ಇಳುವರಿ ಸೇಲ್ ಯುಗದ ಧಾವಂತ

7

ಇಳುವರಿ ಸೇಲ್ ಯುಗದ ಧಾವಂತ

ಎಸ್.ಆರ್. ರಾಮಕೃಷ್ಣ
Published:
Updated:
ಇಳುವರಿ ಸೇಲ್ ಯುಗದ ಧಾವಂತ

ಇಳುವರಿ ಮಾರಾಟ ಅಂದಕೂಡಲೇ ಹುಚ್ಚು ಹುಚ್ಚಾಗಿ, ಬೇಕಾದದ್ದು, ಬೇಡವಾದದ್ದನ್ನೆಲ್ಲ ಜನ ಕೊಳ್ಳುತ್ತಾರೆ ಅನ್ನುವ ಮಾತನ್ನು ಕೇಳಿರುತ್ತೇವೆ. ಆ ಮಾತಿನಲ್ಲಿ ಸತ್ಯವಿದೆ. ನನ್ನ ಕೆಲವು ಸ್ನೇಹಿತರಿಗೆ ಸೇಲ್ ವ್ಯಾಮೋಹ ಇರುವುದನ್ನು ಕಣ್ಣಾರೆ ಕಂಡಿದ್ದೇನೆ. ಆದರೆ ಆ ಕೊಳ್ಳುಬಾಕ ಧಾವಂತ ಹೇಗೆ ಆವರಿಸುತ್ತದೆ ಎಂದು ನನಗೆ ಪೂರ್ತಿ ಅರ್ಥವಾಗಿರಲಿಲ್ಲ.ಹೋದ ವಾರ ಮೂರು ರಜೆ ಒಟ್ಟಿಗೆ ಬಂದು ಎಲ್ಲೆಡೆ ಎಷ್ಟು ಸೇಲ್ ನಡೆದವು, ನೋಡಿ. ಎಲ್ಲ ಪತ್ರಿಕೆಯಲ್ಲೂ ರಿಯಾಯಿತಿ ಮಾರಾಟದ ಜಾಹೀರಾತುಗಳು ಮುಖಪುಟದಲ್ಲಿಯೇ ರಾರಾಜಿಸುತ್ತಿದ್ದವು. ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ದವಸ ಧಾನ್ಯದವರೆಗೆ ಎಲ್ಲ ಸರಕುಗಳ ಮೇಲೆ ರಿಯಾಯಿತಿ ಕೊಟ್ಟು, ಮೂರು ದಿವಸದ ಬಿಡುವನ್ನು ದೊಡ್ಡ ಕನ್ಸೂಮರಿಸ್ಟ್ ಹಬ್ಬವಾಗಿಸುವ ಎಲ್ಲ ತಯಾರಿ ನಡೆದಿತ್ತು. ಬಟ್ಟೆಬರೆ ವ್ಯಾಪಾರದವರು `ಎಂಡ್ ಆಫ್ ಸೀಸನ್' ಎಂದು ಹೇಳಿ ಜನರನ್ನು ಆಕರ್ಷಿಸಿದರು. ಟೀವಿ, ಫ್ರಿಡ್ಜ್ ಮಾರುವವರು ಗಣರಾಜ್ಯೋತ್ಸವದ ಪ್ರಯುಕ್ತ ಮಾರಾಟ ಎಂದು ಘೋಷಿಸಿದರು. ಜನವರಿ 26ರ ಗಣರಾಜ್ಯೋತ್ಸವದ ಸಲುವಾಗಿ ರೂ 26 ಕೊಟ್ಟು ಏನೇ ಬೇಕಾದರೂ ಖರೀದಿಸಿ, ಬಾಕಿ ಹಣವನ್ನು ಕಂತುಗಳಲ್ಲಿ ತೀರಿಸಿ ಎಂದು ಹೇಳಿ ಗ್ರಾಹಕರನ್ನು ಸೆಳೆದರು.ಬೆಂಗಳೂರಿನಂಥ ಮಹಾನಗರದಲ್ಲಿ ಸಾಕಷ್ಟು ದುಡ್ಡಿನ ಮಂದಿ ಇದ್ದರೂ ಅಂಗಡಿಗೆ ಹೋಗಲು ಅವರಿಗೆ ಸಮಯ ಇರುವುದಿಲ್ಲ ಎಂಬುದು ವ್ಯಾಪಾರಸ್ಥರ ಕೊರಗು.ಮೂರು ದಿವಸ ರಜೆ ಬಂದ ಅವಕಾಶವನ್ನು ಬಿಡಬಾರದು ಎಂಬುದು ಮಾರ್ಕೆಟಿಂಗ್ ಕಾರ್ಯತಂತ್ರ. ಹಾಗಾಗಿ ಇನ್ನು ಮೇಲೆ ಯಾವುದೇ ದೀರ್ಘ ರಜೆ ಬಂದರೂ ಅದು ಈ ರೀತಿಯ ರಿಟೇಲ್ ಹಬ್ಬವಾಗಿ ಮಾರ್ಪಡುವುದು ಖಚಿತ. ಈ ಸೇಲ್‌ಗಳ ವಿಷಯದಲ್ಲಿ ಎಂದೂ ಉತ್ಸಾಹಗೊಳ್ಳದ ನಾನು ಕೊಳ್ಳುವವರ ಸೈಕಾಲಜಿಯ ಬಗ್ಗೆ ಪ್ರತ್ಯಕ್ಷವಾಗಿ ಕಂಡುಕೊಂಡ ಕ್ಷಣದ ಬಗ್ಗೆ ಈ ಪುಟ್ಟ ಟಿಪ್ಪಣಿ. ಈ ವರ್ಷದ ಗಣರಾಜ್ಯೋತ್ಸವದ ಸೇಲ್ ಜ್ವರ ಅಂತರ್ಜಾಲಕ್ಕೂ ಹಬ್ಬಿತ್ತು. ಹತ್ತಾರು ಅಂಗಡಿಗಳು ಆನ್‌ಲೈನ್ ವ್ಯಾಪಾರದಲ್ಲೂ ದೊಡ್ಡ ಇಳುವರಿ ಬೆಲೆಗಳನ್ನು ಘೋಷಿಸಿದ್ದವು. ಅಲ್ಲೂ ಮೊಬೈಲ್, ಟ್ಯಾಬ್ಲೆಟ್, ಟೀವಿ ಮುಂತಾದ ವಸ್ತುಗಳನ್ನು ಕೊಳ್ಳುವ ಅವಕಾಶ ನಿನ್ನೆಯವರೆಗೂ ಇತ್ತು.ನನ್ನನ್ನು ಸೆಳೆದದ್ದು ಇನ್ನೊಂದು ರೀತಿಯ ಇಳುವರಿ ಮಾರಾಟ. ಫ್ಲಿಪ್‌ಕಾರ್ಟ್ ಆನ್‌ಲೈನ್ ಅಂಗಡಿಯಲ್ಲಿ ಈಗ ಫ್ಲೈಟ್ ಎಂಬ ಹೆಸರಿನ ಡಿಜಿಟಲ್ ಡೌನ್‌ಲೋಡ್ ವಿಭಾಗ ತೆರೆದಿದ್ದಾರೆ. ಇಲ್ಲಿ ಹಾಡುಗಳನ್ನು ಕೊಳ್ಳಬಹುದು. ಈ ವಾರ ಒಂದು ಆಫರ್ ಇತ್ತು: ಸೋನಿ ಸಂಸ್ಥೆಯ ಯಾವುದೇ ಆಲ್ಬಮ್‌ನ ಯಾವುದೇ ಹಾಡು ಕೊಂಡರೂ ಬರೀ 5 ರೂಪಾಯಿ. ಸೋನಿ ಅಂತರರಾಷ್ಟ್ರೀಯ ಕಂಪೆನಿಯಾದ್ದರಿಂದ ಎರಡು ಲಕ್ಷಕ್ಕೂ ಹೆಚ್ಚು ಹಾಡುಗಳ ದೊಡ್ಡ ಕೆಟಲಾಗ್ ಹೊಂದಿದೆ. ಸೇಲ್ ಸಮಯ ಮಿಂಚಿ ಹೋದರೆ ಒಳ್ಳೆ ಸಂಗೀತ ಇಷ್ಟು ಅಗ್ಗವಾಗಿ ಇನ್ನೆಂದೂ ಸಿಗಲಾರದು ಎಂಬ ಆತಂಕ ನನ್ನನ್ನು ಆವರಿಸಿತು. ಒಂದೊಂದೇ ಹಾಡು ಆರಿಸಿ, ಸ್ಯಾಂಪಲ್ ಕೇಳಿ, ಆಮೇಲೆ ಕೊಳ್ಳುವ ಅವಕಾಶ ಇದ್ದರೂ ತಲೆ ಕೆಡಿಸಿಕೊಳ್ಳದೆ ನನಗೆ ಇಷ್ಟವಾಗಬಹುದು ಎಂದು ಎಣಿಸಿದ ಸುಮಾರು ಆಲ್ಬಮ್ ಇಡಿಯಾಗಿ ಕೊಂಡೆ. ಈಗ ಮುನ್ನೂರಕ್ಕೂ ಹೆಚ್ಚು ಹಾಡುಗಳು ನನ್ನ ಕಂಪ್ಯೂಟರ್‌ನಲ್ಲಿ ಕೂತಿವೆ.ಯಾವುದು ಬೇಕು, ಯಾವುದು ಬೇಡ ಎಂದು ಸಾವಧಾನವಾಗಿ ಯೋಚಿಸಿದ್ದರೆ ಇಷ್ಟೆಲ್ಲಾ ಖರೀದಿ ಮಾಡುತ್ತಿರಲಿಲ್ಲ ಎಂದು ಆಮೇಲೆ ಅನ್ನಿಸಿತು. ಆದರೆ ಎಷ್ಟೋ ಸಾವಿರ ಬೆಲೆ ಬಾಳುವ ಸರಕನ್ನು ತೀರ ಕಡಿಮೆ ಬೆಲೆಗೆ ಗಿಟ್ಟಿಸಿಕೊಂಡ ಸಮಾಧಾನವೂ ಇತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ, ಸೇಲ್ ನಡೆದಾಗ ಗ್ರಾಹಕರು ಯಾವ ಮನಸ್ಥಿತಿಯಲ್ಲಿರುತ್ತಾರೆ ಎಂದು ನನಗೆ ಮನವರಿಕೆಯಾಯಿತು.ಅಗತ್ಯ ಇಲ್ಲದ ವಸ್ತುಗಳನ್ನು ಕೊಳ್ಳುವ ಹುಚ್ಚಿಗೆ ಕನ್ಸ್ಯೂಮರಿಸಂ ಎನ್ನುತ್ತಾರೆ. ಇಳುವರಿ ಮಾರಾಟಗಳಂತೂ ಕನ್ಸ್ಯೂಮರಿಸ್ಟ್ ಪ್ರವೃತ್ತಿಯನ್ನು ಉಲ್ಬಣಗೊಳಿಸುವ ಸಂದರ್ಭಗಳನ್ನು ಸೃಷ್ಟಿಸುತ್ತವೆ. ಕಡಿಮೆ ಸಮಯದಲ್ಲಿ ಆದಷ್ಟೂ ಖರೀದಿಸುವ ಉದ್ದೇಶದ ಇಂಥ ಶಾಪಿಂಗ್ ಆರೋಗ್ಯಕರವಲ್ಲ ಎಂಬ ಮಾತು ಕೇಳಿರುತ್ತೇವೆ. ಪುಸ್ತಕ, ಸಂಗೀತದ ವಿಷಯದಲ್ಲಿ ಕೊಳ್ಳುಬಾಕತನವನ್ನು ಕನ್ಸ್ಯೂಮರಿಸಿಂ ಅನ್ನದೆ ಆರೋಗ್ಯಕರ ತಿಕ್ಕಲುತನ ಎಂದು ಭಾವಿಸುತ್ತೇವೆ. ಅದೇನೇ ಇರಲಿ, ಇಷ್ಟಂತೂ ನಿಜ. ಬೆಂಗಳೂರಿನ ವಿರಾಮದ ದಿನಗಳಲ್ಲಿ ಸೇಲ್‌ಗಳು ಹೆಚ್ಚುತ್ತಾ ಹೋಗುತ್ತವೆ. ಪಾರ್ಕಿಂಗ್ ತೊಂದರೆ ನೆನಪಿಸಿಕೊಂಡು ಮನೆಯಲ್ಲೇ ಇರುವವರು ಆನ್‌ಲೈನ್ ಅಂಗಡಿಗಳ ಸೇಲ್‌ಗಳಲ್ಲಿ ನಿರತರಾಗುತ್ತಾರೆ.ಈಜಿಪುರದ ದುರಂತ

ಬೆಂಗಳೂರಿನ ಸಾರ್ವಜನಿಕ ಸ್ಥಳಗಳೆಲ್ಲ ಒಂದೊಂದಾಗಿ ಖಾಸಗಿಯವರ ಕೈಸೇರುತ್ತಿರುವುದನ್ನು ನೀವು ಗಮನಿಸಿರಬಹುದು. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವಾಹನ ನಿಲುಗಡೆ ಸಮಸ್ಯೆಯನ್ನು ಪರಿಹರಿಸಲು ಬಹುಮಹಡಿ ಪಾರ್ಕಿಂಗ್ ಲಾಟ್ ಮಾಡುತ್ತೇವೆ ಎಂದು ಹೇಳಿ, ನಾಲ್ಕು ಎಕರೆ ಸಾರ್ವಜನಿಕ ನೆಲವನ್ನು ಖಾಸಗಿಯವರ ಕೈಗೆ ಕೊಟ್ಟು, ಕೊನೆಗೆ ಅಲ್ಲೊಂದು ಮಾಲ್ ಎದ್ದ ಕಥೆ ಬೆಂಗಳೂರಿನ ಅಧೋಗತಿಯನ್ನು ಸಾರುತ್ತದೆ. ಈಗ ಆ ಮಾಲ್ ಕಟ್ಟಿದ ಸಂಸ್ಥೆ ಈಜಿಪುರದ ಸ್ಲಂ ಇರುವ ಸ್ಥಳವನ್ನು ಪಡೆದಿದೆ. ಪೊಲೀಸರ ಸಹಾಯದಿಂದ ಬಡವರನ್ನು ಬೀದಿಗೆ ದಬ್ಬಿದ ಮಹಾನಗರ ಪಾಲಿಕೆಯವರ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದೆ. ಕಾನೂನು ಸೂಕ್ಷ್ಮಗಳ ಬಗ್ಗೆ, ಬಡವರು ಅಲ್ಲಿ ಅನಧಿಕೃತವಾಗಿ ವಾಸವಾಗಿರುವ ಬಗ್ಗೆ, ಚರ್ಚೆ ನಡೆದಿದೆ.ಎರಡು ವಿಷಯ ಇಲ್ಲಿ ಹೇಳಬೇಕು. ಸಾರ್ವಜನಿಕ ಬಳಕೆಗೆ ಮೀಸಲಾದ ಸ್ಥಳಗಳು (ಆಟದ ಮೈದಾನಗಳು, ಉದ್ಯಾನಗಳು ಇತ್ಯಾದಿ) ಒಮ್ಮೆ ಖಾಸಗಿಯವರ ಕೈ ಸೇರಿದರೆ ಮರಳಿ ಪಡೆಯುವುದು ಕಷ್ಟ. ಗರುಡ ಮಾಲ್ ಅನ್ನು ಯಾರೂ ಇಂದು ಕಾರ್ ಪಾರ್ಕ್ ಎಂದು ಗುರುತಿಸುವುದಿಲ್ಲ. ಬಡವರಿಗೆ ಬೇರೆಡೆ ಮನೆ ಕಟ್ಟಿಕೊಡುವ ವಿಷಯ ಒಂದು ಸಮಸ್ಯೆಯಾದರೆ, ಸಾರ್ವಜನಿಕ ಆಸ್ತಿಯ ಖಾಸಗೀಕರಣ ಅದಕ್ಕಿಂತ ವಿಸ್ತಾರವಾದ ಸಮಸ್ಯೆ. ಇನ್ನು ಅನಧಿಕೃತ ವಾಸದ ವಿಷಯ.ಗರುಡ ಮಾಲ್ ಮಾಡಿದ ಒತ್ತುವರಿ ಗುಟ್ಟಾಗಿ ಉಳಿದಿಲ್ಲ. ಅಲ್ಲಿ ಎದ್ದ ಅನಧಿಕೃತ ಕಟ್ಟಡವನ್ನು ಕೆಡವಲು ಬೇಕಾದ ಕಾನೂನಿದ್ದರೂ ಆ ಕ್ರಮವನ್ನು ನಗರ ಪಾಲಿಕೆ  ಕೈಗೊಳ್ಳುವುದಿಲ್ಲ. ಅಕ್ರಮ ಸಕ್ರಮ ಎಂದು ಗೊಂದಲ ಮಾಡಿ ರಿಯಲ್ ಎಸ್ಟೇಟ್ ಕುಳಗಳು, ಸ್ಥಿತಿವಂತರು ನಗರ ವಿನ್ಯಾಸದ ಎಲ್ಲ ಕಾನೂನುಗಳನ್ನೂ ಮುರಿಯುತ್ತಿದ್ದಾರೆ. ಬಡವರ ವಿಷಯ ಬಂದಾಗ ಮಾತ್ರ ನ್ಯಾಯಾಲಯದ ನೆಪ ಹೇಳಿ, ಜಾಗ ಖಾಲಿ ಮಾಡಿಸುವ ಕ್ರಮ ಕೈಗೊಳ್ಳುತ್ತದೆ. ನಿರಾಶ್ರಿತರಿಗಾಗಿ ದೇಣಿಗೆ ಸಂಗ್ರಹ

ಈಜಿಪುರ ದುರಂತಕ್ಕೆ ಸ್ಪಂದಿಸುವ ಸಲುವಾಗಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಂದು ಸಣ್ಣ ತಂಡ ಸಾರ್ವಜನಿಕರಿಂದ ಒಂದಿಷ್ಟು ಹಣ ಸಂಗ್ರಹಿಸಿ ನಿರಾಶ್ರಿತರಿಗೆ ಊಟ, ಹೊದಿಕೆ, ಔಷಧ ಇತ್ಯಾದಿಗಳನ್ನು ನೀಡುವ ಉದ್ದೇಶದಿಂದ ನಗರದ ಫೋರಂ ಮಾಲ್ ಎದುರು ಶನಿವಾರ ಬ್ಯಾನರ್ ಹಿಡಿದು ಪಿಟೀಲು ಹಾಗೂ ಗಿಟಾರ್ ನುಡಿಸಿ 9630 ರೂಪಾಯಿ ಸಂಗ್ರಹಿಸಿದೆ. ಬಂದ ಹಣದಿಂದ ಕೈಯಲ್ಲಾದಷ್ಟು ಸಹಾಯ ಮಾಡುವುದು ಈ ತಂಡದವರ ಉದ್ದೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry