ಈ ಸೀಸನ್‌ನ ಕೆಲವು ಚಿತ್ರಗಳು

7

ಈ ಸೀಸನ್‌ನ ಕೆಲವು ಚಿತ್ರಗಳು

ಎಸ್.ಆರ್. ರಾಮಕೃಷ್ಣ
Published:
Updated:
ಈ ಸೀಸನ್‌ನ ಕೆಲವು ಚಿತ್ರಗಳು

ಆಬ್ಲಿವಿಯನ್ ಎಂಬ ಹಾಲಿವುಡ್ ಚಿತ್ರ ಮೊನ್ನೆ ನೋಡಿದೆ. ಅಣು ಯುದ್ಧವಾದ ನಂತರ ಪ್ರಪಂಚ ಹೇಗಿರಬಹುದು ಎಂಬ ಊಹೆಯೇ ಈ ಚಿತ್ರಕ್ಕೆ ಸ್ಫೂರ್ತಿ. ಟಾಮ್ ಕ್ರೂಸ್ ಚಿತ್ರದ ನಾಯಕ. ಬದುಕಿ ಉಳಿದುಕೊಂಡ ಕೆಲವೇ ಕೆಲವರು ಅಂತರಿಕ್ಷದಲ್ಲಿ  ನಿರ್ಮಿಸಿಕೊಂಡ ಸ್ಪೇಸ್ ಸ್ಟೇಷನ್‌ನಲ್ಲಿ ಕೂತು ಸುಟ್ಟು ಕರಕಲಾದ ಭೂಮಿಯನ್ನು ನಿಯಂತ್ರಿಸುವ ಭೀಕರ ಕಥೆ ಅದು. ಎಷ್ಟೋ ಕಡೆ ವೀಡಿಯೊ ಗೇಮ್‌ನಂತೆ ಭಾಸವಾಗುವ ಈ ಚಿತ್ರ ಯುವಕರಿಗಿಂತ ಹಿರಿಯರಿಗಾಗಿ ತಯಾರಾದಂತಿದೆ. ಇದರಲ್ಲಿ  ಪ್ರಾಯದ ಉತ್ಸಾಹವಿಲ್ಲ. ಜಗತ್ತನ್ನು ಕಂಡವರು ಅನುಭವಿಸುವ ವಿನಾಶದ ಭಯವೇ ಮೇಲುಗೈ ಪಡೆದಿದೆ.ಹುಲ್ಲೂ ಬೆಳೆಯದಂತೆ ನ್ಯೂಕ್ಲಿಯರ್ ರೇಡಿಯೇಶನ್‌ನಿಂದ ಬರಡಾದ ಭೂಮಿಯಲ್ಲಿ ಒಂದು ಹೂವಿನ ಗಿಡ ಬೆಳೆಯುವ ಆಸೆ ನಾಯಕನಿಗೆ. ಹೇಗೋ ಚಿಗುರೊಡೆದ ಸಸಿಯನ್ನು ತನ್ನ ಗರ್ಲ್ ಫ್ರೆಂಡ್‌ಗೆ ಕೊಟ್ಟಾಗ ಅವಳು ರೇಡಿಯೇಶನ್‌ಗೆ ಬೆದರಿ ಅದನ್ನು ಮತ್ತೆ ಭೂಮಿಗೆ ಎಸೆದುಬಿಡುತ್ತಾಳೆ. ಅಮೆರಿಕನ್ನರಿಗೆ ಪ್ರಪಂಚ ಕೊನೆಗೊಳ್ಳುವುದರ ಬಗ್ಗೆ ಇರುವ ಆತಂಕ ಆಗಾಗ ಉಲ್ಬಣವಾಗುತ್ತಿರುತ್ತದೆ. ಈಗ ಆ ಸೀಸನ್ ಮತ್ತೆ ಜಾರಿಯಲ್ಲಿದೆ.ಕೆಲವು ವಾರದ ಹಿಂದೆ ನಾನು ನೋಡಿದ ಮತ್ತೊಂದು ಚಿತ್ರ ಒಲಿಂಪಸ್ ಹ್ಯಾಸ್ ಫಾಲನ್. ಇದರಲ್ಲಿ ಅಮೆರಿಕನ್ ಅಧ್ಯಕ್ಷ ಮತ್ತು ಇತರರನ್ನು ಕೋರಿಯನ್ ಉಗ್ರರು ಒತ್ತೆಯಾಳಾಗಿ ಮಾಡಿಬಿಡುತ್ತಾರೆ. ಅಮೆರಿಕನ್ ಶಕ್ತಿಯ ಕೇಂದ್ರವಾದ ಶ್ವೇತ ಭವನವನ್ನು ಧ್ವಂಸಗೊಳಿಸಿಬಿಡುತ್ತಾರೆ. ಹೀಗೆ ಯುದ್ಧ ಮತ್ತು ಜಗತ್ತು ಕೊನೆಗೊಳ್ಳುವ ವ್ಯಾಕುಲ ಅಮೆರಿಕನ್ನಿರಿಗಾದರೆ, ಕನ್ನಡ ಚಿತ್ರಗಳು ಕಾಲೇಜ್ ಹುಡುಗರ ತುಂಟತನ ಮತ್ತು ಪೋಲಿ ಮಾತುಗಾರಿಕೆಯನ್ನು ಬಂಡವಾಳವಾಗಿಸಿಕೊಂಡು ಸಾಗುತ್ತಿವೆ.ಈಚೆಗೆ ನಾನು ನೋಡಿದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಮತ್ತು ಪರಾರಿ ಎರಡೂ ಚಿತ್ರ ಯುವಕರನ್ನು ರಂಜಿಸುವ ಒಂದೇ ಉದ್ದೇಶದಿಂದ ತಯಾರಾಗಿವೆ. ಟಿವಿ ವಾಹಿನಿಗಳು ಪ್ರಳಯದ ಭಯ ಹೆಚ್ಚಿಸಿದರೂ, ಪ್ರಳಯವನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಇಲ್ಲಿ ಬಂದಿಲ್ಲ.ಇದನ್ನೆಲ್ಲ ನೋಡಿದರೆ ಒಂದು ತೀರ್ಮಾನಕ್ಕಂತೂ ಬರಬಹುದು. ಅಮೆರಿಕದಲ್ಲಿ ಸಿನಿಮಾ ನೋಡುವವರು ಕೇವಲ ಕಾಲೇಜ್ ಹುಡುಗರಲ್ಲ. ಮಧ್ಯವಯಸ್ಕರು ಮತ್ತು ಹಿರಿಯರು ಕೂಡ ಚಿತ್ರಮಂದಿರಕ್ಕೆ ಹೋಗುತ್ತಾರೆ. ಆದರೆ ಕನ್ನಡದಲ್ಲಿ ಥಿಯೇಟರ್‌ಗೆ ಹೋಗಿ ಸಿನಿಮ ನೋಡುವವರು ಯುವಕರು. ಹಾಗಾಗಿ ಮಾಗಿದ, ಡಾರ್ಕ್ ಎನಿಸುವ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡುವುದು ಇಲ್ಲಿ ಕಷ್ಟ ಎಂದು ತೋರುತ್ತದೆ. 

  

ಸಂಗೀತ ಮತ್ತು ತಂತ್ರಜ್ಞಾನದ ವರ್ಕ್‌ಶಾಪ್

ಐಪ್ಯಾಡ್ ಎಂಬ ಪುಸ್ತಕದ ಗಾತ್ರದ ಕಂಪ್ಯೂಟರ್ ಜನಪ್ರಿಯವಾಗಿದ್ದರೂ ಅದನ್ನು ಬಳಸಿ ಏನೆಲ್ಲಾ ಮಾಡಬಹುದು ಎಂದು ಬಳಕೆದಾರರಿಗೆ ಗೊತ್ತಿರುವುದಿಲ್ಲ. ಇದನ್ನು ತಿಳಿಸಿಕೊಡಲು ಅದರ ತಯಾರಕರು ಆಗಾಗ ಕಾರ್ಯಾಗಾರಗಳನ್ನು ನಡೆಸುತ್ತಿರುತ್ತಾರೆ. ಮೊನ್ನೆ ಶನಿವಾರ ಇಂಥ ಒಂದು ಕಾರ್ಯಾಗಾರಕ್ಕೆ ಹೊಗಿದ್ದೆ. ಕೆವಿನ್ ವಿಲ್ಸನ್ ಎಂಬ ಸಂಗೀತಗಾರ ಇದನ್ನು ನಡೆಸಿಕೊಟ್ಟರು. ಐದು ಜನ ಪಾಲ್ಗೊಂಡ ಈ ಕಾರ್ಯಾಗಾರದಲ್ಲಿ ಒಂದು ಹಾಡನ್ನು ರೆಕಾರ್ಡ್ ಮಾಡಿದರು.ಐ ಪ್ಯಾಡ್‌ಗೆಂದೇ ತಯಾರಿಸಿದ ಒಂದು ಸೂಕ್ಷ್ಮ ಮೈಕ್ ಬಳಸಿ ಕೆವಿನ್ ಹಾಡಿದರು. ಎಲೆಕ್ಟ್ರಿಕ್ ಗಿಟಾರ್ ಮತ್ತು ಬೇಸ್ ಗಿಟಾರ್ ನುಡಿಸಿದರು. ಅಲ್ಲಿ  ಬಂದವರಿಗೆಲ್ಲ ಹಿಂದಿ, ಇಂಗ್ಲಿಷ್ ಪಾಪ್ ಮತ್ತು ರಾಕ್ ಹಾಡುಗಳ ಪರಿಚಯ ಚೆನ್ನಾಗಿತ್ತು. ಕೆವಿನ್ ಇಂಗ್ಲಿಷ್ ಹಾಡುಗಾರ. ಶಾಲೆಯೊಂದರಲ್ಲಿ  ಸಂಗೀತ ಕಲಿಸುತ್ತಾರೆ. ಮೈಕ್ರೋ ಸಾಫ್ಟ್‌ನಲ್ಲಿ ಕೆಲಸ ಬಿಟ್ಟು ಈಗ ಪೂರ್ಣಪ್ರಮಾಣದ ಸಂಗೀತಗಾರ, ಸಂಗೀತದ ಶಿಕ್ಷಕರಾಗಿದ್ದಾರೆ. ಮಕ್ಕಳಿಗೆ ಹಾಡು ಬರೆಯುತ್ತಾರೆ. ಈಚಿನ ಒಂದು ಹಿಂದಿ ಹಾಡನ್ನು ಹಾಡಿದರು, ಪಾಲ್ಗೊಂಡ ಕೆಲವರ ಕೈಯಲ್ಲಿ ಹಾಡಿಸಿದರು.ಸುಮಾರು ಎರಡುವರೆ ಗಂಟೆ ಅವಧಿಯ ಈ ಕಾರ್ಯಾಗಾರ ಉಪಯುಕ್ತವಾಗಿತ್ತು. ಬಂದವರಲ್ಲಿ  ಮೂರು ಜನ ಸಾಫ್ಟ್‌ವೇರ್ ವಲಯದಲ್ಲಿ  ಕೆಲಸ ಮಾಡುವವರು. ಒಬ್ಬರು ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ನಲ್ಲಿರುವವರು. ಹೀಗೆ ಚಿಕ್ಕ ಅವಧಿಯ ವರ್ಕ್‌ಶಾಪ್‌ಗಳು ಬೇರೆ ಬೇರೆ ವಿಷಯದಲ್ಲಿ ನಡೆದರೆ ಬೆಂಗಳೂರಿನ ಜನಕ್ಕೆ ಹೊಸ ವಿಷಯ ಪರಿಚಯ ಮಾಡಿಕೊಳ್ಳಲು ಸಹಾಯವಾಗುವುದರಲ್ಲಿ ಅನುಮಾನವಿಲ್ಲ.ಚರಿತ್ರೆ, ತಂತ್ರಜ್ಞಾನ, ಕಲೆ... ಹೀಗೆ ಬೇರೆ ಬೇರೆ ವಿಷಯದ ಬಗ್ಗೆ ಇರುವ ನಮ್ಮ ಕುತೂಹಲವನ್ನು ತಣಿಸಲು, ಮತ್ತು ಆಸಕ್ತಿಯನ್ನು ಕೆರಳಿಸಲು, ಇಂಥ ಚಿಕ್ಕ ಅವಧಿಯ ವರ್ಕ್‌ಶಾಪ್‌ಗಳು ಉಪಯುಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry