ಸೋಮವಾರ, ಜನವರಿ 27, 2020
22 °C

ಆಹಾ! ಎಂಥಾ ಡ್ರೆಸ್ಸು ಸಾರ್!

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ಆಹಾ! ಎಂಥಾ ಡ್ರೆಸ್ಸು ಸಾರ್!

ಕ್ಷಣಾರ್ಧದಲ್ಲಿ ಪೆಕರ ಬ್ರೇಕಿಂಗ್ ನ್ಯೂಸ್ ಆಗಿಬಿಟ್ಟಿದ್ದ. ಎಲ್ಲರೂ ಪೆಕರನನ್ನು ನಿಟ್ಟಿಸುವವರೇ. ಎಲ್ಲರ ಕಣ್ಣು ಪೆಕರ­ನ ಮೇಲೆ. ಕೆಲವರಿಗೆ ಅಚ್ಚರಿ. ಕೆಲವರಿಗೆ ನಗು!ಗಾಂಧೀಜಿ ರೀತಿಯಲ್ಲೇ ವೇಷಭೂಷಣ ತೊಟ್ಟಿದ್ದ ಪೆಕರ. ಥೇಟ್ ಗಾಂಧೀಜಿ ರೀತಿಯಲ್ಲೇ ಕಚ್ಚೆ, ಹೆಗಲ ಮೇಲೊಂದು ತುಂಡು, ರೌಂಡ್ ಶೇಪಿನ ಕನ್ನಡಕ, ಕೈಯ್ಯ ಲ್ಲೊಂದು ದೊಣ್ಣೆ ಹಿಡಿದುಕೊಂಡು ಬಂದಿದ್ದ. ಸ್ವಭಾವತಃ ಸಣ ಕಲ­ನಾಗಿದ್ದರಿಂದ ಎದೆಗೂಡಿನ ಮೂಳೆಗಳು ಎದ್ದುಕಾಣುತ್ತಿ ದ್ದವು. ಹೀಗಾಗಿ ಪೆಕರನನ್ನು ನೋಡಿದ ಕೂಡಲೇ ಮೇಲ್ನೋಟಕ್ಕೆ ಗಾಂಧೀಜಿ ಎಂದೇ ಯಾರಾದರೂ ನಂಬಬಹುದಿತ್ತು.‘ನಮಸ್ಕಾರ ಸಾರ್, ನೀವು ಥೇಟ್ ಗಾಂಧೀಜಿ ತರಹವೇ ಕಾಣ್ತಾ ಇದ್ದೀರಿ’ ಎಂದು ಸ್ನೇಹಿತರು ಪೆಕರನನ್ನು ಅಭಿನಂದಿಸಿದರು. ಪೆಕರ ಖುಷಿಯಿಂದ ಉಬ್ಬಿ ಹೋದ.ಸುವರ್ಣಸೌಧದ ಮೊಗಸಾಲೆಯಲ್ಲೂ ಪೆಕರನ ವೈಬ್ರೇಷನ್ ಪವಾಡ ನಡೆದೇ ಇತ್ತು.‘ಈಗ ಗಾಂಧೀಜಿಯನ್ನು ಯಾರು ನೆನಪಿಸಿಕೊಳ್ತಾರೆ? ಅವರ ತತ್ವ­ಗಳನ್ನು ಯಾರು ಪಾಲನೆ ಮಾಡ್ತಾ ಇದ್ದಾರೆ. ಗಾಂಧಿ ಅಂದ್ರೆ ಯಾರು ಸೋನಿಯಾ ಗಾಂಧೀನಾ? ರಾಹುಲ್ ಗಾಂಧೀನಾ? ಅಂತ ಕೇಳೋ ಕಾಲ ಇದು. ಈಗ ನಾಲ್ಕು ರಾಜ್ಯ­ಗಳ ಚುನಾವಣೆ ಫಲಿತಾಂಶ ಬಂದ ಮೇಲಂತೂ ಅವರನ್ನೂ ನೆನಪಿಸಿಕೊಳ್ಳೋದು ಕಷ್ಟ ಆಗಿದೆ. ಇಂಥಾ ಸಮಯದಲ್ಲಿ  ನಿಜವಾದ ರಾಷ್ಟ್ರಪಿತನನ್ನು ಅನುಕರಣ ಮಾಡ್ತಾ ಇದ್ದೀರಿ ಅಂದ್ರೆ ನೀವು ನಿಜಕ್ಕೂ ಗ್ರೇಟ್ ಸಾರ್’ ಎಂದು ಶಾಸಕರು, ಸಚಿವರು ಹೊಗಳಿದರು.ಉಬ್ಬಿ ಹೋದ ಪೆಕರ. ‘ಎಲ್ಲಾ ನಿಮ್ಮ ಕೃಪೆ ಸ್ವಾಮಿ’ ಎಂದ.‘ಈ ಡ್ರೆಸ್‌ನಲ್ಲಿ ಬಹಳ ಚೆನ್ನಾಗಿ ಕಾಣ್ತಾ ಇದ್ದೀರಾ, ಮನೆಗೆ ಹೋಗಿ ದೃಷ್ಟಿ ತೆಗೆಸಿಕೊಳ್ಳಿ ಸ್ವಾಮಿ’ ಎಂದು ಶಾಸಕರಾದ ಟಿ.ಸಿ.ಕವಿ ಅವರು ಸಲಹೆ ಮಾಡಿದರು.‘ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹಕ್ಕೆ ಬಂದಾಗ ಹೀಗೇ ಕಾಣ್ತಾ ಇದ್ದರು. ನೀವು ಈಗ ಅದೇ ಸ್ಟೈಲ್‌ ನಲ್ಲಿ ಬಂದಿದ್ದೀರಿ’ ಎಂದು ಶಾಸಕ ಬಕಾರಾಂ ಹೊಗಳಿದರು.ಎಲ್ಲ ಶಾಸಕರು, ಸಚಿವರು, ಸ್ನೇಹಿತರು ಅಭಿನಂದನೆಗಳ ಮಹಾ­ಪೂರವನ್ನೇ ಹರಿಸಲಾರಂಭಿಸುತ್ತಿದ್ದಂತೆಯೇ ಪೆಕರನಿಗೆ ಒಂದು ಹಂತದಲ್ಲಿ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ಕರ್ಚೀಫಿನಿಂದ ಕಣ್ಣು ಒರೆಸಿಕೊಂಡು ಹಾಗೆಯೇ ನಿಂತ.‘ಗಾಂಧೀಜಿ ತರಹ ಡ್ರೆಸ್ ಹಾಕಿಕೊಂಡು ಬಂದಿದ್ದೀರಿ. ಅದೇನೋ ಸರಿ, ಆದರೆ ಸ್ವಲ್ಪ ಗಡ್ಡ ಬೋಳಿಸಿ, ತಲೆಯನ್ನೂ ಬೋಳಿಸಿಕೊಂಡು ಬಂದಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು. ಬೆನ್‌ಕಿಂಗ್ಸ್‌ಲೀ ತರ ಆಗೋಗಿ ಬಿಡ್ತಿದ್ರಿ’ ಎಂದು ಕುಟ್ಟಣ್ಣಯ್ಯ ಅವರು ಜೋಕ್ ಮಾಡಿ, ಅಳುವಿನ ದೃಶ್ಯವನ್ನು ನಗುವಿನ ದೃಶ್ಯ­ವನ್ನಾಗಿ ಪರಿವರ್ತಿಸಿದರು.ಅಷ್ಟರಲ್ಲಿ ಪೆಕರನ ಬಳಿ ಬಂದ ಸ್ನೇಹಿತ: ‘ಏನಾಗಿದೆ ನಿನಗೆ? ಏಕೆ ಇವತ್ತು ಈ ರೀತಿ ಫ್ಯಾಷನ್‌ ಷೋ?’ ಎಂದು ಪ್ರಶ್ನಿಸಿದ.‘ಏನಯ್ಯ ಹೀಗೆ ಕೇಳ್ತಾ ಇದೀಯಾ? ನಿನಗೆ ಗೊತ್ತಿಲ್ಲವೇ ಇವತ್ತು ಏನಾಯ್ತು ಅಂತ?  ರಾಜಕೀಯ ಸೇವಾ ದುರಂಧರ ರಾದ ವಾದಬ್ರಹ್ಮ ಮಾದೇಶ್‌ಕುಮಾರ್ ಅವರು ‘ಮಠ’ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ್ದಾರೆ. ಅದನ್ನು ಪ್ರತಿಭಟಿಸಲು ನಾನು ಮಠ ಅವರ ಪರಕಾಯ ಪ್ರವೇಶಿಸಿ ಈ ರೀತಿ ಗಾಂಧೀಮಾರ್ಗ ಹಿಡಿದಿದ್ದೇನೆ. ನನ್ನ ಈ ‘ಹಾದಿ’; ಭ್ರಷ್ಟರನ್ನು ‘ಮನಿ’ಗೆ ಕಳುಹಿಸುವ ಹಾದಿ’ ಎಂದು ಪೆಕರ ಹುಬ್ಬಳ್ಳಿ ಶೈಲಿಯಲ್ಲಿ ಒದರಿದ.ಪೆಕರನ ವಿವರಣೆಯಿಂದ ಹಿರಿಹಿರಿಹಿಗ್ಗಿದ ಸ್ನೇಹಿತ, ‘ಅಂತೂ ಹಕ್ಕುಚ್ಯುತಿ ಮಂಡಿಸಿದವರನ್ನು ‘ಮಠ’ಕ್ಕೆ ಕಳುಹಿಸ್ತೀರಿ ಬಿಡಿ’ ಎಂದು ಪೆಕರನ ಮೈಗೆ ಮತ್ತಷ್ಟು ಆಮ್ಲಜನಕ ತುಂಬಿದ. ಅಲ್ಲದೆ, ‘ಹಕ್ಕುಚ್ಯುತಿ ಏಕ್ಸಾರ್?’ ಎಂದೂ ಪ್ರಶ್ನೆ ಮುಂದಿಟ್ಟ.‘ಸದನದಲ್ಲಿ ವಾಗ್ದಂಡನೆ ವಿಧಿಸುವಂಥದ್ದು ನಾನೇನಯ್ಯಾ ಮಾಡಿದೆ? ತಪ್ಪು ಹುಡುಕಿ ಹೇಳುವುದೂ ತಪ್ಪಾ? ಸಂಪುಟ ವಿಸ್ತ­ರಣೆ ಮಾಡಲೇ ಬೇಕೂಂತ ಕೆಲವು ಘನಂದಾರಿ ಪುಢಾರಿಗಳು ದೆಹಲಿಯವರೆಗೆ ಮನವಿ ಒಯ್ದಿದ್ದಾರೆ. ಭೂಹಗರಣದಲ್ಲಿ ಭಾಗಿಯಾಗಿರುವ ಇಬ್ಬರು, ಗಣಿ ಹಗರಣದಲ್ಲಿ ಇನ್‌ವಾಲ್ವ್ ಆಗಿರುವ ಒಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಅಂತ ನಾನು ಕಳ್ಳಾಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇ ದೊಡ್ಡ ಅಪರಾಧವೇ?’ ಪೆಕರ ಕೈಕೈ ಹಿಸುಕಿಕೊಂಡ.‘ಕಳಂಕಿತರಿಗೆ ಸಚಿವ ಸ್ಥಾನ ಕೊಡಲ್ಲ ಅಂತ ಅಯ್ಯ ಅವರು ಯಾವತ್ತೋ ಹೇಳಿಯಾಗಿದೆ. ಆದರೂ ಈ ಮೂರು ಜನ ಹೇಗಾದರೂ ಸಂಪುಟಕ್ಕೆ ನುಸುಳಲೇಬೇಕು ಅಂತ ಚಾಲೆಂಜ್ ಮಾಡಿದ್ದಾರೆ. ಇವರ್‍ನೆಲ್ಲಾ ಸಂಪುಟಕ್ಕೆ ಸೇರಿಸಿಕೊಂಡ್ರೆ ಹಳೆಮನೆಗೆ ಹೆಗ್ಗಣ ಸೇರಿಕೊಂಡಂತಾಗುತ್ತೆ ಅಷ್ಟೇ ಸಾರ್’ ಎಂದು ಪೆಕರನ ಸ್ನೇಹಿತ ಉಸುರಿದ.‘ನನ್ನ ವಿರುದ್ಧ ಮಾದೇಶ್‌ಕುಮಾರ್ ಅವರು ಹಕ್ಕುಚ್ಯುತಿ ಮಂಡಿಸಿದಾಗ ಇಡೀ ಸದನದಲ್ಲಿ ಎಲ್ಲ ಪಕ್ಷದವರೂ ಅನಂದತುಂದಿಲರಾದರು. ಎಲ್ಲ ಪಕ್ಷದಲ್ಲೂ ಕಳ್ಳರಿದ್ದಾರೆ. ಎಲ್ಲರ ಜಾತಕ ನನ್ನ ಕೈಲಿದೆ. ತಗೋ ಕರುಣಾಮಯನ ‘ಜಾಯ್ಸ್’ ಭೂಮಿ ನುಂಗಾಟದ ಕಥೆ ಇಲ್ಲಿದೆ. ಅಲ್ಲಿ ಕೂತಿರೋರಲ್ಲಿ ಮುಕ್ಕಾಲು ಪಾಲು ಜನರಿಗೆ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಇದೆ ಅಂತ ರಿಪೋರ್ಟ್ ಹೇಳುತ್ತೆ. ಅವರೆಲ್ಲಾ ನನಗೆ ಛೀಮಾರಿ ಹಾಕ್ತಾರಂತೆ! ಇಂತಹವರಿಗೆ ಪವರ್ ಬೇಕಂತೆ. ಸಮಾಜಸೇವೆ ಮಾಡೋಕೆ ಗೂಟದ ಕಾರು ಬೇಕಂತೆ. ಅವರಿಗೆ ಅಧಿಕಾರ ಕೊಟ್ರೆ ಅಷ್ಟೇ ದೇಶದ ಕತೆ, ಎಂಜಲಿಗೆ ಹೇಸದವರು ತಂಗಳನ್ನ ಬಿಡ್ತಾರಾ?’ ಗಾಂಧೀಜಿ ವೇಷದಲ್ಲಿದ್ದರೂ ಪೆಕರನ ಧ್ವನಿ, ಕ್ರೈಂನ್ಯೂಸ್ ವರದಿಗಾರನ ತರಹ ಏರುದನಿಯಲ್ಲಿತ್ತು.‘ಇವರಿಗೆಲ್ಲಾ ಡಾಜಿಪ ಬೆಂಬಲವಿದೆ ಸಾರ್, ಕಳಂಕಿತ ಪಟ್ಟಿಯಲ್ಲಿರುವವರಿಗೆಲ್ಲಾ ಒಂದೊಂದು ಸ್ಥಾನ ಕೊಟ್ಟು ಬಿಟ್ಟರೆ, ವಿಸ್ತರಣೆ ಸಮಯದಲ್ಲಿ ಅವರ ಹಿಂದೆಯೇ ತಾನೂ ನುಸುಳಿ ಭದ್ರಸ್ಥಾನ ಹಿಡಿದುಕೊಳ್ಳಬಹುದು ಎನ್ನುವುದು ಡಾಜಿಪ ಪ್ಲಾನು ಸಾರ್’ ಎಂದು ಪೆಕರನ ಸ್ನೇಹಿತ ಕಿವಿ ಊದಿದ.

‘ಪಾಪ, ಡಾಜಿಪ ಏನ್‌ಮಾಡ್ತಾರೆ? ಒಂದು ರನ್‌ನಲ್ಲಿ ಶತಕ ಕಳೆದುಕೊಂಡ ಬ್ಯಾಟ್ಸ್‌ಮನ್ ತರಹ ಆಗಿದೆ ಅವರ ಕಥೆ’ ಎಂದು ಪೆಕರ ದುಃಖ ವ್ಯಕ್ತಪಡಿಸಿದ.‘ಆದರೂ ಸತ್ಯಸಂಧರನ್ನು ಯಾರೂ ನಂಬಲ್ಲ ಸಾರ್, ಸತ್ಯವಂತರಿಗಿದು ಕಾಲವಲ್ಲ’ ಎಂದು ಪೆಕರನ ಸ್ನೇಹಿತ ಸಮಾಧಾನಪಡಿಸಲು ಯತ್ನಿಸಿದ.

‘ನಿಜ ಹೇಳಿದರೆ ಎಲ್ಲರಿಗೂ ಅಪಥ್ಯ. ನಾನು ಎನ್‌ಜಿಒ ನಡೆಸ್ತಾ ಇದೀನಿ ಅಂತ ಪುಕಾರು ಮಾಡ್ತಾರೆ. ಕಚೇರಿಗೆ ಕಲ್ಲು ಹೊಡೀತಾರೆ. ವಿದೇಶಿ ಹಣ ಪಡೀತೀನಿ ಅಂತ ಅರೋಪ ಮಾಡ್ತಾರೆ. ಹಕ್ಕುಚ್ಯುತಿ ಮಂಡಿಸ್ತಾರೆ. ನಾನು ಗಾಂಧೀ ಸ್ವಾಮಿ, ನನ್ನನ್ನು ಯಾರೂ ಏನೂ ಮಾಡಕ್ಕಾಗಲ್ಲ. ನನ್ನದು ಗಾಂಧೀಮಾರ್ಗ’ ಎಂದು ಪೆಕರ ದುಃಖಿಸಿದ.‘ನೀವು ಹಕ್ಕುಚ್ಯುತಿಗೆಲ್ಲಾ ಹೆದರಬೇಡಿ ಸಾರ್, ನೀವು ಹೀಗೆ ಗಾಂಧಿ ತರಹ ಕೂತರೆ ಕೆಲಸ ಆಗಲ್ಲ. ಸೀದಾ ರಾಜ್ಯಪಾಲರ ಹತ್ರ ಹೋಗಿ ದೂರುಕೊಡಿ’ ಸ್ನೇಹಿತ ಪೆಕರನಿಗೆ ಸಲಹೆ ನೀಡಿದ.‘ಅಯ್ಯೋ ರಾಮ, ಅವರೂ ಈಗ ಗರಂ ಆಗಿದ್ದಾರೆ. ಸಚಿವರೊಬ್ಬರು ರೇಸ್ ಆಡ್ತಾ ಇದ್ರಂತೆ, ಮತ್ತೊಬ್ಬರು ಕುಲಪತಿ ನೇಮಕ ವಿಚಾರದಲ್ಲಿ ಕ್ಯಾರೇ ಎನ್ನಲಿಲ್ಲವಂತೆ. ದೆಹಲಿ ಮೇಡಂಗೆ ದೂರು ನೀಡಿದ್ರೆ, ಪದೇಪದೇ ನಿಮ್ದು ಇದೇ ರಾಮಾಯಣ ಆಯ್ತು ಹೋಗ್ರಿರೀ ಎಂದು ‘ಕೈ’ ಅಲ್ಲಾಡಿಸಿದರಂತೆ. ಅವರದೂ ಗಾಂಧಿಕತೆನೇ ಆಗಿದೆ ಬಿಡ್ರಿ’ ಎಂದು ಪೆಕರ ಅಲ್ಲಿಂದ ಪ್ರೆಸ್‌ಕ್ಲಬ್ ಕಡೆ ಹೆಜ್ಜೆ ಹಾಕಿದ.

 

ಪ್ರತಿಕ್ರಿಯಿಸಿ (+)