯನ್ನು ಮೈಗೂಡಿಸಿಕೊಂಡಿದ್ದಾರೆ.ಹಿಂದೂಗಳು ಸದಾ ಒಂದು ಮತ್ತು ಅವಿಭಾಜ್ಯ ಎಂಬುದು ‘ಬಂಚ್ ಆಫ್ ಥಾಟ್ಸ್’ ಕೃತಿಯ ಮುಖ್ಯ ವಾದ. ತನ್ನ ಪ್ರಾಚೀನ ಮೂಲದಿಂದಲೇ ‘ಹಿಂದೂ ಸಮಾಜವು ಸರ್ವ-ಸಮಗ್ರ ರೀತಿಯಲ್ಲಿ ವಿಕಸನಗೊಂಡಿದೆ, ಇದು ದಿಗ್ಭ್ರಮೆಗೊಳಿಸುವ ಹಲವು ಹಂತಗಳು ಮತ್ತು ವಿಧಗಳನ್ನು ಹಾದು ಹೋಗಿದೆ; ಆದರೆ ಈ ಎಲ್ಲ ಹಂತಗಳಲ್ಲಿಯೂ ಏಕೀಕರಣದ ಒಂದು ತಂತು ಅಂತರ್ಗತವಾಗಿ ಹರಿದು ಹೋಗಿದೆ’ ಎಂದು ಗೋಲ್ವಾಲ್ಕರ್ ಬರೆದಿದ್ದಾರೆ. ಈ ಏಕೀಕರಣದ ತಂತು ಏನು ಎಂಬುದನ್ನು ಎಲ್ಲಿಯೂ ವ್ಯಾಖ್ಯಾನಿಸಲಾಗಿಲ್ಲ. ಹಿಂದೂಗಳು ಸದಾ ಒಂದಾಗಿದ್ದರು ಮತ್ತು ಭಾರತ ಒಂದು ದೇಶವಾಗಿತ್ತು ಎಂಬುದನ್ನು ಸರಳವಾಗಿ ಒಪ್ಪಿಕೊಂಡು ಹೋಗಲಾಗಿದೆ.ನಿಜವಾಗಿಯೂ ಮಧ್ಯ ಯುಗದಲ್ಲಿ ತಮಿಳರು ಮತ್ತು ಸಿಂಧಿಗಳು, ಬ್ರಾಹ್ಮಣರು ಮತ್ತು ದಲಿತರು ಎಲ್ಲರೂ ಒಂದು ಎಂದು ಭಾವಿಸುವ ಏಕ ಭಾರತ ಅಥವಾ ಹಿಂದೂ ರಾಷ್ಟ್ರ ಇತ್ತೇ? ಪ್ರಾಚೀನವಾದ ಹಿಂದೂ ರಾಷ್ಟ್ರವಾದದ ತಮ್ಮ ಪರಿಕಲ್ಪನೆಗೆ ವಾಸ್ತವಿಕ ಪುರಾವೆಗಳನ್ನು ನೀಡುವ ಬದಲಿಗೆ ಗೋಲ್ವಾಲ್ಕರ್ ಅವರು ಕಚ್ಚಾ ಅನಿಸುವಂತಹ ಸಮರ್ಥನೆಯನ್ನು ಮುಂದಿಡುತ್ತಾರೆ: ‘ಪಶ್ಚಿಮದ ಜನರು ಹಸಿ ಮಾಂಸದ ಬದಲಿಗೆ ಬೇಯಿಸಿದ ಮಾಂಸ ತಿನ್ನುವುದನ್ನು ಕಲಿಯುವುದಕ್ಕೆ ಬಹಳ ಹಿಂದೆಯೇ ನಾವು ಒಂದು ತಾಯ್ನಾಡನ್ನು ಹೊಂದಿದ್ದ ಒಂದು ದೇಶವಾಗಿದ್ದೆವು’ ಎಂದು ಗೋಲ್ವಾಲ್ಕರ್ ಬರೆದಿದ್ದಾರೆ.ಸದ್ಯದ ಹಿನ್ನಡೆಯನ್ನು ಹೊರತುಪಡಿಸಿಯೂ ಹಿಂದೂಗಳು ಜಗತ್ತನ್ನೇ ಮುನ್ನಡೆಸಬೇಕಾದ ಮತ್ತು ಜಗತ್ತಿಗೆ ಮಾರ್ಗದರ್ಶನ ನೀಡಬೇಕಾದ ಹೊಣೆಗಾರಿಕೆ ಇರುವವರು ಎಂಬುದು ಅವರ ಎರಡನೇ ಸಿದ್ಧಾಂತವಾಗಿದೆ. ‘ಇಡೀ ಜಗತ್ತನ್ನು ಒಂದುಗೂಡಿಸಲು ಬಯಸುವ ಹಿಂದೂಗಳ ಚಿಂತನೆ ಮಾತ್ರ ಮನುಷ್ಯ ಭ್ರಾತೃತ್ವಕ್ಕೆ ಅಗತ್ಯವಾದ ನೆಲೆಗಟ್ಟು ಒದಗಿಸುತ್ತದೆ’ ಎಂದು ಗೋಲ್ವಾಲ್ಕರ್ ಹೇಳುತ್ತಾರೆ. ಜಾಗತಿಕ ನಾಯಕತ್ವ ಎಂಬುದು ದೈವಿಕವಾದ ವಿಶ್ವಾಸ, ಅದನ್ನು ವಿಧಿಯು ಹಿಂದೂಗಳಿಗೆ ನೀಡಿದೆ ಎಂದು ನಾವು ಹೇಳಬಹುದು’ ಎಂದು ಅವರು ವಾದಿಸುತ್ತಾರೆ. (ಹಿಂದೂಗಳು ಜಗತ್ತನ್ನೇ ಆಳುವವರು ಮತ್ತು ಆರ್‍ಎಸ್‍ಎಸ್ ಹಿಂದೂಗಳಿಗೆ ಮುಂದಾಳತ್ವ ನೀಡಬೇಕು ಎಂದೂ ಅವರು ಹೇಳುತ್ತಾರೆ).ಆರ್‍ಎಸ್‍ಎಸ್‌ನ ಈ ಪ್ರಮುಖ ಸಿದ್ಧಾಂತಿ ಬೇರೆ ಧರ್ಮಗಳನ್ನು ಹೇಗೆ ನೋಡುತ್ತಾರೆ? ಗೋಲ್ವಾಲ್ಕರ್ ಬುದ್ಧನನ್ನು ಹೊಗಳುತ್ತಾರೆ. ಆದರೆ ಆತನ ಅನುಯಾಯಿಗಳನ್ನು ಟೀಕಿಸುತ್ತಾರೆ. ಅವರು ‘ಈ ನಾಡಿನ ಪ್ರಾಚೀನ ರಾಷ್ಟ್ರೀಯ ಪರಂಪರೆಗಳನ್ನು ಬುಡಮೇಲುಗೊಳಿಸುವ ಕೆಲಸ ಆರಂಭಿಸಿದರು. ನಮ್ಮ ಸಮಾಜ ಪೋಷಿಸಿಕೊಂಡು ಬಂದಿದ್ದ ಶ್ರೇಷ್ಠ ಸಾಂಸ್ಕೃತಿಕ ಮೌಲ್ಯಗಳನ್ನು ನಾಶ ಮಾಡಲು ಯತ್ನಿಸಿದರು’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬೌದ್ಧರು ಪ್ರಬಲರಾಗಿದ್ದ ಕಾಲದಲ್ಲಿ ‘ದೇಶಭಕ್ತಿ ಮತ್ತು ಅದರ ಪರಂಪರೆ ಪಾತಾಳಕ್ಕೆ ಇಳಿಯಿತು. ಯಾಕೆಂದರೆ, ಬೌದ್ಧ ಮತಾಂಧರು ಬೌದ್ಧ ಧರ್ಮದ ಮುಖವಾಡ ತೊಟ್ಟಿದ್ದ ವಿದೇಶಿ ಆಕ್ರಮಣಕಾರರನ್ನು ಇಲ್ಲಿಗೆ ಆಹ್ವಾನಿಸಿ ಅವರಿಗೆ ನೆರವಾದರು. ಬೌದ್ಧ ಧರ್ಮವು ತಾಯ್ನಾಡಿಗೆ ಮತ್ತು ಮಾತೃ ಧರ್ಮಕ್ಕೆ ದ್ರೋಹ ಬಗೆಯಿತು’ ಎಂಬುದು ಗೋಲ್ವಾಲ್ಕರ್‌ ಅವರ ನಿಲುವು.ಈ ಹೇಳಿಕೆ ಪ್ರಕಾರ ಬೌದ್ಧರು ದೇಶಭಕ್ತರಲ್ಲ. ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ ನಂತರ 1950 ಮತ್ತು 60ರ ದಶಕಗಳಲ್ಲಿ ಬರೆದ ಲೇಖನಗಳಲ್ಲಿ ಇದನ್ನು ಗೋಲ್ವಾಲ್ಕರ್ ಅವರು ಹೇಗೆ ಕಂಡರು? ಅಂಬೇಡ್ಕರ್ ಅವರು ‘ಮಾತೃ ಸಮಾಜ ಮತ್ತು ಧರ್ಮಕ್ಕೆ ದ್ರೋಹ ಎಸಗಿದರೇ?’ ಈ ಎರಡೂ ಅಂಶಗಳ ಬಗ್ಗೆ ‘ಬಂಚ್ ಆಫ್ ಥಾಟ್ಸ್’ ಮೌನವಾಗಿದೆ. ಆಸಕ್ತಿದಾಯಕ ಸಂಗತಿ ಎಂದರೆ, ಅಂಬೇಡ್ಕರ್ ಬಗ್ಗೆ ಈಗ ಆರ್‍ಎಸ್‍ಎಸ್ ಬೆಳೆಸಿಕೊಂಡಿರುವ ಹೊಸ ಪ್ರೀತಿಗೆ ವ್ಯತಿರಿಕ್ತವಾಗಿ ಶ್ರೇಷ್ಠ ದಲಿತ ವಿಮೋಚಕನನ್ನು ಗೋಲ್ವಾಲ್ಕರ್ ಕಾಣುತ್ತಾರೆ. ಅದರ ಜತೆಗೆ, ಶತಮಾನಗಳಿಂದ ಹಿಂದೂಗಳನ್ನು ಒಗ್ಗಟ್ಟಾಗಿ ಮತ್ತು ಸಂಘಟಿತರಾಗಿ ಇರಿಸಿರುವ ಜಾತಿ ವ್ಯವಸ್ಥೆಯನ್ನು ಅವರು ಗಟ್ಟಿಯಾಗಿ ಸಮರ್ಥಿಸುತ್ತಾರೆ. ಈ ಬಗ್ಗೆ ಅವರ ನಿಲುವು ಹೀಗಿದೆ: ‘ಒಂದೆಡೆ, ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಗ್ರೀಕರು, ಶಕರು, ಹೂಣರು, ಮುಸ್ಲಿಮರು ಮತ್ತು ಯುರೋಪಿಯನ್ನರ ಕೊಳ್ಳೆಯ ನಂತರವೂ ‘ಜಾತಿ ವ್ಯವಸ್ಥೆ’ಯಿಂದ ಕೂಡಿದ ಹಿಂದೂ ಸಮಾಜವು ಸಜೀವ ಮತ್ತು ಅಭೇದ್ಯವಾಗಿ ಉಳಿದಿದೆ... ಇನ್ನೊಂದೆಡೆ ಜಾತಿರಹಿತ ಎಂದು ಹೇಳಿಕೊಳ್ಳುವ ಸಮಾಜಗಳು ಮತ್ತೆಂದೂ ಮೇಲೇಳದ ರೀತಿಯಲ್ಲಿ ಕುಸಿದು ದೂಳಾಗಿ ಹೋಗಿವೆ’.ವರ್ಣ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಗೋಲ್ವಾಲ್ಕರ್ ಜಾತಿಯನ್ನು ಉಲ್ಲೇಖಿಸುತ್ತಾರೆ. ಆದರೆ ಅವರ ಈ ಪ್ರಮುಖ ಕೃತಿಯಲ್ಲಿ ಲಿಂಗತ್ವ ಸಂಬಂಧಗಳ ಬಗ್ಗೆ ಗಮನವನ್ನೇ ಹರಿಸಲಾಗಿಲ್ಲ. ‘ಬಂಚ್ ಆಫ್ ಥಾಟ್ಸ್’ ಕೃತಿಯು ಹಿಂದೂ ಸಮಾಜದಲ್ಲಿ ದಲಿತರು ಮತ್ತು ಮಹಿಳೆಯರು ಅನುಭವಿಸುವ ಶೋಷಣೆಯನ್ನು ನಿರ್ಲಕ್ಷಿಸುತ್ತದೆ. ಅದರ ಜತೆಗೆ, ಭಾರತದ ಮುಸ್ಲಿಮರು ಮತ್ತು ಕ್ರೈಸ್ತರ ಬಗ್ಗೆ ಅವರು ಆಳವಾದ ಶಂಕೆ ಮತ್ತು ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ‘ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿರುವ ಈ ಜನರ ನಿಲುವು ಏನು? ಅವರು ಈ ನೆಲದಲ್ಲಿ ಹುಟ್ಟಿದವರು ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಅವರು ಈ ನೆಲಕ್ಕೆ ಋಣಿಗಳಾಗಿದ್ದಾರೆಯೇ?  ಬೆಳೆಸಿದ ನೆಲಕ್ಕೆ ಅವರು ಕೃತಜ್ಞರಾಗಿದ್ದಾರೆಯೇ? ಈ ಮಣ್ಣಿನ ಮತ್ತು ಪರಂಪರೆಯ ಮಕ್ಕಳು ಎಂಬ ಭಾವನೆ ಅವರಲ್ಲಿ ಇದೆಯೇ? ಈ ನೆಲದ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ದೊಡ್ಡ ಅದೃಷ್ಟ ಎಂದು ಅವರು ಭಾವಿಸಿದ್ದಾರೆಯೇ? ತಾಯ್ನಾಡಿನ ಸೇವೆ ಮಾಡುವುದು ತಮ್ಮ ಕರ್ತವ್ಯ ಎಂಬ ಭಾವನೆ ಅವರಲ್ಲಿದೆಯೇ? ಇಲ್ಲ. ಧರ್ಮದ ಬದಲಾವಣೆಯ ಜತೆಗೆ ಪ್ರೀತಿಯ ಸ್ಫೂರ್ತಿ ಮತ್ತು ದೇಶಭಕ್ತಿಗಳೂ ಹೋಗಿವೆ’ ಎಂದು ಗೋಲ್ವಾಲ್ಕರ್ ಹೇಳಿದ್ದಾರೆ.ಗೋಲ್ವಾಲ್ಕರ್ ಅವರು ಕೇಳಿದ ಪ್ರಶ್ನೆಗಳು ಮತ್ತು 19 ಹಾಗೂ 20ನೇ ಶತಮಾನದ ಆರಂಭದಲ್ಲಿ ಯುರೋಪ್‌ನ ಯಹೂದಿ ವಿರೋಧಿಗಳು ಕೇಳುತ್ತಿದ್ದ ಪ್ರಶ್ನೆಗಳ ನಡುವೆ ಸಾಮ್ಯ ಇದೆ. ಫ್ರಾನ್ಸ್, ಜರ್ಮನಿ ಮತ್ತು ಬ್ರಿಟನ್‌ನ  ರಾಷ್ಟ್ರೀಯವಾದಿಗಳು ತಮ್ಮ ದೇಶದಲ್ಲಿ ಇದ್ದ ಯಹೂದಿಗಳ ಬಗ್ಗೆ ಶಂಕೆ ಹೊಂದಿದ್ದರು. ಈ ಯಹೂದಿಗಳು ತಮ್ಮ ತಾಯ್ನೆಲಕ್ಕೆ ಸಾಕಷ್ಟು ನಿಷ್ಠರಾಗಿಲ್ಲ ಎಂಬ ಭಾವನೆ ಅವರಲ್ಲಿ ಇತ್ತು.ತಮ್ಮ ಚಿಂತನಾಕ್ರಮಕ್ಕೆ ಅನುಗುಣವಾಗಿಯೇ, ಗೋಲ್ವಾಲ್ಕರ್ ಅವರು ಯಾವುದೇ ಪುರಾವೆಗಳ ಬೆಂಬಲ ಇಲ್ಲದೆ ಭಾರತದಾದ್ಯಂತ ಅಸಂಖ್ಯ ‘ಸಣ್ಣ ಸಣ್ಣ ಪಾಕಿಸ್ತಾನಗಳಿವೆ’ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಮುಸ್ಲಿಮರು ಪಾಕಿಸ್ತಾನದ ಏಜೆಂಟರು ಎಂಬುದು ಗೋಲ್ವಾಲ್ಕರ್ ನಿಲುವಾಗಿತ್ತು. ‘ದೆಹಲಿಯಿಂದ ರಾಮಪುರ, ಲಖನೌವರೆಗೆ ಇರುವ ಮುಸ್ಲಿಮರು ಅಪಾಯಕಾರಿಯಾದ ಸಂಚು ಹೂಡುತ್ತಿದ್ದಾರೆ, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ತಮ್ಮ ಜನಗಳನ್ನು ಸಂಘಟಿಸುತ್ತಿದ್ದಾರೆ. ನಮ್ಮ ದೇಶದ ವಿರುದ್ಧ ಪಾಕಿಸ್ತಾನ ಯುದ್ಧ ಹೂಡುವ ಸಂದರ್ಭದಲ್ಲಿ ಇವರು ದೇಶದೊಳಗಿನಿಂದಲೇ ದಾಳಿ ಆರಂಭಿಸಲಿದ್ದಾರೆ’.‘ಪ್ರಾಚೀನ ಹಿಂದೂ ರಾಷ್ಟ್ರದ ಕಲ್ಪನೆಗೆ ಬೆಂಬಲವಾಗಿ ಪವಿತ್ರ, ಧರ್ಮಪರ ಮತ್ತು ಅಜೇಯವಾದ ದೇಶ ಕಟ್ಟುವುದು ಪ್ರತಿ ಹಿಂದೂವಿನ ಅತಿ ದೊಡ್ಡ ಕರ್ತವ್ಯ’ ಎಂದು ಗೋಲ್ವಾಲ್ಕರ್ ಪ್ರತಿಪಾದಿಸುತ್ತಾರೆ. ಈ ಮೇಲರಿಮೆಯ ನಿಲುವಿನ ಜತೆಗೆ, ಹಿಂದೂವಿನ ಕರ್ತವ್ಯ ಏನು ಎಂಬುದರ ಬಗ್ಗೆ ಮಹಾತ್ಮ ಗಾಂಧಿಯ ನಿಲುವನ್ನು ಹೋಲಿಸಿ ನೋಡಬೇಕು. ಅಸ್ಪೃಶ್ಯತೆ ನಿರ್ಮೂಲನ ಮಾಡುವುದು ಮತ್ತು ಮಹಿಳೆಯ ವಿರುದ್ಧದ ಶೋಷಣೆ ಕೊನೆಗೊಳಿಸುವುದು ಪ್ರತಿ ಹಿಂದೂವಿನ ಕರ್ತವ್ಯ ಎಂದು ಗಾಂಧಿ ಹೇಳಿದ್ದಾರೆ. ಧರ್ಮಗಳ ನಡುವೆ ಸಾಮರಸ್ಯ ಸೃಷ್ಟಿಸುವುದು ಪ್ರತಿ ಭಾರತೀಯನ ಕರ್ತವ್ಯ. ಹಿಂದೂ, ಅಥವಾ ಭಾರತೀಯ ಎಂಬುದರ ಬಗ್ಗೆ ಗೋಲ್ವಾಲ್ಕರ್ ಮತ್ತು ಗಾಂಧಿ ಪ್ರತಿಪಾದಿಸಿರುವ ರೀತಿಯ ಎರಡು ವ್ಯತಿರಿಕ್ತ ನಿಲುವುಗಳು ಇರುವುದು ಸಾಧ್ಯವಿಲ್ಲ.

ಸುದೀರ್ಘ ಕಾಲ ಆರ್‍ಎಸ್‍ಎಸ್ ಮುಖ್ಯಸ್ಥರಾಗಿದ್ದ ಅವರು ಪ್ರಜಾಪ್ರಭುತ್ವವನ್ನೇ ವಿರೋಧಿಸಿದ್ದರು. ಅದು ಜನರಿಗೆ ಅತಿಯಾದ ಸ್ವಾತಂತ್ರ್ಯ ನೀಡುತ್ತದೆ ಎಂಬುದು ಈ ವಿರೋಧಕ್ಕೆ ಕಾರಣವಾಗಿತ್ತು. ಭಾರತದ ಸಂವಿಧಾನವೇ ತಮ್ಮ ಪವಿತ್ರ ಗ್ರಂಥ ಎಂದು ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಆದರೆ ಅವರ ಗುರು ಗೋಲ್ವಾಲ್ಕರ್, ಸಂವಿಧಾನ ಲೋಪಗಳಿಂದ ಕೂಡಿದ್ದು ಅದನ್ನು ತಿರಸ್ಕರಿಸಬೇಕು ಅಥವಾ ಕನಿಷ್ಠ ಪಕ್ಷ ಪುನರ್‌ರಚಿಸಬೇಕು ಎಂದು ಭಾವಿಸಿದ್ದರು.‘ನಮ್ಮ ಸಂವಿಧಾನ ರಚನೆಕಾರರು ಏಕರೂಪಿ, ಒಂದೇ ರಾಷ್ಟ್ರವಾದದ ನಮ್ಮ ಬದ್ಧತೆಯಲ್ಲಿ ನೆಲೆಯೂರಿದವರಲ್ಲ’ ಎಂದು ‘ಬಂಚ್ ಆಪ್ ಥಾಟ್ಸ್’ ಕೃತಿಯಲ್ಲಿ ಹೇಳಲಾಗಿದೆ. ಭಾರತವನ್ನು ರಾಜ್ಯಗಳ ಒಕ್ಕೂಟವಾಗಿ ರೂಪಿಸಿದ್ದು ಗೋಲ್ವಾಲ್ಕರ್ ಅವರಿಗೆ ಸಿಟ್ಟು ತರಿಸಿತ್ತು. ಈ ಗಣರಾಜ್ಯ ವ್ಯವಸ್ಥೆಯು ‘ರಾಷ್ಟ್ರೀಯ ವಿದಳನ ಮತ್ತು ಸೋಲಿನ’ ಬೀಜ ಬಿತ್ತುತ್ತದೆ ಎಂದು ಅವರು ಭಾವಿಸಿದ್ದರು. ಸರ್ವಶಕ್ತವಾದ ಕೇಂದ್ರವನ್ನು ಅವರು ಬಯಸಿದ್ದರು. ಸಹಕಾರಿ ಗಣರಾಜ್ಯ ವ್ಯವಸ್ಥೆಯ ಮೌಲ್ಯಗಳ ಬಗ್ಗೆ ನರೇಂದ್ರ ಮೋದಿ ಅವರು ಈಗ ಮಾತನಾಡುತ್ತಿದ್ದಾರೆ. ‘ನಮ್ಮ ದೇಶದ ಸಂವಿಧಾನವು ಪ್ರತಿಪಾದಿಸುವ ಗಣರಾಜ್ಯ ವ್ಯವಸ್ಥೆಯ ಬಗೆಗಿನ ಮಾತುಗಳನ್ನು ಆಳವಾಗಿ ಹೂತುಬಿಡುವುದು ಎಲ್ಲರಿಗೂ ಒಳ್ಳೆಯದು’ ಎಂದು ಮೋದಿ ಅವರ ಗುರು ಗೋಲ್ವಾಲ್ಕರ್ ಬರೆದಿದ್ದಾರೆ. ‘ಸಂವಿಧಾನವನ್ನು ಮರುಪರಿಶೀಲನೆಗೆ ಒಳಪಡಿಸಿ, ಪುನರ್ ರಚಿಸಬೇಕು. ಈ ಮೂಲಕ ಏಕೀಕೃತ ಸರ್ಕಾರ ವ್ಯವಸ್ಥೆಯನ್ನು ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದ್ದರು.‘ಬಂಚ್ ಆಫ್ ಥಾಟ್ಸ್’ ಕೃತಿಯನ್ನು ಓದುವ ಯಾರೇ ಆದರೂ ಈ ಲೇಖನದಲ್ಲಿ ಉಲ್ಲೇಖಿಸಿರುವ ಕೃತಿಯ ಭಾಗಗಳು (ಸಂಪೂರ್ಣವಾಗಿ ಪ್ರಾತಿನಿಧಿಕ) ನೀಡುವ ತೀರ್ಮಾನಕ್ಕೇ ಬರುತ್ತಾರೆ. ಆ ತೀರ್ಮಾನ ಏನೆಂದರೆ, ಈ ಕೃತಿಯ ಲೇಖಕ ಪ್ರತಿಗಾಮಿ ಧರ್ಮಾಂಧ ಮತ್ತು ಅವರ ಚಿಂತನೆಗಳು ಮತ್ತು ಪೂರ್ವಗ್ರಹಗಳಿಗೆ ಆಧುನಿಕ, ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಳ ಇಲ್ಲ. ಪ್ರಧಾನಿ ಮೋದಿ ಅವರು ಉತ್ತರಗಳನ್ನು ಬರೆದುಕೊಂಡು ಬಾರದೆ ಮುಕ್ತ ಪತ್ರಿಕಾಗೋಷ್ಠಿ ನಡೆಸುವ ಧೈರ್ಯ ತೋರಿದರೆ, ಪ್ರಾಮಾಣಿಕ ಪತ್ರಕರ್ತ ಈ ಪ್ರಶ್ನೆಯನ್ನು ಕೇಳಲೇಬೇಕು: ‘ಸರ್, ಎಂ.ಎಸ್. ಗೋಲ್ವಾಲ್ಕರ್ ಬಗೆಗಿನ ನಿಮ್ಮ ಅಭಿಮಾನ (ಸುದೀರ್ಘ ಕಾಲದ್ದು), ಬಿ.ಆರ್. ಅಂಬೇಡ್ಕರ್ ಹಾಗೂ ಮೋಹನದಾಸ್ ಗಾಂಧಿ ಅವರ ಬಗ್ಗೆ ನೀವು ಹೊಂದಿರುವ (ಹೊಸದಾಗಿ ಕಂಡುಕೊಂಡದ್ದು) ಗೌರವ ಮತ್ತು ಆದರಗಳ ನಡುವೆ ಹೇಗೆ ಸಮನ್ವಯ ಮಾಡಿಕೊಳ್ಳುವಿರಿ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry