ಇದು ಆಟ ಕೆಡಿಸುವ ಸಮಯ!

7

ಇದು ಆಟ ಕೆಡಿಸುವ ಸಮಯ!

Published:
Updated:
ಇದು ಆಟ ಕೆಡಿಸುವ ಸಮಯ!

ಒಂದು ವ್ಯವಸ್ಥೆ ಸುಮ್ಮನೆ ನಡೆದುಕೊಂಡು ಹೊರಟಿದೆ ಎಂದು ಅನಿಸಬಾರದು. ಅದು ಬರೀ ಕಾಲ ತಳ್ಳುವ ವಿಧಾನವೇ ಹೊರತು ಗುರುತು ಮೂಡಿಸುವ ರೀತಿಯಲ್ಲ. ರಾಜ್ಯ ಸರ್ಕಾರ ಹೊರಟಿರುವ ರೀತಿ ಇದಕ್ಕಿಂತ ಭಿನ್ನವಾಗಿಲ್ಲ. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿ ಹನ್ನೊಂದು ತಿಂಗಳು ಆಗುತ್ತ ಬಂತು. ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗೆ ಪೂರ್ಣ ಸಂಪುಟ ರಚಿಸಲು ಅವರಿಗೆ ಸಾಧ್ಯವಾಗಿಲ್ಲ. ಈಗ ಸಂಪುಟದ 11 ಸ್ಥಾನಗಳು ಖಾಲಿ ಇವೆ. ಅವರ ಬಳಿ 19ಕ್ಕಿಂತ ಹೆಚ್ಚು ಖಾತೆಗಳು ಇವೆ. ಅವರ ಸಂಪುಟದ ಸದಸ್ಯರ ನಿಷ್ಠೆಯೂ ಅಡ್ಡಡ್ಡ ಸೀಳಿ ಹೋಗಿದೆ. ಗೌಡರಿಗೆ ನಿಷ್ಠರಾಗಿರುವ ಸಚಿವರ ಸಂಖ್ಯೆ ಬಹಳ ಕಡಿಮೆ. ಡಾಲರ್ಸ್ ಕಾಲೊನಿಯ ಮನೆಗೆ ನಿಷ್ಠರಾಗಿರುವ ಸಚಿವರ ಸಂಖ್ಯೆಯೇ ಹೆಚ್ಚು. ಅವರು ಇವರನ್ನು ಕೇಳುವುದಿಲ್ಲ. ಇವರು ಅವರನ್ನು ಕೇಳುವುದಿಲ್ಲ. ಆದರೂ ಒಂದು ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂದರೆ ಅದು ಒಂದು ಅಚ್ಚರಿ. ಇದು ಸರ್ಕಾರ ಇರುವ ರೀತಿಯೇ ಎಂದು ಕೇಳುವುದು ಬೇಡ. ಭಿನ್ನ ಪಕ್ಷದ ವಿಭಿನ್ನ ಸರ್ಕಾರ ಇದು ಎಂದು ಹೇಳಬಹುದೇನೋ?!ಸದಾನಂದಗೌಡರು ದಿನ ಎಣಿಸುತ್ತಿದ್ದಾರೆ. ಒಂದು ದಿನ ದಾಟಿದರೆ ಸಾಕು ಅವರ ಮುಖ್ಯಮಂತ್ರಿಯ ಅವಧಿಗೆ ಆ ದಿನ ಸೇರ್ಪಡೆಯಾಗುತ್ತದೆ. ಮರುದಿನ ಮತ್ತೆ ಅತಂತ್ರ. ಇಂಥ ಅತಂತ್ರ ಸ್ಥಿತಿಯಲ್ಲಿ ಯಾವ ಮುಖ್ಯಮಂತ್ರಿಯೂ ಏನಾದರೂ ಒಂದು ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬುವುದು ಒಂದು ಅತಿಯಾದ ನಿರೀಕ್ಷೆ. ಯಾರು ಮುಖ್ಯಮಂತ್ರಿಯಾದರೂ ಅವರಿಗೆ ತನ್ನ ಅವಧಿಯಲ್ಲಿ ರಾಜ್ಯಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ಎಂಬ ಆಸೆ ಖಂಡಿತ ಇರುತ್ತದೆ.`ಸಕಾಲ~ ಸೇವೆಯೊಂದನ್ನು ಜಾರಿ ಮಾಡಿದ್ದು ಬಿಟ್ಟರೆ ಕಳೆದ ಹತ್ತು ಹನ್ನೊಂದು ತಿಂಗಳಲ್ಲಿ ಅವರಿಗೆ ದೊಡ್ಡದು ಏನನ್ನೂ ಮಾಡಲು ಸಾಧ್ಯ ಆಗಲಿಲ್ಲ. ಯಾವುದನ್ನೂ ದೃಢವಾಗಿ ಮಾಡಲು ಅವರಿಗೆ ಅಂಥ ಅಧಿಕಾರ ಇರಲಿಲ್ಲ. ಒಂದು ನಿರ್ಧಾರ ತೆಗೆದುಕೊಂಡರೆ ಅದರ ಪ್ರತಿಕ್ರಿಯೆ ಏನಾಗಬಹುದು ಎಂಬ ಅಳುಕಿನಲ್ಲಿಯೇ ಅವರು ದಿನ ಕಳೆಯುತ್ತಿದ್ದಾರೆ. ಈಗ ಮತ್ತೆ ಅವರ ನಾಯಕತ್ವಕ್ಕೇ ಸವಾಲು ಎದ್ದು ನಿಂತಿದೆ.ಸದಾನಂದಗೌಡರಿಗೆ ಬರೀ ಸಂಪುಟದ ಸದಸ್ಯರ ಬೆಂಬಲ ಮಾತ್ರವಲ್ಲ, ತಮ್ಮ ಬೆಂಬಲಕ್ಕಿರುವ ಶಾಸಕರ ಸಂಖ್ಯೆಯ ಬಗೆಗೂ ಖಚಿತತೆ ಇದ್ದಂತೆ ಇಲ್ಲ. ಇದ್ದರೆ ಅವರು ಶಾಸಕಾಂಗ ಪಕ್ಷದ ಸಭೆ ಕರೆಯಲು ಅಳುಕಬೇಕಾಗಿರಲಿಲ್ಲ. ಯಡಿಯೂರಪ್ಪ ಬಣದವರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಶಾಸಕಾಂಗದ ಸಭೆ ಕರೆಯಬೇಕು ಎಂದು ಆಗ್ರಹಿಸುತ್ತಿದ್ದರೂ ಒಂದು ಸಾರಿ ಸಭೆ ಕರೆದುಬಿಟ್ಟರೆ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಯಾರಿಗೂ ಸಂದೇಹ ಉಳಿದಿಲ್ಲ. ಅಂಥ ಒಂದು ಪಲ್ಲಟ ಆಗಿಯೇ ಬಿಡಬಹುದು ಎಂಬ ಅಳುಕಿನಿಂದಲೇ ಗೌಡರು ಸಭೆ ಕರೆಯುವ ಹೊಣೆಯನ್ನು ಹೈಕಮಾಂಡ್ ಮೇಲೆ ಹಾಕಿ ಮತ್ತೆ ಕಾಲ ತಳ್ಳುತ್ತಿದ್ದಾರೆ. ಹೈಕಮಾಂಡ್ ಕೂಡ ಕಾಲ ತಳ್ಳುವುದರಲ್ಲಿಯೇ ನಂಬಿಕೆ ಇಟ್ಟುಕೊಂಡಿರುವಂತೆ ಇದೆ. ಇಂದು ಒಂದು ದಿನ ಕಳೆದರೆ ಸಾಕು. ನಾಳೆ ನೋಡೋಣ ಎಂಬುದು ಅದರ ಯೋಚನೆ. ಅದಕ್ಕೆ ನೆಪಗಳಾಗಿ ಐದು ರಾಜ್ಯಗಳ ಚುನಾವಣೆ, ನಾಯಕರ ಮಕ್ಕಳ ಮದುವೆ, ಕಾರ್ಯಕಾರಿಣಿ ಸಭೆ, ರಾಷ್ಟ್ರಪತಿ ಚುನಾವಣೆ ಒದಗಿ ಬರುತ್ತಲೇ ಇವೆ. ಆದರೆ, ಹೀಗೆ ಏನೇನೋ ನೆಪ ಹೇಳಿ ಕಾಲ ತಳ್ಳುವುದು ದುರ್ಬಲ ಹೈಕಮಾಂಡ್‌ನ ಲಕ್ಷಣ. `ಸದಾನಂದಗೌಡರನ್ನು ಬದಲಿಸುವುದಿಲ್ಲ.

ಶಾಸಕಾಂಗ ಪಕ್ಷದ ಸಭೆ ಕರೆಯುವ ಅಗತ್ಯವೂ ಇಲ್ಲ~ ಎಂದು ಒಂದು ಸಾರಿ ಘಂಟಾಘೋಷವಾಗಿ ಹೇಳಿಬಿಟ್ಟರೆ ಪಕ್ಷ ಒಡೆದೇ ಬಿಡಬಹುದು ಎಂಬ ಅಳುಕು ಹೈಕಮಾಂಡಿಗೂ ಇದ್ದಂತೆ ಇದೆ. ಅದು ತೀರಾ ಆಧಾರ ರಹಿತವಾದ ಅಳುಕೇನೂ ಅಲ್ಲ. ಹೀಗೆ ಎರಡೂ ಬಣಗಳನ್ನು ಸಮಾಧಾನ ಮಾಡುವ ತನ್ನ ಯತ್ನದಲ್ಲಿ ಸರ್ಕಾರದ ಗತಿ ಏನಾಗಿದೆ ಎಂಬ ಚಿಂತೆಯೇನೂ ಹೈಕಮಾಂಡಿಗೆ ಇದ್ದಂತೆ ಇಲ್ಲ.ಒಂದು ಸಾರಿ ಒಂದು ವ್ಯವಸ್ಥೆಯಲ್ಲಿ ಹೀಗೆ ದೌರ್ಬಲ್ಯ ಸೇರಿಬಿಟ್ಟರೆ ಅದು ಸಾಂಕ್ರಾಮಿಕವಾಗಿ ಹೇಗೆ ಹಬ್ಬುತ್ತದೆ ಎಂಬುದಕ್ಕೆ ರಾಜ್ಯ ಬಿಜೆಪಿಯ ಕಾರ್ಯವೈಖರಿ ಇನ್ನೊಂದು ನಿದರ್ಶನ. ವಿಧಾನಸಭೆಯಿಂದ ಪರಿಷತ್ತಿನ ಹನ್ನೊಂದು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಅಡ್ಡಮತದಾನ ಆದುದು ಬಿಜೆಪಿಯಲ್ಲಿ. ಹನ್ನೆರಡು ಜನ ಶಾಸಕರು ಅಡ್ಡಮತದಾನ ಮಾಡಿ ಪಕ್ಷದ ಅಧಿಕೃತ ಅಭ್ಯರ್ಥಿಗಳು ಗೆಲ್ಲಲು ಏದುಸಿರು ಬಿಡುವಂತೆ ಮಾಡಿದರು. ಅಡ್ಡಮತದಾನ ಆದ ದಿನ ಪಕ್ಷದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಆಡಿದ ವೀರಾವೇಶದ ಮಾತುಗಳು ಯಾರಿಗೂ ಮರೆತು ಹೋಗಿಲ್ಲ. ಅಡ್ಡ ಮತದಾನ ಮಾಡಿದವರನ್ನು ಗುರುತಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಅವರು ಬೆದರಿಕೆ ಹಾಕಿದರು. ಆದರೆ, ಅವರನ್ನು ಗುರುತಿಸಲು ಕನಿಷ್ಠ ಒಂದು ಸಮಿತಿಯನ್ನು ರಚಿಸಲೂ ಅವರಿಗೆ ಇದುವರೆಗೆ ಸಾಧ್ಯವಾಗಿಲ್ಲ. ಈ ಹನ್ನೊಂದು, ಹನ್ನೆರಡು ಸಂಖ್ಯೆ ಬಿಜೆಪಿಯನ್ನು ಕಾಡಿದ್ದು ಅಷ್ಟಿಷ್ಟಲ್ಲ! ಅಷ್ಟೇ ಸಂಖ್ಯೆಯ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಎಂದು ತಿಳಿಯದಷ್ಟು ಪಕ್ಷ ಅಮಾಯಕವೇ? ದುರ್ಬಲವೇ? ಅವರನ್ನು ಗುರುತಿಸಿ ಕ್ರಮ ತೆಗೆದುಕೊಂಡರೆ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಭಯವೇ? ಹೀಗೆ ಹೆದರಿಕೊಂಡು ಹೆದರಿಕೊಂಡು ಭಿನ್ನ ಪಕ್ಷ ಎಂದು ಹೆಸರಾದ ಶಿಸ್ತಿನ ಪಕ್ಷ ಇನ್ನೆಷ್ಟು ದಿನ ಕಾಲ ದೂಡುತ್ತ ಇರುತ್ತದೆ? ಹುಣ್ಣಿನ ಜತೆ ಬದುಕುವುದು ಈ ಸರ್ಕಾರದ ಹಣೆಬರಹವೇ?ಇದೇ ಚುನಾವಣೆಯಲ್ಲಿ ತನ್ನ ಒಬ್ಬ ಅಭ್ಯರ್ಥಿ ಸೋತ ಕಾರಣಕ್ಕೆ ಕಾಂಗ್ರೆಸ್ಸು ಐವರು ಹಿರಿಯ ಸದಸ್ಯರ ಒಂದು ಸಮಿತಿ ರಚಿಸಿತು. ಆ ಸಮಿತಿ ವಿಧಾನಸಭೆಯ ವಿರೋಧಿ ನಾಯಕನನ್ನು ವಿಚಾರಣೆಗೆ ಕರೆದಿತ್ತು. ಪಕ್ಷದ ಅಧ್ಯಕ್ಷರಿಗೂ ತನ್ನ ಎದುರು ಹಾಜರಾಗಲು ಸೂಚಿಸಿದೆ. ಇದು `ಭಲೆ~ ಎನ್ನುವಂಥ ಒಂದು ನಿದರ್ಶನ. ಶಿಸ್ತಿನ ಪಕ್ಷ ಎಂದು ಹಣೆಪಟ್ಟಿ ಕಟ್ಟಿಕೊಂಡ ಬಿಜೆಪಿಯೂ ಕನಿಷ್ಠ ಇಂಥ ಒಂದು ಸಮಿತಿಯನ್ನು ರಚಿಸಬಹುದಿತ್ತಲ್ಲ? ಹಾಗೆ ಆಗಿಲ್ಲವಾದ್ದರಿಂದ ಈ ಪಕ್ಷದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂದು ಹೇಳಿದಂತೆಯೇ ಆಗಲಿಲ್ಲವೇ? 2002ರಲ್ಲಿ ಉದ್ಯಮಿ ವಿಜಯ ಮಲ್ಯ ಅವರು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಗೆದ್ದ ಮರುಗಳಿಗೆಯಲ್ಲಿ ತನ್ನ ಆರೇಳು ಶಾಸಕರನ್ನು ಇದೇ ಬಿಜೆಪಿ ಉಚ್ಚಾಟಿಸಿತ್ತಲ್ಲ? ಯಾವ ಹೊಣೆಯೂ ಇಲ್ಲದೆ, ಯಾವ ಜವಾಬ್ದಾರಿಯೂ ಇಲ್ಲದೆ ಒಂದು ಅಧಿಕಾರವನ್ನು ಉಳಿಸಿಕೊಳ್ಳುವುದರಲ್ಲಿ ಏನು ಅರ್ಥವಿದೆ? ಸಾರ್ಥಕತೆಯಿದೆ?ಕಾಲವನ್ನು ಹೀಗೆಯೇ ತಳ್ಳಿಕೊಂಡು ಹೋಗಲಾಗದು. ಅದು ತಾನೇ ಉರುಳುತ್ತ ಇರುತ್ತದೆ. ಅಂತಲೇ ತೀರ್ಮಾನದ ಗಳಿಗೆ ಹತ್ತಿರ ಬರುವಂತೆಯೂ ಕಾಣುತ್ತಿದೆ. ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಯಡಿಯೂರಪ್ಪ ಬಣದ ಒತ್ತಡವನ್ನು ಹೈಕಮಾಂಡ್ ಹೇಗೆ ಎದುರಿಸುತ್ತದೆ ಎಂದು ಗೊತ್ತಿಲ್ಲ. ಹೆಚ್ಚು ಗೊಂದಲಕ್ಕೆ ಎಡೆಮಾಡದೇ ನಾಯಕತ್ವದಲ್ಲಿ ಬದಲಾವಣೆ ತರುವುದು ಅದರ ಉದ್ದೇಶ ಇದ್ದಂತೆ ಇದೆ. ಲಿಂಗಾಯತ ಮತಬ್ಯಾಂಕ್ ಅನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿ ಅವರಿಗೆ ಸಂಪೂರ್ಣ ಸಂಪುಟ ರಚಿಸಲು ಅವಕಾಶ ಕೊಟ್ಟು ಉಳಿದ ಅವಧಿಯಲ್ಲಿ ಒಂದಿಷ್ಟು ಸ್ವಚ್ಛ ಮತ್ತು ಕ್ರಿಯಾಶೀಲ ಸರ್ಕಾರ ಕೊಡುವುದೂ ಅದರ ಉದ್ದೇಶವಾಗಿರುವಂತಿದೆ. ಆದರೆ, ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ.ಸದಾನಂದಗೌಡರನ್ನು ಅಷ್ಟು ಸುಲಭವಾಗಿ ಅಧಿಕಾರದಿಂದ ಇಳಿಸಲು ಆಗುತ್ತದೆಯೇ? ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಹತ್ತು ಹನ್ನೆರಡು ಶಾಸಕರು ಅದಕ್ಕೆ ಒಪ್ಪುವಂತೆ ಕಾಣುವುದಿಲ್ಲ. ಹಾಗಾಗಿ ಹೈಕಮಾಂಡಿಗೆ ಇದು ಒಂದು ರೀತಿಯಲ್ಲಿ ಇಕ್ಕುಳದ ಹಿಡಿತ. ಆ ಕಡೆ ವಾಲಿದರೆ ಒಂದು, ಈ ಕಡೆ ವಾಲಿದರೆ ಇನ್ನೊಂದು. ಆದರೆ, ಕಾಲ ನಿಲ್ಲುವುದಿಲ್ಲ. ಮುಂದಿನ ಡಿಸೆಂಬರ್ ವೇಳೆಗೆ ಚುನಾವಣೆ ಬರುತ್ತದೆ ಎಂದು ಹೆಚ್ಚೂ ಕಡಿಮೆ ಎಲ್ಲ ಪಕ್ಷಗಳು ತೀರ್ಮಾನಿಸಿದಂತೆ ಇದೆ.ಮುಂಬರುವ ಚುನಾವಣೆ ಎದುರಿಸಲು ಎಲ್ಲ ಪಕ್ಷಗಳಲ್ಲಿಯೂ ಒಂದಿಷ್ಟು ಸಮಸ್ಯೆಗಳು ಇವೆ. ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗೆ ನಂಬರ್ ಒನ್ ಸ್ಥಾನದ ಚಿಂತೆ. ಈಗ ಆ ಸ್ಥಾನದಲ್ಲಿ ಇರುವ ಪರಮೇಶ್ವರ್ ಅವರಿಗೆ ಚುನಾವಣೆ ಮುಗಿಯುವವರೆಗೆ ಅದೇ ಸ್ಥಾನದಲ್ಲಿ ಇರುವ ಆಸೆ. ಲಿಂಗಾಯತ ಸಮುದಾಯದ ಶಾಮನೂರು ಶಿವಶಂಕರಪ್ಪ ಅವರಿಗೂ ಈಗ ಅದೇ ಸ್ಥಾನದ ಮೇಲೆ ಕಣ್ಣು. ತಮ್ಮ ಪಕ್ಷಕ್ಕೆ ಅಧಿಕಾರ ಸಿಗಬಹುದು ಎಂದು ಅನಿಸಿದಾಗ ಹೀಗೆಲ್ಲ ಆಗುವುದು ಸಹಜ. ಕಾಂಗ್ರೆಸ್ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ. 1999ರ ವಿಧಾನಸಭೆ ಚುನಾವಣೆಗಿಂತ ಮುಂಚೆ ಆಗಿನ ಅಧ್ಯಕ್ಷ ಧರ್ಮಸಿಂಗ್ ಅವರನ್ನೇ ಬದಲಿಸಿ ಎಸ್.ಎಂ.ಕೃಷ್ಣ ಅವರನ್ನು ಪಕ್ಷ ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಕೂಡ್ರಿಸಿತ್ತು. ನೇಮಕ ಸಂಸ್ಕೃತಿಯ ಕಾಂಗ್ರೆಸ್ಸಿನಲ್ಲಿ ಧರ್ಮಸಿಂಗ್ ಒಬ್ಬ ಚುನಾಯಿತ ಅಧ್ಯಕ್ಷರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಹುದ್ದೆ ಹಿಂದೆ ಯಾವಾಗ ಚುನಾವಣೆ ನಡೆದಿತ್ತು ಯಾರಿಗೂ ನೆನಪಿಲ್ಲ. ಧರ್ಮಸಿಂಗ್ ನಂತರ ಮತ್ತೆ ನಡೆದೇ ಇಲ್ಲ. ಈಗ ಮತ್ತೆ ಅಧ್ಯಕ್ಷರ ಬದಲಾವಣೆಯಂಥ ಚಮತ್ಕಾರ ಆಗಲಾರದು ಎಂದು ಹೇಗೆ ಹೇಳುವುದು?ಇತ್ತ ಬಿಜೆಪಿಯಲ್ಲಿ ನಿರ್ಧಾರದ ಗಳಿಗೆ ಮುಂದೆ ಹೋದಷ್ಟೂ ಒಂದು ಪರ್ಯಾಯ ನಾಯಕತ್ವ ತೆರೆಯ ಮರೆಯಲ್ಲಿ ಮೊಳಕೆಯೊಡೆಯುತ್ತ ಇರುವುದನ್ನು ಎಷ್ಟು ಜನ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಅಂಥ ಪರ್ಯಾಯ ನಾಯಕತ್ವದ ಹೊಳಹನ್ನು ಜೆ.ಡಿ  (ಎಸ್)ನ ಎಚ್.ಡಿ.ಕುಮಾರಸ್ವಾಮಿ ಹಾಕುತ್ತ ಇರುವಂತಿದೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡದೇ ಇದ್ದರೆ ಈಗ ಯಡಿಯೂರಪ್ಪ ಅವರ ಜತೆಗೆ ಇರುವ ಬಹುತೇಕ ಶಾಸಕರು, ಸಚಿವರು ಕುಮಾರಸ್ವಾಮಿ ತೆಕ್ಕೆಗೆ ಹೋಗಿ ಬಿದ್ದುಬಿಡಬಹುದು. ಉತ್ತರ ಕರ್ನಾಟಕದಲ್ಲಿ ತಮ್ಮ ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಅದಕ್ಕಿಂತ ಒಳ್ಳೆಯ ಅವಕಾಶ ಮತ್ತೊಂದು ಇರಲಾರದು. ಅಂಥ ಅವಕಾಶಕ್ಕಾಗಿ ಅವರು ನಿಜವಾಗಿಯೂ ಕಾಯುತ್ತ ಇದ್ದರೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಸುಸೂತ್ರವಾಗಿ ಆಗಲು ಬಿಡುತ್ತಾರೆಯೇ?... ಈಗ ಕೆಲವರಿಗೆ ಚೆನ್ನಾಗಿ ಆಟ ಆಡುವ ಸಮಯ. ಇನ್ನು ಕೆಲವರಿಗೆ ಆಟ ಕೆಡಿಸುವ ಸಮಯ. ಕಾಂಗ್ರೆಸ್ಸಿನವರು, ಜೆ.ಡಿ (ಎಸ್)ನವರು ಯಾವ ಕಡೆ ಇದ್ದಾರೆ ಎಂದು ತಿಳಿಯುವುದು ಕಷ್ಟವೇನೂ ಅಲ್ಲ. ಆದರೆ, ಬಿಜೆಪಿಯವರು ಯಾವ ಕಡೆ ಇದ್ದಾರೆ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry