ಉಳಿದ `ಚೋಮ'ರಿಗೂ ತುಂಡು ಭೂಮಿ ಕೊಡಿ

7

ಉಳಿದ `ಚೋಮ'ರಿಗೂ ತುಂಡು ಭೂಮಿ ಕೊಡಿ

ಐ.ಎಂ.ವಿಠಲಮೂರ್ತಿ
Published:
Updated:
ಉಳಿದ `ಚೋಮ'ರಿಗೂ ತುಂಡು ಭೂಮಿ ಕೊಡಿ

ಶಿವರಾಮ ಕಾರಂತರ `ಚೋಮನದುಡಿ' ಕಾದಂಬರಿಯಲ್ಲಿ ಪ್ರಮುಖ ಪಾತ್ರವಾದ `ಚೋಮ' ಒಬ್ಬ ದಲಿತರಲ್ಲಿ ದಲಿತ. ಅವನ ಜೀವನದ ಏಕೈಕ ಗುರಿ ಒಂದು ತುಂಡು ಭೂಮಿಯನ್ನು ಹೊಂದುವುದು. ಕನ್ನಡ ಸಾಹಿತ್ಯ ಲೋಕ ಕಂಡ ಈ ಅಪೂರ್ವವಾದ ಪುಟ್ಟ ಕಾದಂಬರಿಯಲ್ಲಿ ಕಾರಂತರು ನಿರೂಪಿಸಿರುವ ಸಾಮಾಜಿಕ ಪಿಡುಗು ಮತ್ತು ಬಲಾಢ್ಯರ ಕ್ರೌರ್ಯ ಮನ ಕಲಕುವಂತಹದ್ದು. ಚೋಮ ಅನುಭವಿಸಿದ ನೋವನ್ನು ದೃಶ್ಯಕಾವ್ಯದ ಮೂಲಕ ಇಡೀ ದೇಶಕ್ಕೆ ಪರಿಚಯಿಸಿದವರು ಬಿ.ವಿ. ಕಾರಂತರು.ಭೂ ಒತ್ತುವರಿಗೆ ಸಂಬಂಧಿಸಿದಂತೆ ವಿಧಾನಸೌಧದ ಒಳಗೂ, ಹೊರಗೂ ಸದ್ಯ ಬಹು ಆಯಾಮದ ಚರ್ಚೆಗಳು ನಡೆದಿವೆ. ಬಲಾಢ್ಯರಿಂದ ಒತ್ತುವರಿ ಆಗಿರುವ ಲಕ್ಷಾಂತರ ಎಕರೆ ಭೂಮಿಯನ್ನು ಬಿಡಿಸಿ ಭೂರಹಿತರಿಗೆ ಹಂಚಬೇಕೆನ್ನುವ ಮಾತುಗಳು ಕೇಳಿಬರುತ್ತಿವೆ. ದಲಿತರು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಅವರಿಗೆ ಕಾಯಂ ಮಾಡಬೇಕು ಎನ್ನುವ ರಿಟ್ ಅರ್ಜಿಗಳು ಹೈಕೋರ್ಟ್‌ನಲ್ಲಿ ದಾಖಲಾಗಿವೆ.ಭೂ ಒಡೆತನದ ಪ್ರಶ್ನೆ ಕಾಡಿದಾಗಲೆಲ್ಲ ಚೋಮ ನೆನಪಾಗುತ್ತಾನೆ. ಇಂದಿನ ಜಾಗತೀಕರಣದ ಯುಗದಲ್ಲಿ ಆಸ್ತಿ ಮರು ಹಂಚಿಕೆ ವಿಷಯ ದಶಕಗಳ ಹಿಂದೆ ಸಮಾಜವಾದಿ ಚಳವಳಿಯಲ್ಲಿ ಮುಂಚೂಣಿಯಲ್ಲಿ ಇದ್ದವರಿಗೂ ಒಂದು ಪ್ರತಿಗಾಮಿ ವಿಷಯವಾಗಿ ಗೋಚರಿಸುತ್ತಿದೆ.ಡಿ. ದೇವರಾಜ ಅರಸು ಅವರು 1974ರಲ್ಲಿ ಜಾರಿಗೆ ತಂದ ಭೂಸುಧಾರಣೆ ಕಾಯ್ದೆ ಪ್ರಾಯಶಃ ಹಲವಾರು ಶತಮಾನಗಳಿಂದ ಭೂಮಿಯಿಂದ ವಂಚಿತರಾಗಿದ್ದ ಒಂದು ಜನಸಮುದಾಯದ ಆಶೋತ್ತರಗಳನ್ನು ಸ್ವಲ್ಪ ಮಟ್ಟಿಗಾದರೂ ತಣಿಸಿದ ಒಂದು ಅದ್ಭುತ ಪ್ರಯೋಗ. ನಾನು ಸೇವೆಗೆ ಸೇರಿದ ಪ್ರಾರಂಭದ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಗೇಣಿದಾರರು ಮತ್ತು ಭೂರಹಿತರ ಪರವಾದ ಒಂದು ವಾತಾವರಣ ನಿರ್ಮಾಣವಾಗಿತ್ತು. `ಉಳುವವನೇ ಭೂಮಿ ಒಡೆಯ'ನೆಂಬ ಮಂತ್ರಘೋಷದ ಪಠಣ, ಅದಕ್ಕೆ ಪೂರಕವಾದ ರಾಜಕೀಯ ಹೋರಾಟ... ಅದೊಂದು ಸದ್ದಿಲ್ಲದೆ ನಡೆಯುತ್ತಿದ್ದ ಮೌನಕ್ರಾಂತಿ.ಅದು 1950ರ ದಶಕ. ರಾಷ್ಟ್ರಮಟ್ಟದಲ್ಲಿ ಭೂ ಸುಧಾರಣಾ ಕಾನೂನುಗಳ ಕುರಿತು ರಾಜ್ಯಗಳಿಗೆ ಮಾರ್ಗಸೂಚಿ ಮತ್ತು ರೂಪುರೇಷೆ ಕೊಟ್ಟ ಸಂದರ್ಭ. ಗೇಣಿದಾರರಿಗೆ ಭದ್ರತೆ ಮತ್ತು ಭೂರಹಿತರಿಗೆ (ಹೆಚ್ಚುವರಿಯಾಗಿ ಪಡೆದ) ಭೂಮಿ ಹಂಚಿಕೆ ಮಾಡುವ ಕಾಲ. ಬೇರೆ ಬೇರೆ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿದ್ದ ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದಿದ್ದವು. ಪಶ್ಚಿಮ ಬಂಗಾಲ, ಕೇರಳ ಮತ್ತು ಕರ್ನಾಟಕ ತಂದ ಕಾನೂನುಗಳು ಮತ್ತು ಅವುಗಳ ಅನುಷ್ಠಾನ ಇಡೀ ದೇಶಕ್ಕೆ ಮಾದರಿಯಾದವು.ಸ್ವತಃ ಗೇಣಿದಾರರಾಗಿದ್ದ ಕಡಿದಾಳ್ ಮಂಜಪ್ಪನವರು ಸ್ವಲ್ಪ ಕಾಲ ಮುಖ್ಯಮಂತ್ರಿ ಮತ್ತು ಬಹಳ ಕಾಲ ಕಂದಾಯ ಮಂತ್ರಿ ಆಗಿದ್ದಾಗ ಭೂ ಸುಧಾರಣೆ ಕಾಯ್ದೆ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಪ್ರತಿಕೂಲ ಪರಿಸ್ಥಿತಿಯಿಂದ ಅದು ಸಾಕಾರಗೊಳ್ಳಲಿಲ್ಲ. ಅವರ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಜನ ಮೆಚ್ಚಿದರು.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲ, ಕರ್ನಾಟಕ ಭೂ ಸುಧಾರಣೆಗೆ ಪರ್ವ ಕಾಲ. ಅವರ ಅವಧಿಯಲ್ಲಿ ತಿದ್ದುಪಡಿ ಮೂಲಕ ಜಾರಿಗೆ ಬಂದ 1974ರ ಭೂ ಸುಧಾರಣೆ ಕಾಯ್ದೆ ಕೆಲವು ವಿನೂತನ ಹಾಗೂ ವಿಶಿಷ್ಟವಾದ ಅಂಶಗಳನ್ನು ಒಳಗೊಂಡಿತ್ತು. ಕಲಂ 44ರ ಪ್ರಕಾರ, 1974ರ ಮಾರ್ಚ್ 1ರಂದು ಇದ್ದಂತೆ ಗೇಣಿದಾರರ ಹೆಸರಿನಲ್ಲಿದ್ದ-ಗೇಣಿದಾರರು ಹೊಂದಿದ್ದ ಎಲ್ಲ ಜಮೀನುಗಳು ದಾಖಲೆಗಳಲ್ಲಿ ಸರ್ಕಾರಕ್ಕೆ ಹಸ್ತಾಂತರವಾದವು. ಕಲಂ 45ರ ಪ್ರಕಾರ, ಕೆಲವು ಷರತ್ತಿಗೆ ಒಳಪಟ್ಟು ಮಾಲೀಕತ್ವದ ಹಕ್ಕನ್ನು ಗೇಣಿದಾರರು ಮತ್ತು ಭೂರಹಿತರಿಗೆ ಹಸ್ತಾಂತರಿಸಲು ಅನುವು ಮಾಡಿಕೊಡಲಾಯಿತು.ಕಲಂ 48ರ ಪ್ರಕಾರ, ಪ್ರತಿ ತಾಲ್ಲೂಕಿಗೆ ಒಂದರಂತೆ ಭೂ ನ್ಯಾಯ ಮಂಡಳಿ ರಚಿಸಿ, ಕಲಂ 48 (ಅ) ಪ್ರಕಾರ ವಿಚಾರಣೆಗೆ ಅವಕಾಶ ಒದಗಿಸಲಾಯಿತು. ಗೇಣಿದಾರರು ಮತ್ತು ಭೂ ಮಾಲೀಕರು ಮುಖಾಮುಖಿಯಾಗಿ ತಮ್ಮ ವಾದ ಮಂಡಿಸುವ ಅವಕಾಶ! ಅತಂತ್ರ ಸ್ಥಿತಿಯಲ್ಲಿದ್ದ ಲಕ್ಷಾಂತರ ಗೇಣಿದಾರರು ಹೊಸ ಬದುಕು ಕಂಡುಕೊಂಡರು. ಹಳ್ಳಿ-ಹಳ್ಳಿಗಳಲ್ಲಿ ಜನ ಅರಸು ಅವರ ಭಾವಚಿತ್ರ ಇಟ್ಟು, ದೇವರಂತೆ ಅವರನ್ನು ಪೂಜಿಸಿದರು. ಅವರು ನಾಡಿನ ನೈಜ `ಅರಸ' ಎನಿಸಿದರು. 1978ರಿಂದ 1982ರವರೆಗೆ ನಾನು ಬೆಳಗಾವಿ, ಗದಗ, ರೋಣ, ನರಗುಂದ ಮತ್ತು ಮುಂಡರಗಿ ತಾಲ್ಲೂಕುಗಳ ಭೂನ್ಯಾಯ ಮಂಡಳಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದೆ. ಈ ಭೂನ್ಯಾಯ ಮಂಡಳಿಗೆ ಅಸಿಸ್ಟಂಟ್ ಕಮಿಷನರ್ ಅಧ್ಯಕ್ಷರು (ಆ ಜವಾಬ್ದಾರಿ ನಿಭಾಯಿಸುವ ಸಲುವಾಗಿಯೇ ಅಸಿಸ್ಟಂಟ್ ಕಮಿಷನರ್ ಹುದ್ದೆಗಳನ್ನು ಸೃಜಿಸಲಾಗಿತ್ತು); ತಹಶೀಲ್ದಾರರು ಕಾರ್ಯದರ್ಶಿ; ಸ್ಥಳೀಯ ಶಾಸಕರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪ್ರತಿನಿಧಿಗಳು ಸೇರಿದಂತೆ ಒಟ್ಟು ಐವರು ಸದಸ್ಯರಾಗಿರುತ್ತಿದ್ದರು.ಭೂನ್ಯಾಯ ಮಂಡಳಿ ಒಂದು ಸಂಚಾರಿ ನ್ಯಾಯಾಲಯ. ಊರ ಮುಂದಿನ ಅರಳಿಮರ, ಶಾಲಾ ಮೈದಾನ, ಪಂಚಾಯಿತಿ ಕಟ್ಟೆ, ದೇವಾಲಯದ ಪ್ರಾಂಗಣ... ಮಂಡಳಿ ಸದಸ್ಯರು ಎಲ್ಲಿ ಕೂಡುವರೋ ಅದೇ ವಿಚಾರಣೆ ತಾಣ. ಐದು ನ್ಯಾಯ ಮಂಡಳಿಗಳ ಅಧ್ಯಕ್ಷನಾಗಿ ಐದು ವರ್ಷಗಳಲ್ಲಿ ಸಾವಿರಾರು ಗೇಣಿದಾರರ ಅರ್ಜಿಗಳ ವಿಚಾರಣೆ ನಡೆಸಿ, ತೀರ್ಮಾನ ಮಾಡಿ ಅವರಿಗೆ `ಹಕ್ಕು' ನೀಡುವ ಆದೇಶ ಹೊರಡಿಸಿದ ಸೌಭಾಗ್ಯ ನನ್ನದಾಗಿತ್ತು.ಒಮ್ಮಮ್ಮೆ ಬೆಳಿಗ್ಗೆ 9ಕ್ಕೆ ಕಲಾಪ ಆರಂಭವಾದರೆ ರಾತ್ರಿ 10 ಗಂಟೆಯಾದರೂ ಮುಗಿಯುತ್ತಿರಲಿಲ್ಲ. ನಿತ್ಯ ನೂರಾರು ಪ್ರಕರಣಗಳು ಇತ್ಯರ್ಥವಾಗುತ್ತಿದ್ದವು. ಭೂನ್ಯಾಯ ಮಂಡಳಿ ವಿಚಾರಣಾ ಕ್ರಮವೂ ವಿಭಿನ್ನವಾಗಿತ್ತು. ಸ್ಥಳೀಯ ಅಧಿಕಾರಿಗಳು ಅಗತ್ಯ ದಾಖಲೆ ಒದಗಿಸುತ್ತಿದ್ದರು. ಅಗತ್ಯವಾದರೆ ಸ್ಥಳ ಪರಿಶೀಲನೆ ಮಾಡಲಾಗುತ್ತಿತ್ತು.ಪ್ರಾರಂಭದ ದಿನಗಳಲ್ಲಿ ಭೂನ್ಯಾಯ ಮಂಡಳಿಗಳ ಕಾರ್ಯ ನಿರ್ವಹಣೆಯಲ್ಲಿ ಹಲವಾರು ಲೋಪಗಳು ಕಂಡುಬಂದವು. ಸವಿವರವಾದ ಆದೇಶಗಳನ್ನು ಬರೆಯದಿದ್ದಾಗ ಹೈಕೋರ್ಟ್‌ನಲ್ಲಿ ‘not a speaking Order, it is a Telegraphic Order’ ಎಂದು ಅನೂರ್ಜಿತ ಮಾಡಲಾಗುತ್ತಿತ್ತು. ತುರ್ತಿನಲ್ಲಿ ನಾವು ಹೊರಡಿ ಸುತ್ತಿದ್ದ ಆದೇಶಗಳೂ ಹಾಗೇ ಇರುತ್ತಿದ್ದವು.ಸದಸ್ಯರು ಆಮಿಷ ಹಾಗೂ ಸ್ಥಳೀಯ ಒತ್ತಡಗಳಿಗೆ ಒಳಗಾಗಿ ಭೂನ್ಯಾಯ ಮಂಡಳಿ ತೀರ್ಪಿನಲ್ಲಿ ಏರುಪೇರು ಮಾಡುತ್ತಿದ್ದುದೂ ಉಂಟು. ಟ್ರಿಬ್ಯುನಲ್ ಅಧ್ಯಕ್ಷರು ಬಿಗಿಯಾಗಿರುತ್ತಾರೆ; ನ್ಯಾಯ ನಿಷ್ಠುರರಾಗಿ ರೈತರ ಪರ ಇರುತ್ತಾರೆ ಎಂಬುದು ತಿಳಿಯುತ್ತಿದ್ದಂತೆ ಅವರೂ ಸರಿದಾರಿಗೆ ಬರುತ್ತಿದ್ದರು. ಭೂ ನ್ಯಾಯ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸುವುದು ಸ್ಥಳೀಯವಾಗಿ ಅವರಿಗೆ ಗೌರವದ ಕೆಲಸವಾಗಿತ್ತು.ಭೂ ಒಡೆತನವು ಜನರ ಭಾವನಾತ್ಮಕ ಸಂಬಂಧದ ವಿಚಾರ. ಹೀಗಾಗಿ ನಿರ್ಧಾರ ಕೈಗೊಳ್ಳಬೇಕಾದಾಗ ತುಂಬಾ ಎಚ್ಚರಿಕೆ ವಹಿಸಬೇಕು. ಪ್ರಕರಣದ ಎರಡೂ ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಮತ್ತು ನ್ಯಾಯ ಸಿಕ್ಕಿದೆ ಎಂಬುದು ಎರಡೂ ಪಾಳೆಯದವರಿಗೆ ಮನವರಿಕೆ ಆಗಬೇಕು. ಇಂತಹ ತಂತಿ ನಡಿಗೆಯಲ್ಲಿ ಭೂನ್ಯಾಯ ಮಂಡಳಿ ಅಧ್ಯಕ್ಷರು ಸಾಗಬೇಕಿತ್ತು.

ಒಂದು ದಿನ ಬೆಳಗಾವಿ ಭೂನ್ಯಾಯ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಒಂದು ವಿಚಿತ್ರ ಪ್ರಸಂಗ ನಡೆಯಿತು.ಒಬ್ಬರು ಭೂಮಾಲೀಕರು ಆಶಾಬಾಯಿ ಎನ್ನುವವರು ಟ್ರಿಬ್ಯುನಲ್ ಮುಂದೆ ಹಾಜರಾದರು. ಆ ಮಹಿಳೆ ಗೌರವ ಮೂಡಿಸುವಂತಹ ಗಾಂಭೀರ್ಯದ ವ್ಯಕ್ತಿತ್ವದವರಾಗಿದ್ದರು. ಅವರ ಒಕ್ಕಲುಗಳಾದ ರೈತರು ಅವರ ಪಾದಕ್ಕೆರಗಿ ನಮಸ್ಕರಿಸಿದರು. ಅದು ನನಗೆ ತುಂಬಾ ವಿಚಿತ್ರವೆನಿಸಿತು. ರೈತರ ಪರವಾದ ಎಲ್ಲ ದಾಖಲೆಗಳಿದ್ದರೂ ಎಲ್ಲ ಅರ್ಜಿದಾರರು ತಾವು ಗೇಣಿದಾರರು ಅಲ್ಲವೆಂದೂ, ತಪ್ಪು ಕಲ್ಪನೆಯಿಂದ ಅರ್ಜಿ ಸಲ್ಲಿಸಿದ್ದೇವೆಂದೂ ತಿಳಿಸಿದರು.ನಾನು ಪರಿ, ಪರಿಯಾಗಿ ಯತ್ನಿಸಿದರೂ ಅವರು ಪಟ್ಟು ಬಿಡಲಿಲ್ಲ. ಭೂನ್ಯಾಯ ಮಂಡಳಿ ಸದಸ್ಯರೂ ತುಟಿ ಬಿಚ್ಚಲಿಲ್ಲ. ನಾನು ಎಲ್ಲ ಅರ್ಜಿದಾರರ ಹೇಳಿಕೆ ದಾಖಲಿಸಿಕೊಂಡ ನಂತರ ಸರ್ಕಾರಕ್ಕೆ ಜಮೀನು ಸ್ವಾಧೀನ ಮಾಡಿಕೊಂಡು ಅದನ್ನು ಭೂಮಾಲೀಕರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಆದೇಶ ಸಿದ್ಧಪಡಿಸಿದೆ. ಸದಸ್ಯರು (ಇಷ್ಟವಿಲ್ಲದಿದ್ದರೂ) ವಿಧಿಯಿಲ್ಲದೆ ಸಹಿ ಮಾಡಿದರು.ನನಗೆ ಗೇಣಿದಾರರ ದಾಸ್ಯ ಮನೋಭಾವ ಮತ್ತು ಅವರಿಗೆ ಭೂಮಾಲೀಕರ ಕುರಿತು ಇದ್ದ ಭಯ ಮಿಶ್ರಿತ ಗೌರವ ಕಂಡು ಕನಿಕರವಾಯಿತು. ನ್ಯಾಯ ಮಂಡಳಿ ಆದೇಶವನ್ನು ಭೂಮಾಲೀಕರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಮೂಲಕ ಪ್ರಶ್ನಿಸಿದರು. ಅರ್ಜಿದಾರರೇ ಸ್ವತಃ ಗೇಣಿದಾರರಲ್ಲ ಎನ್ನುವ ಹೇಳಿಕೆ ನೀಡಿರುವಾಗ ಭೂನ್ಯಾಯ ಮಂಡಳಿ ಆದೇಶ ವಿಚಿತ್ರವಾಗಿದೆ. It is not a speaking Order' ಎಂಬ ಷರಾದೊಂದಿಗೆ ನಮ್ಮ ಆದೇಶವನ್ನು ಪುನರ್ ಪರಿಶೀಲಿಸಲು ಕಳುಹಿಸಲಾಯಿತು.ಈ ಸಮಯದಲ್ಲಿ ಒಂದು ದಿನ ಕಚೇರಿಯಿಂದ ಮನೆಗೆ ಬರುತ್ತೇನೆ, ಭೂಮಾಲೀಕರಾದ ಆಶಾಬಾಯಿಯವರು ನಮ್ಮ ಮನೆಯಲ್ಲಿ ನನ್ನ ಶ್ರೀಮತಿಯಿಂದ ಆತಿಥ್ಯ ಪಡೆದು ಅಕ್ಕಿರೊಟ್ಟಿ ಸವಿಯುತ್ತ ಸಂತೋಷವಾಗಿ ಸಂವಾದದಲ್ಲಿ ತೊಡಗಿದ್ದರು. ನನಗೆ ಮೈ ಉರಿಯಿತು. `ಈ ಹೆಂಗಸು ನಮ್ಮ ಮನೆಗೆ ಏಕೆ ಬಂತು? ನನ್ನ ಹೆಂಡತಿ ಏಕೆ ಸತ್ಕಾರ ಮಾಡುತ್ತಿದ್ದಾಳೆ?' ಎಂಬೆಲ್ಲ ಪ್ರಶ್ನೆಗಳು ಎದ್ದವು. ನನ್ನ ವಿವಾಹವಾಗಿ ಬಿಡಾರ ಸ್ಥಾಪಿಸಿ, 2-3 ತಿಂಗಳಾಗಿತ್ತಷ್ಟೇ. ಸೌಜನ್ಯದಿಂದ ಏನೂ ಹೇಳಲಾರದೆ, ಸುಮ್ಮನಿರಲಾಗದೆ ಚಡಪಡಿಸಿದೆ.ಸ್ವಲ್ಪ ಸಮಯದ ನಂತರ ಉಪಚಾರವೆಲ್ಲ ಮುಗಿದ ಮೇಲೆ ಅವರು ನಮಗೆ ನಮಸ್ಕಾರ ಹೇಳಿ ಹೊರಟರು. ನಂತರ ನನ್ನ ಹೆಂಡತಿಗೆ ಕ್ಲಾಸ್ ತೆಗೆದುಕೊಂಡೆ. `ಏನ್ರೀ ಪಾಪ, ಆ ಮಹಿಳೆ ವಿಧವೆಯಂತೆ. ಬಹಳ ಕಷ್ಟದಲ್ಲಿದ್ದಾರಂತೆ. ಅವರ ಗೇಣಿದಾರರೆಲ್ಲ ಜಮೀನು ಬಿಟ್ಟುಕೊಡಲು ಒಪ್ಪಿದ್ದರೂ ನೀವು ಒಪ್ಪುತ್ತಿಲ್ಲವಂತೆ' ಎಂದಳು. `ಕಾಫಿ, ತಿಂಡಿ ತಗೊಳ್ಳಿ ಅಂದೆ. ಹೂಂ ಅಂದರು. ಅದರಲ್ಲೇನು ತಪ್ಪು' ಎಂದು ಕೇಳಿದಳು. ನಾನು ನಿರುತ್ತರನಾದೆ. `ಕಚೇರಿಯಲ್ಲಿ ನೀವು ಏನಾದರೂ ಹೇಳಿ, ಮನೆಗೆ ಬಂದವರನ್ನು ಉಪಚರಿಸುವುದು ನನ್ನ ಕರ್ತವ್ಯ. ನೀವೇನಾದರೂ ಆರ್ಡರ್ ಪಾಸ್ ಮಾಡಿಕೊಳ್ಳಿ, ಅದರಿಂದ ನನಗೇನು ಆಗಬೇಕು' ಎಂದು ಉಪಾಯದಿಂದ ಜಾರಿಕೊಂಡಳು.ಪ್ರಕರಣ ಮತ್ತೆ ವಿಚಾರಣೆಗೆ ನಿಗದಿಯಾಯಿತು. ವಿಚಾರಣೆಗೆ ಮುನ್ನ ನಮ್ಮ ಮನೆಗೆ ಆಶಾಬಾಯಿಯವರು ಬಂದ ವಿಚಾರವನ್ನೆಲ್ಲ ತಿಳಿಸಿ, ನನಗಾದ ಮುಜುಗರವನ್ನು ಸಹ ತಿಳಿಸಿದೆ. `ಸಾಹೇಬರೇ, ನಿಮ್ಮ ತೀರ್ಮಾನಕ್ಕೆ ನಾವು ಬದ್ಧ. ತಾವೇ ತೀರ್ಮಾನಿಸಿ, ನಮಗೂ ಒತ್ತಡಗಳಿವೆ' ಎಂದು ಸುಲಭವಾಗಿ ಕೈತೊಳೆದುಕೊಂಡರು. ಆ ವೇಳೆಗಾಗಲೇ ಪ್ರತಿ ವಾರದಲ್ಲಿ ನೂರಾರು ಗೇಣಿದಾರರು ಜಮೀನಿನ ಹಕ್ಕು ಪಡೆದು ಭೂಮಾಲೀಕರಾಗುತ್ತಿದ್ದ ಸುದ್ದಿ ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು.ಹೀಗಾಗಿ ಎಂಟು ವಾರಗಳೊಳಗೆ ಅರ್ಜಿದಾರರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಅದೇ ರೀತಿ ಹೇಳಿಕೆಗಳು ಬದಲಾದವು. ಪ್ರತಿಯೊಬ್ಬರೂ ತಾವು ಗೇಣಿದಾರರೆಂದೂ ತಲೆ ತಲಾಂತರಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದೇವೆಂದೂ ಹೇಳಿಕೆ ನೀಡಿದರು. ಈ ಮೊದಲು ಹೇಳಿಕೆ ಕೊಟ್ಟವರು ಇವರೇ ಏನು ಎಂಬ ಅನುಮಾನ ಕಾಡಿತು.ಮುಂಚೆ ಈ ರೀತಿ ಹೇಳಿಕೆ ಕೊಟ್ಟಿದ್ದೀರಲ್ಲ ಅಂದರೆ, `ತಪ್ಪು ಕಲ್ಪನೆಯಿಂದ ಹಾಗೆ ಹೇಳಿದ್ದೆವು' ಎಂದು ಉತ್ತರಿಸಿದರು. `ಈ ತಪ್ಪು ಕಲ್ಪನೆಯಿಂದ' ಎಂಬ ಹೇಳಿಕೆ ಪಿತಾಮಹ ಯಾವ ವಕೀಲರೋ ನನಗೆ ಇದುವರೆಗೆ ತಿಳಿದಿಲ್ಲ. ಉತ್ತರ ಕರ್ನಾಟಕದ ಬಹುಭಾಗಗಳಲ್ಲಿ ಎಲ್ಲ ಅರ್ಜಿಗಳಲ್ಲಿ ಈ ಹೇಳಿಕೆ ಇರುವುದು ಸಹಜವಾಗಿರುತ್ತಿತ್ತು. ಭೂಮಾಲೀಕರು ಕಣ್ಣೀರು ಸುರಿಸುತ್ತಾ ನನ್ನ ಮುಖವನ್ನು ದಿಟ್ಟಿಸಿ ನೋಡುತ್ತಿದ್ದರು.ನಾನು ಯಾವುದೇ ಭಾವನೆಗಳಿಲ್ಲದೆ ನಿರ್ಲಿಪ್ತನಾಗಿ ನನ್ನ ಜೀವಮಾನದ ಅತ್ಯಂತ ಸುದೀರ್ಘವಾದ ಸವಿಸ್ತಾರ ಆದೇಶವನ್ನು ಕನ್ನಡದಲ್ಲಿ ಬರೆದೆ. ಅದನ್ನು ಮರಾಠಿಯಲ್ಲಿ ಎಲ್ಲ ಕಕ್ಷಿದಾರರಿಗೂ ತಿಳಿಸಿ ಹೇಳುವಂತೆ ಹಿರಿಯ ಸದಸ್ಯರಾಗಿದ್ದ ಶಿವಾಜಿರಾವ್ ಕಾಕತ್ಕರ್ ಅವರನ್ನು ಕೇಳಿಕೊಂಡೆ. ಅವರೂ ಅಷ್ಟೇ ಗಂಭೀರವಾಗಿ ಆದೇಶದ ಸಾರಾಂಶವನ್ನು ವಿವರಿಸಿದರು. ನಂತರ ಎಲ್ಲರೂ ಮೌನಕ್ಕೆ ಶರಣಾಗಿ ಅಂದಿನ ಸಭೆಯನ್ನು ಬರ್ಖಾಸ್ತು ಮಾಡಿ ಮನೆಗೆ ಹೋದೆವು. ಈ ಪ್ರಕರಣದಲ್ಲಿ ಯಾರದು ತಪ್ಪು ಕಲ್ಪನೆ ಎಂದು ಯೋಚಿಸುತ್ತಾ ನೆಮ್ಮದಿಯಿಂದ ನಿದ್ದೆ ಮಾಡಿದೆ.ಶಿವಾಜಿರಾವ್ ಸಜ್ಜನರಾದ ಸಾಮಾಜಿಕ ಕಾರ್ಯಕರ್ತರು. ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಅವರಿಗೆ ಇತ್ತು. `ಥೋಡೆ (ಸ್ವಲ್ಪ) ನೋಡಿ ತೀರ್ಪು ಕೊಡ್ರಿ ಸಾಹೇಬ್ರ' ಎನ್ನುವುದು ಅವರ ಸಾಮಾನ್ಯ ಮಾತಾಗಿತ್ತು.

ಶಿವಾಜಿರಾವ್ ಅವರಿಗೆ ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ಮರಾಠಿಯಲ್ಲಿ ವ್ಯವಹರಿಸುತ್ತಿದ್ದರು. ಆದರೆ, ಬೆಳಗಾವಿ ಭಾಗದ ಆಗಿನ ದಾಖಲೆಗಳು ಮರಾಠಿಯಲ್ಲಿ ಇದ್ದುದರಿಂದ ಅವುಗಳ ಇತ್ಯರ್ಥದಲ್ಲಿ ಅವರ ಸಹಾಯ ದೊಡ್ಡದಾಗಿತ್ತು. ಉಳಿದ ಕಡೆಗಳಲ್ಲೂ ಸದಸ್ಯರಿಂದ ಅಗತ್ಯ ಸಹಕಾರ ಸಿಗುತ್ತಿತ್ತು. ಜಮೀನಿನ ಹಕ್ಕು ಪಡೆದ ಒಬ್ಬೊಬ್ಬ ವ್ಯಕ್ತಿ ಕಣ್ಣಲ್ಲಿ ಕಂಡ ಸಂತೋಷ ಮತ್ತು ಕೃತಜ್ಞಭಾವ, ನಾನು ನನ್ನ ಬದುಕಿನಲ್ಲಿ ಅನುಭವಿಸಿದ ಅತ್ಯಂತ ಸಂತೋಷ ಮತ್ತು ಧನ್ಯತೆ ಕ್ಷಣಗಳು.ಭೂಮಿ, ಅರ್ಧ ಎಕರೆ ಇದ್ದರೂ ಅದೊಂದು ಆಸ್ತಿ. ಅದು ಕೊಡಬಹುದಾದ ಆರ್ಥಿಕ ಭದ್ರತೆ, ಸಾಮಾಜಿಕ ಸ್ಥಾನಮಾನವನ್ನು ಬೇರೆ ಯಾವ ಸಂಗತಿಯಿಂದಲೂ ಕೊಡಲು ಸಾಧ್ಯವಿಲ್ಲ. ಇದು ಜನರ ನಂಬಿಕೆ. 70-80ರ ದಶಕದಲ್ಲಿ 20 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನೆಯಲ್ಲಿ ಭೂರಹಿತರಿಗೆ ಎಷ್ಟು ಭೂಮಿ ಹಂಚಲಾಗಿದೆ ಎಂಬುದು ಪ್ರತಿ ತಿಂಗಳು ಚರ್ಚೆಯಾಗುತ್ತಿತ್ತು. ಈ ವರ್ಷದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭೂರಹಿತರಿಗೆ ಭೂಮಿ ಹಂಚುವ ಕುರಿತು ಒಂದು ಅಕ್ಷರವೂ ಇಲ್ಲ.ಭೂನ್ಯಾಯ ಮಂಡಳಿಗಳು ಗೇಣಿದಾರರಿಗೆ ಭೂಮಿ ಕೊಡಿಸುವಲ್ಲಿ ಬಹುಮಟ್ಟಿಗೆ ಯಶಸ್ವಿಯಾದವು. ಆದರೆ, ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ನೀಡುವಲ್ಲಿ ವಿಫಲವಾದವು. ಒಂದು ಕಾನೂನು ಎಷ್ಟೊಂದು ಜೀವಂತ ಮತ್ತು ಜನಪರವಾಗಿರಲು ಸಾಧ್ಯ ಎನ್ನುವುದಕ್ಕೆ `ಕರ್ನಾಟಕ ಭೂ ಸುಧಾರಣಾ ಕಾಯ್ದೆ' ಒಂದು ಉತ್ತಮ ಉದಾಹರಣೆ.ಅಂದಿನ ಶಾಸನಸಭೆ, ಬಡವರ ಬದುಕಿನ ತಲ್ಲಣಗಳಿಗೆ ಸ್ಪಂದಿಸಿ ಕ್ಷಿಪ್ರಗತಿಯಲ್ಲಿ ನ್ಯಾಯ ಒದಗಿಸಲು ಮಾಡಿದ ಕಾನೂನಿನ ಬದಲಾವಣೆಗಳು, ತಿದ್ದುಪಡಿಗಳು ಇಂದಿನ ಯುವ ಜನಪ್ರತಿನಿಧಿಗಳಿಗೆ ಮಾದರಿಯಾಗಬಲ್ಲವು. ಅವುಗಳನ್ನು ನಿಭಾಯಿಸಿದ ಸಮರ್ಥ ನಾಯಕರು, ಅವರ ವೇಗ ಮತ್ತು ಬದ್ಧತೆಗೆ ಸರಿಸಮಾನವಾಗಿ ಸ್ಪಂದಿಸಿದ ಆಡಳಿತ ವ್ಯವಸ್ಥೆ ಅಂದು ಕರ್ನಾಟಕಕ್ಕೆ ರಾಷ್ಟ್ರಮಟ್ಟದಲ್ಲಿ ವಿಶೇಷ ಘನತೆ ಮತ್ತು ಮನ್ನಣೆ ತಂದು ಕೊಟ್ಟವು. ಆದರೆ, ಇಂದೇನಾಗಿದೆ?'.ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry