ಬುಧವಾರ, ಜನವರಿ 29, 2020
28 °C

ಇದು ಆಟದ ಮಾತು

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಇದು ಆಟದ ಮಾತು

ಗಣಕದಲ್ಲಿ ಆಡುವುದು ಒಂದು ದೊಡ್ಡ ಹವ್ಯಾಸ ಮಾತ್ರವಲ್ಲ ಅದು ದೊಡ್ಡ ಉದ್ಯಮವೂ ಹೌದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ಆಶಿಸುವ ವಿದ್ಯಾರ್ಥಿಗಳಿಗೆ ನಾನು ನೀಡುವ ಹಲವು ಕಿವಿಮಾತುಗಳಲ್ಲಿ ಒಂದು – ಗಣಕದಲ್ಲಿ ಆಟ ಆಡುತ್ತ ಕಾಲ ಕಳೆಯಬೇಡಿ, ಬದಲಿಗೆ ಆಟ ತಯಾರಿಸಿ, ಅದರಲ್ಲಿ ತುಂಬ ಹಣವಿದೆ ಎಂದು. ಈಗಂತೂ ಮೊಬೈಲ್ ಆಟಗಳ ಕಾಲದಲ್ಲಿ ಈ ಮಾತು ಇನ್ನಷ್ಟು ಪ್ರಸ್ತುತ.ಆ ಮಾತು ಪಕ್ಕಕ್ಕಿರಲಿ. ಗಣಕಗಳಲ್ಲಿ ಆಟ ಆಡುವವರಿಗಾಗಿ ಗಣಕಕ್ಕೆ ಅಧಿಕ ಸೇರ್ಪಡೆಗಳು ಮಾರುಕಟ್ಟೆಯಲ್ಲಿ ಹಲವು ನಮೂನೆಯಲ್ಲಿ ಲಭ್ಯವಿವೆ. ಜಾಯ್‌ಸ್ಟಿಕ್, ಸ್ಟಿಯರಿಂಗ್ ವ್ಹೀಲ್, ವಿಶೇಷ ಕೀಬೋರ್ಡ್, ಹೆಡ್ಸೆಟ್, ಮೌಸ್, ಪ್ಯಾಡ್, ಇತ್ಯಾದಿ. ಈ ಸಲ ಅಂತಹ ಒಂದು ಜೊತೆ ಕೀಬೋರ್ಡ್, ಹೆಡ್ಸೆಟ್, ಮೌಸ್ ಮತ್ತು ಮೌಸ್‌ಪ್ಯಾಡ್‌ಗಳ ಕಡೆ ನಮ್ಮ ವಿಮರ್ಶಾ ನೋಟ ಬೀರೋಣ. ಇವುಗಳನ್ನು ತಯಾರಿಸಿದ್ದು ಕೋರ್ಸ್ಏರ್ (Corsair) ಕಂಪೆನಿ.

ಕೋರ್ಸ್ಏರ್ ವೆಂಜೆನ್ಸ್ ಕೆ70 ಕೀಬೋರ್ಡ್

ಇದೊಂದು ಮೆಕ್ಯಾನಿಕಲ್ ಕೀಬೋರ್ಡ್. ಸಾಮಾನ್ಯ ಕೀಬೋರ್ಡ್‌ಗಳು ಮೆಂಬ್ರೇನ್ (ಪೊರೆ) ಬಳಸುತ್ತವೆ. ಅಂದರೆ ಕೆಳಗೆ ಒಂದು ಮುದ್ರಿತ ಎಲೆಕ್ಟ್ರಾನಿಕ್ ಸರ್ಕ್ಯೂಟ್, ಅದರ ಮೇಲೆ ಒಂದು ರಬ್ಬರ್ ನಮೂನೆಯ ಪೊರೆ, ಅದರ ಮೇಲೆ ಕೀಲಿಗಳು ಇರುತ್ತವೆ. ಇಂತಹ ಕೀಲಿಮಣೆಗಳು (ಕೀಬೋರ್ಡ್) ಆಟ ಆಡಲು ಅಷ್ಟು ಚೆನ್ನಾಗಿರುವುದಿಲ್ಲ. ಆಟ ಆಡಲು ಬಳಸುವ ಕೀಲಿಮಣೆಗಳು ತುಂಬ ದೃಢವಾಗಿರಬೇಕು.ಆಟ ಆಡುವವರು ಕೆಲವೊಮ್ಮೆ ಆಟದಲ್ಲಿ ಎದುರಾಳಿಯನ್ನು ಹೊಡೆಯುವ ಕ್ರಿಯೆಯಲ್ಲಿ ಎಷ್ಟು ತಲ್ಲೀನರಾಗಿರುತ್ತಾರೆಂದರೆ, ತಮ್ಮ ಶಕ್ತಿಯನ್ನೆಲ್ಲ ಕೀಲಿಮಣೆ ಮೇಲೆ ಪ್ರಯೋಗಿಸುತ್ತಾರೆ. ಆದುದರಿಂದ ಆಟ ಆಡಲು ಸಾಮಾನ್ಯವಾಗಿ ಮೆಂಬ್ರೇನ್ ಕೀಲಿಮಣೆಗಳು ಅಷ್ಟು ಸೂಕ್ತವಲ್ಲ. ಮೆಕ್ಯಾನಿಕಲ್ ಕೀಲಿಮಣೆಗಳಲ್ಲಿ ಪ್ರತಿಯೊಂದು ಕೀಲಿಯೂ ಒಂದು ಪ್ರತ್ಯೇಕ ಸ್ವಿಚ್ ಆಗಿರುತ್ತದೆ. ಹಲವು ಸಾವಿರ ಸಲ ಅತಿ ವೇಗವಾಗಿ ಒತ್ತಿ ಬಿಟ್ಟು ಮಾಡಿದರೂ ಅದು ತಡೆದುಕೊಳ್ಳುವಂತಿರುತ್ತದೆ.ಕೋರ್ಸ್ಏರ್ ವೆಂಜೆನ್ಸ್ ಕೆ ೭೦ ಅಂತಹ ಒಂದು ಕೀಲಿಮಣೆ. ಗೇಮಿಂಗ್ ಕೀಬೋರ್ಡ್‌ನ ಎಲ್ಲ ಗುಣವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ. ಅದಲ್ಲದೆ ಇನ್ನೂ ಹಲವು ವೈಶಿಷ್ಟ್ಯಗಳು ಇದರಲ್ಲಿವೆ. ಇದರ ಎಲ್ಲ ಕೀಲಿಗಳ ಹಿಂದೆ ಎಲ್ಇಡಿ ದೀಪವಿದೆ.ಅದೇನೂ ವಿಶೇಷವಲ್ಲ. ಅಂತಹ ಕೀಲಿಮಣೆಗಳು ಬೇಕಾದಷ್ಟಿವೆ. ಆದರೆ ಇದರಲ್ಲಿ ಅವುಗಳ ಬೆಳಕಿನ ಪ್ರಖರತೆಯನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಅದೂ ಯಾವ ಕೀಲಿಗೆ ಎಷ್ಟು ಬೆಳಕು ಬೇಕು ಎಂದು ಆಯ್ಕೆ ಮಾಡಬಹುದು. ಆಟ ಆಡುವಾಗ ಬಳಸುವ ಕೆಲವು ಕೀಲಿಗಳು (W, A, S, D, ಮತ್ತು 1 ರಿಂದ 6) ಪ್ರತ್ಯೇಕ ನೀಡಿದ್ದಾರೆ. ಕೀಲಿಮಣೆಯಲ್ಲಿರುವ ಕೀಲಿಗಳನ್ನು ತೆಗೆದು ಈ ಕೀಲಿಗಳನ್ನು ಜೋಡಿಸಲು ಒಂದು ಚಿಕ್ಕ ಸಾಧನವನ್ನೂ ನೀಡಿದ್ದಾರೆ.ಈ ಕೀಲಿಮಣೆಯನ್ನು ಗಣಕಕ್ಕೆ ಯುಎಸ್‌ಬಿ ಮೂಲಕ ಜೋಡಿಸಬೇಕು. ಒಂದು ಹೆಚ್ಚಿಗೆ ಯುಎಸ್‌ಬಿ ನೀಡಿದ್ದಾರೆ. ಇದನ್ನೂ ಗಣಕಕ್ಕೆ ಜೋಡಿಸಿದರೆ ಕೀಲಿಮಣೆಯಲ್ಲಿರುವ ಒಂದು ಯುಎಸ್‌ಬಿ ಕಿಂಡಿಯನ್ನು ಬಳಸಬಹುದು. ಅದಕ್ಕೆ ಮೌಸ್, ಹೆಡ್‌ಸೆಟ್ ಅಥವಾ ಇನ್ಯಾವುದಾದರೂ ಯುಎಸ್‌ಬಿ ಸಾಧನ ಜೋಡಿಸಬಹುದು.ಆಟ ಆಡುವವರಿಗೆ ಇದು ಉತ್ತಮ ಸೌಲಭ್ಯ. ಹೆಡ್‌ಸೆಟ್ ಅಥವಾ ಮೌಸ್ ಜೋಡಿಸಲು ಮತ್ತೆ ಗಣಕದ ಯುಎಸ್‌ಬಿ ಕಿಂಡಿಯಷ್ಟು ದೂರ ಹೋಗಬೇಕಾಗಿಲ್ಲ. ಇದು ಮಲ್ಟಿಮೀಡಿಯ ಕೀಬೋರ್ಡ್ ಕೂಡ ಹೌದು. ಹಾಡು ಕೇಳುವುದಿದ್ದಲ್ಲಿ ಮುಂದಿನ ಹಾಡು, ಹಿಂದಿನ ಹಾಡು, ವಾಲ್ಯೂಮ್ ಇತ್ಯಾದಿಗಳಿಗೆಂದೇ ಪ್ರತ್ಯೇಕ ಬಟನ್‌ಗಳಿವೆ. ಕೀಲಿಮಣೆಯ ಮುಂದೆ ಕೈ ಇಡಲು ಹೆಚ್ಚಿಗೆ ಒಂದು ಪ್ಯಾಡ್ ಮಾದರಿಯ ಜೋಡಣೆಯೂ ಇದೆ. ಇದನ್ನು ಜೋಡಿಸಿದರೆ ಆಟ ಆಡುವಾಗ ಕೈಗೆ ಸುಸ್ತಾಗುವುದಿಲ್ಲ.ಒಟ್ಟಿನಲ್ಲಿ ಈ ಕೀಲಿಮಣೆ ನಿಜಕ್ಕೂ ಚೆನ್ನಾಗಿದೆ. ಆಟ ಆಡಲು ಮಾತ್ರವಲ್ಲ, ಸಾಮಾನ್ಯ ಕೀಲಿಮಣೆಯಾಗಿಯೂ ಇದರ ಬಳಕೆ ಉತ್ತಮ ಅನುಭವ ನೀಡುತ್ತದೆ. ತುಂಬ ಟೈಪ್ ಮಾಡುವವರೂ ಇದನ್ನು ಬಳಸಬಹುದು. ಇದರ ಬೆಲೆ ಸುಮಾರು ೭ ಸಾವಿರ ರೂ. ಬೆಲೆ ಸ್ವಲ್ಪ ಜಾಸ್ತಿಯೇ.

ಕೋರ್ಸ್ಏರ್ ವೆಂಜೆನ್ಸ್ 1500 ಹೆಡ್‌ಸೆಟ್

ಇದು ಆಟ ಆಡುವವರಿಗೆಂದೇ ತಯಾರಿಸಿದ ಹೆಡ್‌ಸೆಟ್. ಇದನ್ನು ಗಣಕಕ್ಕೆ ಯುಎಸ್‌ಬಿ ಮೂಲಕ ಮಾತ್ರವೇ ಜೋಡಿಸಬಹುದು. ೩.೫ ಮಿ.ಮೀ. ಇಯರ್‌ಫೋನ್ ಜಾಕ್ ನೀಡಿಲ್ಲ. ಅಂದರೆ ನೀವು ಇದನ್ನು ನಿಮ್ಮ ಮೊಬೈಲ್ ಫೋನ್, ಆಂಪ್ಲಿಫೈಯರ್, ಐಪಾಡ್ ಇತ್ಯಾದಿಗಳ ಜೊತೆ ಬಳಸುವಂತಿಲ್ಲ. ಇದರಲ್ಲಿ ಮೈಕ್ರೋಫೋನ್ ಕೂಡ ಇದೆ. ಇದು ಕಿವಿಯ ಸಂಪೂರ್ಣ ಹೊರಗಡೆ ಕುಳಿತುಕೊಳ್ಳವಂತಹ ದೊಡ್ಡ ಗಾತ್ರದ ಹೆಡ್‌ಸೆಟ್. ಇದರ ಬೆಲೆ ಸುಮಾರು ೫ ಸಾವಿರ ರೂ.

ಇದರ ಡಯಾಫ್ರಂ ೫೦ ಮಿ.ಮೀ. ಗಾತ್ರದ್ದು. ಅಂದರೆ ಇದನ್ನು ಒಂದು ಮಟ್ಟಿಗೆ ಚಿಕ್ಕ ಸ್ಪೀಕರ್ ಎಂದೇ ಹೇಳಬಹುದು.ಇಷ್ಟು ದೊಡ್ಡ ಗಾತ್ರದ್ದು ಆಗಿರುವುದರಿಂದ ಎಲ್ಲ ಕಂಪನಾಂಕಗಳ ಧ್ವನಿಯನ್ನು ಉತ್ತಮವಾಗಿ ಪುನರುತ್ಪತ್ತಿ ಮಾಡಬೇಕು. ಆದರೆ ಇದರ ಗಾತ್ರ ಮತ್ತು ಬೆಲೆಗೆ ಹೋಲಿಸಿದರೆ ಇದರ ಕಾರ್ಯಕ್ಷಮತೆ ತೃಪ್ತಿ ನೀಡುವುದಿಲ್ಲ. ಈ ಹೆಡ್‌ಸೆಟ್‌ಗೆಂದೇ ಕಂಪೆನಿಯವರು ಪ್ರತ್ಯೇಕ ಡ್ರೈವರ್ ತಂತ್ರಾಂಶವನ್ನು ತಮ್ಮ ಜಾಲತಾಣದಲ್ಲಿ ನೀಡಿದ್ದಾರೆ.ಅದನ್ನು ಹಾಕಿಕೊಂಡರೆ ೭.೧ ಡಾಲ್ಬಿ ಸೌಲಭ್ಯ ದೊರೆಯುತ್ತದೆ. ಆಗ ೩ ಆಯಾಮದ ಆಟ ಆಡುವಾಗ ನಿಜವಾಗಿಯೂ ೩ ಆಯಾಮದ ಧ್ವನಿಯ ಅನುಭವ ಪಡೆಯಬಹುದು. ಇದೇನೋ ಉತ್ತಮವಾಗಿದೆ. ಆದರೆ ಸಂಗೀತ ಕೇಳುವಾಗ ಅತಿ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ತೃಪ್ತಿದಾಯಕವಾಗಿಲ್ಲ.

ಕೋರ್ಸ್ಏರ್ ಗೇಮಿಂಗ್ ಮೌಸ್, ಪ್ಯಾಡ್

ಕೋರ್ಸ್ಏರ್ ಕಂಪೆನಿಯವರು MM400 ಎಂಬ ಮಾದರಿಯ ಮೌಸ್‌ಪ್ಯಾಡ್ ತಯಾರಿಸಿದ್ದಾರೆ. ಇದು ಆಟ ಆಡುವವರಿಗಾಗಿಯೇ ಇರುವುದು. ಸಾಮಾನ್ಯ ಮೌಸ್‌ಪ್ಯಾಡ್‌ಗಿಂತ ತುಂಬ ದೊಡ್ಡದಾಗಿದೆ. ಇದರ ಮೇಲ್ಮೈ ಮೌಸ್ ಅನ್ನು ಸರಾಗವಾಗಿ ಮತ್ತು ಅತಿ ನಿಖರವಾಗಿ ಚಲಿಸಲು ಅನುವು ಮಾಡುವಂತೆ ತಯಾರಿಸಲಾಗಿದೆ.ಈ ನಿಖರತೆ ಆಟ ಆಡುವಾಗ ಮುಖ್ಯವಾಗುತ್ತದೆ. ಕೋರ್ಸ್ಏರ್ ಕಂಪೆನಿಯವರು ಆಟ ಆಡುವವರಿಗೆಂದೇ ಪ್ರತ್ಯೇಕ ಮೌಸ್ ತಯಾರಿಸಿದ್ದಾರೆ. ನನಗೆ ವಿಮರ್ಶೆಗೆ ಕಳುಹಿಸಿದ ಮೌಸ್ ಒಂದು ಮಾಮೂಲಿ ಪೆಟ್ಟಿಗೆಯಲ್ಲಿ ಬಂದಿತ್ತು. ಅದರದೇ ಪೆಟ್ಟಿಗೆಯಲ್ಲಿರಲಿಲ್ಲ. ಮೌಸ್‌ನಲ್ಲೂ ಅದರ ಮಾದರಿ ಸಂಖ್ಯೆ ಎಲ್ಲೂ ನಮೂದಿಸಿರಲಿಲ್ಲ.ಅದನ್ನು ಗಣಕಕ್ಕೆ ಜೋಡಿಸಿದಾಗ ಅದು ಕೆಲಸ ಮಾಡಲಿಲ್ಲ. ಆದುದರಿಂದ ಅದರ ಮಾದರಿ ಸಂಖ್ಯೆ ಯಾವುದು ಎಂಬುದು ತಿಳಿಯಲಿಲ್ಲ. ನಮ್ಮ ಮನೆಯಲ್ಲಿರುವ ಎಲ್ಲ ಲ್ಯಾಪ್‌ಟಾಪ್‌ಗಳ ಜೊತೆ ಪ್ರಯತ್ನಿಸಿ ನೋಡಿಯಾಯಿತು, ಯಾವುದರ ಜೊತೆಯೂ ಅದು ಕೆಲಸ ಮಾಡಲಿಲ್ಲ.ಗಣಕದಲ್ಲಿ ಅದನ್ನು ಪತ್ತೆ ಹಚ್ಚಲು ಪ್ರಯತ್ನಿಸಿದಾಗ ಅದನ್ನು ಗಣಕವು ತೋರಿಸಲಿಲ್ಲ. ಅದಕ್ಕೆ ಪ್ರತ್ಯೇಕ ಡ್ರೈವರ್ ತಂತ್ರಾಂಶ ಬೇಕೇನೋ? ಆದರೆ ಅದನ್ನು ಅವರು ಕಳಿಸಿರಲಿಲ್ಲ. ಅದರ ಮಾದರಿ ಸಂಖ್ಯೆ ಏನು ಎಂದು ತಿಳಿಯದಿರುವುದರಿಂದ ಯಾವ ಡ್ರೈವರ್ ತಂತ್ರಾಂಶ ಡೌನ್‌ಲೋಡ್ ಮಾಡಬೇಕು ಎಂದೂ ಗೊತ್ತಾಗಲಿಲ್ಲ.ಗ್ಯಾಜೆಟ್ ಲೋಕ 100

ಈ ಸಂಚಿಕೆಯೊಂದಿಗೆ ಗ್ಯಾಜೆಟ್‌ಲೋಕ ಅಂಕಣ ನೂರು ಸಂಚಿಕೆಗಳನ್ನು ಮುಗಿಸುತ್ತಿದೆ. ಈ ಅಂಕಣ ಜನವರಿ 5, 2012ರಲ್ಲಿ ಪ್ರಾರಂಭವಾಯಿತು. ಈ ಅಂಕಣದ ಲೇಖನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದರಲ್ಲಿ ಯಾವುದಾದರೂ ಬದಲಾವಣೆಗಳು ಬೇಕಿದ್ದರೆ ಅವು ಯಾವುವು ಎಂಬುದನ್ನು ಇ-ಮೇಲ್‌ ಮೂಲಕ ತಿಳಿಸಿ.

-ಡಾ| ಯು.ಬಿ. ಪವನಜ

gadgetloka@gmail.com

ಪ್ರತಿಕ್ರಿಯಿಸಿ (+)