ಉತ್ಸಾಹದ ನಟನೆ

7

ಉತ್ಸಾಹದ ನಟನೆ

ಗುರುರಾಜ ಕರ್ಜಗಿ
Published:
Updated:

ಅಮೆರಿಕೆಯ ಬಹುದೊಡ್ಡ ವಿಮಾ ಕಂಪನಿಯ ಅಧ್ಯಕ್ಷರಾಗಿದ್ದ ಫ್ರಾಂಕ್  ಬೆಟ್‌ಗೇರ್ ಅತ್ಯಂತ ಯಶಸ್ಸನ್ನು ಕಂಡವರು. ಅವರೊಂದು ಪುಸ್ತಕದಲ್ಲಿ ತಮ್ಮನ್ನು ಸೋಲಿನಿಂದ ಗೆಲುವಿನೆಡೆಗೆ ತಾವೇ ಹೇಗೆ ಏರಿಸಿಕೊಂಡರು ಎಂಬುದನ್ನು ಬರೆದಿದ್ದಾರೆ.  ತಾರುಣ್ಯ­ದಲ್ಲಿ ಫ್ರಾಂಕ್‌ಗೆ ಬೇಸ್‌ಬಾಲ್ ಆಟದಲ್ಲಿ ಆಸಕ್ತಿ. ಒಂದು ಸಣ್ಣ ತಂಡವನ್ನು ಸೇರಿ ಆಡತೊಡಗಿದ. ಆತ ಸರಿಯಾಗಿ ಆಡುತ್ತಿದ್ದರೂ ತಂಡದ ಪ್ರಮುಖ ಆಟಗಾರನೆಂದು ಗುರುತಿಸಿಕೊಳ್ಳಲಿಲ್ಲ.

ಒಂದು ದಿನ ಕ್ಲಬ್‌ನ ಮ್ಯಾನೇಜರ್‌ ಈತನನ್ನು ಕರೆದು, ನೀನು ಹತ್ತು ವರ್ಷ ಆಡಿದರೂ ಮೇಲೇರುವುದು ಸಾಧ್ಯವಿಲ್ಲ. ನಿನಗೆ ದುಡ್ಡು ಕೊಡುವುದು ದಂಡ ಎಂದು ಹೇಳಿ ತಂಡದಿಂದ ಹೊರಗೆ ಕಳಿಸಿಬಿಟ್ಟರು. ಈತ ಮತ್ತೊಂದು ತಂಡ ಸೇರಿದ. ಅಲ್ಲಿಯೂ ಅದೇ ಹಣೆಬರಹ. ಅಲ್ಲಿಯ ಮ್ಯಾನೇಜರ್‌ ಕೇಳಿದರು, ‘ಫ್ರಾಂಕ್ ನಿನಗೆ ಈ ಆಟದಲ್ಲಿ ಆಸಕ್ತಿ ಇಲ್ಲದಿದ್ದರೆ ಯಾಕೆ ಆಡುತ್ತೀ? ಬೇರೆ ಯಾವುದಾದರೂ ಕೆಲಸ ಮಾಡಬಾರದೇ’ ಫ್ರಾಂಕ್ ಯೋಚಿಸಿದ.

ತಾನು ಆಡುವುದೇನೋ ನಿಜ. ಆದರೆ ಉಳಿದ ತರುಣರಂತೆ ಅತ್ಯುತ್ಸಾಹವಿಲ್ಲ. ಈ ಉತ್ಸಾಹವನ್ನೇನು ಅಂಗಡಿಯಲ್ಲಿ ಕೊಂಡುಕೊಂಡು ಬರಲಾಗುತ್ತದೆಯೇ? ಒಂದು ದಿನ ಒಬ್ಬ ಪ್ರಸಿದ್ಧ ಕೋಚ್‌ನನ್ನು ಭೆಟ್ಟಿಯಾಗಿ ತನ್ನ ಕಷ್ಟವನ್ನೂ ಹೇಳಿಕೊಂಡ. ಆಗ ಕೋಚ್ ವಿಶೇಷ ಸಲಹೆ ನೀಡಿದ, ‘ಫ್ರಾಂಕ್, ನೀನು ಆಟದಲ್ಲಿಯೇ ಹೆಸರು ಮಾಡಬೇಕೆಂದರೆ ನಿನಗೆ ಉತ್ಸಾಹವಾದರೂ ಇರಬೇಕು ಇಲ್ಲವೇ ಉತ್ಸಾಹವಿದ್ದಂತೆ ನಟಿಸಬೇಕು’.

ಫ್ರಾಂಕ್ ಕೇಳಿದ, ‘ಉತ್ಸಾಹವಿದ್ದಂತೆ ನಟಿಸಿದರೇನು ಫಲ? ನಿಜವಾದ ಉತ್ಸಾಹ ಬರುವುದು ಹೇಗೆ?’ ಕೋಚ್ ಹೇಳಿದ, ‘ನಿನಗೆ ನಿಜವಾದ ಉತ್ಸಾಹವಿಲ್ಲದಿದ್ದರೂ ಒಂದು ಆಟದಲ್ಲಿ ತುಂಬ ಉತ್ಸಾಹ ತುಂಬಿದಂತೆ ಮಾಡು. ಚೆಂಡನ್ನು ನಿನ್ನ ಶಕ್ತಿ ಹಾಕಿ ಅಟ್ಟಿಸಿಕೊಂಡು ಹೋಗು. ನೀನು ಬ್ಯಾಟ್ ಮಾಡುವಾಗ ಉಸಿರು ಬಿಗಿಹಿಡಿದು ಇಡೀ ನಿನ್ನ ಭವಿಷ್ಯ ಅದರ ಮೇಲೆಯೇ ನಿಂತಿದೆ ಎಂಬಂತೆ ಮಿಂಚಿನಂತೆ ಬೀಸು. ಅದೆಲ್ಲ ನಟನೆ ಎನ್ನಿಸಿದರೂ ಸರಿಯಾಗಿ ನಟನೆ ಮಾಡು. ಮುಂದೆ ನೋಡು ಆಗುವುದನ್ನು’.

ಮುಂದಿನ ಭಾನುವಾರದ ಆಟದಲ್ಲಿ ಈ ಪ್ರಯತ್ನವನ್ನೂ ಮಾಡಿನೋಡೋಣ ಎಂದು ಒಂದು ಕ್ಷಣವೂ ನಿಂತಲ್ಲಿ ನಿಲ್ಲದೇ ಚೆಂಡಿನ ಬೆನ್ನು ಬಿದ್ದ, ಹಾರಿ ಹಿಡಿದ, ಜಿಂಕೆಯಂತೆ ಓಡಿದ, ಹುಲಿಯಂತೆ ಗರ್ಜಿಸಿದ. ಪ್ರತಿಕ್ಷಣ ಚಪ್ಪಾಳೆ ತಟ್ಟಿ ಎಲ್ಲರನ್ನೂ ಪ್ರೋತ್ಸಾಹಿಸಿದ. ಇವನ ತಂಡ ಜಯಗಳಿಸಿತು. ಮರುದಿನ ಪತ್ರಿಕೆಗಳಲ್ಲಿ ಇವನ ವಿಷಯವೇ ಬಂದಿತ್ತು.

ಯಾರು ಈ ಫ್ರಾಂಕ್? ಇಷ್ಟು ದಿನ ಈ ಪ್ರತಿಭೆ ಎಲ್ಲಿ ಅಡಗಿತ್ತು? ಫ್ರಾಂಕ್ ಒಬ್ಬ ಡೈನಮೋ ಇದ್ದ ಹಾಗೆ. ಅವನೊಬ್ಬನೇ ಸಾಕು ತಂಡ ಜಯಗಳಿಸಲು. ಈ ಹೊಗಳಿಕೆಯನ್ನು ಓದಿ ಫ್ರಾಂಕ್‌ನಿಗೆ ಆಶ್ಚರ್ಯವಾಯಿತು. ತನ್ನ ನಟನೆ ಇಷ್ಟೊಂದು ಹೆಸರು ನೀಡಿತೇ ಎಂದು ಬೆರಗಾಯಿತು. ಮುಂದಿನ ಆಟದಲ್ಲಿ ಇವನ ಆಟ ನೋಡಲೆಂದೇ ಸಾಕಷ್ಟು ಜನ ಬಂದಿದ್ದರು.

ಇವನಿಗೆ ತನ್ನೆಲ್ಲ ಪ್ರಯತ್ನಗಳ್ನು ಹಾಕದೇ ಇರುವುದೇ ಅಸಾಧ್ಯವಾಯಿತು. ಜನರ ನಿರೀಕ್ಷೆಗೆ ತಕ್ಕಂತೆ ಚಾಂಪಿಯನ್‌ನಂತೆಯೇ ಆಡಿದ. ಮರುವರ್ಷ ಆತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ. ನಂತರ ಎರಡು ವರ್ಷಗಳ ನಂತರ ಆಟವನ್ನು ಬಿಟ್ಟು ವಿಮೆ ಕೆಲಸಕ್ಕೆ ಸೇರಿಕೊಂಡ. ಆದರೆ ಪ್ರತಿಯೊಂದನ್ನೂ ಉತ್ಸಾಹದಿಂದಲೇ ಮಾಡುವ ಅಭ್ಯಾಸ ಬೆಳೆದುಬಿಟ್ಟಿತ್ತು. ಅಂತೆಯೇ ಕೆಲವರ್ಷದಲ್ಲಿ ಕಂಪನಿಯ ಅಧ್ಯಕ್ಷನಾದ.

ನಿಮಗೆ ಯಾವುದೇ ಕೆಲಸದಲ್ಲಿ ಉತ್ಸಾಹವಿಲ್ಲವೆಂದು ಎನ್ನಿಸಿದರೆ, ಕೆಲದಿನಗಳ ಮಟ್ಟಿಗೆ ಉತ್ಸಾಹ ಬಂದಂತೆ ನಟನೆ ಮಾಡಿ. ಅದರಿಂದ ಬಂದ ಜನಮನ್ನಣೆ, ಕಾರ್ಯದ ಫಲ ನಿಮ್ಮಲ್ಲಿ ಉತ್ಸಾಹ ಸದಾ ಇರುವಂತೆ ನೋಡಿಕೊಳ್ಳುತ್ತದೆ. ನಟನೆ ನೈಜವಾಗುತ್ತದೆ, ಆತ್ಮವಿಶ್ವಾಸ ಕುದುರುತ್ತದೆ. ಅದಕ್ಕೆ ಫ್ರಾಂಕ್ ಬೆಟ್‌ಗೇರ್‌ನ ಜೀವನವೇ ಒಂದು ಮಾದರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry