ಶುಕ್ರವಾರ, ಡಿಸೆಂಬರ್ 6, 2019
19 °C

ಉಡಾಫೆಯ, ಅಸಂಬದ್ಧ ಮಾತುಗಳ ಟ್ರಂಪರದಾಟ

ನಾಗೇಶ್ ಹೆಗಡೆ
Published:
Updated:
ಉಡಾಫೆಯ, ಅಸಂಬದ್ಧ ಮಾತುಗಳ ಟ್ರಂಪರದಾಟ

‘ನೆನಪಿಡಿ, ಈ ಪರಿಸರಸ್ನೇಹಿ ವಿದ್ಯುತ್ ಬಲ್ಬ್‌ಗಳು ಕ್ಯಾನ್ಸರ್ ರೋಗವನ್ನು ಹಬ್ಬಿಸಬಹುದು. ಹುಷಾರಾಗಿರಿ. ಇಂಥವನ್ನೆಲ್ಲ ಸಂಶೋಧಿಸಿದ ಮತಿಗೇಡಿಗಳಿಗೆ ತುಸುವೂ ಕಾಳಜಿ ಇಲ್ಲ...’

-ಈ ಮಾತು ಯಾವುದೋ ಬುರುಡೆ ಜ್ಯೋತಿಷಿಯೊಬ್ಬನ ಬಾಯಲ್ಲಿ ಯಾವುದೋ ಟಿವಿ ವಾಹಿನಿಯಲ್ಲಿ ಪ್ರಸಾರ ಆಗಿರಬೇಕು ಎಂದುಕೊಳ್ಳಬೇಡಿ. ಅಮೆರಿಕದ ಅಧ್ಯಕ್ಷ ಪದವಿಗೆ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಹೇಳಿದ ವಾಕ್ಯ ಇದು. ಟ್ರಂಪ್ ಆಡಿದ ಎಡಬಿಡಂಗಿ ಮಾತುಗಳ ಉದ್ದುದ್ದ ಸರಮಾಲೆಗಳೇ ಅಂತರಜಾಲದಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತವೆ ನಿಜ. ಅವುಗಳನ್ನು ಓದಿ ನಕ್ಕು ನಾವು ಮುಂದೆ ಸಾಗಬಹುದು. ತಮಾಷೆಯ ವಿಡಿಯೊ ಗೇಮ್‌ಗಳೂ ಹುಟ್ಟಿಕೊಂಡಿವೆ. ನೇರ ಪ್ರಶ್ನೆಗಳಿಗೆ ಅಸಂಬದ್ಧ ಉತ್ತರ ಕೊಡುತ್ತ ಕುಣಿದಾಡುವ ಬೊಂಬೆಗಳು ಟ್ರಂಪ್ ವೇಷದಲ್ಲಿ ಅಲ್ಲಿ ಪರದೆಯ ಮೇಲೆ ಮೂಡುತ್ತವೆ. ತಪ್ಪು ಉತ್ತರ ಹೇಳಿದವರೇ ಈ ಆಟದಲ್ಲಿ ಗೆಲ್ಲುತ್ತಾರೆ.ಅವೆಲ್ಲ ಎದುರಾಳಿ ಪಕ್ಷದ ಗಿಮ್ಮಿಕ್ಕುಗಳೆಂದು ಕಡೆಗಣಿಸಬಹುದು. ಆದರೆ ವಿಜ್ಞಾನದ ವಿಷಯದಲ್ಲಿ ಟ್ರಂಪ್ ಮಹಾಶಯನ ಸಡಿಲ ನಾಲಗೆ ನಿಜಕ್ಕೂ ವಿಜ್ಞಾನಿಗಳನ್ನು ಕಂಗೆಡಿಸಿದೆ. ಅಮೆರಿಕದ ಬಹಳಷ್ಟು ಸಂಶೋಧನ ಸಂಸ್ಥೆಗಳು ಈ ವ್ಯಕ್ತಿಯ ಹುಂಬತನವನ್ನು ಗಂಭೀರವಾಗಿ ಪರಿಗಣಿಸುತ್ತಿವೆ. ಅಧ್ಯಕ್ಷರಾಗಬೇಕಾದವರ ಅಜ್ಞಾನ ಭಂಡಾರವನ್ನು ಕೆದಕಿ ಕೆದಕಿ ‘ಸೈಂಟಿಫಿಕ್ ಅಮೆರಿಕನ್’ ಎಂಬ ಗಂಭೀರ ವಿಜ್ಞಾನ ಪತ್ರಿಕೆ ಟ್ರಂಪ್ ಮಾತುಗಳ ಸರಮಾಲೆಯನ್ನೇ ಜೋಡಿಸಿದೆ. ಕೆಲವು ಸ್ಯಾಂಪಲ್‌ಗಳು ಇಲ್ಲಿವೆ:

‘ಹವಾಗುಣ ಬದಲಾವಣೆ ಎಂಬ ಪರಿಕಲ್ಪನೆಯನ್ನು ಚೀನೀಯರು ಜಗತ್ತಿಗೆಲ್ಲ ಹರಿಬಿಟ್ಟಿದ್ದಾರೆ. ಅಮೆರಿಕದ ಕಾರ್ಖಾನೆಗಳನ್ನು ಸೋಲಿಸುವುದೇ ಅವರ ಉದ್ದೇಶ’.

‘ಜಾಗತಿಕ ತಾಪಮಾನ ಏರಿಕೆಯೆಂಬ ಭಾರೀ ದುಬಾರಿಯ ಹೋರಿ ಲದ್ದಿಯನ್ನು ದೂರ ಎಸೆಯಬೇಕು. ಇಡೀ ಭೂಗ್ರಹವೇ ಚಳಿಯಲ್ಲಿ ನಡುಗುತ್ತಿದೆ. ನಮ್ಮ ಜಾ.ತಾ. ತಜ್ಞರು ಹಿಮದ ರಾಶಿಯಲ್ಲಿ ಸಿಲುಕಿದ್ದಾರೆ...’

‘ಮಕ್ಕಳಿಗೆ ಲಸಿಕೆ ಹಾಕಿಸಲು ಹೋಗುವ ಪಾಲಕರನ್ನು ನಾನು ನೋಡಿದ್ದೇನೆ. ಲಸಿಕೆ ಹಾಕಿಸುತ್ತಾರೆ. ಮುಂದಿನ ತಿಂಗಳಲ್ಲಿ ಮಗು ಕಾಯಿಲೆ ಬೀಳುತ್ತದೆ...’

ಪಟ್ಟಿ ಸಾಕಷ್ಟು ಉದ್ದವಿದೆ. ವಿಜ್ಞಾನದ ಬಗೆಗಿನ ತಾತ್ಸಾರವಷ್ಟೇ ಅಲ್ಲ, ಟ್ರಂಪ್ ಮಾತುಗಳಲ್ಲಿ ಅಪ್ಪಟ ಖಳನಾಯಕನ ಅಬ್ಬರವೂ ಇದೆ. ಉದಾಹರಣೆಗೆ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಎಬೊಲಾ ರೋಗದ ಪರೀಕ್ಷೆಗೆಂದು ಹೋಗಿರುವ ಕೆಲವು ವೈದ್ಯತಜ್ಞರು ತಾವೇ ಆ ರೋಗಕ್ಕೆ ಸಿಲುಕಿ ತತ್ತರಿಸಿದ್ದಾರೆ. ಅವರ ಬಗ್ಗೆ ಟ್ರಂಪ್ ಆಡುವ ಮಾತು ಹೇಗಿದೆ ಗೊತ್ತೆ? ‘ಎಬೊಲಾ ಸೋಂಕು ತಗುಲಿದ ಜನರನ್ನು ಮತ್ತೆ ತಾಯ್ನಾಡಿಗೆ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ. ದೂರದ ದೇಶಕ್ಕೆ ಸೇವೆಗೆಂದು ಹೋಗುವುದು ಒಳ್ಳೆಯದೆ. ಆದರೆ ಅದರ ದುಷ್ಪರಿಣಾಮಗಳನ್ನು ಅವರೇ ಅನುಭವಿಸಬೇಕು’.

ರಾಜಕಾರಣಿಗಳು ವಿಜ್ಞಾನ ತಂತ್ರಜ್ಞಾನದ ವಿಷಯದಲ್ಲಿ ಪರಿಣತಿ ಪಡೆದಿರಬೇಕೆಂದು ಯಾರೂ ನಿರೀಕ್ಷೆ ಮಾಡುವುದಿಲ್ಲ. ಅವರಿಗೆ ಕಾಲಕಾಲಕ್ಕೆ ಸಲಹೆ ನೀಡಲು ಪರಿಣತರ ತಂಡವೇ ಇರುತ್ತದೆ. ಆದರೆ ಅಧ್ಯಕ್ಷ ಪದವಿಗೆ ಸ್ಪರ್ಧಿಸಿದ ವ್ಯಕ್ತಿಗೆ ಒಬ್ಬ ಹೈಸ್ಕೂಲ್ ಓದಿದ ವಿದ್ಯಾರ್ಥಿಗೆ ಇರುವಷ್ಟು ಜ್ಞಾನವಾದರೂ ಇರಬೇಕು ತಾನೆ? ಜ್ಞಾನ ಇಲ್ಲದಿದ್ದರೆ ಹೋಗಲಿ, ತನ್ನ ಸುತ್ತಮುತ್ತಲಿನ ವಾಸ್ತವ ಜಗತ್ತಿನಲ್ಲಿ ಏನಾಗುತ್ತಿದೆ ಅನ್ನುವುದರ ಅಷ್ಟಿಷ್ಟು ಪರಿಜ್ಞಾನವಾದರೂ ಇರಬೇಕು. ಎಬೊಲಾ ವಿಷಯದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳ ವಿಷಯದಲ್ಲಿ ಅಷ್ಟೇನೂ ಗೊತ್ತಿರಲಿಕ್ಕಿಲ್ಲ ಅನ್ನೋಣ. ಆದರೆ ತಾಪಮಾನ ಏರುಪೇರಿನಂಥ ನಿತ್ಯದ ವಾಸ್ತವಗಳೂ ತನಗೆ ತಟ್ಟಿಲ್ಲ ಎಂದರೆ? ‘ಜಾಗತಿಕ ತಾಪಮಾನ ಅಳೆಯಲು ಹೋದ ತಜ್ಞರು ಹಿಮದ ರಾಶಿಯಲ್ಲಿ ಸಿಲುಕಿದ್ದಾರೆ’ ಎನ್ನುತ್ತ ತನ್ನ ಅಜ್ಞಾನವನ್ನು ಘಂಟಾಘೋಷ ಜಾಹೀರು ಮಾಡಿದಂತಾಗುತ್ತದೆ. ಧ್ರುವ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಿಮಗಡ್ಡೆಗಳು ಕರಗುತ್ತಿವೆ. ಅದನ್ನು ಅಳೆಯಲು ಹೋದವರು ಸಹಜವಾಗಿ ಹಿಮದ ರಾಶಿಯಲ್ಲಿ ನಿಂತಿರುತ್ತಾರೆ.

ಅದೂ ಅಲ್ಲದೆ, ತಾಪಮಾನ ಏರಿಕೆ ಎಂದರೆ ಇಡೀ ಜಗತ್ತಿನಲ್ಲಿ ಎಲ್ಲೆಡೆ ಸೆಕೆ ಸೆಕೆ ಹೆಚ್ಚಬೇಕೆಂದೇನಿಲ್ಲ. ಧ್ರುವ ಪ್ರದೇಶದ ಕರಗಿದ ಕಣಿವೆಗಳಿಂದ ಹೊರಟ ಶೀತಗಾಳಿ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಘೋರ ಚಳಿಯ ವಾತಾವರಣವನ್ನೇ ಸೃಷ್ಟಿಸುತ್ತಿದೆ. ಸೆಕೆ, ಚಳಿ, ಮಳೆ, ಗಾಳಿ ಎಲ್ಲವೂ ಸಹನೀಯ ಮಟ್ಟಕ್ಕಿಂತ ಅನಿರೀಕ್ಷಿತವಾಗಿ ಏರುಪೇರು ಆಗುತ್ತ ಹೋಗುತ್ತದೆ ಎಂದು ವಿಜ್ಞಾನಿಗಳು ಪದೇ ಪದೇ ಹೇಳುತ್ತ ಬಂದಿದ್ದಾರೆ. ಅದು ನಿಜವಾಗುತ್ತಿದೆ ಎಂಬುದು ದಿನನಿತ್ಯದ ವಿದ್ಯಮಾನಗಳನ್ನು ನೋಡಿದ ಯಾರಿಗಾದರೂ ಅರಿವಿಗೆ ಬರುತ್ತದೆ. ಜಗತ್ತಿನ ಅತ್ಯಂತ ಬಲಿಷ್ಠ ದೇಶದ ಅಧ್ಯಕ್ಷ ಪದವಿಗೆ ಏರಲು ಹೊರಟ ವ್ಯಕ್ತಿಗೆ ಅದು ಗೊತ್ತಾಗುತ್ತಿಲ್ಲ ಎಂದರೆ?

ಅದು ಅಂತಾರಾಷ್ಟ್ರೀಯ ರಂಗದಲ್ಲಿ ಈಗಾಗಲೇ ಗಾಬರಿ ಹುಟ್ಟಿಸಿದೆ. ಅಮೆರಿಕದ ತೈಲ ಕಂಪನಿಗಳ ಮುಷ್ಟಿಗೆ ಸಿಲುಕಿರುವ ಟ್ರಂಪ್ ತಾಪಮಾನ ಏರಿಕೆಯನ್ನು ನಿರಾಕರಿಸುತ್ತಿರುವುದು ಅನೇಕ ಚಿಂತಕರ ಪಾಲಿಗೆ ಚಿಂತೆಯ ವಿಷಯವಾಗಿದೆ. ಇಪ್ಪತ್ತು ವರ್ಷಗಳ ಸತತ ಯತ್ನದಿಂದ ಕೊನೆಗೂ ತಾಪಮಾನ ತಗ್ಗಿಸುವ ‘ಪ್ಯಾರಿಸ್ ಒಪ್ಪಂದ’ಕ್ಕೆ ಒಬಾಮ ಸಹಿ ಹಾಕಿರುವಾಗ ಈಗ ಟ್ರಂಪ್ ಮತ್ತೆ ಅಮೆರಿಕವನ್ನು ಇನ್ನಷ್ಟು ಬಲಪಡಿಸುವ ನೆಪದಲ್ಲಿ ತೈಲೋದ್ಯಮಿಗಳ ತಾಳಕ್ಕೆ ಕುಣಿಯಲು ಹೊರಟಿದ್ದು ವಿಜ್ಞಾನಿಗಳನ್ನೂ ಕಂಗೆಡಿಸಿದೆ. ಚೀನಾ ಸ್ವತಃ ಅಮೆರಿಕವನ್ನೂ ಮೀರಿಸಿದ ಪ್ರಮಾಣದಲ್ಲಿ ಕಲ್ಲಿದ್ದಲ ಕಾರ್ಬನ್ನನ್ನು ವಾತಾವರಣಕ್ಕೆ ತೂರಿಸುತ್ತ ಬಂದರೂ ಕಳೆದ ಎರಡು ವರ್ಷಗಳಿಂದ ಬದಲೀ ತಂತ್ರಜ್ಞಾನಕ್ಕೆ ಬಂಡವಾಳ ಹೂಡುತ್ತಿದೆ. ಅದೂ ಈಗ ಟ್ರಂಪ್‌ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಒಪ್ಪಂದವನ್ನು ನಿರಾಕರಿಸಿದರೆ ಪೃಥ್ವಿಗೆ ಭಾರೀ ದೊಡ್ಡ ಕಂಟಕ ಬಂದೀತು ಎಂದು ಹೇಳಿದೆ.

ಬಂದೀತು ಏನು, ಕಂಟಕ ಆಗಲೇ ಬಂದಿದೆ ಎಂಬುದಕ್ಕೆ ಅಮೆರಿಕದ್ದೇ ‘ನಾಸಾ’ದಂಥ ಪ್ರಖ್ಯಾತ ಸಂಸ್ಥೆಗಳು ಸಾಕ್ಷ್ಯಗಳನ್ನು ದಿನವೂ ತೋರಿಸುತ್ತಿವೆ. ಚಂಡಮಾರುತಗಳು ಪದೇ ಪದೇ ಅಮೆರಿಕದ ಕರಾವಳಿಗಳನ್ನು ಅಪ್ಪಳಿಸುತ್ತಿವೆ. ಅವುಗಳ ತೀವ್ರತೆ ಕೂಡ ಹೆಚ್ಚುತ್ತಿದೆ. ನದಿ ಕೆರೆಗಳು ಬತ್ತುತ್ತಿವೆ; ಬರಗಾಲದ ತೀವ್ರತೆ ಹೆಚ್ಚುತ್ತಿದೆ. ಅರಣ್ಯ ಇದ್ದಲ್ಲೆಲ್ಲ ಕಾಡಿನ ಬೆಂಕಿಯ ಉಪಟಳ ಹೆಚ್ಚುತ್ತಿದೆ. ಇಂಥ ನೈಸರ್ಗಿಕ ಸಂಕಟಗಳು ಹೆಚ್ಚುತ್ತಿರುವುದರಿಂದಲೇ ಸಾಮಾಜಿಕ ತ್ವೇಷಗಳೂ ಹೆಚ್ಚುತ್ತಿವೆ ಎಂಬುದನ್ನು ಅಂಕಿಸಂಖ್ಯೆಗಳ ಮೂಲಕ ಪ್ರತಿಪಾದಿಸಲಾಗುತ್ತಿದೆ. ನಿರಾಶ್ರಿತರ ಕ್ಲೇಶ, ಯುದ್ಧ ತೀವ್ರತೆ, ಭಯೋತ್ಪಾತ ಎಲ್ಲಕ್ಕೂ ಭೂಮಿಯ ಒಟ್ಟಾರೆ ಸಮತೋಲ ಬಿಗಡಾಯಿಸಿದ್ದೇ ಕಾರಣವೆಂದು ಹೇಳಲಾಗುತ್ತಿದೆ. ‘ನಾಸಾ’ ವಿಶ್ಲೇಷಣೆಯ ಪ್ರಕಾರ ಭೂಮಧ್ಯಸಾಗರದ ಪೂರ್ವಕ್ಕಿರುವ ‘ಲೆವೆಂಟ್’ ದೇಶಗಳಲ್ಲಿ ಕಳೆದ 900 ವರ್ಷಗಳ ದಾಖಲೆಯನ್ನು ಮೀರಿಸಿ ಬರಗಾಲ ಆವರಿಸುತ್ತಿದೆ (ಸೈಪ್ರಸ್, ಈಜಿಪ್ಟ್, ಇಸ್ರೇಲ್, ಇರಾಕ್, ಜೋರ್ಡನ್, ಸಿರಿಯಾ, ಲೆಬನಾನ್, ಟರ್ಕಿ ದೇಶಗಳನ್ನು ಒಟ್ಟಾಗಿ ‘ಲೆವೆಂಟ್’ ದೇಶಗಳು ಎನ್ನುತ್ತಾರೆ).

ಬರಗಾಲಕ್ಕೂ ಈ ದೇಶಗಳ ಆಂತರಿಕ ಸ್ಥಿತ್ಯಂತರಗಳಿಗೂ ಸಂಬಂಧ ಇದೆಯೇ ಎಂದು ಸ್ಟಾಕ್‌ಹೋಮ್‌ನ ಶಾಂತಿ ಸಂಶೋಧನಾ ಸಂಸ್ಥೆಯ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಜರ್ಮನಿಯ ಹ್ಯಾಂಬರ್ಗ್ ವಿವಿಯ ಭೂಗೋಲ ವಿಭಾಗದ ಸಂಶೋಧಕ ಪ್ರೊ. ಯೂರ್ಗೆನ್ ಶೆಫ್ರಾನ್ ಮತ್ತು ಸಂಗಡಿಗರು 27  ಘಟನೆಗಳನ್ನು ಕೂಲಂಕಷ ಪರೀಕ್ಷಿಸಿ ಅವುಗಳಲ್ಲಿ 16 ಸಂದರ್ಭಗಳು ಯುದ್ಧ ಮತ್ತು ಹವಾಮಾನ ಬದಲಾವಣೆಯ ನಡುವಣ ಸಂಬಂಧಗಳನ್ನು ಖಚಿತವಾಗಿ ತೋರಿಸುತ್ತಿವೆ ಎಂದಿದ್ದಾರೆ. ಆಫ್ರಿಕಾ ಖಂಡದ ಉತ್ತರ ಭಾಗ ಮತ್ತು ಲೆವೆಂಟ್ ದೇಶಗಳು ತಾಪಮಾನ ಏರಿಕೆಯಿಂದ ತತ್ತರಿಸುತ್ತಿದ್ದು, ಜನರು ಬದುಕಲು ಬೇರೆ ದಾರಿ ಇಲ್ಲದೆ ನಗರಗಳ ಅಂಚಿಗೆ ತಂಡೋಪತಂಡ ವಲಸೆ ಬರುತ್ತಾರೆ. ಉದ್ಯೋಗಕ್ಕೆ ಪರದಾಡುವ ಕೊಳೆಗೇರಿ ಕುಟುಂಬಗಳಿಗೆ ಅಷ್ಟಿಷ್ಟು ಆಹಾರ ಕೊಟ್ಟು ಯುವಕರ ಕೈಗೆ ಬಂದೂಕನ್ನು ಕೊಟ್ಟರೆ ಜನಾಂಗೀಯ ಕಿಚ್ಚಿನ ಕಿಡಿ ತಂತಾನೇ ಹೊತ್ತಿಕೊಳ್ಳುತ್ತದೆ.

ಬರ-ನೆರೆಗಳಿಂದಾಗಿ ಆಹಾರ ಉತ್ಪಾದನೆ ಕೂಡ ಅನಿಶ್ಚಿತ ಎನ್ನಿಸುವ ಸ್ಥಿತಿ ಮುಂದುವರೆದರೆ ಎರಡು ಮೂರು ದಶಕಗಳಲ್ಲಿ ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿ ಆಂತರಿಕ ಕ್ಷೋಭೆ ಹೆಚ್ಚುತ್ತದೆ. ನೆಲಮೂಲದ ಜನರು ನೀರಿಗಾಗಿ, ತುತ್ತು ಅನ್ನಕ್ಕಾಗಿ, ಆಸರೆಗಾಗಿ ಗುಳೆ ಎದ್ದು ಹೊರಟರೆ, ಅನುಕೂಲಸ್ಥ ಜನರು ಏರ್ ಕಂಡೀಶನರ್‌ಗಾಗಿ, ಸ್ಪೀಡ್ ಬೋಟ್‌ಗಳಿಗಾಗಿ, ಆಸ್ತಿ ರಕ್ಷಣೆಗಾಗಿ, ಆತ್ಮರಕ್ಷಣೆಯ ರೈಫಲ್‌ಗಳಿಗಾಗಿ ಕಾನೂನುಗಳನ್ನು ಧಿಕ್ಕರಿಸತೊಡಗುತ್ತಾರೆ. ಪ್ರಜಾಪ್ರಭುತ್ವ ಎಂಬುದು ಹಂತಹಂತವಾಗಿ ಅರ್ಥಹೀನವಾಗುತ್ತ ಹೋದಾಗ ಕ್ರಮೇಣ ಸರ್ವಾಧಿಕಾರಿಗಳೇ ದೇಶದ ಚುಕ್ಕಾಣಿ ಹಿಡಿದು ಮಿಲಿಟರಿಯನ್ನು, ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ.

ಅಂಥ ವ್ಯಕ್ತಿಯ ಲಕ್ಷಣಗಳನ್ನೆಲ್ಲ ಟ್ರಂಪ್ ಮಹಾಶಯನಲ್ಲಿ ಈಗಲೇ ನೋಡಬಹುದು ಎನ್ನುತ್ತಾರೆ, ‘ದಿ ಅಟ್ಲಾಂಟಿಕ್’ ಪತ್ರಿಕೆಯ ತಂತ್ರಜ್ಞಾನ ಮತ್ತು ಜಾಗತಿಕ ತಾಪಮಾನ ವಿಶ್ಲೇಷಕ ರಾಬಿನ್ಸನ್ ಮೆಯರ್. ದೂರದ ಭವಿಷ್ಯ ಈಗ ಕಾಲ ಬುಡಕ್ಕೇ ಬಂದಂತಿದೆ ಎನ್ನುವ ಅವರು ಡೊನಾಲ್ಡ್ ಟ್ರಂಪ್‌ರನ್ನು ಅಮೆರಿಕದ ನಾಳಿನ ಕರಾಳ ದಿನಗಳ ಪ್ರತಿನಿಧಿ ಎಂಬಂತೆ ಚಿತ್ರಿಸುತ್ತಾರೆ. ನಾಳಿನ ರಾಷ್ಟ್ರನಾಯಕನ ಗುಣಗಳೆಂದರೆ ಬಿಳಿಯರೇ ಅಸಲೀ ಪ್ರಜೆಗಳೆಂದು ಬಿಂಬಿಸಿ ಅವರಲ್ಲಿ ಅತಿಯಾದ ರಾಷ್ಟ್ರಭಕ್ತಿಯನ್ನು ಬಿತ್ತುವುದು, ವಲಸೆ ಬಂದವರನ್ನು ದ್ವೇಷಿಸುವುದು; ಜಗತ್ತು ಹೇಗೂ ಇರಲಿ ತಾನು ಈ ದೇಶದ ಗೋಡೆಯನ್ನು ಎತ್ತರಕ್ಕೇರಿಸಿ ಇನ್ನೂ ಬಲಿಷ್ಠ ಮಾಡುತ್ತೇನೆ ಎನ್ನುವುದು, ಕೇಳಿದವರಿಗೆಲ್ಲ ಬಂದೂಕು ಸಿಗುವಂತೆ ಮಾಡುವುದು- ಇವೆಲ್ಲವೂ ಬಿಸಿಯುಗದ ನಾಯಕನ ಲಕ್ಷಣಗಳೆಂದು ಮೆಯರ್ ಪಟ್ಟಿ ಮಾಡುತ್ತಾರೆ.

ವಿಜ್ಞಾನ ತಂತ್ರಜ್ಞಾನದಲ್ಲಿ ಅಮೆರಿಕ ಅದೆಷ್ಟೇ ಮುಂದಿದೆ ಎಂದರೂ ಅಲ್ಲೂ ನಮ್ಮಲ್ಲಿರುವ ಹಾಗೆ ವಾಸ್ತವ ಜಗತ್ತಿನ ಕುರಿತು ಅಪಾರ ಅಜ್ಞಾನ, ಧಾರ್ಮಿಕ ಅಂಧ ವಿಶ್ವಾಸ, ಜನಾಂಗೀಯ ದ್ವೇಷ, ವಿಜ್ಞಾನದ ಬಗ್ಗೆ ಅಪನಂಬಿಕೆ ತುಂಬಿರುವ ಪ್ರಜೆಗಳ ಸಂಖ್ಯೆ ಸಾಕಷ್ಟು ದೊಡ್ಡದೇ ಇದೆ. ಅಲ್ಲಿನ ಅನೇಕರಿಗೆ ಈಗಲೂ ಡಾರ್ವಿನ್‌ನ ವಿಕಾಸವಾದದಲ್ಲಿ ನಂಬಿಕೆ ಇಲ್ಲ. ಬೈಬಲ್‌ನಲ್ಲಿ ಹೇಳಿದ್ದೇ ಸತ್ಯ ಎನ್ನುತ್ತಾರೆ. ತಮ್ಮ ಮಿಲಿಟರಿ ಬಲದ ಬಗ್ಗೆ ಅತೀವ ಹೆಮ್ಮೆ, ಜಗತ್ತಿನ ಇತರ ರಾಷ್ಟ್ರಗಳ ಬಗ್ಗೆ ತಾತ್ಸಾರ, ತಮ್ಮ ರಾಷ್ಟ್ರದ ಸ್ಥಾನಮಾನದ ಬಗ್ಗೆ ಅತಿ ಅಭಿಮಾನ ಇವೆಲ್ಲ ಸಾಕಷ್ಟಿವೆ. ಅಂಥವರಿಗೆ ಟ್ರಂಪ್ ಮಾದರಿಯಾಗಿ ಕಾಣುತ್ತಾರೆ.

ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ಇವರಿಬ್ಬರಲ್ಲಿ ಯಾರಲ್ಲಿ ವೈಜ್ಞಾನಿಕ ದೃಷ್ಟಿಕೋನ ಎಷ್ಟೆಷ್ಟಿದೆ ಎಂಬುದನ್ನು ಹೋಲಿಸಿ ನೋಡಲೆಂದೇ ಸೈನ್ಸ್ ಡಿಬೇಟ್ (science debate. org) ಎಂಬ ಜಾಲತಾಣ ಕೂಡ ಇದೆ. ನೀರು, ಆಹಾರ ಭದ್ರತೆ, ವಿಜ್ಞಾನ ಸಂಶೋಧನೆ, ಶಕ್ತಿಮೂಲಗಳು, ಜೀವಿ ವೈವಿಧ್ಯ, ಆರೋಗ್ಯ ರಕ್ಷಣೆ, ಅಂತರಜಾಲ, ಬಾಹ್ಯಾಕಾಶ, ವಲಸೆ, ರೋಗನಿಯಂತ್ರಣ ಇವೇ ಮುಂತಾದ, ಅಮೆರಿಕ ಹಾಗೂ ಇಡೀ ಜಗತ್ತಿಗೆ ಪ್ರಮುಖವೆನಿಸುವ ಇಪ್ಪತ್ತು ಪ್ರಶ್ನೆಗಳನ್ನು ಈ ಇಬ್ಬರಿಗೂ ಕೊಟ್ಟು ಯಾರು ಎಂಥ ಉತ್ತರ ನೀಡಿದ್ದಾರೆ ಎಂಬುದನ್ನು ಇಲ್ಲಿ ದಾಖಲಿಸಲಾಗಿದೆ. ಹಿಲರಿ ಕ್ಲಿಂಟನ್ ಪ್ರತಿ ಪ್ರಶ್ನೆಗೂ ಗಂಭೀರವಾಗಿ, ನಿಖರ ಮಾಹಿತಿ ಹಾಗೂ ಅಂಕಿಸಂಖ್ಯೆಗಳ ಆಧಾರದೊಂದಿಗೆ ನೇರ ಉತ್ತರ ನೀಡಿದರೆ ಟ್ರಂಪ್ ಮಾತ್ರ ಪ್ರತಿ ಪ್ರಶ್ನೆಗೂ ಪರದಾಡಿದ್ದಾರೆ. ಅಲ್ಲಲ್ಲಿ ಉಡಾಫೆಯ, ಹಲವು ಸಂದರ್ಭಗಳಲ್ಲಿ ನಗೆಪಾಟಲು ಎನ್ನಿಸುವಂಥ ಅಸಂಬದ್ಧ ಉತ್ತರಗಳನ್ನು ನೀಡಿದ್ದಾರೆ.

‘ವಿಜ್ಞಾನಕ್ಕೂ ಸತ್ಯಾಂಶಕ್ಕೂ ಸಂಬಂಧವಿಲ್ಲ’ (‘ಸೈನ್ಸ್ ಈಸ್ ಸೈನ್ಸ್, ಫ್ಯಾಕ್ಟ್ಸ್ ಆರ್ ಫ್ಯಾಕ್ಟ್ಸ್’) ಎಂದು ಘೋಷಿಸಿದವರು ಈ ಟ್ರಂಪ್ ಭೂಪತಿ. ಅಧಿಕಾರದ ಗದ್ದುಗೆ ಏರಿದ್ದೇ ಆದರೆ ಜಗತ್ತಿನ ಪರಿಸ್ಥಿತಿ ಹೇಗೂ ಇರಲಿ, ಇವರು ಅಲ್ಲಿದ್ದಷ್ಟು ದಿನ ಇಡೀ ವಿಜ್ಞಾನ ಜಗತ್ತಿಗೆ ಆಗಾಗ ಒಂದಿಷ್ಟು ಮಸಾಲೆ ತಮಾಷೆಗಳು ಸಿಗುವುದಂತೂ ಖಂಡಿತ.

ಪ್ರತಿಕ್ರಿಯಿಸಿ (+)