ಬುಧವಾರ, ಮೇ 25, 2022
30 °C

ಉದ್ಯಮವಾಗುತ್ತಿದೆಯೇ ನಮ್ಮ ಸಂಸ್ಕೃತಿ?

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಉದ್ಯಮವಾಗುತ್ತಿದೆಯೇ ನಮ್ಮ ಸಂಸ್ಕೃತಿ?

ಶಾಸ್ತ್ರೀಯ ಸಂಗೀತ ಶಾಲೆಯೊಂದಕ್ಕೆ ಮೊನ್ನೆ ಮೊನ್ನೆ ತಾನೇ ತನ್ನ ಹತ್ತು ವರ್ಷದ ಮಗಳೊಡನೆ ಬಂದ ತಾಯಿ ಅಲ್ಲಿನ ಮುಖ್ಯ ಗುರುವಿನ ಮುಂದೆ ನಿಸ್ಸಂಕೋಚವಾಗಿ ಒಂದು ಬೇಡಿಕೆಯನ್ನಿಟ್ಟಳು.ಖಾಸಗಿ ಟಿ.ವಿ. ವಾಹಿನಿಯೊಂದು ಬಿತ್ತರಿಸುವ ಸಂಗೀತ ಕೇಂದ್ರಿತ ರಿಯಾಲಿಟಿ ಶೋನಲ್ಲಿ  ತನ್ನ ಮಗಳು ಭಾಗವಹಿಸಲಿದ್ದಾಳೆ, ಅದರಲ್ಲಿ  ವಿಜೇತಳಾಗಬೇಕಾದರೆ ಶಾಸ್ತ್ರೀಯ ಸಂಗೀತದ ಪರಿಚಯವಿದ್ದರೆ ಒಳಿತು ಎಂಬುದು ತನ್ನ ಭಾವನೆ, ಆದ್ದರಿಂದ ಮಗಳಿಗೆ ಬಹುಮಾನವನ್ನು ತಂದುಕೊಡುವಂಥ ರೀತಿಯಲ್ಲಿ, ಆ ಶಾಲೆಯಲ್ಲಿ ಒಂದೆರಡು ತಿಂಗಳು ಸಂಗೀತ ಪಾಠವನ್ನು ಹೇಳಿಕೊಡಬೇಕೆಂಬುದು ಈ ತಾಯಿಯ ಬೇಡಿಕೆಯಾಗಿತ್ತು.ಗುರುಕುಲ ಪರಂಪರೆಯಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಠಿಣ ಪರಿಶ್ರಮದಿಂದ ಸಂಗೀತ ವಿದ್ಯೆಯನ್ನು ಕಲಿತಿದ್ದ ಸಂಗೀತ ಗುರುವಿಗೆ ಇಂಥದ್ದೊಂದು ಭಾವನೆಯೇ ಅಸಂಗತವೆನಿಸಿತ್ತು.ತಮ್ಮ ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ ಶಿಕ್ಷಣವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ  ನೀಡಲು ಪ್ರಯತ್ನವನ್ನು ಮಾಡಲಾಗುತ್ತದೆಯೇ ಹೊರತು, ಅದನ್ನು ಬಹುಮಾನಗಳನ್ನು ಕೊಡಿಸುವ ಕಾರ್ಖಾನೆಯಂತೆ ಪರಿವರ್ತಿಸಲು ತಾವು ತಯಾರಿಲ್ಲ ಎಂದು ಕಟುವಾಗಿಯೇ ಪ್ರತಿಕ್ರಿಯಿಸಿ ಆ ತಾಯಿಯ ಬೇಡಿಕೆಯನ್ನು ತಿರಸ್ಕರಿಸಿದರು.ಇತ್ತೀಚಿನ ದಿನಗಳಲ್ಲಿ ಸಂಗೀತವಷ್ಟೇ ಅಲ್ಲದೆ ಇಡೀ ಕಲಾ ಕ್ಷೇತ್ರದಲ್ಲಿಯೇ  ಹೆಚ್ಚು ಹೆಚ್ಚಾಗಿ ಕಂಡು ಬರುತ್ತಿರುವಂಥ ಪ್ರವೃತ್ತಿ ಇದಾಗಿದೆ. ಶೀಘ್ರ ಖ್ಯಾತಿ, ಸುಲಭ ಪ್ರಚಾರ ಮತ್ತು ಕೈ ತುಂಬ ಹಣದ ವ್ಯಾಮೋಹ ಹಾಗೂ ಐಷಾರಾಮಿ ಬದುಕಿನ ಕನಸುಗಳು ಇಂದು ಅನೇಕ ಪೋಷಕರನ್ನು ಹಾಗೂ ಯುವಜನತೆಯನ್ನು ಯಶಸ್ಸಿನ ಗಳಿಕೆಗಾಗಿ ಸೀಳು ಹಾದಿಗಳನ್ನನುಸರಿಸಲು ಪ್ರಚೋದಿಸುತ್ತಿವೆ.ಆರೋಗ್ಯಕರ ಸ್ಪರ್ಧೆಗೂ ಅನಾರೋಗ್ಯಕರ ಹಾಗೂ ಅನೇಕ ಸಂದರ್ಭಗಳಲ್ಲಿ  ಅಪಾಯಕಾರಿ ಎನಿಸುವ ಮಟ್ಟಕ್ಕೂ ಹೋಗುವಂಥ ಸ್ಪರ್ಧೆಗೂ ನಡುವಣ ವ್ಯತ್ಯಾಸವನ್ನೇ ಅರ್ಥ ಮಾಡಿಕೊಳ್ಳದ ಸ್ಥಿತಿಗೆ ಅನೇಕರು ತಲುಪುತ್ತಿದ್ದು ಕಲೆಯ ಮೂಲ ಉದ್ದೇಶವನ್ನೇ ಪ್ರಶ್ನೆ ಮಾಡುವಂಥ ಸ್ಥಿತಿ ಇಂದು ಉದ್ಭವವಾಗುತ್ತಿದೆ.ಪ್ರಪಂಚ ಇಂದು ಬದಲಾಗುತ್ತಿದೆ. ನಮ್ಮ ಬದುಕು ಕೂಡ ಹೆಚ್ಚು ಸಂಕೀರ್ಣವಾಗುತ್ತಿದೆ. ಒಂದೆಡೆ ಅಭಿವೃದ್ಧಿಯ ಅವಕಾಶಗಳು ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಸ್ಪರ್ಧೆ ಹಾಗೂ ಸವಾಲುಗಳೂ ಅಧಿಕವಾಗುತ್ತಿವೆ. ಸೀಮಿತವಾಗಿದ್ದ ಆಸೆಗಳ ವಲಯ ವಿಸ್ತೃತವಾಗುತ್ತಿದೆ. ಅದರೊಡನೆ ಯಶಸ್ಸು, ಹಣ ಹಾಗೂ ಸುಖೀ ಜೀವನದ ವ್ಯಾಮೋಹವೂ ಹೆಚ್ಚುತ್ತಿದೆ.ಭಾರತದಲ್ಲಿ, ವಿಶೇಷವಾಗಿ ಜಾಗತೀಕರಣದ ಯುಗ ಪ್ರಾರಂಭವಾದ ಮೇಲೆ ನವೀನವಾದ ಹಣ ಮತ್ತು ಯಶಸ್ಸು ಗಳಿಕಾ ಮಾರ್ಗಗಳು ತೆರೆದುಕೊಂಡಿದ್ದು ಜನರ ಗಮನ ಸಾಂಪ್ರದಾಯಿಕ ಕ್ಷೇತ್ರಗಳಿಂದ ಹೊಸ ಹೊಸ ಕ್ಷೇತ್ರಗಳತ್ತ ತಿರುಗಲಾರಂಭಿಸಿತು.ಇವುಗಳಲ್ಲಿ ಮಾಧ್ಯಮಗಳಲ್ಲಿ ಕಂಡು ಬಂದಂಥ ಅವಕಾಶಗಳು ಇಡೀ ದೇಶದ ಗಮನ ಸೆಳೆದಂಥವು.ಆರ್ಥಿಕ ಉದಾರೀಕರಣದ ಯುಗದಲ್ಲಿ  ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಕಂಡ ಆವಿಷ್ಕಾರಗಳಲ್ಲಿ ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಲ್ಲಿ ತಲೆದೋರಿದ ಮಹತ್ತರ ಬದಲಾವಣೆಗಳು ಅತ್ಯಂತ ಗೋಚರತೆಯನ್ನು ಪಡೆದವು.ಅದರಲ್ಲೂ ಜನ ಮಾನಸವನ್ನು ಅತ್ಯಂತ ಪ್ರಭಾವಿಸಿದ್ದು ಟಿ.ವಿ. ಮಾಧ್ಯಮ. ಮೊದಮೊದಲಲ್ಲಿ  ಸಂಪೂರ್ಣವಾಗಿ ಸರಕಾರಿ ಸ್ವಾಮ್ಯದಲ್ಲಿದ್ದ ಕಿರು ತೆರೆಯ ನಿಯಂತ್ರಣ ಖಾಸಗಿ ಉದ್ದಿಮೆದಾರರ ಕೈ ಸೇರಿದಾಗ ಹೆಚ್ಚು-ಕಡಿಮೆ ದೇಶದ ಎಲ್ಲ ಪ್ರಮುಖ ಭಾಷೆಗಳಲ್ಲಿ  ಟಿ.ವಿ. ವಾಹಿನಿಗಳು ಕಾರ್ಯಕ್ರಮಗಳನ್ನು ಬಿತ್ತರಿಸಲಾರಂಭಿಸಿದವು. ಇವುಗಳಲ್ಲಿ  ಅತ್ಯಂತ ಜನಾಕರ್ಷಣೆಯ ಕೇಂದ್ರಗಳಾಗಿದ್ದು ಚಲನಚಿತ್ರ ಸಂಗೀತವನ್ನಾಧರಿಸಿದ ರಿಯಾಲಿಟಿ ಶೋಗಳು.ಈ ಹೊತ್ತು ಇಂಥ ಸ್ಪರ್ಧೆಗಳು ಹಾಗೂ ಸ್ಪರ್ಧಿಗಳು-ಇವುಗಳೆರಡರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ ಗೆದ್ದವರಿಗೆ ನೀಡುವ ಬಹುಮಾನಗಳ ಸಂಖ್ಯೆ ಮಾತ್ರ ಸೀಮಿತವಾಗಿಯೇ ಉಳಿದಿರುವುದರಿಂದ ಅವುಗಳನ್ನು ಗಳಿಸಲು ತೀವ್ರ ಪೈಪೋಟಿ ಏರ್ಪಟ್ಟಿದೆ.ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ವಿವಿಧ ವಯೋಗುಂಪುಗಳವರು ಈ ಸ್ಪರ್ಧೆಗಳಲ್ಲಿ  ಭಾಗವಹಿಸುತ್ತಿದ್ದು ಅವುಗಳನ್ನು ಸುತ್ತುವರೆದ ಒಂದು ಬೃಹತ್ ಉದ್ದಿಮೆಯೇ ಇಂದು ಸೃಷ್ಟಿಯಾಗಿದೆ. ಸ್ಪರ್ಧಿಗಳು ಧರಿಸುವ ಉಡುಪುಗಳು, ಅಳವಡಿಸಿಕೊಳ್ಳಬೇಕಾದ ಭಾವ ಭಂಗಿಗಳು, ಅವರು ಆಯ್ಕೆ ಮಾಡಿಕೊಳ್ಳಬಹುದಾದ ಹಾಡು, ಅದನ್ನು ಹೇಳುವ ಧಾಟಿ ಇವೇ ಮುಂತಾದ ವಿಷಯಗಳಲ್ಲಿ  ತರಬೇತಿಯನ್ನು ನೀಡುವ ಶಾಲೆಗಳೇ ದೇಶದ ಅನೇಕ ನಗರಗಳಲ್ಲಿ ನಮಗೆ ಕಾಣಸಿಗುತ್ತವೆ.ಅಪಾರ ಹಣ ವೆಚ್ಚ ಮಾಡಿ ತಮ್ಮ ಮಕ್ಕಳನ್ನು ಇಂಥ ಶಾಲೆಗಳಿಗೆ ಸೇರಿಸಿ ಅವರನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿರುವ ಶ್ರಿಮಂತ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ ಕೂಡ ದಿನೇ ದಿನೇ ಹೆಚ್ಚುತ್ತಿದೆ.

 

ಇಂಥ ಬಹುತೇಕ ಪೋಷಕರಿಗೆ ತಮ್ಮ ಮಕ್ಕಳು ಕಲಾ ಪ್ರೌಢಿಮೆಯನ್ನು ಪಡೆಯಬೇಕೆನ್ನುವುದಕ್ಕಿಂತ ಕ್ಷಣಿಕ ಖ್ಯಾತಿಯನ್ನು ಪಡೆದು ರಾಷ್ಟ್ರ ಅಥವಾ ರಾಜ್ಯದ ಕಣ್ಮಣಿಗಳಾಗಬೇಕೆಂಬ ಭ್ರಮೆಯೇ ಹೆಚ್ಚು.

 

ಇನ್ನು ಯುವ ಜನತೆಯ ವಿಚಾರ ಹೇಳಬೇಕೆಂದರೆ ಅವರಲ್ಲನೇಕರು ವಾಸ್ತವಗಳಿಂದ ದೂರ ಸರಿದು ಯಶಸ್ಸಿನ ಸನ್ನಿಯಲ್ಲಿ  ಸಿಲುಕಿ ತಮ್ಮ ಬದುಕಿನೊಡನೆಯೇ ಆಟವಾಡುತ್ತಿರುವಂಥ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ.ಇವರಲ್ಲಿ ಕೆಲವರಿಗೆ ಮಾತ್ರ ತಮ್ಮ ಪ್ರತಿಭೆಯ ನೆರವಿನಿಂದ ಕಿರುತೆರೆ ಹಾಗೂ ಚಲನಚಿತ್ರಗಳಲ್ಲಿ ಅಪಾರ ಖ್ಯಾತಿಗಳಿಸಲು ಸಾಧ್ಯವಾಗುತ್ತದೆಯೇ ಹೊರತು ಎಲ್ಲ ಆಕಾಂಕ್ಷಿಗಳಿಗೂ ಯಶಸ್ಸಿನ ಹಾದಿ ಅಷ್ಟು ಸುಗಮವಾಗಿರುವುದಿಲ್ಲ. ಮರಳು ಗಾಡಿನ ಮರೀಚಿಕೆಯನ್ನರಸಿ ಹೊರಟಂತಾಗುತ್ತದೆ ಇವರಲ್ಲನೇಕರ ಸ್ಥಿತಿ. ಇದಕ್ಕೆ ಮುಖ್ಯ ಕಾರಣವೆಂದರೆ ಸಂಗೀತ ಕಲೆಯನ್ನು ಕುರಿತ ಸಮಾಜದ ಧೋರಣೆಗಳಲ್ಲಿ  ಕಂಡು ಬರುತ್ತಿರುವ ಬದಲಾವಣೆಗಳು.ಆಳವಾದ ಜ್ಞಾನವನ್ನು ಪಡೆಯಬೇಕೆಂಬ ಹಂಬಲಕ್ಕಿಂತ ಧಿಡೀರನೆ ಪ್ರಖ್ಯಾತಿಯನ್ನು ಗಳಿಸುವ ಆಮಿಷಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಭಯ ಹುಟ್ಟಿಸುವಂಥ ವಿಚಾರ.

 

ಇಂಥವರು ಒಂದು ಬಾರಿಯಾದರೂ ಈ ದೇಶದ ತಲೆಮಾರಿನ ಶ್ರೇಷ್ಠ ಕಲಾವಿದರು ಸವೆಸಿದ ಹಾದಿಯತ್ತ ಕಣ್ಣು ಹಾಯಿಸಿದರೆ ತಿಳಿಯುತ್ತದೆ, ಈ ದಾರಿ ಎಷ್ಟು ಕಠಿಣವಾದದ್ದು ಎಂಬ ವಿಷಯ. ಸಂಗೀತ ಕಲಿಕೆಗಾಗಿ ಹಂಬಲಿಸಿ ಒಂದು ಕಾಲದಲ್ಲಿ ಗುರುವಿನಿಂದ ಗುರುತಿಸಲ್ಪಡಲೇ ಎಷ್ಟೋ ಕಾಲ ಇವರು ಕಾದು ಕುಳಿತಿರಬೇಕಾದಂಥ ಪರಿಸ್ಥಿತಿ ಇತ್ತು.ಸಮಕಾಲೀನ ಯುಗದ ಹಿರಿಯ ತಲೆಮಾರಿನ ಅಗ್ರಮಾನ್ಯ ವೇಣು ವಾದನ ಕಲಾವಿದರಾದ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಬದುಕೇ ಇದಕ್ಕೆ ಸಾಕ್ಷಿ.

ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಖ್ಯಾತಿಯನ್ನು ಗಳಿಸಿ ಲೌಕಿಕ ಸಂಪತ್ತನ್ನು ಪಡೆದಿದ್ದರೂ ಅದರಿಂದ ತೃಪ್ತಿ ಕಾಣದ ಚೌರಾಸಿಯಾ ಅವರು ಶಾಸ್ತ್ರೀಯ ಜ್ಞಾನವನ್ನರಸಿ ಹೊರಟದ್ದು ಗುರು ಅನ್ನಪೂರ್ಣಾದೇವಿ ಅವರ ಬಳಿ. ಗುರುವಿನಿಂದ ಅವರಿಗೆ ದೊರೆತ ಮೊದಲ ಪ್ರತಿಕ್ರಿಯೆಯೆಂದರೆ ನೇರ ನಕಾರ.

 

ಇದರಿಂದ ಧೃತಿಗೆಡದ ಚೌರಾಸಿಯಾ ಅವರು ಸತತವಾಗಿ ಮೂರು ವರುಷಗಳ ಕಾಲ ಈ ಗುರುವಿನ ಬಳಿ ಪದೇ ಪದೇ ಹೋಗಿ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂಬ ಬೇಡಿಕೆಯನ್ನು ಇಡುತ್ತಲೇ ಹೋದಾಗ ಕೊನೆಗೂ ಒಪ್ಪಿಕೊಂಡ ಗುರು ಮತ್ತೊಂದು ಷರತ್ತನ್ನು ಮುಂದಿಟ್ಟರು.

 

ಅದೇನೆಂದರೆ ತಮ್ಮ ಬಳಿಯಲ್ಲಿ ಪಾಠ ಮೊದಲನೆಯ ಹಂತದಿಂದಲೇ ಪ್ರಾರಂಭವಾಗಬೇಕೆನ್ನುವುದು. ಇದುವರೆಗೆ ಅವರು ಕರಗತ ಮಾಡಿಕೊಂಡಿದ್ದ ಕೊಳಲು ವಾದನ ಪರಿಯನ್ನು ಅನ್ನಪೂರ್ಣಾದೇವಿಯವರು ಒಪ್ಪಲಿಲ್ಲ.ಗುರುವಿಗೆ ತಾವೆಷ್ಟು ಕಾತುರರು ಎಂದು ತೋರಿಸಲು ಚೌರಾಸಿಯಾ ಅವರು ಕೊಳಲು ವಾದನವನ್ನು ನುಡಿಸುವುದನ್ನೇ ಬಲಗೈನಿಂದ ಎಡಗೈಗೆ ಬದಲಾಯಿಸಿದರಂತೆ! ಎರಡು ತಿಂಗಳ ಒಳಗೇ ಮಕ್ಕಳನ್ನು ಸಂಗೀತ ಪಟುಗಳನ್ನಾಗಿ ಪರಿವರ್ತಿಸಬೇಕೆಂಬ ಈಗಿನ ಅನೇಕ ಪೋಷಕರ ಧೋರಣೆಗೂ ಗುರುವಿನ ಸ್ವೀಕೃತಿಗೇ ವರ್ಷಗಟ್ಟಲೆ ಕಾದು ಕುಳಿತಿರುತ್ತಿದ್ದ ಕಲಾ ಕಲಿಕಾ ಪರಂಪರೆಗೂ ಎತ್ತಣಿಂದೆತ್ತಣ ಸಂಬಂಧ?ಇದು ಕೇವಲ ಓರ್ವ ಖ್ಯಾತನಾಮರಾದ ಕಲಾವಿದರ ಕಥೆ ಮಾತ್ರವಲ್ಲ. ಸಾಧನೆಯ ಹಾದಿ ಎಷ್ಟು ಕಷ್ಟ ಕಾರ್ಪಣ್ಯಗಳಿಂದ ಕೂಡಿದೆ ಎಂಬುದನ್ನು ಕಣ್ಣಾರೆ ಕಂಡು ಅನುಭವಿಸಿದ ಅನೇಕ ಹಿರಿಯ ಶಾಸ್ತ್ರೀಯ ಗಾಯಕರ ಬದುಕಿನ ಅನುಭವಗಳನ್ನು ಅರಿಯುತ್ತಾ ಹೋದಾಗ ನಮ್ಮ ಮುಂದೆ ತೆರೆದಿಟ್ಟುಕೊಳ್ಳುವುದು ನಿರಂತರ ಪರಿಶ್ರಮ, ಅಪರಿಮಿತ ಶ್ರದ್ಧೆ ಹಾಗೂ ಗುರುವಿನ ಭೋದನಾ ಶೈಲಿಯನ್ನು ಕುರಿತ ಗೌರವಯುತ ಭಾವನೆಗಳ ನೂರಾರು ಜ್ವಲಂತ ಕಥೆಗಳು.ಇಷ್ಟೆಲ್ಲಾ ಕಷ್ಟ ಪಟ್ಟು ಸಂಗೀತ ಸಾಧನೆಯನ್ನು ಮಾಡಿದರೂ ಹಿಂದಿನ ತಲೆಮಾರಿನ ಅನೇಕ ಕಲಾವಿದರಿಗೆ ಯಶಸ್ಸಾಗಲಿ, ಹಣವಾಗಲಿ ದೊರೆಯಲೇ ಇಲ್ಲ. ಪ್ರಾರಂಭಿಕ ಹಂತದಲ್ಲಿ  ತೀರಾ ಕಷ್ಟಕರ ಪರಿಸ್ಥಿತಿಗಳನ್ನೆದುರಿಸಿದರೂ ತಮ್ಮ ಕಲಾ ಜೀವನದ ಒಂದು ಹಂತದಲ್ಲಿ  ಖ್ಯಾತಿ, ಸಂಪತ್ತು ಹಾಗೂ ನೆಮ್ಮದಿಗಳನ್ನು ಪಡೆದಿರುವಂಥ ಕಲಾವಿದರು ಒಂದು ವರ್ಗ.ಆದರೆ ಜೀವನುದ್ದದ್ದಕ್ಕೂ ಕಷ್ಟಗಳನ್ನೇ ಅನುಭವಿಸಿ ಯಾವುದೇ ಬಗೆಯ ಸಂಪನ್ಮೂಲಗಳನ್ನೂ ಗಳಿಸಿ-ಉಳಿಸಿಕೊಳ್ಳಲಾಗದೆ ವೈದ್ಯಕೀಯ ನೆರವನ್ನೂ ಪಡೆದುಕೊಳ್ಳಲಾಗದೆ ಈ ಪ್ರಪಂಚದಿಂದ ನಿರ್ಗಮಿಸಿದವರದ್ದು ಮತ್ತೊಂದು ವರ್ಗ.ಬದಲಾವಣೆ ಎನ್ನುವುದು ಯುಗ ಧರ್ಮ. ಕಾಲ ಕ್ರಮೇಣ ಅದರ ಪರಿಣಾಮ ಸಾಮಾಜಿಕ-ಸಾಂಸ್ಕೃತಿಕ ಬದುಕಿನ ಎಲ್ಲ ರಂಗಗಳಲ್ಲೂ ಗೋಚರವಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ನಮ್ಮ ದೇಶದಲ್ಲಿ ತಂತ್ರಜ್ಞಾನ ಕಂಡಿರುವ ವಿಸ್ಮಯಕಾರಿ ಬದಲಾವಣೆಗಳ ಪ್ರಭಾವಕ್ಕೆ ಒಳಗಾಗದ ಕ್ಷೇತ್ರಗಳು ಹೆಚ್ಚು-ಕಡಿಮೆ ಇಲ್ಲವೆಂದೇ ಹೇಳಬಹುದು.

 

ಇದಕ್ಕೆ ಸಂಗೀತ ಕ್ಷೇತ್ರವೂ ಹೊರತಾಗಿಲ್ಲ. ಆದರೆ ತನ್ನ ಸಾವಿರಾರು ವರುಷಗಳ ಇತಿಹಾಸದಲ್ಲಿ  ಇದ್ಯಾವುದರ ನೆರವು ಇಲ್ಲದೆಯೇ ಶಾಸ್ತ್ರೀಯ ಸಂಗೀತ ಉಳಿದುಕೊಂಡು ಬಂದಿದೆ ಎಂಬುದನ್ನು ಮರೆಯಲಾದೀತೆ?ಯಾವುದೇ ಬಗೆಯ ಅತ್ಯಾಧುನಿಕ ತಂತ್ರಜ್ಞಾನವಾಗಲಿ, ಜಗಮಗಿಸುವ ದೀಪಾಲಂಕಾರಗಳಾಗಲಿ ಇಲ್ಲದ ಕಾಲ ಘಟ್ಟದಲ್ಲಿ ಕೇವಲ ತಮ್ಮ ಕಲಾ ಪ್ರತಿಭೆಯ ಶಕ್ತಿಯಿಂದ ತಮ್ಮ ಛಾಪನ್ನು ಬಿಟ್ಟು ಹೋಗಿರುವ ಹಿರಿಯ ತಲೆಮಾರಿನ ಕಲಾವಿದರು ಕಂಡ ಬದುಕಿಗೂ ಕೇವಲ ಒಂದು ಯಂತ್ರ ಹತ್ತಾರು ಕಲಾವಿದರು ಮಾಡಬೇಕಾದ ಕೆಲಸವನ್ನು ನಿರ್ವಹಿಸುತ್ತಿರುವಂಥ ಈ ಕಾಲಕ್ಕೂ ಎಷ್ಟು ಅಂತರ?ಸ್ವಂತ ಶಕ್ತಿಯಿಂದಲೇ ಶೋತೃಗಳ ಮೇಲೆ ಪ್ರಭಾವ ಬೀರಬೇಕಾದಂಥ ಸವಾಲನ್ನು ಎದುರಿಸುತ್ತಿದ್ದ ಹಿರಿಯ ತಲೆಮಾರಿನ ಗಾಯಕರಿಗೆ ಪರಿಶ್ರಮ, ಸಾಧನೆ, ಶ್ರದ್ಧೆ ಅನಿವಾರ್ಯವಾಗಿತ್ತು. ಆದರೆ ಈಗಿನ ಯುಗದಲ್ಲಿ ಗಾಯನಕ್ಕಿಂತ ಗಲಾಟೆಗೇ ಆದ್ಯತೆ ಹೆಚ್ಚಾಗಿರುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ಕಾಣುತ್ತಿದ್ದು, ಸಹಜತೆ ಮಾಯವಾಗುತ್ತಿದೆ, ಕೃತಕತೆ ಎದ್ದು ಕಾಣುತ್ತಿದೆ. ಆಂತರಿಕ ಶಕ್ತಿಗಿಂತ ಬಾಹ್ಯ ನೋಟಕ್ಕೇ ಹೆಚ್ಚು ಮನ್ನಣೆ  ಎಂಬ ಈ ಯುಗದ ಪ್ರವೃತ್ತಿಗೆ ಗಂಟು ಬಿದ್ದರೆ ಅದು ಈಗಾಗಲೇ ವಾಣಿಜ್ಯೀಕೃತ ಉದ್ಯಮವಾಗಲು ಹೊರಟಿರುವ ಸಂಗೀತ ಕ್ಷೇತ್ರವನ್ನು ಮತ್ತಷ್ಟು ಬಡವಾಗಿಸುತ್ತದಷ್ಟೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.