ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ...

7

ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ...

Published:
Updated:
ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ...

ಬಂಡೀಪುರದ ಪಶ್ಚಿಮ ಭಾಗದ ಕಾಡುಗಳಲ್ಲಿ ಮುಂಗಾರು ಆರ್ಭಟಿಸುತ್ತಿದ್ದಾಗ, ಪೂರ್ವಭಾಗದಲ್ಲಿ ಅದರ ಸುಳಿವೇ ಇರುವುದಿಲ್ಲ. ಇಲ್ಲಿ ಮೋಡಗಳು ಹೆಪ್ಪುಗಟ್ಟಿದರೂ, ಅವು ಮಳೆಯಾಗಿ ಭೂಮಿಗೆ ಇಳಿಯುವುದಿಲ್ಲ. ಏನಿದ್ದರೂ ಬೀಸುವ ಗಾಳಿಯಲ್ಲಿ ಛಿದ್ರಗೊಂಡ ಹನಿಗಳು ತೆಳ್ಳಗೆ ತೂರುವುದಷ್ಟೆ ಇಲ್ಲಿನ ಮಳೆ. ಆದರೆ ಮೋಡಗಳನ್ನು ಸೀಳುವ ಮಿಂಚುಗಳಿಗೆ, ಭೂಮಿಯನ್ನು ಅದುರಿಸುವ ಸಿಡಿಲುಗಳಿಗೆ ಮಾತ್ರ ಇಲ್ಲಿ ಕೊರತೆ ಇರುವುದಿಲ್ಲ.ಇದಕ್ಕೆ ನೆರೆಯ ನೀಲಗಿರಿಬೆಟ್ಟದ ಸಾಲುಗಳು, ಅಥವ ಅಲ್ಲಿಯ ಕಣಿವೆ ಕಂದರಗಳು ಕಾರಣವಿರಬಹುದು. ಒಟ್ಟಿನಲ್ಲಿ ಮುಂಗಾರು ಮೋಡಗಳನ್ನು ಬರಮಾಡಿಕೊಳ್ಳುವ ವಿನ್ಯಾಸ, ಸಭ್ಯತೆ ಈ ಭೂಭಾಗಕ್ಕಿಲ್ಲ. ಹಾಗಾಗಿ ಇಲ್ಲಿಗೆ ದೊಡ್ಡ ಮಳೆಗಳು ಬೀಳುವುದು ಮುಂಗಾರಿಗೆ ಮುನ್ನ ಅಥವ ಹಿಂಗಾರಿನಲ್ಲಿ ಮಾತ್ರ.ಆ ಬೇಸಿಗೆಯ ಮಧ್ಯಾಹ್ನ ಬಂಡೀಪುರದ ಮನೆಯಂಗಳದಲ್ಲಿ ದಟ್ಟವಾದ ಕಪ್ಪು ಮೋಡಗಳು ಮೇಳೈಸಿ ಕಾಲೂರಲು ಜಾಗ ಹುಡುಕುತ್ತಿದ್ದವು. ಸದಾ ನೆರೆದು, ಗಲಾಟೆ ಮಾಡಿ ಕರಗಿಹೋಗುವ ಆ ಮೋಡಗಳಿಂದ ನಾವು ಮಳೆಯನ್ನು ನಿರೀಕ್ಷಿಸುವುದೇ ಇಲ್ಲ. ಆದರೆ ಅಂದು ಧಾರಕಾರವಾಗಿ ಮಳೆ ಸುರಿಯತೊಡಗಿತು. ಆಕಸ್ಮಿಕವಾಗಿ ಬಂದ ಮಳೆಯಿಂದ ಪುಳಕಿತರಾಗಿ, ಮಳೆ ನಿಲ್ಲುವ ಮೊದಲೇ ಕೊಡೆ ಹಿಡಿದು ಹೊರಬಂದಾಗ ವಿಚಿತ್ರ ದೃಶ್ಯವೊಂದು ಎದುರಾಯಿತು.ತಲೆಯ ಮೇಲೆ ಪ್ಲಾಸ್ಟಿಕ್ ನೂಲಿನಂತಹ ರೋಮಗಳನ್ನು ಕಟ್ಟಿಕೊಂಡಿದ್ದ ನೂರಾರು ಸೂಜಿಗಾತ್ರದ ಸಣ್ಣ ಸಣ್ಣ ಕಡ್ಡಿಗಳು ನೆಲದಲ್ಲಿ ಗಿರಿಗಿಟ್ಟಲೆಗಳಂತೆ ತಿರುಗುತ್ತಿದ್ದವು. ಒಣಗಿ ಬಿದ್ದಿದ್ದ ಆ ಕಡ್ಡಿಗಳು ಮೈಮೇಲೆ ದೇವರು ಬಂದಂತೆ ಎದ್ದು ಕುಣಿಯುತ್ತಿದ್ದುದು ಅತ್ಯಂತ ಕುತೂಹಲಕಾರಿಯಾಗಿತ್ತು. ಹೀಗೆ ಕಡ್ಡಿಗಳು ಅವಷ್ಟಕ್ಕೆ ಅವೇ ಎದ್ದು ನಿಂತು ರಷ್ಯನ್ ಬ್ಯಾಲೆ ಕಲಾವಿದರಂತೆ ನರ್ತಿಸುವ ದೃಶ್ಯವನ್ನು ನಾವೆಂದೂ ಕಂಡಿರಲಿಲ್ಲ.ಬುಗುರಿಯಂತೆ ತಿರುಗುತ್ತಿದ್ದ ಕಡ್ಡಿಯ ಮೇಲೆ, ದಾರದಂತಿದ್ದ ಜುಟ್ಟು, ಸುತ್ತಿ ಬಿಟ್ಟ ಸ್ಪ್ರಿಂಗ್‌ನಂತೆ ತಿರುಗುತ್ತಲೇ ಇತ್ತು. ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದಾಗ, ಅದು ಎಲ್ಲೆಡೆ ಬೆಳೆದಿದ್ದ ಹುಲ್ಲಿನ ಬೀಜವೆಂದು ತಿಳಿಯಿತು.ಆ ಹುಲ್ಲು ಬೀಜಗಳು ನಮಗೆ ಅಪರಿಚಿತವಾಗಿರಲಿಲ್ಲ. ಕಾಡಿನಲ್ಲಿ ಅಲೆದಾಡುವಾಗ ಇವು ಪ್ಯಾಂಟ್, ಶೂಗಳಿಗೆಲ್ಲಾ ಅಂಟಿಕೊಳ್ಳುತ್ತಿದ್ದವು. ಅವುಗಳನ್ನು ಕಿತ್ತೊಗೆಯಲು ಯತ್ನಿಸಿದರೆ, ಅವುಗಳ ತಲೆಯ ಮೇಲಿರುತ್ತಿದ್ದ ಉದ್ದನೆಯ ಕೂದಲು ಮಾತ್ರ ಕೈಗೆ ಬಂದು ಮೊನಚಾದ ಮುಳ್ಳುಗಳು ಒಳಗೆ ಉಳಿದುಬಿಡುತ್ತಿದ್ದವು. ಮೀನಿನ ಗಾಳದಂತಿದ್ದ ಈ ಮುಳ್ಳುಗಳು ಬೂಟು, ಕಾಲುಚೀಲಗಳ ಒಳಹೊಕ್ಕು ಸಾಕಷ್ಟು ಕಿರಿಕಿರಿಯುಂಟುಮಾಡುತ್ತಿದ್ದವು. ಆನಂತರ ನಡೆಯಲು ಸಾಧ್ಯವಾಗುತ್ತಲೇ ಇರಲಿಲ್ಲ.ಈ ಸಮಸ್ಯೆಯಿಂದ ಪಾರಾಗಲು ಚಳಿಗಾಲದಲ್ಲಿ ಬೂಟುಗಳನ್ನು ಬದಿಗಿಟ್ಟು ಹವಾಯಿ ಚಪ್ಪಲಿಗಳನ್ನು ಧರಿಸಲು ಪ್ರಾರಂಭಿಸಿ ಎಷ್ಟೋ ವರ್ಷಗಳಾಗಿದ್ದವು. ಹುಲ್ಲಿನ ಬೀಜದ ಈ ವಿನ್ಯಾಸ ಬೀಜಪ್ರಸಾರಕ್ಕೆ ರೂಪುಗೊಂಡಿರುವುದೆಂದು, ಜಿಂಕೆ ಕಡವೆಗಳ ಚರ್ಮಗಳಿಗೆ ತಗುಲಿಕೊಂಡು ದೂರ ದೂರ ಪ್ರಸರಿಸಲು ಇರುವ ವ್ಯವಸ್ಥೆ ಮಾತ್ರ ಎಂದೇ ನಾವು ತಿಳಿದಿದ್ದೆವು.ಆದರೆ ಈಗ, ಇವುಗಳ ಸರ್ಕಸ್ ನೋಡುತ್ತಿದ್ದರೆ ಹೊಸ ಲೋಕವೊಂದು ತೆರೆದುಕೊಂಡ ಅನುಭವಾಯಿತು. ಬೀಜದ ನೆತ್ತಿಯಲ್ಲಿ ಪ್ಲಾಸ್ಟಿಕ್ ದಾರದಂತಿದ್ದ ಆ ರೋಮಗಳು, ಬೇಸಿಗೆಯ ಸುಡುಬಿಸಿಲಿಗೆ ಒಣಗಿ, ಸೆಟೆದುಕೊಂಡು ಹೆಣೆದ ಹಗ್ಗದಂತೆ ಸುರುಳಿ ಸುತ್ತಿಕೊಂಡಿದ್ದವು. ಮಳೆಯ ಹನಿಗಳಿಂದ ಒಮ್ಮೆಲೆ ತಂಪಾದಾಗ, ಹಿಗ್ಗಿ ಬಂಧನದಿಂದ ಬಿಡುಗಡೆಗೊಂಡಂತೆ ಹಿಂದಿನ ಆಕಾರಕ್ಕೆ ಮರಳುವ ಯತ್ನದಲ್ಲಿ ಬುಗುರಿಯಂತೆ ಸುತ್ತುತ್ತಿದ್ದವು. ಈ ಪ್ರಕ್ರಿಯೆಯಲ್ಲಿ, ಮತ್ತೊಂದು ತುದಿಯಲ್ಲಿ ಬಾಣದಂತೆ ಮೊನಚಾಗಿದ್ದ ಬೀಜ, ಮಳೆಯಲ್ಲಿ ಮೃದುವಾಗಿದ್ದ ಮಣ್ಣಿನೊಳಗೆ ನುಗ್ಗುತ್ತಿದ್ದವು.ಸತ್ತಂತೆ, ಕಸವಾಗಿ ಬಿದ್ದಿದ್ದ ಹುಲ್ಲುಕಡ್ಡಿಯೊಂದು, ಸಮಯ ಸಾಧಿಸಿ, ಕೊಳವೆಬಾವಿಯ ಯಂತ್ರದಂತೆ ಭೂಮಿಯನ್ನು ಕೊರೆದು, ಒಳಗಿಳಿದಿತ್ತು. ಮತ್ತೆ ಚಿಗುರುವ ತನ್ನ ಅದಮ್ಯ ಬಯಕೆಯನ್ನು ಈಡೇರಿಸಿಕೊಳ್ಳಲು ದೃಢ ಪ್ರಯತ್ನ ಮಾಡಿತ್ತು. ಈ ಅಪರೂಪದ ಘಟನೆಯಿಂದ ನಾವು ರೋಮಾಂಚನಗೊಳ್ಳಲು ಕಾರಣಗಳಿದ್ದವು.ಹಲವಾರು ವರ್ಷಗಳ ಕಾಲ ಮುದುಮಲೈನ ಪುಟಿಯುವ ಕಾಡಿನಲ್ಲಿ ನೆಲೆಸಿದ್ದ ನಮಗೆ ಬಂಡೀಪುರದ ಮನೆಯಂಗಳ ನೀರಸವಾಗಿ ಕಂಡಿತ್ತು. ಅಲ್ಲಿಯಂತೆ ದಟ್ಟಕಾಡುಗಳಾಗಲಿ, ಹಾಡುವ ಕಾಮಳ್ಳಿ–ಕಾಜಾಣಗಳಾಗಲಿ, ಮರದಿಂದ ಮರಕ್ಕೆ ಜಿಗಿಯುವ ಕೆಂದಳಿಲುಗಳಾಗಲಿ ಇಲ್ಲಿರಲಿಲ್ಲ. ಕಾಡಿನಿಂದ ಸೌದೆ ಕಡಿದು ಸಾಗಿಸಲು ಓಡಾಡಿದ್ದ ಎತ್ತಿನ ಗಾಡಿಯ ಗಾಲಿಯ ಗುರುತುಗಳಿನ್ನೂ ಆ ನೆಲದಲ್ಲಿ ಮಾಸಿರಲಿಲ್ಲ. ಅಸಂಖ್ಯಾತ ದನಕರುಗಳ ಓಡಾಟದಿಂದ ಆ ಮಣ್ಣಿನ ಭೂಮಿ ಕಲ್ಲಾಗಿತ್ತು.ಕತ್ತಿಗಳ ಹೊಡೆತಕ್ಕೆ ಸೊಂಟ ಮುರಿದುಕೊಂಡಿದ್ದ ಹತ್ತಾರು ಕಗ್ಗಲಿ ಮರಗಳು, ದಿಂಡಲು ಮರಗಳು ಅಲ್ಲಲ್ಲಿ ಉಳಿದಿದ್ದವು. ಕೆಲವೆಡೆ ಮುಳ್ಳುಬಳ್ಳಿಗಳು ಹರಡಿದ್ದವು. ಬಯಲು ಪ್ರದೇಶದಲ್ಲಿ ಜೀವಿಸುವ ಕೆಲವುಬಗೆಯ ಹಕ್ಕಿಗಳು ಮಾತ್ರ ಅಲ್ಲಿ ಕಂಡುಬರುತ್ತಿದ್ದವು. ಎಲ್ಲೋ ಅಪರೂಪಕೊಮ್ಮೆ ‘ಕೊಂಡ ಕುರಿ’ಯೊಂದು ಜಿಗಿದು ಓಡುತ್ತಿತ್ತು. ಈ ಎಲ್ಲಾ ಕಾರಣಗಳಿಂದ ಬಂಡೀಪುರದ ಮನೆಯಂಗಳ ನಮಗೆ ಖುಷಿ ಕೊಟ್ಟಿರಲಿಲ್ಲ.ಆದರೆ, ಪವಾಡ ತೋರಿದ ಹುಲ್ಲುಬೀಜಗಳಿಂದಾಗಿ ನಮ್ಮಲ್ಲಿ ಹೊಸ ಆಲೋಚನೆಗಳು ಮೂಡತೊಡಗಿದವು. ಕಾಡನ್ನು ಮತ್ತೆ ಕಟ್ಟುವ, ಪುನಶ್ಚೇತನಗೊಳಿಸುವ, ಅಳಿದುಹೋದ ಬದುಕನ್ನು ಮರಳಿ ಸೃಷ್ಟಿಸುವ ಚಿಂತನೆಗಳಿಗೆ ರೆಕ್ಕೆ ಮೂಡಿತ್ತು. ಸೌದೆ ಕಡಿಯುವ ಮಂದಿಗೆ, ದನಕರುಗಳಿಗೆ ನಿಷೇಧ ಹೇರಿ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆವು.ಮರುವರ್ಷದಲ್ಲಿ ಹುಲ್ಲು ದಟ್ಟವಾಗಿ ಬೆಳೆದರೂ, ನಾವು ಇಷ್ಟಪಟ್ಟು ನಿರೀಕ್ಷಿಸಿದ್ದ ಗಿಡಗಳಾವುವೂ ಮೊಳಕೆಯೊಡೆಯಲಿಲ್ಲ. ಆದರೆ ಅಲ್ಲಿದ್ದ ಬಾಡುಬಗ್ಗಲು ಬಳ್ಳಿಗಳು ಇನ್ನಷ್ಟು ವೃದ್ಧಿಸಿದವು. ಎಲ್ಲಿಂದಲೊ ಲಾರ್ಕ್ ಹಕ್ಕಿಗಳು ಆಗಮಿಸಿದವು. ಹುಲ್ಲುಗಳ ನಡುವೆ ಕುಳಿತು, ಪುಟಿದಂತೆ ಆಗಸಕ್ಕೆ ಜಿಗಿದು, ರೆಕ್ಕೆಗಳನ್ನು ಬಡಿಯುತ್ತಾ ಹೆಲಿಕಾಪ್ಟರ್‌ಗಳಂತೆ ನೆಲೆಕ್ಕಿಳಿಯುತ್ತಿದ್ದವು.ನಾವು ಅಪೇಕ್ಷಿಸಿದಂತೆ ಅಲ್ಲೇನೂ ಭಾರೀ ಪರಿವರ್ತನೆಗಳಾಗಲಿಲ್ಲ. ಅಲ್ಲಿದ್ದ ಕಗ್ಗಲಿ, ದಿಂಡಿಲು, ಕಕ್ಕೆ ಮರಗಳು ಚಿಗುರೊಡೆದಂತೆ ಕಂಡರೂ ಒಟ್ಟಾರೆ ಜೈವಿಕ ವೈವಿಧ್ಯತೆಯ ದೃಷ್ಟಿಯಲ್ಲಿ ನಿರಾಶಾದಾಯಕವಾಗಿತ್ತು. ಇದರಿಂದ ಹೊಸ ಯೋಜನೆಯನ್ನು ರೂಪಿಸಿದೆವು. ಅಲ್ಲಿ ಜೀವಿಸಿದ್ದಿರಬಹುದಾದ ಗಿಡಮರಗಳ ಪಟ್ಟಿ ಮಾಡಿಕೊಂಡು, ಜೀವಪರಿಸರವನ್ನು ಮರು ಹುಟ್ಟುಹಾಕಲು ನಿಶ್ಚಯಿಸಿದೆವು.ದೂರದೂರುಗಳಲ್ಲಿ ಅಲೆಯುತ್ತಾ ವಿವಿಧ ಜಾತಿಯ ಸಸಿಗಳಿಗಾಗಿ ಹುಡುಕಾಡಿದೆವು. ಕೆಂದಳಿಲು, ಜಿಂಕೆ, ಕಡವೆ, ಹಂದಿ, ಅಲ್ಲದೆ ಹಕ್ಕಿಗಳನ್ನು ಆಕರ್ಷಿಸಲೆಂದು, ನಾನಾ ಬಗೆಯ ಆಲದ ಜಾತಿಯ ಗಿಡಗಳನ್ನು ಹುಡುಕಿ ತಂದೆವು. ಆನೆಗಳಿಗೆ ಆಲದ ಗಿಡಗಳ ಸುಳಿವು ಸಿಗಬಾರದೆಂದು ದಟ್ಟವಾದ ಮುಳ್ಳಿನ ಪೊದೆಗಳ ಮರೆಯಲ್ಲಿ ನೆಟ್ಟು ಪೋಷಿಸಲಾರಂಭಿಸಿದೆವು. ಸ್ವಲ್ಪ ಸಮಯದ ಬಳಿಕ ನಂದಿ ಮರವಿಲ್ಲದಿದ್ದರೆ ಹೇಗೆಂದು ಮುದುಮಲೈ ಕಾಡಿನಿಂದ ನಂದಿ ಸಸಿ ಹುಡುಕಿ ತಂದೆವು. ಮತ್ತಿ ಮರಗಳಿಲ್ಲದಿದ್ದರೆ ಸೊಗಸಿಲ್ಲವೆಂದು ಅವುಗಳ ಸಸಿಗಳನ್ನು ಹುಡುಕುತ್ತಾ ಪಕ್ಕದ ಕಾಡಿಗೆ ತೆರೆಳಿದೆವು.ಗುಡ್ಡದ ಇಳಿಜಾರಿನಲ್ಲಿ ಅನೇಕ ಮತ್ತಿ ಮರದ ಸಸಿಗಳಿದ್ದವು. ಕೇವಲ ಎರಡು ಅಂಗುಲ ಎತ್ತರವಿದ್ದ ಆ ಸಸಿಗಳನ್ನು ಕೀಳಲು ಯತ್ನಿಸಿದಾಗ ಬೇರು ಮಣ್ಣಿನಲ್ಲೇ ಉಳಿದು ಗಿಡ ಮಾತ್ರ ತುಂಡಾಗಿ ಕೈಗೆ ಬರುತ್ತಿತ್ತು. ಹೊಂಡ ತೋಡಿ ತಾಯಿ ಬೇರಿಗೆ ಹುಡುಕಾಡಿದಾಗ ಅಚ್ಚರಿಯಾಯಿತು. ಎರಡು ಅಂಗುಲ ಎತ್ತರವಿದ್ದ ಆ ಸಸಿಗಳ ಬೇರು ಎರಡು ಅಡಿ ಆಳಕ್ಕೆ ಇಳಿದಿತ್ತು!ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಮೊಳಕೆಯೊಡೆದಿದ್ದ ಆ ಸಸಿಗಳು ಎತ್ತರಕ್ಕೆ ಬೆಳೆಯಲು ಪ್ರಯತ್ನಿಸಿರಲಿಲ್ಲ. ಪ್ರತಿಯಾಗಿ ತಮ್ಮ ಗಳಿಕೆಯನ್ನೆಲ್ಲ ಜಲವನ್ನು ಹುಡುಕಲು ವ್ಯಯಿಸಿದ್ದವು. ಆ ಪ್ರಯತ್ನದಲ್ಲಿ ಬೇರುಗಳು ನೆಲದಾಳಕ್ಕೆ ಇಳಿದಿದ್ದವು. ಹಾಗಾಗಿ ಎಷ್ಟೋ ವರ್ಷದ ಸಸಿಗಳು ಕೂಡ ಕೆಲವೇ ಇಂಚುಗಳಷ್ಟು ಎತ್ತರವಿದ್ದವು. ಮುಂದೆ ಎಂದಾದರೂ ಬರಬಹುದಾದ ಒಳ್ಳೆಯ ದಿನಗಳಿಗಾಗಿ ಕಾಯುತ್ತಾ ತಮ್ಮ ಬೇರು ಭದ್ರ ಪಡಿಸಿಕೊಳ್ಳುತ್ತಿದ್ದವು. ಪ್ರತಿಕೂಲದ ವಾತಾವರಣದಲ್ಲಿ ಮತ್ತಿ ಗಿಡಗಳು ಅಳವಡಿಸಿಕೊಂಡ ಬದುಕಿನ ಕ್ರಿಯೆ ನಮಗೆ ತಿಳಿದದ್ದು ಆಗಷ್ಟೆ.ಸಂಗ್ರಹಿಸಿ ತಂದ ವಿವಿಧ ಜಾತಿಯ ಸಸಿಗಳಿಗೆ, ಅವುಗಳ ಬೇಡಿಕೆಗಳಿಗನುಸಾರವಾಗಿ ನೆಲೆಗಳನ್ನು ಆಯ್ಕೆ ಮಾಡಿ, ಪೋಷಿಸಲು ಆರಂಭಿಸಿದಾಗ ನಮಗೇನೊ ಒಂದು ರೀತಿಯ ಸಮಾಧಾನ. ಅವುಗಳೆಲ್ಲ ಚಿಗುರೊಡೆದು, ಕಾಜಾಣ–ಕಾಮಳ್ಳಿಗಳು ಅಲ್ಲಿ ನೆರೆದು, ಹಾಡುವ ಸಮಯ ದೂರವಿಲ್ಲವೆಂದು ಭಾವಿಸಿದೆವು. ಇದರ ನಡುವೆ ಅಲ್ಲಿ ಮೊದಲೇ ಬೇರು ಬಿಟ್ಟಿದ್ದ ಕಗ್ಗಲಿ ಮರಗಳು ನಿರೀಕ್ಷೆಗೆ ಮೀರಿದ ಬೆಳವಣಿಗೆ ತೋರಿದ್ದವು.ಮರುವರ್ಷದಲ್ಲಿ ಹುಲ್ಲು ಇನ್ನಷ್ಟು ದಟ್ಟವಾಯಿತು. ನಿರಂತರವಾಗಿ ಏಟು ತಿಂದು, ಭೂಮಿಗಂಟಿದ್ದ ದಿಂಡಿಲು ಗಿಡಗಳು ತಮ್ಮ ಬೇರುಗಳಿಂದಲೇ ಸೊಂಪಾಗಿ ಚಿಗುರೊಡೆದು ತಲೆ ಎತ್ತತೊಡಗಿದವು. ಆದರೆ, ಅಲ್ಲಿನ ಮೂಲ ನಿವಾಸಿಗಳಾದ ಬಾಡು ಬಗ್ಗಲು ಬಳ್ಳಿಗಳು ಇನ್ನಷ್ಟು ಸಮೃದ್ಧವಾಗಿ ವಿಸ್ತರಿಸಿದವು. ತಿರುಗಾಡುವಾಗ ಎಚ್ಚರತಪ್ಪಿದರೆ  ಕುತ್ತಿಗೆ ಪಟ್ಟಿ ಹಿಡಿದು ಮಾತಿಗೆ ನಿಲ್ಲಿಸುತ್ತಿದ್ದವು.ಬೇರೆ ಗಿಡಗಳಿಗೆ ಅವಕಾಶ ನೀಡದಂತೆ ಬಯಲನ್ನೆಲ್ಲಾ ಆಕ್ರಮಿಸುತ್ತಿದ್ದ ಅವುಗಳ ಸ್ವಭಾವ, ಅಹಂಕಾರದ ನಡವಳಿಕೆ ನಮಗೆ ಹಿಡಿಸಲಿಲ್ಲ. ಸಿಟ್ಟಾಗಿ ಐದಾರು ದೊಡ್ಡ ಪೊದೆಗಳನ್ನು ಬೇರು ಸಮೇತ ಕಿತ್ತೆಸೆದೆವು. ಆದರೆ ಕೆಲವೇ ದಿನಗಳಲ್ಲಿ ರೊಚ್ಚಿಗೆದ್ದಂತೆ ಅದೇ ಸ್ಥಳದಿಂದ ಇನ್ನಷ್ಟು ಬಾಡು ಬಗ್ಗಲು ಸಸಿಗಳು ತಲೆ ಎತ್ತಿದವು. ಇವುಗಳನ್ನು ಸದೆಬಡಿಯಲು ಒಂದೆರಡು ಬಳ್ಳಿಗಳಿಗೆ ಬೆಂಕಿ ಹಾಕಿ ಫಲಿತಾಂಶಕ್ಕಾಗಿ ಕಾದು ಕುಳಿತೆವು.ಬೆಂಕಿಯಲ್ಲಿ ಬೂದಿಯಾದ ಬಾಡು ಬಗ್ಗಲು ಮುಳ್ಳಿನ ಸ್ಥಳಗಳನ್ನು ಅಮೆರಿಕಾದಿಂದ ಆಗಮಿಸಿದ ಪಾರ್ಥೇನಿಯಂ ಗಿಡಗಳು ಆಕ್ರಮಿಸಿಕೊಂಡವು, ಅಷ್ಟೆ.

ಆದರೆ ಮುಂದಿನ ವರ್ಷ ಕಡವೆ ಜಿಂಕೆಗಳು ಮನೆಗೆ ಬರಲಾರಂಭಿಸಿದಾಗ ಬಾಡಬಗ್ಗಲು ಬಳ್ಳಿಗಳ ಪೌರುಷ ಕುಗ್ಗಿತು. ಮೂಡುತ್ತಿದ್ದ ಚಿಗುರುಗಳಿಗೆ ಅವು ಬಾಯಾಡಿಸಲು ಆರಂಭಿಸಿದಾಗ ಮುಳ್ಳು ಬಳ್ಳಿಗಳು ಹರಡಿ ಹಬ್ಬುವ ಪರಿಪಾಠಕ್ಕೆ ಅಂಕುಶ ಬಿದ್ದಿತು.ಅವು ದುರ್ಬಲಗೊಳ್ಳುತ್ತಿದ್ದಂತೆಯೇ ಬಳ್ಳಿಗಳ ತಳಭಾಗದಿಂದ ನೆಲ್ಲಿ, ಜಗಳಗಂಟಿ ಮರದ ಸಸಿಗಳು, ಎಲಚಿ, ಸೀಗೆ ಬಳ್ಳಿಗಳೆಲ್ಲ ತಲೆ ಎತ್ತಿದವು. ಬಾಡು ಬಗ್ಗಲು ಮುಳ್ಳಿನ ಬಳ್ಳಿಗಳು ಅವುಗಳಿಗೆ ಸಹಜ ಬೇಲಿಯಂತಾದವು. ಈ ಬೇಲಿಯನ್ನು ಭೇದಿಸಲು ಜಿಂಕೆ ಕಡವೆಗಳಿಗೆ ಸಾಧ್ಯವಾಗಲಿಲ್ಲ. ಜಗಳಗಂಟಿಗಳು ಮರವಾಗುತ್ತಾ ಮುಗಿಲಿನತ್ತ ಮುಖಮಾಡಿದವು. ಎಲಚಿ, ಸೀಗೆ ಮುಳ್ಳಿನ ಬಳ್ಳಿಗಳು ಬೆಳೆದು ಅಕ್ಕಪಕ್ಕದ ಮರಗಿಡಗಳ ಮೇಲೆ ವಿಹರಿಸಿದವು.ಆ ಬಾಡು ಬಗ್ಗಲು ಬಳ್ಳಿ ಮನುಷ್ಯರನ್ನು ಗಾಯಗೊಳಿಸಲು ಮುಳ್ಳನ್ನು ತೊಟ್ಟಿರಲಿಲ್ಲ. ಜಿಂಕೆ, ಕಡವೆಗಳ ನಿರಂತರ ದಾಳಿಯಿಂದ ತಪ್ಪಿಸಿಕೊಂಡು ಬದುಕುಳಿಯಲು ಎಲೆಗಳನ್ನು ಮುಳ್ಳಿನ ರೂಪದಲ್ಲಿ ಧರಿಸಿದ್ದವು. ಮುಂದಿನ ದಿನಗಳಲ್ಲಿ, ನೆಲವನ್ನೆಲ್ಲಾ ಆವರಿಸಿದ್ದ ಹುಲ್ಲು ಉದುರಿದ್ದ ಎಲೆಗಳು ಕೂಡಿ, ಓಡಿ ಹೋಗುತ್ತಿದ್ದ ಮಳೆಯ ನೀರಿಗೆ ತಡೆಯೊಡ್ಡಿದ್ದವು. ಭೂಮಿ ಮೃದುವಾಗುತ್ತಾ ಸಾಗಿತ್ತು. ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಸ್ವಭಾವವನ್ನು ಮೈಗೂಡಿಸಿಕೊಂಡಿತ್ತು.ಈ ಎಲ್ಲಾ ಬದಲಾವಣೆಗಳು, ಅಲ್ಲಿದ್ದ ಕಗ್ಗಲಿ ಮರಗಳಿಗೆ ಒಪ್ಪಿಗೆಯಾಗಲಿಲ್ಲ. ಗಟ್ಟಿ ನೆಲದಲ್ಲಿ ರಾಜ್ಯಭಾರ ನಡೆಸುವ ಅವು, ಮುನಿಸಿಕೊಂಡು ಬೆಳೆಯುವುದನ್ನೇ ನಿಲ್ಲಿಸಿಬಿಟ್ಟವು. ಗಿಡ ಮರಗಳು ಹರಡುತ್ತಾ, ತೆರೆದ ಬಯಲುಗಳು ಕಣ್ಮರೆಯಾಗುತ್ತಿದ್ದಂತೆ, ತನ್ನೆರಡು ಮರಿಗಳೊಂದಿಗೆ ಬರುತ್ತಿದ್ದ ‘ಕೊಂಡ ಕುರಿ’ ಮನೆಗೆ ಬರುವುದನ್ನು ನಿಲ್ಲಿಸಿತು. ಕಾಡು ದಟ್ಟವಾಗುತ್ತಾ ಸಾಗಿದ್ದು ಅದಕ್ಕೂ ಇಷ್ಟವಾಗಲಿಲ್ಲ. ಜೊತೆಗೆ ಅಲ್ಲಿ ನೆಲೆಸಿದ್ದ ಒಂದು ಜಾತಿಯ ಬುಲ್‌ಬುಲ್ ಹಕ್ಕಿಗಳು, ಕೌಜುಗಗಳು, ಟಿಟ್ಟಿಭಗಳು ತೆರೆದ ಬಯಲುಗಳತ್ತ ಹಾರಿದವು.ಅವುಗಳಿಗೆಲ್ಲ ಕಾಡು ದಟ್ಟವಾಗಿತ್ತು. ಆದರೆ, ನಾವು ತಂದು ಹಾಕಿ ಬೆಳೆಸಿದ್ದ, ಹೆಚ್ಚಿನ ಮಳೆ ಬೀಳುವ ಜಾಗದಲ್ಲಿ ಮಾತ್ರ ಬೆಳೆಯುವ, ನಂದಿ ಗಿಡ ಮಾತ್ರ ನಮ್ಮ ಕಾಡನ್ನು ಒಪ್ಪಿಕೊಳ್ಳಲೇ ಇಲ್ಲ. ಹತ್ತು ಅಡಿ ಎತ್ತರಕ್ಕೆ ಬೆಳೆದಿದ್ದ ಅದು, ಒಂದು ಬೇಸಿಗೆಯಲ್ಲಿ, ಇದು ತನ್ನ ಊರಲ್ಲ, ತಾನು ಬಾಳುವ ವಾತಾವರಣವೇ ಇದಲ್ಲವೆಂದು ಇದ್ದಕ್ಕಿದ್ದಂತೆ ಜ್ಞಾಪಕವಾದಂತೆ ಒಣಗಿ, ಸತ್ತೇ ಹೋಯಿತು. ನಾವು ಅದಕ್ಕೆ ಬೇಕಾದಷ್ಟು ನೀರು ಕೊಡುತ್ತಿದ್ದರೂ ತನ್ನದಲ್ಲದ ಮಣ್ಣಿನಲ್ಲಿ ಇಲ್ಲದ ಕಾರಣಗಳನ್ನು ಕೊಟ್ಟು ಜೀವಿಸಲು ನಿರಾಕರಿಸಿತು.ಕೆಂಪಿರುವೆಗಳ ಮನೆಯ ಮೇಲೆ ಕಾಡುಮಲ್ಲಿಗೆಯ ಸಿಂಗಾರ.ಆದರೆ, ನಾವು ಆವರೆಗೆ ಅಲ್ಲಿ ನೋಡಿರದ ವಿವಿಧ ಪ್ರಬೇಧದ ಇರುವೆ, ಚಿಟ್ಟೆ, ಪತಂಗ, ಜೇಡಗಳೆಲ್ಲ ಕಾಣತೊಡಗಿದವು. ಜೇನು, ಕಣಜಗಳು ಗೂಡು ಕಟ್ಟತೊಡಗಿದವು. ಕಾಡು ಕೋಳಿ, ವ್ಹೈಟ್ ಐ, ಫ್ಲೈ ಕ್ಯಾಚರ್‌ಗಳು, ಸ್ಕಿಮಿಟರ್ ಬ್ಯಾಬ್ಲರ್‌ಗಳು, ಮರಕುಟುಕಗಳೆಲ್ಲ ಹೊಸ ಅತಿಥಿಗಳಾಗಿ ಆಗಮಿಸಿದವು. ಆನೆ, ಕಾಡು ಹಂದಿ, ಕಾಡೆಮ್ಮೆ, ಜಿಂಕೆ, ಕಡವೆಗಳೆಲ್ಲ ಅಲ್ಲಿಗೆ ಬಂದು ಹೋಗಲಾರಂಭಿಸಿದವು. ಮನೆಯ ಹಿಂಬದಿಯಲ್ಲಿ ಕಾಡುಹಂದಿಗಳು, ಸೊಪ್ಪು ಕಡ್ಡಿಗಳನ್ನು ಕತ್ತರಿಸಿ ಗುಡ್ಡೆ ಹಾಕಿ, ಗೂಡು ಕಟ್ಟಿ ಮರಿಮಾಡಿದವು.ಪ್ರಾಣಿಗಳ ಸಂಖ್ಯೆ ಹೆಚ್ಚಾದದ್ದು ಕಾಡಿನ ಮೇಲೆ ದುಷ್ಪರಿಣಾಮ ಬೀರಿದಂತೆ ಕಂಡಿತು. ಗಿಡ ಬಳ್ಳಿಗಳ ಚಿಗುರುಗಳೆಲ್ಲ ಜಿಂಕೆ ಕಡವೆಗಳ ಪಾಲಾದವು. ಹುಲ್ಲಿಗಾಗಿ ಓಡಾಡುವಾಗ ಆನೆಗಳು ಲೆಕ್ಕವಿಲ್ಲದಷ್ಟು ಮರಗಳನ್ನು ಮುರಿದು ಬಿಸಾಡಿದವು. ಅಷ್ಟೇ ಅಲ್ಲದೆ ನಾವು ನೆಟ್ಟಿದ್ದ ಸಸಿಗಳನ್ನೆಲ್ಲ ಹುಡುಕಿ ಕಿತ್ತೆಸೆದವು. ಮರಗಳ ಮೇಲೆ ದಟ್ಟವಾಗಿ ಆವರಿಸಿದ್ದ ಸೀಗೆಮುಳ್ಳುಗಳನ್ನು ಎಳೆದು ತಿಂದು ಹಾಕಿದವು. ಸೀಗೆ ಬಳ್ಳಿಗಳಿಂದ ಆವರಿಸಿದ್ದ ಕತ್ತಲೆ ತೆರವಾಗಿ ಬೆಳಕು ಹರಿದಾಗ ನೆಲಮಟ್ಟದಲ್ಲಿದ್ದ ಕೆಲವು ಗಿಡಗಳು ಬೆಳೆದು ನಿಂತವು. ಇದರ ನಡುವೆ ಭೂಮಿಯೊಳಗಿಂದ ಕಾಡುಮಲ್ಲಿಗೆ ಬಳ್ಳಿಗಳು ಪ್ರತ್ಯಕ್ಷಗೊಂಡವು.ಗಿಡಗಂಟೆಗಳಿಗೆ ಸುರುಳಿ ಸುತ್ತಿ ಮೇಲೇರಿ ಇಳಿಬಿದ್ದು ಹೂವಿನಗುಚ್ಛ ಹಿಡಿದವು. ಈ ಹೂವುಗಳು ಚೆಲ್ಲಿದ ಸುಗಂಧಕ್ಕೆ ಬಗೆಬಗೆಯ ಕೀಟಗಳು ಮುತ್ತಿದವು. ಪರಾಗಸ್ಪರ್ಶಕ್ರಿಯೆ ನೆರವೇರಿದ ಬಳಿಕ ಹೂವುಗಳು ಜಾರಿಬಿದ್ದು ನೆಲದಲ್ಲಿ ಹರಡಿದವು. ಹರಡಿದ್ದ ಹೂವುಗಳನ್ನು ದೊಡ್ಡ ಗಾತ್ರದ ಇರುವೆಗಳು ಹೆಗಲ ಮೇಲೆ ಹೊತ್ತೊಯ್ದು ತಮ್ಮ ಗೂಡಿನ ಸುತ್ತ ವೃತ್ತಾಕಾರದಲ್ಲಿ ಜೋಡಿಸಿಕೊಂಡವು. ಪೂಜೆ ಪುನಸ್ಕಾರಗಳ ಬಂಧನವಿಲ್ಲದ ಇರುವೆಗಳು, ಮಲ್ಲಿಗೆ ಹೂವುಗಳಿಂದ ಮನೆ ಸಿಂಗರಿಸಿಕೊಂಡ ಉದ್ದೇಶದ ವೈಜ್ಞಾನಿಕ ವಿಶ್ಲೇಷಣೆ ಏನೆಂದು ನಮಗೆ ತಿಳಿಯಲಿಲ್ಲ.ಇದಾದ ಮೂರ್ನಾಲ್ಕು ವರ್ಷಗಳಲ್ಲಿ ಎಲ್ಲೆಡೆ ಬರ ಆವರಿಸಿತು. ಆ ಬರ ಮುಂದಿನ ವರ್ಷಕ್ಕೂ ವಿಸ್ತರಿಸಿದಾಗ ಭೂಮಿ ಒಣಗಿತು. ಹಸುರು ಮಾಯವಾಯಿತು. ಮರಗಿಡಗಳೆಲ್ಲ ಬೆತ್ತಲಾಗಿ ನಿಂತವು. ಜೀವಸಂಚಾರ ಸ್ತಬ್ಧಗೊಂಡಂತಾಯಿತು. ಹಕ್ಕಿಗಳು ಗೂಡು ಕಟ್ಟುವುದನ್ನು ಮರೆತವು. ಹಾಡುವುದನ್ನು ಕೂಡ ನಿಲ್ಲಿಸಿದವು. ಜೀವಿ ಜೀವಿಗಳ ನಡುವೆ ಸಂವಾದವೆ ಇಲ್ಲವಾದಂತೆ ಕಾಡು ಮೌನವಾಯಿತು.ಆದರೆ, ನಡುರಾತ್ರಿಯಲ್ಲಿ ನಾವೆಂದೂ ಕೇಳಿರದ ವಿಭಿನ್ನವಾದ ಸದ್ದು ಮೂಡಿಬರುತ್ತಿತ್ತು. ಅದು ದೂರದಲ್ಲೆಲ್ಲೊ ಮರಗಳನ್ನು ತುಂಡರಿಸುವ ಮಿಲ್‌ಗಳು ಕೆಲಸ ಮಾಡುವ ಸದ್ದಿನಂತೆ ಕೇಳುತ್ತಿತ್ತು. ಟಾರ್ಚ್ ಹಿಡಿದು ಹೊರಬಂದಾಗ ಸದ್ದು ಇನ್ನಷ್ಟು ಸ್ಪಷ್ಟವಾಗುತ್ತಾ ಸಾಗಿತ್ತು. ಆ ಸದ್ದು ಮನೆಯಂಗಳದಲ್ಲೇ ಮೂಡುತ್ತಿದ್ದಂತೆ ಅನಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮಂಜು ಕವಿದಂತೆ ಎಲ್ಲೆಡೆ ತೆಳ್ಳನೆಯ ದೂಳು ಆವರಿಸಿದ್ದು ಗೋಚರಿಸಿತು. ಮರಗಿಡಗಳ ತೊಗಟೆಯಿಂದ ನೀರು ಜಿನುಗಿದಂತೆ ಆ ದೂಳು ಸುರಿಯುತ್ತಿತ್ತು.ಮರಗಳನ್ನು ಕೊರೆಯುವ ಬೋರರ್ ಕೀಟಗಳು ಬರದೊಂದಿಗೆ ಅವತರಿಸಿ ಕಾಡನ್ನೆಲ್ಲಾ ತುಂಬಿಕೊಂಡಿದ್ದವು. ಮರಗಳ ಕಾಂಡಗಳ ಒಳಹೊಕ್ಕು ಸುರಂಗಗಳನ್ನು ಕೊರೆಯುತ್ತಿದ್ದವು. ಇಡೀ ಭೂಮಿ ಅವು ಕೊರೆದಿದ್ದ ಮರಗಿಡಗಳ ತಿರುಳಿನ ದೂಳಿನಿಂದ ಬಣ್ಣ ಬದಲಿಸಿತ್ತು. ಬರ ಇನ್ನೊಂದು ವರ್ಷ ಮುಂದುವರೆದಾಗ ಹೆಚ್ಚಿನ ಮರಗಿಡಗಳೆಲ್ಲ ಸತ್ತು ಸ್ಮಾರಕಗಳಂತಾದವು. ಸಾಮಾನ್ಯ ಸನ್ನಿವೇಶದಲ್ಲಿ ಬೋರರ್ ಕೀಟಗಳ ಆಕ್ರಮಣವನ್ನು ಎದುರಿಸಲು ಗಿಡಮರಗಳು ಬಗೆಬಗೆಯ ರಾಸಾಯನಿಕ ದ್ರವ್ಯಗಳನ್ನು ಸ್ರವಿಸಿ ಹೋರಾಟ ನಡೆಸುತ್ತವೆ. ಆದರೆ ಬರದಲ್ಲಿ ದುರ್ಬಲಗೊಂಡಿದ್ದ ಅವುಗಳಿಗೆ ಪ್ರತಿರೋಧ ತಂತ್ರಗಳನ್ನು ಬಳಸಲು ತ್ರಾಣವೇ ಇರಲಿಲ್ಲ.ನಾವು ಹತ್ತಾರು ವರ್ಷಗಳ ಪರಿಶ್ರಮದಿಂದ ರೂಪುಕೊಟ್ಟು, ಭಾವನಾತ್ಮಕ ಸಂಬಂಧವಿರಿಸಿಕೊಂಡಿದ್ದ ಕಾಡು ಮತ್ತೆ ಚಿಗುರಲಾರದೆಂದು ತೀರ್ಮಾನಿಸಿದೆವು. ಪಕ್ಕದ ಬಂಡೀಪುರ ಕಾಡಿನಲ್ಲೂ ದೊಡ್ಡ ದೊಡ್ಡ ಮರಗಳು ಬೋರರ್ ದಾಳಿಗೆ ಶರಣಾಗಿದ್ದವು. ಮೇವಿಗಾಗಿ, ನೀರಿಗಾಗಿ ಅಲೆದಾಡುತ್ತಿದ್ದ ಪ್ರಾಣಿಗಳೆಲ್ಲ ದುರ್ಬಲವಾಗಿದ್ದವು. ಆಗ ಪ್ರಾಬಲ್ಯಕ್ಕೆ ಬಂದ ಹಲವಾರು ಬ್ಯಾಕ್ಟೀರಿಯಗಳಿಗೆ ಎಷ್ಟೋ ಪ್ರಾಣಿಗಳು ಬಲಿಯಾದವು. ಇಡೀ ಸನ್ನಿವೇಶ ಕರುಣಾಜಕನಕವಾಗಿತ್ತು. ಬರ ಅತ್ಯಂತ ವಿನಾಶಕಾರಿಯಾಗಿ ಕಂಡಿತ್ತು. ಇದಾದ ಮರುವರ್ಷ ಧಾರಾಕಾರವಾಗಿ ಮಳೆ ಸುರಿಯಿತು. ಹಳ್ಳಕೊಳ್ಳಗಳೆಲ್ಲ ತುಂಬಿದವು.

.

ಆಗೊಮ್ಮೆ, ಕಪ್ಪು ಮೋಡಗಳು ಭೂಮಿಯನ್ನು ನುಂಗಿಬಿಡುವಂತೆ ಹೆಪ್ಪುಗಟ್ಟಿದ್ದವು. ಮಳೆ ಆರಂಭವಾಯಿತು. ಗುಡುಗು ಸಿಡಿಲಿನೊಂದಿಗೆ ಸುರಿಯುತ್ತಿದ್ದ ಆ ಧಾರಾಕಾರ ಮಳೆಯ ಹನಿಗಳೊಂದಿಗೆ ಆಕಾಶದಿಂದ ಮುತ್ತು ಚೆಲ್ಲಿದಂತೆ ಪುಟ್ಟ ಪುಟ್ಟ ನಕ್ಷತ್ರಗಳು ಭೂಮಿಗೆ ಬಿದ್ದು ಚಿಮ್ಮುತ್ತಿದ್ದವು! ಸಾವಿರ ಸಾವಿರ ಸಂಖ್ಯೆಯಲ್ಲಿ ನೆಲಕ್ಕಿಳಿದ ಆ ನಕ್ಷತ್ರಗಳು ಹರಿಯುವ ನೀರಿಗೆ ಧುಮುಕಿ ತೇಲುತ್ತಾ ಈಜುತ್ತಾ ನಾನಾ ದಿಕ್ಕಿಗೆ ಪ್ರಯಾಣಿಸಿದವು. ನಾವು ಬದುಕಿನಲ್ಲಿ ಅಂತಹ ನಕ್ಷತ್ರದ  ಮಳೆಯನ್ನೇ ಕಂಡಿರಲಿಲ್ಲ... ಮತ್ತೆ ಇಂದಿಗೂ ಕಂಡಿಲ್ಲ.ಶಾಲಾದಿನಗಳಲ್ಲಿ ಮನೆಯ ತೋಟದಲ್ಲಿದ್ದ ನೀರಿನ ತೊಟ್ಟಿಯಲ್ಲಿ, ಒಮ್ಮಿಂದೊಮ್ಮೆಗೆ ಪ್ರತ್ಯಕ್ಷಗೊಂಡು, ಚಕಿತಗೊಳಿಸುತ್ತಿದ್ದ ಆ ಹುಳುಗಳು ಎಲ್ಲಿಂದ ಬಂದವೆಂಬ ಪ್ರಶ್ನೆಗೆ ಇಲ್ಲಿ ಉತ್ತರವಿತ್ತು. ಮಳೆಗಾಲದಲ್ಲಿ ತೊಟ್ಟಿಯನ್ನು ಶುಭ್ರಗೊಳಿಸಿದ ಮರುದಿನವೇ ಆ ನೀರಿನೊಳಗೆ ಮುಳುಗಿ ಈಜುತ್ತಿದ್ದ ಕಡು ನೀಲಿ ಬಣ್ಣದ ಈ ಹುಳುಗಳನ್ನು ಹಿಡಿದು ಹೊರಹಾಕಿದಾಗ, ಮೀನುಗಳಂತೆ ಮೇಲಕ್ಕೂ ಕೆಳಕ್ಕೂ ಹಾರಿ ಬೀಳುತ್ತಿದ್ದವು. ಆಗ ತಳಭಾಗದಲ್ಲಿದ್ದ ಬೆಳ್ಳಿಯ ಬಣ್ಣ ಪಳಪಳನೆ ಹೊಳೆಯುತ್ತಿತ್ತು. ಹಾರಲು ಬಾರದ, ನಡೆಯಲು ತಿಳಿಯದ ಈ ಕೀಟಗಳು ತೊಟ್ಟಿಗೆ ಬಂದದ್ದಾದರೂ ಹೇಗೆಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದಿತ್ತು.ಬಹುಶಃ ನೀರಿನಲ್ಲಿ ಈಜುತ್ತಾ, ಬದುಕಿನ ಯಾವುದೋ ಘಟ್ಟದಲ್ಲಿ ರೆಕ್ಕೆ ಕಟ್ಟಿಕೊಂಡು ಬೇರೊಂದು ರೂಪಪಡೆದು ಕೆರೆಗುಂಟೆಗಳಿಂದ ಕಾಡುಗಳತ್ತ ಹಾರಿ, ಮರಗಿಡಗಳ ಎಲೆಗಳ ಸಂದುಗಳಲ್ಲೊ, ಮಣ್ಣಿನಲ್ಲೊ ಮೊಟ್ಟೆಗಳನ್ನು ಪೋಣಿಸಿ ಮಾಯವಾಗಿರಬಹುದು. ಮೊಟ್ಟೆಗಳು ಬಿರಿದು ಕೋಶಾವಸ್ಥೆ ತಲುಪಿ, ವಾತಾವರಣದ ಯಾವುದೋ ನಿರ್ದಿಷ್ಟ ಉಷ್ಣಾಂಶ ತೇವಾಂಶಗಳಿಗೆ ಸ್ಪಂದಿಸಿ, ಬೀಳುವ ಮಳೆಯನ್ನು ಗ್ರಹಿಸಿ ಹನಿಗಳೊಂದಿಗೆ ಜಿಗಿದು, ಹರಿಯುವ ನೀರಿಗೆ ಧುಮುಕಿ, ಹಳ್ಳಗಳನ್ನು ಸೇರಿ ಕೆರೆ ನದಿಗಳನ್ನು ತಲುಪಬಹುದು.ಎರಡನೇ ವರ್ಷವೂ ಮಳೆಗಾಲ ಚೆನ್ನಾಗಿ ಮುಂದುವರೆದಾಗ, ಬೋರರ್ ಆಕ್ರಮಣಕ್ಕೆ ತುತ್ತಾಗಿದ್ದ ಅನೇಕ ಗಿಡಮರಗಳು ನೆಲಕ್ಕುರಳಿ ಮಲಗಿದವು. ಕೆಲವೇ ದಿನಗಳಲ್ಲಿ ಕಾರ್ಯಪ್ರವೃತ್ತವಾದ ಗೆದ್ದಲುಗಳು ಅವುಗಳನ್ನೆಲ್ಲ ಮಣ್ಣು ಮಾಡಿದವು. ಸತ್ತರೂ ನೆಲಕ್ಕುರಳದೆ ನಿಂತಿದ್ದ ಮರಗಳಲ್ಲಿ ಮರಕುಟುಕ, ಗುಟರ ಹಕ್ಕಿಗಳು ಗೂಡು ಕೊರೆದವು. ಸಾಯದೆ ಉಳಿದುಕೊಂಡಿದ್ದ ಮರಗಿಡಗಳು ಸ್ಫೋಟಿಸಿದಂತೆ ಚಿಗುರಿದವು. ಇನ್ನಷ್ಟು ಹುಲುಸಾಗಿ ಬೆಳೆದವು. ಹುಲ್ಲು ಮತ್ತೆ ಚಿಗುರಿತು. ಕಾಡು ತುಂಬಿಕೊಂಡಿತು. ಮತ್ತಷ್ಟು ದೃಢವಾದಂತೆ ಕಂಡಿತು. ಬದುಕುಳಿದ ಜೀವಿಗಳಿಗೆ ಇಡೀ ಸನ್ನಿವೇಶ ವರವಾಗಿ ಪರಿಣಮಿಸಿತು.ಮಳೆ ಮುಂದುವರೆಯಿತು. ಮನೆಯಂಗಳದಲ್ಲಿ ಎಂದೂ ಕಾಣದಿದ್ದ, ಕಾಡಿನಲ್ಲೆಲ್ಲೋ ಗಮನಿಸುತ್ತಿದ್ದ ಅನೇಕ ಜಾತಿಯ ಸಸ್ಯಗಳು ಪ್ರತ್ಯಕ್ಷಗೊಂಡವು. ನಮ್ಮ ಕಾಡಿನಲ್ಲಿ ನಶಿಸಿಹೋಗಿದ್ದ ಹಲವು ಜಾತಿಯ ಮರಗಳ ಬೀಜಗಳು ತೆರವಾದ ಜಾಗದಲ್ಲಿ ಮೊಳಕೆಯೊಡೆದಿದ್ದವು. ನಮ್ಮ ಮನೆಯಂಗಳದಲ್ಲಿ, ಅವುಗಳೆಲ್ಲ ಇರಬೇಕೆಂದು ಅನೇಕ ವರ್ಷಗಳ ಕಾಲ ನಾವು ಪಟ್ಟ ಪರಿಶ್ರಮಗಳೆಲ್ಲ ಅಲ್ಲಿಯವರೆಗೆ ವಿಫಲವಾಗಿದ್ದವು.ಬರ ನಿರ್ದಾಕ್ಷಿಣ್ಯವಾಗಿ ಅನಾರೋಗ್ಯಕರ ಜೀವಿಗಳನ್ನು ತೊಡೆದುಹಾಕಿ, ಆರೋಗ್ಯಕರ ಜೀವಸಂಕುಲದ ಮುಂದುವರಿಕೆಗೆ ದಾರಿ ಮಾಡಿಕೊಟ್ಟಿತ್ತು. ಇದಿಷ್ಟು ನಮ್ಮ ಬರಿಗಣ್ಣಿಗೆ ಕಂಡ ಮೇಲ್ನೋಟದ ಬದಲಾವಣೆಗಳಷ್ಟೆ. ಸೂಕ್ಷ್ಮ ಜೀವಿಗಳ ಪ್ರಪಂಚದಲ್ಲಿ ಆದ ಬದಲಾವಣೆ ನಮ್ಮ ಊಹೆಗೆ ನಿಲುಕದಷ್ಟಿರಬಹುದು.

ಹಾಗಾಗಿ, ಒಟ್ಟಾರೆ ಜೀವಪರಿಸರದ ದೃಷ್ಟಿಯಿಂದ ನೋಡಿದರೆ, ‘ಮನುಷ್ಯನ ಕೈವಾಡ’ವಿಲ್ಲದೆ ಬರುವ ‘ಬರ’ ಭೂಮಿಯ ಆರೋಗ್ಯಕ್ಕೆ ಪೂರಕವಾಗಿಯೇ ಸಂಭವಿಸುವ ಒಂದು ಸಹಜ ಪ್ರಕ್ರಿಯೆಯೊ ಏನೊ!ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭೂಮಿಗಿಳಿದ ಹುಲ್ಲಿನ ಬೀಜ, ಬದುಕಿನ ಕಾರ್ಯನಿರ್ವಹಿಸಿ ನೆಲಕ್ಕೆ ಬಿದ್ದ ಮಲ್ಲಿಗೆ ಹೂಗಳು ಇರುವೆಗಳ ಗೂಡನ್ನು ಅಲಂಕರಿಸಿದ್ದು, ಕೊಲ್ಲುವ ‘ಬರ’ದಲ್ಲಿ ಬದುಕುಳಿದು ಪ್ರವರ್ಧಮಾನಕ್ಕೆ ಬರುವ ಜೀವಿಗಳು, ಮಳೆಯ ಹನಿಗಳೊಂದಿಗೆ ಭೂಮಿಗಿಳಿದು ಹರಿಯುವ ನೀರಿಗೆ ಧುಮುಕಿ ಕೆರೆಗುಂಟೆಗಳನ್ನು ತಲುಪುವ ನಕ್ಷತ್ರಗಳ ಅನಂತಯಾತ್ರೆ. ಬದುಕುವ ಚೈತನ್ಯಕ್ಕೆ ಅದೆಂತಹ ಶಕ್ತಿ, ಎಷ್ಟೊಂದು ಶ್ರದ್ಧೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry