ಸೋಮವಾರ, ಮೇ 10, 2021
19 °C

ಇತಾಲಿಯಾ ಅಂದು ಇಂದು- ಒಂದು ನೋಟ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಇತಾಲಿಯಾ ಅಂದು ಇಂದು- ಒಂದು ನೋಟ

 ಕಳೆದ ವಾರ ಇತಾಲಿಯಾದಲ್ಲಿ ಎಲ್ಲೋ ಒಂದುಕಡೆ ಬಾಂಬು ಸಿಡಿಯಿತು; ಇನ್ನೆಲ್ಲೋ ನೆಲ ನಡುಗಿತು. ಬಾಂಬ್ ಹಾವಳಿಯ ಪರಿಣಾಮವಾಗಿ ಆ ಸಂಜೆಯ ಎಲ್ಲಾ ಸಾರ್ವಜನಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಯಿತು.

 

ರಾಜಧಾನಿ ರೋಮಾದಲ್ಲಿ ಅವೊತ್ತು ಸಾಯಂಕಾಲ ಟಾಗೋರರ ಕವಿತೆಗಳನ್ನಾಧರಿಸಿದ ಒಂದು ಸಂಗೀತ ಕಾರ್ಯಕ್ರಮ ಏರ್ಪಾಟಾಗಿದ್ದು, ಅದನ್ನು ನಗರಸಭೆಯ ಅಧ್ಯಕ್ಷರು ಮನ್ನೆಚ್ಚರಿಕೆಯ ದೃಷ್ಟಿಯಿಂದ ರದ್ದು ಮಾಡಿದರು. ಅಂದು ರೋಮಾದಲ್ಲಿದ್ದ ನನಗೆ ಆ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲ.ನೆಲನಡುಕದ ಆ ರಾತ್ರಿ ನಾನು ರೋಮಾದಿಂದ 60 ಮೈಲಿ ದೂರದ ರೋಕೊಪ್ರಯರಾ ಎಂಬ ಬೆಟ್ಟದ ಮೇಲಿನ ಸಣ್ಣ ಊರಿನಲ್ಲಿದ್ದೆ. ನಾನಿದ್ದ ಮನೆಯ ಮಂಚ, ಕುರ್ಚಿ, ಮೇಜುಗಳು ಒಂದು ಅರ್ಧ ನಿಮಿಷ ಒಂದಿಷ್ಟು ನಡುಗಿ ಆಮೇಲೆ ಮೊದಲಿನಂತೆ ನಿಶ್ಚಲವಾದವು.ಈ ಎರಡು ಘಟನೆಗಳು ಅವು ಘಟಿಸಿದ ಜಾಗಗಳಲ್ಲಿ ಗಾಬರಿಯನ್ನುಂಟು ಮಾಡಿರಲೇಬೇಕು. ಆದರೆ ಉಳಿದ ಕಡೆ ಜನಜೀವನದ ಮೇಲೆ ಅಂತಹ ದೊಡ್ಡ ಮಟ್ಟದಲ್ಲಿ  ಪ್ರಭಾವ ಬೀರಿದ ಹಾಗೆ ತೋರಲಿಲ್ಲ. ರವಿವಾರ ನಾನಿದ್ದ ಕಡೆ ಜನ ಸ್ಮಶಾನಗಳಿಗೆ ಹೂಗುಚ್ಛಗಳನ್ನೊಯ್ದು ಗೋರಿ ಕೆಳಗೆ ಮಲಗಿರುವ ಹಿರೀಕರಿಗೆ ಅವನ್ನರ್ಪಿಸುತ್ತಿದ್ದರು. ಚರ್ಚಿಗೆ ಹೋಗುವವರು ಹೋಗಿ ಬರುತ್ತಿದ್ದರು.

 

ಅವೊತ್ತು ಹೊಂಬಿಸಿಲು ಹರಡಿದ್ದರಿಂದ ಅಲ್ಪಪೋಷಾಕಿನ ಯುವಯುವತಿಯರು ಹೋಟಲುಗಳಲ್ಲಿ, ಪ್ರವಾಸಿ ತಾಣಗಳಲ್ಲಿ  ಮೋಜುಮಾಡುತ್ತಿದ್ದರು. ಕ್ಯಾಮರಾಧಾರಿ ಪ್ರವಾಸಿಗರು ತಮ್ಮ ಓಡಾಟದಲ್ಲಿದ್ದರು. ಇದನ್ನೆಲ್ಲಾ ನೋಡಿದಾಗ ನನಗೆ ನನ್ನ ಮೆಚ್ಚಿನ ಕವಿ ಕೆ.ಎಸ್.ನ. ಅವರ ಕವಿತೆಯ ಸಾಲುಗಳು ನೆನಪಾದವು:ಜಲಜನಕಬಾಂಬಿನಿಂದೀ ಲೋಕದಳಿವೆಂದು

ಪತ್ರಿಕೆಯು ನುಡಿದರೂ ಬೆಳಗಾಯಿತು
ಅದೇ ಚಕ್ರದಂತೆ ಸದಾ ಸುತ್ತಿ ಪುನರಾವರ್ತನೆಯಾಗುವ ದೈನಿಕಗಳ ನಡುವೆ ಬದಲಾವಣೆಗಳೂ ಆಗುತ್ತಿರುತ್ತವೆಂಬುದು ಕಳೆದ ಇಡೀ ವಾರವನ್ನು ಇತಾಲಿಯಾದಲ್ಲಿ  ಕಳೆದ ನನಗೆ ಗೋಚರವಾಯಿತು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಕಂಡ ಇತಾಲಿಯಾ ಇಂದು ನಾನು ಕಾಣುತ್ತಿರುವ ಇತಾಲಿಯಾಗಳ ನಡುವೆ ಅನೇಕ ಸಾಮ್ಯತೆಗಳಿದ್ದರೂ ಗುಣಾತ್ಮಕ ವ್ಯತ್ಯಾಸಗಳಾಗುತ್ತಿರುವುದೂ ಗೋಚರಿಸಿತು.ನಾನು ಕಳೆದ ಸೋಮವಾರ ವೆನಿಸಿಯಾದ ವಿಮಾನ ನಿಲ್ದಾಣದಲ್ಲಿಳಿದಾಗ ಎರಡು ದಶಕಗಳ ಹಿಂದೆ ನಾನು ಕಂಡಿದ್ದ ಅದೇ ನೀರಿನ ನಗರವನ್ನು ಹೊಗುತ್ತಿದ್ದೇನೆಂದುಕೊಂಡಿದ್ದೆ. ನನ್ನನ್ನು ಬರಮಾಡಿಕೊಳ್ಳುವುದಕ್ಕೆ ಬಂದಿದ್ದ ಗೆಳತಿಯ ಜೊತೆಗೆ ನನ್ನ ವಸತಿಗೃಹಕ್ಕೆ ಹೋಗುವಾಗ ಅಲ್ಲಿನ ದೃಶ್ಯ ಸಾಕಷ್ಟು ಬದಲಾಗಿರುವುದು ಕಾಣಿಸಿತು.

 ನನ್ನ ಕಳೆದ ಪ್ರವಾಸದಲ್ಲಿ ಇಂಗ್ಲಿಷಿನ ಬೋರ್ಡುಗಳು ಇರಲೇ ಇಲ್ಲ. ಈಗ ಬಸ್ ಮತ್ತು ದೋಣಿ ನಿಲ್ದಾಣಗಳಲ್ಲಿ ಇತಾಲಿಯಾ ಭಾಷೆಯ ಫಲಕಗಳ ಜೊತೆಗೆ ಇಂಗ್ಲಿಷ್ ಫಲಕಗಳೂ ಕಾಣಿಸುತ್ತಿದ್ದವು. ಕಳೆದ ಸಲ ಕಂಡ ಮುಖಗಳು ಅಲ್ಲೊಂದು ಇಲ್ಲೊಂದು ಕಾಣುತ್ತಿದ್ದವು. ಈ ಸಲ ಅವು ದಂಡಿಯಾಗಿದ್ದವು.ದೋಣಿಯ ಚಾಲಕರಾಗಿ, ಕಂಡಕ್ಟರುಗಳಾಗಿ, ಹೋಟಲಿನ ಮಾಣಿ, ಮಾಲೀಕರಾಗಿ ಬಂಗಲಾ ದೇಶಿಗಳು, ಭಾರತೀಯರು, ಪೂರ್ವ ಏಷಿಯಾದವರು ಗಣನೀಯ ಸಂಖ್ಯೆಯಲ್ಲಿ ಕಂಡುಬಂದರು.  ಅಲ್ಲದೆ ಅಲ್ಲಲ್ಲಿ ಕನ್ನಡದ ಶಬ್ದಗಳೂ ಕೇಳಿಬಂದವು.ಕರ್ನಾಟಕವನ್ನೂ ಒಳಗೊಂಡು ಭಾರತದ ಎಲ್ಲ ಭಾಗಗಳ ಪ್ರವಾಸಿಗಳು ಎಲ್ಲೆಲ್ಲೂ ಕಾಣ ಸಿಗುತ್ತಿದ್ದರು. ಹಿಂದಿನ ಸಾರಿ ಕಂಡ ಭಾರತದ ಪ್ರವಾಸಿಗಳು ಬೆರಳೆಣಿಕೆಗೆ ಸಿಗುವಷ್ಟು ಮಾತ್ರ. ಆಗ ಎಲ್ಲೆಲ್ಲೂ ಜಪಾನೀ ಪ್ರವಾಸಿಗರು. ಅಂದರೆ ಕೆಲವರಾದರೂ ಭಾರತೀಯರ ಆದಾಯ ಹೆಚ್ಚಿದೆ; ಅವರೂ ಜಗತ್ತು ಸುತ್ತತೊಡಗಿದ್ದಾರೆ.ಜಗತ್ತಿನ ನಗರಗಳ ನಡುವೆ ವೆನಿಸಿಯಾದ ಚಲುವು ಹೋಲಿಕೆಯಿಲ್ಲದ್ದು. ಆದರೂ ಉಪಮಪ್ರಿಯರಾದ ಮಾನವರು ಹಲವು ನಗರಗಳನ್ನು ಎರಡನೆ ವೆನಿಸಿಯಾ ಎಂದು ಕರೆಯುತ್ತಾರೆ. ಚೀಣಾದ ಸೂಜೋ ನಗರವನ್ನು ಪೂರ್ವದ ವೆನಿಸಿಯಾ ಅಂತಲೂ, ಜರ್ಮನಿಯ ಹ್ಯಾಂಬರ್ಗನ್ನು ಎರಡನೆ ವೆನಿಸಿಯಾ ಅಂತಲೂ ಕರೆಯುವುದು ವಾಡಿಕೆ. ಆದರೆ ಈ ಹೋಲಿಕೆಗಳು ಸರಿಯಲ್ಲ.ವೆನಿಸಿಯಾದ ಜಲಾವೃತ ನಗರ ನಿರ್ಮಾಣದ ಅಪೂರ್ವ ಸೌಂದರ್ಯದ ಪುಣ್ಯ ಇನ್ನಿತರ ನಗರಗಳಿಗಿಲ್ಲ. ಹಲವು ಪುಟ್ಟ ದ್ವೀಪಗಳ ಸಮುಚ್ಛಯವಾಗಿರುವ ವೆನಿಸಿಯಾ ನೀರಿನ ಮೇಲೆ ಸಾವಿರ ವರ್ಷಗಳಿಂದ ನಿಂತಿರುವ ನಗರ. ದ್ವೀಪಗಳ ನಡುವೆ ಅಲ್ಲಲ್ಲಿ ಹಳೆಯ ಸೇತುವೆಗಳು ಅಥವಾ ಹಸಿರು ನೀರು. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕೆಂದರೆ ದೋಣಿಗಳಿಲ್ಲದೆ ಕೆಲಸ ಸಾಗದು. ಇನ್ನುಳಿದ ಕಡೆ ಕಾಲುನಡಿಗೆಯಲ್ಲೇ ಹೋಗಬೇಕು. ಕಾರು ಬಸ್ಸುಗಳ ಪ್ರವಾಸ ದ್ವೀಪ ಮತ್ತು ನೀರಿನ ಒಂದು ಪಕ್ಕದಲ್ಲಿರುವ ಹೊರವಲಯದಲ್ಲಿ ಮಾತ್ರ.ವೆನಿಸಿಯಾದ ತುಂಬಾ ಲೆಕ್ಕವಿರದಷ್ಟು ಚರ್ಚುಗಳು. ಅವು ಕೇವಲ ಪೂಜಾ ಸ್ಥಾನಗಳಲ್ಲ, ನಮ್ಮ ದೇವಸ್ಥಾನಗಳ ಹಾಗೇ ಕಲೆಯ ಆಗರಗಳು ಕೂಡಾ. ಇತಾಲಿಯಾದ ಪ್ರಸಿದ್ಧ ಕಲಾಕಾರರ ಚಿತ್ರಗಳು ಚರ್ಚುಗಳ ಗೋಡೆಗಳನ್ನಲಂಕರಿಸುತ್ತಿರುತ್ತವೆ. ಅಲ್ಲದೆ ಚರ್ಚುಗಳ ವಾಸ್ತುಶಿಲ್ಪ ಕೂಡಾ ಅತ್ಯಾಕರ್ಷಕ.ಪವಿತ್ರತೆಯನ್ನು ನಮ್ಮಳಗೇ ಗುರುತಿಸುವ ಪೌರ್ವಾತ್ಯ ಸಂಸ್ಕೃತಿಗಳಲ್ಲಿ ನಾವು ಮಂದಿರಗಳ ಪ್ರವೇಶ ಮಾಡಿದಾಗ ಹೊರಬೆಳಕಿನಿಂದ ಗರ್ಭಗುಡಿಯ ಒಳ ಜ್ಯೋತಿಯ ಕಡೆಗೆ ನಡೆಯುವ ಅನುಭವವಾದರೆ, ಚರ್ಚುಗಳನ್ನು ಹೊಕ್ಕಾಗ ಅವುಗಳ ಇಡೀ ವಾಸ್ತು ಶಿಲ್ಪ ನಮ್ಮನ್ನು ಮೇಲಕ್ಕೆ ನೋಡುವಂತೆ ಪ್ರೇರಿಸುತ್ತದೆ.ಪೂಜಾವೇದಿಕೆಯ ಮೇಲೆ ಬೆಳಕನ್ನು ಒಳಸೂಸುವ ಗೋಪುರದ ಮೇಲೆ ಬೈಬಲ್ ಸಂಬಂಧಿತ ಜಂತೆ ಚಿತ್ರಗಳು ನಮ್ಮ ದೃಷ್ಟಿಯನ್ನು ಮೇಲೆತ್ತುತ್ತವೆ. ಪವಿತ್ರವಾದದ್ದನ್ನು ಲೋಕೋತ್ತರವಾಗಿ ನೋಡುವ ಕ್ರೈಸ್ತ ಲೋಕದೃಷ್ಟಿಗೆ ಇದು ಅನುಗುಣವಾಗಿದೆ. ವೆನಿಸಿಯಾದ ಸಂತ ಮಾರ್ಕೊನ ಚರ್ಚು ಜಗತ್ತಿನ ಅತ್ಯಂತ ಸುಂದರ ಕಟ್ಟಡಗಳಲ್ಲೊಂದು.ಅದರ ಹೊರಗಿನ ವೃತ್ತದಲ್ಲಿ ಸದಾ ಪಾರಿವಾಳಗಳ ಪ್ರವಾಸಿಗರ ಹಿಂಡು. ಸಂತ ಮಾರ್ಕೊ ವೃತ್ತವನ್ನು ಜಗತ್ತಿನ ಅತ್ಯಂತ ಮೋಹಕ ತಾಣವೆಂದು ನೆಪೋಲಿಯನ್ ನಂಬಿದ್ದ. ಇಲ್ಲಿ ಸದಾ ಜನ ಕಿಕ್ಕಿರಿದಿರುತ್ತಾರೆ.ಮರ್ಕೊದ ಒಳಗಡೆ ಚಿನ್ನದ ಶಿಲುಬೆಯಿದೆ. ಸಂತ ಮಾರ್ಕೊನ ಅಸ್ಥಿಗಳೂ ಇಲ್ಲಿ ಪೂಜೆಗೊಳ್ಳುತ್ತವೆ. ಪೂಜಾಸ್ಥಾನದ ಹಿನ್ನೆಲೆಯಾಗಿ ಚಿನ್ನದ ಗೋಡೆಯಿದೆ. ಅದರ ತುಂಬಾ ಕುಸುರಿಕುಸುರಿಯಾಗಿ ಕ್ರಿಸ್ತಾಯಣವನ್ನು ಬಿಡಿಸಲಾಗಿದೆ. ಆದರೆ ಪವಿತ್ರ ಅಸ್ಥಿಗಳನ್ನೂ ಒಳಗೊಂಡು ಇಲ್ಲಿ ರಾರಾಜಿಸುವ ಎಲ್ಲ ವೈಭವವೂ ಪೌರ್ವಾತ್ಯ ನಾಡುಗಳನ್ನು ಲೂಟಿ ಮಾಡಿ ತಂದದ್ದೆಂಬ ಸತ್ಯ ಎಲ್ಲ ಚೆಲುವಿನ ಹಿಂದಿರುವ ಹಿಂಸೆಯನ್ನು ನೆನಪಿಸುತ್ತದೆ.ಈ ಸಲ ಇನ್ನೊಂದು ಬದಲಾವಣೆಯನ್ನು ಕಂಡೆ. ವೆನಿಸಿಯಾದ ಕೆಲವು ಎತ್ತರದ ಗೋಪುರಗಳು ಚೂರು ಪಕ್ಕಕ್ಕೆ ವಾಲಿದಂತೆ ಕಂಡವು. ವೆನಿಸಿಯಾದ ನೀರಿನ ಮಟ್ಟ ಸ್ವಲ್ಪಸ್ವಲ್ಪವಾಗಿ ಏರುತ್ತಿದ್ದು ಕಟ್ಟಡಗಳ ಬುನಾದಿಗಳು ಹೆಚ್ಚು ಹೆಚ್ಚು ಅಸ್ಥಿರವಾಗುತ್ತಿವೆಯೆಂದು ಕೇಳಿದ್ದೆ. ಇದರ ಪರಿಣಾಮವಾಗಿಯೇ ಗೋಪುರಗಳು ವಾಲುತ್ತಿವೆಯೆಂದು ಮಿತ್ರರು ತಿಳಿಸಿದರು.ಈ ಸುಂದರ ನಗರ ವಿನಾಶದ ಹಾದಿಯಲ್ಲಿರಬಹುದೆಂಬ ನನ್ನ ಭೀತಿಯನ್ನು ನಗರಸಭೆಯ ಇಂಜಿನಿಯರರೊಬ್ಬರು ಸಮಾಧಾನಗೊಳಿಸಿದರು. ಅವರ ಪ್ರಕಾರ ನೀರಿನ ಮಟ್ಟ ಪ್ರತಿವರ್ಷ ಎರಡು ಮಿಲಿಮೀಟರಷ್ಟು ಮಾತ್ರ ಏರುತ್ತಿದ್ದು ಇನ್ನೂ ಅನೇಕ ಶತಮಾನಗಳ ವರೆಗೆ ನಗರದ ಅಸ್ತಿತ್ವಕ್ಕೆ ಯಾವ ಅಪಾಯವೂ ಇಲ್ಲ.ವೆನಿಸಿಯಾದ ಹಾದಿಗಳಲ್ಲಿ ನಾವು ಓಡಾಡುತ್ತಿದ್ದಾಗ ಬರೀ ಇಪ್ಪತ್ತನೆ ಶತಮಾನದಲ್ಲಿ ಓಡಾಡುತ್ತಿರುವುದಿಲ್ಲ. ಅಲ್ಲಿನ ಬೀದಿಗಳು, ಗಲ್ಲಿಗಳು, ಮನೆಗಳು ನೂರಾರು ವರ್ಷ ಹಳೆಯವು. ನಗರದ ಮುಖ್ಯ ಭಾಗಗಳಲ್ಲಿ ಕಾರಿನ ಸಂಚಾರ ಇಲ್ಲವೇ ಇಲ್ಲ. ಆದ್ದರಿಂದ ವೆನಿಸಿಯಾದಲ್ಲಿ ಇತಿಹಾಸ ವರ್ತಮಾನವೂ ಹೌದು.

 

ಪ್ರಗತಿಯ ಬೆನ್ನು ಹತ್ತಿ ಗುರುತು ಹಿಡಿಯಲಾಗದಷ್ಟು ಇತರ ನಗರಗಳು ಆಧುನೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಇತಾಲಿಯಾದವರು ವೆನಿಸಿಯಾ, ಫಿರನ್ಸೆ ಮತ್ತು ರೋಮಾಗಳಲ್ಲಿ ತಮ್ಮ ಹೆಮ್ಮೆಯ ಹಳೆಯ ರಚನೆಗಳನ್ನು ಒಪ್ಪಗೆಡದಂತೆ ಕಾಪಾಡಿಕೊಂಡು ಬರುತ್ತಿರುವುದು ಮೆಚ್ಚಬೇಕಾದ್ದು. ಹಳೆತರದ ಸೌಂದರ್ಯ ಹೊಸತರದ ಸೌಂದರ್ಯಕ್ಕಿಂತ ಮಿಗಿಲಾದುದು.ಬೀದಿಗಳಿಗೆ, ಗಲ್ಲಿಗಳಿಗೆ, ಕಟ್ಟಡಗಳಿಗೆ ಹಲವು ಶತಮಾನಗಳ ಸ್ಮೃತಿ ಒಂದು ಅದೃಶ್ಯವಾದ ಆದರೂ ಹೃದಯಗ್ರಾಹ್ಯವಾದ ಚೆಲುವನ್ನು ನೀಡುತ್ತದೆ. ಅಲ್ಲಿ ಬದುಕಿರುವವರ ಜೊತೆ ಅಳಿದವರೂ ಅಶರೀರರಾಗಿ ನಮ್ಮಡನಿರುತ್ತಾರೆ. ಅದರಿಂದ ನಮ್ಮ ಅನುಭವಗಳು ನೂರ್ಮಡಿ ಶ್ರಿಮಂತಗೊಳ್ಳುತ್ತವೆ. ಬಹುಶಃ ಹಳೆಯ ಇಮಾರತಿಗಳ ಮುಖ್ಯ ಆಕರ್ಷಣೆ ಇದೇ.ಪಶ್ಚಿಮದ ರಾಷ್ಟ್ರಗಳಲ್ಲಿ, ಚೀಣಾ, ಜಪಾನ್ ಮುಂತಾದ ಪೌರ್ವಾತ್ಯ ನಾಡುಗಳಲ್ಲಿ ಗತದ ಸಂಪನ್ಮೂಲಗಳನ್ನು ಸಂರಕ್ಷಿಸಿರುವ ಬಗೆ ಭಾರತೀಯರಾದ ನಮಗೆ ಅನುಕರಣೀಯ. ನನ್ನ ಪ್ರಕಾರ ಜಯಪುರ, ಬಿಕಾನೇರ್, ಹಳೆಯ ದಿಲ್ಲಿ, ಲಕ್ನೊ ಮುಂತಾದ ಕಡೆ ಮಾತ್ರವಲ್ಲ ನಮ್ಮ ಬೆಂಗಳೂರಿನ ಕಬ್ಬನ್ ಪೇಟೆ, ಚಿಕ್ಕಪೇಟೆ ಮುಂತಾದ ಕಡೆಗಳಲ್ಲಿನ ಬೀದಿ ಗಲ್ಲಿಗಳ ಸೌಂದರ್ಯ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ಆದರೆ ನಾವು ಅವನ್ನು ಕೊಳಕಿನಿಂದ, ಆಧುನೀಕರಣದ ಕುರುಡು ಹುಚ್ಚಿನಿಂದ ವಿಕೃತಗೊಳಿಸಿ ಗತದ ಅನರ್ಘ್ಯ ಕೊಡುಗೆಗಳನ್ನು ಕೆಡಿಸಿಬಿಟ್ಟಿದೇವೆ.ಪಶ್ಚಿಮದಿಂದ ಆಧುನೀಕರಣವನ್ನು ಕಲಿಯಬೇಕಾದ್ದು ಅನಿವಾರ್ಯ ನಿಜ. ಆದರೆ ಅವರ ಗತದ ಪ್ರಕೃತಿಯ ಪ್ರೇಮವನ್ನೂ ಒಂದಿಷ್ಟು ಕಲಿಯಬೇಕಾಗಿತ್ತು. ಉದಾಹರಣೆಗೆ, ಜಪಾನಿನ ಕ್ಯೋತೋ, ನಾರಾ ಮುಂತಾದ ನಗರಗಳು ಎಷ್ಟೇ ಆಧುನಿಕಗೊಂಡರೂ ಹಳೆಯ ಕಟ್ಟಡಗಳನ್ನು  ಕೆಡದಂತೆ ಸಂರಕ್ಷಿಸಿ ಹಳತು ಹೊಸತರ ನಡುವೆ ಸಮತೋಲ ಸಾಧಿಸಿದ್ದಾರೆ.ವೆನಿಸಿಯಾದಲ್ಲಿ ಇಂದಿನ ತಂತ್ರಜ್ಞಾನದ ಎಲ್ಲ ಸವಲತ್ತುಗಳೂ ಇವೆ. ಆದರೆ ಈ ಜಲಾವೃತ ನಗರದಲ್ಲಿ ಗತ ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ. ಆದ್ದರಿಂದಲೇ ಆಧುನಿಕ ಜಗತ್ತಿನ ವಿಘಟಿತ ಜೀವಗಳು ಇಲ್ಲಿಗೆ ಬಂದಾಗ ಒಂದು ಅಪರೂಪದ ಸುಖವನ್ನು ಪಡೆಯುತ್ತವೆ. ಯಾಕೆಂದರೆ ಇಂಥಾ ಕಡೆ ನಮ್ಮ ಹಳೆಯ ಮತ್ತು ಹೊಸ ವ್ಯಕ್ತಿತ್ವಗಳ ನಡುವೆ ಒಂದು ಸಮರಸ ಏರ್ಪಡುತ್ತದೆ.ಸೋಮವಾರ ನನ್ನನ್ನು ಹೊಂಬಿಸಿಲಿನಿಂದ ಸ್ವಾಗತಿಸಿದ್ದ ವೆನಿಸಿಯಾ ಬುಧವಾರ ಬೆಳಿಗ್ಗೆ ಮಳೆಗರೆಯುತ್ತಾ ನನ್ನನ್ನು ಬೀಳ್ಕೊಟ್ಟಿತು.ನಾನು ನನ್ನ ಇನ್ನೊಂದು ಪ್ರಿಯ ನಗರವಾದ ರೋಂ ಕಡೆಗೆ ರೈಲು ಹತ್ತಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.