ಶನಿವಾರ, ಡಿಸೆಂಬರ್ 7, 2019
25 °C

ಉತ್ತರಪ್ರದೇಶದ ಫಲಿತಾಂಶ ಮತ್ತು ಕರ್ನಾಟಕ

ನಾರಾಯಣ ಎ
Published:
Updated:
ಉತ್ತರಪ್ರದೇಶದ ಫಲಿತಾಂಶ ಮತ್ತು ಕರ್ನಾಟಕ

ಚುನಾವಣೆಯ ಸೋಲು ಗೆಲುವುಗಳು ಯಾವತ್ತೂ ಸಾರುವುದು ಆ ಕ್ಷಣದ ಸತ್ಯವನ್ನು. ಅದರಲ್ಲಿ ಸಾರ್ವಕಾಲಿಕವಾದದ್ದು ಅಂತ ಏನೂ ಇರುವುದಿಲ್ಲ. ರಾಜಕೀಯ ಪಕ್ಷವೊಂದು ಚುನಾವಣೆಯಲ್ಲಿ ಯಾಕೆ ಗೆದ್ದಿತು ಅಥವಾ ಸೋತಿತು ಎನ್ನುವುದಕ್ಕೆ ಫಲಿತಾಂಶ ಪ್ರಕಟವಾದ ನಂತರ ಪುಂಖಾನುಪುಂಖವಾಗಿ ಕಾರಣಗಳನ್ನು ನೀಡುತ್ತಾ ಹೋಗಬಹುದು.ಪರಿಸ್ಥಿತಿಯನ್ನು ಅಷ್ಟೊಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು ಎಂದಾಗಿದ್ದರೆ ಫಲಿತಾಂಶ ತಿಳಿಯುವುದಕ್ಕೆ ಮೊದಲೇ ಇಂತಹ ಕಾರಣಗಳು ಇಂತಹ ಪಕ್ಷಗಳನ್ನು ಗೆಲ್ಲಿಸುತ್ತವೆ, ಇಂತಹ ಪಕ್ಷಗಳನ್ನು ಸೋಲಿಸುತ್ತವೆ ಎನ್ನುವುದನ್ನು ಸಾರಿಬಿಡಬಹುದಲ್ಲವೇ?ಹಾಗೆ ಯಾವತ್ತೂ ಆಗುವುದಿಲ್ಲ. ಯಾಕೆಂದರೆ ಚುನಾವಣೆಯ ಫಲಿತಾಂಶವನ್ನು ಏನು ನಿರ್ಧರಿಸುತ್ತದೆ ಎನ್ನುವ ಸತ್ಯ ಯಾರಿಗೂ ತಿಳಿದಿಲ್ಲ. ನಾವು ಏನಿದ್ದರೂ ನಮಗೆ ತಿಳಿದ ಸತ್ಯವನ್ನು ಫಲಿತಾಂಶ ಹೊರಬಿದ್ದ ಮೇಲೆ ಅದರ ಮೇಲೆ ಹೇರಿ ಕಥೆ ಕಟ್ಟುತ್ತೇವೆ.ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಉತ್ತರಪ್ರದೇಶ ಮತ್ತು ಉತ್ತರಪ್ರದೇಶದ ವಿಸ್ತೃತ ಭಾಗದಂತಿರುವ ರಾಜ್ಯವಾದ ಉತ್ತರಾಖಂಡದ ಮತದಾರರು ಬಿಜೆಪಿಯನ್ನು ಅಭೂತಪೂರ್ವ ರೀತಿಯಲ್ಲಿ ಗೆಲ್ಲಿಸಿದ್ದಾರೆ. ಬಿಜೆಪಿಯ ಈ ಯಶಸ್ಸಿಗೆ ಕಾರಣವಾದ ಅಂಶಗಳನ್ನು ಈಗ ಪಟ್ಟಿ ಮಾಡಲಾಗುತ್ತಿದೆ.ಈ ಅಂಶಗಳು ಹಿಂದೆ ಬಿಹಾರದಲ್ಲಿ ಯಾಕೆ ಇದೇ ಫಲಿತಾಂಶವನ್ನು ತರಲಿಲ್ಲ? ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಜತೆ ಚುನಾವಣೆ ಎದುರಿಸಿದ ಇತರ ಮೂರು ರಾಜ್ಯಗಳಲ್ಲಿ ಅವುಗಳು ಯಾಕೆ ಕೆಲಸಕ್ಕೆ ಬರಲಿಲ್ಲ ಎನ್ನುವುದು ಕೂಡಾ ಪ್ರಮುಖವಾದ ವಿಚಾರವೇ ಆಗಿದೆ.ಈಗ ಹಿನ್ನೋಟ ಹರಿಸಿ ‘ಉಳಿದೆಡೆ ಪರಿಸ್ಥಿತಿ ಬೇರೆ ಇತ್ತು’ ಎಂದುಬಿಡಬಹುದು. ಅಂದರೆ ಒಂದೊಂದು ಪರಿಸ್ಥಿತಿಯಲ್ಲಿ ಒಂದೊಂದು ತಂತ್ರ ಕೆಲಸ ಮಾಡುತ್ತದೆ ಎಂದಾಯಿತು. ಯಾವ ಪರಿಸ್ಥಿತಿಯಲ್ಲಿ ಯಾವ ತಂತ್ರ ಅಳವಡಿಸಬೇಕು ಎನ್ನುವುದು ಮಾತ್ರ ಯಾರಿಗೂ ಒಲಿಯದ ಮಂತ್ರ. ಉತ್ತರಪ್ರದೇಶದ ಫಲಿತಾಂಶದ ಆಧಾರದ ಮೇಲೆ ಕರ್ನಾಟದಲ್ಲಿ ಏನಾಗಬಹುದು ಎನ್ನುವ ಲೆಕ್ಕಾಚಾರ ಪ್ರಾರಂಭವಾಗಿದೆ.  ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ದೊಡ್ಡ ರೀತಿಯಲ್ಲಿ ಪವಾಡ ನಡೆಸಿದೆ; ಕರ್ನಾಟಕದಲ್ಲೂ ಅದೇ ಆಗಲಿದೆ ಎನ್ನುವ ವರಸೆಯಲ್ಲಿ ಸಾಗುವ ಈ ವರದಿಗಳ ಪ್ರಕಾರ ಉತ್ತರಪ್ರದೇಶದಲ್ಲಿ ಹೂಡಿದಂತೆ ಇಲ್ಲೂ  ತಂತ್ರ ಹೂಡಿ ಬಿಜೆಪಿ 2018ರಲ್ಲಿ ದಕ್ಷಿಣದ ಹೆಬ್ಬಾಗಿಲು ಮತ್ತೊಮ್ಮೆ ತನಗೆ ತೆರೆದುಕೊಳ್ಳುವಂತೆ ಮಾಡಲಿದೆ.  ಕೆಲವು ವರದಿಗಳಂತೂ ಚುನಾವಣಾ ಪ್ರಕ್ರಿಯೆ ಕೇವಲ ನಿಮಿತ್ತ ಮಾತ್ರ; ಕರ್ನಾಟಕದಲ್ಲಿ ಎಲ್ಲವೂ ನಿರ್ಣಯವಾಗಿಯೇ ಹೋಯಿತು ಎನ್ನುವ ಧಾಟಿಯಲ್ಲಿವೆ.ದಕ್ಷಿಣದಲ್ಲಿ ತನಗೆ ನೆಲೆ ಇರುವ ಏಕೈಕ ರಾಜ್ಯವಾದ ಕರ್ನಾಟಕವನ್ನು ಬಿಜೆಪಿ ಮತ್ತೊಮ್ಮೆ ತೆಕ್ಕೆಗೆ ತೆಗೆದುಕೊಳ್ಳಲು ಸರ್ವ ಪ್ರಯತ್ನವನ್ನೂ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಆ ಪ್ರಯತ್ನಗಳು ಈಗಾಗಲೇ ಪ್ರಾರಂಭವಾಗಿವೆ ಕೂಡಾ. ಆದರೆ ಕರ್ನಾಟಕದಲ್ಲಿ ಏನಾಗಬಹುದು ಎನ್ನುವುದಕ್ಕೆ ಕೇವಲ ಉತ್ತರಪ್ರದೇಶದ ಫಲಿತಾಂಶವೇ ದಿಕ್ಸೂಚಿಯೇ? ಸ್ವಲ್ಪ ಆಳಕ್ಕಿಳಿದು ಅರ್ಥ ಮಾಡಿಕೊಂಡರೆ ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳು ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬೇರೆ ಬೇರೆ ರೀತಿಯಲ್ಲಿ ಸಮಾಧಾನ ಪಟ್ಟುಕೊಳ್ಳಬಹುದು.ಉತ್ತರಪ್ರದೇಶದಲ್ಲಿ ಮೋದಿಯವರ ನಾಯಕತ್ವದ ತಾರಕಮಂತ್ರ ಅದ್ಭುತ ಯಶಸ್ಸು ಸಾಧಿಸಿದ ಕಾರಣ ಕರ್ನಾಟಕದಲ್ಲೂ ಅದಕ್ಕೆ ಮಾವಿನ ಕಾಯಿ ಉದುರಿಯೇ ಉದುರುತ್ತದೆ ಎನ್ನುವ ಭರವಸೆ ಬಿಜೆಪಿಯವರಿಗೆ ಬಂದಿದೆ. ಅದು ಸಹಜ. ಆದರೆ ಉತ್ತರಪ್ರದೇಶದಲ್ಲಿ ಆದದ್ದೇ ಕರ್ನಾಟಕದಲ್ಲಿ ಯಾಕೆ ಆಗಬೇಕು? ಪಂಜಾಬ್‌ನಲ್ಲಿ ಆದದ್ದು ಯಾಕೆ ಆಗಬಾರದು ಎಂದು ಕಾಂಗ್ರೆಸ್ ಕೇಳಬಹುದು.ಉತ್ತರಪ್ರದೇಶದಲ್ಲಿ ಬಿಜೆಪಿ ಗಳಿಸಿದಷ್ಟೇ ಭರ್ಜರಿ ಜಯ ಪಂಜಾಬ್‌ನಲ್ಲಿ ಕಾಂಗ್ರೆಸ್ ದಾಖಲಿಸಿದೆ. ಆ ಪಕ್ಷದ ರಾಷ್ಟ್ರೀಯ ಮಟ್ಟದಲ್ಲಿ ಕಂಡ ಕುಸಿತದಿಂದ ಈ ಜಯ ಅದನ್ನು ಮೇಲೆತ್ತದೆ ಹೋದರೂ  ‘ಕಾಂಗ್ರೆಸ್‌ಮುಕ್ತ ಭಾರತ’ ಬಿಜೆಪಿ ಅಂದುಕೊಂಡಷ್ಟು ಸುಲಭ ಅಲ್ಲ ಎಂದು ಪಂಜಾಬ್ ಫಲಿತಾಂಶ  ತೋರಿಸಿಕೊಟ್ಟಿದೆ.ಪಂಜಾಬ್‌ನಲ್ಲಿ ಆಡಳಿತ ವಿರೋಧಿ ಅಲೆ ಕಾಂಗ್ರೆಸ್ಸಿಗೆ ನೆರವಾಯಿತು, ಕರ್ನಾಟಕದಲ್ಲಿ ಅದೇ ಅಲೆ ಆಳುವ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿ ಬಿಜೆಪಿಗೆ ನೆರವಾಗಬಾರದೇಕೆ ಎಂಬ ಪ್ರಶ್ನೆಗೆ ಉತ್ತರವಾಗಿ ಕಾಂಗ್ರೆಸ್ ಮಣಿಪುರದತ್ತ ನೋಡಬಹುದು. ಅಲ್ಲಿ ಮೂರು ಅವಧಿಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿಗೆ ಸಲೀಸಾಗಿ ಕಿತ್ತೊಗೆಯಲು ಸಾಧ್ಯವಾಗಲಿಲ್ಲ.  ಕಾಂಗ್ರೆಸ್ ಆ ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕರ್ನಾಟಕದಲ್ಲೂ ಹೀಗೇನಾದರೂ ಆಗಬಾರದೇಕೆ ಎನ್ನುವ ಪ್ರಶ್ನೆ ಕೂಡಾ ಕಾಂಗ್ರೆಸ್ಸಿಗೆ ಸಮಾಧಾನ ತರುವಂತಹದ್ದು.ಒಂದೆಡೆ ಉತ್ತರಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಎರಡೂ ನೆಲಕಚ್ಚಿದ್ದು, ಇನ್ನೊಂದೆಡೆ ಆಮ್ ಆದ್ಮಿ ಪಾರ್ಟಿ ಪಂಜಾಬ್ ಮತ್ತು ಗೋವಾಗಳಲ್ಲಿ ನಿರೀಕ್ಷಿತ ಯಶಸ್ಸು ಗಳಿಸದೆ  ಹೋದದ್ದು ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಪರ್ವ ಮುಗಿಯುತ್ತಿರುವ ಮುನ್ಸೂಚನೆ ಎಂಬಂತೆ ಒಂದು ಅಭಿಪ್ರಾಯ ಹುಟ್ಟಿಕೊಂಡಿದೆ. ಹೀಗಾಗಿ ಕರ್ನಾಟಕದಲ್ಲಿ ಜೆಡಿಎಸ್‌ ಬಗ್ಗೆ ವಿಶೇಷ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತೊಡಗಿದರೆ ಅದಕ್ಕೆ ಉತ್ತರ ನೀಡಲು ಬೇಕಾದ ಸರಕನ್ನು ಜೆಡಿಎಸ್‌ ಈ ಫಲಿತಾಂಶಗಳಲ್ಲೇ ಹುಡುಕಬಹುದು.ಹೇಳಿ ಕೇಳಿ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷವನ್ನು ಮತ್ತು ಈ ಹಿಂದೆ ಅಧಿಕಾರದಲ್ಲಿದ್ದ ಬಹುಜನ ಸಮಾಜ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಬಹಳ ಹಿಂದೆ ಆ ರಾಜ್ಯದಲ್ಲಿ ಅಧಿಕಾರ ನಡೆಸಿ ಹೋಗಿದ್ದ ಬಿಜೆಪಿಯ ಕೈ ಹಿಡಿದಿದ್ದಾರೆ. ಜನರ ಮನಸ್ಸಲ್ಲಿ ಎಸ್‌ಪಿಯ ಒಳಜಗಳ ಎಷ್ಟು ಹಸಿರಾಗಿತ್ತೋ, ಬಿಎಸ್‌ಪಿಯ ಆಡಳಿತ ವೈಫಲ್ಯಗಳೂ ಅಷ್ಟೇ ಹಸಿಯಾಗಿ ಉಳಿದಿದ್ದವು.ಅದೇ ತರ್ಕವನ್ನು ಕರ್ನಾಟಕಕ್ಕೆ ಅನ್ವಯಿಸಿದರೆ ಪ್ರಸಕ್ತ ಕಾಂಗ್ರೆಸ್ ಸರ್ಕಾರದ ಬಗೆಗಿನ  ಭ್ರಮನಿರಸನ ಜನರ ಕಣ್ಣೆದುರಿನಲ್ಲಿರುವಂತೆ, ಹಿಂದಿನ ಬಿಜೆಪಿ ಅವಧಿಯ ಭ್ರಷ್ಟಾಚಾರ, ನಿರಂತರ ಒಳಜಗಳ ಮತ್ತು ಕುಂಠಿತ ಅಭಿವೃದ್ಧಿಯೂ ಅವರ ನೆನಪಲ್ಲಿರಬಹುದು ಎಂದು ವಾದಿಸಬಹುದು. ಮತ್ತು ಈ ಕಾರಣಕ್ಕಾಗಿಯೇ ಉತ್ತರಪ್ರದೇಶದಲ್ಲಿ ಜನ ಹಿಂದಿನ ಎರಡೂ ಅವಧಿಗಳಲ್ಲಿ ಅಧಿಕಾರ ನಡೆಸಿದ ಪಕ್ಷಗಳನ್ನು ತಿರಸ್ಕರಿಸಿದಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ತಿರಸ್ಕರಿಸಿ ಜೆಡಿಎಸ್‌ ಕೈಹಿಡಿಯಬಹುದು ಎಂದು ಆ ಪಕ್ಷ ಭಾವಿಸಿದರೆ ಅದು ತರ್ಕಬದ್ಧವಾಗಿಯೇ ಇದೆ.ಜೆಡಿಎಸ್‌ ಇಂದಿರುವ ಸ್ಥಿತಿಯಲ್ಲಿ ಅಧಿಕಾರಕ್ಕೆ ಬಾರದೆ ಹೋದರೂ ಬಿಜೆಪಿ ಮತ್ತು ಕಾಂಗ್ರೆಸ್ ಎರಡರ ಲೆಕ್ಕಾಚಾರ ತಲೆಕೆಳಗೆ ಮಾಡುವಷ್ಟಾದರೂ ಜನಬೆಂಬಲ ತನಗೆ ಸಿಗಬಹುದು ಎನ್ನುವ ನಿರೀಕ್ಷೆಯನ್ನು ಉತ್ತರದ ರಾಜ್ಯಗಳ ಫಲಿತಾಂಶದ ಆಧಾರದಲ್ಲಿ  ಇಟ್ಟುಕೊಂಡರೆ  ಅದರಲ್ಲಿ ಅಸಹಜವಾದದ್ದು ಏನೂ ಇಲ್ಲ.ಇನ್ನು ಬಿಜೆಪಿಗೆ ಉತ್ತರಪ್ರದೇಶದ ಸೂತ್ರವನ್ನು ಕರ್ನಾಟಕದಲ್ಲಿ ಸಾರಾಸಗಟಾಗಿ ಅಳವಡಿಸಿಕೊಳ್ಳಲು ಹಲವು ಮಿತಿಗಳಿವೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅಭಿವೃದ್ಧಿಯ ಕನಸನ್ನು ಮಾರಿದಷ್ಟು ಸಲೀಸಾಗಿ ಕರ್ನಾಟಕದಲ್ಲಿ ಮಾರಲು ಬರುವುದಿಲ್ಲ. ಅಭಿವೃದ್ಧಿಯ ವಿಚಾರದ ಜತೆಗೆ ಇಲ್ಲಿ ತಳಕು ಹಾಕಿಕೊಂಡಿರುವ ಕಾವೇರಿ, ಮಹಾದಾಯಿ ವಿವಾದಗಳಲ್ಲಿ ಬಿಜೆಪಿ ಕರ್ನಾಟಕದ ಜನರಿಗೆ ಉತ್ತರಿಸುವುದು ಸಾಕಷ್ಟಿದೆ.ಉತ್ತರಪ್ರದೇಶದಲ್ಲಿ ಅದು ಭ್ರಷ್ಟಾಚಾರಮುಕ್ತ ಆಡಳಿತದ ಭರವಸೆ ನೀಡಿ ಜನರನ್ನು ನಂಬಿಸಿದಷ್ಟು ಸುಲಭವಾಗಿ ಕರ್ನಾಟಕದಲ್ಲಿ ಅದನ್ನು ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಭ್ರಷ್ಟಾಚಾರದ ವಿಷಯದಲ್ಲಿ ಕರ್ನಾಟಕದ ಬಿಜೆಪಿಯ ಚರಿತ್ರೆ, ಕಾಂಗ್ರೆಸ್ಸಿನ ಭ್ರಷ್ಟಾಚಾರದ ಚರಿತ್ರೆಯಷ್ಟೇ ಭೀಕರವಾಗಿದೆ. ಜನ ಹಿಂದಿನಷ್ಟು ಸುಲಭವಾಗಿ ಹಳೆಯದನ್ನೆಲ್ಲಾ ಈಗ ಮರೆಯುವುದಿಲ್ಲ.ಉತ್ತರಪ್ರದೇಶದಲ್ಲಿ  ಸ್ಥಳೀಯವಾಗಿ ಇದ್ದದ್ದು ಹೊಸ ಮುಖಗಳು. ಪಕ್ಷ ಯಾವುದೇ ಇರಲಿ ಹೊಸ ಮುಖಗಳು ಮತದಾರರಲ್ಲಿ ಹೊಸ ಭರವಸೆ ಹುಟ್ಟಿಸುತ್ತವೆ. ಕರ್ನಾಟಕದ ಬಿಜೆಪಿ ಈ ತನಕ ಜನರ ಮುಂದಿರಿಸಿರುವುದು ಅವೇ ಹಳೆಯ ಮುಖಗಳನ್ನು. ಇವುಗಳಲ್ಲಿ ಕೆಲವು ಮುಖಗಳು ನೂರಾರು ಕರಾಳ ನೆನಪುಗಳನ್ನು ಒಮ್ಮಿಂದೊಮ್ಮೆಲೆ ಮತದಾರರ ಮನಸ್ಸಿನಲ್ಲಿ ಹುಟ್ಟುಹಾಕಬಲ್ಲಂತಹವು.ಚುನಾವಣೆ  ಗೆಲ್ಲಲು ಈ ಮುಖಗಳಿಗೆ ಮೋದಿಯವರ ಮುಖವಾಡ ತೊಡಿಸಬಹುದು. ಮೋದಿಅವರ ವಾಯ್ಸ್ ಓವರ್ ನೀಡಬಹುದು. ಆದರೆ ಚುನಾವಣೆ ನಡೆದ ಮೇಲೆ ಆಡಳಿತ ನಡೆಸಲು ಮೋದಿಯವರು ಬರುವುದಿಲ್ಲ. ಅಮಿತ್ ಷಾ ಬರುವುದಿಲ್ಲ. ಆಗ ಮುಖವಾಡ ಕಳಚಿ, ವಾಯ್ಸ್ ಓವರ್ ವಯರ್ ಬಿಚ್ಚಿ ತಮ್ಮದೇ ಮುಖ, ತಮ್ಮದೇ ಮುದ್ರೆಯೊಂದಿಗೆ ರಾಜ್ಯದ ಹಳೆ ಮುಖಗಳೇ ಮತ್ತೆ  ಆಡಳಿತ ನಡೆಸಬೇಕು.

ಅದು ಕಳೆದ ನಾಲ್ಕು ವರ್ಷಗಳ ಕಾಂಗ್ರೆಸ್ ಆಡಳಿತಕ್ಕಿಂತ, ಅದಕ್ಕಿಂತ ಹಿಂದಿನ  ಐದು ವರ್ಷಗಳ ಮೋದಿಪೂರ್ವ ಬಿಜೆಪಿ ಆಡಳಿತಕ್ಕಿಂತ ಎಷ್ಟು ಭಿನ್ನವಾಗಿರಲು ಸಾಧ್ಯ ಎಂದು ಆ ಪಕ್ಷದಲ್ಲಿ ಈಗ ನಡೆಯುವ ವಿದ್ಯಮಾನಗಳನ್ನು ನೋಡಿದ ಯಾರಾದರೂ ಊಹಿಸಬಹುದು.ಉತ್ತರಪ್ರದೇಶದ ಫಲಿತಾಂಶ ಕರ್ನಾಟಕದ ಬಿಜೆಪಿಯ ಕುರಿತಾಗಿ ದೊಡ್ಡ ಮಟ್ಟದ ಭರವಸೆಯೊಂದನ್ನು ಹುಟ್ಟು ಹಾಕಿದ ಕಾರಣ ಬೇರೆ ಬೇರೆ ಪಕ್ಷಗಳ ಅತೃಪ್ತ ಆತ್ಮಗಳೆಲ್ಲಾ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆ ಪಕ್ಷಕ್ಕೆ ವಲಸೆ ಬರಬಹುದು. ಏನೋ ಹಳಸಿತ್ತು, ಏನಕ್ಕೋ  ಹಸಿದಿತ್ತು ಎನ್ನುವ ಗಾದೆಯಂತೆ ತನ್ನತ್ತ ಬರುವವರನ್ನೆಲ್ಲ ಬಿಜೆಪಿ ಮುಕ್ತವಾಗಿ ಸ್ವೀಕರಿಸಬಹುದು ಕೂಡಾ.

ಆದರೆ ಕರ್ನಾಟಕದಲ್ಲಿ ಬಿಜೆಪಿಯ ಚರಿತ್ರೆಯತ್ತ ಒಂದು ನೋಟ ಹರಿಸಿದರೆ 1994ರಲ್ಲಿ ಪ್ರಧಾನ ಪ್ರತಿಪಕ್ಷವಾಗಿ ಹೊರಹೊಮ್ಮಿದಂದಿನಿಂದ ತೊಡಗಿ 2008–2013ರ ಅವಧಿಯಲ್ಲಿ ಸ್ವತಂತ್ರವಾಗಿ ಅಧಿಕಾರ ನಡೆಸುವವರೆಗೆ ಅದು ಅನುಭವಿಸಿದ ಸಂಕಟಗಳಿಗೆಲ್ಲಾ ಕಾರಣ ಅದರತ್ತ ಹರಿದು ಬಂದ ವಲಸಿಗರು. ಆ ಪಕ್ಷ ಎದ್ದದ್ದು ಮತ್ತು ಬಿದ್ದದ್ದು ವಲಸಿಗರಿಂದ. ಈಗ ಮತ್ತೊಮ್ಮೆ ಎಲ್ಲವೂ ಪುನರಾವರ್ತನೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.ಈವರೆಗಿನ ಚುನಾವಣೆಗಳಲ್ಲಿ ಮೋದಿಯವರ ಬಿಜೆಪಿ, ಕಾಂಗ್ರೆಸ್ ವಿರುದ್ಧ ಗೆಲ್ಲುತ್ತದೆ, ಪ್ರಬಲ ಪ್ರಾದೇಶಿಕ ಪಕ್ಷಗಳಿದ್ದಲ್ಲಿ ಸೋಲುತ್ತದೆ ಎನ್ನುವ ಅಂಶ ಸಾಬೀತಾಗಿತ್ತು. ಇದಕ್ಕೆ ಸ್ವಲ್ಪಮಟ್ಟಿನ  ಅಪವಾದ ಎಂಬಂತೆ ಉತ್ತರಪ್ರದೇಶದ ಫಲಿತಾಂಶ ಬಂದಿದೆ. ಅಲ್ಲಿ ಎರಡು ಪ್ರಾದೇಶಿಕ ಪಕ್ಷಗಳನ್ನು ಮಣಿಸಿ ಅದು ಗೆದ್ದಿದೆ.

ಇದಕ್ಕಿಂತಲೂ ಮುಖ್ಯವಾಗಿ ಈ ಚುನಾವಣೆಯಲ್ಲಿ ಸಾಬೀತಾಗಿದ್ದು ಏನು ಎಂದರೆ ಪ್ರಾದೇಶಿಕವಾಗಿ ಸ್ವಲ್ಪಮಟ್ಟಿಗೆ ಎದೆ ತಟ್ಟಿ ನಿಲ್ಲಬಲ್ಲ ನಾಯಕನೊಬ್ಬ ಕಾಂಗ್ರೆಸ್ಸಿನೊಳಗೆ ಇದ್ದರೂ ಮೋದಿಯವರ ಬಿಜೆಪಿಯ ಓಟ ಅಷ್ಟು ಸರಾಗವಾಗಿ ಸಾಗಲಾರದು ಎನ್ನುವುದು. ಅದಕ್ಕೆ ಪಂಜಾಬ್, ಗೋವಾ, ಮಣಿಪುರದ ಫಲಿತಾಂಶಗಳು ಬೇರೆ ಬೇರೆ ರೀತಿಯಲ್ಲಿ ಸಾಕ್ಷ್ಯ ನುಡಿಯುತ್ತವೆ.ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ಸಿನಿಂದಾಗಲೀ, ಇತರ ಪಕ್ಷಗಳಿಂದಾಗಲೀ ಭರವಸೆ ಹುಟ್ಟಿಸುವ, ಗಟ್ಟಿಗುಂಡಿಗೆಯ, ಸ್ವತಂತ್ರ ಯೋಚನೆಯ ಮತ್ತು ಜನರ ವಿಶ್ವಾಸ ಕಳೆದುಕೊಳ್ಳದ ನಾಯಕನೊಬ್ಬ ಈಗಲಾದರೂ ಎದ್ದು ನಿಲ್ಲುವಂತಾದರೆ ಉತ್ತರಪ್ರದೇಶದ ಯಶಸ್ವೀ ಪ್ರಯೋಗವನ್ನು ಕರ್ನಾಟಕದಲ್ಲಿ ಪುನರಾವರ್ತಿಸುವ ಬಿಜೆಪಿಯ ಯೋಜನೆಗೆ ದೊಡ್ಡ ಮಟ್ಟಿನ ಹಿನ್ನಡೆಯಾಗಬಹುದು.ಉತ್ತರಪ್ರದೇಶದ ಚುನಾವಣೆಗೆ ಮುನ್ನ ಸರ್ಜಿಕಲ್ ದಾಳಿ ಆಯಿತು, ನೋಟು ರದ್ದತಿ ನಡೆಯಿತು- ಇವೆಲ್ಲ ಜನಮನವನ್ನು ನೇರವಾಗಿ ಮೋದಿಯವರ ಪರ ವಾಲಿಸಿದ ಜಾಣ ರಾಜಕೀಯ ನಿರ್ಧಾರಗಳು. ಎಲ್ಲವೂ ಒಬ್ಬ ನಾಯಕನ ಮೂಲಕ ನಡೆಯುವಾಗ ನಾಯಕನನ್ನು ನಾಯಕನಾಗಿ ಜನಮನದಲ್ಲಿ ಉಳಿಸಿಕೊಳ್ಳಲು ಇಂತಹವನ್ನೆಲ್ಲಾ ಆಯಕಟ್ಟಿನ ಸಮಯ ನೋಡಿ ನಡೆಸುತ್ತಿರಬೇಕಾಗುತ್ತದೆ.ಈ ನಿರ್ಧಾರಗಳಿಂದಾಗಿ ಕೆಲವೊಮ್ಮೆ ಸಾರ್ವಜನಿಕ ಹಿತದ ಸಾಧನೆಯೂ ಆಗಬಹುದು. ಬಿಜೆಪಿ, ಉತ್ತರಪ್ರದೇಶದಷ್ಟೇ ಕರ್ನಾಟಕವನ್ನೂ ಗಂಭೀರವಾಗಿ ತೆಗೆದುಕೊಂಡರೆ ಇನ್ನೂ ಯಾವ ದೊಡ್ಡ ನಿರ್ಣಯ ಹೊರಬೀಳಬಹುದು ಎನ್ನುವುದು ಚುನಾವಣಾಪೂರ್ವದ ಕುತೂಹಲ.

ರಾಜಕೀಯವನ್ನು ರಂಗುರಂಗಾಗಿಸುವುದು ಇಂಥ ತಂತ್ರಗಾರಿಕೆಗಳು. ಈಗಾಗಲೇ ಆದಾಯ ತೆರಿಗೆ ದಾಳಿ, ಡೈರಿ ಬಹಿರಂಗ ಇತ್ಯಾದಿಗಳ ಮೂಲಕ ಪೂರ್ವರಂಗ ಪ್ರಾರಂಭವಾಗಿದೆ.

ಪ್ರತಿಕ್ರಿಯಿಸಿ (+)