ಶುಕ್ರವಾರ, ನವೆಂಬರ್ 22, 2019
26 °C

ಇಬ್ಬರು ಇತಿಹಾಸಕಾರರ ಇತಿಹಾಸ ಪಾಠಗಳು

ರಾಮಚಂದ್ರ ಗುಹಾ
Published:
Updated:
ಇಬ್ಬರು ಇತಿಹಾಸಕಾರರ ಇತಿಹಾಸ ಪಾಠಗಳು

1919(ರೌಲತ್ ಸತ್ಯಾಗ್ರಹದ ವರ್ಷ), 1920 (ಕಾಂಗ್ರೆಸ್ - ಖಿಲಾಫತ್ ಮೈತ್ರಿ), 1921 (ಅಸಹಕಾರ ಚಳವಳಿ) ಅಥವಾ 1922ರ  (ಚೌರಿ ಚೌರಾದಲ್ಲಿ ಪೊಲೀಸ್ ಠಾಣೆಯನ್ನು ಸುಟ್ಟ ಸಂದರ್ಭ) ವರ್ಷಗಳಿಗೆ ಹೋಲಿಸಿದರೆ 1923 ಭಾರತದ ಇತಿಹಾಸದಲ್ಲಿ ಶಾಂತವಾಗಿದ್ದಂತಹ ವರ್ಷ. ಆದರೆ ಇದು ಭಾರತದ ಇತಿಹಾಸಕಾರರಿಗೆ ಮಾತ್ರ ಹೆಚ್ಚಿನ ಪ್ರಾಮುಖ್ಯ ಇರುವ ವರ್ಷ. ಏಕೆಂದರೆ ತಳ ಸಮುದಾಯದ ಅಧ್ಯಯನ ಚಿಂತನಧಾರೆಯ ಸಂಸ್ಥಾಪಕ ರಣಜಿತ್ ಗುಹಾ ಅವರು ಹುಟ್ಟಿದ್ದು 1923ರ ಮೇ 23ರಂದು. ಯಾವುದೇ ಹೊಸ ಚಿಂತನಾಕ್ರಮವನ್ನು ಹುಟ್ಟುಹಾಕದಿದ್ದರೂ (ಅಥವಾ ಬಹುಶಃ ಅದಕ್ಕೇ) ನಮ್ಮ ಗಮನವನ್ನು ಸೆಳೆಯುವ  ಮತ್ತೊಬ್ಬರು ಇತಿಹಾಸಕಾರರು, ಇದಕ್ಕೂ ಒಂದು ತಿಂಗಳ ಮುಂಚೆ ಏಪ್ರಿಲ್ 23ರಂದು ಈ ಪ್ರಪಂಚಕ್ಕಾಗಮಿಸಿದರು. ಅವರ ಹೆಸರು ಸರ್ವೇಪಲ್ಲಿ ಗೋಪಾಲ್.ರಣಜಿತ್ ಗುಹಾ (ಈ ಲೇಖಕನಿಗೆ ಯಾವ ಸಂಬಂಧಿಯೂ ಅಲ್ಲ) ಅವರು ಪೂರ್ವ ಬಂಗಾಳದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದರು. ಅವರು ಕೋಲ್ಕತ್ತಾದಲ್ಲಿ ಇತಿಹಾಸ  ಓದಿದ್ದರು. ನಂತರ ಕಮ್ಯುನಿಸ್ಟ್ ಆದರು. ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು 1956ರಲ್ಲಿ ಹಂಗೆರಿ ಕ್ರಾಂತಿಯ ನಂತರ ಪಕ್ಷವನ್ನು ತೊರೆದರು. 1963ರಲ್ಲಿ ವಸಾಹತುಶಾಹಿ ಭೂ ನೀತಿ  ಕುರಿತ ಪರಿಣತ ಅಧ್ಯಯನವೊಂದನ್ನು ಅವರು ಪ್ರಕಟಿಸಿದರು. ಆದರೆ, 1980ರ ದಶಕದಲ್ಲಿ ತಳ ಸಮುದಾಯ (ಸಬ್ ಆಲ್ಟರ್ನ್) ಅಧ್ಯಯನ ಸಂಪುಟಗಳ ಸಂಪಾದನೆ ಹಾಗೂ ತಮ್ಮದೇ ಉತ್ಕೃಷ್ಟ ಪುಸ್ತಕ `ದಿ ಎಲೆಮೆಂಟರಿ ಆ್ಯಸ್‌ಪೆಕ್ಟ್ಸ್ ಆಫ್ ಪೆಸಂಟ್ ಇನ್‌ಸರ್ಜೆನ್ಸಿ' (1983ರಲ್ಲಿ ಪ್ರಕಟ) ಮೂಲಕ ಹೆಚ್ಚು ಪ್ರಸಿದ್ಧರಾದರು. ನಂತರದ ದಶಕಗಳಲ್ಲಿ, ಅವರದ್ದೇ ವಿಶಿಷ್ಟ ಪಂಥದ ಸ್ಥಾನಮಾನವನ್ನು ಗಳಿಸಿಕೊಂಡರು. ಅವರ ಹೆಸರು ಹಾಗೂ ಕೃತಿಗಳನ್ನು ವಿಶ್ವದಾದ್ಯಂತ ಎಡಪಂಥೀಯ ತಜ್ಞರು ಉಲ್ಲೇಖಿಸತೊಡಗಿದರು.ಗುಹಾ ಅವರದೇ ಸಮಕಾಲೀನರಾದ ಸರ್ವೇಪಲ್ಲಿ ಗೋಪಾಲ್ ಅವರು ಅದೇ ಆರ್ಥಿಕ ವರ್ಗದವರಾಗಿದ್ದೂ ಇನ್ನೂ ಅತಿ ಹೆಚ್ಚಿನ ಸಾಮಾಜಿಕ ಸ್ಥಾನಮಾನದ ಕುಟುಂಬದಿಂದ ಬಂದಂತಹವರು. ಪ್ರಖ್ಯಾತ ತತ್ವಜ್ಞಾನಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಪುತ್ರನಾಗಿ ಅವರು ಚಿಕ್ಕಂದಿನಿಂದಲೇ ಪ್ರಸಿದ್ಧ ರಾಜಕಾರಣಿಗಳು, ಲೇಖಕರು ಹಾಗೂ ಚಿಂತಕರ  ಸಹವಾಸಕ್ಕೆ ಬಿದ್ದರು. ಅವರು ಆಕ್ಸ್‌ಫರ್ಡ್‌ನಲ್ಲಿ(ಅಲ್ಲಿ ಅವರ ತಂದೆ ಪೌರಾತ್ಯ ಧರ್ಮಗಳ ಪ್ರೊಫೆಸರ್  ಆಗಿ ಸೇವೆ ಸಲ್ಲಿಸಿದ್ದರು) ಓದಿದರು. ನಂತರ ಅಲ್ಲೇ ಪಾಠ ಹೇಳಿದರು. 1960ರ ದಶಕದಲ್ಲಿ ಅವರು ವೈಸರಾಯ್ ಹಾಗೂ ವೈಸರಾಯ್ ನೀತಿ ಕುರಿತಂತೆ  ಕೆಲವು ಉತ್ಕೃಷ್ಟ ಅಧ್ಯಯನಗಳನ್ನು ಪ್ರಕಟಿಸಿದರು. 1971ರಲ್ಲಿ ನವದೆಹಲಿಯಲ್ಲಿ ಅಧ್ಯಾಪನ ಹುದ್ದೆ ಕೈಗೊಳ್ಳಲು ಭಾರತಕ್ಕೆ ವಾಪಸಾದರು. ಮುಂದಿನ ಒಂದೂವರೆ ದಶಕದವರೆಗೆ, ಜವಾಹರಲಾಲ್ ನೆಹರೂ ಅವರ ಬದುಕಿನ ಕುರಿತಂತೆ  ಮೂರು ಸಂಪುಟಗಳನ್ನು ಅವರು ಪ್ರಕಟಿಸಿದರು. ನಂತರ, 1989ರಲ್ಲಿ ತಮ್ಮ ತಂದೆಯ ಕುರಿತಂತೆ ಅತ್ಯಂತ ಆಳಕ್ಕಿಳಿಯುವ  ಜೀವನಚರಿತ್ರೆಯನ್ನು ಪ್ರಕಟಿಸಿದರು. ಬಹುಶಃ ತಮ್ಮ ಜೀವಿತಕಾಲದಲ್ಲಿ ಅವರು ಪ್ರಕಟಿಸಿದ ಏಳು ಪುಸ್ತಕಗಳಲ್ಲಿ ಇದು ಅತ್ಯುತ್ತಮವಾದದ್ದು.ಗೋಪಾಲ್ ಅವರು ಅಧಿಕಾರ ಹಾಗೂ ನೀತಿಯ ಕುರಿತಾದ ಇತಿಹಾಸಕಾರರಾಗಿದ್ದರು. ರಾಷ್ಟ್ರಗಳನ್ನು ರೂಪಿಸಿದ ಅಥವಾ ರಾಷ್ಟ್ರಗಳ ನೇತೃತ್ವ ವಹಿಸಿದ ವೈಸರಾಯ್‌ಗಳು ಹಾಗೂ ಪ್ರಧಾನಿಗಳನ್ನು ಕುರಿತು ಅವರು ಬರೆದರು. ಆದರೆ ಗುಹಾ ಅವರು ತತ್ವಶಃ  ರೈತರು, ಆದಿವಾಸಿಗಳು, ಕಾರ್ಮಿಕರಾದಿಯಾಗಿ ಕೆಳವರ್ಗಗಳ ಜನರ ಇತಿಹಾಸಕಾರರಾಗಿದ್ದರು. ಹೀಗಿದ್ದೂ  ಈ ವಿಷಯದಲ್ಲಿ ವಿಭಿನ್ನತೆಗಳಿದ್ದರೂ ಅವರಿಬ್ಬರು ಕೆಲವೊಂದು ಪ್ರಮುಖ  ಗುಣ ವೈಶಿಷ್ಟ್ಯಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ತೀವ್ರವಾಗಿ ಶ್ರಮ ಪಡುವ ಸಂಶೋಧಕರಾಗಿದ್ದರು. ಪತ್ರಾಗಾರಗಳಲ್ಲಿ ಸುದೀರ್ಘ ಕಾಲ ಕಳೆಯುತ್ತಿದ್ದರು. ಇಬ್ಬರೂ ಇಂಗ್ಲಿಷ್ ಭಾಷೆಯನ್ನು ಅಸಾಮಾನ್ಯವಾದ ಉತ್ಕೃಷ್ಟ ಶೈಲಿಯಲ್ಲಿ ಬರೆಯುತ್ತಿದ್ದರು. ಇತಿಹಾಸವೆಂಬುದು ಸಮಾಜ ವಿಜ್ಞಾನದ ಶಾಖೆಯಾಗಿರುವಂತೆಯೇ ಸಾಹಿತ್ಯದ ಶಾಖೆಯೂ ಹೌದು ಎಂಬುದನ್ನು ಇಬ್ಬರೂ ಗುರುತಿಸಿದ್ದರು.   ಈಗ ಪುಸ್ತಕದಂಗಡಿಗಳಲ್ಲಿ ತುಂಬಿರುವ ಜನಪ್ರಿಯವಾದ ಇತಿಹಾಸ ಕಥನಗಳಂತಲ್ಲದೆ ಗುಹಾ ಹಾಗೂ ಗೋಪಾಲರ ಕೃತಿಗಳು ಗಟ್ಟಿ ವಿಶ್ಲೇಷಣೆಗಳನ್ನು ಹೊಂದಿರುವಂತಹವು ಹಾಗೂ ತುಂಬಾ ಓದಿಸಿಕೊಂಡುಹೋಗುವಂತಹವು. ವ್ಯಾಪಕ ಸಾಮಾಜಿಕ ಹಾಗೂ ಐತಿಹಾಸಿಕ ನೆಲೆಯಲ್ಲಿ, ವ್ಯಕ್ತಿಗಳು ಹಾಗೂ ಸಮುದಾಯಗಳ ಕ್ರಿಯೆಗಳ  ಚರಿತ್ರೆಯನ್ನು ಕಂಡುಕೊಳ್ಳುವಲ್ಲಿ ರಾಜಕೀಯ ಸಿದ್ಧಾಂತ, ಸಮಾಜ ವಿಜ್ಞಾನ ಹಾಗೂ ಮನೋವಿಜ್ಞಾನದ ಒಳನೋಟಗಳನ್ನೂ ಕೂಡ ಸರಿಯಾಗಿ ಬಳಸಿಕೊಳ್ಳಬಲ್ಲವರಾಗಿದ್ದವರು ಅವರು. ಇಬ್ಬರೂ ಬಹಳ ಚೆನ್ನಾಗಿ ಬರೆದದ್ದಲ್ಲದೆ,  ಗಂಭೀರ ವಿದ್ವಾಂಸರೂ ಆಗಿದ್ದರು. ಅವರು ಬರೀ ಕಥೆ ಹೇಳುವವರಷ್ಟೇ ಆಗಿರಲಿಲ್ಲ. ಅವರು ವೃತ್ತಿಪರ ಇತಿಹಾಸಕಾರರಾಗಿದ್ದರು. ಬರೀ ಅರೆ ಕಾಲಿಕ  ಪ್ರಾಚೀನಾನ್ವೇಷಕರಾಗಿರಲಿಲ್ಲ.ತೀವ್ರಗಾಮಿ ಸಿದ್ಧಾಂತಗಳು ಭಾವನಾತ್ಮಕ ಬೆಂಬಲ ಗಳಿಸಿಕೊಳ್ಳುವುದರಿಂದ ರಣಜಿತ್ ಗುಹಾ ಅವರು, ತಮ್ಮನ್ನು ಪ್ರವಾದಿ ಹಾಗೂ ದೈವಜ್ಞನೆಂದು ಘೋಷಿಸಲು ಸದಾ ಇಷ್ಟಪಡುವ   ತಮಗಿಂತ  ಚಿಕ್ಕವರಾದ ತಮಗೇ ಅರ್ಪಿಸಿಕೊಂಡ ಪುರುಷ ( ಮಹಿಳೆಯರು ಕಡಿಮೆ) ಅನುಯಾಯಿಗಳ ಪಂಥವನ್ನು ಆಕರ್ಷಿಸಿದ್ದರು. ಸರ್ವೇಪಲ್ಲಿ ಗೋಪಾಲ್ ಸುತ್ತ ಅಂತಹ ಪಂಥಗಳಿರುವುದು ಸಾಧ್ಯವಿಲ್ಲ. ಇದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ರಾಜಕೀಯ ಇತಿಹಾಸ ಹಾಗೂ ಜೀವನಚರಿತ್ರೆ ಎಂಬುದು ಈಗ  ಅಷ್ಟೊಂದು ಜನಪ್ರಿಯವಿಲ್ಲ.  ಎರಡನೆಯದು ಉದಾರವಾದವನ್ನು ಬಲ ಪಡಿಸುವ ಸಂವಾದ ಹಾಗೂ ಸಾಮರಸ್ಯದ ತತ್ವಗಳು ನಿಜಕ್ಕೂ ಯುವಜನರಿಗೆ  ಆಕರ್ಷಣೆ ಎನಿಸಿಲ್ಲ. ಅವರು ಅತಿರೇಕದ ಎಡ ಅಥವಾ ಬಲ ಸಿದ್ಧಾಂತಗಳಿಗೇ ಹೆಚ್ಚು ಆಕರ್ಷಿತರಾದವರು. ಏಕೆಂದರೆ ಇಂತಹ ನಾಯಕರುಗಳು ಹಾಗೂ ಸಿದ್ಧಾಂತವಾದಿಗಳು ಹೆಚ್ಚು ತ್ವರಿತ ಹಾಗೂ ಪರಿಪೂರ್ಣ ಫಲಿತಾಂಶಗಳನ್ನು ನೀಡುವಂತಹ ಪ್ರಮಾಣ ಮಾಡುತ್ತಾರೆ.ನಿಜ ಹೇಳಬೇಕೆಂದರೆ, ಆಧುನಿಕ ಭಾರತೀಯ ಇತಿಹಾಸದ ಯಾವುದೇ ವಿದ್ಯಾರ್ಥಿ ಈ ಇಬ್ಬರೂ ವಿದ್ವಾಂಸರಿಂದ ಕಲಿಯುವುದು ಬಹಳಷ್ಟಿದೆ. ಏಕೆಂದರೆ ಮಾನವ ಬದುಕು ಎಂಬುದು (ಬೇಕಾಬಿಟ್ಟಿ, ಯದ್ವಾತದ್ವಾ, ದಮನಕಾರಿ) ಅಧಿಕಾರವನ್ನು  ಚಲಾಯಿಸುವುದರ ಜೊತೆಗೇನೆ  ಅಧಿಕಾರದ ವಿರುದ್ಧ (ವ್ಯಕ್ತಿಗತವಾಗಿ, ಸಾಮುದಾಯಿಕವಾಗಿ, ಹಿಂಸಾತ್ಮಕವಾಗಿ, ಅಹಿಂಸಾತ್ಮಕವಾಗಿ) ಪ್ರತಿರೋಧ ತೋರುವಂತಹದ್ದೂ ಹೌದು. ಕೆಲವು ವರ್ಷಗಳ ಹಿಂದೆ `ದಿ ಸ್ಮಾಲ್ ವಾಯ್ಸ ಆಫ್ ಹಿಸ್ಟರಿ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ರಣಜಿತ್ ಗುಹಾ ಅವರ ಪ್ರಬಂಧಗಳ ಸಂಕಲನವನ್ನು ಓದಿ ಖುಷಿಪಟ್ಟಿದ್ದೆ. ಈಗ  `ಪರ್ಮನೆಂಟ್ ಬ್ಲ್ಯಾಕ್'ಗಾಗಿ  `ಇಂಪೀರಿಯಲಿಸ್ಟ್ಸ್, ನ್ಯಾಷನಲಿಸ್ಟ್ಸ್ , ಡೆಮಾಕ್ರಾಟ್ಸ್' ಹೆಸರಿನ ಪುಸ್ತಕರೂಪದಲ್ಲಿ ಸರ್ವೇಪಲ್ಲಿ ಗೋಪಾಲ್ ಅವರದೇ ಪ್ರಬಂಧಗಳ ಸಂಕಲನವನ್ನು ಯುವ ಇತಿಹಾಸಕಾರ  ಶ್ರೀನಾಥ್ ರಾಘವನ್ ಅವರು ಸಂಪಾದಿಸಿಕೊಟ್ಟಿರುವ ಪುಸ್ತಕವನ್ನು ಓದಿದೆ.ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ, ಮಾರ್ಕ್ಸ್‌ವಾದದ ಒಟ್ಟು ದರ್ಶನದ ಪ್ರಲೋಭನೆಗೆ ಎಂದೆಂದೂ ಒಳಗಾಗದೆಯೂ ಗೋಪಾಲ್ ಅವರು ಸ್ವಲ್ಪಮಟ್ಟಿಗೆ  ಎಡದತ್ತ ವಾಲಿದ್ದಾರೆ. ಬಹುಶಃ ಅವರನ್ನು ಸಮಾನತಾವಾದದ ಉದಾರವಾದಿ ಎಂದು ಕರೆಯಬಹುದೇನೊ. ತಮ್ಮದೇ ಪ್ರತಿಷ್ಠಿತ ಬೇರುಗಳ ಕುರಿತಾಗಿ ಅತಿ ಹೆಚ್ಚು  ಸ್ವಯಂ ಜಾಗೃತಿಯನ್ನು ತೋರಿಸುವಂತಹ ಪ್ರಬಂಧವೊಂದೂ ಈ ಪುಸ್ತಕದಲ್ಲಿದೆ. 1920ರ ದಶಕ ಹಾಗೂ 1930ರ ದಶಕಗಳ ಅಬ್ರಾಹ್ಮಣ ಚಳವಳಿ, ವೃತ್ತಿಯಲ್ಲಿ ಮೇಲೇರಬಯಸಿದ್ದ ಆಕಾಂಕ್ಷಿಗಳು ಹಾಗೂ ಅವಕಾಶವಾದಿಗಳ ಉತ್ಪನ್ನ ಎಂದು ಕೇಂಬ್ರಿಜ್‌ನ ಕೆಲವು ವಿದ್ವಾಂಸರು ಪ್ರತಿಪಾದಿಸಿದ್ದರು. ಆದರೆ. ಗೋಪಾಲ್ ಅವರು  ಸ್ವತಃ ಬ್ರಾಹ್ಮಣರಾಗಿದ್ದರೂ ಕೂಡ ಇದನ್ನು  ಒಪ್ಪಲಿಲ್ಲ. ಹಾಗೂ  ಮದ್ರಾಸ್ ಪ್ರೆಸಿಡೆನ್ಸಿಯ ಆರ್ಥಿಕ, ರಾಜಕೀಯ, ಆಡಳಿತ, ವಿಧಿವಿಧಾನ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ಬ್ರಾಹ್ಮಣರು ಚಲಾಯಿಸಿದ ಬೃಹತ್ ಪ್ರಾಬಲ್ಯವನ್ನು ದಾಖಲೀಕರಿಸಿದ್ದರು.ಈ ಪುಸ್ತಕದಲ್ಲಿ ಜವಾಹರ ಲಾಲ್ ನೆಹರೂ ಕುರಿತಂತೆ ಅನೇಕ ಪ್ರಬಂಧಗಳಿವೆ. ಭಾರತದಲ್ಲಿ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆ ಪೋಷಿಸುವಲ್ಲಿ ಅವರ ಕೊಡುಗೆಯನ್ನು  ಈ ಪ್ರಬಂಧಗಳು ಒತ್ತಿ ಹೇಳುತ್ತವೆ. ಗೋಪಾಲ್ ಅವರು ನೆಹರೂರನ್ನು ಮೆಚ್ಚುತ್ತಾರೆ. ಆದರೆ ಗಾಂಧಿ ದೊಡ್ಡ ಮನುಷ್ಯ ಎಂಬುದನ್ನೂ ಬಹಳ ಸ್ಪಷ್ಟವಾಗಿ ಕಾಣುತ್ತಾರೆ. ಹೀಗಾಗಿ ಅವರು ಬರೆಯುತ್ತಾರೆ:  `ಮಹಾತ್ಮಾ ಅವರು ಪಶ್ಚಿಮದ ವಿಚಾರಧಾರೆಗಳನ್ನು ಎರವಲು ಪಡೆದರೂ, ತಮ್ಮ ಎಲ್ಲಾ ವಿಚಾರ ಹಾಗೂ ಕ್ರಿಯೆಗಳನ್ನು ಭಾರತದ ಅನುಭವದಲ್ಲಿ ನಮ್ಮದೆನಿಸುವಂತೆ ಮಾಡುವ ಅನುಕೂಲ ಅವರಿಗಿತ್ತು. ಆದರೆ ನೆಹರೂ ಯಾವಾಗಲೂ ಪರಕೀಯರಾಗಿಯೇ ಉಳಿದರು. ಈ ಬಗ್ಗೆ ಅವರೂ ಹೆಚ್ಚು ಪ್ರಜ್ಞಾಪೂರ್ವಕರಾಗಿರುತ್ತಿದ್ದರು. ಗಾಂಧಿಯನ್ನು ಅವರು ಗೌರವಿಸುವ ಸಂದರ್ಭದಲ್ಲಿ ಇದು ಮುಖ್ಯ ಅಂಶವಾಗಿರುತ್ತಿತ್ತು'.ಜನರ ಗುಂಪನ್ನುದ್ದೇಶಿಸಿ ಮಾತನಾಡುವ ನೆಹರೂ ಅವರ ಪ್ರೀತಿಯ ಬಗ್ಗೆ ಮತ್ತೆ ಹೇಳುತ್ತಾ ಗೋಪಾಲ್ ಬರೆಯುವುದು ಹೀಗೆ: `ಇತರರಿಗೆ ಶಕ್ತಿ ಒದಗಿಸುವ ಗಟ್ಟಿ ವ್ಯಕ್ತಿತ್ವದ ಮಹಾತ್ಮರಂತಲ್ಲದೆ ನೆಹರೂ ಅವರು ಜನರ ಅತಿರೇಕದ ಅಭಿಮಾನದಿಂದ ಬಲ ಪಡೆದುಕೊಂಡರು.'ಗೋಪಾಲ್ ಅವರು ನೆಹರೂ ಜಾತ್ಯತೀತವಾದವನ್ನು ಹಾಗೂ ಇಂದಿನ ಭಾರತಕ್ಕೆ ಅದರ ಪ್ರಸ್ತುತತೆಯನ್ನು ಹುರುಪಿನಿಂದ ಸಮರ್ಥಿಸುತ್ತಾರೆ. ಗಾಂಧಿ ಜೊತೆ ನೆಹರೂ ಹಂಚಿಕೊಂಡ ತತ್ವ ಸಿದ್ಧಾಂತಗಳನ್ನು ಕುರಿತೂ ಹೇಳುತ್ತಾರೆ.`ಬಹುಸಂಖ್ಯಾತ ಸಮುದಾಯದ ಕೋಮುವಾದ ಭಾರತದ ಇತರ  ಅಲ್ಪಸಂಖ್ಯಾತ ಕೋಮುವಾದಕ್ಕಿಂತ ಹೆಚ್ಚು ಅಪಾಯಕಾರಿ'. ಏಕೆಂದರೆ, `ಹಿಂದೂ ಕೋಮುವಾದ ಎಂಬುದು ರಾಷ್ಟ್ರೀಯವಾದದ ಸೋಗು ಹಾಕಬಹುದು. ಹಾಗೂ ಅದು ನಿರಂಕುಶತೆಯ ಭಾರತದ ಆವೃತ್ತಿಯಾಗಿಬಿಡಬಹುದು'.ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ರದ್ದು ಮಾಡಿದ ಸ್ವಲ್ಪ ದಿನಗಳಲ್ಲೇ ಬರೆಯುತ್ತಾ ಗೋಪಾಲ್ ಅವರು ಹೀಗೆ ಹೇಳಿದ್ದರು:  ` 1975ರಿಂದ 1977ರವರೆಗಿನ ಎರಡು ವರ್ಷಗಳಲ್ಲಿನ ಬೆಳವಣಿಗೆಗಳಿಂದಾಗಿ  ಈ ರಾಷ್ಟ್ರದಲ್ಲಿ ನೆಹರೂ ಹೆಸರು ಬಹುತೇಕ  ಕಳಂಕಿತಗೊಂಡಂತಾಗಿದೆ.'  1986-87ರ ಘಟನೆಗಳಿಂದ (ಷಾ ಬಾನೊ ಪ್ರಕರಣದಲ್ಲಿ ರಾಜೀವ್ ಗಾಂಧಿ ಶರಣಾಗತಿ ಹಾಗೂ ಬೊಫೋರ್ಸ್ ಹಗರಣ) ನೆಹರೂ ಹೆಸರು ಮತ್ತಷ್ಟು ಕಳಂಕಿತಗೊಂಡಿತು.  2009-13ರಲ್ಲಿನ ಘಟನೆಗಳಂತೂ ( ಸೋನಿಯಾ ಹಾಗೂ ರಾಹುಲ್ ಗಾಂಧಿ ಅಸಾಮರ್ಥ್ಯದಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರ ಹಾಗೂ ರಾಬರ್ಟ್ ವಾದ್ರಾ ಅವರ  ಕುಟಿಲ ಭೂ ಒಪ್ಪಂದಗಳು)ಅಪಾತ್ರ ಸಂತತಿಯಿಂದಾಗಿ ನೆಹರೂ ಅವರ ಹೆಸರು  ಎಷ್ಟೊಂದು ಕಳಂಕಿತಗೊಂಡಿದೆ ಎಂದರೆ, ಅವರು ಪ್ರತಿಪಾದಿಸುತ್ತಿದ್ದ ಮೂಲ ಮೌಲ್ಯಗಳಿಗೆ ಗಟ್ಟಿ ಸಮರ್ಥನೆ ಬೇಕಾಗಿರುವಂತಾಗಿದೆ.ಈ ಪುಸ್ತಕದ ನಿಜವಾದ ಹೊಸತನ ಎಂದರೆ ` ಸುಭಾಷ್ ಬೋಸ್ ಅವರ  ವಿರೋಧಾಭಾಸ'  ಕುರಿತಂತೆ ಈ ಹಿಂದೆಂದೂ ಪ್ರಕಟವಾಗಿರದಂತಹ ಪ್ರಬಂಧ. ಬೋಸ್ ಕುರಿತಂತೆ ಇತಿಹಾಸ ಕಟುವಾಗಿದೆ, ಇನ್ನೂ ವಿವರಿಸಬೇಕೆಂದರೆ ಕ್ರೂರವಾಗಿದೆ ಎಂದೇ ಗೋಪಾಲ್ ಗುರುತಿಸುತ್ತಾರೆ. 1939ರಲ್ಲಿ, ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ  ಹೊರಗಟ್ಟಲಾಯಿತು. ನಂತರ ಕಾಂಗ್ರೆಸ್‌ನಿಂದಲೇ  ಹೊರಗಟ್ಟಲಾಯಿತು. ನಂತರ,  ಒಂದಲ್ಲ ಅಥವಾ ಮತ್ತೊಂದು ವಿಧದಲ್ಲಿ ಸ್ವಾತಂತ್ರ್ಯ ನಿಶ್ಚಿತ ಎಂದಾದಾಗ ಭಾರತಕ್ಕೆ ಜಯಶಾಲಿಯಾಗಿ ಹಿಂದಿರುಗಬೇಕಾಗಿದ್ದಾಗ  ವಿಮಾನ ಅಪಘಾತದಲ್ಲಿ ಹೊಸಕಿ ಹೋಗುತ್ತಾರೆ. ನಂತರ  ಆ ಸಂದರ್ಭಗಳಲ್ಲಿ `ಅವರ ಅಭಿಮಾನಿಗಳು ತಮ್ಮ ಸಮರ್ಥನೆಗಾಗಿ  ಆಕ್ರಮಣಶೀಲರಾಗಿರಬೇಕಾಯಿತು ಎಂಬುದು ಅರ್ಥ ಮಾಡಿಕೊಳ್ಳುವಂತಹದ್ದು' ಎಂದು ಗೋಪಾಲ್ ಬರೆಯುತ್ತಾರೆ. ನಂತರ ಅವರು ಹೇಳುತ್ತಾರೆ: `ಹೀಗಿದ್ದೂ ಬೋಸ್ ಅವರಿಗೆ ಭಾವನಾತ್ಮಕ ಸಹಾನುಭೂತಿ ಅಗತ್ಯವಿರಲಿಲ್ಲ  ಹಾಗೂ ಅವರು ವಿಮರ್ಶೆಯ ಪರಿಶೀಲನೆಯನ್ನು ಹಾದುಬಂದಿದ್ದವರು'.ಆ ನಂತರ ಗೋಪಾಲ್ ಅವರು ಮುಂದುವರಿದು ಹೇಳುತ್ತಾರೆ.  ಯೂರೋಪಿಯನ್ ಸರ್ವಾಧಿಕಾರಿಗಳ ಕುರಿತಾಗಿ ಬೋಸ್‌ಗಿದ್ದ ಮೆಚ್ಚುಗೆಗೆ ಕಾರಣ ಅವರು ದೇಶಭ್ರಷ್ಟವಾಗಿ ನೆಲೆಸಿದ್ದದ್ದು, ಇದು `ಮನಸ್ಸಿನ ಮೇಲೆ ಪರಿಣಾಮ ಬೀರುವಂತಹದ್ದು. ಹಾಗೂ ನಿರಂಕುಶ ಆಡಳಿತದ  ಶಿಸ್ತು ಹಾಗೂ ಅಧಿಕಾರಕ್ಕೆ  ಆಕರ್ಷಿತರಾಗುವಂತೆಯೂ ಮಾಡುವಂತಹದ್ದು.'  ಪರ್ದಾ ಹಾಗೂ ಅಸ್ಪೃಶ್ಯತೆಯಂತಹ  ಪಾರಂಪರಿಕ ಆಚರಣೆಗಳನ್ನು ಶೋಧಕ್ಕೆ ಒಳಪಡಿಸಿದ್ದ ಗಾಂಧಿಯಂತಲ್ಲದೆ, ಬೋಸ್ ಅವರಿಗೆ ಭಾರತದ ಗತ ವೈಭವಗಳ ಕುರಿತಾಗಿ ಉತ್ಕಟವಾದ ಅಭಿಮಾನವಿತ್ತು. ಅದು ವಾಸ್ತವವೋ, ಆರೋಪಿತವಾದ್ದ್ದದೋ ಒಟ್ಟಾರೆ  `ಪರಂಪರೆಯನ್ನು  ವಿವೇಚನೆಯಿಲ್ಲದೆ ಒಪ್ಪಿಕೊಳ್ಳುವುದರತ'್ತ ಅವರನ್ನು ನೂಕುತ್ತಿತ್ತು. ಮತ್ತೊಂದು ಹೊಸ ಅರ್ಥ ನೀಡುವ ಪ್ರಾಸಂಗಿಕವಾದ ಮಾತಿನಲ್ಲಿ , ಸೈದ್ಧಾಂತಿಕ ಕಾರಣಗಳು ಎನ್ನುವುದಕ್ಕಿಂತ ಸಂಘಟನಾತ್ಮಕ ಕಾರಣಗಳಿಗಾಗಿ ಬೋಸ್ ಅವರಿಗೆ ಪಶ್ಚಿಮ ರಾಷ್ಟ್ರ ಹೆಚ್ಚು ಪ್ರಿಯವಾದುದಾಗಿತ್ತು ಎಂಬುದರ ಬಗ್ಗೆ ಗೋಪಾಲ್ ಬೆಳಕು ಚೆಲ್ಲುತ್ತಾರೆ. ಯೂರೋಪಿನ ಬಗ್ಗೆ ಅವರಿಗೆ ಇಷ್ಟವಾಗಿದ್ದುದು ಅಥವಾ ಮೆಚ್ಚುಗೆಯಾಗಿದ್ದುದು ವೈಯಕ್ತಿಕ ಸ್ವಾತಂತ್ರ್ಯವಲ್ಲ ಅಥವಾ ಬೌದ್ಧಿಕ ಸ್ವಾತಂತ್ರ್ಯವಲ್ಲ. ಆದರೆ ಪಕ್ಷದ ಶಿಸ್ತು ಹಾಗೂ  ಸ್ವಯಂಸೇವಕರ ಪಡೆ.ಅವರು ಹುಟ್ಟಿ 90 ವರ್ಷಗಳ ನಂತರ ಹಾಗೂ ನಿಧನರಾಗಿ ಒಂದು ದಶಕದ ನಂತರವೂ, ಸರ್ವೇಪಲ್ಲಿ ಗೋಪಾಲ್ ಅವರ  ಕೃತಿಗಳು ಇತಿಹಾಸ ಅಧ್ಯಯನ ಸಂದರ್ಭದಲ್ಲಿ ಈಗಲೂ ಮುಖ್ಯ. ಅವರ ಗದ್ಯದ ಗುಣಮಟ್ಟ ಹಾಗೂ ಅವರ ಸಂಶೋಧನೆಯ ಆಳಕ್ಕಾಗಿ ಹಾಗೂ  ಅವರ ಕಾಳಜಿಗಳ ಸಮಕಾಲೀನತೆಗಾಗಿ ಅವರನ್ನು ನಾವು ಓದಲೇಬೇಕು. ಈ ಪುಸ್ತಕದ ಮಧ್ಯದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ `ಗೋರಾ' ಕಾದಂಬರಿಯ ಮುಕ್ತಾಯದ ಸಾಲುಗಳನ್ನು ಗೋಪಾಲ್ ಅವರು ಉಲ್ಲೇಖಿಸುತ್ತಾರೆ. ಈ ಕಾದಂಬರಿಯ ನಾಯಕ ಹೇಳುವ ಮಾತುಗಳಿವು: `ನಾನು ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯ. ನನ್ನೊಳಗೆ ಸಮುದಾಯಗಳ ಸಂಘರ್ಷ ಇಲ್ಲ. ಹಿಂದೂ ಮತ್ತು ಮುಸ್ಲಿಂ  ಮತ್ತು ಕ್ರೈಸ್ತ  ನಡುವಿನ ಹೋರಾಟವಿಲ್ಲ. ಅವರೆಲ್ಲಾ ನನಗೆ ಸೇರಿದವರು ಹಾಗೂ ನಾನು ಅವರೆಲ್ಲರಿಗೆ ಸೇರಿದವನು.' ನಂತರ ಇದೇ ಪುಸ್ತಕದಲ್ಲಿ ಗೋಪಾಲ್ ಅವರು ಟ್ಯಾಗೋರರ `ವಿಶಾಲವಾದ ಮಾನವೀಯತಾವಾದ ಹಾಗೂ ಎಲ್ಲಾ ವಿಭಜಿತ ಗಡಿಗಳು ಮತ್ತು ಪೂರ್ವಗ್ರಹಗಳ  ನಿರಾಕರಣೆ' ಬಗ್ಗೆ ಮಾತನಾಡುತ್ತಾರೆ.  ಇತಿಹಾಸಕಾರನ ಉಲ್ಲೇಖಗಳ ಆಯ್ಕೆಗಳೂ ಸ್ವತಃ ಇತಿಹಾಸಕಾರನ ಬಗೆಗೇ ನಮಗೆ ಹೆಚ್ಚು ಹೇಳುತ್ತವೆ. ಬಹುತ್ವ,  ಎಲ್ಲರನ್ನೂ ಒಳಗೊಳ್ಳುವ, ಪೋಷಿಸುವ ಹಾಗೂ ಕರುಣಾಮಯಿ ಭಾರತಕ್ಕೆ ಸರ್ವೇಪಲ್ಲಿ ಗೋಪಾಲ್ ಅವರದೇ ಜೀವಮಾನದ ಬದ್ಧತೆಯನ್ನೇ ಟ್ಯಾಗೋರ್‌ರ ಹೇಳಿಕೆಗಳು ಸೆರೆಹಿಡಿದು ಪ್ರತಿಧ್ವನಿಸುತ್ತವೆ.

ನಿಮ್ಮ ಅನಿಸಿಕೆತಿಳಿಸಿ: editpagefeedback@prajavani.co.in

ಪ್ರತಿಕ್ರಿಯಿಸಿ (+)