ಸೋಮವಾರ, ಮಾರ್ಚ್ 8, 2021
24 °C

ಈ ಬಾವಿ ಖಾಲಿ, ಆ ಬಾವಿ ಭರ್ತಿ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಈ ಬಾವಿ ಖಾಲಿ, ಆ ಬಾವಿ ಭರ್ತಿ

ಸಮುದ್ರದ ನೀರು ಏಕೆ ಅಷ್ಟೆಲ್ಲ ಉಪ್ಪುಪ್ಪು ಎಂಬುದರ ಬಗ್ಗೆ ನಾವೆಲ್ಲ ಈ ಕತೆ ಕೇಳಿಯೇ ಇದ್ದೇವೆ: ನಾಲಗೆಯ ರುಚಿ ಕೆಟ್ಟಿದ್ದ ಒಬ್ಬಾತ ತನ್ನ ಆರಾಧ್ಯ ದೈವವನ್ನು ಕರೆಯುತ್ತಾನೆ. ಹೇಗಾದರೂ ತನಗೆ ಊಟ ರುಚಿಸುವಂತೆ ಮಾಡೆಂದು ಬೇಡುತ್ತಾನೆ. ದೈವ ಅವನಿಗಾಗಿ ‘ಉಪ್ಪು’ ಎಂಬ ಹೊಸ ವಸ್ತುವನ್ನು ಸೃಷ್ಟಿಸುತ್ತದೆ. ಅಡುಗೆಗೆ ಮುನ್ನ ಒಂದು ಪಾತ್ರೆಯನ್ನು ಮುಂದಿಟ್ಟುಕೊಂಡು ‘ಅಕ್ರಂಪೆಕ್ರಂ ಭಕ್ರಂತಿಕ್ರಂ’ ಎಂಬ ಮಂತ್ರವನ್ನು ಹೇಳಿದರೆ ಉಪ್ಪು ಆ ಪಾತ್ರೆಗೆ ತುಂಬುತ್ತದೆ. ಸಾಕೆಂಬಷ್ಟು ಉಪ್ಪು ಸಿಕ್ಕಮೇಲೆ ‘ಪಕ್ರಂತಿಕ್ರಂ ಪೆಕ್ರಂಭಕ್ರಂ’ ಎಂಬ ತಿರುಮಂತ್ರವನ್ನು ಹೇಳಿದರೆ ಉಪ್ಪಿನ ಧಾರೆ ನಿಲ್ಲುತ್ತದೆ.ಈತ ಊರಿಗೆಲ್ಲ ಉಪ್ಪಿನ ರುಚಿ ಹತ್ತಿಸಿ, ಬೇಕೆಂದಾಗಲೆಲ್ಲ ಬೇಕಾದಷ್ಟು ಉಪ್ಪನ್ನು ಸೃಷ್ಟಿಸಿ, ಸಾಹುಕಾರನಾಗಿ ಕೊಬ್ಬಿ, ದೈವಭಕ್ತಿಯನ್ನು ಮರೆತು ನೌಕಾಯಾನಕ್ಕೆ ಹೋಗುತ್ತಾನೆ. ಅಲ್ಲಿ ಮೀನಿನ ಅಡುಗೆಗೆ ತುಸು ಉಪ್ಪು ಬೇಕೆಂದು ಮತ್ತೆ ಅದೇ ಮಂತ್ರವನ್ನು ಹೇಳುತ್ತಾನೆ. ಉಪ್ಪು ಸುರಿಯತೊಡಗುತ್ತದೆ. ಆದರೆ ಅದನ್ನು ನಿಲ್ಲಿಸುವ ಮಂತ್ರ ಮರೆತೇ ಹೋಗುತ್ತದೆ. ಉಪ್ಪಿನ ರಾಶಿ ದೊಡ್ಡದಾಗುತ್ತ ಆಗುತ್ತ ನೌಕೆಯ ಸಮೇತ ಈತನೂ ಮುಳುಗುತ್ತಾನೆ. ಆಗಿನಿಂದ ಈಗಿನವರೆಗೂ ಸಮುದ್ರ ತಳದಲ್ಲಿ ಉಪ್ಪು ಸತತ ಸೃಷ್ಟಿಯಾಗುತ್ತಲೇ ಇದೆ. ಆದ್ದರಿಂದಲೇ ಸಪ್ತ ಸಮುದ್ರಗಳೆಲ್ಲ ಉಪ್ಪುಪ್ಪಾಗಿವೆ.  ಆ ಕಟ್ಟು ಕತೆಯನ್ನು ನೆನಪಿಸುವಂತೆ ಈಗ ಜಗತ್ತಿನಾದ್ಯಂತ ಕಚ್ಚಾತೈಲದ ಧಾರೆ ಉಕ್ಕುತ್ತಿದೆ. ನಿಲ್ಲಿಸಲು ಯಾರಿಗೂ ಸದ್ಯಕ್ಕೆ ಸಾಧ್ಯವೇ ಆಗದಂಥ ವಿಲಕ್ಷಣ ಜಾಗತಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ತೈಲದ ಬೆಲೆ 2014ರಲ್ಲಿ 130 ಡಾಲರ್ ಇದ್ದದ್ದು ಕ್ರಮೇಣ ಇಳಿಯುತ್ತ ಈಗ 30ರ ಕೆಳಕ್ಕೆ ಕುಸಿದಿದೆ. ತೈಲ ಉತ್ಪಾದಿಸುವ ಅನೇಕ ರಾಷ್ಟ್ರಗಳು ದಿವಾಳಿಯ ಅಂಚಿಗೆ ಬಂದಿವೆ. ಖರೀದಿ ಮಾಡುವ ದೇಶಗಳಿಗೆ ಅಗ್ಗದ ಎಣ್ಣೆಯ ಮಹಾಪೂರ ಬಂದಂತಾಗಿದೆ. ತೈಲವನ್ನು ಶೇಖರಿಸಿ ಇಟ್ಟುಕೊಳ್ಳುವ ಎಲ್ಲ ಭೂಗತ ಟ್ಯಾಂಕ್‌ಗಳು, ಹಗೇವುಗಳು, ತೇಲುತೊಟ್ಟಿಗಳು ಭರ್ತಿಯಾಗಿವೆ. ತೈಲ ತುಂಬಿದ ದೈತ್ಯ ಹಡಗುಗಳು ಬಂದರುಗಳ ಬಳಿ ಸಾಲುಗಟ್ಟಿ ‘ಟ್ರಾಫಿಕ್ ಜಾಮ್’ ಮಾಡುತ್ತಿವೆ. ನಮ್ಮ ಉಡುಪಿಯ ಬಳಿಯ ಪಾದೂರಿನಲ್ಲಿ 25 ಲಕ್ಷ ಟನ್ ತೈಲ ಹಿಡಿಸಬಲ್ಲ ಮಹಾ ಸುರಂಗವೊಂದು ಇದೀಗ ಸಜ್ಜಾಗಿದ್ದು ಪೈಪ್‌ಲೈನ್ ಪೂರ್ತಿಗೊಂಡಾಕ್ಷಣ ಇಲ್ಲೂ ತೈಲ ತುಂಬುತ್ತದೆ. ಪೆಟ್ರೊಪ್ರವಾಹ ನಮ್ಮತ್ತಲೂ ನುಗ್ಗುತ್ತಿದೆ.125 ವರ್ಷಗಳ ಹಿಂದೆ ಪೆಟ್ರೋಲ್, ಡೀಸೆಲ್ ಯಂತ್ರಗಳು ಸೃಷ್ಟಿಯಾದ ಲಾಗಾಯ್ತೂ ಜಗತ್ತಿನ ಚರಿತ್ರೆಯೇ ಬಹುವೇಗದಲ್ಲಿ ಓಡತೊಡಗಿದೆ. ಕಳೆದ 25 ವರ್ಷಗಳ ಅವಧಿಯಲ್ಲಂತೂ ಇಡೀ ಜಗತ್ತೇ ಕಲ್ಲಿದ್ದಲು ಮತ್ತು ಕಚ್ಚಾತೈಲದಲ್ಲಿ ಮುಳುಗಿದಂತಿದೆ. ತೈಲದಿಂದ ವಿದ್ಯುತ್ತು, ತೈಲದಿಂದ ಪ್ಲಾಸ್ಟಿಕ್, ತೈಲದಿಂದ ರಾಕೆಟ್, ತೈಲದಿಂದ ಔಷಧ ರಸಾಯನ, ರಸಗೊಬ್ಬರ, ಸೊಳ್ಳೆಬತ್ತಿ, ಮೋಂಬತ್ತಿ, ಎಷ್ಟರವರೆಗೆ ಎಂದರೆ ತೈಲ ಇಲ್ಲದಿದ್ದರೆ ನಮಗೆ ನೀರೂ ಸಿಗುವುದಿಲ್ಲ, ಅಡುಗೆಗೆ ಅಕ್ಕಿಬೇಳೆ ಬಿಡಿ, ಉಪ್ಪೂ ಸಿಗುವುದಿಲ್ಲ ಎಂಬಂತಾಗಿದೆ.ಕಚ್ಚಾತೈಲವನ್ನು ನಿಯಂತ್ರಿಸುವವರು ಇಡೀ ಜಗತ್ತನ್ನು ನಿಯಂತ್ರಿಸಬಹುದು ಎಂಬುದು ಗೊತ್ತಾಗಿ ದಶಕದ ಹಿಂದೆ ವಿಜ್ಞಾನ ತಂತ್ರಜ್ಞಾನಗಳನ್ನೆಲ್ಲ ಪೆಟ್ರೋಲ್ ಶೋಧಕ್ಕೆ ಹಚ್ಚಲಾಯಿತು. ನೆಲದೊಳಗೆ 10 ಕಿ.ಮೀ. ಆಳದವರೆಗೂ ತೈಲಬಾವಿ ಕೊರೆದಿದ್ದಾಯಿತು. ಡಾಂಬರಿನಂಥ ಕರಿಮರಳನ್ನೂ (ಟ್ಯಾರ್‌ಸ್ಯಾಂಡ್) ಹಿಂಡುವ ತಂತ್ರಜ್ಞಾನ ಬಂತು. ಪಾತಾಳದ ಗಟ್ಟಿ ಬಂಡೆಗಳನ್ನೂ ತಳದಲ್ಲೇ ಆಸ್ಫೋಟಿಸಿ ತೈಲವನ್ನು ಜಿನುಗಿಸುವ ತಂತ್ರಜ್ಞಾನ ಕೈಗೆಟುಕಿತು. ಪೆಟ್ರೊ ಪ್ರವಾಹ ಉಕ್ಕುತ್ತಲೇ ಹೋಯಿತು. ಅಂಥ ಫಾಸಿಲ್ ಇಂಧನಗಳ ಅತಿಬಳಕೆಯ ವಿಕಾರಗಳನ್ನೂ ನಾವು ನೋಡುತ್ತಿದ್ದೇವೆ. ತೈಲಶಕ್ತಿಯಿಂದ ಚಲಿಸುವ ಬೃಹತ್ ಯಂತ್ರಗಳು ಅರಣ್ಯಗಳನ್ನು, ಪರ್ವತಗಳನ್ನು ಭಾರೀ ಪ್ರಮಾಣದಲ್ಲಿ ನೆಲಸಮ ಮಾಡುತ್ತಿವೆ. ನದಿಗಳನ್ನು ತಿರುಗಿಸುತ್ತಿವೆ. ನೀರನ್ನು ಕಾಲುವೆಗಳಿಗೆ  ತಿರುಗಿಸಿ ನದಿಗಳನ್ನು ಬತ್ತಿಸುತ್ತಿವೆ. ಸಮುದ್ರಕ್ಕೆ ನೀರೇ ಹೋಗದಂತೆ ಮಾಡುತ್ತಿವೆ. ಅರಲ್ ಸಮುದ್ರವನ್ನೇ ಬತ್ತಿಸಿವೆ. ಕೊಳವೆ ಬಾವಿಗಳಿಂದ ನೀರನ್ನು ಸತತ ಎತ್ತಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಬಾವಿಗಳನ್ನು ಬತ್ತಿಸಿ ಭೂಗತ ಮರುಭೂಮಿಯನ್ನು ಸೃಷ್ಟಿಸಿದ್ದಾಗಿದೆ.ವಾತಾವರಣಕ್ಕೆ ಇಂಗಾಲವನ್ನು ಸತತವಾಗಿ ಸೇರ್ಪಡೆ ಮಾಡುತ್ತ ಭೂಮಿಯ ತಾಪಮಾನ ಹೆಚ್ಚುತ್ತಿದೆ. ತೈಲದ ಅಮಲು ನೆತ್ತಿಗೇರಿದ ಹಾಗೆ, ಉತ್ತರ ಧ್ರುವದ ಹಿಮದ ಹಾಸು ಕರಗುತ್ತಿದೆ ಎನ್ನುವಾಗ, ಹೋ, ಅಲ್ಲಿ ಸುಲಭಕ್ಕೆ ತುಂಬಾ ತೈಲ ಸಿಗುತ್ತದೆಂದು ಈಗ ಹತ್ತಾರು ರಾಷ್ಟ್ರಗಳು ಅಲ್ಲೇ ತೈಲಬಾವಿ ಕೊರೆಯಲೆಂದು ಲಗ್ಗೆ ಹಾಕಿವೆ. ಪೆಟ್ರೊ ದುರಾಸೆಯ ಎಲ್ಲಕ್ಕಿಂತ ಉಗ್ರ ವಿಕಾರ ಏನೆಂದರೆ- ಅದು ಇದ್ದವರ, ಇಲ್ಲದವರ ನಡುವಣ ಅಂತರ ತೀರ ಹೆಚ್ಚಾಗುವಂತೆ ಮಾಡಿದೆ. ಇಲ್ಲದವರ ಹತಾಶ ಕೈಗಳಿಗೆ ಶಸ್ತ್ರಗಳನ್ನು ಕೊಟ್ಟು ಭಯೋತ್ಪಾತ ಎಲ್ಲೆಡೆ ಹೆಚ್ಚುವಂತೆ ಮಾಡಿದೆ.ನೈಜೀರಿಯಾ, ಸುಡಾನ್, ಸಿರಿಯಾ, ಟರ್ಕಿ ಮುಂತಾದ ದೇಶಗಳಲ್ಲಿ ಬರಗಾಲದ ಸ್ಥಿತಿ ಉಂಟಾಗಿದ್ದ ರಿಂದಲೇ ಜನರು ಬೊಕೊ ಹರಾಮ್‌ನಂಥ ಸಂಘಟನೆಗಳಿಗೆ ಸೇರಿ ಅರಾಜಕತೆಯ ಹರಿಕಾರರಾಗಿ ವೈರಾಣುಗಳಂತೆ ಹಬ್ಬುತ್ತಿದ್ದಾರೆ. ಈ ಎಲ್ಲ ಅಧ್ವಾನಗಳಿಗೆ ಕಾರಣವಾಗುತ್ತಿರುವ ಫಾಸಿಲ್ ಇಂಧನಗಳ ಪ್ರಾಬಲ್ಯವನ್ನು ಹತ್ತಿಕ್ಕಬೇಕೆಂದು ಕಳೆದ ತಿಂಗಳು ಪ್ಯಾರಿಸ್ ಸಮ್ಮೇಳನದಲ್ಲಿ ಮೊದಲ ಬಾರಿಗೆ ಒಮ್ಮತ ಧ್ವನಿ ಹೊಮ್ಮಿದ್ದೇ ಕಾರಣ ಎಂಬಂತೆ, ಆದಷ್ಟು ಬೇಗ ಆದಷ್ಟೂ ಹೆಚ್ಚು ಲಾಭವನ್ನು ಪೆಟ್ರೊತೈಲದಿಂದ ಪಡೆಯಬೇಕು ಎಂಬ ಪೈಪೋಟಿ ಕೂಡ ಹೆಚ್ಚಿದೆ.ತೈಲದ ಬೆಲೆ ಏಕೆ ಇಳಿಯುತ್ತಿದೆ ಎಂಬುದು ಈ ಅಂಕಣಕ್ಕೆ ಪ್ರಸ್ತುತ ಅಲ್ಲವಾದರೂ ಒಂದು ಕ್ಷಣ ಅದನ್ನೂ ನೋಡೋಣ: ತೈಲದ ಬೆಲೆ ಇಳಿಯದಂತೆ ಅದರ ಪ್ರಮುಖ ಉತ್ಪಾದಕರೆಲ್ಲ ‘ಒಪೆಕ್’ ಒಕ್ಕೂಟ ರಚಿಸಿಕೊಂಡು ತೈಲ ಉತ್ಪಾದನೆಯನ್ನು ಒಂದು ಮಿತಿಯೊಳಗೆ ಇಟ್ಟಿದ್ದವು. ಆದರೆ ಅತಿ ಹೆಚ್ಚು ತೈಲ ಉತ್ಪಾದಿಸುವ ಸೌದಿ ಅರೇಬಿಯಾಕ್ಕೆ ಎರಡನೆಯ ಅತಿಹೆಚ್ಚು ತೈಲ ಉತ್ಪಾದಿಸುವ ಇರಾನ್ ಮೇಲೆ ಕೋಪ ಬಂತು (ಸೌದಿಯಲ್ಲಿ ಸುನ್ನಿ ಮತ್ತು ಇರಾನ್‌ನಲ್ಲಿ ಶಿಯಾ ಬಹುಮತವಿದೆ). ಇರಾನನ್ನು ಬೆಂಬಲಿಸುವ ಮೂರನೆಯ ಅತಿದೊಡ್ಡ ತೈಲರಾಷ್ಟ್ರ ರಷ್ಯದ ವಿರುದ್ಧವೂ ಸೌದಿಗೆ ಕೋಪ ಬಂತು.ಈ ಎರಡೂ ರಾಷ್ಟ್ರಗಳನ್ನು ಶಿಕ್ಷಿಸಲೆಂಬಂತೆ ಅದು ತನ್ನ ತೈಲದ ಉತ್ಪಾದನೆಯನ್ನು ಹೆಚ್ಚಿಸಿತು. ಬ್ರೇಕ್ ಇಲ್ಲದ ಗಾಡಿಯಂತೆ ಉತ್ಪಾದನೆಯ ವೇಗವನ್ನು ಹೆಚ್ಚಿಸುತ್ತಲೇ ಹೋಯಿತು. ಬೆಲೆ ಕುಸಿಯುತ್ತ ಬಂತು. ತೈಲದ ಉತ್ಪಾದನೆಯಿಂದಲೇ ರಾಷ್ಟ್ರವನ್ನು ನಡೆಸಬೇಕಿದ್ದ ವೆನೆಝುವೆಲಾ, ನೈಜೀರಿಯಾಗಳ ಗಳಿಕೆ ಇಳಿಮುಖವಾಯಿತು. ರಷ್ಯ ಕೂಡ ತತ್ತರಿಸಿತು. ಪ್ರಜೆಗಳಿಗೆ ಪಡಿತರ ನಿಂತಿತು. ಹಿರಿಯ ನಾಗರಿಕರಿಗೆ ಪಿಂಚಿಣಿ ನಿಂತಿತು. ಕಂಪನಿಗಳು ಮುಚ್ಚಿದವು. ಇಡೀ ದೇಶಕ್ಕೆ ಸಂಕಷ್ಟ ಹೆಚ್ಚಿತು. ಬೆಲೆ ಕುಸಿತದಿಂದ ಹಾನಿಯಾದರೂ ಕೂಡ ಅಷ್ಟಿಷ್ಟು ಹಣ ಗಳಿಕೆಗೆಂದು ತೈಲದ ಉತ್ಪಾದನೆಯನ್ನು ಹೆಚ್ಚಿಸಲೇಬೇಕಾದ ಅನಿವಾರ್ಯ ಸ್ಥಿತಿ ಅವಕ್ಕೆ ಬಂತು. ಬೆಲೆ ಮತ್ತಷ್ಟು ಕುಸಿಯಿತು. ಇನ್ನು ನಾಲ್ಕೈದು ವರ್ಷ ಮತ್ತೆ ಏರದೆಂಬ ಭಯ ಆವರಿಸಿತು.   ತೈಲಬೆಲೆ ಇಳಿದಂತೆಲ್ಲ ಭೂಮಿಗೆ ಒಳ್ಳೆಯದೊ ಕೆಟ್ಟದೊ? ಕೆನಡಾದ ಅಥಾಬಸ್ಕಾ ಎಂಬಲ್ಲಿ ಕರಿಮರಳನ್ನು ಹಿಂಡಿ ತೈಲ ತೆಗೆಯುತ್ತಿದ್ದ ಭೀಮಗಾತ್ರದ ಸಾವಿರಾರು ಯಂತ್ರಗಳು ಈಗ ತಟಸ್ಥವಾಗಿವೆ. ತೈಲಬೆಲೆ ಜಾಸ್ತಿ ಇದ್ದರೆ ಮಾತ್ರ ಈ ದುಬಾರಿ ಕಾರ್ಯಾಚರಣೆಯಲ್ಲಿ ತುಸು ಲಾಭ ಗಿಟ್ಟುತ್ತಿತ್ತು. ತಿಂಗಳಿಗೆ ಕೋಟಿ ಟನ್ ಮರಳನ್ನು ಜಾಲಾಡಿ ಹಿಂಡಿ ಬಿಸಾಕುತ್ತಿದ್ದ ಕ್ರಿಯೆಗಳು ನಿಂತಿವೆ. ಅದು ಒಳ್ಳೆಯದೇ ಹೌದು. ನೆಲದಾಳಕ್ಕೆ ರಂಧ್ರಕೊರೆದು ಪಾತಾಳದಲ್ಲಿ ಡೈನಮೈಟ್ ಇಟ್ಟು ಶಿಲಾಸ್ತರಗಳಿಂದ ಪೆಟ್ರೋತೈಲ ಜಿನುಗುವಂತೆ ಮಾಡುವ ಮಹಾಧ್ವಂಸದ ‘ಫ್ರಾಕಿಂಗ್’ ತಂತ್ರಜ್ಞಾನಕ್ಕೆ ಈಗ ತಡೆ ಬಿದ್ದಿದೆ. ದೈತ್ಯಯಂತ್ರಗಳು ಈಗ ವಿಶ್ರಮಿಸುತ್ತಿವೆ. ಅದೂ ಒಳ್ಳೆಯದೇ ಹೌದು.ಆದರೆ ತೈಲ ತುಂಬಾ ಅಗ್ಗವಾಗಿರುವುದರಿಂದ ಇನ್ನಷ್ಟು ಮತ್ತಷ್ಟು ವೈಭವದ ಎಸ್‌ಯುವಿ ವಾಹನಗಳ ಮಾರಾಟ ಹೆಚ್ಚಾಗಿದೆ. ವಾಯುಮಂಡಲಕ್ಕೆ ಪೆಟ್ರೋಹೊಗೆ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಏರತೊಡಗಿದೆ. ಅದು ನಷ್ಟದ ಬಾಬು. ಪೆಟ್ರೊಬೆಲೆ ದುಬಾರಿ ಆಗತ್ತಿದೆಯೆಂಬ ಭಯದಲ್ಲಿ ಇದುವರೆಗೆ ವಾಹನ ತಯಾರಕರು ಹೆಚ್ಚು ಹೆಚ್ಚು ದಕ್ಷತೆಯ ಎಂಜಿನ್‌ಗಳನ್ನು ರೂಪಿಸುವ ಪೈಪೋಟಿಯಲ್ಲಿದ್ದರು. ದುಬಾರಿ ವೆಚ್ಚದ ಅಂಥ ಸಂಶೋಧನೆಗಳಿಗೆ ಈಗ ಬ್ರೇಕ್ ಹಾಕಲಾಗುತ್ತಿದೆ. ಅದು ಹಿನ್ನಡೆಯೇ ಹೌದು. ತೈಲಸಂಪನ್ನ ರಾಷ್ಟ್ರಗಳಿಗೆ ಚೀನಾದಿಂದ ಪ್ರವಾಹದಂತೆ ಬರುತ್ತಿದ್ದ ಸುಖ ಸಾಮಗ್ರಿಗಳ ಆಮದು ತೀರ ಕಡಿಮೆಯಾಗಿದೆ. ಚೀನಾದ ಫ್ಯಾಕ್ಟರಿಗಳು ಒಂದೊಂದಾಗಿ ಮುಚ್ಚುತ್ತಿವೆ.ಆಕಾಶಕ್ಕೆ ಮುಸುಕುತ್ತಿದ್ದ ಕರೀಮಸಿಯ ಪ್ರಮಾಣ ತಗ್ಗಿದೆ; ಅಷ್ಟರಮಟ್ಟಿಗೆ ಭೂಮಿಗೆ ಒಳ್ಳೆಯದೇ ಹೌದು. ಭಯೋತ್ಪಾತಕ್ಕೆಂದೇ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಪಡ್ಡೆ ಹುಡುಗರಿಗೆ ಗನ್ ಕೊಟ್ಟು  ಛೂಬಿಡುತ್ತಿರುವವರ ಕಾಟ ತಗ್ಗಿದೆ. ಅದೂ ಒಳ್ಳೆಯದೇ ಆಯಿತು. ಆದರೆ ಪೆಟ್ರೋತೈಲಕ್ಕಿಂತ ಅಗ್ಗದ ದರದಲ್ಲಿ ಗಾಳಿಯಂತ್ರ ಮತ್ತು ಸೌರಫಲಕಗಳಿಂದ ವಿದ್ಯುತ್ ಉತ್ಪಾದಿಸುತ್ತೇವೆಂದು ಹೊರಟ ಸಂಶೋಧಕರಿಗೆ ಹಿನ್ನಡೆ ಉಂಟಾಗಿದೆ. ಸೂರ್ಯನ ಶಕ್ತಿಯಿಂದಲೇ ವಿಮಾನವನ್ನೂ ಓಡಿಸಬಲ್ಲೆ ಎನ್ನುವವರಿಗೆ ಈಗ ತೈಲವೇ ಅಗ್ಗವಾಗಿ ಕಾಣಿಸುತ್ತಿದೆ. ಅದು ಒಳ್ಳೆಯದಲ್ಲ.ಆದರೆ ಹಟಕ್ಕೆ ಬಿದ್ದಂತೆ ಅಗ್ಗದ ತೈಲಕ್ಕಿಂತ ಅಗ್ಗದ ಸೌರಯಂತ್ರಗಳನ್ನು ಕೆಲವರು ಸೃಷ್ಟಿಸಲು ಹೊರಟಿದ್ದಾರೆ. ಅದು ಒಳ್ಳೆಯದು. ಇಂಧನತೈಲಕ್ಕೆಂದೇ ಸಹಸ್ರಾರು ಚದರ ಕಿಲೊಮೀಟರ್ ವಿಸ್ತೀರ್ಣದಲ್ಲಿ ಜೋಳ, ಸೋಯಾ ಬೆಳೆಯುತ್ತಿದ್ದ ಅಮೆರಿಕ, ಲ್ಯಾಟಿನ್ ದೇಶಗಳ ಭೂಮಿಗೆ ಈಗ ವಿರಾಮ ಸಿಕ್ಕಿದೆ. ಅದೂ ಒಳ್ಳೆಯದು. ಆದರೆ ತೈಲದ ಬೆಳೆ ಇಳಿದಿರುವುದರಿಂದ ಕೃಷಿ ಕಂಪನಿಗಳ ನೀರೆತ್ತುವ ಪಂಪ್‌ಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡುತ್ತಿವೆ. ಭೂಗರ್ಭದ ತೈಲ ಬರಿದಾದಂತೆಲ್ಲ ನೀರೂ ಬರಿದಾಗುತ್ತಿದೆ. ಅದು ಸುತರಾಂ ಒಳ್ಳೆಯದಲ್ಲ. ಬ್ರಝಿಲ್, ಮೆಕ್ಸಿಕೊ, ಕೆನಡಾ, ರಷ್ಯಗಳಲ್ಲಿ ಕಂಗಾಲು ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಹಣದುಬ್ಬರ, ಸಾಲದ ಹೊರೆ, ಷೇರುಪೇಟೆ ಕುಸಿತ, ಆಹಾರವಸ್ತುಗಳ ಬೆಲೆಯೇರಿಕೆ, ಅಗತ್ಯಸೇವೆಗಳಲ್ಲಿ ಕಡಿತ, ಪಡಿತರ ಕಡಿತ, ತೆರಿಗೆಹೊರೆ ಎಲ್ಲ ಸಾಲುಗಟ್ಟಿ ಬರುತ್ತಿವೆ. ಪ್ರಜೆಗಳ ಕಷ್ಟ ಹೆಚ್ಚಿದಾಗಲೆಲ್ಲ ಗಡಿಯಾಚೆ ಢಾಂಢೂಂ ಮಾಡುವ ಚಾಳಿ ಇರುವ ಸೊಮಾಲಿಯಾ, ಲಿಬ್ಯಾ, ಸಹೇಲ್, ಯೆಮೆನ್, ಉಕ್ರೇನ್, ರಷ್ಯ ಮುಂತಾದ ರಾಷ್ಟ್ರಗಳು ರಣಕಹಳೆ ಮೊಳಗಿಸಿವೆ. ರಷ್ಯ ಸಿರಿಯಾದತ್ತ ಬಾಂಬರ್‌ಗಳನ್ನು ಹಾರಿಸತೊಡಗಿದೆ. ವೆನೆಝುವೆಲಾ, ಇರಾನ್ ಮುಂತಾದ ದೇಶಗಳು ಅನಿವಾರ್ಯವಾಗಿ ಹಣ ಗಳಿಕೆಗೆಂದು ಇನ್ನಷ್ಟು ತೈಲವನ್ನು ಹೊರ ತೆಗೆಯಲೇಬೇಕಾಗಿದೆ.ಯಾರನ್ನೋ ಶಿಕ್ಷಿಸಲೆಂದು ತೈಲವನ್ನು ಉಕ್ಕಿಸುತ್ತಿರುವ ಸೌದಿ ಅರೇಬಿಯಾ ಈಗ ತನ್ನ ಉತ್ಪಾದನೆಯನ್ನು ತಾನೇ ನಿಯಂತ್ರಿಸಲಾರದ ಸ್ಥಿತಿ ಎದುರಾಗಿದೆ. ತೈಲರಫ್ತು ಮಾಡುವ ರಾಷ್ಟ್ರಗಳ ಒಕ್ಕೂಟದ (ಒಪೆಕ್) ಮುಖ್ಯಸ್ಥ ಎಲ್-ಬಾದ್ರಿ ಸ್ವತಃ ‘ತೈಲ ಉತ್ಪಾದನೆ ನಿಲ್ಲಿಸಲು ಸಹಾಯ ಮಾಡಿ’ ಎಂದು ಇತರ ದೇಶಗಳಿಗೆ ನಿನ್ನೆ ಗೋಗರೆದಿದ್ದಾರೆ. ಸಹಾಯಕ್ಕೆ ಯಾರೂ ಬಾರದಿದ್ದರೆ ಸೌದಿ ಅರೇಬಿಯಾದ ತೈಲವನ್ನೆತ್ತುವ ಪಂಪ್‌ಗಳನ್ನು ನಿಲ್ಲಿಸಲು ಸೈಬರ್ ದಾಳಿ ನಡೆದೀತೆಂಬ ಸೂಚನೆ ಸಿಗುತ್ತದೆ. ತನ್ನೆಲ್ಲ ತೈಲಬಾವಿಗಳನ್ನೂ ಕಂಪ್ಯೂಟರ್ ಚಾಲಿತ ಕೇಂದ್ರೀಯ ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ನಿಯಂತ್ರಿಸುತ್ತಿರುವ ಸೌದಿದೇಶ ಈಗ ಅನೂಹ್ಯ ವೈರಸ್ ದಾಳಿಗೆ ಸಜ್ಜಾಗಬೇಕಿದೆ.ತೈಲ ಮಹಾಪೂರದ ದೂರಗಾಮಿ ಪರಿಣಾಮಗಳನ್ನು ಎದುರಿಸಲು ನಮ್ಮ ವಿಜ್ಞಾನಿಗಳು ಹೇಗೆ ಸಜ್ಜಾಗುತ್ತಿದ್ದಾರೆ? ವ್ಯಂಗ್ಯದ ನಗೆ ಬೀರಬೇಡಿ. ತೈಲವನ್ನು ತುಂಬಿಸಿಕೊಳ್ಳಲು ನಮ್ಮಲ್ಲಿ ಭರದಿಂದ ನೀಲನಕ್ಷೆಗಳು ಸಿದ್ಧವಾಗುತ್ತಿವೆ. ಉಡುಪಿ, ಮಂಗಳೂರು, ವಿಶಾಖಪಟ್ಟಣದ ಭೂಗತ ತೈಲಸರೋವರಗಳು ತುಂಬಿದರೆ ಹೆಚ್ಚೆಂದರೆ ಇಡೀ ದೇಶಕ್ಕೆ 13 ದಿನಗಳಿಗೆ ಸಾಲುವಷ್ಟು ತೈಲ ಜಮಾ ಆಗುತ್ತದೆ. ಒಟ್ಟೂ 90 ದಿನಗಳಿಗೆ ಸಾಲುವಷ್ಟು ದಾಸ್ತಾನು ತೊಟ್ಟಿಗಳನ್ನು ನಿರ್ಮಿಸಲು ರಾಜಸ್ತಾನ, ಗುಜರಾತ, ಒಡಿಶಾಗಳಲ್ಲೂ ಸಿದ್ಧತೆ ನಡೆಯುತ್ತಿದೆ. ಬಾಂಬ್ ಬಿದ್ದರೂ ಧ್ವಂಸವಾಗದಂತೆ ಸಿದ್ಧಗೊಳ್ಳಬೇಕಾದ ಈ ಹಗೇವುಗಳು ಒಂಥರಾ ಎಂಜಿನಿಯರಿಂಗ್ ಸಾಹಸವೇ ಹೌದು.ಆಳದಿಂದ ಕೋಟಿಗಟ್ಟಲೆ ಟನ್ ಮಣ್ಣುಕಲ್ಲನ್ನು ಹೊರಕ್ಕೆ ತೆಗೆದು, ಕಾಂಕ್ರೀಟ್ ತೊಟ್ಟಿ ಕಟ್ಟಬೇಕು. ತುಂಬಿಟ್ಟ ತೈಲ ಜಿನುಗಿ ಹೊರಸೂಸದಂತೆ ಈ ಭೂಗತ ಟ್ಯಾಂಕಿನ ಸುತ್ತ ಅತಿ ಒತ್ತಡದ ನೀರಿನ ಭಿತ್ತಿಯನ್ನು ಸೃಷ್ಟಿಸಬೇಕು. ತೈಲದ ಒತ್ತಡವನ್ನು ತಡೆಯಲೆಂದು ದಪ್ಪದ ಕಾಂಕ್ರೀಟಿನ ಭದ್ರ ಮುಚ್ಚಳವನ್ನು ಹಾಕಬೇಕು. ಯಂತ್ರಗಳಿಗೆ ಕೆಲಸವೋ ಕೆಲಸ. ಬೊಲಿವಿಯಾದಲ್ಲಿ ಸಾವಿರ ಕಿ.ಮೀ. ವಿಸ್ತೀರ್ಣದ ಪೂಪೊ ಸರೋವರ ಪೂರ್ತಿ ಬತ್ತಿತೆಂದು ಮೊನ್ನೆ ವರದಿ ಬಂದಿದೆ. ನಮ್ಮಲ್ಲಿ ನೆಲದೊಳಕ್ಕೆ ತುಂಬಿಡುವ ಪೆಟ್ರೋಲು ಆಚೀಚೆ ಜಿನುಗದಂತೆ ಕಾಪಿಡಲು ಕೂಡ ನೀರೇ ಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.