ಶನಿವಾರ, ಮಾರ್ಚ್ 6, 2021
19 °C

ಆ ಬಸ್ಸು ಪಯಣದ ಸುಂದರ ನೆನಪು...

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ಆ ಬಸ್ಸು ಪಯಣದ ಸುಂದರ ನೆನಪು...

ಇದು ಒಂದೂವರೆ ದಶಕದ ಹಿಂದಿನ ಮಾತು. 1999ರ ಫೆಬ್ರುವರಿಯಲ್ಲಿ ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು  ಲಾಹೋರ್‌ನತ್ತ  ಬಸ್ಸಿನಲ್ಲಿ ಪಯಣಿ­ಸಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಸುಧಾರಣೆಯೇ ಆ ಪ್ರಯಾಣದ ಮುಖ್ಯ ಉದ್ದೇಶವಾಗಿತ್ತು. ಆಗ ನವಾಜ್‌ ಷರೀಫ್‌ ಪಾಕಿಸ್ತಾನದ ಪ್ರಧಾನ ಮಂತ್ರಿ­ಯಾಗಿ­ದ್ದರು. ಅಂದು ಇಬ್ಬರೂ ಪ್ರಧಾನಿಗಳು ಒಮ್ಮತ­ದಿಂದ ಪ್ರಕಟಿಸಿದ್ದ ಲಾಹೋರ್‌ ಘೋಷಣೆ ದೇಶ­ದಾದ್ಯಂ­ತ ಸುದ್ದಿಯಾಗಿತ್ತು. ಉಭಯ ದೇಶಗಳ ನಡು­ವಣ ಸಂಬಂಧ ಸುಧಾರಣೆಯಲ್ಲಿ ಅದೊಂದು ಮಹತ್ವದ ಪ್ರಯತ್ನವಾಗಿತ್ತು.ಅಂದು ಆ ಬಸ್ಸಿನಲ್ಲಿ ನಾನೂ ಪ್ರಯಾಣಿಸಿದ್ದೆ. ಅದೊಂದು ರೋಚಕ ಅನುಭವ. ಶಾಂತಿಯ ಕನಸು ನಮ್ಮೆಲ್ಲರ ಮನದೊಳಗೆ ಗರಿಗೆದರಿತ್ತು. ವಾಘಾ ಗಡಿ ದಾಟಿದ ಆ ಪಯಣ ಕೆಲವೇ ಕಿಲೋ­ ­ಮೀಟರ್‌ಗಳಷ್ಟು ದೂರವಿದ್ದಿರಬಹುದು, ಆದರೆ ನವದೆಹಲಿ ಮತ್ತು ಇಸ್ಲಾಮಾಬಾದ್‌­ಗಳನ್ನು ಭಾವನಾತ್ಮಕವಾಗಿ ಹತ್ತಿರ ತರುವಲ್ಲಿ ಅದೊಂದು ಪರಿಣಾಮಕಾರಿ ಪಯಣ ಎಂಬ ಭಾವನೆ ಅಂದು ನನ್ನಲ್ಲಿತ್ತು.ದುರದೃಷ್ಟವಶಾತ್‌ ಅಂದು ನಾವೆಲ್ಲಾ ಕಂಡ ಕನಸು ನನಸಾಗಲೇ ಇಲ್ಲ. ಉಭಯ ದೇಶಗಳ ಪ್ರಧಾನಿ­ಗಳು ಭಿನ್ನಾಭಿಪ್ರಾಯ ಹೊಂದಿದ್ದರೆಂಬ ಕಾರಣಕ್ಕೆ ಆ ಶಾಂತಿಯ ಪ್ರಯತ್ನಗಳು ಕಡಿದು ಬೀಳ­ಲಿಲ್ಲ. ಆದರೆ ಪಾಕಿಸ್ತಾನದ ಸೇನೆಯೇ ಅಂತಹ­ದ್ದೊಂದು ರಾಜಕೀಯ ಪ್ರಯತ್ನಕ್ಕೆ ಅಡ್ಡ­ಗಾಲು ಹಾಕಿತು. ಅಂದು ಪಾಕಿಸ್ತಾನದ ಭೂಪಡೆ, ನೌಕಾಪಡೆ ಮತ್ತು ವಾಯುಪಡೆಗಳ ಮುಖ್ಯ­ಸ್ಥರು ಭಾರತದ ಪ್ರಧಾನಿಗೆ ಸಲ್ಯೂಟ್‌ ಮಾಡಲು ನಿರಾಕರಿಸಿದ್ದರು. ಅಂದು ಜನರಲ್‌ ಪರ್ವೇಜ್‌ ಮುಷರಫ್‌ ಅವರು ಭೂಪಡೆಯ ಮುಖ್ಯಸ್ಥ­ರಾಗಿದ್ದರು. ಅವರ ವಿಚಾರಧಾರೆ, ಮಹತ್ವಾ­ಕಾಂಕ್ಷೆ ಬೇರೆಯೇ ಇತ್ತು. ನಂತರ ಅವರು ಸೇನಾ ದಂಗೆ ನಡೆಸಿ ಚುನಾಯಿತ ಪ್ರಧಾನಿ­ಯನ್ನು ಕೆಳಗಿಳಿಸಿದ್ದರು. ಅಲ್ಲಿಗೆ ಅಂದಿನ ಪ್ರಧಾ­ನಿಯ ಕನಸು ನುಚ್ಚು ನೂರಾಯಿತು.ಆ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಅಟಲ್‌ ಬಿಹಾರಿ ವಾಜ­ಪೇಯಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿ­ದವರು ತಾನೆ. ಆ ಪಕ್ಷ ಹಿಂದೂ ರಾಷ್ಟ್ರೀಯ ವಾದಕ್ಕೆ ಹೆಸರುವಾಸಿ. ಹಿಂದೂ ರಾಷ್ಟ್ರ ಪರಿ­ಕಲ್ಪನೆಯೇ ಒಡಲಲ್ಲಿ ತುಂಬಿಕೊಂಡಿದ್ದ ಆ ಪಕ್ಷ ಸಹಜ­ವಾಗಿಯೇ ಪಾಕಿಸ್ತಾನದ ವಿರುದ್ಧ ಧೋರಣೆ­ಯನ್ನು ಹೊಂದಿತ್ತು. ಅಂತಹ ಪಕ್ಷಕ್ಕೆ ಸೇರಿದ್ದ ವಾಜಪೇಯಿ ನಡೆಸಿದ ‘ಲಾಹೋರ್‌ನತ್ತ ಬಸ್ಸು ಪಯಣ’ ಅವರ ದಿಟ್ಟ ನಿಲುವಿಗೆ ಸ್ಪಷ್ಟ ನಿದರ್ಶ­ನವಾಗಿತ್ತು. ಅದೇ ರೀತಿ, ಕಾಶ್ಮೀರ ಸಮಸ್ಯೆ­ಯನ್ನು ಇಂತಿಷ್ಟು ಸಮಯದೊಳಗೆ ತಾವು ಸಂಪೂರ್ಣವಾಗಿ ಪರಿಹರಿಸುತ್ತೇವೆ ಎಂಬ ಹೆಗ್ಗನಸನ್ನೂ ಅವರು ತಮ್ಮ ಅಧಿಕಾರ ಅವಧಿ­ಯಲ್ಲಿ ಹಂಚಿಕೊಂಡಿದ್ದರು. ಆ ದಿಸೆಯಲ್ಲಿ ಪ್ರಯತ್ನಿ­ಸಿದ್ದರು. ಹಿಂದೆ ಪಾಕಿಸ್ತಾನದ ಪ್ರಧಾನಿ­ಯಾಗಿದ್ದ ಜುಲ್ಫಿಕರ್‌ ಅಲಿ ಭುಟ್ಟೊ ಕಾಶ್ಮೀರದ ಬಗ್ಗೆ ಹೊಂದಿದ್ದ ಅಭಿಪ್ರಾಯವನ್ನೇ ವಾಜಪೇಯಿ­ಯವರೂ ಹೊಂದಿದ್ದರು ಎಂದೆನಿಸುತ್ತದೆ.ಹಿಂದೆ ಬಾಂಗ್ಲಾದೇಶ ವಿಮೋಚನೆಯ ಸಂದರ್ಭ­ದಲ್ಲಿ ನಾನು, ಭುಟ್ಟೊ ಅವರ ಸಂದರ್ಶನ ನಡೆಸಿದ್ದೆ. ಅಂದು ಅವರು ಮಾತ­ನಾಡುತ್ತಾ ‘ಎರಡೂ ಕಾಶ್ಮೀರ’ಗಳ ನಡುವೆ ಶಾಂತಿಯ ‘ಗಡಿರೇಖೆ’ಯೊಂದನ್ನು ರೂಪಿಸ­ಬೇಕಿದೆ ಎಂದಿದ್ದರು. ಅಲ್ಲಿ ಸದಾ ಕದನ ವಿರಾಮ ಸ್ಥಿತಿ ಇರಬೇಕೆಂದೂ ಅವರು ತಮ್ಮ ಆಶಯ ವ್ಯಕ್ತಪಡಿಸಿ­ದ್ದರು. ‘ಭಾರತ ಪಾಕಿಸ್ತಾನ ನಡುವೆ ರಾಜಕೀಯ ವಿವಾದ, ಭಿನ್ನಾಭಿಪ್ರಾಯಗಳಿರ ಬಹುದು. ಆದರೆ ಇದರಿಂದ ಕಾಶ್ಮೀರದ ಮಂದಿ ಏಕೆ ಪಡಿಪಾಟಲು ಪಡಬೇಕು. ಆ ಶಾಂತಿಯ ಗಡಿ­­ರೇಖೆಯನ್ನು ಉಭಯ ಕಾಶ್ಮೀರಗಳ ಮಂದಿ ನಿರಾತಂಕ­ವಾಗಿ ದಾಟಿ ಅತ್ತಿಂದಿತ್ತ, ಇತ್ತಿಂದತ್ತ ಹೋಗಿ ಬರುವಂತಾಗಲಿ’ ಎಂದು ನನ್ನ ಪ್ರಶ್ನೆ­ಯೊಂದಕ್ಕೆ ಭುಟ್ಟೊ ಉತ್ತರಿಸಿದ್ದರು. ಆ ಧ್ವನಿ ಮುದ್ರಿಕೆಯೂ ನನ್ನ ಬಳಿ ಇದೆ. ಆದರೆ ಭಾರತ ಸರ್ಕಾರ, ಭುಟ್ಟೊ ಅವರ ಜತೆಗೆ ಅಧಿಕೃತ ಮಾತುಕತೆ ನಡೆಸಿದಾಗ ‘ಶಾಂತಿಯ ಗಡಿರೇಖೆ’ಯ ತಮ್ಮ ಅನಿಸಿಕೆಗಳನ್ನು ಒಪ್ಪಿ­ಕೊಳ್ಳಲಿಲ್ಲ!ಉಭಯ ದೇಶಗಳ ನಡುವೆ ವ್ಯಾಪಾರೋ­ದ್ದಿಮೆ ಮತ್ತು ಸಂಚಾರ ವ್ಯವಸ್ಥೆಯು ಸಾಮಾನ್ಯ­ವಾಗಿರುವುದಕ್ಕೆ ಪೂರಕ ವಾತಾವರಣ ಕಲ್ಪಿಸು­ವುದಕ್ಕೆ ‘ಲಾಹೋರ್‌ ಘೋಷಣೆ’­ಯಲ್ಲಿ ಬಹಳಷ್ಟು ಅವಕಾಶಗಳಿವೆ. ಆ ‘ಘೋಷಣೆ’­ಯನ್ನು ಕಾರ್ಯರೂಪಕ್ಕೆ ತರಲು ಇವತ್ತಿಗೂ ಅವಕಾಶ­ವಿದೆ. ಎರಡೂ ದೇಶಗಳ ನಡುವೆ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಇಬ್ಬರೂ ಪ್ರಧಾನಿಗಳು ಅಂದು ಬಹಳ ದೊಡ್ಡ ಸಾಧನೆ­ಯನ್ನು ಮಾಡಿದ್ದಾರೆಂದು ನಾನು ಹೇಳು­ತ್ತಿಲ್ಲ. ಅಂದು ಪಾಕಿಸ್ತಾನ ತನ್ನ ವಾದ ಸರಣಿ­ಯನ್ನು ಕಾಶ್ಮೀರದ ‘ಅಳತೆ ಗೋಲು’ ಮೂಲಕವೇ ಮಂಡಿಸುತ್ತಿದ್ದುದನ್ನೂ ಮರೆ­ಯುವಂತಿಲ್ಲ. ಆದರೂ ಅಂದು ವಾಜಪೇಯಿ ಅವರು ‘ಕಾಶ್ಮೀರ ಸಮಸ್ಯೆಯನ್ನು ಮುಂದಿನ ದಿನ­ಗಳಲ್ಲಿ ಬಗೆಹರಿಸಿ­ಕೊಳ್ಳೋಣ. ಅಷ್ಟರವರೆಗೆ ನಾವು ಮಾತುಕತೆ ಮುಂದುವರಿಸೋಣ. ಮುಂದೊಂದು ದಿನ ಎಲ್ಲಾ ಸಮಸ್ಯೆಗಳೂ ಬಗೆ­ಹರಿಯ­ಬಹುದು’ ಎಂದಿದ್ದರು. ಕೊನೆಗೂ ವಾಜಪೇಯಿ ಅವರು ಸಂಬಂಧ ಸುಧಾರಣೆ ಪ್ರಯತ್ನ­­ದಲ್ಲಿ ನಿರಾಸೆ­ಗೊಂಡಿದ್ದರು. ಆ ದಿನ­ಗಳಲ್ಲಿ ವಾಜಪೇಯಿ ಮೂರು ಸಲ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆಗ ಅವರು ಕಾಶ್ಮೀರದ ವಿಷ­ಯಕ್ಕೆ ಹೆಚ್ಚು ಒತ್ತು ನೀಡದೇ ಸ್ನೇಹಹಸ್ತ ಚಾಚಿ­ದ್ದರು. ಆ ಅಂಶ­ವನ್ನಾ­ದರೂ ಪಾಕ್‌ ಅಂದು ಗುರುತಿಸಬೇಕಿತ್ತು.ಉಭಯ ದೇಶಗಳ ನಡುವೆ ಮಧುರ ಸಂಬಂಧ ಮೂಡಿಸುವ ದಿಸೆಯಲ್ಲಿ ಅಂದು ನಡೆ­ದಿದ್ದ ಆ ‘ಬಸ್ಸು ಪಯಣ’ ನನಗೆ ಪದೇ ಪದೇ  ನೆನ­ಪಾಗು­­ತ್ತಲೇ ಇರುತ್ತದೆ. ಆ ಬಸ್ಸಿನಲ್ಲಿ ದೇಶದ ಆಯ್ದ 22 ಮಂದಿ ಗಣ್ಯರಿದ್ದರು. ಪಂಜಾಬ್‌ನ ಆಗಿನ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ಅಮೃತಸರದಲ್ಲಿ ನಮ್ಮೊಡನೆ ಸೇರಿ­ಕೊಂಡರು. ಅಂದು ಅವರು ನನ್ನನ್ನು ಅಪ್ಪಿ­ಕೊಂಡು, ‘ನಿಮ್ಮ ಯತ್ನಗಳು ಈಗ ಫಲ ನೀಡು­ತ್ತಿವೆ’ ಎಂದಿದ್ದು ಇವತ್ತಿಗೂ ನನ್ನ ಸ್ಮೃತಿಪಟಲ­ದಲ್ಲಿದೆ. ಹೌದು, ನಾವೆಲ್ಲಾ 1996ರಿಂದಲೂ ವಾಘಾ ಗಡಿಯ ಬಳಿ ಮೇಣದ ಬತ್ತಿ ಹಚ್ಚಿಟ್ಟು ಅತ್ತ ಕಡೆಗೆ ಸ್ನೇಹದ ಸಂದೇಶ ಕಳುಹಿಸುತ್ತಾ ಬಂದವರು ತಾನೆ. ಅದನ್ನು ನೆನಪಿಸಿಕೊಂಡು ಅವರು ಮಾತನಾಡಿದ್ದರು. ಅದೊಂದು ಸಾಂಕೇತಿಕ ಅಭಿವ್ಯಕ್ತಿಯಾಗಿತ್ತು ಬಿಡಿ.  ನಮ್ಮಲ್ಲಿ ಕೆಲವರು ಆ ಬಸ್ಸಿಗೆ ಒರಗಿ ನಿಂತುಕೊಂಡು ಅಲ್ಲಿನ ಚಟುವಟಿಕೆಗಳನ್ನೆಲ್ಲಾ ಗಮನಿಸುತ್ತಿ­ದ್ದೆವು. ಉಭಯ ದೇಶಗಳ ನಡುವಣ ಸುಂದರ ಸಂಬಂಧದ ಕಲ್ಪನೆಯನ್ನು ಕಟ್ಟಿಕೊಡುವ ಬರಹ ಮತ್ತು ಚಿತ್ರಗಳನ್ನೆಲ್ಲಾ ಆ ಬಸ್ಸು ತನ್ನ ಮೈಗಂಟಿಸಿ­ಕೊಂಡಿತ್ತು. ಆದರೆ ಯಾವುದೇ ಘೋಷಣೆಗಳು ಕೇಳಿಸುತ್ತಿರಲಿಲ್ಲ. ಆದರೆ ನೂರಾರು ಪುರುಷರು, ಮಹಿಳೆಯರು ಹಾಡುತ್ತಿದ್ದರು, ನರ್ತಿಸುತ್ತಿದ್ದರು. ಎಲ್ಲರೂ ಬಣ್ಣ ಬಣ್ಣದ ಉಡುಪು ಧರಿಸಿದ್ದರು. ಊರ ಹಬ್ಬ ಅಥವಾ ಜಾತ್ರೆಯ ಕಳೆ ಅಲ್ಲಿತ್ತು. ಅಲ್ಲಿದ್ದ ಕೆಲವೇ ಕೆಲವು ಪೊಲೀಸರು ನಿರಾಳ­ವಾಗಿದ್ದರು.ವಾಜಪೇಯಿ ಅವರು ಮುಂದಿನ ಸೀಟಿನಲ್ಲಿ ಕುಳಿತ ತಕ್ಷಣ ಬಸ್ಸು ಲಾಹೋರ್‌ನತ್ತ ಹೊರಟಿತು. ಬಸ್ಸಿನ ನಿರ್ವಾಹಕ ನನ್ನ ಬಳಿ ಬಂದು ಮೊದಲ ಟಿಕೇಟು ನೀಡಿ, ಅದರ ಅರ್ಧವನ್ನು ತುಂಡು ಮಾಡಿ ನನ್ನ ಕೈಗಿತ್ತ. ನಾನು ಆ ಚೀಟಿ­ಯನ್ನು ಇವತ್ತಿಗೂ ಅಪೂರ್ವ ಸ್ಮರಣಿಕೆಯಂತೆ ನನ್ನ ಬಳಿ ಜೋಪಾನವಾಗಿ ಇರಿಸಿಕೊಂಡಿದ್ದೇನೆ. ಬಸ್ಸಿ­ನೊಳಗಿದ್ದ ಇನ್ನೊಬ್ಬ ಸಿಬ್ಬಂದಿ ಕುಡಿಯಲು ತಂಪು ಪಾನೀಯ ನೀಡಿದ. ಪಾಕ್‌ ಗಡಿವರೆಗಿನ ಆ 35 ಕಿ.ಮೀ. ದೂರದ ಹಾದಿಯಲ್ಲಿ ಬಸ್ಸು ಸಾಗಿ­ದಷ್ಟೂ ದೂರ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಸಂಭ್ರಮದಿಂದ ಕೈ ಬೀಸುತ್ತಿ­ದ್ದುದು ಎದ್ದು ಕಾಣುತ್ತಿತ್ತು. ಅಲ್ಲಿ ಸಂಭ್ರಮದ ಹೊಳೆ ಹರಿದಿತ್ತು. ಭಾರತ ಮತ್ತು ಪಾಕ್‌ ಪ್ರಧಾನಿ­ಗಳಿಬ್ಬರೂ ಕುಳಿತು ಶಾಂತಿಯ ಮಾತು­ಕತೆ ನಡೆಸುತ್ತಾರೆನ್ನುವುದೇ ಆ ಪ್ರದೇಶದ ಜನರಿಗೆ ಅತೀವ ಖುಷಿ ಕೊಡುವ ವಿಚಾರವಾಗಿತ್ತು.

ಬಸ್ಸಿನ ಒಳಗಿನ ವಾತಾವರಣವೂ ಮನಸ್ಸಿಗೆ ಮುದ ನೀಡುವಂತಹದ್ದಾಗಿತ್ತು. ಅಲ್ಲಿ ಎಲ್ಲರೂ ಆ ಮೌನದೊಳಗಿನ ಸಂಭ್ರಮವನ್ನು ಅನುಭವಿ­ಸು­ವಲ್ಲಿ ಖುಷಿ ಕಾಣುತ್ತಿದ್ದರು. ಆದರೂ ಎಲ್ಲರ ಮನ­ದಾಳ­ದಲ್ಲೂ ಅದೇನೋ ಆತಂಕ ಇದ್ದೇ ಇತ್ತು. ಒಂದೊಂದು ಮೈಲುಗಲ್ಲನ್ನು ದಾಟಿ­ದಾಗಲೂ ಆ ಆತಂಕ ಹೆಚ್ಚುತ್ತಲೇ ಇತ್ತು. ಮುಂದೇ­-­ನಾಗ­ಬಹುದು. ಅಲ್ಲಿ ನಮ್ಮನ್ನು ಅವರು ಯಾವ ರೀತಿ ಸ್ವಾಗತಿಸಬಹುದು. ಮಾತುಕತೆ ಸಫಲ­­ವಾಗಬಹುದೇ... ಹೀಗೆ ಹತ್ತು ಹಲವು ಆಲೋ­ಚನೆ­ಗಳು ಪ್ರತಿಯೊಬ್ಬರ ಮನದಲ್ಲೂ ತುಂಬಿ­ಕೊಂಡಿದ್ದವು. ಅಂದು ಪ್ರಧಾನಿಯವರ ಹಿಂದಿನ ಆಸನದಲ್ಲಿ ಕುಳಿತಿದ್ದ ನಾನು ಅವರನ್ನು­ದ್ದೇಶಿಸಿ ‘ಇದೊಂದು ದಿಟ್ಟ ನಿಲುವು’ ಎಂದೆ. ಆಗ ಅವರು ಮುಗುಳ್ನಕ್ಕಿದ್ದರು.ಆದರೆ ಅಷ್ಟಕ್ಕೆ ನಾನು ಸುಮ್ಮನಿರಲಿಲ್ಲ. ಪ್ರಶ್ನೆ­ಗಳ ಮೇಲೆ ಪ್ರಶ್ನೆಗಳನ್ನು ಕೇಳತೊಡಗಿದೆ. ‘ಇಂತಹ­ದ್ದೊಂದು ಯಾನಕ್ಕೆ  ನಿಮ್ಮ ಭಾರತೀಯ ಜನತಾ ಪಕ್ಷದ ಪ್ರತಿಕ್ರಿಯೆ ಏನಿದೆ’ ಎಂದು ಕೇಳಿದ್ದೆ. ‘ನೋಡಿ, ಈ ಪ್ರಧಾನಿ ಪಟ್ಟ ಶಾಶ್ವತ­ವಲ್ಲ. ಇವತ್ತು ಇದೆ. ನಾಳೆ ಹೋಗುತ್ತೆ. ಈ ನಡುವೆ  ದೇಶ, ಜನ ನೆನಪಲ್ಲಿ ಇಟ್ಟುಕೊಳ್ಳು­ವಂತಹ ಕೆಲಸ ಮಾಡಬೇಕು, ಅಷ್ಟೆ’ ಎಂದಿದ್ದರು. ಆದರೆ ಆ ದಿನಗಳಲ್ಲಿ ರಜೌರಿ ಪ್ರದೇಶದಲ್ಲಿ ನಡೆದಿದ್ದ ಹಿಂದೂಗಳ ಕಗ್ಗೊಲೆಯ ಪ್ರಸಂಗ ವ್ಯಾಪಕ­ವಾಗಿ ಸುದ್ದಿಯಾಗಿತ್ತು. ಆ ಕುರಿತು ವಾಜಪೇಯಿ ಅವರು  ವಿಚಲಿತರಾಗಿದ್ದರು. ಅದನ್ನೇ ಪ್ರಸ್ತಾಪ ಮಾಡಿದ ಅವರು, ‘ನೋಡಿ, ಇಂತಹದ್ದೊಂದು ಮಾತುಕತೆಯನ್ನು ವಿಫಲ­ಗೊಳಿಸಲು ಎಲ್ಲಾ ಬಗೆಯ ಪ್ರಯತ್ನಗಳೂ ನಡೆಯು­ತ್ತವೆ. ಈ ಬಗ್ಗೆಯೂ ಎಚ್ಚರಿಕೆ ಬೇಕಿದೆ’ ಎಂದಿದ್ದರು. ಅವರೊಡನೆ ಅಂದು ಇನ್ನಷ್ಟು ಮಾತನಾಡ­ಬೇಕೆಂದಿದ್ದೆ. ಆದರೆ ಅವರೊಡನೆ ಮಾತ­ನಾಡಲು ಹಲವರು ತುದಿಗಾಲಲ್ಲಿ ನಿಂತಿದ್ದರು.ಪಾಕ್‌ ನೆಲದಲ್ಲಿ ಕಾಲಿಟ್ಟ ಮೇಲೆ ಗೌರವ ರಕ್ಷೆಯ ವೈಭವ ಬಲು ಜೋರಾಗಿಯೇ ಇತ್ತೆನ್ನಿ. ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಎದ್ದು ಕಾಣು­ತ್ತಿ­ದ್ದರು. ಬ್ರಿಟಿಷರು ಈ ನೆಲವನ್ನು ಬಿಟ್ಟು  ಹೋದರೂ ಅವರ ಸಂಪ್ರದಾಯಗಳು ಉಳಿದು­ಕೊಂಡಿವೆ. ಇದರಲ್ಲಿ ಭಾರತ– ಪಾಕಿಸ್ತಾನ ಎಂಬ ವ್ಯತ್ಯಾಸವಿಲ್ಲ.ಪಾಕ್‌ ನೆಲದಲ್ಲಿ ನಮ್ಮ ಬಸ್ಸಿನ ಸುತ್ತಲೂ ಸೇನಾ ಮಂದಿಯೇ ದೊಡ್ಡ ಸಂಖ್ಯೆಯಲ್ಲಿದ್ದರು. ಎಲ್ಲೆಡೆ­ಯೂ ಒಂದು ವಿಚಿತ್ರವಾದ ಮೌನ ಪಸರಿಸಿತ್ತು. ಅಂಥದ್ದೊಂದು ಏಕತಾನತೆಯನ್ನು ನವಾಜ್‌ ಷರೀಫ್‌ ಅವರ ಮುಗುಳ್ನಗೆಯ ಸ್ವಾಗತ ಮರೆ ಮಾಡಿತ್ತು. ಅವರ ಜತೆಗಿದ್ದವರಲ್ಲಿ ಬಹುತೇಕ ಮಂದಿ ವರ್ಣರಂಜಿತ ಸಾಂಪ್ರ­ದಾ­ಯಿಕ ಉಡುಪು ಧರಿಸಿದ್ದು ಮನ ಸೆಳೆಯು­ವಂತಿತ್ತು. ಆ ವಾತಾವರಣ ಒಂದಷ್ಟು ಖುಷಿ ನೀಡಿತ್ತು.ನವಾಜ್‌ ಷರೀಫ್‌ ಅವರು ವಾಜಪೇಯಿ ಅವರನ್ನು ಅಪ್ಪಿಕೊಳ್ಳುವ ಮೊದಲು ‘ಪಾಕಿ-ಸ್ತಾನಕ್ಕೆ ಸುಸ್ವಾಗತ’ ಎಂದು ಸ್ನೇಹದಿಂದ ಹೇಳಿದ್ದು ಅರ್ಥಪೂರ್ಣವಾಗಿತ್ತು. ಪಾಕ್ ಸರ್ಕಾರದ ಸಚಿವರೆಲ್ಲರೂ ಸಾಲಾಗಿ ನಿಂತು ವಾಜಪೇಯಿ ಅವರ ಕೈಕುಲುಕಿದರು. ಲಾಹೋರ್‌­ನತ್ತ ಸಾಗಿದ್ದ ರಸ್ತೆಯ ಎರಡೂ ಕಡೆ ಜನ ನಿಂತಿದ್ದು ನಮ್ಮತ್ತ ಕೈಬೀಸುತ್ತಿದ್ದರು.ಅಂದು ನವಾಜ್‌ ಷರೀಫ್‌ ಮತ್ತು  ವಾಜ­ಪೇಯಿ  ಒಗ್ಗೂಡಿ ಕುಳಿತು ಬಹಳ ಹೊತ್ತು ಮಾತ­ನಾಡಿದರು. ಎರಡೂ ದೇಶಗಳ ನಡುವಣ ಸಂಬಂಧ ಇನ್ನೇನು ಸಂಪೂರ್ಣವಾಗಿ ಸುಧಾರಿ­ಸಿಯೇ ಬಿಟ್ಟಿತು ಎಂದು ನಾವೆಲ್ಲಾ ಭಾವಿಸಿ­ಬಿಟ್ಟಿದ್ದೆವು. ಆದರೆ ಹಾಗಾಗಲಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕಿ­ದವು. ಕಾಣದ ಕೈಗಳ ಕೈವಾಡ ಹೆಚ್ಚುತ್ತಾ ಹೋಯಿತು. ಅಂತಹದೊಂದು ಸುಂದರ ಪರಿ­ಕಲ್ಪನೆ ತನ್ನ ಮಹತ್ವ ಕಳೆದುಕೊಂಡಿತು. ಹೌದು, ನಂತರದ ದಿನಗಳಲ್ಲಿ ಬಸ್ಸು ನಿಂತು ಹೋಯಿತು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.