ಉನ್ನತ ಶಿಕ್ಷಣ: ಗತ ವೈಭವದ ನೆನಪಷ್ಟೇ ಸಾಕೇ?

7

ಉನ್ನತ ಶಿಕ್ಷಣ: ಗತ ವೈಭವದ ನೆನಪಷ್ಟೇ ಸಾಕೇ?

ಡಾ.ಆರ್.ಬಾಲಸುಬ್ರಹ್ಮಣ್ಯಂ
Published:
Updated:

ಕೆಲ ವಾರಗಳ ಹಿಂದೆ ನನ್ನನ್ನು ಭೇಟಿಯಾಗಿದ್ದ ಒಂದಷ್ಟು ವಿದ್ಯಾರ್ಥಿಗಳು ನಮ್ಮ ಸಂಸ್ಥೆ ನೀಡಿದ ಬೆಂಬಲದಿಂದ ತಾವು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದ್ದಕ್ಕೆ ತಮಗೆಲ್ಲಾ ಎಷ್ಟು ಸಂತಸವಾಗಿದೆ ಎಂಬುದನ್ನು ಹೇಳಿಕೊಂಡರು.

 

ಈಗ ತಮಗೆಲ್ಲಾ ಬದುಕನ್ನು ಎದುರಿಸಲು ಇನ್ನಷ್ಟು ಆತ್ಮವಿಶ್ವಾಸ ಬಂದಿದೆ, ಅಲ್ಲದೆ ಈಗ ತಾವು ಪಡೆಯಲಿರುವ ಪದವಿಯಿಂದ ತಮ್ಮ ಜೀವನ ಮಟ್ಟ ಸುಧಾರಿಸಲಿದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದರು. ಅವರಲ್ಲಿ ಬಹುತೇಕರು ವೃತ್ತಿಪರ ಕೋರ್ಸ್ ಮಾಡುತ್ತಿದ್ದರು.ಇನ್ನು ಕೆಲವರು ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಅವರ ಈ ಉತ್ಸಾಹ ಮತ್ತು ಸಕಾರಾತ್ಮಕ ದೃಷ್ಟಿಕೋನ ಕಂಡು ನನಗೆ ಸಮಾಧಾನವಾಯಿತಾದರೂ ಅವರೀಗ ಪಡೆಯುತ್ತಿರುವ ಉನ್ನತ ಶಿಕ್ಷಣ ನಿಜವಾಗಲೂ ಅವರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುತ್ತಿದೆಯೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿತು.

 

ವ್ಯಾವಹಾರಿಕ ದೃಷ್ಟಿಕೋನದಿಂದ ಹೇಳುವುದಾದರೆ, ಉದ್ಯೋಗ ನೇಮಕಕ್ಕೆ ಅಗತ್ಯವಾದ ಸಾಮರ್ಥ್ಯವನ್ನು ಅವರಿಗೆ ತಂದುಕೊಡುತ್ತಿದೆಯೇ ಎಂಬ ಚಿಂತೆ ಸಹ ನನ್ನನ್ನು ಕಾಡಿತು.ತಾವು ತೆಗೆದುಕೊಳ್ಳುವ ಹೊಸ ಎಂಜಿನಿಯರುಗಳನ್ನು ಮೈಸೂರಿನಲ್ಲಿರುವ ತಮ್ಮ ತರಬೇತಿ ಸಂಸ್ಥೆಯು ನಿಜವಾದ ಅರ್ಥದಲ್ಲಿ ಯೋಗ್ಯ ಉದ್ಯೋಗಿಗಳನ್ನಾಗಿ ರೂಪಿಸುತ್ತಿದೆ ಎಂದು ಇನ್ಫೋಸಿಸ್‌ನ ಸಂಸ್ಥಾಪಕರಲ್ಲೊಬ್ಬರು ಹೇಳುತ್ತಿದ್ದ ಮಾತು ಈ ಸಂದರ್ಭದಲ್ಲಿ ನನ್ನ ನೆನಪಿಗೆ ಬಂತು.ಹಾಗಿದ್ದರೆ, ಪದವೀಧರರಾಗುವ ಹೊತ್ತಿಗೆ ವಿದ್ಯಾರ್ಥಿಗಳು ಸಂಪೂರ್ಣ ತರಬೇತಿ ಪಡೆದ ಎಂಜಿನಿಯರುಗಳಾಗದಿದ್ದ ಪಕ್ಷದಲ್ಲಿ ಅವರ ನಾಲ್ಕು ವರ್ಷಗಳ ಕೋರ್ಸ್ ಎಷ್ಟು ನಿಷ್ಪ್ರಯೋಜಕವಲ್ಲವೇ?ಭಾರತ ಮತ್ತು ಅಮೆರಿಕ ಎರಡರಿಂದಲೂ ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ಕಳೆದ ಕೆಲ ವರ್ಷಗಳಿಂದ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುತ್ತಿರುವ ನನ್ನ ಅನುಭವವು ಇಂತಹ ನನ್ನ ಚಿಂತನೆಗೆ ನೆರವಾಗಿದೆ.

 

ಉನ್ನತ ಶಿಕ್ಷಣವನ್ನು ನಮ್ಮ ದೇಶದ ಸ್ಥಿತಿಗತಿಗೆ ತಕ್ಕಂತೆ ಸೂಕ್ತ ರೀತಿಯಲ್ಲಿ ರೂಪಿಸಿಕೊಳ್ಳಲು ನಾವು ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ, ಅಮೆರಿಕದಂತಹ ದೇಶಗಳಲ್ಲಿ ಅದು ಹೇಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಸ್ವಲ್ಪ ಮಟ್ಟಿಗಾದರೂ ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗಿದೆ.ನಮ್ಮ ದೇಶದ ಪ್ರಸಕ್ತ ಸ್ಥಿತಿ ಮತ್ತು ಅದನ್ನು ಕಾಡುತ್ತಿರುವ ಕೆಲ ಸಮಸ್ಯೆಗಳತ್ತ ಈಗ ಗಮನಹರಿಸೋಣ. ಮಾನವನ ಸೃಜನಾತ್ಮಕ ಹಾಗೂ ಬೌದ್ಧಿಕ ಸಾಮರ್ಥ್ಯಕ್ಕೆ ಪೂರಕವಾದ ಬಹುತೇಕ ಎಲ್ಲ ವಿಷಯಗಳಲ್ಲೂ ಶಿಕ್ಷಣ, ತರಬೇತಿ ಸೌಲಭ್ಯ ಹೊಂದಿದ ಅತ್ಯುನ್ನತ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ನಾವು ಹೊಂದಿರುವಂತೆ ಮೇಲ್ನೋಟಕ್ಕೆ ನಮಗೆ ಗೋಚರಿಸುತ್ತದೆ.ಉದಾಹರಣೆಗೆ ಕಲೆ ಮತ್ತು ಮಾನವ ಧರ್ಮ, ನೈಸರ್ಗಿಕ, ಗಣಿತ, ಸಮಾಜ ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ, ದಂತ ವಿಜ್ಞಾನ, ಕೃಷಿ, ಶಿಕ್ಷಣ, ಕಾನೂನು, ವಾಣಿಜ್ಯ, ಮ್ಯಾನೇಜ್‌ಮೆಂಟ್, ಸಂಗೀತ, ಪ್ರದರ್ಶಕ ಕಲೆ, ರಾಷ್ಟ್ರೀಯ ಮತ್ತು ವಿದೇಶಿ ಭಾಷೆಗಳು, ಸಂಸ್ಕೃತಿ, ಸಂವಹನ ಇತ್ಯಾದಿಗಳ ಕಲಿಕೆಗೆ ಬಹಳಷ್ಟು ಅವಕಾಶ ಇರುವಂತೆ ತೋರುತ್ತದೆ.ಅಲ್ಲದೆ ಲಕ್ಷಾಂತರ ಯುವಜನರಿಗೆ ಪದವಿ ನೀಡುತ್ತಿರುವ ಸಾಕಷ್ಟು ವಿಶ್ವವಿದ್ಯಾಲಯಗಳು ನಮ್ಮಲ್ಲಿವೆ. ವಿಸ್ತೀರ್ಣ ಮತ್ತು ವೈವಿಧ್ಯದಲ್ಲಿ ಭಾರತ ವಿಶ್ವದಲ್ಲೇ ಬೃಹತ್ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದ ಮೂರನೇ ರಾಷ್ಟ್ರ ಎನಿಸಿಕೊಂಡಿದೆ. ಚೀನಾ ಮತ್ತು ಅಮೆರಿಕ ಮೊದಲೆರಡು ಸ್ಥಾನಗಳಲ್ಲಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಉನ್ನತ ಶಿಕ್ಷಣ ಅತ್ಯಂತ ಮಿತಿಗೊಳಪಟ್ಟಿತ್ತು ಮತ್ತು ಕೆಲವರಿಗಷ್ಟೇ ಸೀಮಿತವಾಗಿತ್ತು.

 

500 ಕಾಲೇಜುಗಳು ಹಾಗೂ 20 ವಿಶ್ವವಿದ್ಯಾಲಯಗಳಲ್ಲಿ 10 ಲಕ್ಷಕ್ಕಿಂತ ಕಡಿವೆು ಸಂಖ್ಯೆಯ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುತ್ತಿದ್ದರು. ಆದರೆ ಸ್ವಾತಂತ್ರ್ಯಾನಂತರ ಈ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. 2012ರ ಜೂನ್ ಹೊತ್ತಿಗೆ, ಪ್ರಶಂಸಾರ್ಹ ಎನಿಸುವ ರೀತಿಯಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆ 567ನ್ನು ತಲುಪಿದೆ.ದೇಶದ 28 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಲ್ಲ ಒಂದು ಬಗೆಯ ವಿಶ್ವವಿದ್ಯಾಲಯಗಳಿವೆ. 55 ವಿಶ್ವವಿದ್ಯಾಲಯಗಳನ್ನು ಹೊಂದಿರುವ ತಮಿಳುನಾಡು ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿದ ರಾಜ್ಯ ಎನಿಸಿಕೊಂಡಿದ್ದರೆ, ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಸರ್ಕಾರಿ ವಿಶ್ವವಿದ್ಯಾಲಯಗಳು (32) ಇವೆ.ರಾಜಸ್ತಾನ ಅತ್ಯಧಿಕ ಖಾಸಗಿ ವಿಶ್ವವಿದ್ಯಾಲಯಗಳನ್ನು (25) ಹೊಂದಿದೆ. ದೆಹಲಿ ಮತ್ತು ಉತ್ತರ ಪ್ರದೇಶಗಳಲ್ಲಿ ತಲಾ ನಾಲ್ಕು ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ. 121 ಶತಕೋಟಿ ಜನಸಂಖ್ಯೆ ಇರುವ ಮತ್ತು 20 ವರ್ಷದೊಳಗಿನ ಶೇ 58ಕ್ಕೂ ಹೆಚ್ಚು ಯುವಜನರನ್ನು ಹೊಂದಿರುವ ದೇಶಕ್ಕೆ ಇಷ್ಟು ಸಂಖ್ಯೆಯ ವಿಶ್ವವಿದ್ಯಾಲಯಗಳು ಸಹ ಸಾಲಲಾರವು ಎಂದೇ ಕೆಲವರು ವಾದಿಸಬಹುದು. ಆದರೆ ಅದಕ್ಕಿಂತ ಹೆಚ್ಚಾಗಿ ನಾವಿಲ್ಲಿ ಕಳವಳ ಪಡಬೇಕಾದ ಸಂಗತಿಯೆಂದರೆ ಈ ಸಂಸ್ಥೆಗಳ ಗುಣಮಟ್ಟ ಮತ್ತು ಅವನತಿ ಹೊಂದುತ್ತಿರುವ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯ ಬಗ್ಗೆ.ನಮ್ಮ ಕರ್ನಾಟಕಲ್ಲಿ ದಿಟ್ಟ ಮತ್ತು ಸೃಜನಶೀಲ ಜ್ಞಾನ ಆಯೋಗವು ಪರಿವರ್ತನಶೀಲ ವಿಶ್ವವಿದ್ಯಾಲಯಗಳನ್ನು ಅಸ್ತಿತ್ವಕ್ಕೆ ತರುವ ಪ್ರಯತ್ನವನ್ನೇನೋ ನಡೆಸಿತು. ದುರದೃಷ್ಟವಶಾತ್ ಕ್ಷುಲ್ಲಕ ರಾಜಕೀಯ ಇದು ಕಾರ್ಯರೂಪಕ್ಕೆ ಬರಲು ಅವಕಾಶವನ್ನೇ ನೀಡಲಿಲ್ಲ.ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ನಿಜವಾಗಲೂ ಆಳುತ್ತಿರುವುದು ವಿಶ್ವವಿದ್ಯಾಲಯಗಳ ಒಳ ಮತ್ತು ಹೊರಗಿನ ರಾಜಕೀಯ, ಆಡಳಿತಗಾರರ ಸಣ್ಣತನ, ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿಸುವಲ್ಲಿನ ಕೊರತೆ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ಬೋಧನಾ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಯಲ್ಲಿನ ಹಿನ್ನಡೆ.ನಮ್ಮ ಇಂದಿನ ವಿದ್ಯಾರ್ಥಿಗಳು ಕುರುಡುಪಾಠವನ್ನು ಉತ್ತೇಜಿಸುವ ಶಿಕ್ಷಣ ವ್ಯವಸ್ಥೆಯ ಹಿನ್ನೆಲೆ ಹೊಂದಿರುವುದರಿಂದ ಸೃಜನಾತ್ಮಕ ಕಲಿಕೆ ಹಿಂದೆ ಸರಿದಿದೆ. ಕೆಳ ಹಂತದಲ್ಲಿನ ಕಳಪೆ ಗುಣಮಟ್ಟದ ಬೋಧನೆಯು ಕಲಿಕೆಗೆ ಇನ್ನಷ್ಟು ತೊಡರುಗಾಲಾಗುತ್ತಿದೆ. ಇವರಲ್ಲಿ ಬಹುತೇಕ ವಿದ್ಯಾರ್ಥಿಗಳು ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಕಲಿಕೆಗೆ ತೀವ್ರ ಅನಾನುಕೂಲ ಇರುವ ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ.

 

ಈಗಿನ ಉನ್ನತ ಶಿಕ್ಷಣ ವ್ಯವಸ್ಥೆ ಈ ಎಲ್ಲ ವಿಷಯಗಳಲ್ಲಿ ಪರಿಣತಿಯನ್ನು ಬೇಡುತ್ತದೆ. ಹೀಗಾಗಿ ಈ ವಿಷಯಗಳು ಪ್ರಮುಖ ತೊಡಕಾಗಿ ಪರಿಣಮಿಸಿವೆ. ಅದಕ್ಕಿಂತಲೂ ಹೆಚ್ಚಾಗಿ 10ನೇ ತರಗತಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಸಂವಹನ ಕೌಶಲದ ಕೊರತೆ ಇರುತ್ತದೆ.ಜೀವನಮಾರ್ಗದ ಬಗ್ಗೆ ಅವರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಹೀಗಾಗಿ ಅವರು ತಮ್ಮ ಸ್ವಭಾವ, ಸಾಮರ್ಥ್ಯ ಅಥವಾ ಆಸಕ್ತಿಗೆ ಒಗ್ಗುವ ವಿಷಯಗಳಿಗೆ ಬದಲಾಗಿ, ಉನ್ನತ ಸ್ಪರ್ಧಾತ್ಮಕ ವಾತಾವರಣದಲ್ಲಿ ತಮಗೇನು ಸಿಗುತ್ತದೋ ಅದನ್ನೇ ಅನಿವಾರ್ಯವಾಗಿ ಆಯ್ದುಕೊಳ್ಳುತ್ತಿದ್ದಾರೆ.ನಮ್ಮ ಬೋಧನಾ ಸಿಬ್ಬಂದಿಯೂ ಇದೇ ವಾತಾವರಣ ಮತ್ತು ವ್ಯವಸ್ಥೆಯಿಂದಲೇ ಬಂದವರಾದ್ದರಿಂದ ಅವರಿಂದ ಸಹ ಇದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ.  ಹಾಗೆ ನೋಡಿದರೆ ನಮ್ಮಲ್ಲಿ ನಿಜವಾದ ಸಂಶೋಧನೆ ನಡೆಯುತ್ತಲೇ ಇಲ್ಲ.

 

ಪಿಎಚ್‌ಡಿಗಳ ಗುಣಮಟ್ಟ ಸಹ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ನಮ್ಮಲ್ಲಿ ಬಹುತೇಕರು ವಿಶ್ವವಿದ್ಯಾಲಯದ ಮಟ್ಟದಲ್ಲಿ ಬೋಧಿಸುವ ತರಬೇತಿಯನ್ನು ಪಡೆದಿರುವುದೇ ಇಲ್ಲ. ಅಂತಹ ವಾತಾವರಣವನ್ನು ನಿರ್ವಹಿಸುವ ಮೂಲ ಕೌಶಲದ ಕೊರತೆ ಅವರಿಗಿರುತ್ತದೆ. ಕೆಲವೇ ಕೆಲವು ಬೋಧಕರಷ್ಟೇ ತಮ್ಮ ವೃತ್ತಿಯನ್ನು ಗಂಭೀರವಾಗಿತೆಗೆದುಕೊಳ್ಳುತ್ತಿದ್ದು, ಅಂತಹವರಿಗೆ ಸಾಮಾನ್ಯವಾಗಿ ಅತ್ಯಧಿಕ ಬೇಡಿಕೆ ಇರುತ್ತದೆ.

 

ಇವರಲ್ಲಿ ಕೆಲವರು ಬಹುತೇಕ ವಿಶ್ವವಿದ್ಯಾಲಯಗಳ ಬುನಾದಿಯೇ ಆಗಿಹೋಗಿರುವ ಕ್ಷುಲ್ಲಕ ರಾಜಕೀಯಕ್ಕೆ ಬಲಿಪಶುಗಳಾಗುತ್ತಾರೆ. ಇತ್ತೀಚೆಗಷ್ಟೇ ಹಲವು ವಿಶ್ವವಿದ್ಯಾಲಯಗಳು ಇಚ್ಛೆಗೆ ಅನುಗುಣವಾದ ಆಯ್ಕೆಗಳಿಗೆ ವಿದ್ಯಾರ್ಥಿಗಳನ್ನು ಆಹ್ವಾನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಿವೆ. ಹಾರ್ವರ್ಡ್‌ನಲ್ಲಿನ ನನ್ನ ವಿದ್ಯಾರ್ಥಿ ಜೀವನವನ್ನು ನಾನು ಈಗಲೂ ಅತ್ಯಂತ ವೆುಚ್ಚುಗೆಯಿಂದ ಸ್ಮರಿಸಿಕೊಳ್ಳುತ್ತೇನೆ.

 

ಅಲ್ಲಿದ್ದ ಸಾವಿರಾರು ಕೋರ್ಸ್‌ಗಳಲ್ಲಿ ನಾಯಕತ್ವ, ಸಂಧಾನದಿಂದ ಹಿಡಿದು ಸಂವಹನದವರೆಗೆ ನನ್ನಿಷ್ಟದ ಐಚ್ಛಿಕ ವಿಷಯಗಳನ್ನು ಆರಿಸಿಕೊಳ್ಳಬಹುದಾದ ಆಯ್ಕೆ ನನಗಿತ್ತು.ಅಂತಹ ವ್ಯಕ್ತಿತ್ವ ವಿಕಸನದ ಕೋರ್ಸ್‌ಗಳಿಂದ ಹಿಡಿದು ಶಾಸ್ತ್ರೀಯ ಕಲಿಕೆಯ ಅಭಿವೃದ್ಧಿ ಅರ್ಥಶಾಸ್ತ್ರ, ಪರಿಮಾಣಾತ್ಮಕ ವಿಧಾನ, ಸಂಖ್ಯಾಶಾಸ್ತ್ರ, ನೀತಿ ನಿರೂಪಣೆಯಂತಹ ಸಾರ್ವಜನಿಕ ಆಡಳಿತಕ್ಕೆ ಸಂಬಂಧಿಸಿದ ಕೋರ್ಸ್‌ಗಳವರೆಗೆ ಐಚ್ಛಿಕ ವಿಷಯಗಳ ಆಯ್ಕೆಯ ವ್ಯಾಪ್ತಿ ವಿಶಾಲವಾಗಿತ್ತು.ಬಹುತೇಕ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು ಮಾಹಿತಿ ವಿಜ್ಞಾನದ ಬೆಳವಣಿಗೆಗೆ ಪೂರಕವಾಗಿ ಇರುವುದಿಲ್ಲ. ವಿಶ್ವದಾದ್ಯಂತದ ಹೊಸ ಪುಸ್ತಕಗಳು ಕೆಲವೆಡೆ ಮಾತ್ರ ಅತ್ಯಲ್ಪ ಪ್ರಮಾಣದಲ್ಲಿ ಲಭ್ಯವಾದರೆ, ಇನ್ನು ಕೆಲವೆಡೆ ಅವು ಸಹ ಸಿಗುವುದಿಲ್ಲ. ಇತ್ತೀಚೆಗಷ್ಟೇ ಕೆಲವು ವಿಶ್ವವಿದ್ಯಾಲಯಗಳು ಡಿಜಿಟಲ್ ಸೌಲಭ್ಯ ಹೊಂದುವ ಸಿದ್ಧತೆಯಲ್ಲಿವೆ.ವಿಶ್ವದ ಬಹುತೇಕ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಆರ್ಥಿಕವಾಗಿ ಮತ್ತು ಪಠ್ಯಕ್ರಮದ ಬದಲಾಗುವ ಅಗತ್ಯಗಳಿಗೆ ಸಂಬಂಧಿಸಿದಂತೆ ತಮ್ಮ ಹಳೆಯ ವಿದ್ಯಾರ್ಥಿಗಳನ್ನೇ ಅವಲಂಬಿಸಿವೆ. ಹಾಗೆಯೇ ಭಾರತೀಯ ವಿಶ್ವವಿದ್ಯಾಲಯಗಳು ಕೂಡ ತಮ್ಮ ಪದವೀಧರರ ಕ್ರಿಯಾಶೀಲ ಮತ್ತು ಉತ್ತೇಜಕ ಪಾಲ್ಗೊಳ್ಳುವಿಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು.ಹೆಚ್ಚು ಸ್ಮರ್ಧಾತ್ಮಕವಾಗುವ ಸಲುವಾಗಿ, ಪ್ರಪಂಚಕ್ಕೆ ಅಗತ್ಯವಾದ ಉತ್ತಮವಾದುದನ್ನು ಸೃಷ್ಟಿಸುವ ಸಲುವಾಗಿ ನಮ್ಮ ಸುತ್ತಮುತ್ತಲ ಜಗತ್ತು ಮತ್ತು ಸ್ವತಃ ನಮ್ಮದೇ ಆದ ಇತಿಹಾಸಗಳಿಂದ ನಾವು ಪಾಠ ಕಲಿಯಬೇಕಾಗಿದೆ. ಗತ ವೈಭವವನ್ನು ಮರಳಿ ಪಡೆದು ಮತ್ತೊಮ್ಮೆ ವಿಶ್ವದ ಉನ್ನತ ಕಲಿಕಾ ಕೇಂದ್ರದ ಸ್ಥಾನಮಾನವನ್ನು ನಾವು ಗಳಿಸಬೇಕಾಗಿದೆ. 

   editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry