ಎಫ್‌ಐಐ ಖರೀದಿ ಭರಾಟೆ

7

ಎಫ್‌ಐಐ ಖರೀದಿ ಭರಾಟೆ

ಕೆ. ಜಿ. ಕೃಪಾಲ್
Published:
Updated:

ಕಳೆದ ವರ್ಷದ ದೀಪಾವಳಿ ಮುಹೂರ್ತದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 21,108 ಅಂಶಗಳನ್ನು ತಲುಪಿತ್ತು. ಇದು ವಾರ್ಷಿಕ ಗರಿಷ್ಠ. ಆ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದದ್ದು ಆಗ ತಾನೆ ಆರಂಭಿಕ ಷೇರು ವಿತರಣೆ ಮೂಲಕ ಪೇಟೆ ಪ್ರವೇಶಿಸಿದ್ದ ಸಾರ್ವಜನಿಕ ವಲಯದ ಕೋಲ್ ಇಂಡಿಯಾ. ಈ ಕಂಪೆನಿಗೆ ಅಬ್ಬರದ ಪ್ರಚಾರ ದೊರೆತು ಚುರುಕಾದ ಏರಿಕೆ ಕಂಡಿತು. ಮೇ ತಿಂಗಳಲ್ಲಿ ರೂ. 422ರ ವಾರ್ಷಿಕ  ಗರಿಷ್ಠ ತಲುಪಿ ಪ್ರಥಮ ವಾರ್ಷಿಕದ ಸಂದರ್ಭದಲ್ಲಿ ಮತ್ತೆ ರೂ. 320ರ ಸಮೀಪಕ್ಕೆ ಇಳಿಯಿತು. ಇದರ ಪ್ರಭಾವದಿಂದ ಅಬ್ಬರದ ಪ್ರಚಾರದೊಂದಿಗೆ ಪೇಟೆ ಪ್ರವೇಶಿಸಿದ್ದ ಮತ್ತೊಂದು ಸಾರ್ವಜನಿಕ ವಲಯದ ಕಂಪೆನಿ ಮೊಯಿಲ್ ಲಿ. ಸದ್ಯ ವಿತರಣೆ ಬೆಲೆಯಾದ ರೂ. 375ಕ್ಕೆ ಬದಲಾಗಿ ರೂ. 250ರ ಸಮೀಪಕ್ಕೆ ಕುಸಿದಿದೆ. ಆದ್ದರಿಂದ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವಾಗ ಉತ್ತಮವಾದ ಕಂಪೆನಿಗಳನ್ನು, ಕುಸಿತದಲ್ಲಿದ್ದಾಗ ಕೊಳ್ಳಬೇಕು. ಅದು ಎಷ್ಟೇ ಉತ್ತಮವಾಗಿದ್ದರೂ ಅಸಹಜ ಏರಿಕೆ ಪ್ರದರ್ಶಿದರೆ ನಗದೀಕರಿಸಿ ಹೊರಬಂದರೆ ಬಂಡವಾಳ ಸುರಕ್ಷಿತ.

ಹಿಂದಿನವಾರ ಸಂವೇದಿ ಸೂಚ್ಯಂಕವು 850 ಅಂಶಗಳ ಏರಿಕೆಯಿಂದ ವಾರಾಂತ್ಯದಲ್ಲಿ 17 ಸಾವಿರದ ಗಡಿ ದಾಟಿ 17,082 ರಲ್ಲಿ ಅಂತ್ಯಕಂಡಿತು. ಇದರೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವು 230 ಅಂಶಗಳಷ್ಟು ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 186 ಅಂಶಗಳಷ್ಟು  ಏರಿಕೆ ಪಡೆದವು. ಈ ಏರಿಕೆಯ ಹಿಂದೆ ವಿದೇಶೀ ವಿತ್ತೀಯ ಸಂಸ್ಥೆಗಳ ಖರೀದಿ ಭರಾಟೆ ಕಾರಣ. ವಿದೇಶಿ ವಿತ್ತೀಯ ಸಂಸ್ಥೆಗಳು (ಎಫ್‌ಐಐ) ಒಟ್ಟಾರೆ ರೂ. 1,496 ಕೋಟಿ ಹೂಡಿಕೆ ಮಾಡಿವೆ. ಇದಕ್ಕೆ ಬದಲಾಗಿ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ. 530 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆ ಬಂಡವಾಳೀಕರಣ ಮೌಲ್ಯವು ಹಿಂದಿನ ವಾರದ ರೂ. 58.63 ಲಕ್ಷ ಕೋಟಿಯಿಂದ ರೂ. 66.88 ಲಕ್ಷ ಕೋಟಿಗೆ ಏರಿದೆ.

ಹೊಸ ಷೇರಿನ ವಿಚಾರ

*ಇತ್ತೀಚೆಗೆ ಪ್ರತಿ ಷೇರಿಗೆ ರೂ. 60 ರಂತೆ ಸಾರ್ವಜನಿಕ ವಿತರಣೆ ಮಾಡಿದ ತಿಜಾರಿಯಾ ಪೊಲಿಪೈಪ್ಸ್ ಲಿ. ಕಂಪೆನಿಯು 14 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ರೂ. 67.80 ರಿಂದ ರೂ. 16/05 ಗಳವರೆಗೆ ಏರಿಳಿತ ಕಂಡು ರೂ. 18.10 ರಲ್ಲಿ ವಾರಾಂತ್ಯ ಕಂಡಿತು.

*ಎಸ್.ಇ. ಇನ್ವೆಸ್ಟ್‌ಮೆಂಟ್ಸ್ ಲಿ. ಕಂಪೆನಿಯ ಷೇರಿನ ಮುಖ ಬೆಲೆಯನ್ನು ರೂ. 1 ರಿಂದ ರೂ. 10ಕ್ಕೆ ಕ್ರೋಡೀಕರಿಸಿದ ನಂತರ ಹೊಸ ಅವತಾರದಲ್ಲಿ 17 ರಿಂದ ವಹಿವಾಟಿಗೆ ಬಿಡುಗಡೆಯಾಗಲಿದೆ.

ಲಾಭಾಂಶ ವಿಚಾರ

ಇಂಡಾಗ್ ರಬ್ಬರ್ ಶೇ 15, ಇನ್ಫೋಸಿಸ್ ಶೇ 300 (ಮುಖ ಬೆಲೆ ರೂ. 5), ಗೇಟ್ ವೆ ಡಿಸ್ಟ್ರಿ   ಪಾರ್ಕ್ ಶೇ 30.

ಬೋನಸ್ ಷೇರಿನ ವಿಚಾರ

ಆಮ್‌ಟೆಕ್ ಇಂಡಿಯಾ ಲಿ 1:1ರ ಅನುಪಾತದ ಬೋನಸ್ ಪ್ರಕಟಿಸಿದೆ.

ಅಮಾನತು ತೆರವಿನಿಂದ ಪೇಟೆ ಪ್ರವೇಶ

ಕಾರಣಾಂತರಗಳಿಂದ ಅಮಾನತುಗೊಂಡಿದ್ದ ಹಲವಾರು ಕಂಪೆನಿಗಳು ಅಮಾನತ್ತನ್ನು ತೆರವುಗೊಳಿಸಿಕೊಂಡು ಪೇಟೆಯಲ್ಲಿ ವಹಿವಾಟಿಗೆ ಮರು ಪ್ರವೇಶವನ್ನು ಪಡೆಯುತ್ತಿವೆ. ಇವುಗಳಲ್ಲಿ 2000ನೇ ಇಸವಿಗಿಂತ ಮುಂಚೆ ಅಮಾನತುಗೊಂಡ ಕಂಪೆನಿಗಳು ಸೇರಿವೆ.

 ಮೇ 2000ನೇ ಸಾಲಿನಿಂದ  ಅಮಾನತ್ತಿನಲ್ಲಿದ್ದ ಅಡ್ವಾನ್ಸ್ ಲೈಫ್ ಸ್ಟೈಲ್ಸ್ ಲಿ., 2003ರ ಫೆಬ್ರುವರಿಯಿಂದ ಅಮಾನತ್ತಿನಲ್ಲಿದ್ದ ಅರ್ಚನ ಸಾಫ್ಟ್‌ವೇರ್ ಲಿ., 2001ರ ಫೆಬ್ರುವರಿಯಿಂದ ಅಮಾನತ್ತಿನಲ್ಲಿರುವ ಟ್ರೆಂಡಿ ನಿಟ್‌ವಾರ್ ಲಿ. ಕಂಪೆನಿಗಳು ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.

ಜುಲೈ 2005ರಿಂದ ಅಮಾನತ್ತಿನಲ್ಲಿರುವ ಆಂಬಿಷನ್ ಪ್ಲಾಸ್ಟೊಮೆಕ್ ಲಿ, 2001ರ ಸೆಪ್ಟೆಂಬರ್‌ನಿಂದ ಅಮಾನತ್ತಿನಲ್ಲಿರುವ ಯೂನಿಟ್ಯೂಬ್ಸ್ ಲಿ. ಮತ್ತು ನವೆಂಬರ್ 1998 ರಿಂದ ಅಮಾನತ್ತಿನಲ್ಲಿರುವ ಸನ್ ಸೋರ್ಸ್ (ಇಂಡಿಯಾ) ಲಿ. ಕಂಪೆನಿಗಳು ಟಿ ಗುಂಪಿನಲ್ಲಿ ವಹಿವಾಟಿಗೆ ಮರುಪ್ರವೇಶ ಮಾಡಲಿವೆ.

2001ರ ಸೆಪ್ಟೆಂಬರ್‌ನಿಂದ ಅಮಾನತ್ತಿನಲ್ಲಿರುವ ನಿಂಬಸ್ ಇಂಡಸ್ಟ್ರೀಸ್ ಹಾಗೂ 2005ರ ಫೆಬ್ರುವರಿಯಿಂದ ಅಮಾನತ್ತಿನಲ್ಲಿರುವ ಎಸ್.ಡಿ.ಎಫ್.ಸಿ. ಫೈನಾನ್ಸ್ ಲಿ. ಕಂಪೆನಿಗಳು `ಟಿ~ ಗುಂಪಿನಲ್ಲಿ ವಹಿವಾಟಿಗೆ ಮರುಬಿಡುಗಡೆಯಾಗಲಿವೆ.

ಫೆಬ್ರುವರಿ 2003 ರಿಂದ ಅಮಾನತ್ತಿನಲ್ಲಿರುವ ಕೊಚ್ಚಿನ್ ಮಲಬಾರ್ ಎಸ್ಟೇಟ್ಸ್ ಅಂಡ್ ಇಂಡಸ್ಟ್ರೀಸ್ ಲಿ., 2004ರ ಡಿಸೆಂಬರ್‌ನಿಂದ ಅಮಾನತ್ತಿನಲ್ಲಿರುವ ಕ್ವಾಲಿಟಿ ಕ್ರೆಡಿಟ್ ಅಂಡ್ ಲೀಸಿಂಗ್ ಲಿ. ಮತ್ತು ಟೆಕ್‌ಟ್ರಿಕ್ ಇಂಡಿಯಾ ಲಿ. ಕಂಪೆನಿಗಳು ಪೇಟೆ ಪ್ರವೇಶ ಮಾಡಲಿವೆ.

ಮುಖ ಬೆಲೆ ಸೀಳಿಕೆ ವಿಚಾರ

*ವರ್ಟೆಕ್ಸ್ ಸೆಕ್ಯುರಿಟೀಸ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ಸದ್ಯದ ರೂ. 10 ರಿಂದ ರೂ. 2ಕ್ಕೆ ಸೀಳಲು 18ನೇ ಅಕ್ಟೋಬರ್ ನಿಗದಿತ ದಿನವಾಗಿದೆ.

* ಸಾಂಟೊವಿನ್ ಕಾರ್ಪೊರೇಷನ್ ಲಿ. ಕಂಪೆನಿಯು ಅಕ್ಟೋಬರ್ 17 ರಂದು ಮುಖ ಬೆಲೆ ಸೀಳಿಕೆ ಪರಿಶೀಲಿಸಲಿದೆ.

* ಸಿಂಪೋನಿ ಲಿ. ಕಂಪೆನಿಯ ಷೇರಿನ ಮುಖ ಬೆಲೆ ಸೀಳಿಕೆಯನ್ನು 18 ರಂದು ಪರಿಶೀಲಿಸಲಿದೆ.

ಅತೀವ ಏರಿಳಿತ ಪ್ರದರ್ಶಿಸಿದ ಕಂಪೆನಿಗಳು

ಭಾರತಿ ಏರ್‌ಟೆಲ್ ಒಂದು ವಾರದಲ್ಲಿ ರೂ. 40 ರಷ್ಟು ಏರಿಳಿತ ಪ್ರದರ್ಶಿಸಿದೆ. ಬಿಎಚ್‌ಇಎಲ್ ರೂ. 344 ರ ವರೆಗೂ ಏರಿಕೆ ಪಡೆದು ಸಂಭ್ರಮಿಸಿತು. ರೇಟಿಂಗ್ ಕಂಪೆನಿ ಕ್ರಿಸಿಲ್ ಒಂದು ವಾರದಲ್ಲಿ ರೂ. 771 ರಿಂದ ರೂ. 945ರ ವರೆಗೂ ಏರಿಳಿತ ಪ್ರದರ್ಶಿಸಿತು. ಅಂತೆಯೇ ಜುಬಿಲಿಯಂಟ್ ಫುಡ್ ರೂ. 705 ರಿಂದ ರೂ. 919ರ ವರೆಗೂ ಏರಿಳಿತ ಪ್ರದರ್ಶಿಸಿತು.

ಟಾಟಾ ಸ್ಟೀಲ್ ರೂ. 416 ರಿಂದ ರೂ. 455ರ ವರೆಗೂ ಏರಿಳಿತ ಕಂಡರೆ ಟಾಟಾ ಕಾಫಿಯು ರೂ. 810 ರಿಂದ 938ರ ವರೆಗೂ ಏರಿಳಿತ ಪ್ರದರ್ಶಿಸಿತು. ಇದೇ ರೀತಿ ರಭಸದ ಚಟುವಟಿಕೆಯನ್ನು ಪ್ರದರ್ಶಿಸಿ ಮಿಂಚಿದ ಕಂಪೆನಿಗಳೆಂದರೆ ಎಸ್.ಬಿ.ಐ, ಎಲ್.ಐ.ಸಿ., ಹೌಸಿಂಗ್ ಫೈನಾನ್ಸ್ ಆಪ್ಟೊ ಸರ್ಕ್ಯುಟ್, ಆರ್‌ಇಡಿ ಮುಂತಾದವುಗಳಾಗಿವೆ.

ವಾರದ ಪ್ರಶ್ನೆ

ಬ್ಯಾಂಕಿಂಗ್ ವಲಯದ ಷೇರುಗಳು ಚುರುಕಾಗಿರುವುದರಿಂದ ಈಗ ಹೂಡಿಕೆ ಮಾಡಲು ಸೂಕ್ತವೆ? ದಯವಿಟ್ಟು ತಿಳಿಸಿರಿ.

ಉತ್ತರ: ಮುಂಬೈ ಷೇರು ವಿನಿಮಯ ಕೇಂದ್ರದ ಬ್ಯಾಂಕಿಂಗ್ ಸೂಚ್ಯಂಕವು ಅಕ್ಟೋಬರ್ 5 ರಂದು ವಾರ್ಷಿಕ ಕನಿಷ್ಟ ಮಟ್ಟಕ್ಕೆ ಕುಸಿದಿತ್ತು. ಕಳೆದ ವರ್ಷದ ದೀಪಾವಳಿ ಸಂದರ್ಭದಲ್ಲಿ ಇದು ವಾರ್ಷಿಕ ಗರಿಷ್ಟದಲ್ಲಿತ್ತು. ಅಂದರೆ ನಿರಂತರವಾದ ಇಳಿಕೆಯನ್ನು ಪ್ರದರ್ಶಿಸಿದೆ. ಇದಕ್ಕೆ ಮೂಲ ಕಾರಣ ಅಂತರ ರಾಷ್ಟ್ರೀಯ ಮಟ್ಟದಲ್ಲಿನ ಆರ್ಥಿಕ ಅಸ್ಥಿರತೆ, ಜತೆಗೆ ಸ್ಥಳೀಯವಾಗಿ ಸತತ ಏರಿಕೆಯನ್ನು ಕಾಣುತ್ತಿರುವ ಹಣದುಬ್ಬರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿಸಿದ ಬ್ಯಾಂಕ್ ಬಡ್ಡಿ ದರ. ಇದೆಲ್ಲದರ ಪರಿಣಾಮ ಬ್ಯಾಂಕಿಂಗ್ ಅಭಿವೃದ್ಧಿಗೆ ಕಂಟಕಮಯವಾಗಿದೆ. ಕ್ಷೀಣಿಸುತ್ತಿರುವ ವ್ಯವಹಾರಿಕ ಚಟುವಟಿಕೆ, ಹೆಚ್ಚುತ್ತಿರುವ ಬಡ್ಡಿ ಕಾರಣ ಸಾಲದ ಬೇಡಿಕೆ ಕುಂಟುತ್ತಿದೆ. ಇವು ಬ್ಯಾಂಕ್‌ಗಳ ಲಾಭ ಗಳಿಕೆಯನ್ನು ಕ್ಷೀಣಗೊಳಿಸುತ್ತಿವೆ.

ಇವೆಲ್ಲದರ ನಡುವೆ ಬ್ಯಾಂಕ್‌ಗಳು ಹೆಚ್ಚಾಗಿ ವಾಹನ ಮತ್ತು ಗಣಿಗಾರಿಕೆ ಆಧಾರಿತ ಕ್ಷೇತ್ರಗಳಿಗೆ ಸಾಲ ನೀಡಿವೆ. ಸದ್ಯ ದೇಶದಾದ್ಯಂತ ಗಣಿಗಾರಿಕೆ ಸ್ತಬ್ದಗೊಂಡಿದ್ದು, ಕಾನೂನಿನ ಕ್ರಮ, ನ್ಯಾಯಾಲಯದ ತಡೆ ಮುಂತಾದವುಗಳಿಂದ ಈ ಸಾಲ ಮರುಪಾವತಿಯಾಗಲು ವಿಳಂಬವಾಗಬಹುದು. ಇದು ಲಾಭಗಳಿಕೆಗೆ ಅಡಚಣೆಯಾಗುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಗಳಿಂದ ಸದ್ಯ ಬ್ಯಾಂಕಿಂಗ್ ವಲಯದ ಹೂಡಿಕೆಯು ಆಶಾದಾಯಕವಲ್ಲ ಎನ್ನಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry